ಎಐಗೆ ವಿವೇಕ, ಮನುಷ್ಯನಿಗೆ ಅವಿವೇಕ?
AI ಅನಂತ ಅವತಾರ – ಭಾಗ 1
ಡಾ.ರಮೇಶ್ ನಿಂಬೆಮರದಳ್ಳಿ
AI ಅಥವಾ ಕೃತಕ ಬುದ್ಧಿಮತ್ತೆ ಕುರಿತು ಈಗಾಗಲೇ ಕೆಲವು ಲೇಖನಗಳಲ್ಲಿ ಪರಿಚಯಿಸಿದ್ದೇವೆ. ಆದರೆ, ಎಐ ಬೆಳೆಯುತ್ತಿರುವ ವೇಗವನ್ನು ನೋಡಿದರೆ ನಮ್ಮ ಓದುಗರಿಗೆ ಎಐ ಕುರಿತು ಇನ್ನೂ ಹೆಚ್ಚಿನ ಅರಿವು ಅಗತ್ಯವೆನಿಸುತ್ತಿದೆ. ಈ ಉದ್ದೇಶದಿಂದ ‘ವಿಕ ಮನಿ’ ವಿಶೇಷ “AI ಸರಣಿ” ಆರಂಭಿಸುತ್ತಿದೆ. ಎಐ ರಹಸ್ಯಗಳನ್ನು ಬಹಿರಂಗಪಡಿಸುತ್ತಾ, ಸಂಕೀರ್ಣ ಪರಿಕಲ್ಪನೆಗಳನ್ನು ಸರಳೀಕರಿಸುತ್ತಾ, ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಎಐ ಮಹತ್ವವನ್ನು ಎತ್ತಿ ತೋರಿಸುತ್ತಾ, ಶತಮಾನದ ಮಹಾ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಸರಣಿ ರೂಪಿಸಲಾಗಿದೆ. ಇದು ಸರಣಿಯ ಮೊದಲ ಭಾಗವಾಗಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗಿಗಳಿಗೆ, ವ್ಯವಹಾರಸ್ತರಿಗೆ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ರೈತರಿಗೆ ಅಷ್ಟೇ ಏಕೆ ಸಾಮಾನ್ಯರಿಗೂ ಅನುಕೂಲವಾಗುವಂತೆ ಈ ಸರಣಿ ಮೂಡಿಬರಲಿದೆ.
ಅದೊಂದು ಇಳಿಸಂಜೆಯಲ್ಲಿ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದೆ. ಅಲ್ಲಿ ಎದುರಾದ ಓದುಗರೊಬ್ಬರು ನನ್ನನ್ನು ಗುರುತಿಸಿ ಕುಶಲೋಪರಿ ವಿಚಾರಿಸಿ ಬಳಿಕ ನನ್ನ ಹಿಂದಿನ ಲೇಖನಗಳ ಕುರಿತು ಮಾತು ಆರಂಭಿಸಿದರು. ಅವರ ಮನಸಿನಲ್ಲಿ ಗೊಂದಲವಿತ್ತು; ಮಾತಿನಲ್ಲಿ ಅಸಮಾಧಾನವಿದ್ದಂತೆ ಕಾಣಿಸಿತು; ಯಾಕೆಂದು ವಿಚಾರಿಸಿದೆ. ಅದಕ್ಕವರು, “ಅಲ್ಲಾ ಸರ್, ಎಲ್ಲಿ ನೋಡಿದ್ರೂ ಎಐನದ್ದೇ ಮಾತು. ಟಿವಿ, ಪತ್ರಿಕೆಗಳಲ್ಲೆಲ್ಲಾ ಎಐ ಕುರಿತೇ ಮಾತನಾಡುತ್ತಿದ್ದಾರೆ. ನೀವೂ ಅದರ ಕುರಿತೇ ಬರೆಯುತ್ತಿದ್ದೀರ. ಸಾಮಾನ್ಯರಾಗಿ ಸಾಮಾನ್ಯ ಬದುಕು ನಡೆಸುವ ನಮಗೆ ಇದೆಲ್ಲಾ ಬೇಕಾ ಸರ್,” ಎಂದು ಬೇಸರ ತೋಡಿಕೊಂಡರು.
ಎಐಗೆ ಯಾಕಿಷ್ಟು ಮಹತ್ವ?
ಅವರ ಬೇಸರ ಪ್ರಶ್ನೆಯಾಗಿ ಹೊರಬಂತು, “ಚರ್ಚಿಸಬೇಕಾದ ಸಮಸ್ಯೆಗಳು ಸಾವಿರ ಇರುವಾಗ ಎಐಗೆ ಯಾಕಿಷ್ಟು ಮಹತ್ವ.” ಅವರ ಪ್ರಶ್ನೆ ನನಗೇನೂ ಆಶ್ಚರ್ಯ ತರಲಿಲ್ಲ; ಅಪ್ರಸ್ತುತ ಎಂದೂ ಅನಿಸಲಿಲ್ಲ. ಅವರು ಕೇಳಿದ ಪ್ರಶ್ನೆಯಲ್ಲಿ ಅರ್ಥವಿತ್ತು; ತುರ್ತು ಅರಿಯುವ ಕುತೂಹಲವಿತ್ತು; ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಮೂಡುವ ಪ್ರಶ್ನೆಯೇ ಆಗಿತ್ತು. ಅವರು ಕೇಳಿದ ಪ್ರಶ್ನೆಗೆ ನಾನು ಸರಳವಾಗಿ ಹೇಳುವುದಿಷ್ಟೆ: ಎಐ ಅಥವಾ ಕೃತಕ ಬುದ್ಧಿಮತ್ತೆ ಎನ್ನುವುದು ಇಂದು ಸಾಫ್ಟ್ವೇರ್ ಎಂಜಿನಿಯರ್ಗಳು ಮಾಡುವ ವೃತ್ತಿಯಾಗುಳಿದಿಲ್ಲ. ಅವರು ಮಾತ್ರವೇ ಅನುಭವಿಸುವ ಫಲವೂ ಅಲ್ಲ. ಅದು ಎಲ್ಲರ ಬದುಕಿನ ಮೇಲೂ ನೇರವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಊಹಿಸಲಾರದಷ್ಟು ಹೆಚ್ಚುತ್ತದೆ. ಈಗಿನ ನಮ್ಮೆಲ್ಲರ ಬದುಕನ್ನು ಒಮ್ಮೆ ಅವಲೋಕಿಸಿದರೆ ಎಐ ನಮ್ಮನ್ನು ಎಷ್ಟು ಆವರಿಸಿದೆ ಎನ್ನುವುದು ತಿಳಿಯುತ್ತದೆ.
ಎಐ ತಂತ್ರಜ್ಞಾನ ಈಗ ಎಲ್ಲೆಲ್ಲಿ ಬಳಕೆಯಲ್ಲಿದೆ ಎಂದು ಅವರಿಗೆ ವಿವರಿಸುತ್ತಾ ಹೋದೆ, “ನಮ್ಮ ಮೊಬೈಲ್ನಲ್ಲಿರುವ ಕ್ಯಾಮರಾ ಸೇರಿದಂತೆ ವಿವಿಧ ಆ್ಯಪ್ಗಳು ಎಐ ತಂತ್ರಜ್ಞಾನ ಬಳಸುತ್ತಿವೆ. ಕಂಪ್ಯೂಟರ್ ಪ್ರೋಗ್ರಾಮುಗಳಲ್ಲಿ ಎಐ ಕೆಲಸ ಮಾಡುತ್ತಿದೆ. ಟಿವಿಗಳು ತಮ್ಮ ಕಾರ್ಯಕ್ರಮಗಳನ್ನು ಯಾರಿಗೆ ಯಾವ ಕಾಲಕ್ಕೆ ತಲುಪಿಸಬೇಕೆಂದು ನಿರ್ಧರಿಸಲು ಎಐ ಮೊರೆ ಹೋಗಿವೆ. ನಮಗೆ ಬೇಕಾದ್ದನ್ನೇ ಇಲ್ಲವೇ ಇಷ್ಟವಾಗುವ ವಸ್ತುಗಳನ್ನೇ ನಮ್ಮೆದುರಿಗೆ ಹರಡುವ ಅಮೆಜಾನ್, ಪ್ಲಿಪ್ಕಾರ್ಟ್ಗಳಿಗೆ ಎಐ ಇಲ್ಲದೇ ಅವರ ಅಂಗಡಿ ನಡೆಯುವುದೇ ಇಲ್ಲ. ನೋಡುಗರ ಇಚ್ಛೆಗೆ ತಕ್ಕಂತೆ ಸಿನಿಮಾಗಳನ್ನು ಶಿಫಾರಸು ಮಾಡುವ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಬಳಕೆದಾರರ ಟೇಸ್ಟ್ಗೆ ತಕ್ಕಂತೆ ಪೋಸ್ಟುಗಳನ್ನು ಮುಂದೆ ಹರಡುವ ಫೇಸ್ಬುಕ್, ನೋಡುಗರ ಇಚ್ಛೆಯರಿತು ವೀಡಿಯೊಗಳನ್ನು ರೆಕಮೆಂಡ್ ಮಾಡುವ ಯೂಟ್ಯೂಬ್, ಇನ್ಸ್ಟಾಗ್ರಾಮ್ಗಳಲ್ಲಿ ಎಐನದ್ದೇ ಪಾರಮ್ಯ. ಇನ್ನು ನಾವು ಮೈಮರೆತು ಆಡುವ ಪಬ್ಜಿ, ಕಾಲ್ ಆಫ್ ಡ್ಯೂಟಿ, ಫ್ರೀ ಫೈಯರ್ನಂತಹ ಗೇಮ್ಗಳು, 10-15 ನಿಮಿಷಗಳಲ್ಲಿ ಮನೆ ಬಾಗಿಲು ತಲುಪುವ ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಡೆಲಿವರಿಗಳು, ರೋಗಪತ್ತೆ ಸಾಧನಗಳು, ಸರ್ಜರಿಗಳು ಹಾಗೂ ಆಸ್ಪತ್ರೆಯ ವಿವಿಧ ಚಿಕತ್ಸೆಗಳು, ಹೊಸ ಖಾಯಿಲೆಗೆ ಬರುವ ಹೊಸ ಔಷಧಿಗಳು, ಕರೆದೊಡನೆ ನಮ್ಮ ಬಳಿಗೇ ಬರುವ ಊಬರ್, ಓಲಾ ಕಾರುಗಳು, ಆಟೋಗಳು ನಂಬಿರುವುದು ಇದೇ ಎಐ ವ್ಯವಸ್ಥೆಯನ್ನು. ಇನ್ನು ವಿಮಾನ, ರೈಲು ಜಾಲಗಳ ನಿರ್ವಹಣೆ, ಕ್ಷಣ ಕ್ಷಣಕ್ಕೂ ಏರಿಳಿತ ಕಾಣುವ ಷೇರು ಮಾರುಕಟ್ಟೆ, ಬಿತ್ತನೆ ಬೀಜಗಳ ಉತ್ಪಾದನೆ, ಹವಾಮಾನ ಮುನ್ಸೂಚನೆ, ಕೃಷಿ ಮಂಡಿಗಳಲ್ಲಿ ನಡೆಯುವ e-ಆಕ್ಷನ್ – ಇಲ್ಲೆಲ್ಲಾ ಬಳಕೆಯಾಗುತ್ತಿರುವುದು ಇದೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ. ನಮ್ಮ ಜೀವನದ ವಿವಿಧ ಹಂತಗಳಲ್ಲಿ ತುಂಬಿಹೋಗಿರುವ ಎಐಗೆ ನಾವೆಲ್ಲರೂ ಪಾಲುದಾರರಾಗಿದ್ದೇವೆ. ಹೀಗಾಗಿ ಎಐ ಕುರಿತು ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ.” ನನ್ನ ಉತ್ತರ ಅವರಿಗೆ ಒಂದಿಷ್ಟು ಸಮಾಧಾನ ಕೊಟ್ಟಂತೆ ಕಂಡಿತಾದರೂ ಅವರ ಪ್ರಶ್ನೆಗಳು ಮುಗಿದಿರಲಿಲ್ಲ.
ಅಷ್ಟಕ್ಕೂ ಈ ಎಐ ಅಂದ್ರೇನು?
ಅವರು ಪ್ರಶ್ನೆ ಕೇಳುವುದನ್ನು ಮುಂದುವರಿಸುತ್ತಾ, “ನೀವು ಹೇಳಿದ್ದನ್ನು ಒಪ್ತೀನಿ ಸರ್, ಅಷ್ಟಕ್ಕೂ ಈ ಎಐ ಅಂದ್ರೇನು? ಅನ್ನೋದನ್ನ ಮೊದಲು ವಿವರಿಸಿ,” ಎಂದು ಅವರ ಗೊಂದಲಕ್ಕೆ ಸ್ಪಷ್ಟತೆ ಪಡೆಯಲು ಮುಂದಾದರು. ಇದು ಕೇಳಲೇಬೇಕಾದ ಪ್ರಶ್ನೆ ಬಿಡಿ. ಈ ಪ್ರಶ್ನೆಗೆ ಹಲವು ರೀತಿಯ ಉತ್ತರ ನೀಡಲು ಸಾಧ್ಯವಿದ್ದರೂ ಸಾಮಾನ್ಯ ಜನರಿಗೆ ಅರ್ಥವಾಗುವ ಹಾಗೆ ಸರಳವಾಗಿ ಉತ್ತರಿಸಲು ಯತ್ನಿಸಿದೆ, “ಎಐ ಅಥವಾ ಕೃತಕ ಬುದ್ಧಿಮತ್ತೆ ಎಂದರೆ, ಮನುಷ್ಯನ ಬುದ್ಧಿವಂತಿಕೆ, ತರ್ಕ, ವರ್ತನೆ ಮತ್ತು ಭಾವನೆಗಳನ್ನು ಸಾಫ್ಟ್ವೇರ್ ಮೂಲಕ ಅನುಕರಿಸುವ ಒಂದು ವ್ಯವಸ್ಥೆ. ಇನ್ನೂ ಸರಳವಾಗಿ, ಎಐ ಎಂದರೆ ಮನುಷ್ಯನ ನಕಲು. ಮನುಷ್ಯನಂತೆಯೇ ತಾರ್ಕಿಕವಾಗಿ ಯೋಚಿಸುವ, ಚಿಂತಿಸುವ, ಭಾವಿಸುವ, ಊಹಿಸುವ ಮತ್ತು ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯಿಸುವ ಹಾಗೂ ಬುದ್ಧಿವಂತಿಕೆಯಿಂದ ವರ್ತಿಸುವ ಶಕ್ತಿ ಇರುವ ಒಂದು ವ್ಯವಸ್ಥೆ. ಮೂಲಭೂತವಾಗಿ ಈ ಎಐ ವ್ಯವಸ್ಥೆಯ ಮೆದುಳು ಇರುವುದು ಅದರ ಆಲ್ಗಾರಿದಮ್ನಲ್ಲಿ. ಎಂದರೆ ಈ ಮೆದುಳು ಹೇಗೆ ಕಾರ್ಯನಿರ್ವಹಿಸಬೇಕೆಂದು ರಚಿಸಿರುವ ಅದರ ಪ್ರೋಗ್ರಾಮಿನಲ್ಲಿ,’’ ಎಂದು ಮಾತು ಮುಂದುವರಿಯುತ್ತಿರುವಾಗಲೇ, “ಎಐ ಎನ್ನುವುದು ಮನುಷ್ಯನ ನಕಲು ಅಂದ್ರಿ. ಹಾಗಿದ್ರೆ ಮನುಷ್ಯನಿಗೆ ಆಕಾರ ಇದೆ. ಎಐಗೆ ಯಾವ ಆಕಾರ ಇದೆ?” ಎಂದು ಪ್ರಶ್ನಿಸಿದರು.
ನಾನು ಮಾತು ಮುಂದುವರಿಸಿದೆ, “ಈ ಎಐ ವ್ಯವಸ್ಥೆಗೆ ಮನುಷ್ಯನ ಹಾಗೆ ಒಂದು ನಿಶ್ಚಿತ ಆಕಾರ ಇಲ್ಲ ಎನ್ನುವುದು ನಿಜ. ಆದರೆ ಎಐಗೆ ನಾನಾ ರೂಪ; ಅದನ್ನು ಬಳಸುವ ನಮ್ಮ ಅಗತ್ಯಕ್ಕೆ ತಕ್ಕಂತೆ ಇದು ಯಾವುದೇ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಕಂಪ್ಯೂಟರ್, ಮೊಬೈಲ್, ಸ್ವಯಂಚಾಲಿತ ಕಾರು, ರೋಬಾಟ್ ಅಥವಾ ಇನ್ನಾವುದೇ ಸ್ವಯಂಚಾಲಿತ ಯಂತ್ರದ ಒಳಗೆ ಈ ಎಐ ಅವಿತು ತನ್ನ ಕಾರ್ಯಗಳು ಮತ್ತು ಪ್ರತಿಕ್ರಿಯೆಗಳ ಮೂಲಕ ತನ್ನ ಅಸ್ತಿತ್ವವನ್ನು ತೋರ್ಪಡಿಸುತ್ತದೆ. ಎಐ ಎನ್ನುವುದು ಒಂದು ಚೇತನವಿದ್ದಂತೆ. ಯಾವುದಲ್ಲಾದರೂ ಅಡಕಗೊಳ್ಳಬಹುದು; ಯಾವ ರೀತಿಯಲ್ಲಾದರೂ ಅಭಿವ್ಯಕ್ತಗೊಳ್ಳಬಹುದು. ಒಂದು ರೀತಿಯಲ್ಲಿ ಅನಂತ ಅವತಾರ, ಅನಂತ ಅಭಿವ್ಯಕ್ತಿ. ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮುಂಚೂಣಿಗೆ ಬಂದರಂತೂ ಎಐ ವ್ಯಾಪ್ತಿಗೆ ಮಿತಿಯೇ ಇರುವುದಿಲ್ಲ. ಸದ್ಯಕ್ಕೆ ಮನುಷ್ಯನಿಗೆ ಇರಬಹುದಾದ ವಿವೇಕ, ಸ್ವಯಂ-ಪ್ರಜ್ಞೆ (self-consciousness) ಎಐಗೆ ಇನ್ನೂ ಲಭಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಮನುಷ್ಯನಂತೆಯೇ ವಿವೇಕಿಯಾಗುವ, ಸ್ವಯಂ-ಪ್ರಜ್ಞೆ ಹೊಂದುವ ಮತ್ತು ಅವನನ್ನೂ ಮೀರಿ ಬೆಳೆಯುವ ಗುರಿ ಮತ್ತು ಹಂಬಲವನ್ನು ಎಐ ಹೊಂದಿದೆ. ಸದ್ಯಕ್ಕೆ ಇದು ಎಐ ಸೃಷ್ಟಿಕರ್ತರಾದ ನಮ್ಮದೇ ಹಂಬಲ. ಆದರೆ, ಮುಂದಿನ ದಿನಗಳಲ್ಲಿ ಎಐ ಸ್ವಯಂ ವಿವೇಕ ಪಡೆದು ಸ್ವ-ಹಿತಾಸಕ್ತಿ ಕುರಿತು ಯೋಚಿಸುವಂತಾದರೆ ಆಗ ತನ್ನ ಗುರಿಯನ್ನು ತಾನೇ ನಿರ್ಧರಿಸಿಕೊಳ್ಳುತ್ತದೆ.”
ಹೀಗಾಗಿ ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಯಂತ್ರಗಳು ಮತ್ತು ಸಾಫ್ಟ್ವೇರ್ ವ್ಯವಸ್ಥೆಗಳ ಒಟ್ಟು ಮೊತ್ತವೇ ಎಐ. ಬೇಕಿದ್ದರೆ ಇದನ್ನು ಬುದ್ಧಿವಂತ ಯಾಂತ್ರಿಕ ವ್ಯವಸ್ಥೆ ಎಂದು ಅರ್ಥಮಾಡಿಕೊಳ್ಳಬಹುದು.
ಮುಂದೆ ಎಐ ಬೆಳವಣಿಗೆಯಿಂದಾಗುವ ಅಪಾಯವೇನು?
ನನ್ನ ಉತ್ತರ ಅವರ ತಲೆಗೆ ಇಳಿದಂತೆ ಕಂಡಿತು. ಆದರೆ ಅವರಿಗೆ ಅಚ್ಚರಿಗಿಂತ ಗಾಬರಿಯೇ ಎದ್ದು ಕಾಣುತ್ತಿತ್ತು. “ನಮ್ಮನ್ನು ಇಷ್ಟೆಲ್ಲಾ ಆವರಿಸುತ್ತಿರುವ ಎಐನಿಂದ ನಮಗೆ ಏನೂ ತೊಂದರೆ ಇಲ್ವಾ?” ಎಂದು ತಮ್ಮ ಆತಂಕವನ್ನು ಹೊರಹಾಕಿಯೇ ಬಿಟ್ಟರು. ಅವರ ಆತಂಕಕ್ಕೆ ಸಮಾಧಾನ ಹೇಳಲೇಬೇಕಿತ್ತು, “ಎಲ್ಲಾ ಹೊಸ ತಂತ್ರಜ್ಞಾನಗಳು ಹೊತ್ತು ತರುವಂತೆ ಅನುಕೂಲ-ಅನಾನುಕೂಲಗಳು ಎಐ ತಂತ್ರಜ್ಞಾನದಲ್ಲೂ ಇವೆ. ಎಐ ಇಲ್ಲ ಎಂದರೆ ಇಂದು ನಾವು ಬಳಸುತ್ತಿರುವ ಅರ್ಧಕ್ಕರ್ಧ ಸೇವೆಗಳು ನಿಂತುಬಿಡುತ್ತವೆ. ಸೋಷಿಯಲ್ ಮೀಡಿಯಾಗಳ ಅಸ್ತಿತ್ವ ಇರುವುದೇ ಈ ಎಐನಿಂದ. ಬಹುರಾಷ್ಟ್ರೀಯ ಕಂಪನಿಗಳು ನೂರಾರು ದೇಶಗಳಲ್ಲಿ ಸಾವಿರಾರು ಶಾಖೆಗಳನ್ನು ತೆರೆದು ಲಕ್ಷಾಂತರ ಉದ್ಯೋಗಿಗಳನ್ನು ನಿಭಾಯಿಸಲು ಸಾಧ್ಯವಾಗಿರುವುದು ಇದೇ ಎಐ ಇಲ್ಲವೇ ಕಂಪ್ಯೂಟರ್ ಪ್ರೋಗ್ರಾಮ್ಗಳಿಂದ. ಈ ಕಾರಣದಿಂದಲೇ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಮುಂದೆ ನಮ್ಮ ಹಲವು ಕೆಲಸಗಳನ್ನು ಸುಲಭಗೊಳಿಸಿ ನಮಗೆ ನಿರಾಳತೆ ಒದಗಿಸಬಹುದು. ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತಾ ಬೋರ್ ಹೊಡೆಯುವ ಕ್ಲರಿಕಲ್ನಂತಹ ಕೆಲಸಗಳಿಗೆ ಗುಡ್ಬೈ ಹೇಳಬಹುದು,” ಎನ್ನುತ್ತಿರುವಾಗಲೇ, “ಅಪಾಯಗಳೇನು ಅಂತ ಹೇಳಿ ಸರ್,” ಅಂದ್ರು.
“ಎಐ ಸಹಾಯದಿಂದ ಲಕ್ಷಾಂತರ ಹೊಸ ಉದ್ಯೋಗಗಳು ಹುಟ್ಟಿರುವುದು ಎಷ್ಟು ನಿಜವೋ, ಮುಂದಿನ ದಿನಗಳಲ್ಲಿ ಇದೇ ಲಕ್ಷಾಂತರ ಉದ್ಯೋಗಳನ್ನು ನಮ್ಮಿಂದ ಎಐ ಕಸಿದುಕೊಳ್ಳುವ ಅಪಾಯವೂ ಅಷ್ಟೇ ನಿಜ. ಇದಕ್ಕಿಂತ ದೊಡ್ಡ ಅಪಾಯ ಇರುವುದು ಎಐ ವ್ಯವಸ್ಥೆಗಳು ಪಕ್ಷಪಾತಿಗಳಾಗಿ ವರ್ತಿಸಿದಾಗ. ಎಂದರೆ, ಉದ್ಯೋಗದಲ್ಲಿ, ಕಾರ್ಪೊರೇಟ್ ಕಂಪನಿಗಳ ನಿರ್ಧಾರಗಳಲ್ಲಿ ಈಗ ಪಕ್ಷಪಾತ ಇರುವ ಹಾಗೆ ಎಐ ವ್ಯವಸ್ಥೆಗಳು ಕೆಲವು ಸಮುದಾಯಗಳ ಬಗೆಗೆ, ಕೆಲವು ಜನಾಂಗಗಳ ಬಗೆಗೆ ಪಕ್ಷಪಾತಿಗಳಾದರೆ ಮುಗಿದೇ ಹೋಯಿತು. ಅದು ಹೊಸ ರೀತಿಯ ಸಾಮಾಜಿಕ ತರತಮಕ್ಕೆ ದಾರಿ ಮೊಡಿಕೊಡುತ್ತದೆ. ಎಐ ಹೆಚ್ಚೆಚ್ಚು ವಿವೇಕ ಪಡೆಯುತ್ತಾ ಹೋದಂತೆ ಮನುಷ್ಯನ ಬುದ್ಧಿಗೆ ಕೆಲಸವಿಲ್ಲದೆ ಅವನು ಅವಿವೇಕಿಯಾಗುತ್ತಾ ಹೋಗಬಹುದು. ಇವೆಲ್ಲಕ್ಕಿಂತ ಅತಿದೊಡ್ಡ ಅಪಾಯವೆಂದರೆ, ಮುಂದೆ ಬರಲಿರುವ ಅತಿ ಬುದ್ಧಿವಂತ ಎಐ (ಇದನ್ನು ಆರ್ಟಿಫಿಷಿಯಲ್ ಸೂಪರ್ ಇಂಟೆಲಿಜೆನ್ಸ್ ಎನ್ನುತ್ತಾರೆ) ಇಡೀ ಮನುಷ್ಯರನ್ನೇ ತನ್ನ ಅಡಿಯಾಳಾಗಿಸಿಕೊಳ್ಳುವ ಆತಂಕವಿದೆ; ಮನುಷ್ಯ ಸಂಕುಲವನ್ನೇ ನಾಶಪಡಿಸಬಹುದಾದ ಭಯಂಕರ ಅಪಾಯವೂ ಇದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಎಐ ವೇಗವನ್ನು ನಿಯಂತ್ರಿಸುವ ಸಾಮರ್ಥ್ಯ ನಮಗಂತೂ ಇಲ್ಲ, ಬದಲಿಗೆ ಅದರ ಕುರಿತು ಹೆಚ್ಚು ತಿಳಿವಳಿಕೆ ಪಡೆದು ಅದರೊಂದಿಗೆ ಹೆಜ್ಜೆ ಹಾಕುವುದೇ ನಮ್ಮೆಲ್ಲರ ಮುಂದಿರುವ ಹೊಣೆಗಾರಿಕೆ,” ಎಂದು ವಿವರಿಸಿದಾಗ ಅವರು ಹೌದೌದು ಎಂದು ತಲೆಯಾಡಿಸಿದರು.
ನಿಮಗಿದು ಗೊತ್ತೇ?
"ಆರ್ಟಿಫಿಶಿಯಲ್ ಇಂಟೆಲಿಜೆನ್ಸ್" ಎಂಬ ಪದವನ್ನು ಮೊದಲ ಬಾರಿಗೆ 1956 ರಲ್ಲಿ ಅಮೆರಿಕದ ಕಂಪ್ಯೂಟರ್ ವಿಜ್ಞಾನಿ ಜಾನ್ ಮೆಕಾರ್ಥಿ ಅವರು ಸೃಷ್ಟಿಸಿದರು. ಎಐ ಕ್ಷೇತ್ರದಲ್ಲಿ ತಮ್ಮ ಗಣನೀಯ ಸೇವೆಯಿಂದ ಇವರು ‘ಎಐ ಜನಕ’ ಎಂದೇ ಜನಪ್ರಿಯರಾಗಿದ್ದಾರೆ.
AI ದೊಡ್ಡ ಡೇಟಾಸೆಟ್ಗಳನ್ನು ಸೆಕೆಂಡುಗಳಲ್ಲಿ ವಿಶ್ಲೇಷಿಸಬಲ್ಲದು, ಇದೇ ಕೆಲಸವನ್ನು ಮಾಡಲು ಮನುಷ್ಯರಿಗೆ ವರ್ಷಗಳೇ ಬೇಕಾಗಬಹುದು.
2030ರ ವೇಳೆಗೆ ಎಐನ ಜಾಗತಿಕ ಮಾರುಕಟ್ಟೆ ಮೌಲ್ಯ ₹1,49,000 ಕೋಟಿಗೆ ತಲುಪುವ ಅಂದಾಜಿದೆ.
2030ರ ವೇಳೆಗೆ ಜಾಗತಿಕ ಜಿಡಿಪಿಗೆ ಎಐನ ಕೊಡುಗೆ 14% ಇರಲಿದೆ ಎನ್ನಲಾಗಿದೆ.
AI ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅಮೆರಿಕ, ಚೀನಾ, ಜಪಾನ್, ಭಾರತ, ಮತ್ತು ಜರ್ಮನಿ ಮುಂಚೂಣಿಯಲ್ಲಿವೆ.
ಈ ವರ್ಷಾಂತ್ಯದೊಳಗೆ ಜಗತ್ತಿನಾದ್ಯಂತ ಎಐನಿಂದ ಸುಮಾರು 8.5 ಕೋಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
2030ರ ವೇಳಗೆ ವಿಶ್ವದಾದ್ಯಂತ 10% ಕಾರುಗಳು ಎಐ ಮೂಲಕ ರಸ್ತೆಯಲ್ಲಿ ಸ್ವತಂತ್ರವಾಗಿ ಓಡಲಿವೆ.
64% ಕಂಪನಿಗಳು ಅವರ ಉತ್ಪಾದಕತೆ ಹೆಚ್ಚಿಸುವಲ್ಲಿ ಎಐ ನೆರವಾಗುತ್ತದೆ ಎಂದು ನಂಬುತ್ತವೆ.
ಸುದ್ದಿಮನೆಗಳಲ್ಲಿ ಕಂಟೆಂಟ್ ರೂಪಿಸುವ ಸಮಯವನ್ನು ಎಐ 35% ಕಡಿಮೆ ಮಾಡುತ್ತದೆ.



