ಕನ್ನಡವನ್ನು ಜ್ಞಾನದ ಭಾಷೆಯಾಗಿ ರೂಪಿಸುವಲ್ಲಿ ಅದರ ಅನ್ನದ ಶಕ್ತಿ ಅಡಗಿದೆ
ಕನ್ನಡ ಭಾಷೆಗೆ ಜ್ಞಾನವನ್ನು ಅರಗಿಸಿಕೊಳ್ಳುವ ಧಾರಣ ಶಕ್ತಿ ಹೆಚ್ಚಿಸಬೇಕು | ಕನ್ನಡಿಗರು ಜ್ಞಾನದ ಸೃಷ್ಟಿಕರ್ತರಾಗಬೇಕು
ಭಾಷೆ ಎನ್ನುವುದು ಮನುಷ್ಯನ ಅಸ್ತಿತ್ವದ ಮೂಲಭೂತ ಅಂಶ. ಭಾಷೆ ಉದಯಕ್ಕೂ ಮೊದಲು ಮನುಷ್ಯನ ಅಸ್ತಿತ್ವ ಇತ್ತು ಎನ್ನುವುದು ನಿಜ. ಆದರೆ, ಭಾಷೆಯು ಮನುಷ್ಯನ ಅಸ್ತಿತ್ವಕ್ಕೆ ಅರ್ಥಪೂರ್ಣತೆ ಒದಗಿಸಿದೆ. ಹೋಮೋಸೇಪಿಯನ್ ಕಾಲದಿಂದ ಆಧುನಿಕ ಮನುಷ್ಯನವರೆಗೆ ಈ ಬುದ್ದಿವಂತ ಜೀವಿ ಕಟ್ಟಿಕೊಂಡಿರುವ ಜ್ಞಾನ, ರೂಢಿಸಿಕೊಂಡಿರುವ ಕೌಶಲ್ಯ, ನಂಬಿರುವ ನಂಬಿಕೆಗಳು, ಆಳಿರುವ ಸಾಮ್ರಾಜ್ಯಗಳು, ಹೆಣೆದಿರುವ ಕಥೆಗಳು, ಹೊಸೆದಿರುವ ಸಾಹಿತ್ಯ, ಕಂಡುಕೊಂಡ ವಿಜ್ಞಾನ ಎಲ್ಲವೂ ಭಾಷೆಯನ್ನೇ ಪ್ರಧಾನವಾಗಿ ಆಧರಿಸಿವೆ. ಮನುಷ್ಯ ಬದುಕನ್ನು ಪ್ರತಿನಿಧಿಸುವ ಭಾಷೆ ಮನುಷ್ಯ ಬದುಕಿಗೆ ಆಧಾರವೇ ಆಗಿದೆ. ಹಾಗೆಂದು ಭಾಷೆಯ ಹೊರತಾಗಿ ಮನುಷ್ಯನ ಬದುಕಿಗೆ ಅಸ್ತಿತ್ವವೇ ಇಲ್ಲವೆಂದಲ್ಲ. ಇದು ಮನುಷ್ಯನಿಗೆ ಅವಿಭಾಜ್ಯ ಅಂಗ ಎಂಬುದು ನಿಜವಾದರೂ ಭಾಷೆಯ ಹೊರಗೆ ಮನುಷ್ಯನಿಗೆ ಬದುಕಿದೆ ಎನ್ನುವುದೂ ಅಷ್ಟೇ ನಿಜ. ಭಾಷೆ ಅಡಕವೂ ಹೌದು, ವಾಹಕವೂ ಹೌದು. ಎಂದರೆ, ಒಂದು ಭಾಷೆ ಜ್ಞಾನವನ್ನು ಅಡಗಿಸಿಕೊಳ್ಳುತ್ತದೆ ಮತ್ತು ತನ್ಮೂಲಕ ಸಾಗಿಸುತ್ತದೆ.
‘ರಿಯಾಲಿಟಿ’ಯ ಅರಿವೇ ಜ್ಞಾನ
ನಮ್ಮ ಸುತ್ತ ಭೌತಿಕ ಪರಿಸರವೊಂದಿದೆ. ಅದುವೇ ವಾಸ್ತವ, ರಿಯಾಲಿಟಿ ಅಥವಾ “ಸತ್ಯ”. ಈ ಸತ್ಯದ ತಿಳಿವಳಿಕೆಯೇ “ಜ್ಞಾನ”. ಈ ಜ್ಞಾನ ಬೆಳಕಿಗೆ ಬರುವುದು ಮತ್ತು ನಮ್ಮ ಅರಿವಿಗೆ ಬರುವುದು ಭಾಷೆಯ ಮೂಲಕವೇ. ಭಾಷೆ ಇಲ್ಲದೆ ರಿಯಾಲಿಟಿ ಅನುಭವಕ್ಕೆ ಬರುವುದಾದರೂ ಅರಿವಿಗೆ ಬರುವುದಿಲ್ಲ. ಅದು ಅಮೂರ್ತವಾಗಿಯೇ ಉಳಿದುಬಿಡುತ್ತದೆ. ಆದರೆ ಭಾಷೆಯೊಂದು ಆ ಅಮೂರ್ತತೆಗೆ ಮೂರ್ತ ರೂಪ ಒದಗಿಸಿ ಸ್ಪಷ್ಟಗೊಳಿಸುತ್ತದೆ. ಇತರರಿಗೂ ದಾಟಿಸಬಲ್ಲ ‘ಸಮಷ್ಟಿ ಜ್ಞಾನ’ವಾಗಿಸುತ್ತದೆ. ಆ ಮೂಲಕ ಒಬ್ಬರು ಕಂಡುಕೊಂಡ ಜ್ಞಾನವನ್ನು ಸಾಮುದಾಯಿಕಗೊಳಿಸುತ್ತದೆ. ಹೀಗೆ ದಕ್ಕಿದ ಜ್ಞಾನವನ್ನು ಬಳಸಿ ನಾವು ಕೈಗೊಳ್ಳುವ ಕ್ರಿಯೆ, ಅಭಿವ್ಯಕ್ತಿ ಅಥವಾ ಸೃಷ್ಟಿಗಳು “ಕೌಶಲ್ಯ”ವಾಗುತ್ತವೆ. ಇವು ವ್ಯಕ್ತಿಗತ ಅಂಶಗಳನ್ನು ಒಳಗೊಳ್ಳುವುದರಿಂದ ಒಂದೊಂದು ಕ್ರಿಯೆ, ಅಭಿವ್ಯಕ್ತಿ ಮತ್ತು ಸೃಷ್ಟಿಯಲ್ಲೂ ಭಿನ್ನತೆ ಕಂಡುಬರುತ್ತದೆ. ಹೀಗೆ ಜ್ಞಾನಕ್ಕೆ ವೈವಿಧ್ಯತೆ ಒದಗುತ್ತದೆ. ನಂತರ ಒಂದು ಕ್ರಿಯೆ ಮಾಡಿದ ಬಳಿಕ ಅದರಿಂದ ದೊರೆಯಬಹುದಾದ ಫಲಿತವನ್ನು ನಿರೀಕ್ಷಿಸುವುದು, ಊಹಿಸುವುದು “ನಂಬಿಕೆ”ಯಾಗುತ್ತದೆ. ಆ ನಂಬಿಕೆಯ ಸ್ವರೂಪವನ್ನು ಆಯಾ ಸಂಸ್ಕೃತಿಗಳು, ಧರ್ಮಗಳು ರೂಪಿಸುತ್ತವೆ. ಕ್ರಿಯೆ ಒಂದೇ ಆದರೂ ಅದರ ನಿರೀಕ್ಷೆ ಭಿನ್ನವಾಗುತ್ತದೆ. ಇದಕ್ಕೆ ಕಾರಣ ಕ್ರಿಯೆಯಲ್ಲಿ ತೊಡಗಿದವರ ಸಂಸ್ಕೃತಿ ಮತ್ತು ಧಾರ್ಮಿಕ ಹಿನ್ನೆಲೆ ಭಿನ್ನವಾಗಿರುವುದೇ ಆಗಿರುತ್ತದೆ.
ಮೇಲಿನ ವಿಚಾರವನ್ನು ಸಂಕ್ಷೇಪಿಸುವುದಾದರೆ. ಭೌತಿಕ ಪರಿಸರದ ಬಗೆಗೆ ನಮಗಿರುವ ಅರಿವನ್ನು ವಿವರಗಳಲ್ಲಿ ಭಾಷೆ ದಾಖಲಿಸುತ್ತದೆ, ಅದನ್ನು ನಾವು “ಜ್ಞಾನ” ಎಂದು ವ್ಯಾಖ್ಯಾನಿಸಿಕೊಂಡಿದ್ದೇವೆ. ಭಾಷೆಗೂ ನಿಲುಕದ್ದು ಅನುಭವದ ರೂಪದಲ್ಲಿ ಗ್ರಹಿಕೆಗೆ ಬರುತ್ತದೆ. ನಮ್ಮ ತಿಳಿವಳಿಕೆಯನ್ನು ಎಂದರೆ ಜ್ಞಾನವನ್ನು, ಅದನ್ನು ವಿವಿಧ ಬಗೆಯಲ್ಲಿ ಬಳಸುವ ಕೌಶಲ್ಯವನ್ನು, ಹಾಗೂ ನಂಬಿಕೆಯನ್ನು ಭಾಷೆಯು ಅಕ್ಷರ ರೂಪದಲ್ಲಿ ಸಂಗ್ರಹಿಸಿ ಮುಂದೆ ದಾಟಿಸುತ್ತದೆ. ಹಾಗಿದ್ದರೆ ಭಾಷೆಯೇ ಜ್ಞಾನವೇ ಎಂದರೆ ಅಲ್ಲ. ಭಾಷೆಯನ್ನು ಬಳಸಿ ಜ್ಞಾನವನ್ನು ಕಟ್ಟುತ್ತೇವೆ. ಭಾಷೆಯ ಮೂಲಕ ಜ್ಞಾನ ಅಥವಾ ತಿಳಿವಳಿಕೆ ಮುಂದಕ್ಕೆ ಅಥವಾ ಒಬ್ಬರಿಂದ ಒಬ್ಬರಿಗೆ ದಾಟುತ್ತದೆ. ಹೀಗಾಗಿ ಭಾಷೆ ಎನ್ನುವುದು ಜ್ಞಾನದ ಅಡಕವೂ ಹೌದು, ಜ್ಞಾನವನ್ನು ದಾಟಿಸುವ ವಾಹಕವೂ ಹೌದು. ಒಂದು ಭಾಷೆಯಲ್ಲಿ ಕಲಿಯುವುದು ಎಂದರೆ ಆ ಭಾಷೆಯಲ್ಲಿ ಅಡಕವಾಗಿರುವ ಜ್ಞಾನಕ್ಕೆ ಕೀಲಿಕೈ ಪಡೆದಂತೆ. ಈ ಅರ್ಥದಲ್ಲಿ ಯಾವ ಭಾಷೆಯ ಕಲಿಕೆಯೂ ನಿರರ್ಥಕವಲ್ಲ, ‘ಅಪಾಯಕಾರಿ’ಯೂ ಅಲ್ಲ.
ಜ್ಞಾನದ ಭಾಷೆಯೇ ಶಕ್ತಿಶಾಲಿ
ಯಾವ ಭಾಷೆ ಜ್ಞಾನದ ಪರಿಣಾಮಕಾರಿ ವಾಹಕವಾಗಿರುತ್ತದೆಯೋ ಆ ಭಾಷೆ ಶಕ್ತಿಶಾಲಿಯಾಗಿರುತ್ತದೆ. ಆ ನಿಟ್ಟಿನಲ್ಲಿ ಇಂಗ್ಲಿಷ್ ಅತ್ಯಂತ ಪರಿಣಾಮಕಾರಿ ಭಾಷೆ. ಅದು ಜಗತ್ತಿನ ಜ್ಞಾನವನ್ನು ಬೇರೆಲ್ಲಾ ಭಾಷೆಗಳಿಗಿಂತ ಹೆಚ್ಚು ಸಂಗ್ರಹಿಸಿದೆ ಮತ್ತು ಸಮರ್ಥವಾಗಿ ದಾಟಿಸುತ್ತಿದೆ. ಬೇರೆ ಭಾಷೆಗಳಿಗೆ ಈ ಸಾಮರ್ಥ್ಯ ಯಾಕಿಲ್ಲ ಎಂದರೆ ಅದಕ್ಕೆ ಉತ್ತರ ಆ ಭಾಷೆಯನ್ನು ಬಳಸುವವರಲ್ಲಿರುತ್ತದೆ. ಭಾಷೆಯನ್ನು ಬಳಸುವ ಭಾಷಿಕರು ಆಯಾ ಭಾಷೆಗೆ ಜ್ಞಾನವನ್ನು ಧಾರಣ ಮಾಡುವ ಶಕ್ತಿಯನ್ನು ತುಂಬಬೇಕು. ಒಂದು ವಿಚಾರಕ್ಕೆ ಸಂಬಂಧಿಸಿದ ಪದಗಳನ್ನು ಟಂಕಿಸಿ, ಪದಗಳಿಗೆ ಅರ್ಥದ ಜೀವ ತುಂಬಿ, ಅವುಗಳನ್ನು ಮತ್ತೆ ಮತ್ತೆ ಬಳಸಿ ಶಕ್ತಿ ತುಂಬಬೇಕು. ಹೊಸ ಪದಗಳನ್ನು ಸೃಷ್ಟಿಸಿದ ಮಾತ್ರಕ್ಕೆ ಸಾಲುವುದಿಲ್ಲ, ಆ ಪದಗಳಿಗೆ ಅರ್ಥ ತುಂಬಿದ ಮಾತ್ರಕ್ಕೆ ಅಲ್ಲಿಗೆ ಕೆಲಸ ಮುಗಿಯುವುದಿಲ್ಲ. ಟಂಕಿಸಿದ ಪದಗಳನ್ನು ಅದರ ವಿವಿಧ ಅರ್ಥಗಳಲ್ಲಿ ಪದೇ ಪದೇ ಬಳಸುತ್ತಾ ಹೋದರೆ ಆ ಪದ ತನ್ನಿಂತಾನೇ ತನಗೆ ಬೇಕಾದ ವಾಕ್ಯಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಒಂದು ಕಥನ ಶೈಲಿಯನ್ನು ಕಟ್ಟಿಕೊಳ್ಳುತ್ತದೆ. ಒಂದು ಪದ ಹೊಸದಾಗಿ ಬಳಕೆಯಾಗುವ ಪ್ರತಿ ಭಾರಿಯೂ ಹೊಸ ಅರ್ಥವನ್ನು ಹೊಳಹುತ್ತಾ ಸಾಗುತ್ತದೆ. ಹೀಗೆ ಹೊಸ ಪದಗಟ್ಟಗಳು, ಅದರ ಅರ್ಥವ್ಯಾಪ್ತಿಗಳು ಮತ್ತು ಅದಕ್ಕೆ ರೂಪುಗೊಳ್ಳುವ ವಾಕ್ಯಗಳು ಒಟ್ಟಾಗಿ ಒಂದು ಕ್ಷೇತ್ರದ ಜ್ಞಾನವನ್ನು ಪ್ರತಿನಿಧಿಸುತ್ತವೆ. ಇದೇ ಕಾರಣಕ್ಕೆ ಎಷ್ಟೋ ವಿಚಾರಗಳು ಚಾಲ್ತಿಗೆ ಬಂದರೂ ಬಳಕೆಯಲ್ಲಿ ನಿಂತಿಲ್ಲ. ಉದಾಹರಣೆಗೆ ಪಠ್ಯಪುಸ್ತಕದಲ್ಲಿರುವ ವಿಜ್ಞಾನ ಮತ್ತು ಗಣಿತದ ಪದಗಳು, ವಾಕ್ಯಗಳು ಪಠ್ಯಪುಸ್ತಕ, ಪರೀಕ್ಷೆ ಹೊರತುಪಡಿಸಿದರೆ ಬೇರೆಲ್ಲೂ ಬಳಕೆಗೆ ಬರುವುದೇ ಇಲ್ಲ. ಹೀಗಾಗಿ ಗಣಿತದ ಕುರಿತು ಬರೆಯಬೇಕಾದಾಗ ಪದಗಳಿಗೆ, ಅವುಗಳಿಗೆ ಹೊಂದುವ ವಾಕ್ಯಗಳಿಗೆ ತಡಕಾಡುವಂತಾಗುತ್ತದೆ. ಇನ್ನು ಕಾರ್ಪೊರೇಟ್ ಕಂಪನಿಯೊಂದು ಹೊಸ ಮಾರುಕಟ್ಟೆ ಪ್ರವೇಶಿಸುವ ಕಾರ್ಯತಂತ್ರದ ಭಾಗವಾಗಿ ತನ್ನ ಮೆಡಿಕಲ್ ಜ್ಞಾನವನ್ನು ಪ್ರಜ್ಞಾಪೂರ್ವಕವಾಗಿ ‘ಲೋಕಲೈಸ್’ ಮಾಡಿದರೂ ಅದು ಓದುವ ಜನರಿಗೆ ಅಪರಿಚಿತವಾಗಿಯೇ ಉಳಿಯುತ್ತದೆ.
ಒಂದು ಭಾಷೆ ಸಶಕ್ತವಾಗುವುದು ಎಂದರೆ ಅದನ್ನು ಬಳಸುವ ಭಾಷಿಕರ ಸಂಖ್ಯೆ ಹೆಚ್ಚುತ್ತಾ ಹೋಗುವುದು, ಅವರು ಮಾತೃಭಾಷಿಕರೇ ಆಗಬೇಕಿಂದಿಲ್ಲ, ಆದರೆ ಅದನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಚೆನ್ನಾಗಿ ಬಳಸಬಲ್ಲವರಾಗಿರಬೇಕು. ಹೊಸ ಕ್ಷೇತ್ರಗಳ ಕುರಿತ ಜ್ಞಾನ ಆ ಭಾಷೆಯಲ್ಲಿ ಸೃಷ್ಟಿಯಾಗುವುದು ಮತ್ತು ಆ ಹೊಸ ಜ್ಞಾನ ಹೆಚ್ಚು ಬಳಕೆಗೆ ಬರುವುದು, ಆಯಾ ಕಾಲಕ್ಕೆ ಅನುಗುಣವಾಗಿ ಹೊಸ ಪದಗಳ ಸೃಷ್ಟಿ, ಅದರ ನಿರಂತರ ದಾಖಲೀಕರಣ, ಅವುಗಳ ಅರ್ಥ ವ್ಯಾಖ್ಯಾನ ನಿರಂತರವಾಗಿ ನಡೆಯುತ್ತಿರಬೇಕು. ಹೀಗೆ ಹೊಸ ನೀರು ಹರಿದುಬರುವುದು ನಿರಂತರವಾಗಿದ್ದಾಗ ಭಾಷೆ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ಆದರೆ, ಅದರ ವ್ಯಾಪಕ ಬಳಕೆಗೆ ಬೇಕಾದ ಪೂರಕ ವಾತಾವರಣವನ್ನು ಸರಕಾರ ಮತ್ತು ಅದು ನಿಯಮಿಸಿರುವ ಜವಾಬ್ದಾರಿಯುತ ಸಂಸ್ಥೆಗಳು ನಿರ್ಮಿಸಬೇಕು.
ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸುವುದು ಹೇಗೆ?
ಇನ್ನು ಕನ್ನಡವನ್ನು ಅನ್ನದ ಭಾಷೆಯಾಗಿ ರೂಪಿಸಬೇಕು ಎಂದು ಡಾ.ಬರಗೂರು ರಾಮಚಂದ್ರಪ್ಪ ಮತ್ತಿತರ ಕನ್ನಡ ಚಿಂತಕರ ಬಹುದಿನಗಳಿಂದ ಪ್ರತಿಪಾದಿಸುತ್ತಾ ಬಂದಿದ್ದಾರೆ. ಕನ್ನಡ ಮಾತ್ರವಲ್ಲ ಯಾವುದೇ ಭಾಷೆಯೂ ಅನ್ನದ ಭಾಷೆಯೇ ಆಗಬೇಕು. ಭಾಷೆ ಧರಿಸುವ ಆಭರಣ ಮಾತ್ರ ಆಗಿರಬಾರದು, ಧರಿಸುವವರಿಗೆ ಅದು ಮೌಲ್ಯವೂ ಆಗಿರಬೇಕು. ನಮ್ಮ ಭಾಷೆ ಮನೆಯಲ್ಲಿ ಬಳಸಲಷ್ಟೇ ಚೆನ್ನ, ಆದರೆ ಅದರಿಂದ ಯಾವುದೇ ವ್ಯಾವಹಾರಿಕ, ಔದ್ಯೋಗಿಕ ಲಾಭಗಳಿಲ್ಲ ಎಂದರೆ ಅದು ಅಷ್ಟರಮಟ್ಟಿಗೆ ಅಶಕ್ತ ಭಾಷೆ. ಬಗಾರದ ಆಭರಣಗಳು ಧರಿಸುವವರ ಸೌಂದರ್ಯವರ್ಧಕ ಮಾತ್ರವಲ್ಲದೆ ಅವರ ಕಷ್ಟಕ್ಕಾಗುವ ಆಸ್ತಿ ಕೂಡ ಆಗಿರುತ್ತವೆ. ಯಾಕೆಂದರೆ ಬಂಗಾರದಲ್ಲಿ ಅಂತರ್ಗತ ಮೌಲ್ಯವಿದೆ. ಆ ಮೌಲ್ಯವನ್ನು ನಾವೇ ತುಂಬಿದ್ದೇವೆ. ಹಾಗೆ ನೋಡಿದರೆ ಅದೊಂದು ಲೋಹ ಅಷ್ಟೇ. ನೋಡಲು ಆಕರ್ಕವಾಗಿ ಕಾಣುತ್ತದೆ ಮತ್ತು ಧರಿಸಿದರೆ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ ಎನ್ನುವುದು ಬಿಟ್ಟರೆ ಅದಕ್ಕೆ ಹೆಚ್ಚಿನ ಮೌಲ್ಯವಿಲ್ಲ. ಆದರೆ, ಅದಕ್ಕೆ ನಾವೇ ಇಲ್ಲದ ಮೌಲ್ಯವನ್ನು ತುಂಬಿದ್ದೇವೆ. ಜನರ ಮನಸ್ಸಿನಲ್ಲಿ ಆ ಲೋಹದ ಕುರಿತು ಮೌಲ್ಯ ಕಡಿಮೆಯಾಗುವವರೆಗೂ ಬಂಗಾರ ಅಮೂಲ್ಯವಾಗಿಯೇ ಉಳಿಯುತ್ತದೆ.
ಅಲಂಕಾರಕ್ಕೆ ಬೇರೆ ತೆರನಾದ ಉತ್ಪನ್ನಗಳು ಬಂದರೆ, ಆಸ್ತಿಯಾಗಿ ಹೊಂದಲು ಬೇರೆ ತೆರನಾದ ವಸ್ತುಗಳು ಮುನ್ನೆಲೆಗೆ ಬಂದರೆ ಬಂಗಾರದ ಮೌಲ್ಯ ಕಡಿಮೆಯಾಗಬಹುದು. ಆದರೆ, ಸಾವಿರಾರು ವರ್ಷಗಳಿಂದ ಹಾಗಾಗಿಲ್ಲ. ಹಾಗೆಂದು ಭವಿಷ್ಯದಲ್ಲಿ ಅದು ನಡೆಯುವುದಿಲ್ಲ ಎಂದೇನಲ್ಲ. ಜಗತ್ತಿನ ಎಲ್ಲಾ ಸರಕಾರಗಳು ಚಿನ್ನವನ್ನು ಆಸ್ತಿಯಾಗಿ ಪರಿಗಣಿಸಿ ಸಂಗ್ರಹಿಸುತ್ತಿರುವ ಕಾರಣ ಅದಕ್ಕೆ ಇನ್ನಿಲ್ಲದ ಬೇಡಿಕೆ ಇದೆ. ಆದರೆ ಭಾರತದಲ್ಲಿ ಜನರೂ ಬಂಗಾರದ ‘ಆಸ್ತಿ’ಕರು. ಸರಳವಾಗಿ ಹೇಳುವುದಾದರೆ ಆಧುನಿಕ ಸಂದರ್ಭದಲ್ಲಿ ಚಿನ್ನ ಎಲ್ಲ ದೇಶಗಳ ರಿಸರ್ವ್ ಕರೆನ್ಸಿ. ಮುಂದೊಂದು ದಿನ ಎಲ್ಲಾ ದೇಶಗಳು ಕ್ರಿಪ್ಟೊ ಕರೆನ್ಸಿಯಂತ ಡಿಜಿಟಲ್ ಅಸೆಟ್ಗಳ ಕಡೆಗೆ ಗಮನ ಹರಿಸಿ ಅದರ ಸಂಗ್ರಹಕ್ಕೆ ತೊಡಗಿದರೆ ನಿಧಾನವಾಗಿ ಚಿನ್ನದ ಮೌಲ್ಯದ ಕುಸಿಯುತ್ತಾ ಹೋಗಬಹುದು. ಬಿಟ್ಕಾಯಿನ್ ನಂತಹ ಡಿಜಿಟಲ್ ಅಸೆಟ್ ಅನ್ನು ಈಗಾಗಲೇ ಹಲವು ದೇಶಗಳು ರಿಸರ್ವ್ ಕರೆನ್ಸಿಯಾಗಿ ಸಂಗ್ರಹ ಮಾಡುತ್ತಿವೆ.
ಅಭಿಮಾನವೇ ಭಾಷೆಯ ಮೌಲ್ಯ
ಈಗ ಭಾಷೆಯ ವಿಚಾರಕ್ಕೆ ಮರಳುವುದಾದರೆ ಭಾಷೆಯೂ ಕೂಡ ಜನರ ಅಸೆಟ್. ಅದಕ್ಕೆ ನಾವು ಎಷ್ಟು ಮೌಲ್ಯ ತುಂಬುತ್ತೇವೋ ಅಷ್ಟರಮಟ್ಟಿಗೆ ಅದು ಮೌಲ್ಯ ಹೆಚ್ಚಿಸಿಕೊಳ್ಳುತ್ತದೆ. ಅದನ್ನೇ ‘ಭಾಷಾಭಿಮಾನ’ ಎಂದು ಕರೆಯುವುದು. ಅದರ ಮೇಲಿನ ಅಭಿಮಾನ ಕುಗ್ಗಿದರೆ ಭಾಷೆಯ ಮೌಲ್ಯ ಕುಗ್ಗಿದಂತೆ. ಪರಿಣಾಮ ಅದರ ಬಳಕೆಯೂ ತಗ್ಗುತ್ತದೆ. ಒಂದು ಭಾಷೆಗೆ ತನ್ನಿಂತಾನೇ ಮೌಲ್ಯ ಬರುವುದಿಲ್ಲ ಅದನ್ನು ಬಳಸುವವರು ತುಂಬಬೇಕು. ಹಾಗೆ ಮೌಲ್ಯ ತುಂಬಲು ಪ್ರೇರಣೆ, ಒತ್ತಾಸೆ, ಸೂಕ್ತ ವಾತಾವರಣ ಸೃಷ್ಟಿಸುವ ಕೆಲಸವನ್ನು ಸರಕಾರಗಳು ಮಾಡಬೇಕು. ಭಾಷೆಯ ಧಾರಣಶಕ್ತಿಯನ್ನು ಹೆಚ್ಚಿಸುವಲ್ಲಿಂದ ಅದು ಆರಂಭವಾಗುತ್ತದೆ. ಎಂದರೆ ಭಾಷೆಯು ಎಲ್ಲ ವಿಚಾರವನ್ನೂ ಅಭಿವ್ಯಕ್ತಿಸಬಲ್ಲ ಶಕ್ತಿ ಪಡೆಯಬೇಕು. ಉದಾಹರಣೆಗೆ ಕ್ವಾಂಟಮ್ ಮೆಕಾನಿಕ್ಸ್, ಅಡ್ವಾನ್ಸ್ಡ್ ಮ್ಯಾಥಮಾಟಿಕ್ಸ್ ವಿಷಯಗಳನ್ನು ಕನ್ನಡದಲ್ಲಿ ಬರೆಯವುದು ಅತ್ಯಂತ ಕಷ್ಟದ ಕೆಲಸ. ಆ ಕ್ಷೇತ್ರಕ್ಕೆ ಸಂಬಂಧಿಸಿದ ಕನ್ನಡ ಪದಗಳು ಬಹುತೇಕ ಇಲ್ಲವೇ ಇಲ್ಲ. ಇನ್ನು ಇಂಗ್ಲಿಷ್ ಪದಗಳನ್ನು ಬಳಸಿದರೂ ಅವು ವಾಕ್ಯಗಳಾಗಿ ರೂಪುಗೊಳ್ಳುವಾಗ ಏನೋ ಅಪರಿಚಿತತೆ ಕಾಡುತ್ತದೆ. ಇದಕ್ಕೆ ಕಾರಣ ಆ ವಿಚಾರ ಕನ್ನಡ ಭಾಷೆಗೆ ಹೊಸದು. ಅದನ್ನು ಬಳಸಿ ನಮಗೆ ಅಭ್ಯಾಸವಿಲ್ಲ. ಆದರೆ ಹೆಚ್ಚೆಚ್ಚು ಬಳಸುತ್ತಾ ಹೋದಂತೆ ಅದು ನಮಗೆ ಸಹಜವಾಗುತ್ತದೆ.
ಇಂದು ಪತ್ರಿಕೆಗಳು ಅಥವಾ ವ್ಯಾಪಕವಾಗಿ ಮಾಧ್ಯಮಗಳು ಭಾಷೆಯ ಬಳಕೆಯ ಪ್ರಯೋಗಶಾಲೆಗಳಾಗಿವೆ. ಹೊಸ ವಿಚಾರ ಮೊದಲು ಹೆಚ್ಚು ಪ್ರಚುರವಾಗುವುದು ಮಾಧ್ಯಮದಲ್ಲಿ. ಕೋವಿಡ್ ಬರುವುದಕ್ಕೂ ಮೊದಲು ಕೋವಿಡ್ ಬಗ್ಗೆ ಕನ್ನಡದಲ್ಲಿ ಬರೆಯುವುದು ಕಷ್ಟವಾಗುತ್ತಿತ್ತೇನೋ. ಆದರೆ, ಎರಡು ವರ್ಷ ಮಾಧ್ಯಮಗಳಲ್ಲಿ ಆ ಕುರಿತು ಭಾಷೆಯಲ್ಲಿ ಕೇಳಿ, ನೋಡಿ, ಓದಿ ಈಗ ಯಾರು ಬೇಕಾದರೂ ಕೋವಿಡ್ ಕುರಿತು ಕನ್ನಡದಲ್ಲಿ ಸುಲಭವಾಗಿ ಬರೆಯಬಲ್ಲರು. ಹೀಗೆ ಬಳಕೆಯೊಂದೇ ಭಾಷೆಯ ಧಾರಣ ಶಕ್ತಿಯನ್ನು ಹೆಚ್ಚಿಸುವ ಮಾರ್ಗ. ಹೀಗಾಗಿ ಹೊಸದನ್ನು ಬರೆಯುವ ಸಂದರ್ಭಗಳು ಹಾಗೂ ಬಳಸುವ ಅವಕಾಶಗಳು ಹೆಚ್ಚಬೇಕು.
ವಿಜ್ಞಾನ-ತಂತ್ರಜ್ಞಾನ ಭಾಷೆಯ ಶಕ್ತಿವರ್ಧಕಗಳು
ವಿಜ್ಞಾನ ಎನ್ನುವುದು ಜಗತ್ತಿನ ಕುರಿತ ನಮ್ಮ ವ್ಯವಸ್ಥಿತ ತಿಳಿವಳಿಕೆ. ಇದರ ನೈಜ ಬಳಕೆಯನ್ನು ಸಾಧ್ಯವಾಗಿಸುವುದು ತಂತ್ರಜ್ಞಾನ. ವಿಜ್ಞಾನ ಎನ್ನುವುದು ತಾತ್ವಿಕತೆಗೆ ಸಂಬಂಧಿಸಿದ್ದಾದರೆ ಅದನ್ನು ಬಳಕೆಯ ರೂಪಕ್ಕೆ ಪರಿವರ್ತಿಸುವುದು ತಂತ್ರಜ್ಞಾನ. ವಿಜ್ಞಾನ-ತಂತ್ರಜ್ಞಾನಗಳೆರಡೂ ಜಗತ್ತನ್ನು ಅತಿಯಾಗಿ ಪ್ರಭಾವಿಸಿರುವ ವಿಚಾರಗಳು. ಸಂಸ್ಕೃತಿ ಎನ್ನುವುದು ಮನುಷ್ಯ ಅಸ್ತಿತ್ವದ ಅಡಿಪಾಯವಾದರೆ, ಭಾಷೆ ಈ ಅಸ್ತಿತ್ವದ ಅಭಿವ್ಯಕ್ತಿ, ಧರ್ಮ ಬದುಕಿಗೆ ದಿಕ್ಕು ದೆಸೆ ತೋರಿಸುವ ಮಾರ್ಗ, ಈ ಮಾರ್ಗದಲ್ಲಿ ಸಾಗುವಾಗ ಎದುರಾಗುವ ವೈರುಧ್ಯಗಳಿಗೆ ಕಂಡುಕೊಂಡ ಉತ್ತರ ವಿಜ್ಞಾನ. ಇದೇ ವೈಜ್ಞಾನಿಕ ತಿಳಿವಳಿಕೆಯನ್ನು ಮೂರ್ತ ರೂಪಕ್ಕಿಳಿಸಿದ್ದು ತಂತ್ರಜ್ಞಾನ. ಆಧುನಿಕ ಸಂದರ್ಭದಲ್ಲಿ ಈ ತಂತ್ರಜ್ಞಾನ ಪ್ರಗತಿಗೂ, ವಿನಾಶಕ್ಕೂ ಮನುಷ್ಯನ ಅತಿದೊಡ್ಡ ಅಸ್ತ್ರವೇ ಆಗಿದೆ. ಹೀಗಾಗಿ ಆಧುನಿಕ ಕಾಲದ ಅತಿದೊಡ್ದ ಶಕ್ತಿ ತಂತ್ರಜ್ಞಾನ ಎನ್ನುವುದು ನಿರ್ವಿವಾದ.
ಇಂಥ ದೈತ್ಯ ಶಕ್ತಿಯನ್ನು ಅರಗಿಸಿಕೊಂಡ ಭಾಷೆಗಳು ಆಧುನಿಕವಾಗಿ ಹೆಚ್ಚು ಪ್ರಭಾವಶಾಲಿಯಾಗಿವೆ. ಇಂಗ್ಲಿಷ್ ಈ ನಿಟ್ಟಿನಲ್ಲಿ ಜಾಗತಿಕ ನಾಯಕನಾಗಿದ್ದರೆ, ಜರ್ಮನ್, ಫ್ರೆಂಚ್, ರಷಿಯನ್ ಮತ್ತು ಚೈನೀಸ್ ಭಾಷೆಗಳು ವಿಜ್ಞಾನ-ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡಿವೆ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಲ್ಲವಾಗಿವೆ. ಮೇಲೆ ನಮೂದಿಸಿದ ಭಾಷಿಕರು ತಮ್ಮ ತಮ್ಮ ಭಾಷೆಗಳಲ್ಲಿ ವೈಜ್ಞಾನಿಕ ಜ್ಞಾನವನ್ನು ಕಟ್ಟಿದ್ದಾರೆ. ಅದೇ ಭಾಷೆಗಳನ್ನು ಬಳಸಿ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ತತ್ವಶಾಸ್ತ್ರಜ್ಞ ವಿಟ್ಗೆನ್ಸ್ಟೈನ್ ಹೇಳುವಂತೆ “ನನ್ನ ಭಾಷೆಯ ಮಿತಿಗಳು ನನ್ನ ಪ್ರಪಂಚದ ಮಿತಿಗಳನ್ನು ಅರ್ಥೈಸುತ್ತವೆ.” ಎಂದರೆ ನಮ್ಮ ಭಾಷೆಗಿರುವ ಮಿತಿಯೇ ನಮ್ಮ ಲೋಕಜ್ಞಾನದ ಮಿತಿಯೂ ಆಗುತ್ತದೆ. ನಮ್ಮ ಭಾಷೆಯ ವ್ಯಾಪ್ತಿಯನ್ನು, ಧಾರಣ ಶಕ್ತಿಯನ್ನು ವಿಸ್ತರಿಸುತ್ತಾ ಹೋದಂತೆ ಆ ಭಾಷಿಕರ ಲೋಕಜ್ಞಾನವೂ ವಿಸ್ತರಿಸುತ್ತಾ ಹೋಗುತ್ತದೆ.
ತಂತ್ರಜ್ಞಾನ, ಸಮಾಜ ಪರಿವರ್ತನೆಯ ದೊಡ್ಡ ಶಕ್ತಿ
ಆಧುನಿಕ ಸಂದರ್ಭದಲ್ಲಿ ತಂತ್ರಜ್ಞಾನದ ವ್ಯಾಪ್ತಿ ಮತ್ತು ಪ್ರಭಾವ ಬಹಳ ದೊಡ್ಡದು. ಒಂದೊಂದು ತಾಂತ್ರಿಕ ಆವಿಷ್ಕಾರಗಳು ಇಡೀ ಸಮಾಜವನ್ನೇ ಬದಲಿಸಬಲ್ಲವು. ಯಂತ್ರಗಳ ಸೃಷ್ಟಿ ಕೈಗಾರಿಕಾ ಕ್ರಾಂತಿಗೆ ದಾರಿ ಮಾಡಿಕೊಟ್ಟಿದೆ. ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದೆ. ವ್ಯಾಪಾರ, ವಹಿವಾಟು ಎಂಬ ಹೊಸ ಲೋಕವನ್ನೇ ಹುಟ್ಟುಹಾಕಿದೆ. ಟಿವಿ ಎಂಬ ತಂತ್ರಜ್ಞಾನ ಇಡೀ ಮನುಷ್ಯ ಕುಲವನ್ನೇ ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಹೊಸ ರೀತಿಯ ಮನರಂಜನೆಯ ಮಹಾಪೂರವನ್ನೇ ಹರಿಸಿದೆ. ಹಳೆಯ ಕಾಲದ ಮನರಂಜನೆಯ ಮಾರ್ಗಗಳನ್ನು ಬಹುತೇಕ ಮುಚ್ಚಿಬಿಟ್ಟಿದೆ. ಕಂಪ್ಯೂಟರ್ಗಳ ಪ್ರಭಾವ ಹೇಳುವುದೇ ಬೇಡ. ಆಧುನಿಕ ಪ್ರಪಂಚದ ಮೂಲಧಾರವೇ ಕಂಪ್ಯೂಟರ್ ಅಥವಾ ಕಂಪ್ಯೂಟಿಂಗ್ ಯಂತ್ರಗಳು. ಮೊಬೈಲ್ ಇದರ ಇನ್ನೊಂದು ರೂಪ. ಮೊಬೈಲ್ ಬಂದ ಮೇಲೆ ಲಕ್ಷಾಂತರ ಹೊಸ ಉದ್ಯಮಗಳು ಹುಟ್ಟಿಕೊಂಡಿವೆ. ಕೋಟ್ಯಂತರ ಜನರಿಗೆ ಉದ್ಯೋಗ ಒದಗಿದೆ. ಸೋಷಿಯಲ್ ಮೀಡಿಯಾಗಳೆಂಬ ತಂತ್ರಜ್ಞಾನದ ಕೂಸುಗಳು ಸಮಾಜವನ್ನೇ ತಲೆಕೆಳಗೆ ಮಾಡಿವೆ. ಜನರ ವರ್ತನೆಯನ್ನೇ ಬದಲಿಸಿವೆ. ಹೊಸ ರೀತಿಯ ‘ಸೋಷಿಯಲ್ ಸಂಸ್ಕೃತಿ’ಯನ್ನೇ ಹುಟ್ಟು ಹಾಕಿವೆ. ಜಿಪಿಎಸ್, ಮ್ಯಾಪ್ ಎಂಬ ಎರಡು ತಾಂತ್ರಿಕ ಆವಿಷ್ಕಾರಗಳು ಓಲಾ, ಊಬರ್ನಂತಹ ಹೊಸ ಉದ್ಯಮಗಳಿಗೆ ದಾರಿ ಮೊಡಿಕೊಟ್ಟಿವೆ. ಇವೇ ಆವಿಷ್ಕಾರಗಳು ಇಂದಿನ ಇ-ಕಾಮರ್ಸ್ ಎಂಬ ಆಧುನಿಕ ಡಿಜಿಟಲ್ ಮಾರುಕಟ್ಟೆಗೆ ಜೀವ ತುಂಬಿವೆ. ಮೊಬೈಲ್, ಮ್ಯಾಪ್ ಮತ್ತು ಜಿಪಿಎಸ್ ಇಲ್ಲದೆ ಇ-ಕಾಮರ್ಸ್ ವ್ಯವಹಾರಕ್ಕೆ ಅಸ್ತಿತ್ವವೇ ಇಲ್ಲ. ತಂತ್ರಜ್ಞಾನ ಸಮಾಜವನ್ನು, ಜನರನ್ನು, ಭಾಷೆಗಳನ್ನು ವ್ಯಾಪಕವಾಗಿ ಬದಲಾಯಿಸಿರುವುದಕ್ಕೆ ಇಂತಹ ಅಸಂಖ್ಯ ಉದಾಹರಣೆಗಳನ್ನು ನೀಡಬಹುದು.
ಯಾವ ಭಾಷೆಯ ಮೂಲಕ ಇಂತಹ ತಾಂತ್ರಿಕ ಆವಿಷ್ಕಾರಗಳು ನಡೆದಿವೆಯೋ, ಯಾವ ಭಾಷೆಗಳು ಇಂತಹ ತಾಂತ್ರಿಕತೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲವೋ, ಸೂಕ್ತ ರೀತಿಯಲ್ಲಿ ಅಡಕ ಮಾಡಬಲ್ಲವೋ ಆಯಾ ಭಾಷಿಕರು ಅದರ ಹೆಚ್ಚು ಲಾಭ ಪಡೆಯುತ್ತಾರೆ. ಹೀಗಾಗಿ ಒಂದು ಭಾಷೆಯನ್ನು ಸಬಲೀಕರಣಗೊಳಿಸುವುದು ಆಯಾ ಭಾಷಿಕರನ್ನು ಸಬಲೀಕರಣಗೊಳಿಸುವ ಮಾರ್ಗವೂ ಹೌದು. ಹಾಗೆಯೇ ಆಯಾ ಭಾಷಿಕರನ್ನು ಸಬಲೀಕರಣಗೊಳಿಸುವುದು ಅವರಾಡುವ ಭಾಷೆಯನ್ನು ಸಬಲೀಕರಣಗೊಳಿಸುವ ವಿಧಾನವೂ ಆಗಿರುತ್ತದೆ.
ಒಟ್ಟಾರೆಯಾಗಿ ಒಂದು ಭಾಷೆ ಅನ್ನದ ಭಾಷೆಯಾಗುವುದು ಎಂದರೆ ಆ ಭಾಷೆಯ ಮೂಲಕ ಅಥವಾ ಆ ಭಾಷೆಯ ಕಾರಣದಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ, ದುಡಿಯುವ, ಉದ್ಯಮ ಕಟ್ಟುವ ಅವಕಾಶಗಳು ಹೇರಳವಾಗಿವೆ ಎಂದರ್ಥ. ಇಲ್ಲಿ ಭಾಷೆಯೇ ದೊಡ್ಡ ಕೌಶಲ್ಯ ಮತ್ತು ಮೌಲ್ಯ. ಅದೊಂದಿದ್ದರೆ ಬದುಕುವ ದಾರಿ ಸಲೀಸು ಎನ್ನುವಂತಿರಬೇಕು. ಆದರೆ ಒಂದು ಭಾಷೆಯನ್ನು ಅನ್ನದ ಭಾಷೆಯಾಗಿ ರೂಪಿಸುವುದು ಎಂದರೆ ಅದು ಕೇವಲ ಭಾಷೆಯನ್ನು ಬೆಳೆಸುವ ಮಾರ್ಗ ಮಾತ್ರವಲ್ಲ, ಆಯಾ ಭಾಷಿಕರ ಸಮಗ್ರ ಅಭಿವೃದ್ಧಿಯೂ ಹೌದು. ಅದರಲ್ಲೂ ವಿಶೇಷವಾಗಿ ವಿಜ್ಞಾನ-ತಂತ್ರಜ್ಞಾನಗಳನ್ನು ಅರಗಿಸಿಕೊಳ್ಳುವ ಶಕ್ತಿ ಭಾಷೆಗೆ ಹೆಚ್ಚಿದಷ್ಟೂ ಅದರ ಅನ್ನ ಕೊಡುವ ಶಕ್ತಿಯೂ ಹೆಚ್ಚುತ್ತದೆ. ಕನ್ನಡ ಭಾಷೆಯನ್ನು ಅನ್ನದ ಭಾಷೆಯಾಗಿ ರೂಪಿಸುವುದು ಎಂದರೆ ಕನ್ನಡಿಗರನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಎಂದೇ ಅರ್ಥ. ಅಭಿವೃದ್ಧಿ ಏಕಕಾಲಕ್ಕೆ ಭಾಷಿಕವಾಗಿ ಮತ್ತು ಭೌತಿಕವಾಗಿ ನಡೆಯುತ್ತಿರಬೇಕು. ಆಗ ಕನ್ನಡ ಅನ್ನದ ಭಾಷೆಯಾಗುತ್ತದೆ, ಕನ್ನಡಿಗರು ಅನ್ನದಾತರಾಗುತ್ತಾರೆ.


