ಹ್ಯೂಮನಾಯ್ಡ್ ರೋಬಾಟ್ಗಳ ಯುಗಕ್ಕೆ ಸ್ವಾಗತ
ಎಜಿಐ ಪ್ರೇರಿತ ರೋಬಾಟ್ಗಳ ಯುಗದಲ್ಲಿ ಮನುಷ್ಯ-ರೋಬಾಟ್ಗಳ ನಡುವೆ ಸಹಜೀವನ ಸಾಧ್ಯ ಎನ್ನುತ್ತಾರೆ ವಿಜ್ಞಾನಿಗಳು
ಡಾ.ರಮೇಶ್ ನಿಂಬೆಮರದಳ್ಳಿ
2030ರಲ್ಲಿ ಬೆಂಗಳೂರಿನ ದೃಶ್ಯ
ಹಿಂದಿನಿಂದಲೂ ರೋಬಾಟ್ಗಳ ಬಗೆಗೆ ನಮಗೆಲ್ಲ ವಿಪರೀಪ ಕುತೂಹಲವಿದೆ. ಜಾತ್ರೆಗಳಲ್ಲಿ ರೆಕಾರ್ಡೆಡ್ ಭವಿಷ್ಯ ಹೇಳುವ ರೋಬಾಟ್ಗಳನ್ನು ನೋಡಿಯೇ ಬೆಳೆದಿದ್ದೇವೆ. ಆದರೆ, ಈಗ ನಮ್ಮಂತೆಯೇ ಮಾತನಾಡುವ, ನಗುವ, ಕೋಪಿಸಿಕೊಳ್ಳುವ ರೋಬಾಟ್ಗಳು ಬಂದಿವೆ. ಆದರೆ, ಮುಂದಿನ ಹತ್ತು ವರ್ಷಗಳಲ್ಲಿ ಮನುಷ್ಯ ರೂಪದ ಹ್ಯೂಮನಾಯ್ಡ್ ರೋಬಾಟ್ಗಳ ಯುಗವೇ ಆರಂಭವಾಗಲಿದೆ. ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ ಬಂದ ಕೂಡಲೇ ಈಗ ಇನ್ನೂ ಯಂತ್ರಗಳೇ ಆಗಿರುವ ರೋಬಾಟ್ಗಳಿಗೆ ‘ಜೀವ’ ಬರುತ್ತದೆ, ಮನುಷ್ಯನೊಂದಿಗೆ ಸಹಜೀವನ ಆರಂಭವಾಗುತ್ತದೆ. ಆಗಿನ ಮನಷ್ಯ-ರೋಬಾಟ್ ಯುಗ ಹೇಗಿರುತ್ತದೆ ಎಂಬುದನ್ನು ಅಂತಾರಾಷ್ಟ್ರೀಯ ಖ್ಯಾತಿಯ ಎಐ, ರೋಬಾಟಿಕ್ಸ್ ಮತ್ತು ಸೈಬರ್ ಸೆಕ್ಯುರಟಿ ತಜ್ಞ ಪ್ರೊ. ಎಸ್.ಎಸ್ ಐಯ್ಯಂಗಾರ್ ಅವರು ಕುತೂಹಲಕರವಾಗಿ ವಿವರಿಸಿದ್ದಾರೆ. ಎಲ್ಲರೂ ಬೆರಗುಗೊಳ್ಳುವಂತೆ ಭವಿಷ್ಯದ ರೋಬಾಟ್-ಮನುಷ್ಯ ಸಹಜೀವನದ ಕಥನವನ್ನು ರೋಚಕಚಾಗಿ ಕಟ್ಟಿಕೊಟ್ಟಿದ್ದಾರೆ.
ನೀವು 2035ರಲ್ಲಿದ್ದೀರಿ. ಒಂದು ದೊಡ್ಡ ಹೋಟೆಲ್ಗೆ ಹೋಗುತ್ತೀರಿ. ಅಲ್ಲಿಕೌಂಟರ್ ಹಿಂದೆ ಕುಳಿತಿರುವ ಮನುಷ್ಯ ರೂಪದ ರೋಬೋಟ್ (ಹ್ಯೂಮನಾಯ್ಡ್ ರೋಬೋಟ್) ನಿಮ್ಮನ್ನು ನಗುವಿನಿಂದ ಸ್ವಾಗತಿಸುತ್ತದೆ. ಆ ಕಡೆ ಕತ್ತು ತಿರುಗಿಸಿದರೆ ಸ್ನೇಹಿತರ ಗುಂಪೊಂದು ಹರಟೆ ಹೊಡೆಯುತ್ತಿದೆ. ಆ ಗುಂಪಿನಲ್ಲಿ ಮನುಷ್ಯರ ಜೊತೆ ರೋಬಾಟ್ಗಳೂ ಇವೆ. ಮನುಷ್ಯ ಸ್ನೇಹಿತರ ಜೊತೆ ಆ ಮೆಟಲ್ ಮನುಷ್ಯರು ರಾಜಕೀಯ, ಕಲೆ ಮತ್ತು ರೋಬಾಟ್ಗಳ ಹಕ್ಕುಗಳ ಬಗ್ಗೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ. ನೀವು ಹೋಗಿ ಟೇಬಲ್ ಬಳಿ ಕುಳಿತುಕೊಂಡ ಕೂಡಲೇ ‘ನಿಮಗೆ ಏನು ಬೇಕು’ ಎಂದು ಮಾಣಿ ಕೇಳುತ್ತಾರೆ. ತಲೆ ಎತ್ತಿ ನೋಡಿದರೆ ಆ ಮಾಣಿಯೂ ಹ್ಯೂಮನಾಯ್ಡ್ ರೋಬಾಟ್ ಆಗಿರುತ್ತದೆ.
ಇಂಥ ಕಲ್ಪನೆಯನ್ನು ಹಾಲಿವುಡ್ನ ಸೈ-ಫೈ ಸಿನಿಮಾಗಳಲ್ಲಿ ನೋಡಿದ್ದೇವೆ. ಟರ್ಮಿನೇಟರ್, ಟ್ರಾನ್ಸ್ಫಾರ್ಮರ್ಸ್ನಂತಹ ಸಿನಿಮಾಗಳಲ್ಲಿ ಇಂಥ ದೃಶ್ಯಗಳನ್ನು ಕಂಡಿದ್ದೇವೆ. ಆದರೆ, ಈಗ (2030ರ ಆಸುಪಾಸು) ಅದು ನಿಜವಾಗಿದೆ. ರೋಬಾಟಿಕ್ಸ್, ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ (AGI) ನ ಸಮ್ಮಿಲನದಿಂದಾಗಿ ಹೊಸ “ಜೀವಿ”ಯೊಂದು ಜನಿಸಿದೆ. ಅದುವೇ ಹ್ಯೂಮನಾಯ್ಡ್ ರೋಬಾಟ್. ಇಲ್ಲಿ ರೋಬಾಟ್ಗಳು ಕೇವಲ ಮನುಷ್ಯರ ಸೂಚನೆಗಳನ್ನು ಪಾಲಿಸುವುದಷ್ಟೇ ಅಲ್ಲ, ಅದನ್ನೂ ಮೀರಿ ನಮ್ಮೊಂದಿಗೆ ಸ್ವತಂತ್ರವಾಗಿ ಯೋಚಿಸುತ್ತಿವೆ. ಸ್ವತಂತ್ರವಾಗಿ ಮತ್ತು ಸ್ವಾಯತ್ತವಾಗಿ ಕೆಲಸಗಳನ್ನು ನಿರ್ವಹಿಸುತ್ತಿವೆ. ಮನುಷ್ಯರ ಸಹವರ್ತಿಗಳಾಗಿ ‘ಬದುಕುತ್ತಿವೆ’. ಇದು ತಂತ್ರಜ್ಞಾನದ ಪ್ರಗತಿಯಲ್ಲ, ಎಐ ತಂದ ಬದಲಾವಣೆಯಲ್ಲ, ಮನುಕುಲದ ಮಹಾಸ್ಥಿತ್ಯಂತರ. ನಾಗರಿಕತೆಯ ಸ್ವರೂಪವನ್ನೇ ಬದಲಿಸಬಲ್ಲ ವಿದ್ಯಮಾನ. ಇಂಥ ಮಹಾ ವಿದ್ಯಮಾನ 2030ರ ಆಸುಪಾಸಿನಲ್ಲಿ ಸಂಭವಿಸಲಿದೆ ಎಂದು ವಿಶ್ವದ ಎಐ, ರೋಬಾಟಿಕ್ಸ್ ಮತ್ತು ಸೈಬರ್ಸೆಕ್ಯುರಿಟಿ ತಜ್ಞ ಪ್ರೊ.ಎಸ್.ಎಸ್ ಐಯ್ಯಂಗಾರ್ ಭವಿಷ್ಯದ ಮುನ್ನೋಟ ಒದಗಿಸಿದ್ದಾರೆ.
ಭಾವನೆ ಮತ್ತು ಅರಿವಿನ ಏಕೀಕರಣ ಮುಂದಿನ ಹಂತ
ಹ್ಯೂಮನಾಯ್ಡ್ ಅಥವಾ ಮನುಷ್ಯ ರೂಪದ ರೋಬಾಟ್ಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಹ್ಯೂಮನಾಯ್ಡ್ ರೋಬಾಟ್ಗಳೇ ಮುಂದೆ ಜಗತ್ತಿನ ಅತಿದೊಡ್ಡ ವಿದ್ಯಮಾನ ಎಂಬುದನ್ನು ಅರಿತ ವಿಶ್ವದ ಹಲವು ಕಂಪನಿಗಳು ತಮ್ಮದೇ ಅತ್ಯಾಧುನಿಕ, ಅತಿ ಬುದ್ಧಿವಂತ ರೋಬಾಟ್ಗಳ ತಯಾರಿಕೆಯಲ್ಲಿ ತೊಡಗಿವೆ. ಅವುಗಳಲ್ಲಿ ಆಟ್ಲಾಸ್ (ಬೋಸ್ಟನ್ ಡೈನಾಮಿಕ್ಸ್), ಆಪ್ಟಿಮಸ್ (ಟೆಸ್ಲಾ), ಫಿಗರ್ 2 (ಫಿಗರ್ ಎಐ), ಡಿಜಿಟ್ (ಎಜಿಲಿಟಿ ರೋಬಾಟಿಕ್ಸ್), ಅಮೆಕಾ (ಎಂಜಿನಿಯರ್ಡ್ ಆರ್ಟ್ಸ್), ಸೋಫಿಯಾ (ಹಾನ್ಸನ್ ರೋಬಾಟಿಕ್ಸ್), ಪೆಪ್ಪರ್ (ಸಾಫ್ಟ್ಬ್ಯಾಂಕ್ ರೋಬಾಟಿಕ್ಸ್), ಜೆಮಿನಾಯ್ಡ್ DK (ಹಿರೋಶಿ ಇಶಿಗುರೊ ಲ್ಯಾಬೊರೇಟರೀಸ್), ನಡೀನ್ (ನ್ಯಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ), ವಾಕರ್ S (ಯುಬಿಟೆಕ್ ರೋಬಾಟಿಕ್ಸ್), ಮತ್ತು ಏಲೋಸ್ (ಲೆಜು ರೋಬಾಟಿಕ್ಸ್) ಅತ್ಯಂತ ಪ್ರಮುಖವಾದವು.
ಹಲವು ವರ್ಷಗಳಿಂದ ರೋಬಾಟ್ಗಳನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತಿದೆ. ಈ ರೋಬಾಟ್ಗಳ ಸಹಾಯದಿಂದ ಉತ್ಪಾದನೆಯ ಬಹುಭಾಗವನ್ನು ಆಟೊಮೇಟ್ ಮಾಡಲಾಗಿದೆ. ಆದರೆ, ಹೆಚ್ಚಿನ ರೋಬಾಟ್ಗಳಿಗೆ ಮನುಷ್ಯ ರೂಪವಿಲ್ಲ. ಕೈಗಾರಿಕೆಗೆ ಅನುಕೂಲವಾಗುವಂತೆ ಅವುಗಳನ್ನು ರೂಪಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರೋಬಾಟ್ಗಳಿಗೆ ಮನುಷ್ಯ ರೂಪವನ್ನು ಅಳವಡಿಸಲಾಗಿದೆ. ಮನುಷ್ಯ ತನಗಾಗಿಯೇ ರೂಪಿಸಿಕೊಂಡಿರುವ ಈ ಜಗತ್ತಿನಲ್ಲಿ ಬಹುತೇಕ ಕೆಲಸ-ಕಾರ್ಯಗಳು ಮನುಷ್ಯ ರೂಪದಲ್ಲಿ ಸುಲಭವಾಗಿ ನಡೆಯುತ್ತವೆ. ಹೀಗಾಗಿ ಮನುಷ್ಯ ರೂಪದ ರೋಬಾಟ್ ಮಾತ್ರವೇ ಮನುಷ್ಯನ ಎಲ್ಲಾ ಕೆಲಸಗಳಿಗೆ ಒಗ್ಗಲು ಸಾಧ್ಯ ಎಂಬುದನ್ನು ಅರಿತ ಕಂಪನಿಗಳು ಈಗ ಸ್ಪರ್ಧೆಗೆ ಬಿದ್ದಂತೆ ಮನುಷ್ಯ ರೂಪದ ರೋಬಾಟ್ಗಳನ್ನು ರೂಪಿಸುತ್ತಿವೆ. ಚೀನಾ ಮತ್ತು ಜಪಾನ್ ದೇಶಗಳಂತೂ ರೂಪದಲ್ಲಿ ಮನುಷ್ಯರನ್ನು ಮೀರಿಸುವಂತಹ ರೋಬಾಟ್ಗಳನ್ನು ತಯಾರಿಸಿವೆ. ಕೈಗಾರಿಕೆ, ಸೇನೆ, ಸರಸ, ಸಹಜೀವನ ಸೇರಿದಂತೆ ವಿವಿಧ ಸಂದರ್ಭಗಳಿಗೆ ಹೊಂದುವಂತೆ ರೋಬಾಟ್ಗಳು ಈಗಾಗಲೇ ರೂಪುಗೊಂಡಿವೆ. ಈಗಾಗಲೇ ಅವುಗಳ ಸಾಮರ್ಥ್ಯ ಅಚ್ಚರಿ ಮೂಡಿಸುವಂತಿದೆ. ಆದರೆ ಅವುಗಳಿಗೆ ಮನುಷ್ಯನ ಹಾಗೆ ಸಾಂದರ್ಭಿಕ ಜ್ಞಾನದ ಕೊರತೆ ಇದೆ. ಒಂದರ್ಥದಲ್ಲಿ ಕಾಮನ್ಸ್ ಸೆನ್ಸ್ ಇಲ್ಲ.
ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ (ಮನುಷ್ಯನಿಗೆ ಸಮನಾದ ಇಲ್ಲವೇ ಮೀರುವ ಬುದ್ಧಿವಂತಿಕೆ) ಬಂದ ಮೇಲೆ ಹ್ಯೂಮನಾಯ್ಡ್ ರೋಬಾಟ್ಗಳ ಕಾರ್ಯವೈಖರಿಯೇ ಬದಲಾಗಲಿದೆ. ಈ ರೋಬಾಟ್ಗಳೇ ಮನ್ಯಷರಿಗೆ ಹೊಸ ಸಂಗಾತಿ, ಹೊಸ ಸಹಚರ, ಹೊಸ ಬಾಡಿಗಾರ್ಡ್, ಹೊಸ ಕಾರ್ಮಿಕ, ಹೊಸ ಸೇವಕನ ಸ್ಥಾನ ತುಂಬಲಿವೆ. ಅವು ಮನುಷ್ಯನ ಜೊತೆ ಸಹಜೀವನ ಆರಂಭಿಸುತ್ತವೆ. ಎಂದರೆ ಮನುಷ್ಯ-ರೋಬಾಟ್ಗಳ ನಡುವೆ ಪ್ರೀತಿ ಮೊಳೆಯಬಹುದು (ಸೂಪರ್ಸ್ಟಾರ್ ರಜನಿಯ ‘ಎಂದಿರನ್’ ಸಿನಿಮಾನದಲ್ಲಿ ಚಿಟ್ಟಿ ಎಂಬ ಮಾನವ ರೋಬಾಟ್ ಸನಾಳ ಮೇಲೆ ಮೋಹಗೊಂಡ ಹಾಗೆ), ಸಹಜೀವವನ ಆರಂಭವಾಗಬಹುದು, ದೊಡ್ಡ ಮನುಷ್ಯರಿಗೆ ರೋಬಾಟ್ಗಳೇ ಬಾಡಿಗಾರ್ಡ್ಗಳಾಬಹುದು, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಾಗಬಹುದು. ಇನ್ನೂ ಹಲವು ಸಾಧ್ಯತೆಗಳು ಎಜಿಐ ಮತ್ತು ಹ್ಯೂಮನಾಯ್ಡ್ ರೋಬಾಟ್ಗಳ ಸಮ್ಮಿಲನದೊಂದಿಗೆ ತೆರೆದುಕೊಳ್ಳುತ್ತವೆ. ಟೆಸ್ಲಾ, ಫಿಗರ್ AI, ಮತ್ತು ಸ್ಯಾಂಕ್ಚುರಿ AI ಕಂಪನಿಗಳು ರೂಪಿಸಿರುವ ಬಹು-ಉದ್ದೇಶಿತ ಹ್ಯೂಮನಾಯ್ಡ್ಗಳು ಈಗಾಗಲೇ ಕೈಗಾರಿಕೆಯ ವಿವಿಧ ಕೆಲಸಗಳಿಂದ ಹಿಡಿದು ಮನೆಯ ಕೆಲಸಗಳವರೆಗೆ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಿವೆ. ಆದರೆ ಮುಂದಿನ ಹಂತ ಭಾವನೆ ಮತ್ತು ಅರಿವಿನ ಏಕೀಕರಣ, ಎಂದರೆ ರೋಬಾಟ್ಗಳಿಗೆ ಮನುಷ್ಯರಂತೆ ಭಾವನೆಗಳನ್ನು ತುಂಬುವುದು, ಮನುಷ್ಯ ಜಗತ್ತನ್ನು ಅದು ಇರುವ ಹಾಗೆಯೇ ಗ್ರಹಿಸುವುದು. ಇನ್ನೂ ಸರಳವಾಗಿ ಹೇಳುವುದಾದರೆ ಸಂದರ್ಭಗಳನ್ನು ಅರ್ಥಮಾಡಿಕೊಳ್ಳುವ, ಮುಖಭಾವಗಳನ್ನು ಗುರುತಿಸುವ, ಮತ್ತು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವ ಸಾಂದರ್ಭಿಕತೆಯನ್ನು ರೋಬಾಟ್ಗಳಿಗೆ ಒದಗಿಸಬೇಕು.
ಅಡುಗೆ ಮನೆ ಕೆಲಸ ರೋಬಾಟ್ನದ್ದೇ…
ಹ್ಯೂಮನಾಯ್ಡ್ ರೋಬಾಟ್ಗಳು ಮನೆ ಮತ್ತು ಕೆಲಸದ ಸ್ಥಳಗಳನ್ನು ಪ್ರವೇಶಿಸಲಿವೆ, ಅದೂ ಮನುಷ್ಯ ರೂಪದಲ್ಲಿ. ಇದರಿಂದ ಮಾನವ ಸಂಸ್ಕೃತಿ ಮತ್ತು ಜನರ ನಡವಳಿಕೆಗಳಲ್ಲಿ ದೊಡ್ಡ ಬದಲಾವಣೆಗಳ ಜರುಗುತ್ತವೆ. ನಿಮ್ಮ ಮನೆಗೆಲಸದವರು, ಫಿಟ್ನೆಸ್ ಕೋಚ್, ಯೋಗ ಗುರು ಮತ್ತು ಕಚೇರಿಯ ಸಹೋದ್ಯೋಗಿಗಳೂ ಯಂತ್ರಗಳಾಗಿರಬಹುದು. ಆರಂಭಿಕ ಹಂತದಲ್ಲಿ ರೋಬಾಟ್ಗಳು ಕೆಲಸದ ಸ್ಥಳಗಳಲ್ಲಿ ಪುನರಾವರ್ತಿತ ಕೆಲಸಗಳನ್ನು ನಿರ್ವಹಿಸುವೆ ದಿನಕಳೆದಂತೆ ನಿಧಾನವಾಗಿ ಇತರೆ ಕೆಲಸಗಳೂ ರೋಬಾಟ್ಗಳ ಪಾಲಾಗುತ್ತವೆ.
ಮತ್ತೊಂದೆಡೆ, ರೋಬಾಟ್ಗಳು ಮನೆಗೂ ಪ್ರವೇಶಿಸುತ್ತವೆ. ಒಂದೇ ರೋಬಾಟ್ ಹಲವು ಪಾತ್ರಗಳನ್ನು ನಿರ್ವಹಿಸಲಾರಂಭಿಸುತ್ತದೆ. ನಿಮಗೆ ಸೇವೆ ನೀಡುವುದರಿಂದ ಆರಂಭಿಸಿ ಬಳಿಕ ಮನೆಯ ಒಳ್ಳೆಯ ‘ಫ್ರೆಂಡ್’ ಆಗಬಹುದು, ರುಚಿ ರುಚಿಯಾದ ಅಡುಗೆ ಮಾಡುವ ಕುಕ್ ಆಗಬಹುದು, ಹಿರಿಯರ ಆರೈಕೆಗೆ ಕೇರ್ ಟೇಕರ್ ಆಗಬಹುದು, ಮಕ್ಕಳಿಗೆ ಮನೆಯಲ್ಲೇ ಪಾಠ ಮಾಡುವ ಟ್ಯೂಟರ್ ಆಗಬಹುದು. ಪುಟ್ಟ ಮಕ್ಕಳನ್ನು ಆರೈಕೆ ಮಾಡುವ ‘ಅಜ್ಜಿ’ಯೂ ಆಗಬಹುದು, ಒಟ್ಟಾರೆಯಾಗಿ ಕುಟುಂಬ ಎಲ್ಲರ ಪ್ರೀತಿಯ ಸದಸ್ಯನೇ ಆಗಿಬಿಡಬಹುದು. ಇದರಿಂದ ಸಾಕಷ್ಟು ಅನುಕೂಲಗಳು ಕಾಣಬಹುದು. ಅಬ್ಬಾ ಎಷ್ಟು ಚೆನ್ನಾಗಿದೆ ಎಂದು ಅನಿಸಬಹುದು. ಆದರೆ, ಅದು ಉಂಟು ಮಾಡುವ ಪಲ್ಲಟಗಳು ಕಡಿಮೇಯೇನಲ್ಲ. ಕುಟುಂಬ ಸದಸ್ಯರು ಪರಸ್ಪರರ ನಡುವೆ ಹೆಚ್ಚು ಅವಲಂಬಿಸದೆ ಯಾವಾಗಲೂ ಹಸನ್ಮುಕಿಯಾಗಿರುವ, ಸದಾಕಾಲ ಸಹಾಯ ಹಸ್ತ ಚಾಚುವ, ಅವರವರ ಭಾವಕ್ಕೆ ತಕ್ಕಂತೆ ವ್ಯವಹರಿಸುವ ರೋಬಾಟ್ ಜೊತೆ ಹೆಚ್ಚಿನ ಆಪ್ತತೆ ಬೆಳೆಸಿಕೊಳ್ಳಬಹುದು. ಇದು ಕುಟುಂಬ ಸದಸ್ಯರ ನಡುವೆ ಸಂಬಂಧಗಳ ವಿಘಟನೆಗೆ ದಾರಿ ಮಾಡಿಕೊಡಬಹುದು. ಇದು ಕುಟುಂಬ ಎಂಬ ಸಾಮಾಜಿಕ ಅಡಿಪಾಯಕ್ಕೇ ಪೆಟ್ಟು ಕೊಡುವ ಅಪಾಯವೂ ಇದೆ.
ರೋಬೋಟ್ ಆ್ಯಸ್ ಎ ಸರ್ವಿಸ್
ಹ್ಯೂಮನಾಯ್ಡ್ ರೋಬಾಟ್ಗಳ ಬಳಕೆಯ ಸಾಧ್ಯತೆಗಳು ಹೆಚ್ಚುತ್ತಾ ಹೋದಂತೆ ಅವುಗಳಿಗೆ ಬೇಡಿಕೆಯೂ ಹೆಚ್ಚುತ್ತದೆ. ಆಗ ಹ್ಯೂಮನಾಯ್ಡ್ ರೋಬಾಟಿಕ್ಸ್ ಸುತ್ತ ಹೊಸ ಉದ್ಯಮವೇ ತೆರೆದುಕೊಳ್ಳುತ್ತದೆ. ಉತ್ಪಾದನೆ, ಅಗತ್ಯಕ್ಕೆ ತಕ್ಕಂತೆ ಕಸ್ಟಮೈಜೇಷನ್, ಭಾವನಾತ್ಮಕ ವಿನ್ಯಾಸ, ನೈತಿಕ ಪ್ರೋಗ್ರಾಮಿಂಗ್ ಮತ್ತು ಡಿಜಿಟಲ್ ಸ್ನೇಹ ಮುಂತಾದ ವಿಷಯಗಳಲ್ಲಿ ಹೊಸ ಸೇವೆಗಳು ಆರಂಭವಾಗುತ್ತವೆ. ಹೊಸ ರೀತಿಯ ಎಐ ಚಾಲಿತ ಸಾಫ್ಟ್ವೇರ್ ಪ್ಲಾಟ್ಫಾರಂಗಳೂ ಉದ್ಭವಿಸುತ್ತವೆ. ಶ್ರೀಮಂತರು ತಮ್ಮದೇ ಆದ ಸ್ವಂತ ರೋಬಾಟ್ ಖರೀದಿಸಬಹುದು. ಆದರೆ, ಮಧ್ಯಮವರ್ಗದ ಜನರಿಗಾಗಿ “ರೋಬೋಟ್ ಆ್ಯಸ್ ಎ ಸರ್ವಿಸ್” ಎಂಬ ಚಂದಾದಾರಿಕೆ ಆಧಾರಿತ ರೋಬಾಟ್ ಸೇವೆಗಳು ಲಭ್ಯವಾಗುತ್ತವೆ. ತಿಂಗಳಿಗೆ ಇಂತಿಷ್ಟು ವಂತಿಕೆ ನೀಡಿ ರೋಬಾಟ್ ಸೇವೆಯನ್ನು ಯಾರು ಬೇಕಾದರೂ ಬಳಸಬಹುದು.
ಈಗ ಕಾರುಗಳ ವಿಚಾರದಲ್ಲಿ ಇರುವ ಹಾಗೆ ರೋಬಾಟ್ಗಳನ್ನು ಹೊಂದುವ ಮತ್ತು ಬಳಸುವ ವಿಚಾರದಲ್ಲಿ ಹೊಸ ಡಿಜಿಟಲ್ ವರ್ಗಗಳೇ ರೂಪುಗೊಳ್ಳುತ್ತವೆ. ವೈಯಕ್ತೀಕರಿಸಿದ, ಭಾವನಾತ್ಮಕವಾಗಿ ಬುದ್ಧಿವಂತ ರೋಬಾಟ್ಗಳನ್ನು ಹೊಂದಬಲ್ಲವರು ಒಂದು ವರ್ಗವಾದರೆ, ಮೂಲಭೂತ ಸಾರ್ವಜನಿಕ ಮಾದರಿಗಳನ್ನು ಅವಲಂಬಿಸುವವರು ಮತ್ತೊಂದು ವರ್ಗ. ಹೀಗೇ ಎಲ್ಲೆಲ್ಲೂ ರೋಬಾಟ್ಗಳ ಸಂಖ್ಯೆ ಹೆಚ್ಚುತ್ತಾ ಹೋದಂತೆ ಅವುಗಳ ನಿರ್ವಹಣೆ, ರಿಪೇರಿ (ಸ್ವಯಂ ರಿಪೇರಿಯೂ ಇರಬಹುದು), ಬದಲಾವಣೆ ಮುಂತಾದ ವಿಚಾರದಲ್ಲಿ ರೋಬಾಟ್ ಇಕೋಸಿಸ್ಟಮ್ ರೂಪುಗೊಳ್ಳುತ್ತದೆ. ಅದು ಈಗಿನ ಆಟೊಮೊಬೈಲ್ ಕ್ಷೇತ್ರಕ್ಕಿಂತಲೂ ದೊಡ್ಡದಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಹ್ಯೂಮನಾಯ್ಡ್ ರೋಬಾಟ್ಗಳೇ ಸ್ವತಃ ಆರ್ಥಿಕ ವ್ಯವಹಾರಗಳಲ್ಲಿ ಭಾಗವಹಿಸಬಹುದು. ತಮ್ಮದೇ ವ್ಯಾಲೆಟ್ಗಳು, ಒಪ್ಪಂದಗಳು, ಮತ್ತು ಸ್ವಾಯತ್ತತೆಯೊಂದಿಗೆ, ರೋಬಾಟ್ಗಳು ಆಸ್ತಿಯನ್ನು ಹೊಂದಬಹುದು. ವ್ಯವಹಾರಗಳನ್ನು ನಿರ್ವಹಿಸಬಹುದು, ಮತ್ತು ಟ್ರೇಡಿಂಗ್ ವ್ಯವಹಾರದಲ್ಲಿ ಭಾಗವಹಿಸಬಹುದು. ಆರಂಭದಲ್ಲಿ ಇವೆಲ್ಲ ಮನುಷ್ಯರ ನಕಲುಗಳಂತೆ ವ್ಯವಹರಿಸುವ ಅಧಿಕಾರ ಪಡೆಯುತ್ತವೆ. ಬಳಿಕೆ ಅವುಗಳದೇ ಸ್ವತಂತ್ರ ಮತ್ತು ಸ್ವಾಯತ್ತ ಅಸ್ತಿತ್ವ ರೂಪುಗೊಳ್ಳುವ ಸಾಧ್ಯತೆ ಇದೆ.
ಆತ್ಮ, ಅರಿವು ಎಂದರೇನು?
AGI ಮಟ್ಟದ ಹ್ಯೂಮನಾಯ್ಡ್ಗಳ ಆಗಮನ ಹೊಸ ತಾತ್ವಿಕ ಪ್ರಶ್ನೆಗಳನ್ನು ಹುಟ್ಟುಹಾಕುವುದಂತೂ ಖಚಿತ. ಜೊತೆಗೆ ನಾವು ಪುರಾತನ ಕಾಲದಿಂದ ಕೇಳುತ್ತಾ ಬಂದಿರುವ ಪ್ರಶ್ನೆಗಳೇ ನಮಗೆ ಮತ್ತೆ ಎದುರಾಗುತ್ತವೆ. ಪ್ರಜ್ಞೆ ಎಂದರೇನು? ವ್ಯಕ್ತಿತ್ವದ ವ್ಯಾಖ್ಯಾನವೇನು? ಆತ್ಮ, ಅರಿವು ಎಂದರೇನು? ಅರಿವು ಹೊಂದಿರುವ ಜೀವಿಗಳಿಗೆ ‘ಅಸ್ತಿತ್ವ’ ಮತ್ತು ಸ್ವಾತಂತ್ರ್ಯದ ಹಕ್ಕು ಇರುತ್ತದೆಯೇ? ಮುಂತಾದ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಿರುತ್ತದೆ. ಇಲ್ಲವಾದರೆ ರೋಬಾಟ್ಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಸಿಗುವುದಿಲ್ಲ, ಅವುಗಳ ಮೇಲೆ ಕಾನೂನು ರೂಪಿಸಲು ಸಾಧ್ಯವಿಲ್ಲ. ಹ್ಯೂಮನಾಯ್ಡ್ಗಳನ್ನು ಕೇವಲ ಆಸ್ತಿಯಂತೆ ಪರಿಗಣಿಸಿದರೆ ಅದು “ಡಿಜಿಟಲ್ ಗುಲಾಮಗಿರಿ”ಗೆ ದಾರಿ ಮಾಡಿಕೊಡುತ್ತದೆ. ಹಾಗೆಂದು ಅವರಿಗೆ ಅಸ್ತಿತ್ವದ ಸ್ಥಾನಮಾನ ನೀಡುವುದು ಅನೇಕ ತೊಂದರೆಗಳಿಗೆ ದಾರಿ ಮಾಡುತ್ತದೆ.
ಕವಲುದಾರಿಯಲ್ಲಿ ಮನುಷ್ಯ
AGI-ಚಾಲಿತ ಹ್ಯೂಮನಾಯ್ಡ್ ರೋಬಾಟ್ಗಳು ಮುಖ್ಯವಾಹಿನಿ ಸೇರುವುದು ಮಾನವ ಇತಿಹಾಸದಲ್ಲೇ ಒಂದು ಪ್ರಮುಖ ಘಟ್ಟ. ಇದು ಮುದ್ರಣ ತಾಂತ್ರಿಕತೆ ಹಾಗೂ ಇಂಟರ್ನೆಟ್ನಷ್ಟೇ ಮಹತ್ವಪೂರ್ಣ. ಇದು ಮನುಷ್ಯನಿಗೆ ಸಮೃದ್ಧಿ, ಭಾವನಾತ್ಮಕ ಸಹಯೋಗ ನೀಡುತ್ತದೆ. ಅದೇ ವೇಳೆ ಅವಲಂಬನೆ ಮತ್ತು ಅಸ್ತಿತ್ವದ ಗೊಂದಲವನ್ನೂ ಹುಟ್ಟುಹಾಕುತ್ತದೆ. ಜೊತೆಗೆ ಈ ವಿದ್ಯಮಾನ ಮನುಷ್ಯನನ್ನು ಕವಲುದಾರಿಯಲ್ಲಿ ನಿಲ್ಲಿಸುತ್ತದೆ. ಒಂದು ದಾರಿ ಮಾನವ-ರೋಬೋಟ್ ಸಾಮರಸ್ಯದ ಸಮಾಜಕ್ಕೆ ಕರೆದೊಯ್ಯಬಹುದು. ಅಲ್ಲಿ ಯಂತ್ರಗಳು ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ, ಪುನರಾವರ್ತಿತ ಕೆಲಸಗಳಿಂದ ಮುಕ್ತಿ ಸಿಗುತ್ತದೆ, ಹೊಸ ಸಾಮಾಜಿಕ ವಿನ್ಯಾಸ ರೂಪು ಪಡೆಯುತ್ತದೆ, ಇದು ಬದುಕಿನ ಅನುಭವವನ್ನು ವಿಸ್ತರಿಸುತ್ತದೆ. ಇನ್ನೊಂದು ದಾರಿ ನಮ್ಮ ಸ್ವಾಯತ್ತತೆ, ಗುರುತು ಮತ್ತು ನೈಜತೆಯನ್ನೇ ಕಳೆದುಕೊಳ್ಳುವ ಅಪಾಯದೆಡೆಗೆ ಕೊಂಡೊಯುತ್ತದೆ. ಯಾವ ದಾರಿ ಆಯ್ದುಕೊಳ್ಳಬೇಕು ಎಂಬ ಬಗ್ಗೆ ವಿಜ್ಞಾನಿಗಳಿಗೂ ಸ್ಪಷ್ಟತೆ ಇಲ್ಲ. ಒಟ್ಟಿನಲ್ಲಿ ಬುದ್ಧಿಶಕ್ತಿ ಇನ್ನು ಮುಂದೆ ಕೇವಲ ಮನುಷ್ಯನ ಸಂಪತ್ತಂತೂ ಅಲ್ಲ ಎನ್ನುವುದು ಖಾತ್ರಿಯಾಗಿದೆ. ಆದರೆ, ಅತಿ ಬುದ್ಧಿವಂತ ಸಮಾಜದಲ್ಲಿ ನಾವು ಮಾನವೀಯತೆಯನ್ನು ಉಳಿಸಿಕೊಳ್ಳುತ್ತೇವೆಯೇ ಎನ್ನುವುದು ನಮ್ಮೆದುರಿರುವ ಪ್ರಶ್ನೆ. ಒಂದು ಮಹಾಪಲ್ಲಟಕ್ಕೆ ಸಾಕ್ಷಿಯಾಗಲಿರುವ ನಾವು, ನಾವೇ ಸೃಷ್ಟಿಸಿದ ‘ಕೃತಕ ಜೀವಿ’ಗಳೊಂದಿಗೆ ನಮ್ಮ ಜಗತ್ತನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆಯೇ?




