ಕನ್ನಡದಲ್ಲೂ ಬರುತ್ತೆ ಮಲ್ಟಿಮೋಡಲ್ ಭಾರತ್ಜೆನ್
AI ಅನಂತ ಅವತಾರ – ಭಾಗ 9
ಡಾ.ರಮೇಶ್ ನಿಂಬೆಮರದಳ್ಳಿ
ಎಐ ಅಭಿವೃದ್ಧಿಯಲ್ಲಿ ಯಾವ ದೇಶ ಯಾವ ಹಂತದಲ್ಲಿದೆ, ಅಮೆರಿಕ-ಚೀನಾ ನಡುವಿನ ಪೈಪೋಟಿ ಹೇಗಿದೆ ಎನ್ನುವುದನ್ನು ವಿವರಿಸುತ್ತಾ ಒಟ್ಟಾರೆಯಾಗಿ ಜಾಗತಿಕವಾಗಿ ನಡೆಯುತ್ತಿರುವ ತಂತ್ರ-ಪ್ರತಿತಂತ್ರ-ಕಾರ್ಯತಂತ್ರಗಳನ್ನು ಹಿಂದಿನ ಲೇಖನದಲ್ಲಿ ವಿವರಿಸಲಾಗಿತ್ತು. ಈ ನಿಟ್ಟಿನಲ್ಲಿ, ಭಾರತ ಯಾವ ಹಂತದಲ್ಲಿದೆ. ಎಐ ಬೆಳೆಸಲು ಸರಕಾರದ ಯೋಜನೆ, ಯೋಚನೆಗಳೇನು ಎಂಬುದನ್ನು ಈ ಭಾಗದಲ್ಲಿ ವಿವರಿಸಲಾಗಿದೆ. ಭಾರತ ತನ್ನದೇ ಆದ ‘ಭಾರತ್ಜೆನ್‘ ಎಂಬ ಎಐ ಮಲ್ಟಿಮೋಡಲ್ ಲಾರ್ಜ್ ಲಾಂಗ್ವೇಜ್ ಮಾಡೆಲ್ ರೂಪಿಸುತ್ತಿದ್ದು (MLLM), ಮುಂದಿನ 8-10 ತಿಂಗಳಲ್ಲಿ ಬಳಕೆಗೆ ಲಭ್ಯವಾಗುವ ಅಂದಾಜಿದೆ. ದೇಶದ ಹಲವು ಭಾಷೆಗಳಲ್ಲಿಈ ಮಾಡೆಲ್ ಅಭಿವೃದ್ಧಿಯಾಗುತ್ತಿದ್ದು, ಜನಸಾಮಾನ್ಯರೂ ಕೂಡ ಅವರದೇ ಭಾಷೆಯಲ್ಲಿ ಮಾತಿನ ಮೂಲಕವೇ ಇದರ ಸೇವೆ ಪಡೆಯಬಹುದಾಗಿದೆ.
ಅಮೆರಿಕ ಆರಂಭಿಸಿದ ಸುಂಕ ಸಮರದ ಬಳಿಕ ಜಗತ್ತು ಸ್ವಾವಲಂನೆಯ ಮಂತ್ರ ಜಪಿಸುತ್ತಿದೆ. ಮಿಲಿಟರಿ, ತಂತ್ರಜ್ಞಾನ, ಉತ್ಪಾದನೆ ಕ್ಷೇತ್ರಗಳಲ್ಲಿ ಸ್ವಾವಲಂಬನೆಗೆ ಮುಂದಾಗಿರುವಂತೆಯೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೆಳವಣಿಗೆಯಲ್ಲೂ ಸ್ವಾವಲಂಬನೆ ಸಾಧಿಸಲು ಹಲವು ದೇಶಗಳು ಯತ್ನಿಸುತ್ತಿವೆ. ಇದೇ ನಿಟ್ಟಿನಲ್ಲಿ ಭಾರತ ಕೂಡ ಆತ್ಮನಿರ್ಭರತೆಯ ಹಾದಿ ತುಳಿದಿದೆ. ವಿಶ್ವದ ಪ್ರಬಲ ಆರ್ಥಿಕತೆಯಾಗಲು ಸ್ಪಷ್ಟ ಯೋಜನೆಗಳನ್ನು ಹಾಕಿಕೊಂಡಿದೆ. ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಹೆಚ್ಚಿಸಲು ದೇಶದಾದ್ಯಂತ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಿದೆ. ಜನರಲ್ಲಿ ಕೌಶಲ್ಯ ಹೆಚ್ಚಿಸಿ ಉದ್ಯೋಗಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಹೊಸ ಲಾಜಿಸ್ಟಿಕ್ ನೀತಿಯ ಮೂಲಕ ಸರಕು ಸಾಗಣೆಯನ್ನು ಸುಗಮಗೊಳಿಸಲಾಗುತ್ತಿದೆ. ಮತ್ತೊಂದೆಡೆ, ಭಾರತಕ್ಕೆ ಅದರದೇ ಆದ ಸಾರ್ವಭೌವ ಎಐ ರೂಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇದೆಲ್ಲದರ ಪರಿಣಾಮ ಭಾರತ ಶೀಘ್ರದಲ್ಲೇ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಸಿದ್ದಾರೆ.
ಆರ್ಥಿಕ ಸ್ವಾಲವಂಬನೆ ಯಾವುದೇ ಪ್ರಗತಿಶೀಲ ದೇಶದ ಪ್ರಮುಖ ಲಕ್ಷಣ. ವಿಕಸಿತ ದೇಶ ನಿರ್ಮಾಣಕ್ಕೆ ಆರ್ಥಿಕತೆಯ ಬೆಳವಣಿಗೆಯೇ ಮೂಲ. ಹೀಗಾಗಿ ಆತ್ಮನಿರ್ಭರತೆಯ ಅಡಿಪಾಯದ ಮೇಲೆ ವಿಕಸಿತ ಭಾರತ ನಿರ್ಮಿಸಲು ಕೇಂದ್ರ ಸರಕಾರ ಸೂಕ್ತ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಎಐ ಅಭಿವೃದ್ಧಿಗೂ ಕಟ್ಟಿಬದ್ಧವಾಗಿದೆ. ಅಮೆರಿಕದ ಅಲಂಬನೆಯಿಂದ ಹೊರಬಂದು ಸ್ವತಂತ್ರ, ಸ್ವಾವಲಂಬಿ ದೇಶ ಕಟ್ಟಲು ಯತ್ನಿಸುತ್ತಿದೆ. ಇದನ್ನು ಸಾಧಿಸಲು ಉತ್ಪಾದನೆಯೇ ಮೂಲಮಂತ್ರ ಎಂಬುದನ್ನು ಅರಿತು ಕೈಗಾರಿಕೆ ಮತ್ತು ಸೇವಾವಲಯದ ಅಭಿವೃದ್ದಿಯಲ್ಲಿ ತೊಡಗಿದೆ. ಕೈಗಾರಿಕಾ ಉತ್ಪಾದನೆಗೆ ಬಲ ತುಂಬುವಂತೆ, ಸೇವಾ ವಲಯಕ್ಕೆ ಮೌಲ್ಯ ತುಂಬುವ ಹಾಗೆ ತನ್ನದೇ ಸಾರ್ವಭೌಮ ಭಾರತ್ ಎಐ ಮಾಡೆಲ್ ರೂಪಿಸುವಲ್ಲಿ ನಿರತವಾಗಿದೆ.
‘ಭಾರತ್ಜೆನ್’ ಎಂಬ ಉಪಕ್ರಮವನ್ನು ಆರಂಭಿಸಿರುವ ಕೇಂದ್ರ ಸರಕಾರ, ಬಹು ಮಾದರಿ (ಮಲ್ಟಿಮೋಡಲ್) ಹಾಗೂ ಬಹುಭಾಷೀಯ ಜನರೇಟಿವ್ ಎಐ ಸೃಷ್ಟಿಸಲು ಮಾಸ್ಟರ್ ಪ್ಲಾನ್ ಮಾಡಿದೆ. ಇದು ಸರಕಾರದ ಅನುದಾನದಲ್ಲಿ ನಡೆಯುತ್ತಿರುವ ವಿಶ್ವದ ಮೊದಲ ಎಲ್ಎಲ್ಎಮ್ ಯೋಜನೆಯಾಗಿದೆ. ನಮ್ಮ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿಕೊಂಡು ಭಾರತ-ಕೇಂದ್ರಿತ ಫೌಂಡೇಷನಲ್ ಮಾಡೆಲ್ ಅಭಿವೃದ್ಧಿಪಡಿಸುವ ಗುರಿ ಈ ಯೋಜನೆಯದ್ದು. ಜನರಿಗೆ ಅವರದೇ ಭಾಷೆಯಲ್ಲಿ ಅವರು ಇಚ್ಛಿಸುವ ಮಾರ್ಗದಲ್ಲಿ ಅಂದರೆ, ಪಠ್ಯ, ಚಿತ್ರ, ವೀಡಿಯೋ ಇಲ್ಲವೇ ಧ್ವನಿಯ ಮೂಲಕ ಸೇವೆ ಒದಗಿಸುವಂತೆ ಭಾರತ್ಜೆನ್ ರೂಪಿಸಲಾಗುತ್ತಿದೆ. ಈ ಎಲ್ಎಲ್ಎಮ್ ಮಾಡೆಲ್ ಅನ್ನು ಅಭವೃದ್ಧಿಪಡಿಸಲು ಭಾರಿ ಪ್ರಮಾಣದ ಡೇಟಾದ ಅಗತ್ಯವಿದ್ದು, ಅದಕ್ಕಾಗಿ ‘ಭಾರತ್ ಡೇಟಾ ಸಾಗರ್’ ಎಂಬ ಮತ್ತೊಂದು ಉಪಕ್ರಮ ಆರಂಭಿಸಲಾಗಿದೆ. ಈ ಯೋಜನೆಯ ಭಾಗವಾಗಿ ಭಾರತದ ಎಲ್ಲಾ ಭಾಷೆಗಳ ಎಲ್ಲಾ ಕ್ಷೇತ್ರಗಳ ಡೇಟಾ ಸಂಗ್ರಹಿಸಿ ಅದನ್ನು ಆಧರಿಸಿ ಎಐ ಮಾಡೆಲ್ಗೆ ತರಬೇತಿ ನೀಡಲಾಗುತ್ತದೆ.
ದೇಶದಲ್ಲಿ ಒಟ್ಟಾರೆ ಎಐ ಅಭಿವೃದ್ಧಿಗೆ ಅನುಕೂಲವಾಗುವಂತೆ ‘ಇಂಡಿಯಾ ಎಐ ಮಿಷನ್’ ಎಂಬ ವ್ಯಾಪಕ ವಿಸ್ತೃತ ಯೋಜನೆ ರೂಪಿಸಲಾಗಿದೆ. ಇದರ ಅಡಿಯಲ್ಲಿ ಭಾರತದ್ದೇ ಆದ ಫೌಂಡೇಷನಲ್ ಎಐ ಮಾಡೆಲ್ ಅನ್ನು ಮುಂದಿನ 8-10 ತಿಂಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದ್ದಾರೆ. ಒಂದು ಫೌಂಡೇಷನಲ್ ಎಐ ಅಭಿವೃದ್ಧಿಪಡಿಸಿ ಆ ಬಳಿಕ ಅದರ ಅಡಿಪಾಯದ ಮೇಲೆ ವಿವಿಧ ಕ್ಷೇತ್ರಗಳನ್ನು ಗಮನದಲ್ಲಿರಿಸಿಕೊಂಡು ಚಿಕ್ಕ ಎಐ ಮಾಡೆಲ್ಗಳನ್ನು (ಎಸ್ಎಲ್ಎಮ್-ಸ್ಮಾಲ್ ಲ್ಯಾಂಗ್ವೇಜ್ ಮಾಡೆಲ್) ರೂಪಿಸಲು ಪ್ಲಾನ್ ಮಾಡಲಾಗಿದೆ. ಇದರಿಂದ ಒಂದೊಂದು ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ಅದೇ ಕ್ಷೇತ್ರದ ಪ್ರಾವೀಣ್ಯತೆ ಪಡೆದ ಎಐ ಮಾಡೆಲ್ ಸೂಕ್ತ ಸೇವೆ ಒದಗಿಸಲಿದೆ.
ಎಲ್ಲರಿಗೂ ಎಟಕುವ ಸಾಮಾನ್ಯ ಗಣಕ ಸೌಲಭ್ಯ
2047 ರ ವೇಳೆಗೆ ಭಾರತವನ್ನು ಜಾಗತಿಕ AI ಶಕ್ತಿಯನ್ನಾಗಿ ಮಾಡುವ ಗುರಿಯೊಂದಿಗೆ ಕೇಂದ್ರ ಸರಕಾರ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ನಿರತವಾಗಿದೆ. ವಿದ್ಯಾರ್ಥಿಗಳು, ಸ್ಟಾರ್ಟ್ಅಪ್ಗಳು ಮತ್ತು ಸಂಶೋಧಕರಿಗೆ ಕಂಪ್ಯೂಟಿಂಗ್ ಪವರ್, GPU ಗಳು ಮತ್ತು ಸಂಶೋಧನಾ ಅವಕಾಶಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು AI ಇಕೋಸಿಸ್ಟಮ್ ರೂಪಿಸುತ್ತಿದೆ. ಈ ನಿಟ್ಟಿನಲ್ಲಿ ಎಐ ಮೂಲಸೌಕರ್ಯ ಅಭಿವೃದ್ಧಿಗೂ ಹೂಡಿಕೆ ಮಾಡಲಾಗುತ್ತಿದ್ದು, ₹10,300 ಕೋಟಿ ರೂಗಳ ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಎಐ ತರಬೇತಿಗೆ ಭಾರಿ ಸಾಮರ್ಥ್ಯದ ಜಿಪಿಯುಗಳ ಅಗತ್ಯವಿದೆ. ಇದಕ್ಕೆ ಭಾರಿ ಹೂಡಿಕೆಯ ಅಗತ್ಯವಿದ್ದು, ಸ್ಟಾರ್ಟ್ಅಪ್ಗಳು, ಶಿಕ್ಷಣ ಸಂಸ್ಥೆಗಳು, ಸಣ್ಣ ಪುಟ್ಟ ಕಂಪನಿಗಳಿಗೆ ಇದು ಸಾಧ್ಯವಿಲ್ಲ. ಈ ಕೊರತೆ ನೀಗಿಸಲು 18,693 GPU ಗಳನ್ನು ಹೊಂದಿರುವ ಉನ್ನತ-ಮಟ್ಟದ ‘ಸಾಮಾನ್ಯ ಗಣಕ ಸೌಲಭ್ಯ’ವನ್ನು ಸ್ಥಾಪಿಸಿ ಕ್ಲೌಡ್ ಮೂಲಕ ಎಲ್ಲರಿಗೂ ಕಡಿಮೆ ದರದಲ್ಲಿ ಕಂಪ್ಯೂಟಿಂಗ್ ಅವಕಾಶ ಒದಗಿಸುವ ಯೋಜನೆ ಸರಕಾರದ್ದಾಗಿದೆ. ಇದು ಇಡೀ ವಿಶ್ವದಲ್ಲೇ ಅತಿದೊಡ್ಡ ಎಐ ಮೂಲಸೌಕರ್ಯಗಳಲ್ಲಿ ಒಂದಾಗಿದೆ.
ಭಾರತದ ಎಐ ಮಾಡೆಲ್ಗಳು
ಭಾರತ ತನ್ನದೇ ಸಾರ್ವಭೌವ ಎಐ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿರುವಂತೆಯೇ ಈಗಾಗಲೇ ಕೆಲವು ಎಐ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇಂಗ್ಲಿಷ್ನಿಂದ ಭಾರತೀಯ ಭಾಷೆಗಳಿಗೆ ಹಾಗೂ ಭಾರತೀಯ ಭಾಷೆಗಳ ನಡುವೆ ಅನುವಾದವನ್ನು ಸುಗಮಗೊಳಿಸಲು ‘ಭಾಷಿಣಿ’ ಎಂಬ ಆ್ಯಪ್ ಬಳಕೆಗೆ ಲಭ್ಯವಿದ್ದು, ಆ್ಯಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಆ್ಯಪ್ ಉಚಿತವಾಗಿ ಲಭ್ಯವಿದೆ. ಇದರ ಜೊತೆಗೆ ನಮ್ಮದೇ ಮಲ್ಟಿಮೋಡಲ್ LLM ‘ಭಾರತಜೆನ್’, ಹತ್ತು ಪ್ರಮುಖ ಭಾರತೀಯ ಭಾಷೆಗಳನ್ನು ಬೆಂಬಲಿಸುವ ‘ಸರ್ವಂ-1’, ಚಾಟ್ಜಿಪಿಟಿಗೆ ಪರ್ಯಾಯವೆಂಬಂತೆ ಹುಟ್ಟಿದ ‘ಭಾರತ್ಜಿಪಿಟಿ’, ಭಾರತೀಯ ಭಾಷೆಗಳಲ್ಲಿ ವೀಡಿಯೊ ಟ್ರಾನ್ಸ್ಕ್ರಿಯೇಷನ್, ಸಬ್ಟೈಟಲ್ ಮಾಡಲು ‘ಚಿತ್ರಲೇಖ’, ಮತ್ತು 35 ಭಾರತೀಯ ಭಾಷೆಗಳನ್ನು ಬೆಂಬಲಿಸುವ ‘ಹನುಮಾನ್ ಎಐ’ ನ ‘Everest 1.0 Mega’ ಮತ್ತು ‘Everest 1.0 Flash’ ಎಂಬ ಎಲ್ಎಲ್ಎಂಗಳು ಈಗಾಗಲೇ ಬಳಕೆಯಲ್ಲಿವೆ.
ಎಐ ಅಭಿವೃದ್ಧಿ ಮತ್ತು ಬಳಕೆಗೆ ಅತ್ಯಗತ್ಯವಾಗಿರುವ ಡೇಟಾ ಸೆಂಟರ್ಗಳ ಅಭಿವೃದ್ಧಿಯಲ್ಲೂ ಭಾರತ ಮುಂದಿದೆ. ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಡೇಟಾ ಸೆಂಟರ್ಗಳು ರೂಪುಗೊಳ್ಳುತ್ತಿವೆ. 2024ರಲ್ಲಿ 1255 MV ಇರುವ ಭಾರತದ ಡೇಟಾ ಸೆಂಟರ್ ಸಾಮರ್ಥ್ಯ ಈ ವರ್ಷಾಂತ್ಯದ ವೇಳೆಗೆ 1600 MV ಗೆ ತಲುಪುವ ಅಂದಾಜಿದೆ. ಈ ನಿಟ್ಟಿನಲ್ಲಿ ಹೂಡಿಕೆಯೂ ಹರಿದುಬರುತ್ತಿದೆ. ಬಕಾಸುರನಂತೆ ವಿದ್ಯುತ್ ಬಳಸುವ ಈ ಡೇಟಾ ಸೆಂಟರ್ಗಳಿಗಾಗಿ ‘ಸ್ಮಾಲ್ ಮಾಡ್ಯೂಲರ್ ರಿಯಾಕ್ಟರ್’ (SMR) ಎಂಬ ಸಣ್ಣ ನ್ಯೂಕ್ಲಿಯರ್ ಪ್ಲಾಂಟ್ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 2033 ರ ವೇಳಗೆ 100 GW ಪರಮಾಣು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಸುಮಾರು 20,000 ಕೋಟಿ ರೂ ಹೂಡಿಕೆ ಮಾಡಲಾಗುತ್ತಿದೆ.
ಇನ್ನು, ಎಐ ಅಭಿವೃದ್ಧಿ ಮತ್ತು ಅದರ ಬಳಕೆ ಅಗತ್ಯವಿರುವ ಕುಶಲಿಗಳನ್ನು ರೂಪಿಸಲೂ ಯೋಜನೆ ರೂಪಿಸಲಾಗಿದೆ. ಡಿಜಿಟಲ್ ಸಾಕ್ಷರತೆ, ಕೋಡಿಂಗ್, ಕಂಪ್ಯುಟೇಷನಲ್ ಥಿಂಕಿಂಗ್ ಸೇರಿದಂತೆ ಎಐ ಕುರಿತ ಶಿಕ್ಷಣವನ್ನು 6ನೇ ತರಗತಿಯಿಂದಲೇ ಕಲಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಲಾಗಿದೆ. ಕಾಲೇಜು ಹಂತದಲ್ಲಿ ಇದರ ಕುರಿತು ಕಲಿಸಲು ‘ಎಐ-ಕೌಶಲ್ಯದ ರಾಷ್ಟ್ರೀಯ ಕಾರ್ಯಕ್ರಮ’ ರೂಪಿಸಲಾಗಿದೆ. ಜೊತೆಗೆ, 2 ಮತ್ತು 3 ನೇ ಹಂತದ ನಗರಗಳಲ್ಲೂ ಫೆಲೋಶಿಪ್ಗಳನ್ನು ನೀಡಲಾಗುತ್ತಿದೆ. ಅಲ್ಲದೆ ಡೇಟಾ ಮತ್ತು AI ಲ್ಯಾಬ್ಗಳನ್ನು ಸ್ಥಾಪಿಸಲಾಗುತ್ತಿದೆ. ಜಾಗತಿಕವಾಗಿ AI ಕೌಶಲ್ಯಗಳನ್ನು ಬಳಸಿಕೊಳ್ಳುವಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಹೀಗೆ ಹಲವು ಉಪ್ರಕಮಗಳ ಮೂಲಕ ಭಾರತ ತನ್ನ ದೇಶವನ್ನು ಸೂಕ್ತ ರೀತಿಯಲ್ಲಿ ಪ್ರತಿನಿಧಿಸುವ, ತನ್ನ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪವರ್ಫುಲ್ ಫೌಂಡೇಶನಲ್ ಎಐ ಮಾಡೆಲ್ ಅಭಿವೃದ್ಧಿಯಲ್ಲಿ ನಿರತವಾಗಿದೆ. ಇದು ಪರಾವಲಂಬನೆಯನ್ನು ತಪ್ಪಿಸುವುದು ಮಾತ್ರವಲ್ಲದೆ, ದೇಶದಲ್ಲಿ ಉಳಿದೆಲ್ಲ ಸಂಶೋಧನೆಗಳಿಗೂ ವೇಗವರ್ಧಕವಾಗಲಿದೆ. ಈ ಮೂಲಕ ವಿಕಸಿತ ಭಾರತದ ಕನಸು ನನಸಾಗುವುದೆಂದು ಆಶಿಸಲಾಗಿದೆ.
ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಘಟಕ
ಕೃತಕ ಬೃದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಜಿಪಿಯು ಅಥವಾ ಚಿಪ್ಗಳೇ ನಿರ್ಣಾಯಕವಾಗಿದ್ದು, ಈ ಚಿಪ್ಗಳ ತಯಾರಿಕೆಗೆ ಬೇಕಾದ ಮೂಲದ್ರವ್ಯವೇ ಸೆಮಿಕಂಡಕ್ಟರ್. ಇದರ ಮೇಲೆ ಚೀನಾ ಮತ್ತು ತೈವಾನ್ಗಳು ಹೆಚ್ಚಿನ ನಿಯಂತ್ರಣ ಹೊಂದಿವೆ. ಹೀಗಾಗಿ ಇದೂ ಕೂಡ ಭಾರತದ ಸಾರ್ವಭೌಮ ಎಐ ಅಭವೃದ್ಧಿಗೆ ಅಡ್ಡಿಯಾಗುವ ಎಲ್ಲಾ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಕೇಂದ್ರ ಸರಕಾರ ಸೆಮಿಕಂಡಕ್ಟರ್ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸಲು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಆರಂಭಿಸಿದೆ. ಈ ಯೋಜನೆಯಡಿ ಗುಜರಾತ್ನ ಧೋಲೆರಾದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಮತ್ತು ಸಾನಂದ್ನಲ್ಲಿ ಅಸೆಂಬ್ಲಿ, ಟೆಸ್ಟಿಂಗ್ ಘಟಕ ಸ್ಥಾಪಿಸಲಾಗುತ್ತಿದೆ. ಅಲ್ಲದೆ, ಅಸ್ಸಾಂನ ಮೋರಿಗಾವ್ ಮತ್ತು ಛತ್ತೀಸ್ಘಡದ ನವ ರಾಯಪುರದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಕರ್ನಾಟಕದಲ್ಲೂ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಅಸೆಂಬ್ಲಿ ಘಟಕಗಳನ್ನು ಶುರುಮಾಡಲು ಯೋಜನೆ ರೂಪಿಸಲಾಗಿದೆ. ಮೈಸೂರಿನಲ್ಲಿ ತಯಾರಿಕಾ ಘಟಕ ಮತ್ತು ಕೋಲಾರದಲ್ಲಿ ಅಸೆಂಬ್ಲಿ ಮತ್ತು ಪರೀಕ್ಷಾ ಘಟಕಗಳು ತಲೆ ಎತ್ತಲಿವೆ. ಮೂರರಿಂದ ಐದು ವರ್ಷಗಳಲ್ಲಿ ಭಾರತ ತನ್ನದೇ ಆದ ಸ್ವದೇಶಿ GPU ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದರೊಂದಿಗೆ ಜಿಪಿಯುಗಳಿಗಾಗಿ ಅಮೆರಿಕದ ಕಡೆ ನೋಡುವುದು ತಪ್ಪುತ್ತದೆ.
ಸ್ಟಾರ್ಟಪ್ ಹಬ್ ಕರ್ನಾಟಕವೀಗ ಎಐ ಹಬ್
ಭಾರತದ ಎಐ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಭಾರತದ ಸ್ಟಾರ್ಟಪ್ ಹಬ್ ಎಂದೇ ಖ್ಯಾತಿ ಪಡೆದ ಬೆಂಗಳೂರು ಅತಿ ಹೆಚ್ಚು ಎಐ ಪ್ರತಿಭೆಗಳನ್ನು ಹೊಂದಿದೆ. 12,850ಕ್ಕೂ ಹೆಚ್ಚು ಸ್ಟಾರ್ಟಪ್ಗಳನ್ನು ಹೊಂದಿರುವ ಕರ್ನಾಟಕದಲ್ಲಿ 49 ಯೂನಿಕಾರ್ನ್ಗಳು, 400ಕ್ಕೂ ಹೆಚ್ಚು ಗ್ಲೋಬಲ್ ಕ್ಯಾಪೇಬಿಲಿಟಿ ಸೆಂಟರ್ಗಳಿವೆ. ರಾಜ್ಯ ಈಗ ಎಐ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ. ಭಾರತದ ಮೊದಲ ****ಎಲ್ಎಲ್ಎಮ್ ಎನ್ನಲಾದ Sarvam AI ಬೆಂಗಳೂರಿನಲ್ಲೇ ಜನ್ಮತಾಳಿದೆ. ಓಲಾ ಕಂಪನಿಯ ‘ಕೃತ್ರಿಮ್ ಎಐ’, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಾಕಷ್ಟು ಮುಂದಿದೆ. ಇದು ಭಾರತದ ಮೊದಲ ‘ಎಐ ಯೂನಿಕಾರ್ನ್’ ಕಂಪನಿಯಾಗಿದೆ. ಇದಲ್ಲದೆ ಅಸಂಖ್ಯಾತ ಕಂಪನಿಗಳು ವಿವಿಧ ಉದ್ಯಮಕ್ಕೆ ನೆರವಾಗುವಂತೆ ಚಾಟ್ಬಾಟ್ಗಳ ಅಭಿವೃದ್ಧಿಯಲ್ಲಿ ತೊಡಗಿವೆ.
15 ಲಕ್ಷ ಐಟಿ ಉದ್ಯೋಗಿಗಳು ಕರ್ನಾಟಕದಲ್ಲಿದ್ದು, ಅದರಲ್ಲಿ ಬಹುತೇಕ ಎಐ ಕೌಶಲ್ಯ ಪಡೆದವರಾಗಿದ್ದಾರೆ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರವು 500 ಕ್ಕೂ ಹೆಚ್ಚು ಎಐ ಪೇಟೆಂಟ್ಗಳನ್ನು ಪಡೆದಿದೆ. ದೇಶದಲ್ಲಿ ಭಾರತೀಯ ಭಾಷೆಗಳಲ್ಲಿ ಎಐ ಅಭಿವೃದ್ಧಿಯಲ್ಲಿ ‘AI4Bharat’ ಮುಂಚೂಣಿಯಲ್ಲಿದೆ. ಕೇಂದ್ರ ಸರಕಾರ, ಮೈಕ್ರೋಸಾಫ್ಟ್, ಗೂಗಲ್ ಮತ್ತಿತರ ಸಂಸ್ಥೆಗಳ ನೆರವಿನಿಂದ ನಡೆಯುತ್ತಿರುವ ಈ ಸಂಶೋಧನೆಗೆ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರೂ ಕೈ ಜೋಡಿಸಿದ್ದಾರೆ.
ಕರ್ನಾಟಕ ಸರಕಾರ ಕೂಡ ಎಐ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸುತ್ತಿದೆ. ನಾಸ್ಕಾಮ್ ಜೊತೆಗೂಡಿ ‘ಡೇಟಾ ಸೈನ್ಸ್ ಮತ್ತು AI ನ ಶ್ರೇಷ್ಠತೆಯ ಕೇಂದ್ರ’ ಸ್ಥಾಪಿಸಿದೆ. ರೋಬಾಟಿಕ್ಸ್ ಸ್ಟಾರ್ಟಪ್ಗಳ ಪೋಷಣೆಗೆ ಸರಕಾರ ಬೆಂಗಳೂರಿನ ಐಐಎಸ್ಸಿ ಜೊತೆ ಸೇರಿ 100 ಮಿಲಿಯನ್ ಡಾಲರ್ ಮೊತ್ತದಲ್ಲಿ ARTPARK (ಎಐ ಮತ್ತು ರೋಬಾಟಿಕ್ಸ್ ಪಾರ್ಕ್) ಸ್ಥಾಪಿಸಿದೆ. ಭಾರತದ ಐಟಿ ಹಬ್ ಜೊತೆಗೆ ಸ್ಟಾರ್ಟಪ್ ಹಬ್ ಕೂಡ ಆಗಿರುವ ಬೆಂಗಳೂರು ಈಗ ಐಎ ಹಬ್ ಆಗುವತ್ತ ಹೆಜ್ಜೆ ಹಾಕುತ್ತಿದೆ. ಹೀಗಾಗಿ ಭಾರತದ ಎಐ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ.



