ಮಳೆ ಮುನ್ಸೂಚನೆಗೆ ಅರ್ಕ ಶಕ್ತಿ, ಎಐ ಮೆದುಳು
AI ಅನಂತ ಅವತಾರ – ಭಾಗ 12
ಡಾ.ರಮೇಶ್ ನಿಂಬೆಮರದಳ್ಳಿ
ಆಗಸದಲ್ಲೂ ಆತ್ಮನಿರ್ಭರತೆ
ಹವಾಮಾನ ಮುನ್ಸೂಚನೆಗೆ ದೇಸೀ ವ್ಯವಸ್ಥೆ
ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ ದೇಶಾರ್ಪಣೆ
ಬಿಎಫ್ಎಸ್ಗೆ ಎಐ ಮೆದುಳು, ಸೂಪರ್ ಕಂಪ್ಯೂಟರ್ ವೇಗ
ಪ್ರತಿ ಹಳ್ಳಿಗೂ ಪ್ರತ್ಯೇಕ ಪ್ರಿಡಿಕ್ಷನ್ ಸಾಧ್ಯ
ಇಡೀ ವಿಶ್ವದಲ್ಲೇ ಹೆಚ್ಚು ನಿಖರವಾದ ಮುನ್ಸೂಚನಾ ವ್ಯವಸ್ಥೆ
ಮಾನ್ಸೂನ್ ಮಾರುತಗಳು ಭಾರತದಲ್ಲಿ ಕೇವಲ ಬೆಳೆಗಳಿಗೆ ನೀರುಣಿಸುವುದಿಲ್ಲ. ಇಲ್ಲಿನ ಅರ್ಧಕ್ಕೂ ಹೆಚ್ಚು ದೇಶವಾಸಿಗಳ ಕನಸಿಗೂ ನೀರುಣಿಸುತ್ತವೆ. ಮಂಜು ಕವಿದ ಬೆಳಗು ರೈಲುಗಳನ್ನು ತಡ ಮಾಡುವಂತೆ ಕೆಲವರ ಕನಸುಗಳನ್ನೂ ಮುಂದೂಡಬಹುದು. ವಿಮಾನ ಸಂಚಾರಕ್ಕೂ ಅಡಚಣೆ. ಚಂಡಮಾರುತವೊಂದು ನೀರಿಗಿಳಿಯಲು ಸಜ್ಜಾದ ಮೀನುಗಾರರ ಹೊಟ್ಟೆ ಮೇಲೆ ಹೊಡೆಯಬಹುದು. ಬಯಲು ನಂಬಿ ಬದುಕು ಸಾಗಿಸುವ ಎಷ್ಟೋ ವ್ಯಾಪಾರಿಗಳ ಅನ್ನಕ್ಕೂ ಕುತ್ತು ತರಬಹುದು. ಕೃಷಿ ಆಧಾರಿತ ಕೈಗಾರಿಕೆಗಳಿಗೆ ಕಚ್ಚಾ ವಸ್ತುವಿನ ಕೊರತೆ ಉಂಟು ಮಾಡಬಹುದು. ದಿಢೀರನೆ ಸುರಿಯುವ ಮಳೆ ನಗರ ಬದುಕನ್ನು ಅಯೋಮಯಗೊಳಿಸಬಹುದು. ಆದರೆ, ಇನ್ನು ಮುಂದೆ ಹಾಗಿಲ್ಲ. ಮಾರುತಗಳು ಗುಡುಗುವ ಮುನ್ನವೇ ಅವುಗಳ ಪಿಸುಮಾತು ನಮಗೆ ಕೇಳಿಸುತ್ತದೆ. ಚಂಡಮಾರುತವೊಂದು ಬೆಳೆದು ದೊಡ್ಡದಾಗುವ ಮೊದಲೇ ನಮಗೆ ತಿಳಿಯುತ್ತದೆ – ಇದೆಲ್ಲವನ್ನೂ ಸಾಧ್ಯವಾಗಿಸುವ ನಿರೀಕ್ಷೆ ಹುಟ್ಟಿಸಿರುವ ‘ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್’ (BFS) ದೇಶಾರ್ಪಣೆಯಾಗಿದೆ. ಇದು ಭಾರತದ ಮಳೆ, ಮಾರುತಗಳ ಮುನ್ಸೂಚನೆ ನೀಡುವ ವ್ಯವಸ್ಥೆ ಮಾತ್ರವಲ್ಲ, ಮಳೆಯಿಂದಾಗುವ ಹಾನಿ, ಅವಘಡಗಳನ್ನು ಮೊದಲೇ ಊಹಿಸುವ ದೇಸೀ ವ್ಯವಸ್ಥೆ. ದೇಶದ ಕೃಷಿ, ಕೈಗಾರಿಕೆ, ನಗರ ಯೋಜನೆ, ನೀತಿ ನಿರೂಪಣೆ ಹಾಗೂ ಮಿಲಿಟರಿ ಕಾರ್ಯಾಚರಣೆಗೆ ಶಕ್ತಿ ತುಂಬಬಲ್ಲ ಮೇಡ್ ಇನ್ ಇಂಡಿಯಾ ಉತ್ಪನ್ನ. ಎಐ ತಂತ್ರಜ್ಞಾನದಿಂದ ನಿರ್ದೇಶಿತವಾಗುವ, ಅರ್ಕ ಸೂಪರ್ ಕಂಪ್ಯೂಟರ್ನಿಂದ ನಿಯಂತ್ರಣಗೊಳ್ಳುವ ಸೂಪರ್ ಪವರ್ ಕ್ಲೈಮೇಟ್ ಮಾಡೆಲಿಂಗ್ ತಂತ್ರವಾಗಿದೆ.
ಗಂಟೆಗಳಿಂದ 10 ದಿನಗಳವರೆಗೆ ಹವಾಮಾನ ಮುನ್ಸೂಚನೆ
‘ಭಾರತ ಮುನ್ಸೂಚನಾ ವ್ಯವಸ್ಥೆ’ (ಬಿಎಫ್ಎಸ್) ಯನ್ನು 2025ರ ಮೇ 26ರಂದು ಸಚಿವ ಡಾ. ಜಿತೇಂದ್ರ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಇದು 6*6 ಕಿಲೋಮೀಟರ್ ಗ್ರಿಡ್ ವ್ಯಾಪ್ತಿಯಲ್ಲಿ ವಿಶ್ವದ ಅತ್ಯಂತ ಉನ್ನತ ರೆಸಲ್ಯೂಶನ್ನಲ್ಲಿ ಹವಾಮಾನ ಮುನ್ಸೂಚನೆ ನೀಡಬಲ್ಲ ಅತ್ಯಾಧುನಿಕ ಮಾದರಿಯಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟೀಯೋರಾಲಜಿ (IITM) ಸಂಸ್ಥೆ ಇದನ್ನು ಅಭಿವೃದ್ಧಿಪಡಿಸಿದೆ. ಸಂಶೋಧಕರಾದ ಪಾರ್ಥಸಾರಥಿ ಮುಖೋಪಾಧ್ಯಾಯ ಇದರಲ್ಲಿ ಪ್ರಮುಖರು.
ಬಿಎಫ್ಎಸ್, ವಾತಾವರಣವನ್ನು ಅತ್ಯಂತ ನಿಖರವಾಗಿ, ಹೈ ರೆಸೊಲ್ಯೂಷನ್ನಲ್ಲಿ ಪ್ರಿಡಿಕ್ಟ್ ಮಾಡಬಲ್ಲ ಇಡೀ ವಿಶ್ವದಲ್ಲೇ ಅತ್ಯಾಧುನಿಕ ಹವಾಮಾನ ಮುನ್ಸೂಚನಾ ವ್ಯವಸ್ಥೆ. ಇದೊಂದು ಅತ್ಯಾಧುನಿಕ ಕ್ಲೈಮೇಟ್ ಮಾಡೆಲಿಂಗ್ ತಂತ್ರವಾಗಿದ್ದು, ಇದು ವಾತಾವರಣವನ್ನು ಕಂಪ್ಯೂಟರ್ ಸಿಮ್ಯುಲೇಷನ್ನಲ್ಲಿ ವಿಶ್ಲೇಷಿಸಿ ಪ್ರಿಡಿಕ್ಷನ್ ಮಾಡುತ್ತದೆ. ಡಾಪ್ಲರ್ ರೇಡಾರ್, ಸ್ಯಾಟಲೈಟ್ ಮತ್ತಿತರ ಮಾರ್ಗಗಳಿಂದ ರಿಯಲ್ಟೈಮ್ನಲ್ಲಿ ಲಭ್ಯವಾಗುವ ಡೇಟಾ ಪಾಯಿಂಟ್ಗಳನ್ನು ಬಳಸಿ 6*6 ಕಿಲೋಮೀಟರ್ಗೆ ಒಂದು ಗ್ರಿಡ್ ರಚಿಸಿ ಅದರ ವಾತಾವರಣವನ್ನು ಕರಾರುವಕ್ಕಾಗಿ ಸಿಮ್ಯುಲೇಟ್ ಮಾಡುತ್ತದೆ. ಈ ಸಿಮ್ಯುಲೇಷನ್ ಅನ್ನು ವಿಶ್ಲೇಷಣೆ ನಡೆಸಿ ಅದರ ಫಲಿತದ ಆಧಾರದ ಮೇಲೆ ಕೆಲವು ಗಂಟೆಗಳಿಂದ ಮುಂದಿನ 10 ದಿನಗಳವರೆಗೆ ಹವಾಮಾನದಲ್ಲಿ ಯಾವ ರೀತಿಯ ಬದಲಾವಣೆಯಾಗಲಿದೆ ಎನ್ನುವುದನ್ನು ನಿಖರವಾಗಿ ಊಹಿಸುತ್ತದೆ. ಈ ಮೂಲಕ ಮಳೆ ಬೀಳುವ ಮುನ್ಸೂಚನೆ, ಪ್ರಮಾಣ, ಯಾವ ಪ್ರದೇಶದಲ್ಲಿ ಎಷ್ಟು ಮಳೆಯಾಗುತ್ತದೆ, ದಿನದ ಯಾವ ಸಮಯದಲ್ಲಿ ಮಳೆಯ ತೀವ್ರತೆ ಎಷ್ಟು, ಗಾಳಿಯ ವೇಗ ಮತ್ತು ದಿಕ್ಕು, ವಾತಾವರಣದ ಉಷ್ಣಾಂಶ, ತೇವಾಂಶ, ಗಾಳಿಯ ಒತ್ತಡ ಇತ್ಯಾದಿ ವಿವರಗಳನ್ನು ನೀಡುತ್ತದೆ. ಬೇಸಿಗೆಯಲ್ಲಿ ಉಷ್ಟಮಾರುತದ ದಿಕ್ಕು ಮತ್ತು ವೇಗವನ್ನೂ ಇದು ನೀಡುತ್ತದೆ. ಮುಂದಿನ ದಿನಗಳಲ್ಲಿ ಇದನ್ನು 1 ರಿಂದ 3 ತಿಂಗಳವರೆಗೆ ಹವಾಮಾನ ಊಹಿಸುವ ಎಂದರೆ ಒಂದಿಡೀ ಸೀಸನ್ ಅನ್ನು ಊಹಿಸುವ ವ್ಯವಸ್ಥೆಯಾಗಿ ಅಭಿವೃದ್ಧಿಪಡಿಸುವ ಯೋಚನೆಯಿದೆ.
ಡಾಪ್ಲರ್ ರೇಡಾರ್ಗಳೇ ಇಂಧನ, ಎಐ ಮೆದುಳು
‘ನ್ಯೂಮರಿಕಲ್ ವೆದರ್ ಪ್ರಿಡಿಕ್ಷನ್’ ಎಂದು ಕರೆಯಲಾಗುವ ಈ ಹವಾಮಾನ ಮುನ್ಸೂಚನೆ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯಾಗಿದೆ. ಉಪಗ್ರಹ, ಹವಾಮಾನ ಕೇಂದ್ರ, ಬಲೂನ್, ವಿಮಾನ ಹಾಗೂ ಡಾಪ್ಲರ್ ರೇಡಾರ್ ಸೇರಿದಂತೆ ವಿವಿಧ ಮೂಲಗಳಿಂದ ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಿ ಭೂಮಿಯ ವಾತಾವರಣದ ಸಿಮ್ಯುಲೇಷನ್ ಸೃಷ್ಟಿಸಿ ಮುಂದಿನ ಹವಾಮಾನ ಬದಲಾವಣೆಗಳನ್ನು ಆದಷ್ಟೂ ನಿಖರವಾಗಿ ಊಹಿಸುವ ವ್ಯವಸ್ಥೆಯಾಗಿದೆ.
ಭಾರತದ ಬಿಎಫ್ಎಸ್ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡುತ್ತದೆ ಆದರೆ ಇದರ ವಿಶ್ಲೇಷಣೆಯಲ್ಲಿ ಭಿನ್ನತೆಯಿದೆ. ಹಿಮಾಲಯದ ತುತ್ತ ತುದಿಯಿಂದ ಕರಾವಳಿಯ ಬಯಲು ಪ್ರದೇಶಗಳವರೆಗೆ ಭಾರತದ ವೈವಿಧ್ಯಮಯ ಭೂಪ್ರದೇಶದಲ್ಲಿ ಅಳವಡಿಸಿರುವ 40 ಡಾಪ್ಲರ್ ರೇಡಾರ್ಗಳಿಂದ (ಮಳೆ, ಗಾಳಿಯ ವೇಗ ಮತ್ತು ದಿಕ್ಕನ್ನು ಪತ್ತೆ ಮಾಡುವ ವಿಶೇಷ ರೇಡಾರ್ ವ್ಯವಸ್ಥೆಗಳು) ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಇದರ ಜೊತೆಗೆ, ದೇಶದಾದ್ಯಂತ ಇರುವ 6500 ಆಟೊಮೇಟೆಡ್ ವೆದರ್ ಸ್ಟೇಷನ್ಗಳು, 55 ಕೇಂದ್ರಗಳಿಂದ ಹಾರಿಬಿಡುವ ಹೀಲಿಯಂ ಬಲೂನ್ಗಳು, ಸ್ಯಾಟಲೈಟ್ಗಳು, ಅಂತಾರಾಷ್ಟ್ರೀಯ ಹವಾಮಾನ ಕೇಂದ್ರಗಳು ಹಾಗೂ ಮತ್ತಿತರ ಮೂಲಗಳಿಂದ ಡೇಟಾವನ್ನು ಸಂಗ್ರಹಿಸಿ ಅತ್ಯಾಧುನಿಕ ಅರ್ಕ ಸೂಪರ್ ಕಂಪ್ಯೂಟರ್ಗೆ ವರ್ಗಾಯಿಸಲಾಗುತ್ತದೆ. ಈ ಸೂಪರ್ ಕಂಪ್ಯೂಟರ್ ಡೇಟಾವನ್ನು ಸಂಕೀರ್ಣವಾದ ಗಣಿತೀಯ ಮಾದರಿಗಳ ಅನುಸಾರ ವಿಶ್ಲೇಷಿಸಿ ವಿವಿಧ ಪ್ರದೇಶದ ಹವಾಮಾನ ಮಾದರಿಗಳನ್ನು ಸಿಮ್ಯುಲೇಟ್ ಮಾಡುತ್ತದೆ. ಎಐನ ಮಶೀನ್ ಲರ್ನಿಂಗ್ ಆಲ್ಗಾರಿದಮ್ಗಳು ಈ ಡೇಟಾವನ್ನು ವಿಶ್ಲೇಷಿಸುತ್ತವೆ. ಬಳಿಕ ಇಡೀ ದೇಶವನ್ನು 6*6 ಗ್ರಿಡ್ಗಳಾಗಿ ವಿಭಜಿಸಿ ಪ್ರತೀ ವಿಭಾಗಕ್ಕೂ ಪ್ರತ್ಯೇಕವಾದ ಸಿಮ್ಯುಲೇಟ್ಗಳನ್ನು ರಿಚಿಸಿ ವಾತಾವರಣದ ಮುಂದಿನ ವರ್ತನೆಯನ್ನು ಊಹಿಸುತ್ತದೆ. ಈ ಹವಾಮಾನ ಮುನ್ಸೂಚನೆಯನ್ನು ಆಯಾ ರಾಜ್ಯ, ಪ್ರದೇಶ, ನಗರಗಳಿಗೆ ಪ್ರತ್ಯೆಕವಾಗಿ ಮ್ಯಾಪ್, ವೆಬ್ಸೈಟ್, ಆ್ಯಪ್, ಟಿವಿ, ರೇಡಿಯೋ ಹಾಗೂ ಮತ್ತಿತರ ಸರಕಾರಿ ವ್ಯವಸ್ಥೆಗಳ ಮೂಲಕ ದೇಶವ್ಯಾಪಿ ಬಿತ್ತರಿಸಲಾಗುತ್ತದೆ.
ಪ್ರತೀ ಹಳ್ಳಿಗೂ ಪ್ರತ್ಯೇಕ ಮುನ್ಸೂಚನೆ ಸಾಧ್ಯ
ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆನ್ನೆಲುಬಾಗಿದೆ. ಎಐನ ಭಾಗವಾಗಿರುವ ಮಶೀನ್ ಲರ್ನಿಂಗ್ ಆಲ್ಗಾರಿದಮ್ಗಳು ಡಾಪ್ಲರ್ ರೇಡಾರ್ಗಳಿಂದ ಬರುವ ಡೇಟಾ, ಉಪಗ್ರಹಗಳಿಂದ ಊಡಿಕೆಯಾಗುವ ಹೈ ರೆಸೊಲ್ಯೂಷನ್ ಚಿತ್ರಗಳು, ವೆದರ್ ಸ್ಟೇಷನ್ಗಳು ಹಾಗೂ ಮತ್ತಿತರ ಮೂಲಗಳಿಂದ ಸಂಗ್ರಹವಾಗುವ ಡೇಟಾವನ್ನು ಸಂಸ್ಕರಿಸುತ್ತವೆ. ಬಳಿಕ ಆ ಸಂಸ್ಕರಿತ ಡೇಟಾವನ್ನು ಭಾರತದ ಐತಿಹಾಸಿಕ ಹವಾಮಾನ ಮಾದರಿಗಳೊಂದಿಗೆ ಹೋಲಿಸಿ ವಿಶ್ಲೇಷಿಸುತ್ತವೆ. ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳ ಈ ಐತಿಹಾಸಿಕ ಮಾದರಿಗಳನ್ನು ವಾತಾವರಣದ ರಿಯಲ್ಟೈಮ್ ಡೇಟಾದೊಂದಿಗೆ ಎಐ ಹೋಲಿಸಿ ವಿಶ್ಲೇಷಿಸುತ್ತದೆ. ಅದರ ಮೂಲಕ ವಾತಾವರಣದ ಟ್ರೆಂಡ್ಗಳನ್ನು ಗುರುತಿಸಿ ಅತ್ಯಂತ ನಿಖರವಾದ ಮುನ್ಸೂಚನೆಗಳನ್ನು ಒದಗಿಸುತ್ತವೆ.
ಹಿಂದೆಲ್ಲ ಒಂದೀಡೀ ಪ್ರದೇಶಕ್ಕೆ ಅನ್ವಯವಾಗುವಂತೆ ಅಂದರೆ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಪ್ರದೇಶ ಮುಂತಾಗಿ ಪ್ರದೇಶಗಳನ್ನು ವಿಭಾಗಿಸಿ ಅದರ ಅನುಸಾರ ಹವಾಮಾನ ಮುನ್ಸೂಚನೆ ನೀಡಲಾಗುತ್ತಿತ್ತು. ಅಂದರೆ 12 ಕಿಲೋಮೀಟರ್ನಷ್ಟು ಗ್ರಿಡ್ ವ್ಯಾಪ್ತಿಯವರೆಗೆ ಮಾತ್ರವೇ ಪ್ರತ್ಯೇಕ ಮುನ್ಸೂಚನೆ ನೀಡಲಾಗುತ್ತಿತ್ತು. ಆದರೆ ಈಗ 6 ಕಿಮೀ ಭೂ ಪ್ರದೇಶದ ಹವಾಮಾನವನ್ನೂ ನಿಖರವಾಗಿ ಮತ್ತು ಪ್ರತ್ಯೇಕವಾಗಿ ಊಹಿಸಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಈಗಿರುವ 40 ರೇಡಾರ್ಗಳನ್ನು 100 ರೇಡಾರ್ಗಳಿಗೆ ವಿಸ್ತರಿಸುವ ಯೋಜನೆಯಿದ್ದು, ಮುನ್ಸೂಚನೆಯನ್ನು ಇನ್ನಷ್ಟು ನಿಖರ ಮತ್ತು ರಿಯಲ್ ಟೈಮ್ನಲ್ಲಿ (ನೌಕಾಸ್ಟ್ಗಳನ್ನು) ನೀಡಲಾಗುತ್ತದೆ. ಎಂದರೆ ಒಂದು ಹಳ್ಳಿಗೂ ಪ್ರತ್ಯೇಕ ಮನ್ಸೂಚನೆ ಒದಗಿಸಲು ಸಾಧ್ಯವಿದೆ.
ಹವಾಮಾನ ಎಲ್ಲೆಡೆಯೂ ಒಂದೇ ಆಗಿರುವುದಿಲ್ಲ. ಒಂದು ಹಳ್ಳಿಯಲ್ಲಿ ಬಂದ ಮಳೆ ಪಕ್ಕದ ಹಳ್ಳಿಯಲ್ಲಿ ಬೀಳದಿರುವುದನ್ನು ನಾವೆಲ್ಲ ನೋಡಿದ್ದೇವೆ. ಒಂದು ರಸ್ತೆಯಲ್ಲಿ ಪ್ರಯಾಣಿಸುವಾಗ ಒಂದಷ್ಟು ದೂರ ಭಾರಿ ಮಳೆ ಸುರಿದು ಆಮೇಲೆ ದಾರಿ ಒಣಗಿರುವುದನ್ನು ಕಂಡಿದ್ದೇವೆ. ಅಂದರೆ ಮೋಡಗಳ ವ್ಯಾಪ್ತಿ ಮತ್ತು ವಾತಾವರಣದ ಇತರೆ ಅಂಶಗಳು ಹವಾಮಾನವನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಭಿನ್ನಗೊಳಿಸುತ್ತವೆ. ಹೀಗಾಗಿ ಅತಿ ಕಡಿಮೆ ಭೂ ಪ್ರದೇಶಕ್ಕೆ ಮುನ್ಸೂಚನೆಯನ್ನು ಸೀಮಿತಗೊಳಿಸುತ್ತಾ ಹೋದಷ್ಟೂ ಅನುಕೂಲ ಹೆಚ್ಚು. ಇಂಥ ನಿಖರತೆಯನ್ನು ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ ಸಾಧಿಸಿದೆ. ವ್ಯಾಪಕ ಡೇಟಾ ಸಂಗ್ರಹ, ಸೂಪರ್ ಕಂಪ್ಯೂಟರ್ನ ಶಕ್ತಿ ಮತ್ತು ಎಐ ಮೂಲಕ ವಿಶ್ಲೇಷಣೆಯೇ ಇಷ್ಟು ನಿಖರತೆಗೆ ಕಾರಣವಾಗಿದೆ.
ವಿಶ್ವದಲ್ಲೇ ಬೆಸ್ಟ್ ಫೋರ್ಕಾಸ್ಟಿಂಗ್
2024ರಲ್ಲಿ ಐಐಟಿಎಂನಲ್ಲಿ ಸ್ಥಾಪಿತವಾದ ಅರ್ಕಾ ಸೂಪರ್ಕಂಪ್ಯೂಟರ್, 11.77 ಪೆಟಾಫ್ಲಾಪ್ಸ್ (ಸೆಕೆಂಡಿಗೆ ಕ್ವಾಡ್ರಿಲಿಯನ್ ಲೆಕ್ಕಾಚಾರ) ಮತ್ತು 33 ಪೆಟಾಬೈಟ್ಗಳ ಸಂಗ್ರಹ ಸಾಮರ್ಥ್ಯದೊಂದಿಗೆ ಬಿಎಫ್ಎಸ್ಗೆ ಶಕ್ತಿಯನ್ನು ಒದಗಿಸುತ್ತದೆ. ಹಿಂದಿನ ಪ್ರತ್ಯುಷ್ ಎಂಬ ಸೂಪರ್ ಕಂಪ್ಯೂಟರ್ ವಿವಿಧ ಡೇಟಾ ಸಂಸ್ಕರಿಸಿ ಮುನ್ಸೂಚನೆ ನೀಡಲು 10 ಗಂಟೆಗಳನ್ನು ತೆಗೆದುಕೊಂಡರೆ, ಅರ್ಕಾ ಎಂಬ ಅತ್ಯಾಧುನಿಕ ಸೂಪರ್ ಕಂಪ್ಯೂಟರ್ ಕೇವಲ ನಾಲ್ಕು ಗಂಟೆಗಳಲ್ಲಿ ಈ ಕೆಲಸ ಪೂರ್ಣಗೊಳಿಸುತ್ತದೆ.
ಭಾರತದಲ್ಲಿ ಅಭಿವೃದ್ಧಿಯಾಗಿರುವ ಬಿಎಫ್ಎಸ್ ಜಾಗತಿಕವಾಗಿ ಎಲ್ಲಾ ಹವಾಮಾನ ಮುನ್ಸೂಚನಾ ವ್ಯವಸ್ಥೆಗಳನ್ನೂ ಮೀರಿಸುತ್ತದೆ. ಯುರೋಪ್, ಯುಕೆ, ಮತ್ತು ಅಮೆರಿಕ ಮಾದರಿಗಳು 9 ರಿಂದ 14 ಕಿಲೋಮೀಟರ್ ಗ್ರಿಡ್ ರೆಸಲ್ಯೂಶನ್ನಲ್ಲಿ ಕಾರ್ಯನಿರ್ವಹಿಸಿದರೆ, ಬಿಎಫ್ಎಸ್ 6 ಕಿಲೋಮೀಟರ್ ಗ್ರಿಡ್ನಲ್ಲಿ ಸೂಕ್ಷ್ಮ ವಿವರಗಳನ್ನು ಸೆರೆಹಿಡಿಯುತ್ತದೆ. ಇದು ವಿಶ್ವದ ಅತ್ಯಂತ ಸುಧಾರಿತ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯು ‘ಮಾನ್ಸೂನ್ ಮಳೆಯೊಂದಿಗೆ ಜೂಟಾಟ ನಡೆಸುವ ಭಾರತದ ಕೃಷಿ ಕ್ಷೇತ್ರ’ಕ್ಕೆ ವರದಾನವಾಗಿದೆ.
****
ಪ್ರಯತ್ನ, ತಂತ್ರಜ್ಞಾನವೆಲ್ಲ ಭಾರತದ್ದೇ. ಲಾಭ ಪಡೆಯುವವರೂ ಭಾರತೀಯರೇ. ಇದುವೇ ನಿಜವಾದ ಆತ್ಮನಿರ್ಭರ ಭಾರತ. ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ ಮೂಲಕ ನಾವು ಜಾಗತಿಕ ಮಟ್ಟದ ಮಾನದಂಡಗಳನ್ನು ಮೀರಿದ್ದು ಮಾತ್ರವಲ್ಲ ನಮ್ಮದೇ ವೈಜ್ಙಾನಿಕ ಸಾಮರ್ಥ್ಯವನ್ನು ಆಧರಿಸಿ ಮಾದರಿಯನ್ನು ನಿರ್ಮಿಸಿದ್ದೇವೆ. ನಾಲ್ಕು ಮಹಿಳಾ ವಿಜ್ಞಾನಿಗಳ ನೇತೃತ್ವದಲ್ಲಿ ಮುನ್ನಡೆದ ಈ ಯೋಜನೆ ‘ನಾರಿ ಶಕ್ತಿ’ ವಿಜ್ಞಾನವನ್ನು ಹೇಗೆ ಸಶಕ್ತಗೊಳಿಸುತ್ತಿದೆ ಎಂಬುದಕ್ಕೆ ಅದ್ಭುತ ಉದಾಹರಣೆ.
— ಡಾ. ಜಿತೇಂದ್ರ ಸಿಂಗ್ ಸಚಿವರು, ಭೂ ವಿಜ್ಞಾನಗಳ ಸಚಿವಾಲಯ



