AI ಇತಿಹಾಸ ನಿಮಗೆಷ್ಟು ಗೊತ್ತು, 80 ವರುಷದಲ್ಲಿ ನಡೆದಿದ್ದೇನು?
ಪ್ರಮುಖವಾದ ಪರಿಕಲ್ಪನೆಗಳ ಸಹಿತ ಎಐ ಇತಿಹಾಸದ ಮೈಲಿಗಲ್ಲು
ಡಾ.ರಮೇಶ್ ನಿಂಬೆಮರದಳ್ಳಿ
ಈಗೀಗಂತೂ ಅರಿವಿದ್ದೋ, ಇಲ್ಲದೆಯೋ ನಾವೆಲ್ಲರೂ ಎಐ ಬಳಸುತ್ತಿದ್ದೇವೆ. ಆದರೂ, ಅನೇಕರಿಗೆ ಎಐ ನಮಗಲ್ಲ ಎನ್ನಿಸಿಬಿಡುತ್ತದೆ. ಇದು ವಿಜ್ಞಾನ ಅಥವಾ ಎಂಜಿನಿಯರಿಂಗ್ ಓದಿದವರಿಗೆ ಮಾತ್ರ ಅರ್ಥವಾಗುವ ವಿಷಯ ಎಂಬ ನಂಬಿಕೆ ಕಾರಣವಿರಬಹುದು. ಎಐ ಕುರಿತು ಹಬ್ಬಿರುವ ನಾನಾ ಥರಹದ ಉತ್ಪ್ರೇಕ್ಷೆಗಳು ಮತ್ತು ಇದರ ಹತ್ತಾರು ತಾಂತ್ರಿಕ ಪರಿಕಲ್ಪನೆಗಳು ಗೊಂದಲ ಹುಟ್ಟಿಸಿರಲೂಬಹುದು. ವಾಸ್ತವದಲ್ಲಿ ಎಐ ಅಂದುಕೊಂಡಷ್ಟು ಕ್ಲಿಷ್ಟಕರವಲ್ಲ. ಈ ಜನಸ್ನೇಹಿ ತಂತ್ರಜ್ಞಾನವನ್ನು ಎಲ್ಲರೂ ಸುಲಭವಾಗಿ ಗ್ರಹಿಸಿ ಇದರ ಉಪಯೋಗ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಭೂತ ಪರಿಕಲ್ಪನೆಗಳನ್ನು ಈ ಲೇಖನದಲ್ಲಿ ತಿಳಿಗನ್ನಡದಲ್ಲಿ ಸರಳವಾಗಿ ವಿವರಿಸಲಾಗಿದೆ. ಜೊತೆಗೆ, ಕೃತಕ ಬುದ್ಧಿಮತ್ತೆ ಬೆಳವಣಿಗೆಯ ಐತಿಹಾಸ ಮತ್ತು ಈ ಕ್ಷೇತ್ರದ ಪ್ರಮುಖ ಕಂಪನಿಗಳು ಹಾಗೂ ಸುಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯಿಸಲಾಗಿದೆ.
ಎಐ ಈಗೀಗ ಜನಪ್ರಿಯವಾಗಿದ್ದರೂ ಇದರ ಬೆಳವಣಿಗೆಗೆ ನೂರಾರು ವಿಜ್ಞಾನಿಗಳು 80 ವರ್ಷಗಳ ಕಾಲ ಶ್ರಮಿಸಿದ್ದಾರೆ. 1950ರ ದಶಕದಲ್ಲಿ ಪ್ರಾರಂಭವಾದ ಎಐ ಪ್ರಯಾಣ, ಮೂಲಭೂತ ಆಲ್ಗಾರಿದಮ್ಗಳಿಂದ ಆರಂಭಗೊಂಡು, ಇಂದಿನ ಸುಧಾರಿತ ಮಶೀನ್ ಲರ್ನಿಂಗ್, ಡೀಪ್ ಲರ್ನಿಂಗ್ ಮತ್ತು ನ್ಯೂರಲ್ ನೆಟ್ವರ್ಕ್ಗಳವರೆಗೆ ವಿಸ್ತರಿಸಿದೆ. ಈ ಕ್ಷೇತ್ರದಲ್ಲಿ ಅಲನ್ ಟ್ಯೂರಿಂಗ್, ಜಾನ್ ಮೆಕಾರ್ಥಿ, ಮಾರ್ವಿನ್ ಮಿನ್ಸ್ಕಿ ಮತ್ತು ಇತ್ತೀಚಿನ ಯುಗದಲ್ಲಿ ಜೆಫ್ರಿ ಹಿಂಟನ್, ಯಾನ್ ಲೆಕನ್ ಮುಂತಾದ ವಿಜ್ಞಾನಿಗಳು ಮಹತ್ವದ ಕೊಡುಗೆ ನೀಡಿದ್ದಾರೆ. ಇದೇ ತಂತ್ರಜ್ಞಾನ ಮಾನವ ಕುಲಕ್ಕೆ ಒಳಿತಾಗುವಂತೆ ರೂಪಿಸಲು ಹಲವರು ಹಗಲಿರುಳು ಶ್ರಮಿಸುತ್ತಿದ್ದಾರೆ; ಕಂಪನಿಗಳು ಕೋಟಿಗಟ್ಟಲೆ ಹಣ ಹಾಕಿ ಇದರ ಅಭಿವೃದ್ಧಿಯಲ್ಲಿ ತೊಡಗಿವೆ. ಅಂತಹ ಪ್ರಸಿದ್ಧ ವ್ಯಕ್ತಿಗಳು ಮತ್ತು ಕಂಪನಿಗಳ ಕೊಡುಗೆಯನ್ನು ಸರಯಾಗಿ ಅರಿತರೆ ಎಐ ತಂತ್ರಜ್ಞಾನದ ಕುರಿತಾದ ಸಮಗ್ರ ದೃಷ್ಟಿಕೋನವನ್ನು ನೀಡುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಈ ತಂತ್ರಜ್ಞಾನದ ಅಭಿವೃದ್ಧಿಯ ಮುನ್ನೋಟವನ್ನೂ ಒದಗಿಸುತ್ತದೆ.
AI ಬೆಳವಣಿಗೆಯ ಮೈಲಿಗಲ್ಲುಗಳು
1943: ಮೊದಲ ನ್ಯೂರಲ್ ನೆಟ್ವರ್ಕ್ ಮಾದರಿ
ವಾರೆನ್ ಮ್ಯಾಕ್ಯುಲೋಚ್ ಮತ್ತು ವಾಲ್ಟರ್ ಪಿಟ್ಸ್ ಅವರು ಮೊದಲ ನ್ಯೂರಲ್ ನೆಟ್ವರ್ಕ್ ಮಾದರಿಯನ್ನು ಪ್ರಸ್ತಾಪಿಸಿದರು. ಇದು AI ಬೆಳವಣಿಗೆಗೆ ಅಡಿಪಾಯ ಹಾಕಿತು.
1950: ಯಂತ್ರಗಳಿಗೆ ಬುದ್ಧಿ ಇದೆಯೇ?
ಅಲನ್ ಟ್ಯೂರಿಂಗ್ "ಕಂಪ್ಯೂಟಿಂಗ್ ಮಷಿನರಿ ಅಂಡ್ ಇಂಟೆಲಿಜೆನ್ಸ್" ಎಂಬ ಸಂಶೋಧನಾ ವರದಿ ಪ್ರಕಟಿಸಿ, ಟ್ಯೂರಿಂಗ್ ಟೆಸ್ಟ್ ಅನ್ನು ಪ್ರಸ್ತಾಪಿಸಿದರು. ಇದು ಯಂತ್ರಗಳು ಬುದ್ಧಿಮತ್ತೆಯನ್ನು ಪ್ರದರ್ಶಿಸಬಲ್ಲವೇ ಎಂಬ ಪ್ರಶ್ನೆಯನ್ನು ವಿಜ್ಞಾನಿಗಳ ಮುಂದಿಟ್ಟಿತು.
1956: ಡಾರ್ಟ್ಮೌತ್ ಸಮ್ಮೇಳನ
ಈ ಸಮ್ಮೇಳನವನ್ನು ಕೃತಕ ಬುದ್ಧಿಮತ್ತೆಯ ‘ಜನ್ಮಸ್ಥಳ’ ಎಂದು ಪರಿಗಣಿಸಲಾಗುತ್ತದೆ. ಜಾನ್ ಮೆಕಾರ್ಥಿ, ಮಾರ್ವಿನ್ ಮಿನ್ಸ್ಕಿ, ನಾಥನಿಯೆಲ್ ರೋಚೆಸ್ಟರ್ ಮತ್ತು ಕ್ಲಾಡ್ ಷಾನನ್ ಅವರು AI ಎಂಬ ಹೊಸ ಕ್ಷೇತ್ರವನ್ನು ಔಪಚಾರಿಕವಾಗಿ ಪ್ರಾರಂಭಿಸಿದರು.
1966: ELIZA ಎಂಬ ಮೊದಲ ಚಾಟ್ಬಾಟ್
ಜೋಸೆಫ್ ವೀಜೆನ್ಬೌಮ್ ಅವರು ELIZA ಎಂಬ ಚಾಟ್ಬಾಟ್ ಅನ್ನು ರಚಿಸಿದರು. ಇದು ಮನುಷ್ಯರಂತೆ ಸಂವಹನ ನಡೆಸಬಲ್ಲ ಮೊದಲ ಚಾಟ್ಬಾಟ್ ಆಗಿತ್ತು.
1997: ಚೆಸ್ ಚಾಂಪಿಯನ್ಗೇ ಸೋಲು
IBM ಸಂಸ್ಥೆಯ ‘ಡೀಪ್ ಬ್ಲೂ’ ಎಂಬ ಸೂಪರ್ ಕಂಪ್ಯೂಟರ್ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕಾಸ್ಪರೋವ್ ಅವರನ್ನು ಸೋಲಿಸಿತು. ಇದು ಯಂತ್ರಗಳು ಮನುಷ್ಯರಂತೆ ತಾರ್ಕಿಕವಾಗಿ ಯೋಚಿಸಬಲ್ಲವು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಬಲ್ಲವು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿತು.
2011: ಗೇಮ್ಶೋ ಗೆದ್ದ IBM ವ್ಯಾಟ್ಸನ್
ಜಿಯೊಪಾರ್ಡಿ ಎಂಬ ಅಮೆರಿಕದ ಜನಪ್ರಿಯ ಗೇಮ್ ಶೋನಲ್ಲಿ ‘IBM ವ್ಯಾಟ್ಸನ್‘ ಮನುಷ್ಯ ಪ್ರತಿಸ್ಪರ್ಧಿಗಳನ್ನು ಸೋಲಿಸಿತು. ಜನರು ಬಳಸುವ ನೈಸರ್ಗಿಕ ಭಾಷೆಯನ್ನು ಗ್ರಹಿಸಬಲ್ಲ ಎಐ ಸಾಮರ್ಥ್ಯ ಇದರಿಂದ ಜಗಜ್ಜಾಹೀರಾಯಿತು.
2016: ಗೋ ಆಟದಲ್ಲಿ ಆಲ್ಫಾಗೋ ಗೆಲುವು
ಗೂಗಲ್ ಡೀಪ್ಮೈಂಡ್ ರೂಪಿಸಿದ್ದ AlphaGo ವಿಶ್ವ ಚಾಂಪಿಯನ್ ಲೀ ಸೆಡೋಲ್ ಅವರನ್ನು 'ಗೋ' ಎಂಬ ಗೇಮ್ನಲ್ಲಿ ಸೋಲಿಸಿತು. ಇದು ಅತೀ ಬುದ್ಧಿವಂತಿಕೆಯನ್ನು ಬಯಸುವ ಅತ್ಯಂತ ಪ್ರಾಚೀನ ಆಟ. AI ಸಂಕೀರ್ಣವಾಗಿ ಯೋಚಿಸುವುದು ಮಾತ್ರವಲ್ಲದೆ ಸೃಜನಾತ್ಮಕ ಕೆಲಸಗಳನ್ನೂ ನಿರ್ವಹಿಸಬಲ್ಲದು ಎಂಬುದನ್ನು ಈ ಗೆಲುವು ಸಾಬೀತುಪಡಿಸಿತು.
2020: GPT-3 - ಜನರೇಟಿವ್ ಎಐ ಯುಗಕ್ಕೆ ನಾಂದಿ
ಓಪನ್ ಎಐ GPT-3 ಅನ್ನು 2020ರಲ್ಲಿ ಬಿಡುಗಡೆ ಮಾಡಿತು. ಇದು ನೈಸರ್ಗಿಕ ಭಾಷೆಯನ್ನು ಸಂಸ್ಕರಿಸುವ (NLP) ಜನರೇಟಿವ್ ಎಐ ಎಂಬ ಹೊಸ ಯುಗಕ್ಕೆ ನಾಂದಿ ಹಾಡಿತು. ಇಡೀ ಜಗತ್ತಿನಲ್ಲಿ ಎಐ ಕುರಿತು ಹೊಸ ಅಲೆಯನ್ನೇ ಸೃಷ್ಟಿಸಿತು. ಆ ಬಳಿಕ ಹೊಸ ಜನರೇಟಿವ್ ಎಐಗಳ ಹುಟ್ಟು ಮತ್ತು ಪ್ರಗತಿಗೆ ಕಾರಣವಾಯಿತು.
2022: ಕಲೆಗೂ ಸೈ, ಸಂಗೀತಕ್ಕೂ ಜೈ
DALL-E ಮತ್ತು Jukedeck ಎಂಬ ಎಐ ಮಾಡೆಲ್ಗಳು ವಿಶಿಷ್ಟವಾದ ಸೃಜನಶೀಲತೆಯನ್ನು ಪ್ರದರ್ಶಿಸಿದವು. ಮನುಷ್ಯ ಕಲಾವಿದರನ್ನು ಹೋಲುವಂತೆ ಕಲಾಕೃತಿಗಳನ್ನು DALL-E ರಚಿಸಿದರೆ, ಜನ ಹುಬ್ಬೇರಿಸುವಂತೆ Jukedeck ಸಂಗೀತ ಸಂಯೋಜಿಸಿತು. ಇದು ಸೃಜನಶೀಲತೆ ಎಂದಿಗೂ ಮನುಷ್ಯನ ಸ್ವತ್ತು ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಸುಳ್ಳು ಮಾಡಿತು.
2025: ಟೆಕ್ಲೋದಲ್ಲಿ ಡೀಪ್ ತಲ್ಲಣ
ಚೀನದ ‘ಡೀಪ್ಸೀಕ್’ ಎಂಬ ಎಐ ಟೆಕ್ಲೋಕದಲ್ಲಿ ತಲ್ಲಣ ಸೃಷ್ಟಿಸಿತು. ಓಪನ್ಎಐನ GPT-4 ಮಾದರಿಯನ್ನೂ ಹಿಂದಿಕ್ಕಿ ಎಲ್ಲರನ್ನೂ ಅಚ್ಚರಿಗೊಳಿಸಿತು. ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದ ಓಪನ್ಸೋರ್ಸ್ ಆಗಿರುವುದು ಇದರ ವಿಶೇಷ. ಅಮೆರಿಕ ಹೊರತಾಗಿ ಇತರೆ ದೇಶಗಳೂ ಶಕ್ತಿಶಾಲಿ ಎಐ ಮಾಡೆಲ್ಗಳನ್ನು ಸೃಷ್ಟಿಸಬಹುದು ಎನ್ನುವುದನ್ನು ಡೀಪ್ಸೀಕ್ ಸಾಬೀತುಪಡಿಸಿತು. ಅಲ್ಲದೆ, ದೊಡ್ಡ ಎಐ ಮಾಡೆಲ್ಗಳನ್ನು ರೂಪಿಸಲು ಭಾರಿ ಹೂಡಿಕೆಯ ಅಗತ್ಯವಿದೆ ಎನ್ನುವ ಸಾಂಪ್ರದಾಯಿಕ ನಂಬಿಕೆಯನ್ನು ಸುಳ್ಳು ಮಾಡಿ ಅತಿ ಕಡಿಮೆ ಬಂಡವಾಳದಲ್ಲೇ ದೊಡ್ಡ ಎಐ ಮಾಡೆಲ್ಗಳನ್ನು ರೂಪಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿತು. ಇದು ಹಿಂದುಳಿದ ಮತ್ತು ಮುಂದುವರಿಯುತ್ತಿರುವ ದೇಶಗಳೂ ತಮ್ಮದೇ ಎಐ ಮಾಡೆಲ್ಗಳನ್ನು ಸೃಷ್ಟಿಸಬಹುದಾದ ಭರವಸೆಯನ್ನು ಹುಟ್ಟುಹಾಕಿದೆ. ಕೇವಲ 2 ಸಾವಿರ ಜಿಪಿಯು(ಗ್ರಾಫಿಕ್ ಪ್ರೋಸೆಸಿಂಗ್ ಯೂನಿಟ್)ಗಳಲ್ಲಿ ಡೀಪ್ಸೀಕ್ ಮಾಡಿದ ಸಾಧನೆ 18,693 ಜಿಪಿಯು ಚಿಪ್ಗಳ ಖರೀದಿಗೆ ಮುಂದಾಗಿರುವ ಭಾರತಕ್ಕೆ ಹೊಸ ಹುರುಪು ನೀಡಿದೆ. ಜೊತೆಗೆ ಭಾರತ ತನ್ನದೇ ‘ಸಾರ್ವಭೌವ ಎಐ’ ಸೃಷ್ಟಿಸುವ ದಾರಿ ಸುಗಮವಾದಂತಿದೆ.
ಕೃತಕ ಬುದ್ಧಿಮತ್ತೆಯ ಪ್ರಮುಖ ಪರಿಭಾಷೆಗಳು
ಮಷೀನ್ ಲರ್ನಿಂಗ್ (ML): ಡೇಟಾವನ್ನು ಪರಿಶೀಲಿಸಿ, ವಿಶ್ಲೇಷಿಸಿ ಅವುಗಳಿಂದ ಕಲಿಯುತ್ತಾ ಹೋಗುವ ಆಲ್ಗಾರಿದಮ್ಗಳನ್ನು ಸೃಷ್ಟಿಸುವ ಎಐನ ಶಾಖೆ. ಅಲ್ಲದೆ, ಡೇಟಾ ವಿಶ್ಲೇಷಣೆಯಿಂದ ಕಲಿತ ತಿಳಿವಳಿಕೆಯನ್ನು ಆಧರಿಸಿ ತೀರ್ಮಾನಿಸುವ ಮತ್ತು ಕಲಿಕೆಯನ್ನು ಸುಧಾರಿಸಿಕೊಳ್ಳುತ್ತಾ ಹೋಗುವ ವ್ಯವಸ್ಥೆಯೇ ಯಂತ್ರ ಕಲಿಕೆ.
ಡೀಪ್ ಲರ್ನಿಂಗ್: ಇದು ಯಂತ್ರ ಕಲಿಕೆಯ ಭಾಗ. ಬೃಹತ್ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಲು ಮತ್ತು ಅದರಲ್ಲಿರುವ ಮಾದರಿಗಳನ್ನು ಗುರುತಿಸಲು ಸಹಾಯಕಾರಿ. ಇದು ವಿವಿಧ ಪದರಗಳಲ್ಲಿ ಡೇಟಾವನ್ನು ವಿಶ್ಲೇಷಿಸಿ ಫಲಿತವನ್ನು ನೀಡುತ್ತದೆ. ಬೃಹತ್ ಡೇಟಾ ಹೊಂದಿರುವ ದೈತ್ಯ ಟೆಕ್ ಕಂಪನಿಗಳಿಗೆ ಈ ಆಳ ಕಲಿಕೆ ವರ.
ನ್ಯೂರಲ್ ನೆಟ್ವರ್ಕ್ಸ್: ಇದು ಆಲ್ಗಾರಿದಮ್ಗಳ ಒಂದು ವ್ಯವಸ್ಥೆಯಾಗಿದ್ದು, ಡೇಟಾಸೆಟ್ನಲ್ಲಿ ಇರಬಹುದಾದ ಸಂಬಂಧಗಳನ್ನು ಗ್ರಹಿಸಲು ಯತ್ನಿಸುತ್ತದೆ. ಹೀಗೆ ಮಾಡುವಾಗ ಮನುಷ್ಯನ ಮೆದುಳು ಕಾರ್ಯನಿರ್ವಹಿಸುವ ಮಾದರಿಯನ್ನು ಅನುಕರಿಸುತ್ತದೆ.
ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP): ಮನುಷ್ಯರು ಬಳಸುವ ನೈಸರ್ಗಿಕ ಭಾಷೆಗಳನ್ನು ಅರ್ಥಮಾಡಿಕೊಳ್ಳುವ ಪ್ರೋಗ್ರಾಮ್ನ ಸಾಮರ್ಥ್ಯವೇ ಎನ್ಎಲ್ಪಿ. ಈ ಹಿಂದೆ ಕಂಪ್ಯೂಟ್ಗೆ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗಳು ಮಾತ್ರವೇ ಅರ್ಥವಾಗುತ್ತಿದ್ದವು. ಆದರೀಗ ಈ ತಂತ್ರಜ್ಞಾನದ ಸಹಾಯದಿಂದ ಕಂಪ್ಯೂಟರ್ಗಳು ಮನುಷ್ಯರು ಬಳಸುವ ಭಾಷೆಗಳನ್ನು ಅದೇ ದಾಟಿಯಲ್ಲಿ ಸರಳವಾಗಿ ಗ್ರಹಿಸಲು ಸಾಧ್ಯವಾಗಿದೆ. ಚಾಟ್ಚಾಟ್, ಎಐ ಏಟೆಂಟ್ಗಳು ಇದಕ್ಕೆ ಉಹಾಹರಣೆ.
ಕಂಪ್ಯೂಟರ್ ವಿಷನ್: ಎಐನ ಒಂದು ಶಾಖೆಯಾಗಿರುವ ಕಂಪ್ಯೂಟರ್ ವಿಷನ್ ಅಥವಾ ಕಂಪ್ಯೂಟರ್ ದೃಷ್ಟಿಯು ಚಿತ್ರ ಇಲ್ಲವೇ ವೀಡಿಯೊಗಳನ್ನು ವಿಶ್ಲೇಷಿಸಿ ಅರ್ಥಮಾಡಿಕೊಳ್ಳುತ್ತದೆ. ಅಲ್ಲದೆ, ತನ್ನ ನಿರ್ಧಾರಗಳಿಗೆ ಆ ತಿಳಿವಳಿಕೆಯ ನೆರವು ಪಡೆಯುತ್ತದೆ. ಮೊಬೈಲ್ ಲಾಕ್ ತೆರೆಯಲು ಬಳಸುವ ಫೇಷಿಯಲ್ ರೆಕಗ್ನಿಷನ್, ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾಗಳು, ಸ್ವಯಂ-ಚಾಲಿತ ಕಾರುಗಳು, ಆಗ್ಮೆಂಟೆಡ್ ರಿಯಾಲಿಟಿ – ಇಲ್ಲೆಲ್ಲಾ ಕಂಪ್ಯೂಟರ್ ದೃಷ್ಟಿಯೇ ಕಣ್ಣು.
ವರ್ಚುಯಲ್ ಅಸಿಸ್ಟೆಂಟ್: ನೈಸರ್ಗಿಕ ಭಾಷೆಗಳ ಸಂಸ್ಕರಣೆ ಮತ್ತು ಮತ್ತು ಜನರೇಟಿವ್ ಎಐಗಳ ಸಮ್ಮಿಳಿತ ರೂಪ. ಮನುಷ್ಯರ ಇಚ್ಛೆ ಅಥವಾ ಅಗತ್ಯಗಳನ್ನು ಅವರದೇ ಭಾಷೆಯಲ್ಲಿ ಅರ್ಥಮಾಡಿಕೊಂಡು ಅವರಿಗೆ ಸೂಕ್ತ ಉತ್ತರ ಇಲ್ಲವೇ ಪರಿಹಾರ ಒದಗಿಸುವುದು ಇವುಗಳ ಕೆಲಸ. ಸಿರಿ, ಅಲೆಕ್ಸಾ, ಗೂಗಲ್ ನೌ ಜನಪ್ರಿಯ ವರ್ಚುಯಲ್ ಅಸಿಸ್ಟೆಂಟ್ಗಳು.
AI ಏಜೆಂಟ್: AI ಏಜೆಂಟ್ಗಳು ಉದ್ಧೇಶ ಮತ್ತು ಕಾರ್ಯವಿಧಾನದಲ್ಲಿ ವರ್ಚುಯಲ್ ಅಸಿಸ್ಟೆಂಟ್ಗಳಿಗಿಂತ ಭಿನ್ನ. ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುವುದು ಇವುಗಳ ವಿಶೇಷತೆ. ಇಮೆಲ್ಗಳಿಗೆ ಸ್ವತಂತ್ರವಾಗಿ ಉತ್ತರಿಸುವುದು, ಸಂಶೋಧನೆ ನಡೆಸುವುದು, ಬುಕಿಂಗ್ ಮತ್ತು ಖರೀದಿಗಳನ್ನೂ ಈ ಎಐ ಏಜೆಂಟ್ಗಳು ಮಾಡಬಲ್ಲವು.
ಎಐ ಮೆದುಳಿಗೆ ಬುದ್ಧಿ ತುಂಬಿದ ನಿಪುಣರು
ಸ್ಯಾಮ್ ಆಲ್ಟ್ಮನ್: OpenAI ಸಿಇಒ, ಸ್ಯಾಮ್ ಆಲ್ಟ್ಮನ್, ಎಐ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಹೆಸರು. ಇವರ ನಾಯಕತ್ವದಲ್ಲಿ ಸೃಷ್ಟಿಸಿದ ChatGPT ವಿಶ್ವದಾದ್ಯಂತ ಹೊಸ ಸಂಚಲನ ಸೃಷ್ಟಿಸಿತು. ಉದ್ಯಮ, ಉತ್ಪಾದನೆಯಲ್ಲಿ ಎಐ ಅಳವಡಿಕೆಗೆ ವೇಗ ಬಂದಿದ್ದೇ ಇದರಿಂದ. ಸಾಮಾನ್ಯ ಜನರೂ ಎಐ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದು ಇವರ ಹೆಗ್ಗಳಿಕೆ.
ಡೆಮಿಸ್ ಅಸಾಬಿಸ್: ಗೂಗಲ್ ದೀಪ್ಮೈಂಡ್ನ ಸಹ ಸಂಸ್ಥಾಪಕ ಮತ್ತು ಸಿಇಒ. ಆಲ್ಫಾಗೋ ಮತ್ತು ಆಲ್ಫಾಫೋಲ್ಡ್ಗಳ ಅಭಿವೃದ್ಧಿಯಲ್ಲಿ ಮುಂದಾಳತ್ವ ವಹಿಸಿದ್ದ ಇವರದು ಎಐ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ. ಡೀಪ್ ಲರ್ನಿಂಗ್ ಮತ್ತು ನ್ಯೂರಲ್ ನೆಟ್ವರ್ಕ್ ಕ್ಷೇತ್ರಗಳ ವಿಸ್ತರಣೆಯಲ್ಲಿ ಇವರ ಪಾತ್ರವಿದೆ.
ಇಲಾನ್ ಮಸ್ಕ್: ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಕಂಪನಿಗಳ ಸ್ಥಾಪಕರೂ, ಸಿಇಒ ಆಗಿರುವ ಇಲಾನ್ ಮಸ್ಕ್, ಬಾಹ್ಯಾಕಾಶ ಯೋಜನೆಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಜನಪ್ರಿಯರು. ಜವಾಬ್ದಾರಿಯುತ ಎಐ ಅಭಿವೃದ್ಧಿಯ ಪ್ರಬಲ ಪ್ರತಿಪಾದಕರಲ್ಲಿ ಇವರೇ ಮುಂಚಣಿ. ಓಪನ್ಎಐನ ಸಹ-ಸ್ಥಾಪಕರಾಗಿ ಬಳಿಕ ಅಲ್ಲಿಂದ ಹೊರಬಂದು ತಮ್ಮದೇ Grok ಎಂಬ ಎಐ ಅಭಿವೃದ್ಧಿಪಡಿಸಿದ್ದಾರೆ. ಎಐ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದರೂ, "ಎಐ ಮನುಷ್ಯ ಇತಿಹಾಸದಲ್ಲೇ ಅತಿ ಅಪಾಯಕಾರಿ ಶಕ್ತಿ," ಎಂದು ಎಚ್ಚರಿಸುವ ಪ್ರಬಲ ಧ್ವನಿ.
ಆ್ಯಂಡ್ರೂ ಎನ್ಜಿ: ಎಐ ಕ್ಷೇತ್ರದ ಪ್ರವರ್ತಕರಲ್ಲಿ ಒಬ್ಬರು. ಗೂಗಲ್ ಬ್ರೈನ್ ಮತ್ತು ಕೋರ್ಸ್ ಎರಾದ ಸಹ ಸಂಸ್ಥಾಪಕರು. ಡೀಪ್ ಲರ್ನಿಂಗ್ ಅಭಿವೃದ್ಧಿಯಲ್ಲಿ ಆ್ಯಂಡ್ರೂ ಎನ್ಜಿ ಅವರ ಕೊಡುಗೆ ಮಹತ್ತರವಾದದ್ದು. ಅಲ್ಲದೆ, ‘ಕೋರ್ಸ್ ಎರಾ’ ಎಂಬ ಆನ್ನೈನ್ ಶಿಕ್ಷಣ ವೇದಿಕೆಯ ಮೂಲಕ ಎಐ ಶಿಕ್ಷಣವನ್ನು ಎಲ್ಲರಿಗೂ ದಕ್ಕುವಂತೆ ಮಾಡುತ್ತಿದ್ದಾರೆ.
ಯಾನ ಲೆಕನ್: ಫೇಸ್ಬುಕ್ (ಈಗ ಮೆಟಾ)ನ ಎಐ ಸಂಶೋಧನೆ ನಿರ್ದೇಶಕರು. ಕಾನ್ವಲ್ಯೂಷನಲ್ ನ್ಯೂರಲ್ ನೆಟ್ವರ್ಕ್ಗಳ ಅಭಿವೃದ್ಧಿಯಲ್ಲಿ ಇವರದು ಪ್ರಮುಖ ಪಾತ್ರ. ಇವರ ಕೆಲಸ ಕಂಪ್ಯೂಟರ್ ವಿಷನ್ ಮತ್ತು ಡೀಪ್ ಲರ್ನಿಂಗ್ ಕ್ಷೇತ್ರದಲ್ಲಿ ವಿಶೇಷ ಪರಿಣಾಮ ಬೀರಿದೆ.
ಜೆನ್ಸೆನ್ ಹುವಾಂಗ್: ವಿಶ್ವದ ಅತಿದೊಡ್ಡ ಕಂಪನಿ ಎನ್ವಿಡಿಯಾದ ಸಿಇಒ. ಜಗತ್ತಿನ ಅತಿ ಶಕ್ತಿಶಾಲಿ ಜಿಪಿಯು ಚಿಪ್ಗಳ ಅಭಿವೃದ್ಧಿಯ ನಾಯಕತ್ವ ಇವರದೇ. ಇಂದು ವಿಶ್ವದ ಯಾವುದೇ ಮೂಲೆಯಲ್ಲಿ ಎಐ ಸಂಶೋಧನೆ ಮತ್ತು ಅಭಿವೃದ್ಧಿ ನಡೆಯುತ್ತಿದ್ದರೆ ಅಲ್ಲಿ ಇವರ GeForce ಜಿಪಿಯುಗಳೇ ಮೆದುಳಿನಂತೆ ಕಾರ್ಯನಿರ್ವಹಿಸುತ್ತಿವೆ.
ಸುಂದರ್ ಪಿಚೈ: ಗೂಗಲ್ ಮತ್ತು ಅದರ ಮಾತೃ ಸಂಸ್ಥೆ ಆಲ್ಫಾಬೆಟ್ನ ಸಿಇಒ, ಸುಂದರ್ ಪಿಚೈ, ಜೆಮಿನಿ ಎಂಬ ಶಕ್ತಿಶಾಲಿ ಎಐ ಮಾಡೆಲ್ ಅಭಿವೃದ್ಧಿಯಲ್ಲಿ ಮುಂದಾಳು. ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಜೆಮಿನಿ ಮಾಡೆಲ್ ಬಳಕೆಯನ್ನು ಉಚಿತವಾಗಿ ನೀಡಿದ್ದಾರೆ. ಇವರ ನಾಯಕತ್ವದಲ್ಲಿ ಗೂಗಲ್, ಎಐ ಸಂಶೋಧನೆಯಲ್ಲಿ ಮಹತ್ತರ ಪ್ರಗತಿ ಸಾಧಿಸಿದೆ.
ಸತ್ಯ ನಾದೆಲ್ಲ: ಮೈಕ್ರೋಸಾಫ್ಟ್ನ ಸಿಇಒ, ಸತ್ಯ ನಾದೆಲ್ಲ, ಕಂಪನಿಯ ಎಐ ಉಪಕ್ರಮಗಳಲ್ಲಿ ವಿಶೇಷ ಆಸ್ತಕ್ತಿ ವಹಿಸಿದವರು. 'ಕೋಪೈಲಟ್' ಎಂಬ ಎಐ ಸೃಷ್ಟಿಸಿ ಅದರೊಂದಿಗೆ ಓಪನ್ ಎಐನ ಮಾಡೆಲ್ ಅನ್ನು ಸಮ್ಮಿಳಿತಗೊಳಿಸಿದರು. ಬಳಿಕ ತಮ್ಮ Azure AI ಮತ್ತು ಮೈಕ್ರೋಸಾಫ್ಟ್ 365 ಸೇವೆಯ ಮೂಲಕ ಇತ್ತೀಚಿನ ಎಲ್ಲಾ ವಿಂಡೋಸ್ ಕಂಪ್ಯೂಟರ್ನಲ್ಲೂ ಎಐ ಸಿಗುವಂತೆ ಮಾಡಿದ್ದಾರೆ. ಎಐ ಉದ್ಯಮದಲ್ಲಿ ಮೈಕ್ರೋಸಾಫ್ಟ್ ಮುಂಚೂಣಿಗೆ ಬಂದಿದ್ದು ಇವರ ನಾಯಕತ್ವದಲ್ಲೇ.
ಅರವಿಂದ್ ಶ್ರೀನಿವಾಸ್: Perplexity AI ಸಹ-ಸ್ಥಾಪಕರು ಮತ್ತು ಸಿಇಒ, ಆರವಿಂದ್ ಶ್ರೀನಿವಾಸ್, ಓಪನ್ ಎಐ, ಗೂಗಲ್ನಲ್ಲಿ ಕೆಲಸ ಮಾಡಿ ಈಗ ಗೂಗಲ್ಗೆ ಪ್ರತಿಸ್ಪರ್ಧಿ ಉತ್ಪನ್ನ ಕಟ್ಟುವಲ್ಲಿ ನಿರತರಾಗಿದ್ದಾರೆ. ಗೂಗಲ್ 'ಸರ್ಚ್ ಎಂಜಿನ್' ಆದರೆ, Perplexity ಎಐ 'ಆನ್ಸರ್ ಎಂಜಿನ್' ಎನ್ನುವುದು ಇವರ ವಾದ. ಎಐ ಎಲ್ಲರ ಬಳಕೆಗೆ ಸುಲಭವಾಗಿ ಲಭ್ಯವಾಗಬೇಕೆಂಬುದು ಇವರ ಅಭಿಲಾಷೆ.
ಕೆಲವು ವಿಶೇಷಗಳು
ELIZA - ಮೊದಲ ಚಾಟ್ಬಾಟ್
ಜಾನ್ ಮೆಕಾರ್ಥಿ - ಎಐ ತಂತ್ರಜ್ಞಾನದ ಜನಕ
1943 - ಮೊದಲ ಗಣಿತೀಯ ಮಾದರಿ ನಿರ್ಮಾಣ
2011 - ಮನುಷ್ಯನ ಸೋಲಿಸಿದ ಎಐ
GPT-2 -ಮೊದಲ ಅತ್ಯಾಧುನಿಕ LLM
DeepDream - ಮೊದಲ ಚಿತ್ರ & ವೀಡಿಯೊ ಜನರೇಟರ್
Claude 3.7 Sonnet, Grok 3 - ಅತಿ ಬುದ್ಧಿವಂತ ಎಐ ಮಾಡೆಲ್ಗಳು



