ಇದು ಸ್ಮಾರ್ಟ್ ಸಿಟಿಯಲ್ಲ, ಎಐ ನಿಯಂತ್ರಿಸುವ ಸಿಂಬಿಯಾಟಿಕ್ ಸಿಟಿ
ಎಐ ಅನಂತ ಅವತಾರ – ಭಾಗ 20
ಡಾ.ರಮೇಶ್ ನಿಂಬೆಮರದಳ್ಳಿ
ಈ ಲೇಖನವು ಪ್ರೊ. ಎಸ್.ಎಸ್. ಐಯ್ಯಂಗಾರ್ ಅವರ ಕಲ್ಪನೆಯಲ್ಲಿ ಭವಿಷ್ಯದಲ್ಲಿ ರೂಪುತಳೆಯುವ ಕನಸಿನ ನಗರವನ್ನು ತೆರೆದಿಡುತ್ತದೆ. ಅವರ ಕಲ್ಪನೆಯ ಪ್ರಕಾರ, ಭವಿಷ್ಯದಲ್ಲಿ ನಗರಗಳು ಕೇವಲ ಇಟ್ಟಿಗೆ ಮತ್ತು ಕಾಂಕ್ರೀಟ್ನಿಂದ ನಿರ್ಮಾಣಗೊಳ್ಳುವುದಿಲ್ಲ. ಬದಲಾಗಿ, ಅವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ನಿರ್ವಹಣೆಯಾಗುವ ಒಂದು ಜೀವವ್ಯವಸ್ಥೆಯಂತೆ ಕಾರ್ಯನಿರ್ವಹಿಸುತ್ತವೆ. ಇಲ್ಲಿ AI ತಂತ್ರಜ್ಞಾನವು ಮಾನವನ ಜೀವನದೊಂದಿಗೆ ಬೆರೆತು, ಒಂದು ಹೊಸ ಸಹಜೀವನವನ್ನು ಸೃಷ್ಟಿಸುತ್ತದೆ. ಹಸಿರು ಗೋಡೆಗಳಿಂದ ಆವೃತವಾದ ಕಟ್ಟಡಗಳಿಂದ ಹಿಡಿದು, ಸ್ವಯಂಚಾಲಿತವಾಗಿ ಚಲಿಸುವ ವಾಹನಗಳವರೆಗೆ, ಈ ನಗರವು ತಂತ್ರಜ್ಞಾನ ಮತ್ತು ಪ್ರಕೃತಿಯ ನಡುವಿನ ಅಂತರವನ್ನು ಅಳಿಸಿಹಾಕಿ, ಭವಿಷ್ಯದ ಬದುಕು ಹೇಗಿರಬಹುದು ಎಂಬುದನ್ನು ತೋರಿಸುತ್ತದೆ. ಅಂತಾರಾಷ್ಟ್ರೀಯ ಖ್ಯಾತಿಯ ಎಐ, ರೋಬಾಟಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿ ತಜ್ಞ ಪ್ರೊ. ಎಸ್.ಎಸ್. ಐಯ್ಯಂಗಾರ್ ಅವರ ಈ ಕಲ್ಪನೆಯು ಕೇವಲ ಒಂದು ನಗರದ ವಿನ್ಯಾಸವಲ್ಲ, ಬದಲಿಗೆ ಹೊಸ ಜೀವನಶೈಲಿಯ ನೀಲನಕ್ಷೆಯಾಗಿದೆ.
ಸಿಂಬಿಯಾಟಿಕ್ ಸಿಟಿ ಎಂಬ ಭವಿಷ್ಯದ ನಗರ
ಕಾಡೇ ನಗರವಾದ, ನಗರವೇ ಕಾಡಾದ ಅನುಭವ
ಕಟ್ಟಡದೊಳಗೇ ತಾಜಾ ಹಣ್ಣು-ತರಕಾರಿ ಕೃಷಿ
ಎಐ ನಿಯಂತ್ರಣದಲ್ಲಿ ಇಡೀ ನಗರ ವ್ಯವಸ್ಥೆ
ಅಗತ್ಯಕ್ಕೆ ತಕ್ಕಂತೆ ವಿಕಸನಗೊಳ್ಳುವ ಸಿಟಿ
ಟ್ರಾಫಿಕ್ ಇಲ್ಲ, ಎಲ್ಲವೂ ಸ್ವಯಂಚಾಲಿತ ಸಂಚಾರ
ಪರಿಸರದೊಂದಿಗೆ ಬೆಸೆದುಕೊಂಡ ಸಹಜೀವನ
ಸ್ಮಾರ್ಟ್ಸಿಟಿಗೂ ಮೀರಿದ ಹೊಸ ತಲೆಮಾರಿನ ನಗರ
ದೇಶದ ಮಹಾನಗರಗಳೆಂದರೆ ಕಾಂಕ್ರೀಟ್ ಕಾಡುಗಳು. ಹೆಸರಿನಲ್ಲಿ ಕಾಡು ಇದೆಯಾದರೂ ಅಲ್ಲಿ ಕಾಡಿನ ಯಾವ ಲಕ್ಷಣವೂ ಇರುವುದಿಲ್ಲ ಬದಲಿಎ ಬರೀ ಕಾಂಕ್ರೀಟ್ ಕಟ್ಟಡಗಳು. ಅಪರಿಚಿತರನ್ನು ತಬ್ಬಿಬ್ಬಾಗಿಸಿಬಿಡುವಂತೆ ಮಾಡುವ ಎಲ್ಲಿಂದ ಎಲ್ಲಿಗೋ ಕರೆದೊಯ್ಯುವ ರಸ್ತೆಗಳು. ಝಗಮಿಸುವ ಬೀದಿ ದೀಪಗಳು, ಕಣ್ಣು ಕುಕ್ಕುವ ಸೈನ್ ಬೋರ್ಡ್ಗಳು, ಹೆಜ್ಜೆ ಹೆಜ್ಜೆಗೊಂದು ಟ್ರಾಫಿಕ್ ಸಿಗ್ನಲ್ಗಳು, ತಲೆ ಎತ್ತಿ ನೋಡಿದರೆ ಇಂಟರ್ನೆಟ್, ಟಿವಿಯ ಕೇಬಲ್ಗಳ ಜಾಲ. ಕೆಲವು ಕಡೆ ಅಮೋಘ ಎನ್ನಿಸುವ ಜಾಗಗಳು, ಮತ್ತೆ ಕೆಲವು ಕಡೆ ಸ್ಲಮ್ಮುಗಳು, ಬೆಂಕಿಪೊಟ್ಟಣ ಜೋಡಿಸಿದಂತೆ ಕಟ್ಟಿದ ಮನೆಗಳು - ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಧುನಿಕ ನಗರಗಳು ಸ್ವರ್ಗ-ನರಕದ ಸಮ್ಮಿಲನ. ಆದರೂ ಬಹುತೇಕರಿಗೆ ಇವು ಆಪ್ಯಾಯಮಾನವೇನೂ ಅಲ್ಲ. ನೆಮ್ಮದಿಯ ಬದುಕು ಸಾಗಿಸುವ ಸುಂದರ ಜಾಗಗಳಂತೂ ಅಲ್ಲ. ಹೀಗಾಗಿಯೇ ನಗರ ಬದುಕು ಅನೇಕರಿಗೆ ಒಲ್ಲದ ಬದುಕು.
ಆದರೆ ಭವಿಷ್ಯದ ನಗರಗಳು ಹೀಗಲ್ಲ. ನಗರದಲ್ಲಿದ್ದೂ ಕಾಡಿನಲ್ಲಿದ್ದ ಅನುಭವ, ಮಹಾಸಿಟಿಯೇ ಆದರೂ ಹಳ್ಳಿಯ ವಾತಾವರಣ, ಎಲ್ಲವೂ ಅಚ್ಚುಕಟ್ಟು, ಒಪ್ಪ-ಓರಣ. ಅದು ಚದುರಿದ ಕಟ್ಟಡಗಳ ಬಿಡಿ ವ್ಯವಸ್ಥೆಯಾಗಿರದೆ ಇಡೀ ನಗರವೇ ಒಂದು ಜೀವವ್ಯವಸ್ಥೆಯಾಗಿರುತ್ತದೆ. ಸರಳವಾಗಿ ಅದು ಉಸಿರಾಡುವ ನಗರ. ಅಲ್ಲಿನ ಪ್ರತಿ ಕಟ್ಟಡ, ರಸ್ತೆ, ಬೀದಿ ದೀಪ, ಸಂಪರ್ಕ, ಸಂವಹನ ಎಲ್ಲವೂ ಆ ದೊಡ್ಡ ವ್ಯವಸ್ಥೆಯ ಭಾಗವೇ ಆಗಿರುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಈ ಎಲ್ಲವನ್ನೂ ಬೆಸೆದಿರುವ ಶಕ್ತಿಯಾಗಿರುತ್ತದೆ. ಇಲ್ಲಿನ ಪ್ರತಿ ಚಲನೆಯಲ್ಲಿಯೂ ಸಾಮರಸ್ಯವಿರುತ್ತದೆ. ಇದು ಭವಿಷ್ಯದಲ್ಲಿ ಜೀವತಳೆಯುವ ನಗರದ ಕಲ್ಪನೆ. ಮನುಷ್ಯ, ಪ್ರಾಣಿ-ಪಕ್ಷಿಗಳು ಅಷ್ಟೇ ಏಕೆ ಇಡೀ ಪ್ರಕೃತಿಯೊಂದಿಗೇ ಸಾವಯವ ಸಂಬಂಧ ಹೊಂದಿರುವ “ಸಿಂಬಿಯಾಟಿಕ್ ಸಿಟಿ”.
ಸಿಂಬಿಯಾಟಿಕ್ ಸಿಟಿ ಎಂಬ ಕಲ್ಪನೆ ಸ್ಮಾರ್ಟ್ ಸಿಟಿಗಿಂತ ಭಿನ್ನ. ‘ಸ್ಮಾರ್ಟ್ ಸಿಟಿ’ಯ ಕಲ್ಪನೆ ಈಗಾಗಲೇ ನಮ್ಮ ಮುಂದಿದ್ದು, ಕೆಲವು ನಗರಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಸ್ಮಾರ್ಟ್ ಸಿಟಿ ಎನ್ನುವುದು ಈಗಿರುವ ಮಹಾನಗರದ ಸುಧಾರಿತ ರೂಪವಷ್ಟೇ. ಅಲ್ಲಿ ವಾಹನ ಸಂಚಾರವನ್ನು ಸ್ಮಾರ್ಟ್ ಆಗಿ ನಿಭಾಯಿಸಲಾಗುತ್ತದೆ. ಕಡಿಮೆ ವಿದ್ಯುತ್ ಬಳಸುವಂತೆ ನಗರವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ತ್ಯಾಜ್ಯ ನಿರ್ವಹಣೆ ವ್ಯವಸ್ಥಿತವಾಗಿರುತ್ತದೆ. ಒಳಚರಂಡಿ ನಿರ್ವಹಣೆಯೂ ಉತ್ತಮವಾಗಿರುತ್ತದೆ. ಕಟ್ಟಡಗಳು ಕಿಷ್ಕಿಂದೆಯಂತಿರದೆ ಸಾವಕಾಶದಲ್ಲಿ ನಿರ್ಮಾಣಗೊಂಡಿರುತ್ತವೆ. ಆದರೆ ಸಿಂಬಿಯಾಟಿಕ್ ಸಿಟಿ ಎನ್ನುವ ಕಲ್ಪನೆ ಸ್ಮಾರ್ಟ್ ಸಿಟಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಯಾಕೆಂದರೆ, ಅದು ಇಂಟೆಲಿಜೆಂಟ್ ಸಿಟಿಯಾಗಿರುತ್ತದೆ.
ಕಟ್ಟಡದಲ್ಲೇ ಹಣ್ಣು, ತರಕಾರಿ
ಭವಿಷ್ಯದ ನಗರಗಳಲ್ಲಿ ಕಟ್ಟಡಗಳೆಂದರೆ ಕಾಂಕ್ರೀಟ್ನಿಂದ ನಿರ್ಮಾಣಗೊಂಡಿರಬೇಕಿಲ್ಲ. ಹೊಸದಾಗಿ ಅನ್ವೇಷಣೆಗೊಳ್ಳುವ, ಹೆಚ್ಚು ಶಕ್ತಿಶಾಲಿಯಾದ ವಸ್ತುಗಳಿಂದ ನಿರ್ಮಾಣಗೊಳ್ಳುತ್ತವೆ. ಕಟ್ಟಡದ ವಿನ್ಯಾಸಗಳೂ ಈಗಿನ ವಿನ್ಯಾಸಕ್ಕಿಂತ ಪೂರ್ತಿ ಭಿನ್ನ. ಆ ಕಟ್ಟಡವೇ ಒಂದು ಕಾಡಿನಂತೆ ಕಾಣುತ್ತದೆ. ಗಿಡ-ಮರಗಳು ಕಟ್ಟಡಲ್ಲೇ ಜೀವ ತಳೆಯುತ್ತವೆ. ಹಣ್ಣು, ತರಕಾರಿಗಳನ್ನೂ ಈ ಕಟ್ಟಡದಲ್ಲಿಯೇ ಬೆಳೆಯಲಾಗುತ್ತದೆ. ನೆಲದ ಬೆಂಬಲವೂ ಬೇಡ, ಮಣ್ಣಿನ ಅಗತ್ಯವೂ ಇರುವುದಿಲ್ಲ. ಒಂದಲ್ಲ ಹತ್ತಾರು ಕಟ್ಟಡಗಳಲ್ಲಿ ಈ ವರ್ಟಿಕಲ್ ಕೃಷಿ ನಡೆಯುತ್ತದೆ. ಇದಕ್ಕೆ ಬೇಕಿರುವ ನೀರು, ವಾತಾವರಣ, ಪೋಷಕಾಂಶ ಇತ್ಯಾದಿಗಳನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೇ ನಿರ್ವಹಿಸುತ್ತದೆ. ಇಲ್ಲಿ ಯಾವುದೇ ರಾಸಾಯನಿಕ ಬಳಕೆಯಾಗುವುದಿಲ್ಲ. ಹೀಗೆ ಪ್ರಾಕೃತಿಕವಾಗಿಯೇ ಹಣ್ಣು, ತರಕಾರಿಗಳನ್ನು ಬೆಳೆದು ಅವು ತಾಜಾ ಇರುವಂತೆಯೇ ಜನರಿಗೆ ತಲುಪಿಸಲಾಗುತ್ತದೆ. ಇಡೀ ನಗರಕ್ಕೆ ಬೇಕಾದ ಹಣ್ಣು-ತರಕಾರಿಗಳು ಇಲ್ಲಿಂದಲೇ ಸರಬರಜಾಗುತ್ತವೆ. ಇಂಥ ಜೀವಂತ ಕಟ್ಟಡಗಳು ಒಳಗಿರುವ ವಾತಾವರಣನ್ನಷ್ಟೇ ತಂಪಾಗಿ ಇಡುವುದಿಲ್ಲ ಬದಲಿಗೆ ಇಡೀ ನಗರವನ್ನೇ ತಂಪಾಗಿಡುತ್ತವೆ.
ಪ್ರತಿ ಹೆಜ್ಜೆಯಲ್ಲೂ ಶಕ್ತಿ
ರಾತ್ರಿಯಾಗುತ್ತಿದ್ದಂತೆ ಬೆಳಗುವುದು ಮಹಾನಗರದ ಲಕ್ಷಣ. ಎಷ್ಟೋ ಬಾರಿ ಆ ಬೆಳಕು ಹಿತ ಎನ್ನುವುದಕ್ಕಿಂತ ಕಣ್ಣಿಗೆ ಕುಕ್ಕುವಂತಿರುತ್ತದೆ. ಆದರೆ ಭವಿಷ್ಯದ ಮಹಾನಗರದ ಬೆಳಕು ಕಣ್ಣಿಗೆ ಹಿತಕರವಾಗಿರುತ್ತದೆ, ಆರೋಗ್ಯಕರವಾಗಿರುತ್ತದೆ. ಇಲ್ಲಿ ಬೀದಿ ದೀಪಗಳು ಮಿನುಗುವುದು ಮಾತ್ರವಲ್ಲದೆ ರಸ್ತೆಗಳೂ ಬೆಳಗುತ್ತವೆ. ನಾವು ಇಡುವ ಪ್ರತಿ ಹೆಜ್ಜೆಯೂ ವಿದ್ಯುತ್ ಉತ್ಪಾದಿಸುತ್ತದೆ. ನಾವು ನಡೆಯುವಾಗ ಪಾದಗಳ ಕೆಳಗಿರುವ ನೆಲವು ಪ್ರತಿ ಹೆಜ್ಜೆಗೂ ಪ್ರತಿಕ್ರಿಯಿಸುತ್ತದೆ. ಪ್ರತಿ ಹೆಜ್ಜೆಯಲ್ಲೂ ಶಕ್ತಿ ಪ್ರವಹಿಸುತ್ತದೆ. ಎಂದರೆ ಹೆಜ್ಜೆಯ ಚಲನೆಯೇ ವಿದ್ಯುತ್ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ವಿಶೇಷವಾಗಿ ರೂಪಿಸಲಾದ ಟೈಲ್ಗಳು ಜನರ ಓಡಾಟದಿಂದ ಉಂಟಾಗುವ ಚಲನೆಯನ್ನು ವಿದ್ಯುತ್ ಆಗಿ ಪರಿವರ್ತಿಸಿ ನಗರದ ಸೆಂಟ್ರಲ್ ಗ್ರಿಡ್ಗೆ ರವಾನಿಸುತ್ತವೆ. ಇದು ಭವಿಷ್ಯದ ನಗರದ ಕ್ರಿಯಾಶೀಲ ವಿನ್ಯಾಸ. ಜನರ ಚಲನೆಯೇ ನಗರವನ್ನು ಬೆಳಗಿಸುತ್ತದೆ. ನಗರದ ಶಕ್ತಿ ಜನರನ್ನು ಮುನ್ನಡೆಸುತ್ತದೆ. ಇಂಥ ಅವಿನಾಭಾವದ ಸಂಬಂಧ ಜನರು ಮತ್ತು ಅವರ ಜೀವತಾಣದ ನಡುವೆ ಇರುತ್ತದೆ.
ನಗರದ ವಿವಿಧ ಭಾಗಗಳಲ್ಲಿ ಇರುವ ಕಮ್ಯುನಿಟಿ ಪ್ಲಾಜಾಗಳು ಸಾಂಸ್ಕೃತಿಕ ತಾಣಗಳಾಗಿರುತ್ತವೆ. ಇಲ್ಲಿ ನಮ್ಮ ಪಾರಂಪರಿಕ ಕಲೆಗಳ ಜೊತೆಗೆ ನಮಗೆ ಗೊತ್ತಿಲ್ಲದ ಭವಿಷ್ಯದ ಕಲೆಗಳೂ ಅನಾವರಣಗೊಳ್ಳುತ್ತವೆ. ಹಾಲೋಗ್ರಾಫಿಕ್ ಜಗತ್ತು ತೆರೆದುಕೊಳ್ಳುತ್ತದೆ. ಹೊಸ ಹೊಸ ಸಿಮ್ಯುಲೇಟೆಡ್ ಜಗತ್ತು ಜೀವತಳೆಯುತ್ತದೆ. ಅದು ಕೇವಲ ಸಿನಿಮಾದಂತಲ್ಲ. ಬದಲು, 3ಡಿ, 4ಡಿಗಳಲ್ಲಿ ತೆರೆದುಕೊಳ್ಳುವ ಅನುಭವ ಲೋಕ. ಎಂದರೆ ಎಲ್ಲೋ ಇರುವ ಜಗತ್ತು ನಮ್ಮೆದುರು ಸಿಮ್ಯುಲೇಟೆಡ್ ರೂಪದಲ್ಲಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಾವೂ ಕೂಡ ನಮ್ಮ ವರ್ಚುಯಲ್ ಅವತಾರಗಳ ಮೂಲಕ ಅನುಭವ ಪಡೆಯುತ್ತೇವೆ.
ಸರಾಗ ಸಂಚಾರಕ್ಕೆ ಆಕಾಶಮಾರ್ಗಗಳು
ನಗರದ ಹೆಚ್ಚಿನ ಸಂಚಾರ ಆಕಾಶಮಾರ್ಗದಲ್ಲೇ ನಡೆಯುತ್ತದೆ. ವಾಹನ ದಟ್ಟಣೆಯ ಕಿರಿಕಿರಿ ಇಲ್ಲದ ಸುಂದರ ರಸ್ತೆಗಳು ಜನರ ಕಾಲ್ನಡಿಗೆಯ ಓಡಾಟಕ್ಕೆ ಮುಕ್ತವಾಗಿರುತ್ತವೆ. ಆಕಾಶದಲ್ಲಿ ಕಾಣುವ ಹೆದ್ದಾರಿಗಳಲ್ಲಿ ಸ್ವಾಯತ್ತವಾಗಿ ಚಲಿಸುವ ಗ್ಲೈಡರ್ಗಳು ‘ಅಡಾಪ್ಟೀವ್ ನ್ಯೂರಲ್ ನ್ಯಾವಿಗೇಷನ್ ಸಿಸ್ಟಮ್’ ಎಂಬ ವ್ಯವಸ್ಥೆಯ ಅಧೀನದಲ್ಲಿ ಜನರು ಮತ್ತು ಸರಕುಗಳನ್ನು ಸಾಗಿಸುತ್ತವೆ. ಈ ಸ್ಕೈಲೈನ್ಗಳು ನಗರದ ರಕ್ತನಾಳಗಳಂತೆ ಕಾರ್ಯನಿರ್ವಹಿಸುತ್ತವೆ. ನೈಜ ಸಮಯದಲ್ಲಿ ನಗರದ ಹವಾಮಾನ, ಗಾಳಿಯ ವೇಗ ಮತ್ತು ಪ್ರಯಾಣಿಕರ ದಟ್ಟಣೆ ಆಧರಿಸಿ ಅಗತ್ಯಕ್ಕೆ ತಕ್ಕಂತೆ ರಿಯಲ್ಟೈಮ್ನಲ್ಲಿ ಬದಲಾಗುತ್ತಿರುತ್ತವೆ. ಹೀಗಾಗಿ ಎಲ್ಲಿಯೂ ಟ್ರಾಫಿಕ್ನ ಕಿರಿಕಿರಿ ಇರುವುದಿಲ್ಲ. ಎಲ್ಲವನ್ನೂ ಎಐನ ಕೇಂದ್ರ ವ್ಯವಸ್ಥೆ ನಿರ್ದೇಶಿಸುತ್ತಾ ನಿರ್ವಹಿಸುತ್ತದೆ. ನಗರದಲ್ಲಿರುವ ಯಾವುದೂ ಈ ಕೇಂದ್ರ ವ್ಯವಸ್ಥೆಯ ಆಣತಿ ಮೀರಿ ವರ್ತಿಸುವುದಿಲ್ಲ. ಸೆಂಟ್ರಲ್ ಕಮ್ಯಾಂಡ್ ಸಿಸ್ಟಮ್ ಎನ್ನುವುದು ಯಾರೋ ದೊಡ್ಡ ದೊಡ್ಡ ಅಧಿಕಾರಿಗಳು ಅಥವಾ ಪರಿಣಿತರು ಕುಳಿತು ನಿರ್ವಹಿಸುವ ವ್ಯವಸ್ಥೆ ಅಲ್ಲ. ಅದೂ ಪೂರ್ತಿಯಾಗಿ ಎಐನಿಂದ ನಿರ್ವಹಿಸುವ ಮತ್ತು ನಿಯಂತ್ರಿಸಲ್ಪಡುವ ವ್ಯವಸ್ಥೆ. ಅಲ್ಲಿ ಕಮ್ಯಾಂಡರ್ ಜಾಗದಲ್ಲಿ ಒಂದು ದೊಡ್ಡ ಎಐ ವ್ಯವಸ್ಥೆ ಇದ್ದರೆ ಅದರ ಆದೇಶ, ಸೂಚನೆಗಳನ್ನು ಪಾಲಿಸಲು ಅಧೀನ ಎಐಗಳಿರುತ್ತವೆ. ಅವು ಯಂತ್ರಗಳು, ರೋಬಾಟ್ಗಳು ಮತ್ತು ಸಾಫ್ಟ್ವೇರ್ ಯಾವುದೇ ರೂಪದಲ್ಲಿರಬಹುದು.
ನಮ್ಮ ಈಗಿನ ನಗರಗಳಲ್ಲಿ ಇರುವಂತೆ ಅಲ್ಲಿ ಯಾವುದೇ ಟ್ರಾಫಿಕ್ ಸಿಗ್ನಲ್ಗಳು, ಸಂಚಾರವನ್ನು ನಿಯಂತ್ರಿಸುವ ಟ್ರಾಫಿಕ್ ಪೊಲೀಸರು ಇರುವುದಿಲ್ಲ. ನಗರದ ಬಹುತೇಕ ಸಂಚಾರ ಆಕಾಶದಲ್ಲೇ ನಡೆಯುತ್ತದೆ. ಹೀಗಾಗಿ ವಿಮಾನ ಮಾರ್ಗದ ಹಾಗೆ ನಗರಕ್ಕೇ ಸೀಮಿತವಾಗಿ ವಿಶೇಷ ಸಂಚಾರ ಮಾರ್ಗವಿರುತ್ತದೆ. ಈ ನಿಗದಿತ ಮಾರ್ಗದಲ್ಲಿ ಗ್ಲೈಡರ್ಗಳು, ಡ್ರೋಣ್ಗಳು, ಪರ್ಸನಲ್ ಮೊಬಿಲಿಟಿ ವಾಹನಗಳು ಹಾರಾಡುತ್ತವೆ. ಈ ಮಾರ್ಗವನ್ನು ಎಐ ನಿಯಂತ್ರಿಸುತ್ತಿರುತ್ತದೆ.
ಸಂಶೋಧಕರಿಗೆ ವಿಫುಲ ಅವಕಾಶ
ಭವಿಷ್ಯದ ನಗರಗಳು ಅನ್ವೇಷಕರಿಗೆ ಹೇಳಿ ಮಾಡಿಸಿದಂತಿರುತ್ತವೆ. ಕ್ರಿಯಾಶೀಲ ವ್ಯಕ್ತಿಗಳು ಮತ್ತು ವಿಜ್ಞಾನಿಗಳಿಗೆ ಸಂಶೋಧನೆಗೆಂದೇ ಎಐ ಸಹಕಾರದಲ್ಲಿ ನಡೆಯುವ ಅತ್ಯಾಧುನಿಕ ಲ್ಯಾಬೊರೇಟರಿಗಳಿರುತ್ತವೆ. ಅಲ್ಲಿ ಮನುಷ್ಯರ ಜೊತೆಗೆ ರೋಬಾಟ್ಗಳೂ ಸಂಶೋಧನೆಯಲ್ಲಿ ತೊಡಗಿರುತ್ತವೆ. ನಗರದಾದ್ಯಂತ ಇರುವ ನೂರಾರು ರೀಸರ್ಚ್ ಲ್ಯಾಬ್ಗಳ ನಡುವೆ ನಿರಂತರ ಸಂಪರ್ಕವಿರುತ್ತದೆ. ವಿವಿಧ ಕ್ಷೇತ್ರಗಳು, ವಿಷಯಗಳ ನಡುವೆ ಅಂತರ್ಶಿಸ್ತೀಯ ಅಧ್ಯಯನಕ್ಕೆ ಅವಕಾಶವಿರುತ್ತದೆ. ಎಂದರೆ, ಇಲ್ಲಿ ನಡೆಯುವ ಯಾವ ಸಂಶೋಧನೆಯೂ ತನ್ನಿಂತಾನೇ ಪ್ರತ್ಯೇಕವಲ್ಲ ಯಾವುದೋ ಬೃಹತ್ ಸಂಶೋಧನೆಯ ಭಾಗವೇ ಆಗಿರುತ್ತದೆ. ನಗರದ ಜನರು ಎದುರಿಸುವ ಯಾವುದೇ ಸಮಸ್ಯೆ ಸಂಶೋಧನೆಯ ರೂಪ ಪಡೆದು ಅದಕ್ಕೆ ಪರಿಹಾರವೂ ದೊರೆಯುವ ವ್ಯವಸ್ಥೆ ಇರುತ್ತದೆ.
ಒಟ್ಟಾರೆಯಾಗಿ ಭವಿಷ್ಯದ ನಗರ ನಿಶ್ಚಿತ ಸಮಸ್ಯೆಗಳೊಂದಿಗೆ ನಿಗದಿತ ನಮೂನೆಯಲ್ಲಿರದೆ ಕಾಲಕ್ಕೆ ತಕ್ಕಂತೆ ತನ್ನಿಂತಾನೇ ಪರಿವರ್ತನೆಗೊಳ್ಳುವ, ಜನರ ಅಗತ್ಯಗಳಿಗೆ ತಕ್ಕಂತೆ ಮಾರ್ಪಾಡಾಗುವ ಒಂದು ಜೀವಂತ ವ್ಯವಸ್ಥೆಯಾಗಿರುತ್ತದೆ. ಎಐ ತಂತ್ರಜ್ಞಾನ ಈ ಜೀವಂತ ವ್ಯವಸ್ಥೆಯ ಹೃದಯವಾಗಿರುತ್ತದೆ. ಎಂದೂ ಮುಗಿಯದ ಇಂಧನ ಮೂಲಗಳಿಂದ ವಿಫುಲ ವಿದ್ಯುತ್, ಎಲ್ಲೆಲ್ಲೂ ಹಚ್ಚ ಹಸಿರು, ಶುದ್ದ ಗಾಳಿಯಿಂದ ತುಂಬಿರುತ್ತದೆ. ಜನರ ವಿಶ್ರಾಂತಿಗೆ, ಮಕ್ಕಳ ಆಟೋಟಕ್ಕೆ ಸಾಕಷ್ಟು ವಿಶಾಲ ಜಾಗಗಳಿಂದ ಕೂಡಿರುತ್ತದೆ.
ರೋಗ ಬರುವ ಮೊದಲೇ ಚಿಕಿತ್ಸೆ
ಸಿಂಬಿಯಾಟಿಕ್ ನಗರದಲ್ಲಿ ಅಪಘಾಗಳು ವಿರಳ. ಆದರೂ ಅಲ್ಲಲ್ಲಿ ನಡೆಯುವ ಅಫಘಾತಗಳು ತನ್ನಿಂತಾನೇ ಕೇಂದ್ರ ವ್ಯವಸ್ಥೆಗೆ ವರದಿಯಾಗುತ್ತವೆ. ತಕ್ಷಣವೇ ನೆರವು ಧಾವಿಸಿ ಬರುತ್ತದೆ. ಮಿನಿ ಆಸ್ಪತ್ರೆಯಂತಿರುವ ಏರ್ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತದೆ. ಬಳಿಕ ಗಾಯದ ತೀವ್ರತೆ ಆಧರಿಸಿ ಸೂಕ್ತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಗಾಯಾಳುವನ್ನು ಸಾಗಿಸಲಾಗುತ್ತದೆ. ರೋಬಾಟ್ ವೈದ್ಯರು ಚಿಕಿತ್ಸೆಗೆ ಸಜ್ಜಾಗಿರುತ್ತಾರೆ. ಸರ್ಜರಿ ಸಹಿತ ಯಾವುದೇ ಚಿಕಿತ್ಸೆಯನ್ನು ತಡವಿಲ್ಲದೆ ಮಾಡಿ ಮುಗಿಸುತ್ತಾರೆ. ಆಸ್ಪತ್ರೆಗಳು ಅತ್ಯಾಧುನಿಕ ಚಿಕಿತ್ಸೆಗಳಿಂದ ಸಜ್ಜಾಗಿರುತ್ತವೆ. ಎಲ್ಲಾ ಅಗತ್ಯ ಚಿಕಿತ್ಸೆಗಳೂ ಲಭ್ಯ ಇರುವುದರಿಂದ ಬೇರೆಲ್ಲಗೂ ಗಾಯಾಳುವನ್ನು ರವಾನಿಸುವ ಅಗತ್ಯವೇ ಇರುವುದಿಲ್ಲ. ಹೀಗಾಗಿ ಅಪಘಾತ, ಅನಾರೋಗ್ಯದ ಕಾರಣಕ್ಕೆ ಸಾಯುವವರ ಸಂಖ್ಯೆ ತುಂಬಾ ವಿರಳವಾಗಿರುತ್ತದೆ. ಪ್ರತಿಯೊಬ್ಬರೂ ಧರಿಸಿರುವ ಟ್ಯಾಟೂ ರೂಪದ ವೇರೆಬಲ್ ಸಾಧನಗಳು ಆರೋಗ್ಯದ ಸ್ಥಿತಿಗತಿಯನ್ನು ಪ್ರತಿ ಕ್ಷಣ ವರದ ಮಾಡುತ್ತಿರುತ್ತವೆ. ಹೀಗಾಗಿ ಹೃದಯಾಘಾತವೂ ಸೇರಿದಂತೆ ಯಾವುದೇ ಖಾಯಿಲೆ ಅಥವಾ ಅನಾರೋಗ್ಯ ಮೊದಲೇ ತಿಳಿದಿರುತ್ತದೆ. ಹೀಗಾಗಿ ರೋಗ ಬರುವ ಮೊದಲೇ ಚಿಕಿತ್ಸೆ ಪಡೆಯಬಹುದು.





