ಕಾಮೆಟ್ ಕೇವಲ ಬ್ರೌಸರ್ ಅಲ್ಲ, ನಿಮ್ಮ ಏಜೆಂಟ್!
ಗೂಗಲ್ ಸರ್ಚ್ಗೇ ಸಡ್ಡು, ಕ್ರೋಮ್ ಆದಿಪತ್ಯ ಮುರಿಯುವ ಸೂಚನೆ
ದಶಕಗಳಿಂದ, ವೆಬ್ ಬ್ರೌಸರ್ಗಳು ಇಂಟರ್ನೆಟ್ಗೆ ನಮ್ಮ ಗೇಟ್ವೇ ಆಗಿ ಕಾರ್ಯನಿರ್ವಹಿಸುತ್ತಿವೆ. ನಮಗೆ ಮಾಹಿತಿ ಮತ್ತು ಪರಿಕರಗಳನ್ನು ಗುಡ್ಡೆ ಹಾಕುತ್ತಾ ಕಸದಲ್ಲಿ ರಸ ಹುಡುಕುವ ಕೆಲಸವನ್ನು ನಮಗೇ ಬಿಟ್ಟಿವೆ. ನೆಟ್ಸ್ಕೇಪ್ನಿಂದ ಕ್ರೋಮ್ವರೆಗೆ ವಿಕಸನಗೊಂಡಿರುವ ಬ್ರೌಸರ್ಗಳು, ಹೆಚ್ಚು ವೇಗವಾಗಿವೆ, ಮಾಹಿತಿಯನ್ನು ಆದಷ್ಟೂ ಅಚ್ಚುಕಟ್ಟಾಗಿ ಒದಗಿಸುತ್ತಿವೆ ಮತ್ತು ವಿವಿಧ ಫೀಚರ್ಗಳಿಂದ ಸಮೃದ್ಧವಾಗಿವೆ. ಆದರೆ ಅವೆಲ್ಲಾ ಮೂಲಭೂತವಾಗಿ ಒಂದೇ ತೆರನಾಗಿವೆ. ಎಂದರೆ, ಮೂಲಭೂತವಾಗಿ ಹೆಚ್ಚೇನೂ ಪರಿವರ್ತನೆಯಾಗಿಲ್ಲ. ನಾವೇ ಹುಡುಕುತ್ತೇವೆ, ನಾವೇ ಕ್ಲಿಕ್ ಮಾಡುತ್ತೇವೆ ಮತ್ತು ನಾವೇ ನಿರ್ಧಾರ ಕೈಗೊಂಡು ನಮ್ಮ ಮಾಹಿತಿಯ ಮೇಲೆ ಕೆಲಸ ಮಾಡುತ್ತೇವೆ.
ಆದರೆ ಅದೆಲ್ಲವೂ ಈಗ ಬದಲಾಗಿದೆ. ಪರ್ಪ್ಲೆಕ್ಸಿಟಿ ಎಂಬ ಭಾರತದ ಎಐ ಕಂಪನಿ AI-ಚಾಲಿತ ಏಜೆಂಟ್ ಬ್ರೌಸರ್ “ಕಾಮೆಟ್” ಅನ್ನು ಸರ್ಚ್ ಎಂಜಿನ್ ಮಾರುಕಟ್ಟೆಗೆ ಅಪ್ಪಳಿಸಿದೆ. ಕಾಮೆಟ್ ಸಾಂಪ್ರದಾಯಿಕ ಬ್ರೌಸರ್ಗಳಂತಲ್ಲ. ಕಾಮೆಟ್ ಕೇವಲ ವೆಬ್ ಅನ್ನು ಬ್ರೌಸ್ ಮಾಡುವುದಿಲ್ಲ. ಇದು ನಿಮ್ಮ ಉದ್ದೇಶವನ್ನು ಅರ್ಥಮಾಡಿಕೊಳ್ಳುತ್ತದೆ, ಕೆಲಸಗಳನ್ನು ಕಾರ್ಯಗತಗೊಳಿಸುತ್ತದೆ ಮತ್ತು ಡಿಜಿಟಲ್ ಸಹಾಯಕನಂತೆ ನಿಮಗೆ ಸಹಾಯ ಮಾಡುತ್ತದೆ. ಇದು ವೆಬ್ಸರ್ಚ್ ಅನುಭವದ ನೈಸರ್ಗಿಕ ವಿಕಸನವಾಗಿದೆ. ಬಹುಶಃ ಇದು ಏಜೆಂಟ್ ಬ್ರೌಸರ್ ಎಂಬ ಹೊಸ ಯುಗದ ಆರಂಭವನ್ನೂ ಸೂಚಿಸುತ್ತಿದೆ. ಮುಂದೆ ಬರುವ ಯಾವುದೇ ಬ್ರೌಸರ್ ಏಜೆಂಟಿಕ್ ಸಾಮರ್ಥ್ಯವನ್ನು ಹೊಂದಿರುತ್ತವೆ.
ಕಾಮೆಟ್, ನಮ್ಮ ಕೋ-ಪೈಲಟ್
ಕಾಮೆಟ್ ಎನ್ನುವುದು AI ನಿಂದ ಶಕ್ತಿ ಪಡೆಯುವ ಕ್ರೋಮಿಯಂ-ಆಧಾರಿತ ಬ್ರೌಸರ್. ಇದು ನಿಮ್ಮ ಪರವಾಗಿ ಹುಡುಕುವ, ಸಾರಾಂಶೀಕರಿಸುವ, ತಾರ್ಕಿಕಗೊಳಿಸುವ ಮತ್ತು ಕೆಸಲಗಳನ್ನು ಸ್ವಯಂ ನಿರ್ವಹಿಸುವ ಸಾಮರ್ಥ್ಯವಿರುವ ಸ್ಮಾರ್ಟ್ ಸೈಡ್ಬಾರ್ ಸಹಾಯಕವನ್ನು ಹೊಂದಿದೆ. ಕ್ರೋಮ್ ಅಥವಾ ಸಫಾರಿ ಬ್ರೌಸರ್ಗಳು ನ್ಯಾವಿಗೇಟರ್ಗಳಂತೆ ಕಾರ್ಯನಿರ್ವಹಿಸಿದರೆ ಕಾಮೆಟ್ ತಾನು ಕೋ-ಪೈಲಟ್ನಂತೆ ಕೆಲಸ ಮಾಡುತ್ತದೆ.
ಪ್ರಮುಖ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳು
1. ಸೈಡ್ಬಾರ್ನಲ್ಲಿ AI ಸಹಾಯಕ
ಯಾವಾಗಲೂ ಪ್ರವೇಶಿಸಬಹುದಾದ, ಪ್ರಶ್ನೆಗಳಿಗೆ ಉತ್ತರಿಸಲು, ವಿಷಯವನ್ನು ಸಂಕ್ಷೇಪಿಸಲು ಅಥವಾ ನಾವು ಸೂಚಿಸಿದ ಕೆಲಸಗಳನ್ನು ಕಾರ್ಯಗತಗೊಳಿಸಲು ಸಿದ್ಧವಾಗಿರುವ 24/7 ವೈಯಕ್ತಿಕ ಸಹಾಯಕನಂತೆ ಈ ಸೈಡ್ಬಾರ್ ಕಾರ್ಯನಿರ್ವಹಿಸುತ್ತದೆ.
2. ಟಾಸ್ಕ್ ಆಟೊಮೇಷನ್
ಬಸ್, ರೈಲು, ವಿಮಾನಗಳ ಟಿಕೆಟ್ಗಳನ್ನು ಬುಕ್ ಮಾಡುವುದು, ರೆಸ್ಟೋರೆಂಟ್ಗಳಲ್ಲಿ ಸೀಟುಗಳನ್ನು ಕಾಯ್ದಿರಿಸುವುದರಿಂದ ಹಿಡಿದು ಇಮೇಲ್ಗಳನ್ನು ಡ್ರಾಫ್ಟ್ ಮಾಡುವವರೆಗೆ ಕಾಮೆಟ್ ಹಲವು ಕೆಲಸಗಳನ್ನು ಆಟೊಮೇಟ್ ಮಾಡುತ್ತದೆ ಎಂದರೆ ನಮಗಾಗಿ ತಾನೇ ನಿರ್ವಹಿಸುತ್ತದೆ. ಅಗತ್ಯವಾದ ವೆಬ್ಸೈಟ್ಗಳು, ಅಪ್ಲಿಕೇಶನ್ಗಳನ್ನು ತೆರೆದು ತಾನೇ ಈ ಕೆಲಸ ಮಾಡುತ್ತದೆ.
3. ಸ್ಮಾರ್ಟ್ ಟ್ಯಾಬ್ ನಿರ್ವಹಣೆ
ಎಷ್ಟೋ ಬಾರಿ ನಾವು ಹತ್ತಾರು ಟ್ಯಾಬ್ಗಳನ್ನು ತೆರೆದುಕೊಂಡು ಕೆಲಸ ಮಾಡುತ್ತೇವೆ. ಅವೇ ಕೆಲಸವನ್ನು ಗೋಜಲುಗೊಳಿಸಿಬಿಡುfತವೆ. ಆದರೆ, ಕಾಮೆಟ್ ಇಂಥ ಗೋಜಲು ಟ್ಯಾಬ್ಗಳನ್ನು ಕ್ರಮಬದ್ಧವಾಗಿ ಜೋಡಿಸಿ ಕೆಲಸವನ್ನು ಸುಲಭಗೊಳಿಸುತ್ತದೆ.
ಉದಾಹರಣೆಗೆ ನೀವು ಕಾಮೆಟ್ಗೆ ಹೀಗೆ ಸೂಚನೆ ಕೊಡಿ.
"ಎಲ್ಲಾ ನಕಲು ಟ್ಯಾಬ್ಗಳನ್ನು ಮುಚ್ಚು."
"ನನ್ನ ಯೋಜನೆಗೆ ಸಂಬಂಧಿಸಿದ ಟ್ಯಾಬ್ಗಳನ್ನು ಮಾತ್ರ ಉಳಿಸಿ, ಉಳಿದವುಗಳನ್ನು ಮುಚ್ಚು."
4. ವೆಬ್ ಪುಟಗಳನ್ನು ಓದುವುದಲ್ಲ, ಅವುಗಳೊಂದಿಗೆ ಮಾತನಾಡಿ
ಈವರೆಗೆ ನಾವು ವೆಬ್ಸೈಟ್ಗಳೊಂದಿಗೆ ವ್ಯವಹರಿಸುತ್ತಿದ್ದ ಬಗೆಯೇ ಬೇರೆ. ಆದರೆ ಕಾಮೆಟ್ನಲ್ಲಿ ಅದು ಪೂರ್ತಿ ರೂಪಾಂತರಗೊಂಡಿದೆ. ನೀವು ಭೇಟಿ ಕೊಟ್ಟಿರುವ ವೆಬ್ಸೈಟ್ನಲ್ಲಿ ಯಾವುದೇ ವಿಚಾರವಿವರಲಿ ಅದರ ಬಗ್ಗೆ ನೀವು ಯಾವು ಪ್ರಶ್ನೆಯನ್ನು ಕೇಳಬಹುದು. ನಿಮಗೆ ಪ್ರಶ್ನೆ ಕೇಳಬೇಕಿಂದಿರುವ ಭಾಗವನ್ನು ಹೈಲೈಟ್ ಮಾಡಿ ಅದರ ಕುರಿತೇ ಪ್ರಶ್ನೆ ಕೇಳಬಹುದು. ಒಂದು ನ್ಯೂಸ್ ವೆಬ್ಸೈಟ್ಗೆ ಹೋಗಿ ಸುದ್ದಿಯನ್ನು ಸಂಕ್ಷೇಪಿಸುವಂತೆ ಕೇಳಬಹುದು, ಅದರ ಹಿನ್ನೆಲೆ ಕೇಳಬಹುದ, ಅದೇ ತೆರೆನಾದ ಎಲ್ಲಾ ಸುದ್ದಿಗಳನ್ನು ಒಗ್ಗೂಡಿಸಿ ವಿಶ್ಲೇಷಿಸುವಂತೆ ಕೇಳಬಹುದು. ಅದಕ್ಕಿಂತ ಅದ್ಭುತ ಎಂದರೆ ಒಂದು ವೆಬ್ಪೇಜ್ನಲ್ಲಿರುವ ಯಾವುದೇ ಮಾಹಿತಿಯನ್ನು ಹೆಕ್ಕಿ ತೆಗೆಯಲು ಹೇಳಬಹುದು. ಉದಾಹರಣೆಗೆ ಜಿಎಸ್ಟಿಯಿಂದ ಏರಿಕೆ ಮತ್ತು ಇಳಿಕೆಯಾಗುತ್ತಿರುವ ವಸ್ತುಗಳ ಪಟ್ಟಿಯನ್ನು ಒಂದು ವೆಬ್ಸೈಟ್ನಲ್ಲಿ ಪ್ರಕಟಿಸಿಲಾಗಿದ್ದರೆ, ಅದರಲ್ಲಿ ಕೇವಲ ಇಳಿಕೆಯಾಗುತ್ತಿರುವ ವಸ್ತುಗಳ ವಿವರನ್ನು ಹೆಕ್ಕಿ ತೆಗೆಯುವಂತೆ ಕಾಮೆಟ್ಗೆ ಸೂಚನೆ ನೀಡಬಹುದು.
5. ಇಮೇಲ್, ಕ್ಯಾಲೆಂಡರ್ ಕೆಲಸವನ್ನು ಒಪ್ಪಿಸಿ
ನಮ್ಮ Gmail ಮತ್ತು ಕ್ಯಾಲೆಂಡರ್ಗಳನ್ನು ಕಾಮೆಟ್ಗೆ ಸಂಪರ್ಕಿಸಿದಾಗ ಅದ್ಭುತವೇ ನಡೆಯುತ್ತದೆ. ನಮ್ಮ ಇಮೇಲ್ ಅನ್ನು ಕಾಮೆಟ್ ತಾನೇ ನಿರ್ವಹಿಸುತ್ತದೆ. ಹೊಸ ಇಮೇಲ್ ಬಂದರೆ ನಮಗೆ ತಿಳಿಸುವುದು, ಅವರಿಗೆ ಪ್ರತಿಕ್ರಿಯೆ ನೀಡುವುದು, ಹೊಸಬರಿಗೆ ಇಮೇಲ್ ಕಳಿಸಲು ತಿಳಿಸಿದರೆ ಸಾಕು. ಮುಂದಿನ ಕೆಲಸವನ್ನು ಕಾಮೆಟ್ ಮಾಡುತ್ತದೆ. ಒಂದು ನಿಗದಿತ ಇಮೇಲ್ನಿಂದ ಈವರೆಗೆ ಬಂದಿರುವ ಎಲ್ಲಾ ಇಮೇಲ್ಗಳನ್ನೂ ಸಂಗ್ರಹಿಸಿ ಒಂದು ವರದಿ ತಯಾರಿಸಲು ಕೇಳಿದರೆ ಅದೂ ಸಿದ್ಧಗೊಳ್ಳುತ್ತದೆ. ಇನ್ನು ಕ್ಯಾಲೆಂಡರ್ನಲ್ಲಿ ಮೀಟಿಂಗ್ಗಳನ್ನು ಷೆಡ್ಯೂಲ್ ಮಾಡುವುದು, ಇರುವ ಮೀಟಿಂಗ್ಗಳ ಬಗ್ಗೆ ಅಲರ್ಟ್ ಮಾಡುವುದು ಮತ್ತಿತರ ಕೆಲಸಗಳನ್ನೂ ಮಾಡುತ್ತದೆ.
ನಾವು ಹೆಚ್ಚು ಬಳಸುತ್ತಾ ಹೋದಂತೆ ನಮ್ಮ ಅಗತ್ಯಗಳು, ಆದ್ಯತೆಗಳು ಮತ್ತು ನಮ್ಮ ಕಾರ್ಯಶೈಲಿಯನ್ನು ಕಾಮೆಟ್ ಕಲಿಯುತ್ತದೆ. ಆ ಬಳಿಕ ಅದಕ್ಕೆ ಅನುಗುಣವಾಗಿ ಕೆಲಸ ಮಾಡುವುದನ್ನು ಕಲಿಯುತ್ತದೆ. ಇದರ ಬಳಕೆ ಹೆಚ್ಚಿದಂತೆಯಲ್ಲಾ ಅದು ಹೆಚ್ಚೆಚ್ಚು ಸ್ಮಾರ್ಟ್ ಆಗುತ್ತಾ ಹೋಗುತ್ತದೆ.
ಕಾಮೆಟ್ ಬಳಸುವುದು ಹೇಗೆ?
ಕಾಮೆಟ್ ಈಗ ಆಹ್ವಾನಿತರಿಗೆ ಮಾತ್ರವೇ ಲಭ್ಯವಿರುವುದರಿಂದ ಎಲ್ಲರಿಗೂ ಲಭ್ಯವಿಲ್ಲ. ಆದರೂ ಇದನ್ನು ಬಳಸಲು ಕೆಲವು ಮಾರ್ಗಗಳಿವೆ.
· ಪರ್ಪ್ಲೆಕ್ಸಿಟಿ ವೆಬ್ಸೈಟ್ಗೆ ಹೋಗಿ ಅಲ್ಲಿರುವ ವೇಟ್ಲಿಸ್ಟ್ಗೆ ಸೇರಿಸಿಕೊಳ್ಳಿ
· ಪರ್ಪ್ಲೆಕ್ಸಿಟಿ ಮ್ಯಾಕ್ಸ್ ಎಂಬ ಪ್ರೊ ಪ್ಲ್ಯಾನ್ಗೆ ಚಂದಾದಾರರಾದರೆ ಕಾಮೆಟ್ ಬಳಕೆಗೆ ಪ್ರವೇಶ ಸಿಗುತ್ತದೆ
· ಈಗಾಗಲೇ ಪ್ರವೇಶ ಪಡೆದಿರುವವರು ನಿಮ್ಮನ್ನು ಆಹ್ವಾನಿಸುವ ಮೂಲಕವೂ ಕಾಮೆಟ್ ಬಳಸಬಹುದು
· ಬಳಕೆಗೆ ಅವಕಾಶ ದೊರೆತೆ ಮೇಲೆ, ಮೊದಲು ನೊಂದಾಯಿಸಿಕೊಂದು ನಿಮ್ಮ ಇಮೇಲ್, ಕ್ಯಾಲೆಂಡರ್ಗಳಿಗೆ ಅನುಮತಿ ನೀಡಿ ಬಳಸಲು ಶುರು ಮಾಡಿ
· ಪಠ್ಯ ಮತ್ತು ಧ್ವನಿ ಎರಡರ ಮೂಲಕವೂ ಕಾಮೆಟ್ ಅನ್ನು ಬಳಸಬಹುದು
ಭದ್ರತೆ ಮತ್ತು ಗೌಪ್ಯತೆಯ ಎಚ್ಚರ ಇರಲಿ!
ಯಾವುದೇ AI- ಚಾಲಿತ ಟೂಲ್ಗಳ ಹಾಗೆ ಇಲ್ಲಿಯೂ ಗೌಪ್ಯತೆ ಮತ್ತು ಭದ್ರತೆಯ ಆತಂಕ ಇದೆ. ಹೀಗಾಗಿ ಬಳಕೆಯಲ್ಲಿ ಎಚ್ಚರ ಇರಲಿ. ಕಾಮೆಟ್ ಹಲವು ಕೆಲಸಗಳನ್ನು ತನಗೆ ತಾನೇ ಮಾಡುವುದಾದರೂ ಅಂತಿಮ ನಿಯಂತ್ರಣ ನಮ್ಮ ಕೈಯ್ಯಲ್ಲೇ ಇರಲಿ. ಎಲ್ಲಾ ಕೆಲಸವನ್ನು ಕಾಮೆಟ್ ಮಾಡಲಿ ಆದರೆ ಫೈನಲ್ ಕಮ್ಯಾಂಡ್ ನಮ್ಮ ಬಳಿಯೇ ಇರಲಿ. ಹಣಕಾಸು ವಿಚಾರಗಳನ್ನು ನೀವೇ ನಿರ್ವಹಿಸಿ. ಬಹಳ ಸೂಕ್ಷ್ಮ ವಿಚಾರಗಳಿಗೆ ಪ್ರವೇಶ ನೀಡಬೇಡಿ. ಇಷ್ಟು ಪಾಲಿಸಿದರೆ ಸುರಕ್ಷಿತ ಬ್ರೌಸಿಂಗ್ ನಿಮ್ಮದಾಗುತ್ತದೆ.
ಅಂತಿಮವಾಗಿ…
ಕಾಮೆಟ್ ಕೇವಲ ಮತ್ತೊಂದು ಬ್ರೌಸರ್ ಅಲ್ಲ, ಅದಕ್ಕಿಂತ ಹೆಚ್ಚು. ಇದು ಮಾಹಿತಿಯನ್ನು ಹುಡುಕುವ ಮತ್ತು ಬಳಸುವ ವಿಚಾರದಲ್ಲಿ ಒಂದು ಸ್ಥಿತ್ಯಂತರವನ್ನು ಪ್ರತಿನಿಧಿಸುತ್ತದೆ. ಇದು ಇನ್ನೂ ಆರಂಭಿಕ ಹಂತಗಳಲ್ಲಿದ್ದು, ಓರೆ ಕೋರೆಗಳನ್ನು ತಿದ್ದುವ ಕೆಲಸ ನಡೆಯುತ್ತಿದೆ. ಮಾಹಿತಿಯನ್ನು ಹುಡುಕುವುದರಿಂದ ಹಿಡಿದು, ಸಂಕ್ಷೇಪಿಸುವ, ಸಾರಾಂಶೀಕರಿಸುವ, ವಿಶ್ಲೇಷಿಸುವ, ಹೆಕ್ಕಿ ತೆಗೆಯುವ ಕೆಲಸದವರೆಗೆ ಕಾಮೆಟ್ ಕೆಲಸ ಮಾಡುತ್ತದೆ. ಅಷ್ಟು ಮಾತ್ರವಲ್ಲದೆ ಕೊಟ್ಟ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಮೂಲಕ ನಮ್ಮ ಪಾಲುದಾರನಂತೆ ವರ್ತಿಸುತ್ತದೆ.



