ಪ್ರಾಂಪ್ಟ್ ಬರೆಯುವುದು ಕಲಿಯಿರಿ, ಕನ್ನಡದಲ್ಲೇ
ದಿನಕ್ಕೊಂದು ಪ್ರಾಂಪ್ಟ್ ನಿಮ್ಮ ಇಮೇಲ್, ವಾಟ್ಸ್ಆಪ್ಗೆ | ಇಂದೇ ಸಬ್ಸ್ಕ್ರೈಬ್ ಮಾಡಿ ಉಚಿತವಾಗಿ
ಎಐ ಟೂಲ್ಗಳನ್ನು ಹೇಗೆ ಬಳಸಬೇಕು ಎಂದು ತಿಳಿದಿರುವುದು ಈ ಸಂದರ್ಭಕ್ಕೆ ಅತ್ಯಂತ ಮುಖ್ಯವಾದ ಕೌಶಲ್ಯ. ಈ ಕೌಶಲ್ಯ ಬರದೇ ಹೋದರೆ ಎಐ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅನುಕೂಲ ಮಾತ್ರವಲ್ಲ, ಅದರ ಅಪಾಯಗಳ ಅರಿವಿಗೂ ಈ ಕೌಶಲ್ಯ ಅತ್ಯಗತ್ಯ. ಹಾಗೆಂದು ಎಲ್ಲರೂ ಪ್ರಾಂಪ್ಟ್ ಎಂಜಿನಿಯರ್ಗಳಾಗಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಆದರೆ ಅಲ್ಪ ಸ್ವಲ್ಪವಾದರೂ ಬಳಸಲು ತಿಳಿದಿರಬೇಕು. ಇಲ್ಲವಾದರೆ ಕಾಲದ ಅಲೆಯ ಜೊತೆ ಹೋಗದೆ ಹೊರಗುಳಿದಿಬಿಡುತ್ತೇವೆ.
ಎಐ ಬಳಸಲು ಇಂಗ್ಲಿಷ್ ಬೇಕೇ ಬೇಕು, ಹೌದಾ?
ಎಐ ಟೂಲ್ಗಳನ್ನು ಬಳಸುವುದನ್ನು ಕಲಿಯಬೇಕು. ಅದಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದೇನೋ ಹೇಳಿದೆ. ಆದರೆ, ಏನು ಮಾಡುವುದು ಜಗತ್ತಿನ ಬಹುತೇಕ ಎಲ್ಲಾ ಎಐ ಮಾಡೆಲ್ಗಳು ಇಂಗ್ಲಿಷ್ನಲ್ಲೇ ವ್ಯವಹರಿಸುತ್ತವೆ. ಇಂಗ್ಲಿಷ್ ಭಾಷೆಯನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತವೆ. ಇಂಗ್ಲಿಷ್ನಲ್ಲಿ ಹೇಳಿದ್ದಕ್ಕೆ ಅದ್ಭುತವಾಗಿ ಪ್ರತಿಕ್ರಿಯಿಸುತ್ತವೆ. ಆದರೆ, ನಮಗೆ ಇಂಗ್ಲಿಷೇ ಬರುವುದಿಲ್ಲವಲ್ಲ, ಏನು ಮಾಡುವುದು? ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ. ಆದರೆ ಎಐ ಮಾಡೆಲ್ಗಳು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತವೆ ಎಂದರೆ ಅವುಗಳೀಗೆ ಕನ್ನಡ ಬರುವುದೇ ಇಲ್ಲ ಎಂದರ್ಥವಲ್ಲ. ಹೌದು, ಎಐ ಮಾಡೆಲ್ಗಳು ಕನ್ನಡದಲ್ಲೂ ಮಾತನಾಡುತ್ತವೆ. ಕನ್ನಡದಲ್ಲಿ ಬರೆದಿದ್ದನ್ನು ಚೆನ್ನಾಗಿಯೇ ಗ್ರಹಿಸುತ್ತವೆ. ತಕ್ಕಮಟ್ಟಿಗೆ ಕನ್ನಡದಲ್ಲೇ ಉತ್ತರ ನೀಡುತ್ತವೆ. ಆದರೆ ಭಾಷೆ ಇನ್ನೂ ಪ್ರೈಮರಿ ವಿದ್ಯಾರ್ಥಿಯ ಭಾಷೆಯಂತಿದೆ. ದಿನ ದಿನವೂ ಸುಧಾರಣೆಯಾಗುತ್ತಿದೆ. ನಾವೆಲ್ಲರೂ ಬಳಸಲು ಆರಂಭಿಸಿದರೆ ಅದು ಇನ್ನೂ ಹೆಚ್ಚು ಮತ್ತು ಬೇಗ ಸುಧಾರಣೆಯಾಗುತ್ತದೆ. ನಮ್ಮ ಮನೆಯ ಮಗುವಿನ ನಾವೇ ತಾನೇ ಮಾತು ಕಲಿಸಬೇಕು?
ಆಡುಗನ್ನಡದಲ್ಲೇ ಎಐಗೂ ಬಳಸಿ
ಈ ಪೀಠಿಕೆ ಕೊಡುತ್ತಿರುವುದರ ಉದ್ದೇಶ ಇಷ್ಟೇ. ಎಐ ಮಾಡೆಲ್ಗಳನ್ನು ಬಳಸಲು ಇಂಗ್ಲಿಷ್ ಚೆನ್ನಾಗಿ ಗೊತ್ತಿರಬೇಕು ಎಂಬ ಭ್ರಮೆಯಿಂದ (ಅಂಥ ಭ್ರಮೆಯಿದ್ದರೆ) ಹೊರಬನ್ನಿ. ಕನ್ನಡದಲ್ಲೂ ಅವುಗಳ ಜೊತೆ ಒಡನಾಡಬಹುದು, ವ್ಯವಹರಿಸಬಹುದು ಎನ್ನುವುದು ಮನದಟ್ಟು ಮಾಡಿಕೊಳ್ಳಿ. ನನಗೆ ಕನ್ನಡವನ್ನೂ ಅಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲ ಏನು ಮಾಡುವುದು? ನೀವು ಸಾಹಿತ್ಯ ಕನ್ನಡವನ್ನೇನು ಬಳಸುವ ಅಗತ್ಯ ಇಲ್ಲ. ನೀವು ದಿನ ನಿತ್ಯ ಬಳಸುವ ಇಂಗ್ಲಿಷ್ ಮಿಶ್ರಿತ ಆಡುಗನ್ನಡವನ್ನೇ ಎಐಗೂ ಬಳಸಬಹುದು. ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಬರೆದರೂ ಎಐ ಅರ್ಥ ಮಾಡಿಕೊಳ್ಳುತ್ತದೆ. ಇದಕ್ಕಿಂತ ಮುಖ್ಯವಾಗಿ ಬಹುತೇಕ ಎಐ ಟೂಲ್ಗಳಿಗೆ ಮಾತಿನ ಮೂಲಕವೂ ಎಐ ಸೂಚನೆ ಕೊಡಬಹುದು ಎನ್ನುವುದು ತಿಳಿದಿರಲಿ. ಅಲ್ಲಿ ನೀವು ನಿಮ್ಮ ಆತ್ಮೀಯರೊಂದಿಗೆ ಮಾತನಾಡುವ ಹಾಗೆಯೇ ಮಾತನಾಡಬಹುದು. ಅಲ್ಲಿಗೆ ನಮಗಿದ್ದ ಭಾಷೆಯ ಅಡ್ಡಿ ನಿವಾರಣೆಯಾಯಿತು. ಹಾಗಿದ್ದರೆ ಇನ್ನೇನು...?
ಹೇಗೆ ಮಾತನಾಡಬೇಕು?
ಈಗ ನಮ್ಮ ಮುಂದಿರುವ ಪ್ರಶ್ನೆ ಎಐ ಜೊತೆಗೆ ಹೇಗೆ ಮಾತನಾಡಬೇಕು. ಅದಕ್ಕೊಂದು ಕ್ರಮ ಇಲ್ಲವೇ? ಹೇಗೆ ಬೇಕಾದರೂ ಮಾತನಾಡಬಹುದೇ? ನಿಜ ಹೇಳಬೇಕೆಂದರೆ ಎಐ ಜೊತೆಗೆ ಹೇಗೆ ಬೇಕಾದರೂ ಮಾತನಾಡಬಹುದು. ಅವು ಉತ್ತರ ಚೆನ್ನಾಗಿ ಕೊಟ್ಟಾಗ ಹೊಗಳಬಹುದು, ತಪ್ಪು ಮಾಡಿದಾಗ ಬೈಯ್ಯಬಹುದು, ನಿಧಾನವಾಗಿ ತಿದ್ದಿ ಹೇಳಬಹುದು. ಪ್ರೀತಿ ತೋರಿಸಬಹುದು, ಕಡುಕೋಪವನ್ನೂ ವ್ಯಕ್ತಪಡಿಸಬಹುದು. ನಿಮ್ಮ ಎಲ್ಲಾ ರೀತಿಯ ಭಾವನೆಗಳಿಗೂ ಎಐ ಸ್ಪಂದಿಸುತ್ತದೆ ಮತ್ತು ತಾಳ್ಮೆಯಿಂದಲೇ ಉತ್ತರಿಸುತ್ತದೆ. ನಮ್ಮ ತಪ್ಪುಗಳನ್ನು ತನ್ನದೇ ತಪ್ಪೆಂದು ತನ್ನ ಮೈಮೇಲೆ ಎಳೆದುಕೊಳ್ಳುತ್ತದೆ. ಮನುಷ್ಯ-ಮನುಷ್ಯರ ನಡುವಿನ ಸಂಭಾಷಣೆ, ಸಂವಾದ ಇಷ್ಟೇ ತಾನೇ. ಅಲ್ಲಿಗೆ ಒಂದು ವಿಚಾರ ನಮಗೆ ಮನದಟ್ಟಾಯಿತು. ಎಐ ಮಾತನಾಡುವುದು ಎಂದರೆ ನಾವು ಒಬ್ಬ ಮನುಷ್ಯನ ಜೊತೆ ಮಾತನಾಡಿದಂತೆಯೇ ಸರಿ. ಆದರೆ ಇಲ್ಲೊಂದು ಸಮಸ್ಯೆ ಇದೆ. ಸಮಾಜದ ಸೂಕ್ಷ್ಮಗಳು ಎಐಗೆ ಇನ್ನೂ ಚೆನ್ನಾಗಿ ಅರ್ಥವಾಗುವುದಿಲ್ಲ. ಹೀಗಾಗಿ ನೀವು ಮನುಷ್ಯರ ಜೊತೆ ಮಾತನಾಡುವಷ್ಟು ಸಹಜವಾಗಿ, ಸರಳವಾಗಿ ಮಾತನಾಡಿದರೆ ಬಹುಷಃ ಅದು ತಬ್ಬಿಬ್ಬಾಗಬಹುದು. ತಡವರಿಸಬಹುದು, ತಪ್ಪು ಉತ್ತರಗಳನ್ನು ನೀಡಬಹುದು. ಇದಕ್ಕೆ ಇರುವ ಒಂದೇ ಪರಿಹಾರ ಪ್ರಾಂಪ್ಟ್ ಎಂಜಿನಿಯರಿಂಗ್. ಎಐ ಜೊತೆ ಮಾನಡುವ ವಿಶೇಷ ಭಾಷೆ ಇದು. ನಿಗದಿತ ಕೆಲಸವನ್ನು ಮಾಡಿಸಿಕೊಳ್ಳುವ ನಿಶ್ಚಿತ ಭಾಷೆ. ಸರಳವಾಗಿ, ಎಐ ಜೊತೆ ಸಂವಹನ ನಡೆಸುವ ಒಂದು ಕ್ರಮಬದ್ಧತೆ. ಈ ಕ್ರಮಬದ್ಧ ಭಾಷೆಯನ್ನು “ಪ್ರಾಂಪ್ಟ್” ಎನ್ನುತ್ತಾರೆ. ಈ ಕ್ರಮಬದ್ಧ ಭಾಷೆಯನ್ನು ಚೆನ್ನಾಗಿ ಅರಿತವನು “ಪ್ರಾಂಪ್ಟ್ ಎಂಜಿನಿಯರ್” ಎನ್ನಿಸಿಕೊಳ್ಳುತ್ತಾನೆ. ಈ ಕ್ರಮಬದ್ಧತೆ ಅರಿತರೆ ಎಐ ಜೊತೆ ಯಾವುದೇ ಕೆಲಸವನ್ನು (ಆಗುವಂತಹ ಕೆಲಸ) ಮಾಡಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಈ ಕ್ರಮಬದ್ಧತೆಯ ಅಗತ್ಯವೂ ಇರುವುದಿಲ್ಲ. ನಮ್ಮೆಲ್ಲಾ ಅಕ್ರಮಗಳು, ಅಪಸವ್ಯಗಳೂ ಎಐಗೆ ಸಹ್ಯವೇ ಆಗಿರುತ್ತವೆ.
ಕನ್ನಡದಲ್ಲಿ ಎಐ ಪ್ರಾಂಪ್ಟಿಂಗ್ ಅಭಿಯಾನ
ಈ ಹಿನ್ನೆಲೆಯಲ್ಲಿ ಎಐ ಜೊತೆ ಮಾಡುವ ಕ್ರಮಬದ್ಧ ಭಾಷೆಯಾದ “ಪ್ರಾಂಪ್ಟ್” ಬರೆಯುವುದು ಹೇಗೆಂದು ತಿಳಿಯೋಣ. ಅದೂ ಕನ್ನಡದಲ್ಲಿ. ಅದನ್ನು “ಪ್ರಾಂಪ್ಟ್ ಬರೆಯುವುದು ಹೇಗೆ?” ಎಂದು ಒಂದು ದಿನ ಒಂದು ಲೇಖನ ಬರೆದುಬಿಟ್ಟರೆ ಯಾರೂ ಕಲಿಯುವುದಿಲ್ಲ, ಯಾರಿಗೂ ಪ್ರಾಕ್ಟೀಸ್ ಆಗುವುದಿಲ್ಲ. ಅದಕ್ಕಾಗಿಯೇ “ಕನ್ನಡದಲ್ಲಿ ಎಐ ಪ್ರಾಂಪ್ಟಿಂಗ್ ಅಭಿಯಾನ” ಆರಂಭಿಸಲಾಗುತ್ತಿದೆ. ಈ ಅಭಿಯಾನದಲ್ಲಿ ಕನ್ನಡದಲ್ಲಿ “ದಿನಕ್ಕೊಂದು ಪ್ರಾಂಪ್ಟ್” ಅನ್ನು ನಿಮ್ಮೊಂದಿಗೆ ಶೇರ್ ಮಾಡಲಾಗುವುದು. ನೀವು ಆ ಪ್ರಾಂಪ್ಟ್ ಅನ್ನು ಕಾಪಿ ಮಾಡಿ ಯಾವುದೇ ಎಐ ಮಾಡೆಲ್ಗೆ ಹಾಕಿ ಅದರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಪರೀಕ್ಷಿಸಬಹುದು. ವಿವಿಧ ಮಾಡೆಲ್ಗಳು ಒಂದೇ ಪ್ರಾಂಪ್ಟಿಗೆ ಹೇಗೆ ಭಿನ್ನವಾಗಿ ಪ್ರತಿಕ್ರಿಯಿಸುತ್ತವೆ ಎಂದೂ ಗಮನಿಸಬಹುದು. ಮೂಲ ಪ್ರಾಂಪ್ಟ್ ಅನ್ನು ತಿದ್ದುಪಡಿ ಮಾಡಿ ನಿಮ್ಮದೇ ಹೊಸ ಪ್ರಾಂಪ್ಟ್ ಸೃಷ್ಟಿಸಬಹುದು. ಕೆಲ ದಿನಗಳು ಹೀಗೇ ಮಾಡುತ್ತಾ ಹೋದಂತೆ ನೀವೇ ನಿಮ್ಮದೇ ಸ್ವಂತ ಪ್ರಾಂಪ್ಟ್ ಬರೆಯುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಎಐ ಜೊತೆಗಿನ ನಿಮ್ಮ ಈ ಯಾನ ನಿಮ್ಮನ್ನು ಹೊಸ ನೆಲೆಗೆ ಕೊಂಡೊಯ್ಯುತ್ತದೆ. ಎಐ ಮಾಡೆಲ್ಗಳು ಹೇಗೆ ವರ್ತಿಸುತ್ತವೆ ಎನ್ನುವುದು ತಿಳಿಯುತ್ತದೆ. ಎಐ ಮೂಲಕ ಏನೆಲ್ಲಾ ಸಾಧಿಸಿಕೊಳ್ಳಬಹುದು ಎನ್ನವುದು ಅರಿವಿಗೆ ಬರುತ್ತದೆ. ಎಐಗಳು ಮನುಷ್ಯ ಸಾವಿರಾರು ವರ್ಷಗಳಿಂದ ಕೂಡಿಟ್ಟುಕೊಂಡು ಬಂದಿರುವ ಬುದ್ಧಿವಂತಿಕೆ, ಶತಮಾನಗಳಿಂದ ಮೊನಚು ಮಾಡಿಕೊಂಡು ಬಂದಿರುವ ಕೌಶಲ್ಯಗಳನ್ನು ಹೇಗೆ ಬುಡಮೇಲು ಮಾಡಬಲ್ಲದು ಎನ್ನುವ ತಿಳಿವು ನಿಧಾನಕ್ಕಾದರೂ ಮನಸ್ಸಿಗಿಳಿಯುತ್ತದೆ. ಇದರ ಮುಂದೆ ನಾವೇನೂ ಇಲ್ಲ ಎನ್ನುವುದೂ ಅರಿವಾಗುತ್ತಾ ಹೋಗುತ್ತದೆ.
ಸದ್ಯಕ್ಕೆ ಎಐ ತಂತ್ರಜ್ಞಾನವನ್ನು ತಡೆಯಲು ಸಾಧ್ಯವಿಲ್ಲ. ಅಂಥ ಮನಸ್ಸು ಯಾರಿಗೂ ಇಲ್ಲ. ಎಐ ಅನ್ನು ಅರಿತು, ಬಳಸುವುದುನ್ನು ಕಲಿಯುವುದೊಂದೇ ನಮಗಿರುವ ಆಯ್ಕೆ. ಆ ಮೂಲಕ ಅದು ಒಡ್ಡುವ ಅಪಾಯಗಳಿಗೆ ಸಜ್ಜಾಗುವುದಕ್ಕೆ ನೆರವಾಗುತ್ತದೆ. ದಿಢೀರನೇ ಎದುರಾಗುವ ಆಘಾತಕ್ಕಿಂತ, ಸಿದ್ಧರಾಗಿ ಎದುರಿಸುವ ಅಪಾಯವೇ ಮೇಲಲ್ಲವೇ?


