ಅಂತಿಮಗೊಂಡ ಕೃತಿಯ ರಕ್ಷಾಪುಟಗಳು
ಪುಸ್ತಕ ಖರೀದಿಗೆ ಆಸಕ್ತಿ ತೋರಿಸಲು ಈ ಗೂಗಲ್ ಫಾರ್ಮ್ ತುಂಬಿ
‘ಎಐ–ಮನುಕುಲದ ಮಹಾಯಾನ’ ಕೃತಿಯ ರಕ್ಷಾಪುಟಗಳು ಅಂತಿಮಗೊಂಡಿವೆ. ಮಿನಿಮಲಿಸ್ಟ್ ಡಿಸೈನ್ ಅನ್ನು ಗಮನದಲ್ಲಿರಿಸಿಕೊಂಡು ಸರಳವಾದ, ಆದರೆ ಶಕ್ತಿಶಾಲಿ ಸಂದೇಶ ನೀಡಬಲ್ಲ ಮುಖಪುಟವನ್ನು ವಿನ್ಯಾಸಗೊಳಿಸಲಾಗಿದೆ. ಬಹಳಷ್ಟು ಜನರು ಈ ಮುಖಪುಟವನ್ನು ಮೆಚ್ಚಿದ್ದೀರಿ. ಇನ್ನಷ್ಟು ಜನರು ಇತರ ಆಕರ್ಷಕ ಮುಖಪುಟಗಳನ್ನು ಆರಿಸಿದ್ದೀರಿ. ಒಂದು ವಿಷಯವನ್ನು ಪ್ರತಿನಿಧಿಸುವ ಮುಖಪುಟಗಳು ಸಹಜವಾಗಿಯೇ ಆಕರ್ಷಕವಾಗಿರುತ್ತವೆ. ಆದರೆ, ಅಂತಾರಾಷ್ಟ್ರೀಯ ವಿನ್ಯಾಸ ತತ್ವಗಳ ಅನುಸಾರ ಮುಖಪುಟವನ್ನು ಅತಿಯಾಗಿ ರಂಜನೀಯಗೊಳಿಸಬಾರದು; ಅದನ್ನು ಸಿನಿಮಾ ಪೋಸ್ಟರ್ನಂತೆ ಪರಿವರ್ತಿಸಬಾರದು; ಹೆಚ್ಚು ಸಂಗತಿಗಳನ್ನು ಅದರಲ್ಲಿ ತುಂಬಬಾರದು. ಈ ವಿನ್ಯಾಸ ನಿಯಮಗಳನ್ನು ಗಮನದಲ್ಲಿರಿಸಿಕೊಂಡು ಆದಷ್ಟೂ ಸರಳವಾಗಿದ್ದು, ಬಹುಬೇಗ ಗಮನ ಸೆಳೆಯುವ ಮತ್ತು ಕೃತಿಯ ಸಂದೇಶವನ್ನು ಪರಿಣಾಮಕಾರಿಯಾಗಿ ದಾಟಿಸುವ ಈ ಮುಖಪುಟವನ್ನು ಆರಿಸಲಾಗಿದೆ.
ವಿನ್ಯಾಸ ಕಲೆಯನ್ನು ಕರಗತ ಮಾಡಿಕೊಂಡಿರುವ, ಕನ್ನಡದಲ್ಲಿ ಅತ್ಯುತ್ತಮ ಮುಖಪುಟಗಳನ್ನು ರಚಿಸಿ ಈಗಾಗಲೇ ಜನಪ್ರಿಯರಾಗಿರುವ, ತಮ್ಮ ಸೃಜನಶೀಲ ವಿನ್ಯಾಸಗಳಿಗೆ ಪ್ರಶಸ್ತಿಗಳನ್ನೂ ಗಳಿಸಿರುವ ವಿಜಯ ಕರ್ನಾಟಕದ ಮಾಜಿ ಸಹೋದ್ಯೋಗಿ ಕಿರಣ್ ಮಾಡಾಳು ಅವರು ಈ ರಕ್ಷಾಪುಟಗಳನ್ನು ವಿನ್ಯಾಸಗೊಳಿಸಿದ್ದಾರೆ. ಕೃತಿಯ ಒಟ್ಟಾರೆ ಆಶಯ, ಸಂದೇಶ ಮತ್ತು ವ್ಯಾಪ್ತಿಯನ್ನು ಮುಖಪುಟದಲ್ಲಿ ಅರ್ಥಪೂರ್ಣವಾಗಿ ಪ್ರತಿನಿಧಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು.
ಈ ಪುಸ್ತಕಕ್ಕೆ ಹಲವು ವಿಶೇಷಗಳಿವೆ
ಈ ಪುಸ್ತಕಕ್ಕೆ ಹಲವು ವಿಶೇಷಗಳಿವೆ. ಎಐ ತಂತ್ರಜ್ಞಾನವನ್ನು ಸಮಗ್ರವಾಗಿ ಕಟ್ಟಿಕೊಡುವ ಕನ್ನಡದ ಮೊದಲ ಕೃತಿ ಇದು. ತಾಂತ್ರಿಕ ಹಿನ್ನೆಲೆ ಇಲ್ಲದ ವ್ಯಕ್ತಿಯೊಬ್ಬ ಕ್ರಾಂತಿಕಾರಿ ತಂತ್ರಜ್ಞಾನವನ್ನು ಬೆರಗುಗಣ್ಣಿನಿಂದ ನೋಡುತ್ತಾ, ತನ್ನೊಳಗೇ ನೂರಾರು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ, ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ಈ ಕೃತಿ. ಎಲ್ಲಕ್ಕಿಂತ ಮುಖ್ಯವಾಗಿ, ಕಂಪ್ಯೂಟರ್ ಸೈನ್ಸ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆಯಿಲ್ಲದ ವ್ಯಕ್ತಿಯೊಬ್ಬ ಜನಸಾಮಾನ್ಯನ ದೃಷ್ಟಿಯಿಂದ ಎಐ ತಂತ್ರಜ್ಞಾನವನ್ನು ಗ್ರಹಿಸಿ, ಅದನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಂಡಿಸಿರುವ ಕೃತಿ. ಹೀಗಾಗಿ ಇಲ್ಲಿನ ಬರಹ ನಿಮಗೆ ತುಂಬಾ ಟೆಕ್ನಿಕಲ್ ಎನ್ನಿಸುವುದಿಲ್ಲ. ‘ಯಾಕೋ ಇದು ಅರ್ಥವಾಗುತ್ತಿಲ್ಲ’ ಎನ್ನಿಸುವ ಸಂದರ್ಭವೂ ಕಡಿಮೆ. ಈ ಅರ್ಥದಲ್ಲಿ ಸಾಮಾನ್ಯನೊಬ್ಬ ಸಾಮಾನ್ಯ ಜನರಿಗಾಗಿ ಬರೆದ ತಂತ್ರಜ್ಞಾನ ಕೃತಿ ಇದು.
ಈ ಪುಸ್ತಕದ ವ್ಯಾಪ್ತಿಯೂ ವಿಸ್ತಾರವಾದುದು. ಎಐ ಕುರಿತು ಒಂದು ‘ಸಾಮಾನ್ಯ ಜ್ಞಾನ’ ಹೊಂದಲು, ಎಐ ಲೋಕದ ಈವರೆಗಿನ ಪ್ರಮುಖ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಮುಂದಿನ 40–50 ವರ್ಷಗಳಲ್ಲಿ ಎಐನ ವಿಕಸನ ಯಾವ ದಿಕ್ಕಿನಲ್ಲಿ ಸಾಗಬಹುದು, ಅದು ಸಮಾಜ ಮತ್ತು ಮನುಷ್ಯನ ಬದುಕಿನ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ಮುನ್ನೋಟ ಪಡೆಯಲು ಬಯಸುವವರು ಓದಬೇಕಾದ ಕೃತಿ ‘ಎಐ–ಮನುಕುಲದ ಮಹಾಯಾನ’.
ಓದುವುದಷ್ಟೇ ಅಲ್ಲ, ಎಐ ಬಳಸುವುದನ್ನೂ ಕಲಿಸುತ್ತದೆ
ಇಷ್ಟು ಮಾತ್ರವಲ್ಲದೆ, ಈ ಕೃತಿ ನಿಮ್ಮನ್ನು ಓದಿನಲ್ಲೇ ಕೈಬಿಡುವುದಿಲ್ಲ. ಅಂದರೆ, ಕೇವಲ ಥಿಯರಿ ಮಾತ್ರವಲ್ಲ; ಪ್ರಾಯೋಗಿಕವಾಗಿ ಎಐ ಕಲಿಯಲು ಬೇಕಾದ ಪೂರಕ ಸಾಮಗ್ರಿಯನ್ನೂ ಕೃತಿ ಒಳಗೊಂಡಿದೆ. ಎಐ ಮಾಡೆಲ್ ಜೊತೆ ನಿಮ್ಮ ಮೊದಲ ಮಾತುಕತೆ ಆರಂಭಿಸಲು ಬೇಕಾದ ಪ್ರಾಂಪ್ಟ್ಗಳು ಇಲ್ಲಿವೆ; ನಿಮ್ಮ ಕನಸುಗಳಿಗೆ ಉದ್ಯಮದ ರೂಪ ನೀಡಲು ಎಐನ ನೆರವು ಪಡೆಯುವುದಕ್ಕೂ ಪ್ರಾಂಪ್ಟ್ಗಳಿವೆ. ನೀವು ಶಿಕ್ಷಕರಾಗಿರಿ, ವಿದ್ಯಾರ್ಥಿಯಾಗಿರಿ ಇಲ್ಲವೇ ಕಲಿಕಾರ್ಥಿಯೇ ಆಗಿರಿ, ಯಾವುದೇ ಹೊಸ ವಿಷಯವನ್ನು ಕಲಿಯಬೇಕೆಂದಿದ್ದರೂ ಅದಕ್ಕೆ ಪೂರಕವಾದ ಪ್ರಾಂಪ್ಟ್ಗಳನ್ನು ನೀಡಲಾಗಿದೆ.
ಚಿತ್ರ, ವೀಡಿಯೊ, ಗ್ರಾಫಿಕ್ಸ್ ರಚನೆಯಿಂದ ಹಿಡಿದು ಲೇಖನ ಬರೆಯುವುದು, ಸಂಶೋಧನೆ ನಡೆಸುವುದು, ವೆಬ್ಸೈಟ್ ಮತ್ತು ಸಾಫ್ಟ್ವೇರ್ ಅಭಿವೃದ್ಧಿಪಡಿಸುವುದರವರೆಗೆ ವಿವಿಧ ಕೆಲಸಗಳಿಗೆ ಬಳಸಬಹುದಾದ ಜಗತ್ತಿನ ಪ್ರಮುಖ ಎಐ ಮಾಡೆಲ್ಗಳ ಪರಿಚಯವನ್ನೂ ಕೊಡಲಾಗಿದೆ. ಈ ತಂತ್ರಜ್ಞಾನದಲ್ಲಿ ನಿಮಗೆ ಇನ್ನಷ್ಟು ಆಸಕ್ತಿ ಇದ್ದು, ಮತ್ತಷ್ಟು ಕಲಿಯಲು ಬಯಸಿದರೆ ಅದಕ್ಕಾಗಿಯೇ ಅತ್ಯುತ್ತಮ ಪರಾಮರ್ಶನ ಕೃತಿಗಳು ಮತ್ತು ವಿವಿಧ ಕೋರ್ಸ್ಗಳ ಪಟ್ಟಿಯನ್ನೂ ನೀಡಲಾಗಿದೆ. ಇದಕ್ಕಿಂತ ಮುಖ್ಯವಾಗಿ, ಇಡೀ ಎಐ ಲೋಕವನ್ನು ಒಳಗೊಳ್ಳುವಂತೆ 100ಕ್ಕೂ ಹೆಚ್ಚು ತಾಂತ್ರಿಕ ಪರಿಭಾಷೆಗಳಿಗೆ ಸರಳ ಕನ್ನಡದಲ್ಲಿ ವಿವರಣೆ ನೀಡಲಾಗಿದೆ. ಕನ್ನಡದಲ್ಲಿ ಇಂತಹ ಸಮಗ್ರ ಎಐ ಪರಿಭಾಷಾ ಕೋಶ ರೂಪುಗೊಂಡಿರುವುದು ಈ ಕೃತಿಯ ಮತ್ತೊಂದು ವಿಶೇಷ.
ಅಂತಾರಾಷ್ಟ್ರೀಯ ವಿಜ್ಞಾನಿಯ ಮಾರ್ಗದರ್ಶನ
ಇಷ್ಟೂ ಸಾಲದೆಂಬಂತೆ, ಅಂತಾರಾಷ್ಟ್ರೀಯ ವಿಜ್ಞಾನಿಯೊಬ್ಬರ ನೇರ ಮಾರ್ಗದರ್ಶನವೂ ಈ ಕೃತಿಯಲ್ಲಿ ಅಡಕಗೊಂಡಿದೆ. ಎಐ ತಂತ್ರಜ್ಞಾನದ ಪ್ರವರ್ತಕರಲ್ಲಿ ಇವರೂ ಒಬ್ಬರು. ಜಾಗತಿಕ ರೋಬೋಟಿಕ್ಸ್ ಕ್ಷೇತ್ರದಲ್ಲಿ ಇವರದು ಮುಂಚೂಣಿ ಹೆಸರು. ಸೈಬರ್ ಸೆಕ್ಯುರಿಟಿ ವಿಚಾರದಲ್ಲಿಯೂ ಇವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡವರು. ಇನ್ನು ಡಿಜಿಟಲ್ ಲೋಕದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುವ ಕಳ್ಳರು, ಖದೀಮರ ಹೆಜ್ಜೆಗುರುತುಗಳನ್ನು ಪತ್ತೆಹಚ್ಚಿ ಅವರನ್ನು ಹೆಡೆಮುರಿ ಕಟ್ಟಲು ನೆರವಾಗುವ ಡಿಜಿಟಲ್ ಫೊರೆನ್ಸಿಕ್ಸ್ ಕ್ಷೇತ್ರದ ಪಿತಾಮಹರೆಂದೇ ಗುರುತಿಸಲ್ಪಟ್ಟವರು. ಎಲ್ಲಕ್ಕಿಂತ ಮುಖ್ಯವಾಗಿ, ಇವರು ಕನ್ನಡಿಗರು.
ಅಂತಹ ಮಹಾನ್ ವಿಜ್ಞಾನಿ ಈ ಕೃತಿ ರೂಪುಗೊಳ್ಳುವಲ್ಲಿ ಮಾರ್ಗದರ್ಶನ ನೀಡಿದ್ದಾರೆ; ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ರೋಬೋಟಿಕ್ಸ್, ಸಿಂಬಿಯಾಟಿಕ್ ಸಿಟಿ, ಭವಿಷ್ಯದ ಮನುಷ್ಯ–ರೋಬೋಟ್ ಸಹಜೀವನದ ಬಗ್ಗೆ ಸ್ವತಃ ಲೇಖನಗಳನ್ನೂ ಬರೆದಿದ್ದಾರೆ. ಒಂದು ಕೃತಿಗೆ ಇದಕ್ಕಿಂತ ವಿಶಿಷ್ಟವಾದ ಬೌದ್ಧಿಕ ಒಡನಾಟ ಇನ್ನೇನು ಬೇಕು? ಇವರೇ ಜಾಗತಿಕ ಕಂಪ್ಯೂಟರ್ ವಿಜ್ಞಾನಿ ಮತ್ತು ರೋಬೋಟಿಕ್ಸ್ ತಜ್ಞ ಪ್ರೊ. ಎಸ್. ಎಸ್. ಅಯ್ಯಂಗಾರ್.
ನಿಮ್ಮ ಆಸಕ್ತಿಯನ್ನು ದಾಖಲಿಸಿ
ಈ ಕೃತಿಯನ್ನು ನಿಮ್ಮದಾಗಿಸಿಕೊಳ್ಳಲು ಬಯಸಿದರೆ ಈ ಅರ್ಜಿ ತುಂಬಿ ನಿಮ್ಮ ಆಸಕ್ತಿಯನ್ನು ದಾಖಲಿಸಿ. ಪುಸ್ತಕದ ಮುದ್ರಣ ಮುಗಿದ ಕೂಡಲೇ ಕೃತಿಯನ್ನು ನಿಮ್ಮದಾಗಿಸಿಕೊಳ್ಳಿ. ಈಗಲೇ ಹಣ ಪಾವತಿಸಬೇಕಿಲ್ಲ; ಕೇವಲ ನಿಮ್ಮ ಆಸಕ್ತಿಯನ್ನು ದಾಖಲಿಸಿದರೆ ಸಾಕು.
ನಿಮ್ಮ ಸ್ನೇಹಿತರು, ಪರಿಚಿತರು ಮತ್ತು ಆತ್ಮೀಯ ಬಳಗದಲ್ಲೂ ಇದನ್ನು ಹಂಚಿಕೊಳ್ಳಿ. ಯಾರ ಬದುಕು ಯಾವ ಸಂದರ್ಭದಲ್ಲಿ, ಹೇಗೆ ಬದಲಾಗುವುದೆಂದು ಯಾರೂ ಊಹಿಸಲಾರರು. ಅಂಥದ್ದೊಂದು ಬದಲಾವಣೆಗೆ ಈ ಕೃತಿ ಸಣ್ಣ ನಿಮಿತ್ತವಾದರೂ, ಲೇಖಕನಾದ ನನಗೆ ಅದಕ್ಕಿಂತ ದೊಡ್ಡ ಸಾರ್ಥಕತೆ ಮತ್ತೊಂದಿಲ್ಲ.


