ಆರ್ಥಿಕ ಬಿಕ್ಕಟ್ಟಿನತ್ತ ಅಮೆರಿಕ
ಅಮೆರಿಕದ ಪ್ರತಿ ಸುಂಕ ಸಮರ ಕುರಿತ ವಿಶ್ಲೇಷಣಾತ್ಮಕ ಲೇಖನ
ಡಾ.ರಮೇಶ್ ನಿಂಬೆಮರದಳ್ಳಿ
ಅಂದು ಏಪ್ರಿಲ್ 4. ಅಮೆರಿಕವೂ ಸೇರಿದಂತೆ ವಿಶ್ವದ ಹಲವು ಷೇರು ಮಾರುಕಟ್ಟೆಗಳಲ್ಲಿ ರಕ್ತದೋಕುಳಿಯಾಯಿತು. ಅಮೆರಿಕದ ಸೂಚ್ಯಂಕಗಳು ಶೇ. 4 ರಿಂದ 6 ರಷ್ಟು ಕುಸಿದವು. ಇದು ಕೋವಿಡ್ ಬಿಕ್ಕಟ್ಟಿನ ನಂತರದ ಅತಿ ದೊಡ್ಡ ಪತನವಾಗಿತ್ತು. ನ್ಯೂಯಾರ್ಕ್ನ S&P 500 6% ಕುಸಿದರೆ, ಡೌ ಜೋನ್ಸ್ 5.5%, ನಾಸ್ದಾಕ್ 5.8% ಇಳಿದವು. ಯುರೋಪ್ನ STOXX 600 3.1% ಮತ್ತು ಜಪಾನ್ನ ನಿಕ್ಕಿ 2.8% ಕುಸಿದವು. ಜನರು ಸುರಕ್ಷತೆಗಾಗಿ ಚಿನ್ನದ ಹೂಡಿಕೆಯತ್ತ ಓಡಿದರು. "ಮಾರುಕಟ್ಟೆಗಳಿಗೆ ಟ್ರಂಪ್ ಬೆಂಕಿ ಹಚ್ಚಿದ್ದಾರೆ" ಎಂಬ ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರ ಮಾತು ಮಾರುಕಟ್ಟೆ ತಲ್ಲಣವನ್ನು ಸೂಕ್ತವಾಗಿ ಪ್ರತಿಬಿಂಬಿಸಿತು. ಇತ್ತ, ಭಾರತದ ಷೇರು ಮಾರುಕಟ್ಟೆ ಪ್ರಶಾಂತವಾಗಿತ್ತು. ಇಲ್ಲಿನ ನಿಫ್ಟಿ ಮತ್ತು ಸೆನ್ಸೆಕ್ಸ್ ಬಿರುಗಾಳಿಯ ನಡುವೆಯೂ ತಣ್ಣಗಿದ್ದು, ದಿನದಂತ್ಯಕ್ಕೆ ಸುಮಾರು 1.5% ಇಳಿಕೆ ಕಂಡವು - ಇದು ಅಮೆರಿಕದ “ಪ್ರತಿಸುಂಕ”ದ ಹೊಡೆತಕ್ಕೆ ಜಗತ್ತು ತಲ್ಲಣಗೊಂಡ ಪರಿಯನ್ನು ಸೂಚಿಸಿದರೆ ಮತ್ತೊಂದು ಕಡೆ ಭಾರತದ ಸ್ಥಿರತೆ ಮತ್ತು ಆರ್ಥಿಕತೆಯ ಬುನಾದಿ ಭದ್ರವಾಗಿರುವುದನ್ನು ಸಾರಿ ಹೇಳಿತು.
ಅಷ್ಟಕ್ಕೂ ಜಗತ್ತಿನಾದ್ಯಂತ ಹೂಡಿಕೆದಾರರು ಕಂಗಾಲಾಗಿದ್ದು ಯಾಕೆ? ಟ್ರಂಪ್ ಅವರ ಸುಂಕಾಸ್ತ್ರ ಅಮೆರಿಕದಲ್ಲಿ ಹಣದುಬ್ಬರವನ್ನು ಉಬ್ಭೇರಿಸುತ್ತದೆ ಎಂಬ ಆತಂಕ, ಅದು ಕಾರ್ಪೊರೇಟ್ ಕಂಪನಿಗಳ ಲಾಭಕ್ಕೆ ಕೊಳ್ಳಿ ಇಡುತ್ತದೆ, ಪರಿಣಾಮ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ, ಆರ್ಥಿಕ ಪ್ರಗತಿ ಕುಸಿಯುತ್ತದೆ. ಕೊನೆಗೆ ಪ್ರಗತಿ ಹಿಂದಕ್ಕೆ ತಿರುಗಿ ಆರ್ಥಿಕ ಹಿಂಜರಿತ ಪ್ರಾರಂಭವಾಗುತ್ತದೆ – ಈ ಆತಂಕವೇ ಹೂಡಿಕೆದಾರರು ಮುಂದೆ ಬರಲಿರುವ ವಿಪತ್ತಿಗಿಂತ ಈಗಿನ ನಷ್ಟವೇ ಲೇಸೆಂದು ಎಲ್ಲವನ್ನೂ ಮಾರತೊಡಗಿದರು. ಪರಿಣಾಮ, ಸೂಚ್ಯಂಕಗಳು ಧರೆಗುರುಳಿದವು. ಏಪ್ರಿಲ್ 4ರಂದು ಕುಸಿತ ಮುಂದುವರಿಯಿತು. ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಯಿತು.
ಡೊನಾಲ್ಡ್ ಟ್ರಂಪ್ ತಮ್ಮ "ಪ್ರತಿ ಸುಂಕ" ಯೋಜನೆಯನ್ನು ಏಪ್ರಿಲ್ 2, 2025ರಂದು ಅಧಿಕೃತವಾಗಿ ಜಾರಿಗೊಳಿಸಿದರು. ಪ್ರತಿ ದೇಶವು ಅಮೆರಿಕದ ಸರಕುಗಳಿಗೆ ಹಾಕುವ ತೆರಿಗೆಗೆ ಪ್ರತಿಯಾಗಿ ಹಾಕುವ ಪ್ರತಿತೆರಿಗೆಯ ಪ್ರತಿತಂತ್ರ ಇದು. ಏಪ್ರಿಲ್ 5 ರಿಂದ ಮಿತ್ರ, ಶತೃ ಎಂಬ ಭೇದವಿಲ್ಲದೆ ಯಾವುದೇ ದೇಶದಿಂದ ಅಮೆರಿಕಕ್ಕೆ ಬರುವ ಉತ್ಪನ್ನಕ್ಕೆ 10% ಸುಂಕ ಆರಂಭವಾಯಿತು. ಅದು ಏಪ್ರಿಲ್ 9 ರಿಂದ ಪ್ರತಿ ದೇಶಕ್ಕೂ ಭಿನ್ನವಾಯಿತು. ಅಂದರೆ ಪ್ರತಿ ದೇಶಕ್ಕೂ ಅವರು ವಿಧಿಸುವ ಸುಂಕಕ್ಕೆ ಸಮನಾದ ಪ್ರತಿ ಸುಂಕ ವಿಧಿಸುವ ನೀತಿ. ಭಾರತಕ್ಕೆ 26%, ಚೀನಾಕ್ಕೆ ಹಂತ ಹಂತವಾಗಿ 145%, ಯುರೋಪ್ಗೆ 20% ಸುಂಕ ಫಿಕ್ಸ್ ಆಯಿತು. ಟ್ರಂಪ್ ಇದನ್ನು ಅಮೆರಿಕ ಕಾರ್ಮಿಕರ "ವಿಮೋಚನಾ ದಿನ" ಎಂದು ಕರೆದರು. ಆದರೆ, ವಿಶ್ವ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಗಳಿಗೆ ಇದು ಕರಾಳ ದಿನವಾಯಿತು.
ಅಮೆರಿಕದ ಅಪಾಯಕಾರಿ ಆಟ
ಈ ವರ್ಷ ಜಾಗತಿಕ ವ್ಯಾಪಾರ ಕುಸಿಯುವ ಅಂದಾಜಿದೆ. ಹೆಚ್ಚಿನ ಸುಂಕದ ಹೊರೆ ಹೊತ್ತಿರುವ ವಿಯೆಟ್ನಾಮ್ (46%) ಮತ್ತು ಜಪಾನ್ನಂತಹ ದೇಶಗಳು ಆರ್ಥಿಕ ಮಂದಗತಿಗೆ ಒಳಗಾಗಬಹುದು ಎಂದು ಫಿಚ್ ರೇಟಿಂಗ್ಸ್ ಎಚ್ಚರಿಸಿದೆ. "ಇದು ಮತ್ತೊಮ್ಮೆ ಸ್ಮೂಟ್-ಹಾವ್ಲಿ ಪುನರಾವರ್ತನೆ" ಎಂಬುದು ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಪಾಲ್ ಕ್ರುಗ್ಮನ್ ಅವರ ಎಚ್ಚರಿಕೆ (1930 ರಲ್ಲಿ ಇದೇ ರೀತಿ ಸ್ಮೂಟ್-ಹಾವ್ಲಿ ಅವರ ಸಲಹೆ ಮೇರೆಗೆ ಜಾರಿಗೆ ತಂದ ಸುಂಕ ಕಾಯಿದೆ ಭಾರಿ ಆರ್ಥಿಕ ಪರಿಣಾಮಗಳ ಸರಪಳಿಯನ್ನೇ ಸೃಷ್ಟಿಸಿ ಅಮೆರಿಕಕ್ಕೇ ತಿರುಗುಬಾಣವಾಗಿತ್ತು. ಅದೇ ಪರಿಣಾಮ ಈಗಲೂ ಆಗುತ್ತದೆ ಎನ್ನುವ ಎಚ್ಚರಿಕೆ ಇದು). ಅವರ ಪ್ರಕಾರ ಅಮೆರಿಕಕ್ಕೆ "ಇದೊಂದು ಅಪಾಯಕಾರಿ ಆಟ."
ಸುಂಕದ ಬಾಣ, ಬೆಲೆ ಏರಿಕೆಯ ತಿರುಗುಬಾಣ
ಅಮೆರಿಕದ ಪ್ರತಿ ಸುಂಕ ವಿಶ್ವದ ಬೇರೆ ದೇಶಗಳ ಮೇಲೆ ಪರಿಣಾಮ ಬೀರುವಂತೆ ಅಮೆರಿಕದ ಮೇಲೂ ದುಷ್ಪರಿಣಾಮ ಬೀರುತ್ತದೆ. ಯಾಕಂದ್ರೆ ಬೇರೆ ದೇಶಗಳು ತನಗೆ ಮಾರುವ ಉತ್ಪನ್ನಗಳ ಮೇಲೆ ಅಮೆರಿಕ ಸುಂಕ ವಿಧಿಸುತ್ತದೆ. ಅದೇ ಸುಂಕದ ಹೊರೆಯನ್ನು ರಫ್ತುದಾರ ದೇಶಗಳು ತಾವು ಮಾರುವ ಉತ್ಪನ್ನಗಳಿಗೆ ವರ್ಗಾಯಿಸುತ್ತಾರೆ. ಅಂತಿಮವಾಗಿ ಆ ಉತ್ಪನ್ನ ಬಳಸುವ ಅಮೆರಿಕ ಪ್ರಜೆ ಸುಂಕದ ಹೊರೆಯನ್ನು ಹೊರಬೇಕಾಗುತ್ತದೆ. ನಾವು ಬಿಟ್ಟ ಬಾಣ ನಮ್ಮ ಕಡೆಗೇ ತಿರುಗಿಬರುವ ಈ ಪ್ರಕ್ರಿಯೆಯೇ ತಿರುಗುಬಾಣ. ಅಮೆರಿಕ ಬಿಟ್ಟ ಸುಂಕದ ಬಾಣ ಅದರ ಜನರಿಗೆ ಬೆಲೆ ಏರಿಕೆ ರೂಪದಲ್ಲಿ ಚುಚ್ಚುತ್ತದೆ. ಉದಾಹರಣೆಗೆ, ಚೀನಾದ ಮೇಲೆ ವಿಧಿಸಿರುವ 54% ಸುಂಕ ಅಲ್ಲಿಂದ ಯುಎಸ್ಗೆ ಆಮದಾಗುವ ಫೋನ್ಗಳು, ಕಾರುಗಳನ್ನು ದುಬಾರಿಯಾಗಿಸಲಿದೆ. ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೊವೆಲ್ ಇದನ್ನು "ತಾತ್ಕಾಲಿಕ" ಎನ್ನುವ ಮೂಲಕ ಭೀತಿ ತಗ್ಗಿಸುವ ಯತ್ನ ಮಾಡಿದ್ದಾರೆ. ಆದರೆ, ವಾಸ್ತವ ಎಲ್ಲರಿಗೂ ಗೊತ್ತಿದೆ. ಪ್ರತಿ ಸುಂಕ>ಬೆಲೆ ಏರಿಕೆ>ಕಂಪನಿಗಳ ಆದಾಯ ಕುಸಿತ>ಉದ್ಯೋಗ ನಷ್ಟ>ಜನರ ಖರೀದಿ ಶಕ್ತಿ ಕುಸಿತ>ಆರ್ಥಿಕ ಹಿಂಜರಿತ ಎಂಬ ಸರಪಳಿ ಅಮೆರಿಕನ್ನರನ್ನು ಬಾಧಿಸದೇ ಬಿಡುವುದಿಲ್ಲ. ಇನ್ನೂ ಸರಳವಾಗಿ ಹೇಳಬೇಕಾದರೆ ಇದೇ ಸುಂಕಗಳು ಮುಂದುವರಿದರೆ, ಅಮೆರಿಕದ ಜನರು ವರ್ಷಗಟ್ಟಲೆ ನರಳಬೇಕಾಗುತ್ತದೆ.
ಅಮೆರಿಕ ಸೀನಿದರೆ ಜಗತ್ತಿಗೇ ನೆಗಡಿ
ಪರಿಣಾಮ ಇಷ್ಟಕ್ಕೇ ನಿಲ್ಲುವುದಿಲ್ಲ. ಅಮೆರಿಕ ಸೀನಿದರೆ ಜಗತ್ತಿಗೇ ನೆಗಡಿಯಾಗುತ್ತದೆ ಎನ್ನುವುದು ಬಹುತೇಕ ಸತ್ಯ. ಹೀಗಾಗಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿತವಾದರೆ ಅದರ ಪರಿಣಾಮ ಇತರೆ ಆರ್ಥಿಕತೆಗಳೂ ಹಿಂದಕ್ಕೆ ಸಾಗತೊಡಗುತ್ತವೆ. ಅಮೆರಿಕವನ್ನು ಬಹುವಾಗಿ ಅವಲಂಬಿಸಿರುವ ದೇಶಗಳಿಗಂತೂ ಜ್ವರ ಬರುವುದು ಗ್ಯಾರಂಟಿ. ಅಮೆರಿಕಕ್ಕೆ 75% ರಫ್ತು ಮಾಡುವ ಕೆನಡಾಕ್ಕೆ ಅದರ ಜಿಡಿಪಿಯ 35% ಪಾಲು ಅಮೆರಿಕನ್ನರದು. ಅವರ ಜೇಬುಗಳು ಖಾಲಿಯಾದರೆ ಕೆನಡಾದ ಅರ್ಥಿಕತೆ ಪಾತಾಳಕ್ಕೆ ಕುಸಿಯುತ್ತದೆ. ತನ್ನ 80% ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡುವ ಮೆಕ್ಸಿಕೋದಂತೂ ಇನ್ನೂ ದುರಂತ. ಈ ದೇಶ ತನ್ನ ಜಿಡಿಪಿಯ 35% ಆದಾಯವನ್ನು ಇಲ್ಲಿಂದಲೇ ಗಳಿಸುತ್ತದೆ. ಯುಎಸ್ನಲ್ಲಿ ಆರ್ಥಿಕ ಮುಗ್ಗಟ್ಟು ಶುರುವಾದರೆ ಮೆಕ್ಸಿಕಾದ ಕಥೆ ಅಯೋಮಯ. ಅಮೆರಿಕದ ಮೇಲೆ ಹೆಚ್ಚು ಅವಲಂಬಿತವಾಗಿರುವ ಕಾಂಬೋಡಿಯಾ (40-50%), ವಿಯೆಟ್ನಾಂ (30-35%) ಮತ್ತು ತೈವಾನ್ ದೇಶಗಳೂ ಭಾರಿ ಇಕ್ಕಟ್ಟಿಗೆ ಸಿಲುಕಲಿವೆ. ಅಮೆರಿಕದ ಜೊತೆ ಹೆಚ್ಚು ವ್ಯಾಪಾರ-ವಹಿವಾಟು ನಡೆಸುವ ಜಪಾನ್ ಮತ್ತು ಯೂರೂಪಿಯನ್ ಒಕ್ಕೂಟಗಳು ಹೆಚ್ಚು ಸಂಕಟ ಎದುರಿಸಲಿವೆ.
ಹೊಸ ಜಾಗತಿಕ ಮೈತ್ರಿಕೂಟಕ್ಕೆ ನಾಂದಿ
ಅಮೆರಿಕದ ಪ್ರತಿ ಸುಂಕ ಷೇರುಗಳನ್ನು ಪಾತಾಳಕ್ಕೆ ತಳ್ಳಿ, ಆರ್ಥಿಕತೆಗಳನ್ನು ಅಡಕತ್ತರಿಯಲ್ಲಿಸಿರುವುದು ಒಂದು ಕಡೆಯಾದರೆ ಇದು ದೊಡ್ಡ ಮಟ್ಟದಲ್ಲಿ ದೇಶ-ದೇಶಗಳ ನಡುವೆ ವ್ಯಾಪಾರ ಯುದ್ದಕ್ಕೂ ದಾರಿ ಮಾಡಿಕೊಡುತ್ತಿದೆ. ಅಲ್ಲದೆ, ಹೊಸ ರೀತಿಯ ಭೌಗೋಳಿಕ ರಾಜಕೀಯಕ್ಕೆ ಕಾರಣವಾಗುತ್ತಿದೆ. ಅಮೆರಿಕದ ಸುಂಕಾಸ್ತ್ರಕ್ಕೆ ಕುದ್ದು ಹೋಗಿರುವ ಚೀನಾ ಏಪ್ರಿಲ್ 7ರಂದು ಯುಎಸ್ ಸರಕುಗಳಿಗೆ 34% ಸುಂಕ ವಿಧಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದು, ಏಪ್ರಿಲ್ 10 ರಂದು ಹೆಚ್ಚುವರಿ 50% ಸುಂಕ ವಿಧಿಸಿ ಒಟ್ಟು ಸುಂಕವನ್ನು ಶೇ. 84 ಕ್ಕೆ ತಂದು ನಿಲ್ಲಿಸಿದೆ. ಸಾಲದೆಂಬಂತೆ ಫೋನ್ಗಳು, ಎಲೆಕ್ಟ್ರಿಕ್ ಕಾರುಗಳಿಗೆ ಬೇಕಾದ ಅಪರೂಪದ ಲೋಹಗಳನ್ನು ಕಡಿತಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ. ಯುರೋಪಿಯನ್ ಯೂನಿಯನ್ ಏಪ್ರಿಲ್ 10ರಂದು ಯುಎಸ್ನ ವಿಸ್ಕಿ, ಕಾರುಗಳ ಮೇಲೆ 25% ಸುಂಕ ವಿಧಿಸಲು ಯೋಜಿಸಿರುವುದಾಗಿ ತಿಳಿದುಬಂದಿದೆ.
"ಅಮೆರಿಕದ ನಡೆ ವಿಶ್ವವನ್ನು ಪ್ರತಿಸ್ಪರ್ಧಿ ಗುಂಪುಗಳಾಗಿ ವಿಭಜಿಸಬಹುದು. ಜೊತೆಗೆ, ಏಷ್ಯಾ ಮತ್ತು ಯುರೋಪ್ ಒಗ್ಗೂಡಿ ಅಮೆರಿಕವನ್ನು ಒಂಟಿಯಾಗಿಸಬಹುದು," ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಮಾಡಿರುವ ವ್ಯಾಖ್ಯಾನ ನಿಜವೆಂಬಂತೆ ಚೀನಾ ರಷ್ಯಾದೊಂದಿಗೆ ಸಂಬಂಧ ಬಿಗಿಗೊಳಿಸುವ ಸುಳಿವು ನೀಡಿದೆ. ಅಮೆರಿಕ ಇದೇ ಒತ್ತಡ ತಂತ್ರವನ್ನು ಮುಂದುವರಿಸಿದರೆ ಹೊಸ ಮೈತ್ರಿ ಒಕ್ಕೂಟ ರಚಿಸಲು ಯೋಚಿಸುತ್ತಿದೆ. ಯುದ್ಧದ ಕುಲುಮೆಯಲ್ಲಿ ಕುದ್ದು ಹೋಗಿರುವ ಮಧ್ಯಪ್ರಾಚ್ಯದಲ್ಲಿ ಈಗಾಗಲೇ ತೀವ್ರ ಒತ್ತಡವಿದೆ. ಸುಂಕವೇ ನೆಪವಾಗಿ ವ್ಯಾಪಾರ ಮಾರ್ಗಗಳು ಮುಚ್ಚಿದರೆ ತೈಲ ಬೆಲೆ ಗಗನಕ್ಕೇರಬಹುದು. "ಟ್ರಂಪ್ ವಿಧಿಸಿರುವ ಸುಂಕ ಕೇವಲ ಹಣಕಾಸಿಗೆ ಸಂಬಂಧಿಸಿದ್ದಲ್ಲ. ಅದು ಈಗಿನ ಜಾಗತಿಕ ಮೈತ್ರಿಗಳನ್ನು ಮರುರೂಪಿಸುತ್ತದೆ," ಎಂದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥೆ ಕ್ರಿಸ್ಟೀನ್ ಲಗಾರ್ಡ್ ಎಚ್ಚರಿಸಿದ್ದಾರೆ. ಜಾಗತಿಕ ವ್ಯಾಪಾರದ 13% ವಹಿವಾಟು ಹೊಂದಿರುವ ಯುಎಸ್ಗೆ, ಇದು ಉಲ್ಟಾ ಹೊಡೆದರೆ ವಿಶ್ವದ ಮೇಲೆ ಅದಕ್ಕಿರುವ ಹಿಡಿತ ಕಡಿಮೆಯಾಗಬಹುದು. ವಿಶ್ವದ ಹಲವು ದೇಶಗಳು ಬಹಳ ಕಾಲದಿಂದ ಕಾಯುತ್ತಿರುವ ‘ಡಿ-ಡಾಲರೈಸೇಷನ್’ (ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳಲ್ಲಿ ಡಾಲರ್ ಬಳಕೆಯನ್ನು ಕೈಬಿಟ್ಟು ಪರ್ಯಾಯ ಕರೆನ್ಸಿಯನ್ನು ಮುಂಚೂಣಿಗೆ ತರುವ ಪ್ರಕ್ರಿಯೆ. ಇನ್ನೊಂದು ರೀತಿಯಲ್ಲಿ ಅಮೆರಿಕದ ಹಿಡಿತದಿಂದ ಹೊರಬರುವ ದಾರಿ) ಪ್ರಕ್ರಿಯೆಗೆ ವೇಗ ದೊರೆಯಬಹುದು. ಅಂತಿಮವಾಗಿ ಅಮೆರಿಕದ ಆಧಿಪತ್ಯಕ್ಕೆ ಕೊಡಲಿಪೆಟ್ಟು ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ವಿಶ್ವದ ಕಾರ್ಖಾನೆಯಾಗುವತ್ತ ಭಾರತದ ಆತ್ಮನಿರ್ಭರತೆ
ಇತ್ತ, ಭಾರತಕ್ಕೂ ಪ್ರತಿ ಸುಂಕದ ಹೊಡೆತ ಬಿದ್ದಿದ್ದರೂ ಅದು ಹೆಚ್ಚು ಪೆಟ್ಟು ನೀಡಿಲ್ಲ. ಈ ಮೊದಲು ಸರಾಸರಿ 3.3% ಇದ್ದ ಅಮೆರಿಕದ ಸುಂಕ ಈಗ ದಿಢೀರನೆ ಶೇ. 26ಕ್ಕೆ ಜಿಗಿದಿದೆ. ಅಮೆರಿಕದ ಪ್ರತಿ ಸುಂಕ ಸಹಜವಾಗಿಯೇ ಸಂಕಟ ತರುತ್ತದೆ. 2024ರಲ್ಲಿ ಭಾರತ ಔಷಧಿ, ಜವಳಿ, ಆಭರಣ ಸೇರಿದಂತೆ ಯುಎಸ್ಗೆ ₹6,300 ಕೋಟಿ ಮೌಲ್ಯದ ಸರಕುಗಳನ್ನುಮಾರಾಟ ಮಾಡಿತ್ತು. ಆದರೆ, ಅಮೆರಿಕದಿಂದ ಖರೀದಿಸಿದ್ದು ಮಾತ್ರ ₹4,550 ಕೋಟಿ ಮೌಲ್ಯದ ಸರಕು. ಎರಡೂ ದೇಶಗಳ ನಡುವಿನ ಒಟ್ಟು ವ್ಯಾಪಾರ ₹10,850 ಕೋಟಿ. ಇಲ್ಲಿ ಭಾರತ 1750 ಕೋಟಿದ ಮೌಲ್ಯದ ಹೆಚ್ಚುವರಿ ಸರಕನ್ನು ರಫ್ತು ಮಾಡಿದೆ. ಈ ಕೊರತೆ ನೀಗಿಸಿ ವ್ಯಾಪಾರ ಸಮ ಸಮವಾಗಬೇಕು ಎಂಬುದು ಅಮೆರಿಕದ ಬಯಕೆ. ಈ ನಿಟ್ಟಿನಲ್ಲಿ ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (BTA) ಕೈಗೊಳ್ಳಲು ಭಾರತ ಯತ್ನಿಸುತ್ತಿದ್ದು, ಮುಂದಿನ ಸೆಪ್ಟೆಂಬರ್ ವೇಳೆಗೆ ಒಪ್ಪಂದಕ್ಕೆ ಸಹಿ ಬೀಳುವ ಸಂಭವ ಇದೆ. ಈ ಮೂಲಕ ಯುಎಸ್ನ ಬೈಕ್ ಮತ್ತು ತಂತ್ರಜ್ಞಾನ ಆಮದಿನ ಮೇಲಿನ ಸರಕುಗಳ ಮೇಲಿನ ಸುಂಕವನ್ನು ಈಗಿರುವ ಶೇ. 5 ರಿಂದ 30 ರವರೆಗಿನ ಸುಂಕವನ್ನು ಶೂನ್ಯಕ್ಕೆ ಇಳಿಸುವ ಆಫರ್ ಮಾಡಿದೆ. ಭಾರತ ತನ್ನಿಂದ ಇಂಧನ, ರಕ್ಷಣಾ ಸಾಮಗ್ರಿ ಖರೀದಿಸಬೇಕೆಂಬುದು ಅಮೆರಿಕದ ಬಯಕೆ. "ದ್ವಿಪಕ್ಷೀಯ ಒಪ್ಪಂದ 2030ರ ವೇಳೆಗೆ ₹42,000 ಕೋಟಿ ವ್ಯಾಪಾರಕ್ಕೆ ದಾರಿ ಮಾಡಬಹುದು" ಎಂದು ಗೋಯಲ್ ಹೇಳಿದ್ದಾರೆ.
ಅಮೆರಿಕದ ಪ್ರತಿ ಸುಂಕಕ್ಕೆ ಭಾರತ ಜಗ್ಗುವುದಿಲ್ಲ ಎನ್ನುವುದಕ್ಕೆ ಇನ್ನೂ ಹಲವು ಕಾರಣಗಳಿವೆ. ಭಾರತದ ಆರ್ಥಿಕತೆ ಚೀನಾ, ವಿಯೆಟ್ನಾಮ್ನಷ್ಟು ಯುಎಸ್ ಮೇಲೆ ಹೆಚ್ಚು ಅವಲಂಬಿತವಾಗಿಲ್ಲ. ನಮ್ಮ ಒಟ್ಟು ರಫ್ತು ಜಿಡಿಪಿಯ ಸುಮಾರು 21% ಮಾತ್ರ. ಇದರ ಜೊತೆಗೆ, ನಮ್ಮ ಔಷಧಿಗಳ ರಫ್ತು ಯುಎಸ್ನ ಪ್ರತಿ ಸುಂಕದಿಂದ ಹೊರಗುಳಿದಿವೆ. ಮೆಕ್ಸಿಕೋದಂತೆ ಭಾರತ ಒಂದು ದೇಶಕ್ಕೆ ಜೋತುಬಿದ್ದಿಲ್ಲ. "ನಾವು ಒಂದೇ ದಾರಿಗೆ ಸೀಮಿತವಾಗಿಲ್ಲ" ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಾತು ಭಾರತ ಒಂದೇ ಕ್ಷೇತ್ರದ ಉತ್ಪಾದನೆಗೆ ಸೀಮಿತವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ದಾರಿ ದೂರ, ಅವಕಾಶಗಳ ಮಹಾಪೂರ
ಟ್ರಂಪ್ ಚೀನಾದ ಮೇಲೆ 145% ಮತ್ತು ವಿಯೆಟ್ನಾಮ್ನ ಮೇಲೆ ವಿಧಿಸಿರುವ 46% ಸುಂಕ ಭಾರತಕ್ಕೆ ಅವಕಾಶಗಳ ದೊಡ್ಡ ಬಾಗಿಲನ್ನೇ ತೆರೆಯುತ್ತದೆ. 2024ರಲ್ಲಿ ಯುಎಸ್ಗೆ ₹830 ಕೋಟಿ ರೂ ಮೌಲ್ಯದ ಜವಳಿ ರಫ್ತು 2030ರ ವೇಳೆಗೆ ದುಪ್ಪಟ್ಟಾಗಬಹುದು ಎಂದು ಗೋಲ್ಡ್ಮನ್ ಸ್ಯಾಕ್ಸ್ ಹೇಳಿದೆ. ಇನ್ನು ಆ್ಯಪಲ್ ತನ್ನ ಒಟ್ಟು ಐಫೋನ್ಗಳ 20% ಅನ್ನು ಭಾರತದಲ್ಲೇ ತಯಾರಿಸುತ್ತಿದೆ. ಚೀನಾ ದುಬಾರಿಯಾದಂತೆ ಇನ್ನಷ್ಟು ಬ್ರ್ಯಾಂಡ್ಗಳು ಭಾರತದತ್ತ ಮುಖ ಮಾಡಲಿವೆ. "ಭಾರತ ಹೊಸ ಆಯ್ಕೆ" ಎಂದು ಆ್ಯಪಲ್ ಸಿಇಒ ಟಿಮ್ ಕುಕ್ ಹೇಳಿರುವುದು ಇದನ್ನೇ ಎತ್ತಿ ತೋರಿಸುತ್ತಿದೆ. ಭಾರತದ ಕಾರ್ಮಿಕ ವೆಚ್ಚ ಚೀನಾಕ್ಕಿಂತ ಅರ್ಧದಷ್ಟು ಕಡಿಮೆ, ಅಲ್ಲಿದ್ದಷ್ಟು ರಾಜಕೀಯ ಗೊಂದಲ, ನಿರಂಕುಶತೆ ಇಲ್ಲಿಲ್ಲ. ಅಮೆರಿಕದ ಕಂಪನಿಗಳಿಗೆ ಇದೇ ಆಕರ್ಷಣೆ.
ಮತ್ತೊಂದೆಡೆ, ಭಾರತ ರಫ್ತು ಉತ್ತೇಜಿಸಲು ಇಂಗ್ಲೆಂಡ್ ಮತ್ತು ಇತರ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು (FTA) ಕೈಗೊಳ್ಳಲು ಪ್ರಯತ್ನಿಸುತ್ತಿದೆ. ಯುಕೆ ಜೊತೆಗಿನ FTA ಮಾತುಕತೆಯಂತೂ ಅಂತಿಮ ಹಂತಕ್ಕೆ ಬಂದಿದ್ದು, ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಇದರಿಂದ ಇಂಗ್ಲೆಂಡ್ಗೆ ನಮ್ಮ ರಫ್ತು 20% ಹೆಚ್ಚಬಹುದು ಎನ್ನಲಾಗಿದೆ. ಆಸ್ಟ್ರೇಲಿಯಾ, ಯೂರೋಪಿನ್ ಒಕ್ಕೂಟ, ಯುಎಇ ಜೊತೆಗೂ ಮುಕ್ತ ವ್ಯಾಪಾರ ಒಪ್ಪಂದಗಳು ಪ್ರಗತಿಯಲ್ಲಿವೆ. ತನ್ನ ಡಿಫೆನ್ಸ್, ಪೆಟ್ರೋಲಿಯಂ, ಔಷಧ, ಕೃಷಿ, ಟೆಕ್ಸ್ಟೈಲ್ಸ್ ಮತ್ತು ಇನ್ನಿತರೆ ಉತ್ನನ್ನಗಳಿಗೆ ಆಫ್ರಿಕಾ ದೇಶಗಳಲ್ಲಿ ದೊಡ್ಡ ಮಾರುಕಟ್ಟೆ ಸೃಷ್ಟಿಸಲು ಯತ್ನಗಳು ಮುಂದುವರಿದಿವೆ.
ಇದಕ್ಕೆ ಪೂರಕವಾಗಿ ಭಾರತದಲ್ಲಿ ಉತ್ಪಾದನೆಯ ವೇಗ ಹೆಚ್ಚಿದೆ. "ಮೇಕ್ ಇನ್ ಇಂಡಿಯಾ" ಮತ್ತು 2022ರಿಂದ ಆರಂಭಿಸಲಾದ ಸುಮಾರು ₹8,300 ಕೋಟಿ ಮೌಲ್ಯದ ಪಿಎಲ್ಐ (Production-Linked Incentive) ಯೋಜನೆ ಆಭೂತಪೂರ್ವ ಯಶಸ್ಸು ಕಂಡಿದೆ. ದೇಶದಲ್ಲಿ ಉತ್ಪಾದನೆ ಕೈಗೊಳ್ಳಲು ಕಂಪನಿಗಳು ಹೆಚ್ಚು ಹೂಡಿಕೆ ಮಾಡುತ್ತಿವೆ. ಪರಿಣಾಮ, 2017-18 ರಲ್ಲಿ ₹8,500 ಕೋಟಿ ಇದ್ದ ಮೊಬೈಲ್ ರಫ್ತು 2025ರ ವೇಳೆಗೆ 2 ಲಕ್ಷ ಕೋಟಿಗೆ ತಲುಪಿದೆ. ಕುಸಿಯುತ್ತಿರುವ ರೂಪಾಯಿ ಮೌಲ್ಯವೂ ಭಾರತದ ಉತ್ಪನ್ನಗಳನ್ನು ಇನ್ನಷ್ಟು ಅಗ್ಗ ಮಾಡಿದ್ದು, ರಫ್ತು ಹೆಚ್ಚಳಕ್ಕೆ ವರವೇ ಆಗಿದೆ. "ವ್ಯಾಪಾರ ಯುದ್ಧ ನಮ್ಮ ಲಾಂಚ್ಪ್ಯಾಡ್" ಎಂದು ಆರ್ಥಿಕ ತಜ್ಞ ಅರವಿಂದ್ ಪನಗಾರಿಯಾ ಹೇಳಿರುವುದು ಮಾರ್ಮಿಕವಾಗಿದೆ. "ನಮ್ಮದು ಉಕ್ಕಿನ ಮೂಳೆ, ಸುಂಕಗಳು ನಮ್ಮನ್ನು ಮುರಿಯಲಾರವು" ಎಂಬ ಎಸ್ಬಿಐ ಅಧ್ಯಕ್ಷ ದಿನೇಶ್ ಖಾರಾ ಅವರ ಮಾತು ನಿಜವೆನ್ನಿಸತೊಡಗಿದೆ. ಭಾರತದ ಷೇರು ಮಾರುಕಟ್ಟೆ ಆಕಾಶಮುಖಿಯಾಗಿದ್ದು, 2027ರ ವೇಳೆಗೆ ನಿಫ್ಟಿ 30,000 ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ಗೋಲ್ಡ್ಮನ್ ಸ್ಯಾಕ್ಸ್ ಹೇಳುವಂತೆ "ಅಭದ್ರ ಜಗದಲ್ಲಿ ಭಾರತ ಸುಭದ್ರ ಆಯ್ಕೆ"ಯಾಗಿದೆ. ರಘುರಾಮ್ ರಾಜನ್ ಹೇಳುವಂತೆ, “ಭಾರತ ಬಾಗುತ್ತದೆ, ಮುರಿಯುವುದಿಲ್ಲ” ಎನ್ನುವುದು ಇಂತಹ ಸಂಕಷ್ಟ ಸ್ಥಿತಿಯಲ್ಲಿ ಮತ್ತೆ ಸಾಬೀತಾಗಿದೆ.
ಸುಂಕ ಸಮರಕ್ಕೆ ವಿರಾಮ, ನಿಟ್ಟುಸಿರು ಬಿಟ್ಟ ವಿಶ್ವ
ತನ್ನ ನಿರ್ಧಾರದಿಂದ ವಿಶ್ವದಲ್ಲಿ ಅಲ್ಲೊಲ ಕಲ್ಲೋಲ ಸೃಷ್ಟಿಯಾಗಿರುವುದನ್ನು ಅರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳ ಮೇಲೆ ಸಾರಿದ್ದ ಪ್ರತಿ ಸುಂಕ ಸಮರಕ್ಕೆ 90 ದಿನಗಳ ವಿರಾಮ ಘೋಷಿಸಿದ್ದಾರೆ. ಏಪ್ರಿಲ್ 9 ರಂದು ಈ ನಿರ್ಧಾರ ಪ್ರಕಟಗೊಳ್ಳುತ್ತಿದ್ದಂತೆ, ಇಡೀ ವಿಶ್ವವೇ ನಿಟ್ಟುಸಿರು ಬಿಟ್ಟಿದೆ. ಆದರೆ ಎಲ್ಲರಿಗೂ ಅನ್ವಯವಾಗುವಂತೆ ಈ ಮೊದಲು ಪ್ರಕಟಿಸಿದ್ದ 10% ಸುಂಕವನ್ನು ಮುಂದುವರಿಸಿದ್ದಾರೆ. ಈ ಮೂಲಕ ಸಂಧಾನ, ದ್ವಿಪಕ್ಷೀಯ ಮಾತುಕತೆಗಳ ಮೂಲಕ ಸುಂಕದ ಹೊಡೆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ದೇಶಗಳಿಗೆ ಮಾತುಕತೆಗೆ ಅವಕಾಶ ನೀಡಿದ್ದಾರೆ. ಯೂರೋಪ್ ಸಹಿತ ಹಲವು ದೇಶಗಳು ಅಮೆರಿಕದೊಂದಿಗೆ ಸಂಧಾನಕ್ಕೆ ಮುಂದಾಗಿವೆ. ಇದರೊಂದಿಗೆ ಟ್ರಂಪ್ ಅವರ ಒತ್ತಡ ತಂತ್ರ ಫಲಿಸಿದೆ. ಆದರೆ ಯಾವುದಕ್ಕೂ ಜಗ್ಗದೆ ಟ್ರಂಪ್ ಸುಂಕಕ್ಕೆ ಪ್ರತೀಕಾರ ಕ್ರಮ ಕೈಗೊಂಡ ಚೀನಾಕ್ಕೆ ಇನ್ನಷ್ಟು ಸುಂಕದ ಬರೆ ಎಳೆದಿದ್ದಾರೆ. ಶೇ.54 ರಷ್ಟಿದ್ದ ಸುಂಕವನ್ನು ಶೇ.145 ಕ್ಕೆ ಏರಿಸಿದ್ದಾರೆ. ಚೀನಾ ಕೂಡ ತಾನು ಮೊದಲು ವಿಧಿಸಿದ್ದ 34% ಸುಂಕವನ್ನು 84%ಗೆ ಏರಿಸಿದೆ. ಈ ಮೂಲಕ ಚೀನಾ-ಅಮೆರಿಕ ನಡುವೆ ದ್ವಿಪಕ್ಷೀಯ ಸಂಬಂಧ ವಿಷಮ ಸ್ಥಿತಿಗೆ ತಲುಪಿದೆ.
ಗಗನದೆತ್ತರಕ್ಕೆ ಜಿಗಿದ ಸ್ಟಾಕ್ ಮಾರ್ಕೆಟ್: ಇತ್ತ, ಏಪ್ರಿಲ್ 9 ರಂದು ಸುಂಕ ವಿರಾಮದ ಸುದ್ದಿ ತಿಳಿಯುತ್ತಿದ್ದಂತೆ ಅಮೆರಿಕದ ಷೇರು ಮಾರುಕಟ್ಟೆ ಐತಿಹಾಸಿಕ ಏರಿಕೆ ಕಂಡಿದೆ. S&P 500 9.5%, ನಾಸ್ದಾಕ್ 12% ಏರಿದೆ. ಡೊ ಜೋನ್ಸ್ ಸಮಾರು 8% ಗಳಿಕೆ ದಾಖಲಿಸಿತು. ಈ ಮೂಲಕ ಹೂಡಿಕೆದಾರರು ಏಪ್ರಿಲ್ 3ರಂದು ಕಳೆದುಕೊಂಡಿದ್ದನ್ನೆಲ್ಲ ಬಡ್ಡಿಸಮೇತ ವಾಪಸ್ ಪಡೆದಿದ್ದಾರೆ. ವಿಶ್ವದ ಇತರೆ ಮಾರುಕಟ್ಟೆಗಳೂ ಇದನ್ನೇ ಅನುಸರಿಸಿದವು. ಜಪಾನ್ನ ನಿಕ್ಕಿ ಶೇ.9 ರಷ್ಟು ಏರಿತು. ಆಶ್ಚರ್ಯವೆಂದರೆ ತನ್ನ ಮೇಲೆ ವಿಧಿಸಿರುವ ಸುಂಕ ಭಾರದ ಹೊರತಾಗಿಯೂ ಚೀನಾದ ಸೂಚ್ಯಂಕ ಶೇ.1.5 ರಷ್ಟು ಏರಿತು. ರಜೆಯ ಕಾರಣಕ್ಕೆ ತನ್ನ ಸಂತೋಷವನ್ನು ಹಿಡಿದಿಟ್ಟುಕೊಂಡಿದ್ದ ಭಾರತದ ಹೂಡಿಕೆದಾರರು ಶುಕ್ರವಾರ ಅಂದರೆ ಏಪ್ರಿಲ್ 11ರಂದು ಟ್ರಂಪ್ ನಿರ್ಧಾರವನ್ನು ಭರ್ಜರಿಯಾಗಿ ಸಂಭ್ರಮಿಸಿದರು. ಪರಿಣಾಮ, ನಿಫ್ಟಿ ಮತ್ತು ಸೆನ್ಸೆಕ್ಸ್ ಸರಿ ಸುಮಾರು 2% ಏರಿಕೆ ಕಂಡವು.
ಆರ್ಬಿಐನ ಸಕಾಲಿಕ ದರ ಕಡಿತ
ಟ್ರಂಪ್ ನಿರ್ಧಾರದ ಸಂಭ್ರಮ ಇಮ್ಮಡಿಗೊಳಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಏಪ್ರಿಲ್ 10 ರಂದು ತನ್ನ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆಗೊಳಿಸಿ ತನ್ನ ಸಾಲದ ದರವನ್ನು ಶೇ. 6ಕ್ಕೆ ಇಳಿಸಿತು. ಇಷ್ಟು ಮಾತ್ರವಲ್ಲದೆ ತನ್ನ ನಿಲುವನ್ನು ‘ನ್ಯೂಟ್ರಲ್’ ನಿಂದ ‘ಅಕಮಡೇಟಿವ್’ಗೆ ಬದಲಾಯಿಸುವ ಮೂಲಕ ಇನ್ನಷ್ಟು ಬಡ್ಡಿದರ ತಗ್ಗಿಸುವ ಸ್ಪಷ್ಟ ಸುಳಿವು ನೀಡಿತು. ಡಿಸೆಂಬರ್ ವೇಳಗೆ ಈ ಬಡ್ಡಿ ದರ ಶೇ. 5ಕ್ಕೆ ಇಳಿಯಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಆರ್ಥಿಕ ವರ್ಷದ ಹಣದುಬ್ಬರ 4.2% ನಿಂದ 4% ಗೆ ಇಳಿಯುವ ಮುನ್ಸೂಚನೆ ಇದ್ದು, ದೇಶದ ಆರ್ಥಿಕತೆಗೆ ಹುರುಪು ಬಂದಂತಾಗಿದೆ.


