ಅಂಗೈಯಲ್ಲೇ ಆಪ್ತಮಿತ್ರ; ಸಣ್ಣ ಮಾದರಿಗಳ ದೊಡ್ಡ ಕ್ರಾಂತಿ
AI ಅನಂತ ಅವತಾರ – ಭಾಗ 15
ಡಾ.ರಮೇಶ್ ನಿಂಬೆಮರದಳ್ಳಿ
ಲ್ಯಾಪ್ಟಾಪ್, ಮೊಬೈಲ್ಗಳಲ್ಲೇ ಅಡಗುವ ಎಸ್ಎಲ್ಎಮ್
ಇಂಟರ್ನೆಟ್ನ ಗೊಡವೆಯಿಲ್ಲದೆ ಕಾರ್ಯನಿರ್ವಹಣೆ
ಭದ್ರತೆಯ ಭಯವಿಲ್ಲ, ಗೌಪ್ಯತೆಯ ಆತಂಕವಿಲ್ಲ
ವೆಚ್ಚ ಕಡಿಮೆ, ಹೆಚ್ಚು ನಿಖರ
ಪ್ರತಿಯೊಬ್ಬರೂ ವೈಯಕ್ತಿಕ ಎಐ ಮಾಡೆಲ್ ಹೊಂದುವ ಅವಕಾಶ
ಸ್ಟಾರ್ಟಪ್, ಸಣ್ಣ ಉದ್ಯಮಗಳಿಗೆ ವರದಾನ
ಇಂಟರ್ನೆಟ್ ಇಲ್ಲದ ಜಾಗದಲ್ಲಿ ದಿಢೀರನೆ ನಿಮಗೆದುರಾದ ಒಂದು ಸಮಸ್ಯೆಗೆ ಪರಿಹಾರಕ್ಕಾಗಿ ನಿಮ್ಮ ಮೊಬೈಲ್ಗೆ ಪ್ರಶ್ನೆ ಕೇಳುತ್ತೀರಿ. ನಿಮಗೆ ಕೂಡಲೇ ಸೂಕ್ತ ಉತ್ತರ ದೊರೆಯುತ್ತದೆ. ಪರಭಾಷಿಕರೊಂದಿಗೆ ಸಂವಹನ ನಡೆಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಅವರ ಭಾಷೆ ಬಾರದ ನೀವು ಕಕ್ಕಾಬಿಕ್ಕಿಯಾಗುತ್ತೀರಿ. ಥಟ್ಟನೆ ನಿಮ್ಮ ಸ್ಮಾರ್ಟ್ವಾಚ್ ಅನ್ನು ಪರಿಭಾಷಿಕರ ಮುಂದೆ ಹಿಡಿದು ಅದನ್ನು ಕನ್ನಡಕ್ಕೆ ಅನುವಾದಿಸುವಂತೆ ಕೇಳುತ್ತೀರಿ. ಅರೇ! ಅವರು ಹೇಳಿದ್ದು ನಿಮಗೆ ಗೊತ್ತಾಯಿತು. ಎಐ ಕಾಲದಲ್ಲಿ ಇದೇನೂ ಕಲ್ಪನೆಯಲ್ಲ. ಇದು ಸಣ್ಣ ಭಾಷಾ ಮಾದರಿಗಳ (ಸ್ಮಾಲ್ ಲ್ಯಾಂಗ್ವೇಜ್ ಮಾಡೆಲ್ – SLM) ಕೈಚಳಕ. ಈ ಕ್ರಾಂತಿಕಾರಿ ಬದಲಾವಣೆ ಈಗಾಗಲೇ ಆರಂಭವಾಗಿದ್ದು, ಮುಂದೆ ಬೃಹತ್ ಆಗಿ ಬೆಳೆಯಲಿದೆ.
ದೊಡ್ಡ ಮಾಡೆಲ್ಗಳೆಂದರೆ ಬಿಳಿಯಾನೆಗಳು
ಈವರೆಗೆ ಎಐ ಮಾಡೆಲ್ ಎಂದರೆ LLM ಎಂಬುದನ್ನು ಕೇಳುತ್ತಾ ಬಂದಿದ್ದೇವೆ. ಚಾಟ್ಜಿಪಿಟಿ, ಜೆಮಿನಿ, ಕ್ಲಾಡ್, ಲಾಮಾ, ಗ್ರಾಕ್ – ಇವೇ ಜಗತ್ತಿನ ಜನಪ್ರಿಯ LLM ಗಳು ಅಂದರೆ ದೊಡ್ಡ ಭಾಷಾ ಮಾದರಿಗಳು (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ – LLM). ಆದರೆ ಈಗ ಚೋಟಾ ಮಾಡೆಲ್ಗಳ ಯುಗ ಆರಂಭವಾಗಿದೆ. ಬಡಾ ಮಾಡೆಲ್ಗಳ ಎದುರು ಚುರುಕಾಗಿ ಕಾರ್ಯನಿರ್ವಹಿಸುವ, ಕೆಲವು ವಿಷಯಗಳಲ್ಲಿ ಅವುಗಳನ್ನೇ ಹಿಂದಿಕ್ಕುವ ಈ ಸಣ್ಣ ಭಾಷಾ ಮಾದರಿಗಳು ನಿಮ್ಮ ಜೇಬಲ್ಲೂ, ಮುಂಗೈ ಮೇಲೂ ಕುಳಿತುಕೊಳ್ಳಬಲ್ಲವು ಎನ್ನುವುದೇ ವಿಶೇಷ. ದೊಡ್ಡ ಮಾಡೆಲ್ಗಳು ಬೃಹತ್ ಡೇಟಾ ಸೆಂಟರ್ಗಳಲ್ಲಿ ಕ್ಲೌಡ್ ಮೂಲಕ ಕಾರ್ಯನಿರ್ವಹಿಸುತ್ತವೆ. ಬಿಲಿಯನ್, ಟ್ರಿಲಿಯಲ್ಗಟ್ಟಲೆ ಮಾನದಂಡಗಳಲ್ಲಿ ತರಬೇತಿ ಪಡೆದಿರುತ್ತವೆ. ಕಥೆ, ಕವಿತೆ, ಲೇಖನ ಬರೆಯುವುದು, ಕೋಡ್ ರಚಿಸುವುದು, ಕೇಳಿದ ಯಾವುದೇ ಪ್ರಶ್ನೆಗೆ ಉತ್ತರಿಸುವುದೂ ಸೇರಿದಂತೆ ಇವುಗಳಿಗೆ ಎಲ್ಲವೂ ಗೊತ್ತು. ಬಹುತೇಕ ವಿಷಯಗಳಲ್ಲಿ ತಜ್ಞತೆ ಹೊಂದಿರುವ ದೊಡ್ಡ ಮಾದರಿಗಳಿಗೆ ಭೂಮಿ-ಆಕಾಶದಲ್ಲಿರುವ ಎಲ್ಲದರ ಬಗ್ಗೆಯೂ ತಿಳಿದಿರುತ್ತದೆ. ಇದೇ ಕಾರಣಕ್ಕೆ ಇವು ಬಿಳಿಯಾನೆಗಳು, ಇವುಗಳನ್ನು ಸಾಕುವುದು ಬಲು ದುಬಾರಿ.
ದೊಡ್ಡ ಮಾಡೆಲ್ಗಳನ್ನು ಸೃಷ್ಟಿಸಲು ಭಾರಿ ಗಾತ್ರದ ಡೇಟಾ ಬೇಕು. ಉದಾಹರಣೆಗೆ GPT-4o ಸೃಷ್ಟಿಸಲು 1.8 ಟ್ರಿಲಿಯನ್ ಪ್ಯಾರಾಮೀಟರ್ಗಳನ್ನು (ಮಾನದಂಡಗಳು) ಬಳಸಲಾಗಿದೆ. ಅದೇ ಮೈಕ್ರೊಸಾಫ್ಟ್ನ ಸಣ್ಣ ಭಾಷಾ ಮಾದರಿಯಾದ ‘Phi-3-ಮಿನಿ’ ಸೃಷ್ಟಿಸಲು ಕೇವಲ 3.8 ಬಿಲಿಯನ್ ಪ್ಯಾರಾಮೀಟರ್ಗಳನ್ನು ಬಳಸಲಾಗಿದೆ. ಎಂದರೆ, Phi-3-ಮಿನಿ ಎಂಬ ಸಣ್ಣ ಮಾದರಿ GPT-4o ಗಿಂತ 128 ಪಟ್ಟು ಚಿಕ್ಕದು. ದೊಡ್ಡ ಭಾಷಾ ಮಾದರಿಯು ಸ್ಪೇಸ್ಎಕ್ಸ್ನ ಭಾರಿ ಗಾತ್ರದ ಸ್ಟಾರ್ಶಿಪ್ ಆದರೆ Phi-3-ಮಿನಿ ಒಂದು ಸಣ್ಣ ಡೆಲಿವರಿ ವ್ಯಾನ್ ಇದ್ದ ಹಾಗೆ. ಹೀಗಾಗಿ ಎರಡರ ನಡುವೆ ಅಗಾಧ ವ್ಯತ್ಯಾಸವಿದೆ. ಇದೇ ಕಾರಣಕ್ಕೆ ದೊಡ್ಡ ಮಾದರಿಗಳನ್ನು ಸೃಷ್ಟಿಸಲು ಮತ್ತು ತರಬೇತಿ ನೀಡಲು ನೂರಾರು ತಜ್ಞರು ಬೇಕು. ರನ್ ಮಾಡಲು ಭಾರಿ ಸಾಮರ್ಥ್ಯದ ದೊಡ್ಡ ಜಿಪಿಯುಗಳು ಅತ್ಯಗತ್ಯ. ದೊಡ್ಡ ಕ್ಲೌಡ್ ಸೇವೆಯ ಮೂಲಕ ಜನರಿಗೆ ತಲುಪಿಸಲು ದುಬಾರಿ ಮೂಲಸೌಕರ್ಯ ಬೇಕು. ಇವುಗಳಿಗೆ ಒಂದೊಂದು ಪ್ರಶ್ನೆ ಕೇಳಿದಾಗಲೂ ಅವು ಕೊಡುವ ಉತ್ತರಕ್ಕೆ ಸಾವಿರಾರು ರೂಪಾಯಿಗಳು ಖರ್ಚಾಗುತ್ತದೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಇವು ನಡೆಯಲು ಇಂಟರ್ನೆಟ್ ಬೇಕೇ ಬೇಕು. ಪ್ರಶ್ನೆ ಸಣ್ಣದಿದ್ದರೆ ಬೇಗ ಉತ್ತರ, ಪ್ರಶ್ನೆ ಕಠಿಣವಾಗುತ್ತಾ ಹೋದಂತೆ ಉತ್ತರವೂ ನಿಧಾನ ಎಂದರೆ ಲೇಟೆನ್ಸಿ ಜಾಸ್ತಿ. ಇಂಥ ಲಾರ್ಜ್ ಲ್ಯಾಂಗ್ಲೇಜ್ ಮಾಡೆಲ್ಗಳು ವಿಪರೀತ ವಿದ್ಯುತ್ ಬಳಸುತ್ತವೆ. ಹೀಗಾಗಿ ದೊಡ್ಡ ಮಾಡೆಲ್ಗಳು ಪರಿಸರಕ್ಕೆ ಹಾನಿಕರ. ಎಐ ಮಾಡೆಲ್ಗಳ ಬೇಕಾಬಿಟ್ಟಿ ಬಳಕೆಗೆ ಮಿತಿ ಹೇರುವುದರ ಹಿಂದೆ ಈ ಖರ್ಚು-ವೆಚ್ಚದ ಲೆಕ್ಕಾಚಾರವೇ ನಿರ್ಣಾಯಕವಾಗಿರುತ್ತದೆ.
ಛೋಟಾ ನಾಮ್, ಬಡಾ ಕಾಮ್
ಸಣ್ಣ ಭಾಷಾ ಮಾದರಿಗಳು ಹೆಸರಿಗಷ್ಟೇ ಸಣ್ಣವು. ಆದರೆ ಕಾರ್ಯಕ್ಷಮತೆ ಮತ್ತು ನಿಖರತೆ ಮಾತ್ರ ದೊಡ್ಡದು. ಇವುಗಳನ್ನು ದೊಡ್ಡ ಮಾದರಿಗಳಿಗೆ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಗಿದೆ. ಇವು ದೊಡ್ಡ ಮಾದರಿಗಳ ಸರಳ ಅಥವಾ ಸಂಕುಚಿತ ರೂಪಗಳು. ಇವುಗಳನ್ನು ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಅಥವಾ ರಾಸ್ಬೆರಿ ಪೈ (Raspberry Pi) ನಂತಹ ಸಣ್ಣ ಕಂಪ್ಯೂಟರ್ಗಳು ಹಾಗೂ ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಸಾಧನಗಳಲ್ಲಿ ನೇರವಾಗಿ ಬಳಸಬಹುದು. ದೊಡ್ಡ ಮಾದರಿಗಳು ಸಾಮಾನ್ಯವಾಗಿ ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರೆ, ಸಣ್ಣ ಮಾದರಿಗಳು ನಿರ್ದಿಷ್ಟ ಕಾರ್ಯಗಳಿಗೆಂದೇ ವಿಶೇಷವಾಗಿ ರೂಪುಗೊಂಡಿರುತ್ತವೆ. ವೇಗ, ನಿಖರತೆ ಮತ್ತು ಪರಿಣಾಮಕ್ಕೆ ಇಲ್ಲಿ ಆದ್ಯತೆ. "ಸಣ್ಣ ಭಾಷಾ ಮಾದರಿಗಳು ಅವುಗಳ ಗಾತ್ರ ಮತ್ತು ಲಭ್ಯತೆಯಿಂದ ಎಐಯನ್ನು ಎಲ್ಲರಿಗೂ ತಲುಪಿಸುತ್ತವೆ," ಎನ್ನುತ್ತಾರೆ ಮೈಕ್ರೋಸಾಫ್ಟ್ ರಿಸರ್ಚ್ನ ಸೆಬಾಸ್ಟಿಯನ್ ಬುಬೆಕ್. "ಅದೇ ವೇಳೆ, ಅವುಗಳನ್ನು ನಾವು ದೊಡ್ಡ ಮಾದರಿಗಳಷ್ಟು ಶಕ್ತಿಶಾಲಿಯಾಗಿಸಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದೇವೆ" ಎನ್ನುತ್ತಾರೆ.
ಇತ್ತೀಚಿನ ತಾಂತ್ರಿಕ ಪ್ರಗತಿಗಳು ಸಣ್ಣ ಮಾದರಿಗಳನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಿವೆ. ಮೈಕ್ರೋಸಾಫ್ಟ್ನ ಫೈ-3 ಮಿನಿ ಕಡಿಮೆ ಸಂಪನ್ಮೂಲಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಓಪನ್ಸೋರ್ಸ್ ಮಾದರಿಗಳಾದ ಮಿಸ್ಟ್ರಲ್ 7B (Mistral 7B) ಮತ್ತು ಟೈನಿ ಲ್ಲಾಮಾ (TinyLlama) ಸಣ್ಣ ಸಾಧನಗಳಲ್ಲಿ ಇದ್ದುಕೊಂಡೇ ಅನುವಾದ, ಸಾರಾಂಶ, ಕೋಡಿಂಗ್ನಂತಹ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸುತ್ತವೆ. ಅಲ್ಲದೆ, ಸಣ್ಣದೆಂದರೆ ದುರ್ಬಲವಲ್ಲ ಎಂಬುದನ್ನು ನಿರೂಪಿಸಿವೆ.
ಸ್ಟಾರ್ಟ್ಅಪ್ಗಳಿಗೆ ತೆರೆದ ಹೊಸ ಬಾಗಿಲು
ಸಣ್ಣ ಮಾದರಿಗಳ ನಿಜವಾದ ಮ್ಯಾಜಿಕ್ ಇರುವುದೇ ಅದರ ಅನ್ವಯಿಕೆಯಲ್ಲಿ. ಭಾರತದಲ್ಲಿ, ನೋಬ್ರೋಕರ್ ಎಂಬ ರಿಯಲ್ ಎಸ್ಟೇಟ್ ಪ್ಲಾಟ್ಫಾರ್ಮ್ ಗ್ರಾಹಕ ಸೇವೆಗಾಗಿ ಸಣ್ಣ ಭಾಷಾ ಮಾದರಿ Convozen ಅನ್ನು ಅಭಿವೃದ್ಧಿಪಡಿಸಿದೆ. ಇದು ಬಹುಭಾಷಾ ಸಂಭಾಷಣೆಗಳನ್ನು ವಿಶ್ಲೇಸಿಸಿ ಅವರ ಸಂಭಾಷಣೆಗಳಿಂದ ಗ್ರಾಹಕರ ಭಾವನೆಗಳನ್ನು ಪತ್ತೆ ಮಾಡುತ್ತದೆ. "ಒಂದು ನಿರ್ದಿಷ್ಟ ಬಳಕೆಯ ಸಣ್ಣ ಮಾದರಿಯನ್ನು ನಿರ್ಮಿಸಲು ಕೇವಲ 10 ಗಂಟೆಗಳ ರೆಕಾರ್ಡಿಂಗ್ ಸಾಕು," ಎನ್ನುತ್ತಾರೆ ನೋಬ್ರೋಕರ್ನ ಸಹಸಂಸ್ಥಾಪಕ ಅಖಿಲ್ ಗುಪ್ತಾ. ಇದು ಭಾರತದ ಭಾಷಾ ವೈವಿಧ್ಯತೆ ಮತ್ತು ಅಗತ್ಯಗಳಿಗೆ ತಕ್ಕಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ವಿಶೇಷ ಪರಿಣಿತಿ ಇದರ ವೈಶಿಷ್ಟ್ಯತೆ
ದೊಡ್ಡ ಭಾಷಾ ಮಾದರಿಗಳು ಅನುಯುಕ್ತ ಎಂದಲ್ಲ. ದೊಡ್ಡ ಮಾದರಿಗಳು ಎಲ್ಲವನ್ನೂ ತಿಳಿದ ಜ್ಞಾನಿಗಳಿದ್ದ ಹಾಗೆ. ಇತ್ತ ಸಣ್ಣ ಮಾದರಿಗಳು ಯಾವುದಾದರು ಒಂದು ವಿಷಯದಲ್ಲಿ ಪರಿಣಿತಿ ಹೊಂದಿದ ತಜ್ಞ ಇದ್ದ ಹಾಗೆ. ಸುದ್ದಿಗಳನ್ನು ವಿಶ್ಲೇಷಣೆ ಮಾಡಲೆಂದೇ ರೂಪಿಸಲಾದ ಸಣ್ಣ ಮಾದರಿಯೊಂದು ದೊಡ್ಡ ಮಾದರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ನಿಖರವಾಗಿ ಆ ಕೆಲಸ ಮಾಡಬಲ್ಲದು. ಐಒಟಿ ಸಾಧನಗಳೂ ಇದರಿಂದ ಇನ್ನಷ್ಟು ಸ್ಮಾರ್ಟ್ ಆಗಬಹುದು. ಕಣ್ಗಾವಲಿಗೆ ಅಳವಡಿಸಿದ ಸಿಸಿಟಿವಿ ಬುದ್ಧಿವಂತಿಕೆಯಿಂದ ವರ್ತಿಸಬಹುದು. ಕೃಷಿಯಲ್ಲಿ ಬಳಸುವ ಐಒಟಿ ಸಾಧನಗಳು ಇಂಟರ್ನೆಟ್ನ ತೊಡಕಿಲ್ಲದೆ ಕಾರ್ಯನಿರ್ವಹಿಸಬಹುದು. ಇದರ ಸಾಧ್ಯತೆಗಳು ಅಪಾರ. ಒಟ್ಟಿನಲ್ಲಿ ದೊಡ್ಡ ಮಾದರಿಗಳು ಜಟಿಲ, ಬಹುಮುಖ ಕಾರ್ಯಗಳಿಗೆ ಸೂಕ್ತವಾಗಿದ್ದರೆ, ಸಣ್ಣ ಮಾದರಿಗಳು ವೇಗ, ಗೌಪ್ಯತೆ ಮತ್ತು ವೆಚ್ಚವೇ ಮುಖ್ಯವಾದ ಸಂದರ್ಭಗಳಲ್ಲಿ ಸೂಕ್ತವಾಗುತ್ತವೆ. ಇದು ಸ್ಟಾರ್ಟ್ಅಪ್ಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿಗೆ ತುಂಬಾ ಉಪಯುಕ್ತ.
ಎಐನ ಹೊಸ ಶಕೆ ಆರಂಭ
ಸಣ್ಣ ಭಾಷಾ ಮಾದರಿಗಳು ಎಐನ ಹೊಸ ಶಕೆಯನ್ನೇ ಆರಂಭಿಸಲು ಸಜ್ಜಾಗಿವೆ. ಈ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷದ ವೇಳೆಗೆ ಎಲ್ಲೆಲ್ಲೂ SLM ಗಳದೇ ಮಾತಾಗಿರುತ್ತದೆ. ಈ ಮಾದರಿಗಳು ಶಕ್ತಿಶಾಲಿಯಷ್ಟೇ ಅಲ್ಲದೆ ವೈಯಕ್ತಿಕ, ಪ್ರಾಯೋಗಿಕ ಮತ್ತು ವ್ಯಾಪಕವಾಗಿರುತ್ತವೆ. ಕ್ಲೌಡ್ ಅವಲಂಬನೆಯಿಂದ ಮುಕ್ತವಾಗಿ, ನೇರವಾಗಿ ನಮ್ಮ ಸಾಧನಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ, SLMಗಳು ಎಐಯನ್ನು ಜನರಿಗೆ ಹೆಚ್ಚು ಹತ್ತಿರವಾಗಿಸುತ್ತಿವೆ. ಈ ಮಾದರಿಗಳು ಮುಂದುವರಿದಂತೆ, ತಂತ್ರಜ್ಞಾನವು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವೀಕರಣಗೊಳ್ಳುತ್ತದೆ. ಎಂದರೆ, ಎಐನ ಲಾಭ ಜನಸಾಮಾನ್ಯರಿಗೂ ತಲುಪುವಂತೆ ಮಾಡುತ್ತವೆ. ಮುಂದೆ ಬರುವ ಎಐ ಆಧಾರಿತ ಮೊಬೈಲ್ಗಳಲ್ಲಿ ಎಐ ತಯಾರಿಕೆ ಹಂತದಲ್ಲೇ ಪ್ರಿ-ಇನ್ಸ್ಟಾಲ್ ಆಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಐ ನಿಮ್ಮ ಜೇಬಿನಲ್ಲಿ, ಕೈಯಲ್ಲಿ ಮತ್ತು ನಿಮ್ಮ ಕನ್ನಡದದಲ್ಲೇ ಇರುತ್ತದೆ.
ಜೇಬಿನಲ್ಲೇ ಗೆಳೆಯ, ಬೇಕೆಂದಾಗ ಸಹಾಯ
ಎಸ್ಎಲ್ಎಮ್ಗಳು ಸ್ಮಾರ್ಟ್ಫೋನ್, ಲ್ಯಾಪ್ಟಾಪ್ಗಳಲ್ಲಿ ಕುಳಿತುಕೊಳ್ಳಲು ಸಜ್ಜಾಗಿವೆ. ನಿಮ್ಮ ಮೊಬೈಲ್ನಲ್ಲಿರುವ ಎಸ್ಎಲ್ಎಮ್ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ನಿಮ್ಮ ಇಮೇಲ್ಗಳಿಗೆ ಪ್ರತಿಕ್ರಿಯೆ ಬರೆಯುತ್ತದೆ. ನೀವು ಬರೆಯುವ ಲೇಖನವೋ, ಪ್ರಬಂಧವೋ, ಕಥೆಯೋ, ಕವನಕ್ಕೆ ಸಹಾಯ ಮಾಡುತ್ತದೆ. ನೀವು ಯೋಚಿಸುವ ಗಂಭೀರ ವಿಚಾರಗಳ ಕುರಿತು ನಿಮ್ಮೊಂದಿಗೆ ಚರ್ಚೆ ನಡೆಸುತ್ತದೆ. ನಗಬೇಕೇಂದಾಗ ಜೋಕ್ ಮಾಡುತ್ತದೆ. ನಿಮಗೆ ಇಷ್ಟವಾಗುವ ಒಳ್ಳೆಯ ಹಾಡುಗಳನ್ನು ಕೇಳಿಸುತ್ತದೆ. ಒಂದು ರೀತಿಯಲ್ಲಿ ನಿಮ್ಮ ಜೊತೆಯಲ್ಲಿರುವ ನಿಮ್ಮ ಆಪ್ತಮಿತ್ರನಂತೆ ಈ ಸ್ಮಾರ್ಟ್ ಎಸ್ಎಲ್ಎಮ್ ನಿಮ್ಮ ಕೈಯಲ್ಲಿ ಕುಳಿತಿರುತ್ತದೆ. ಆಶ್ಚರ್ಯ ಎಂದರೆ ಇದು ಸಕ್ರಿಯವಾಗಿರಲು ಇಂಟರ್ನೆಟ್ ಬೇಕಾಗಿಲ್ಲ. ಈ ಸಾಧ್ಯತೆ ದೊಡ್ಡ ಮಾದರಿಗಳಿಂದ ಸಾಧ್ಯವಿಲ್ಲ. ಏಕೆಂದರೆ ಅವು ರನ್ ಆಗಲು ಇಂಟರ್ನೆಟ್ ಬೇಕೇಬೇಕು.
ದೊಡ್ಡ ಮಾದರಿಗಳಲ್ಲಿ ಬಳಸುವಲ್ಲಿ ಮತ್ತೊಂದು ಸಮಸ್ಯೆ ಇದೆ. ನಾವು ಯಾವುದೇ ವಿಷಯದ ಕುರಿತು ವಿಶ್ಲೇಷಣೆ ಬಯಸಿದರೆ, ಸೂಕ್ತ ಸಲಹೆ ಕೇಳಬೇಕಾದರೆ ಆ ಡೇಟಾವನ್ನು ದೊಡ್ಡ ಮಾದರಿಯ ಸರ್ವರ್ಗೆ ಕಳಿಸಲೇಬೇಕು. ಅಂದರೆ ಗೌಪ್ಯ ವಿಚಾರಗಳನ್ನೂ ಹಂಚಿಕೊಳ್ಳಬೇಕು. ಅದು ವೈಯಕ್ತಿಕ ಮಾಹಿತಿಯೇ ಇರಬಹುದು, ಕಂಪನಿಯೊಂದರ ರಹಸ್ಯ ಡೇಟಾ ಇರಬಹುದು ಇಲ್ಲವೇ ಸರಕಾರದ ಬಳಿ ಇರುವ ಸಾರ್ವಜನಿಕ ಮಾಹಿತಿಯೇ ಇರಬಹುದು. ಇಂಥ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದೇ ವಿಶ್ಲೇಷಣೆ ಮಾಡುವುದು ಹೇಗೆ? ಸಣ್ಣ ಭಾಷಾ ಮಾದರಿಗಳು ಕ್ರಾಂತಿಕಾರಿ ಎನಿಸುವುದು ಇಲ್ಲೇ. ಇಂಟರ್ನೆಟ್ ಇಲ್ಲದ ಸ್ಥಳೀಯ ಕಂಪ್ಯೂಟರ್ನಲ್ಲಿ ಈ ಮಾದರಿಯಲ್ಲಿ ಇನ್ಸ್ಟಾಲ್ ಮಾಡಿ ಅಲ್ಲಿ ಗೌಪ್ಯತೆಗೆ ಅಡ್ಡಿ ಬಾರದ ಹಾಗೆ ಅಲ್ಲಿನ ಡೇಟಾವನ್ನು ವಿಶ್ಲೇಷಿಸಬಹುದು. ಇಂಟರ್ನೆಟ್ ಸಂಪರ್ಕದ ಗೋಜಿಲ್ಲದೆ, ರಹಸ್ಯ ಮಾಹಿತಿ ಸೋರಿಕೆಯ ಭಯವಿಲ್ಲದೆ, ವೈಯಕ್ತಿಕ ಮಾಹಿತಿ ದುರುಪಯೋಗವಾಗುವ ಆತಂಕವಿಲ್ಲದೆ, ಸ್ಥಳೀಯವಾಗಿ ಎಐನ ಲಾಭ ಪಡೆಯುವ ಏಕೈಕ ದಾರಿಯೇ ಸಣ್ಣ ಭಾಷಾ ಮಾದರಿಗಳು.
ಆರೋಗ್ಯ ಕ್ಷೇತ್ರದಲ್ಲಿ, ಸಣ್ಣ ಮಾದರಿಗಳನ್ನು ರೋಗಲಕ್ಷಣ ವಿಶ್ಲೇಷಣೆ ಮತ್ತು ಸಲಹೆ ನೀಡಲು ಬಳಸಲಾಗುತ್ತಿದೆ. ರೋಗಿಯ ಮಾಹಿತಿಯನ್ನು ಸ್ಥಳೀಯವಾಗಿ, ಸುರಕ್ಷಿತವಾಗಿ ಇಟ್ಟುಕೊಂಡೇ ಇದನ್ನು ಸಾಧಿಸಬಹುದು. ತರಗತಿಗಳಲ್ಲಿ, ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಪ್ರಗತಿಗೆ ತಕ್ಕಂತೆ ಶಿಕ್ಷಣ ಒದಗಿಸಲು ಸಣ್ಣ ಮಾದರಿಗಳನ್ನು ಬಳಸುತ್ತಿದ್ದಾರೆ.
ದೊಡ್ಡ ಭಾಷಾ ಮಾದರಿಗಳನ್ನು ನಿರ್ಮಿಸುವುದಕ್ಕಿಂತ ಎಐ ತಂತ್ರಜ್ಞಾನವನ್ನು ಎಲ್ಲರೂ ಬಳಸುವಂತೆ ಮಾಡುವುದು ಹೆಚ್ಚು ಮುಖ್ಯ. ಎಷ್ಟೇ ಹಣವಿರಲಿ, ಎಷ್ಟೇ ಶಕ್ತಿಶಾಲಿಯಾಗಿರಲಿ ಎಐ ಅಭಿವೃದ್ಧಿ ಮುಕ್ತವಾಗಿರಬೇಕು ಮತ್ತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರೂ ಎಐಯನ್ನು ತಮ್ಮದೇ ಅನುಕೂಲಕ್ಕಾಗಿ ನಿಯಂತ್ರಿಸಬಾರದು. ಅದು ಕೆಲಸವರಿಗೆ ಮಾತ್ರ ಲಭ್ಯವಾಗದೆ ಎಲ್ಲರಿಗೂ ಲಭ್ಯವಾಗಬೇಕು.
-ನಂದನ್ ನಿಲೇಕಣಿ ಸಹಸಂಸ್ಥಾಪಕ ಮತ್ತು ಅಧ್ಯಕ್ಷರ, ಇನ್ಫೋಸಿಸ್



