ಎಐ ಜೊತೆ ಮಾತನಾಡಿ, ಕನ್ನಡದಲ್ಲೇ...
ಪ್ರಾಂಪ್ಟ್ ಎಂದರೇನು, ಕನ್ನಡದಲ್ಲೇ ಪ್ರಾಂಪ್ಟ್ ರಚಿಸುವುದು ಹೇಗೆಂದು ಸರಳವಾಗಿ ವಿವರಿಸಲಾಗಿದೆ
ಡಾ.ರಮೇಶ್ ನಿಂಬೆಮರದಳ್ಳಿ
‘ಪ್ರಾಂಪ್ಟ್ ಎಂಜಿನಿಯರ್’ ಎಂಬುದು ಇಂದಿನ ಎಐ ಕಾಲಘಟ್ಟದಲ್ಲಿ ಹೆಚ್ಚು ಟ್ರೆಂಡಿಂಗ್ನಲ್ಲಿರುವ ಪದಗುಚ್ಛ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ಕೆಲಸ. ಭಾರತದಲ್ಲಿ ಈ ಹುದ್ದೆಯಲ್ಲಿರುವವರು ಸರಾಸರಿ ವರ್ಷಕ್ಕೆ 40 ಲಕ್ಷ ಸಂಬಳ ಪಡೆಯುತ್ತಾರೆ. ಅಷ್ಟು ಮಾತ್ರವಲ್ಲದೆ ಎಐ ಟೂಲ್ಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಈ ‘ಪ್ರಾಂಪ್ಟ್ ಎಂಜಿನಿಯರಿಂಗ್’ ಎಂಬ ಕಲೆ ಗೊತ್ತಿರಲೇಬೇಕು. ಇದರ ಮಹತ್ವ ಅರಿತಿರುವ ಅಂತಾರಾಷ್ಟ್ರೀಯ ಮಟ್ಟದ ಎಐ, ರೋಬೋಟಿಕ್ಸ್ ಮತ್ತು ಸೈಬರ್ ಸೆಕ್ಯುರಟಿ ತಜ್ಞ ಪ್ರೊ. ಎಸ್.ಎಸ್ ಐಯ್ಯಂಗಾರ್ ಅವರು ಪ್ರಾಂಪ್ಟ್ ಎಂಬ ಎಐ ಭಾಷೆಯನ್ನು ವಿಕ ಮನಿ ಓದುಗರಿಗಾಗಿ ಸರಳವಾಗಿ ವಿವರಿಸಿದ್ದಾರೆ. ಪ್ರಾಂಪ್ಟ್ ಬರೆಯುವುದು ಹೇಗೆ? ಪ್ರಾಂಪ್ಟ್ನಲ್ಲಿ ಇರಬೇಕಾದ ಮುಖ್ಯ ಅಂಶಗಳೇನು ಎಂಬುದನ್ನು ಉದಾಹರಣೆಗಳ ಸಹಿತ ಸರಳವಾಗಿ ವಿವರಿಸಿದ್ದಾರೆ. ಈ ಮೂಲಕ ಪ್ರಾಂಪ್ಟ್ ಎಂಜಿನಿಯರಿಂಗ್ ಎನ್ನುವುದು ಎಲ್ಲರೂ ಕಲಿಯಬಹುದಾದ ಸುಲಭ ಕಲೆಯಾಗಿದ್ದು, ಎಲ್ಲರೂ ಅಗತ್ಯವಾಗಿ ತಿಳಿಯಬೇಕಾದ ಜ್ಞಾನ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
“ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆ ಮಾತಿದೆ. ಯಾರೊಂದಿಗೆ, ಯಾವಾಗ, ಹೇಗೆ ಮಾತನಾಡಬೇಕು ಎಂಬುದನ್ನು ಚೆನ್ನಾಗಿ ತಿಳಿದವರು ಎಲ್ಲರೂ ಮೆಚ್ಚುವಂತೆ ಮಾತನಾಡಬಲ್ಲವರಾಗಿರುತ್ತಾರೆ. ಹಾಗಾಗಿ ಅವರು ಯಾರೊಂದಿಗೂ ಜಗಳ ಆಡುವ ಸಂದರ್ಭ ಬರುವುದಿಲ್ಲ ಎಂಬುದು ಈ ಗಾದೆಯ ಅರ್ಥ. ಅವರಿಗೆ ‘ಮಾತನಾಡುವ ಕಲೆ’ ಚೆನ್ನಾಗಿ ಕರಗತವಾಗಿರುತ್ತದೆ. ನಾವು ಆಡುವ ಮಾತು ಎದುರಿಗಿರುವ ವ್ಯಕ್ತಿಗೆ ಹೆಚ್ಚಿನ ಗೊಂದಲ ಮೂಡಿಸದೆ, ಅಪಾರ್ಥಕ್ಕೆ ದಾರಿ ಮಾಡಿಕೊಡದೆ, ಸಲ್ಲದ ಪ್ರಶ್ನೆಗಳನ್ನು ಹುಟ್ಟುಹಾಕದೆ, ಅನುಮಾನ ಹುಟ್ಟಿಸದೆ ನೇರವಾಗಿ ಮತ್ತು ಸುಲಭವಾಗಿ ಅರ್ಥವಾಗುವಂತಿರಬೇಕು. ನಮ್ಮ ಮಾತು ಸ್ಪಷ್ಟವಾಗಿದ್ದರೆ, ನಿಶ್ಚಿತವಾಗಿದ್ದರೆ ಹಾಗೂ ನೇರವಾಗಿದ್ದರೆ ಕೆಲಸಗಳು ಸಲೀಸಾಗುತ್ತವೆ. ಹೀಗೆ ‘ಮಾತನಾಡುವ ಕಲೆ’ ತಿಳಿದವರು ಕೇವಲ ಮನುಷ್ಯರೊಂದಿಗೆ ಮಾತ್ರವಲ್ಲ ಎಐ ಜೊತೆಗೂ ಅತ್ಯುತ್ತಮವಾಗಿ ಮಾತನಾಡಬಹುದು. ಮನುಷ್ಯರೊಂದಿಗೆ ಸಂವಹನ ನಡೆಸಲು ಬಳಸುವ ‘ಆಡು ಮಾತನ್ನೇ’ ಎಐ ಜೊತೆ ಮಾತನಾಡಲೂ ಬಳಸಬಹುದು.
ನಿಮ್ಮ ಪ್ರಶ್ನೆಯಂತೆ ಎಐ ಉತ್ತರ
ಎಐ ಮಾಡೆಲ್ ಜೊತೆಗೆ ಅಕ್ಷರದಲ್ಲಿ ನಾವು ಆಡುವ ಮಾತನ್ನೇ “ಪ್ರಾಂಪ್ಟ್” ಎಂದು ಕರೆಯುತ್ತೇವೆ. ಎಐ ಜೊತೆಗೆ ಚೆನ್ನಾಗಿ ಮಾತನಾಡುವ ಕಲೆಯನ್ನು “ಪ್ರಾಂಪ್ಟ್ ಎಂಜಿನಿಯರಿಂಗ್” ಎಂದು ಕರೆಯುತ್ತೇವೆ. ಪ್ರಾಂಪ್ಟ್ ಎಂಜಿನಿಯರಿಂಗ್ ಎಂದರೆ ಎಐ ಪ್ರೋಗ್ರ್ಯಾಮ್, ಎಐ ಮಾಡೆಲ್ ಅಥವಾ ಎಲ್ಎಲ್ಎಮ್ಗಳ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಜೊತೆಗೆ “ವ್ಯವಹರಿಸುವ ಒಂದು ಕಲೆ” ಮತ್ತು ವೈಜ್ಞಾನಿಕ ವಿಧಾನ. ಇದು ನಾವು ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುವುದಕ್ಕಿಂತ ಭಿನ್ನವೇನೂ ಅಲ್ಲ. ಅವರೊದಿಗೆ ಮಾತನಾಡುವಾಗ ಅರೆಬರೆಯಾಗಿ ಮಾತನಾಡಿದರೆ ಅವರು ತಿರುಗಿ ಪ್ರಶ್ನೆ ಮಾಡುತ್ತಾರೆ. ಅವರ ಪ್ರಶ್ನೆಗಳಿಗೆ ನಾವು ಉತ್ತರಿಸಿದ ಮೇಲೆ ಅವರಿಗೆ ನಾವು ಹೇಳುತ್ತಿರುವ ವಿಚಾರ ಸರಿಯಾಗಿ ಅರ್ಥವಾಗುತ್ತದೆ. ಮೊದಲೇ ನಾವು ಗೊಂದಲ ಇಲ್ಲದಂತೆ ಎಲ್ಲವನ್ನೂ ಸ್ಪಷ್ಟವಾಗಿ ಹೇಳಿದ್ದರೆ ಅವರು ಪ್ರಶ್ನೆ ಮಾಡುವ ಅಗತ್ಯ ಬರುತ್ತಿರಲಿಲ್ಲ. ಇದೇ ನಿಯಮ ಎಐ ಭಾಷೆಗೂ ಅನ್ವಯಿಸುತ್ತದೆ. ನೀವು ಚಾಟ್ಜಿಪಿಟಿಗೆ ಒಂದು ಪ್ರಶ್ನೆ ಕೇಳಿದರೆ ಅದು ಸ್ಪಷ್ಟವಾಗಿದ್ದರೆ ಅದು ಕೊಡುವ ಉತ್ತರವೂ ಸ್ಪಷ್ಟವಾಗಿರುತ್ತದೆ ಮತ್ತು ನಿಖರವಾಗಿರುತ್ತದೆ. ನೀವು ಕೇಳುವ ವಿಚಾರದಲ್ಲಿ ಪೂರ್ಣತೆ ಇಲ್ಲದಿದ್ದರೆ ಚಾಟ್ಜಿಪಿಟಿ ನೀಡುವ ಉತ್ತರವೂ ಅಪೂರ್ಣವಾಗಿರುತ್ತದೆ. ಹೀಗಾಗಿ ಮರುಪ್ರಶ್ನೆ ಕೇಳುತ್ತದೆ.
ಜೋಗ ಜಲಪಾತಕ್ಕೆ ಪ್ರವಾಸ ಹೋಗೋಣ ಬನ್ನಿ
ಪ್ರಾಂಪ್ಟ್ರ ರಚಿಸುವ ಬಗೆ ಹೇಗೆ ಎಂಬುದನ್ನು ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳೋಣ. ಈಗ ಎಲ್ಲೆಲ್ಲೂ ಜೋರು ಮಳೆಯಾಗುತ್ತಿರುವ ಕಾರಣ ಜೋಗ ಜಲಪಾತ ತುಂಬಿ ಹರಿಯುತ್ತಿದ್ದು, ಕಣ್ಮನ ಸೆಳೆಯುತ್ತಿದೆ. ಆ ಅಮೋಘ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಆಸೆಯಾಗಿದೆ. ಆದರೆ ಅಲ್ಲಿಗೆ ಹೋಗಲು ಬಸ್ಗಳ ಸಮಯ, ಉಳಿದುಕೊಳ್ಳುವ ವ್ಯವಸ್ಥೆ ಇತ್ಯಾದಿ ವಿವರಗಳು ನಮಗೆ ತಿಳಿದಿಲ್ಲ. ಈ ಕುರಿತು ಉತ್ತರ ಪಡೆಯಲು ಇದೇ ವಿಷಯವನ್ನು ಚಾಟ್ಜಿಪಿಟಿಗೆ ಕೇಳೋಣ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಎಐ ಮಾಡೆಲ್ ಆಯ್ಕೆ ನಿರ್ಧಾರವಾಗಿದೆ. ಇದನ್ನೇ ಪ್ರಾಂಪ್ಟ್ ಆಗಿ ಪರಿವರ್ತಿಸಿ ನಮಗೆ ಬೇಕಾದ ಮಾಹಿತಿಯನ್ನು ಎಐನಿಂದ ಪಡೆಯುವುದು ಹೇಗೆಂದು ನೋಡೋಣ.
ಮೊದಲ ಅಸ್ಪಷ್ಟ ಪ್ರಾಂಪ್ಟ್:
“ಜೋಗ ಜಲಪಾತಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಬಗ್ಗೆ ತಿಳಿಸು”
ಈ ಪ್ರಾಂಪ್ಟ್ನಿಂದ ನಮಗೆ ಸ್ಪಷ್ಟ ಉತ್ತರ ಬರುವುದಂತೂ ಸಾಧ್ಯವಿಲ್ಲ. ಏಕೆಂದರೆ, ಇದರಲ್ಲಿ ಮೂರು ಮುಖ್ಯ ಸಮಸ್ಯೆಗಳಿವೆ. ಒಂದು, ನಾವು ಎಲ್ಲಿಂದ ಹೊರಡುತ್ತೇವೆ ಎಂಬ ಮಾಹಿತಿಯಿಲ್ಲ. ಎರಡು, ನಾವು ಎಂದು ಜೋಗ ಜಲಪಾತ ನೋಡಲು ಹೋಗುತ್ತಿದ್ದೇವೆ ಎನ್ನುವ ವಿವರ ಇಲ್ಲ. ಮೂರನೆಯದು, ನಾವು ಯಾವ ಸಾರಿಗೆ ಎಂದರೆ ಬಸ್ ಅಥವಾ ರೈಲು ಬಳಸಲು ಬಯಸುತ್ತೇವೆ ಎಂಬ ಮಾಹಿತಿ ಇಲ್ಲ. ಈ ಮೂರೂ ವಿಚಾರಗಳು ನಾವು ಬಯಸುವ ಉತ್ತರಕ್ಕೆ ಅತ್ಯಗತ್ಯವಾಗಿ ಬೇಕಿರುವ ಅಂಶಗಳು. ಹೀಗಾಗಿ ನಮ್ಮ ಅಸ್ಪಷ್ಟ ಪ್ರಾಂಪ್ಟ್ನಿಂದ ಗೊಂದಲಗೊಳ್ಳುವ ಚಾಟ್ಜಿಪಿಟಿ (ಯಾವುದೇ ಎಐ ಮಾಡೆಲ್ ಆಗಿರಬಹುದು) ತನಗೆ ಏನು ಗೊತ್ತೋ ಆ ಮಾಹಿತಿಯನ್ನು ನಮ್ಮ ಮುಂದೆ ಹರಡುತ್ತದೆ. ನಾವು ಮತ್ತೆ ನಮ್ಮ ಹೊಸ ಪ್ರಾಂಪ್ಟ್ನಲ್ಲಿ ಇನ್ನಷ್ಟು ಮಾಹಿತಿ ನೀಡುತ್ತೇವೆ. ಅಲ್ಲಿಯೂ ಪೂರ್ತಿ ಮಾಹಿತಿ ಸಿಗುವುದಿಲ್ಲ. ಆಗ ಮತ್ತದೇ ಅಸ್ಪಷ್ಟ ಉತ್ತರ. ಮತ್ತೆ ಪ್ರಾಂಪ್ಟ್ ಬರೆಯುತ್ತೇವೆ. ಹೀಗೆ ಹಲವು ಬಾರಿ ಹಲವು ಪ್ರಾಂಪ್ಟ್ಗಳ ಮೂಲಕ ಮಾಹಿತಿಯನ್ನು ಸೇರಿಸುತ್ತಾ ಹೋಗುತ್ತೇವೆ. ಇಲ್ಲವೇ ಹಿಂದಿನ ಪ್ರಾಂಪ್ಟ್ಗಳನ್ನು ತಿದ್ದುಪಡಿ ಮಾಡುತ್ತಾ ಹೋಗುತ್ತೇವೆ. ಹೀಗೆ ಹಲವು ಪ್ರಾಂಪ್ಟ್ಗಳ ಮೂಲಕ ನಾವು ಒದಗಿಸಿದ ಮಾಹಿತಿಯನ್ನು ಚಾಟ್ಜಿಪಿಟಿ ನೆನಪಿನಲ್ಲಿಟ್ಟುಕೊಂಡು ಅಂತಿಮವಾಗಿ ನಮಗೆ ಮಾಹಿತಿ ಒದಗಿಸುತ್ತದೆ. ಆ ಅಂತಿಮ ಉತ್ತರ ನಾವು ಬಯಸಿದ ಎಲ್ಲ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂಬ ಖಾತ್ರಿಯೇನೂ ಇಲ್ಲ. ಯಾಕೆಂದರೆ ಎಐ ಮಾಡೆಲ್ಗಳು ಒಮ್ಮೆ ಕೊಟ್ಟ ಉತ್ತರವನ್ನು ಮತ್ತೆ ಕೊಡುವುದಿಲ್ಲ. ಮೊದಲು ಕೊಟ್ಟ ಉತ್ತರ ಮಾಹಿತಿಯುಕ್ತವಾಗಿರಬಹುದು ಕೊನೆಯಲ್ಲಿ ಕೊಡುವ ಉತ್ತರ ಅದಕ್ಕಿಂತ ಕೆಟ್ಟದಾಗಿಯೂ ಇರಬಹುದು. ಇದರಿಂದ ಸಮಯ ವ್ಯರ್ಥವಾಗುಗುವುದಲ್ಲದೆ ಬೇಕಾದ ಮಾಹಿತಿಯೂ ಸಿಗದೇ ಹೋಗುತ್ತದೆ. “ಒಳ್ಳೆಯ ಪ್ರಾಂಪ್ಟ್” ರಚಿಸುವ ಮೂಲಕ ಕಡಿಮೆ ಸಮಯದಲ್ಲಿ “ಒಳ್ಳೆಯ ಉತ್ತರ”ವನ್ನು ಪಡೆಯಬಹುದು. ಹಾಗಿದ್ದರೆ ಮೇಲಿನ ಉದಾಹರಣೆಗೆ ಸಂಬಂಧಿಸಿದಂತೆ ಒಳ್ಳೆಯ ಪ್ರಾಂಪ್ಟ್ ಹೇಗಿರಬಹುದು ಎಂಬುದನ್ನು ನೋಡೋಣ.
ಸ್ಪಷ್ಟ ಅಂತಿಮ ಪ್ರಾಂಪ್ಟ್:
“ನಾವು ಮೂವರು ಸದಸ್ಯರು ಜೋಗ ಜಲಪಾತದ ಪ್ರವಾಸಿ ತಾಣವನ್ನು ನೋಡಲು ಬಯಸಿದ್ದೇವೆ. ಅದಕ್ಕಾಗಿ ನಮಗೆ ಬೆಂಗಳೂರಿನಿಂದ ಸಾರಿಗೆ ವಿವರ, ಹೋಟೆಲ್ಗಳ ಮಾಹಿತಿ, ಅಲ್ಲಿನ ಸೌಲಭ್ಯಗಳ ಪೂರ್ಣ ವಿವರಗಳ ಅಗತ್ಯವಿದೆ. ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಅನುಭವಿ ಪ್ರವಾಸ ನಿರ್ವಾಹಕನಾದ ನೀನು ಕೇಳಿದ ಎಲ್ಲಾ ವಿವರಗಳನ್ನು ಒದಗಿಸಿ, ನಮಗೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ನಮಗಾಗಿ ಒಂದು ದಿನದ ಪ್ರವಾಸಿ ಯೋಜನೆ ರೂಪಿಸು.
ಪ್ರವಾಸದ ವಿವರ: ನಾವು ಬೆಂಗಳೂರಿನಿಂದ ಸೋಮವಾರ ಎಂದರೆ ಸೆಪ್ಟೆಂಬರ್ 8 ರ ರಾತ್ರಿ ಹೊರಟು ಬುಧವಾಗ ಬೆಳಗ್ಗೆ ಬೆಂಗಳೂರಿಗೆ ಬರಲು ಯೋಜಿಸಿದ್ದೇವೆ. ಸ್ಲೀಪರ್ ಅಥವಾ ಸೆಮಿ ಸ್ಲೀಪರ್ ಬಸ್ ಪ್ರಯಾಣ ನಮ್ಮ ಆದ್ಯತೆ. ಇಲ್ಲವಾದರೆ ಸ್ಲೀಪರ್ ರೈಲು ಪ್ರಯಾಣವೂ ಆಗಬಹುದು. ಮೆಜೆಸ್ಟಿಕ್ ನಿಲ್ದಾಣವೂ ಸೇರಿದಂತೆ ಬೆಂಗಳೂರಿನಲ್ಲಿ ಲಭ್ಯವಿರುವ ವಿವಿಧ ನಿಲ್ದಾಣಗಳ ವಿವರಗಳು ಇರಲಿ. ಸಮಯ ಮತ್ತು ಅವುಗಳ ಟಿಕೆಟ್ ದರಗಳ ಸಹಿತ ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳ ಪಟ್ಟಿ ಪ್ರತ್ಯೇಕವಾಗಿರಲಿ. ಜೋಗ ಜಲಪಾತಕ್ಕೆ ಹತ್ತಿರವಿರುವ ದಿನಕ್ಕೆ ₹1000 ಗಿಂತ ಕಡಿಮೆ ದರ ವಿಧಿಸುವ ಸುಸಜ್ಜಿತ ಹೋಟೆಲ್ ವಿವರಗಳೂ ಇರಲಿ. ಹೋಟೆಲ್ ಆಯ್ಕೆ ಮಾಡುವಾಗ ಬಳಕೆದಾರರ ರಿವ್ಯೂ ಮತ್ತು ರೇಟಿಂಗ್ಗಳನ್ನು ಗಮನಿಸು. ಇದು ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತಕ್ಕೆ ಒಂದು ದಿನ ಪ್ರವಾಸವಾಗಿದ್ದು, ಸೂಕ್ತ ಪ್ರವಾಸ ಯೋಜನೆ ಮತ್ತು ತೆಗೆದುಕೊಂಡು ಹೋಗಬೇಕಾದ ಅಗತ್ಯ ವಸ್ತುಗಳ ಸಹಿತ ಸೂಕ್ತ ಸಲಹೆಗಳೂ ಇರಲಿ. ಜೋಗ ಜಲಪಾತಕ್ಕೆ ಸಮೀಪದಲ್ಲಿ ನೋಡಬಹುದಾದ ಪ್ರವಾಸಿ ತಾಣಗಳನ್ನೂ ಯೋಜನೆಯಲ್ಲಿ ಸೇರಿಸಬಹುದು. ಒಟ್ಟಾರೆ ಪ್ರವಾಸದ ಅಂದಾಜು ಖರ್ಜು-ವೆಚ್ಚವೂ ಯೋಜನೆಯಲ್ಲಿ ಸೇರಿರಲಿ. ಪ್ರಶ್ನೆ, ಗೊಂದಲ, ಅನುಮಾನಗಳಿದ್ದರೆ ಯೋಜನೆ ರೂಪಿಸುವ ಮೊದಲೇ ಉತ್ತರ ಪಡೆದುಕೊಂಡು ಮುಂದುವರೆಯಬೇಕು. ಒಟ್ಟಾರೆ ಪ್ರವಾಸ ಯೋಜನೆಯ ಔಟ್ಪುಟ್ ಅನ್ನು ಪಿಡಿಎಫ್ ರೂಪದಲ್ಲಿ ಒದಗಿಸು.”
ಇದು ಒಂದು ಸಮಗ್ರ ಪ್ರಾಂಪ್ಟ್. ಒಂದು ದಿನದ ಜೋಗ ಜಲಪಾತ ಪ್ರವಾಸದ ಕುರಿತು ಬಹುತೇಕ ಕೇಳಬಹುದಾದ ಎಲ್ಲಾ ಮಾಹಿತಿ ಇದರಲ್ಲಿದೆ. ಹೆಚ್ಚುವರಿಯಾಗಿ ಬೇಕಾಗುವ ಅಗತ್ಯ ವಸ್ತುಗಳು, ಸಲಹೆ, ಪ್ರವಾಸದ ಅಂದಾಜು ಖರ್ಚು-ವೆಚ್ಚ, ನೋಡಬಹುದಾದ ಹತ್ತಿರದ ತಾಣಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ. ಹಾಗಿದ್ದರೆ ಈ ಪ್ರಾಂಪ್ಟ್ನಲ್ಲಿರುವ ಯಾವ ಮುಖ್ಯ ಅಂಶಗಳು ಇದನ್ನು ಒಂದು ಸಮಗ್ರ ಪ್ರಾಂಪ್ಟ್ ಆಗಿಸಿದೆ ಎಂಬುದನ್ನು ನೋಡೋಣ.
ಮೊದಲಿಗೆ ಎಐ ಮಾಡೆಲ್ಗೆ “ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಅನುಭವಿ ಪ್ರವಾಸ ನಿರ್ವಾಹಕ” ಎಂಬ ಒಂದು ವ್ಯಕ್ತಿತ್ವವನ್ನು ನಿಯೋಜಿಸಲಾಗಿದೆ. ಇದು ಎಐ ಮಾಡೆಲ್ಗೆ ಇರುವ ನೂರಾರು ಕೌಶಲ್ಯಗಳಲ್ಲಿ ನಮಗೆ ಬೇಕಾದ ಕೌಶಲ್ಯವನ್ನು ಜಾಗೃತಗೊಳಿಸುವ ವಿಧಾನ. ಇದನ್ನು ಮಿಕ್ಸ್ಚರ್ ಆಫ್ ಎಕ್ಸ್ಫರ್ಟ್ ಎಂದು ಕರೆಯಲಾಗುತ್ತದೆ. ಒಂದು ಎಲ್ಎಲ್ಎಮ್ಗೆ ನೂರಾರು ಅಥವಾ ಸಾವಿರಾರು ವಿಚಾರಗಳಲ್ಲಿ ಕುಶಲತೆ, ಪ್ರಾವೀಣ್ಯತೆ ಇರುತ್ತದೆ. ನಮಗೆ ಯಾವ ಪ್ರಾವೀಣ್ಯತೆ (ಇದನ್ನು ಪರ್ಸೋನ ಎಂದೂ ಕರೆಯಲಾಗುತ್ತದೆ) ಬೇಕೆಂದು ತಿಳಿಸಿಬಿಟ್ಟರೆ ಎಐಗೆ ಗೊಂದಲ ತಪ್ಪುತ್ತದೆ. ಅದೇ ಸ್ವತಂತ್ರವಾಗಿ ಆರಿಸಿಕೊಂಡರೆ ಕೆಲವೊಮ್ಮೆ ತಪ್ಪಾದ ಪ್ರಾವೀಣ್ಯತೆಯನ್ನು ಆರಿಸಿಕೊಳ್ಳುವ ಅಪಾಯ ಇರುತ್ತದೆ. ನಾವು ಕೇಳಿರುವ ಮಾಹಿತಿ ಒದಗಿಸುವುದು ಪ್ರವಾಸದ ಕುರಿತು ಅನುಭವ, ಜ್ಞಾನ ಇರುವ ವ್ಯಕ್ತಿಗೆ ಸುಲಭ. ಇದನ್ನೇ ಒಬ್ಬ ವೈದ್ಯನಿಗೆ ಕೇಳಿದರೆ ಅವರು ಕೊಡುವ ಮಾಹಿತಿ ಪ್ರವಾಸದ ಸಂದರ್ಭದಲ್ಲಿ ಅನುಸರಿಸಬೇಕಾದ ಆರೋಗ್ಯ ಕಾಳಜಿಗೆ ಸಂಬಂಧಿಸಿರುತ್ತದೆಯೇ ಹೊರತು ಪ್ರವಾಸದ ಪ್ಲ್ಯಾನ್ ಅಲ್ಲ. ಈ ತೊಂದರೆ ತಪ್ಪಿಸಲು ನಾವೇ ನಮ್ಮ ಕೆಲಸಕ್ಕೆ ಸೂಕ್ತ ವ್ಯಕ್ತಿಯನ್ನು (ಪ್ರಾವೀಣ್ಯತೆ) ನಿಯೋಜಿಸಬೇಕು. ಇದು ಯಾವುದೇ ಯಶಸ್ವಿ ಪ್ರಾಂಪ್ಟ್ನ ಅತಿಮುಖ್ಯ ಅಂಶ. ಇನ್ನು, ನಾವು ನೀಡಿರುವ ಟಾಸ್ಕ್ಗೆ ಬೇಕಾದ ಎಲ್ಲಾ ಮೂಲಭೂತ ಮಾಹಿತಿಯನ್ನು ನೀಡಲಾಗಿದೆ. ಪ್ರಶ್ನೆಗಳಿದ್ದರೆ ಕೇಳಿ ಮುಂದುವರಿಯುವಂತೆ ಸೂಚಿಸಲಾಗಿದೆ. ಇದು ನಾವು ನೀಡಿರುವ ಮಾಹಿತಿಯಲ್ಲಿ ಕೊರತೆ ಇದ್ದರೆ ಎಐ ಮಾಡೆಲ್ ಅದನ್ನು ಕೇಳಿ ಪಡೆಯಲು ಸಹಾಯಕವಾಗುತ್ತದೆ. ನಮ್ಮ ಅಗತ್ಯ ಮತ್ತು ಆದ್ಯತೆಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಇದೆಲ್ಲಾ ಆದ ಮೇಲೆ ನನಗೆ ಬೇಕಾದ ಮಾಹಿತಿಯನ್ನು ಹೇಗೆ ನೀಡಬೇಕು (ಔಟ್ಪುಟ್, ಇಲ್ಲಿ ಪಿಡಿಎಫ್) ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ . ನಮ್ಮ ಪ್ರಾಂಪ್ಟ್ ಸಮಗ್ರವಾಗಿರುವುದರಿಂದ ನಮಗೆ ದೊರೆಯುವ ಉತ್ತರವೂ ಸಮಗ್ರವಾಗಿ, ಸ್ಪಷ್ಟವಾಗಿ, ನಮಗೆ ಬೇಕಾದ ಹಾಗೆಯೇ ಇರುತ್ತದೆ. ನೀವಿದನ್ನು ಚಾಟ್ಜಿಪಿಟಿಗೆ ನೀಡಿ ಪರೀಕ್ಷಿಸಿ. ಅದು ನೀಡುವ ಉತ್ತರ ನೋಡಿ ನೀವು ಅಚ್ಚರಿಯಾಗುತ್ತೀರಿ. ಎಐ ಮಾಡೆಲ್ಗಳು ಕನ್ನಡದಲ್ಲಿ ಇನ್ನೂ ಅಷ್ಟು ಪ್ರಾವೀಣ್ಯತೆ ಗಳಿಸಿಲ್ಲದ ಕಾರಣ ಒಂದಿಷ್ಟು ತಪ್ಪುಗಳು ಕಾಣಿಸಬಹುದು. ಬೇಕಿದ್ದರೆ ಇದೇ ಪ್ರಾಂಪ್ಟ್ ಅನ್ನು ಗೂಗಲ್ ಟ್ರಾನ್ಸ್ಲೇಟ್ನಲ್ಲಿ ಇಂಗ್ಲಿಷ್ಗೆ ಅನುವಾದಿಸಿಯೂ ಬಳಸಬಹುದು. ಉತ್ತರ ಇನ್ನೂ ಹೆಚ್ಚು ಸಮರ್ಪಕವಾಗಿರುತ್ತದೆ.
ಒಳ್ಳೆಯ ಪ್ರಾಂಪ್ಟ್ ರಚಿಸುವುದು ಹೇಗೆ?
ಜೋಗ ಜಲಪಾತದ ಪ್ರವಾಸ ಯೋಜನೆಯ ಉದಾಹರಣೆಯನ್ನು ಆಧಾರವಾಗಿಟ್ಟುಕೊಂಡು ಒಂದು ಒಳ್ಳೆಯ ಪ್ರಾಂಪ್ಟ್ ರಚಿಸುವುದು ಹೇಗೆಂದು ತಿಳಿಯೋಣ. ಇಲ್ಲಿ ಕೊಟ್ಟಿರುವ ಪ್ರಾಂಪ್ಟ್ ಅನ್ನು ಯಾವುದೇ ಪ್ರವಾಸವನ್ನು ಪ್ಲ್ಯಾನ್ ಮಾಡಲು ಬಳಸಬಹುದು. ಅಗತ್ಯ ವಿವರಗಳನ್ನು ಬದಲಾಯಿಸಿದರೆ ಸಾಕು.
ಮೊದಲು, ನಿಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿಕೊಳ್ಳಿ. ಎಂದರೆ ಎಐ ಮಾಡೆಲ್ಗೆ ಏನು ಕೇಳಲು ಹೊರಟಿದ್ದೀರಿ ಮತ್ತು ಯಾವ ಮಾಹಿತಿ ಅಥವಾ ಉತ್ತರವನ್ನು ನಿರೀಕ್ಷಿಸುತ್ತಿದ್ದೀರಿ ಎನ್ನುವುದನ್ನು ಸಷ್ಟಪಡಿಸಿಕೊಳ್ಳಿ.
ಒಬ್ಬ ವ್ಯಕ್ತಿಯಿಂದ ಯಾವುದೇ ಉತ್ತರ ಪಡೆಯುವಾಗ ಅವರಿಗೆ ನಾವು ಅಗತ್ಯವಾಗಿ ತಿಳಿಸಬೇಕಾದ ಮಾಹಿತಿ ಏನು ಎಂಬ ರೀತಿಯಲ್ಲಿಯೇ ಎಐ ಮಾಡೆಲ್ಗೆ ಯಾವ ಅಗತ್ಯ ಮಾಹಿತಿ ತಿಳಿಸಬೇಕು (ಇನ್ಪುಟ್) ಎಂಬುದನ್ನು ಬರೆದುಕೊಳ್ಳಿ.
ಎಐ ಮಾಡೆಲ್ಗೆ ಒಬ್ಬ ತಜ್ಞ ವ್ಯಕ್ತಿತ್ವವನ್ನು ಆರೋಪಿಸಿ (ಇದೇ ಪರ್ಸೋನ) ಎಂದರೆ ಯಾವ ವ್ಯಕ್ತಿಗೆ ಈ ಮಾಹಿತಿ ಕೇಳಿದರೆ ಅವರು ಸರಿಯಾಗಿ ಉತ್ತರಿಸುತ್ತಾರೆ ಎಂಬುದನ್ನು ಅಂದಾಜಿಸಿ ಅದನ್ನೇ ನಮೂದಿಸಿ. ಉದಾಹರಣೆಗೆ, ‘ನೀನು ಒಬ್ಬ ಉದ್ಯೋಗ ಮಾರ್ಗದರ್ಶಿ’, ‘ನೀನು ಒಬ್ಬ ಶಿಕ್ಷಣ ಸಲಹೆಗಾರ’, ‘ನೀನು ಒಬ್ಬ ಅತ್ಯುತ್ತಮ ಹೂಡಿಕೆ ತಜ್ಞ’, ‘ನೀನು ಒಬ್ಬ ಪರಿಣಿತ, ಅನುಭವಿ ಷೇರು ಮಾರುಕಟ್ಟೆ ತಜ್ಞ’, ‘ನೀನು ಒಬ್ಬ ಎಐ ತಂತ್ರಜ್ಞಾನ ಪರಿಣಿತ’ – ಹೀಗೆ ವಿವಿಧ ತಜ್ಞತೆ ಹೊಂದಿರುವ ವ್ಯಕ್ತಿತ್ವವನ್ನು ಎಐಗೆ ತಿಳಿಸಿದ ಕೂಡಲೇ ಆ ವ್ಯಕ್ತಿಗೆ ಇರಬಹುದಾದ ಜ್ಞಾನ, ಕೌಶಲ್ಯಗಳು ಎಐ ಮಾಡೆಲ್ನಲ್ಲಿ ಜಾಗೃಗೊಳ್ಳುತ್ತವೆ. ಆಗ ನೀವು ಕೇಳುವ ಪ್ರಶ್ನೆಗೆ ಸೂಕ್ತ ಉತ್ತರಗಳು ದೊರೆಯುತ್ತವೆ.
ನಿಮಗೆ ಉತ್ತರ ನೀಡಲು ಎಐಗೆ ಅಗತ್ಯವಾಗಿ ಬೇಕಾದ ವಿವರವನ್ನು ಕ್ರಮಬದ್ಧವಾಗಿ ನಿಮ್ಮ ಪ್ರಾಂಪ್ಟ್ನಲ್ಲಿ ಸೇರಿಸಿ. ನೀವು ಎಐಗೆ ನೀಡುತ್ತಿರುವ ಟಾಸ್ಕ್ ಯಾವುದು ಎನ್ನುವುದರ ಮೇಲೆ ಈ ವಿವರಗಳು ಬದಲಾಗುತ್ತವೆ. ‘ಒಂದು ತಿಂಗಳಲ್ಲಿ 3 ಕೆ.ಜಿ ತೂಕ ಇಳಿಸುವ ದಾರಿಗಳು ಯಾವುವು?’ ಎಂಬುದು ನೀವು ಎಐಗೆ ನೀಡುತ್ತಿರುವ ಟಾಸ್ಕ್ ಆದರೆ, ‘ನೀನು ಒಬ್ಬ ಅನುಭವಿ ಫಿಟ್ನೆಸ್ ತಜ್ಞ’ ಎಂಬ ವ್ಯಕ್ತಿತ್ವ ಆರೋಪಿಸುವುದು ಅತಿ ಮುಖ್ಯ. ಬಳಿಕ ನೀವು ತೂಕ ಇಳಿಸಿಕೊಳ್ಳಲು ಬಯಸುವ ದಾರಿ ಯಾವುದು ಎಂದರೆ ಊಟದ ಮೂಲಕವೋ, ವ್ಯಾಯಾಮದ ಮೂಲಕವೋ, ಆಧುನಿಕ ಚಿಕಿತ್ಸೆಗಳ ಮೂಲಕವೋ ಇಲ್ಲವೇ ಊಟ ಮತ್ತು ವ್ಯಾಯಾಮದ ಸಮ್ಮಿಲದ ಮೂಲಕ ನಿಮ್ಮ ಗುರಿ ಸಾಧಿಸುವ ಆಸೆ ಇದೆಯೇ ಎಂಬ ಮಾಹಿತಿಯನ್ನು ನಮೂದಿಸಿ. ಏನು ನಮೂದಿಸಬೇಕು ಎನ್ನುವುದು ತಿಳಿಯದೇ ಇದ್ದರೆ ವ್ಯಕ್ತಿತ್ವವನ್ನು ಆರೋಪಿಸಿದ ಬಳಿಕ ‘ಒಂದೊಂದೇ ಪ್ರಶ್ನೆಯ ಮೂಲಕ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಿ’ ಎಂದು ನಮೂದಿಸಿ. ಆಗ ಎಐ ನಿಮಗೆ ಒಂದೊಂದೇ ಪ್ರಶ್ನೆ ಕೇಳುತ್ತಾ ತನಗೆ ಬೇಕಾದ ಮಾಹಿತಿಯನ್ನು ತಾನೇ ಪಡೆಯುತ್ತದೆ.
ನೀವು ಬಯಸುವ ಮಾಹಿತಿ ಹೇಗೆ ಬೇಕು (ಔಟ್ಪುಟ್ ಫಾರ್ಮ್ಯಾಟ್) ಎನ್ನುವುದನ್ನೂ ತಿಳಿಸಿ. ಮಾಹಿತಿ ಮೈಕ್ರೊಸಾಫ್ಟ್ ವರ್ಡ್, ಎಕ್ಸೆಲ್, ಪಿಡಿಎಫ್ ಅಥವಾ ಎಚ್ಟಿಎಂಎಲ್ ರೂಪದಲ್ಲಿ ಬೇಕಿದೆಯೇ? ವಿವರಣೆ ರೂಪದಲ್ಲಿರಬೇಕೇ? ಟೇಬಲ್ ರೂಪದಲ್ಲಿ ಇರಬೇಕೇ? ವಿವರವಾಗಿ ಬೇಕೇ? ಇಲ್ಲವೇ ಸಂಕ್ಷಿಪ್ತವಾಗಿ ಬೇಕೇ? ಭಾಷೆ ಸರಳವಾಗಿರಬೇಕೇ ಅಥವಾ ಪ್ರಬುದ್ಧವಾಗಿರಬೇಕೇ? ಎಂಬ ವಿಚಾರಗಳನ್ನು ನಮೂದಿಸಿ. ಆಗ ನಿಮಗೆ ದೊರೆಯುವ ಉತ್ತರ ನೀವು ಬಯಸಿದ ಹಾಗೆಯೇ ಇರುತ್ತದೆ.
ಇಲ್ಲಿ ವಿವರಿಸಿರುವ ಅಂಶಗಳು ಬಹುತೇಕ ಎಲ್ಲಾ ಪ್ರಾಂಪ್ಟ್ಗಳಿಗೆ ಅನ್ವಯಿಸಿದರೂ ಕೆಲವು ಕಠಿಣ ಪ್ರಾಂಪ್ಟ್ಗಳಿಗೆ ಇನ್ನೂ ಹೆಚ್ಚಿನ ವಿವರ ನೀಡಬೇಕಿರುತ್ತದೆ. ಸರಳ ಪ್ರಾಂಪ್ಟ್ ರಚಿಸುವುದು ಕಲಿತರೆ ಕಠಿಣ ಪ್ರಾಂಪ್ಟ್ ರಚಿಸುವುದು ಕಲೆ ನಿಧಾನವಾಗಿ ತಿಳಿಯುತ್ತಾ ಹೋಗುತ್ತದೆ.
ಕೆಲವು ಉಪಯುಕ್ತ ಪ್ರಾಂಪ್ಟ್ಗಳು: ಟ್ರೈ ಮಾಡಿ ನೋಡಿ
1. ಲೇಖನ ಅಥವಾ ವರದಿಯನ್ನು ಸಂಕ್ಷೇಪಿಸಲು
ಇಡೀ ಪಠ್ಯವನ್ನು ಓದದೆ ಅದರ ಮುಖ್ಯ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಈ ಪ್ರಾಂಪ್ಟ್ ಉಪಯುಕ್ತ.
ಪ್ರಾಂಪ್ಟ್: "ಈ ಪಠ್ಯವನ್ನು ಅರ್ಥಮಾಡಿಕೊಂಡು ಅದರ ಮುಖ್ಯಾಂಶಗಳನ್ನು ಬುಲೆಟ್ ಪಾಯಿಂಟ್ಗಳಾಗಿ ಸಂಕ್ಷೇಪಿಸು. ಸಾರಾಂಶವು ಸುಲಭವಾಗಿ ಅರ್ಥವಾಗುವಂತಿರಲಿ.
[ವೆಬ್ಸೈಟ್ ಆಗಿದ್ದರೆ ಅದರ ಲಿಂಕ್ ಪೇಸ್ಟ್ ಮಾಡಿ, ದಾಖಲೆಯಿದ್ದರೆ ಅಟ್ಯಾಚ್ಮಾಡಿ]"
2. ಸುಧೀರ್ಘ ಚರ್ಚೆ ಮಾಡಲು
ನೀವೊಂದು ಹೊಸ ಬ್ಯುಸಿನೆಸ್ ಅಥವಾ ವ್ಯಾಪಾರ ಶುರು ಮಾಡಲು ಬಯಸಿದ್ದೀರಿ. ಅದಕ್ಕೂ ಮೊದಲು ಅದರ ಸಾಧ್ಯಾ ಸಾಧ್ಯತೆ, ಖರ್ಚು-ವೆಚ್ಚ ಬಗ್ಗೆ ಚರ್ಚಿಸಬೇಕು. ಸಲಹೆ ಪಡೆಯಬೇಕು ಎಂದಾಗ ಈ ಪ್ರಾಂಪ್ಟ್ ಬಳಸಿ.
ಪ್ರಾಂಪ್ಟ್: "ನೀನು ಒಬ್ಬ ಬ್ಯುಸಿನೆಸ್ ಸಲಹೆಗಾರ. ನನಗೆ ಉದ್ಯಮ ಕಟ್ಟುವ ಆಸೆ ಇದ್ದು, ನನ್ನ ಐಡಿಯಾದ ಕುರಿತು ಚರ್ಚಿಸಿ ಸಲಹೆ ನೀಡು. [ನಿಮ್ಮ ಬ್ಯುಸಿನೆಸ್ ಐಡಿಯಾವನ್ನು ಸಂಕ್ಷಿಪ್ತವಾಗಿ ವಿವರಿಸಿ].
- ಈ ಕಲ್ಪನೆಯನ್ನು ಯಶಸ್ವಿ ವ್ಯವಹಾರವನ್ನಾಗಿ ಪರಿವರ್ತಿಸುವ ಮಾರ್ಗಗಳನ್ನು ಚರ್ಚಿಸು.
- ಇದರ ಮಾರುಕಟ್ಟೆ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡಿ, ಇದಕ್ಕೆ ಗ್ರಾಹಕರು ಯಾರು, ಬೇಡಿಕೆ ಇದೆಯೇ ತಿಳಿಸು.
- ಈ ವ್ಯವಹಾರವನ್ನು ಶುರು ಮಾಡಲು ಬೇಕಾದ ಬಂಡವಾಳ, ಆ ಬಳಿಕ ಎದುರಿಸುವ ಖರ್ಚು-ವೆಚ್ಚಗಳನ್ನು ಪಟ್ಟಿ ಮಾಡು.
- ನಾನು ಎದುರಿಸಬಹುದಾದ ತಾಂತ್ರಿಕ ಸವಾಲುಗಳನ್ನು ವಿವರಿಸಿ ಮತ್ತು ಪರಿಹಾರಗಳನ್ನು ಸೂಚಿಸು.
- ಉಪಯುಕ್ತವಾದ ಕಡೆ ಬುಲೆಟ್ ಪಾಯಿಂಟ್ಗಳನ್ನು ಬಳಸಿಕೊಂಡು ನಿಮ್ಮ ಒಳನೋಟಗಳನ್ನು ಸ್ಪಷ್ಟವಾಗಿ ಒದಗಿಸು.
- ನಾನು ಬ್ಯುಸಿನೆಸ್ಗೆ ಹೊಸಬ. ಒಂದೊಂದೇ ಪ್ರಶ್ನೆ ಕೇಳುತ್ತಾ, ನನ್ನ ಕಲ್ಪನೆಯನ್ನು ಅರ್ಥ ಮಾಡಿಕೊಂಡು, ಸೂಕ್ತ ಸಲಹೆ ನೀಡು.
3. ಪ್ರವಾಸವನ್ನು ಪ್ಲ್ಯಾನ್ ಮಾಡಲು
ನೀವು ಎಲ್ಲಿಗಾದರೂ ಪ್ರವಾಸ ಹೊರಡಬೇಕಿದ್ದು, ಅದರ ಕುರಿತು ಪ್ಲ್ಯಾನ್ ಮಾಡಬೇಕಿದ್ದರೆ ಈ ಪ್ರಾಂಪ್ಟ್ ಸೂಕ್ತ.
ಪ್ರಾಂಪ್ಟ್: "ನಾನು [3 ದಿನಗಳ ಕಾಲ] [ಕರಾವಳಿ ಕರ್ನಾಟಕದ] ಪ್ರವಾಸ ಹೊರಡಲು ಯೋಜಿಸುತ್ತಿದ್ದೇನೆ. ನನಗೆ [ಬೀಚ್, ಪರಿಸರ, ಅಡ್ವೆಂಚರ್ನಲ್ಲಿ] ಆಸಕ್ತಿ ಇದೆ. ನನ್ನ ಆಸಕ್ತಿಗಳನ್ನು ಗಮನದಲ್ಲಿರಿಸಿಕೊಂಡು ನನಗೆ ವಿವರವಾದ ಪ್ರವಾಸ ಯೋಜನೆಯನ್ನು ರಚಿಸು. ಭೇಟಿ ನೀಡಬಹುದಾದ ಸ್ಥಳಗಳು, ಉಳಿದುಕೊಳ್ಳಲು ಮತ್ತು ಊಟ ಮಾಡಲು ಒಳ್ಳೆಯ ರೆಸ್ಟೋರೆಂಟ್ಗಳು, ವಿವಿಧ ಸ್ಥಳಗಳ ನಡುವೆ ಪ್ರಯಾಣಿಸಲು ಉತ್ತಮ ಮಾರ್ಗ ಮತ್ತು ವಾಹನ ಸೌಲಭ್ಯದ ಕುರಿತು ಸಲಹೆಗಳನ್ನು ಯೋಜನೆಯಲ್ಲಿ ಸೇರಿಸು. ಇದರ ಹೊರತಾಗಿ ಸೂಕ್ತ ಎನಿಸುವ ಯಾವುದೇ ವಿವರವನ್ನೂ ಸೇರಿಸು."
4. ಹೊಸ ಕೌಶಲ್ಯವನ್ನು ಕಲಿಯಲು
ಹೊಸ ಭಾಷೆ ಅಥವಾ ಹೊಸ ವಿಷಯ ಕಲಿಯಲು ಈ ಪ್ರಾಂಪ್ಟ್ ಬಳಸಿ.
ಪ್ರಾಂಪ್ಟ್: "ನನಗೆ [ಇಂಗ್ಲಿಷ್ ಭಾಷೆ ಕಲಿಯುವ] ಆಸೆ ಇದೆ. ಪ್ರತಿ ದಿನ ಅರ್ಧ ಗಂಟೆ ಸಮಯ ವ್ಯಯಿಸಿ ಕಲಿಯಬಹುದಾದ ಕಲಿಕಾ ಯೋಜನೆಯನ್ನು ರಚಿಸು. ವಾರಕ್ಕೊಮ್ಮೆ ನನ್ನ ಕಲಿಕೆಯ ಪರಾಮರ್ಶೆ ನಡೆಯಲಿ. ಇದಕ್ಕೆ ನೆರವಾಗುವಂತೆ ನನಗೆ ಕಲಿಯಲು ಸಹಾಯ ಮಾಡಲು ಕೆಲವು ಉಚಿತ ಆನ್ಲೈನ್ ಸಂಪನ್ಮೂಲಗಳನ್ನು ಸೂಚಿಸು."
ಭಾರತದಲ್ಲಿ ಪ್ರಾಂಪ್ಟ್ ಎಂಜಿನಿಯರ್ಗಳ ಸಂಬಳ
· ಭಾರತದಲ್ಲಿ ಪ್ರಾಂಪ್ಟ್ ಎಂಜಿನಿಯರ್ಗಳಿಗೆ ಭಾರಿ ಬೇಡಿಕೆ ಇದೆ. ಇದು ಸದ್ಯದ ಮಟ್ಟಿಗೆ ಹೆಚ್ಚು ಸಂಬಳ ಪಡೆಯುತ್ತಿರುವ ಉದ್ಯೋಗ.
· ಹೊಸಬರು (0-4 ವರ್ಷದ ಅನುಭವ): ಹೊಸಬರು ಭಾರತದಲ್ಲಿ ವಾರ್ಷಿಕವಾಗಿ ಕನಿಷ್ಟ ₹5 ಲಕ್ಷದಿಂದ ₹7 ಲಕ್ಷದವರೆಗೆ ಸಂಬಳ ನಿರೀಕ್ಷಿಸಬಹುದು.
· ಮಧ್ಯಮ ಅನುಭವಿ (5–9 ವರ್ಷ): ಇಷ್ಟು ಅನುಭವ ಇರುವವರು ವಾರ್ಷಿಕವಾಗಿ ಕನಿಷ್ಟ ₹12 ಲಕ್ಷದಿಂದ ₹18 ಲಕ್ಷದವರೆಗೂ ಸಂಬಳ ಪಡೆಯಬಹುದು.
· ಹೆಚ್ಚು ಅನುಭವಿ (10+ ವರ್ಷ): 10 ವರ್ಷಕ್ಕೂ ಹೆಚ್ಚು ಅನುಭವ ಇರುವ ಪ್ರಾಂಪ್ಟ್ ಎಂಜಿನಿಯರ್ಗಳು ಭಾರತದಲ್ಲಿ ಕನಿಷ್ಟ ₹18 ಲಕ್ಷದಿಂದ ₹35 ಲಕ್ಷದವರೆಗೂ ಸಂಬಳ ಗಳಿಸಬಹುದು.
2023 ರಲ್ಲಿ ಜಾಗತಿಕ ಪ್ರಾಂಪ್ಟ್ ಎಂಜಿನಿಯರಿಂಗ್ ಮಾರುಕಟ್ಟೆಯ ಮೌಲ್ಯ $222 ಮಿಲಿಯನ್ ಆಗಿತ್ತು.
ಇದು 2030 ರ ವೇಳೆಗೆ $2.06 ಬಿಲಿಯನ್ ತಲುಪುವ ನಿರೀಕ್ಷೆಯಿದೆ, 2024 ರಿಂದ 2030 ರವರೆಗೆ 32% ನಷ್ಟು ಸರಾಸರಿ ವಾರ್ಷಿಕ ಬೆಳವಣಿಗೆಯ ದರದಲ್ಲಿ (CAGR) ಬೆಳೆಯುವ ಅಂದಾಜಿದೆ. 2034 ರ ವೇಳೆಗೆ $6.53 ಟ್ರಿಲಿಯನ್ ತಲುಪಬಹುದು ಎಂದು ಮತ್ತೆ ಕೆಲವು ಅಂದಾಜಿಸಿದ್ದಾರೆ.
2023 ರಲ್ಲಿ, ಯುಎಸ್ ಸೇರಿದಂತೆ ಉತ್ತರ ಅಮೆರಿಕಾ 34% ಗಿಂತ ಹೆಚ್ಚಿನ ಮಾರುಕಟ್ಟೆ ಪಾಲು ಹೊಂದಿತ್ತು. ಆದರೀಗ ಭಾರತ ಸೇರಿದಂತೆ ಇತರೆ ದೇಶಗಳು ಈ ಪಾಲನ್ನು ಹಂಚಿಕೊಳ್ಳುತ್ತಿವೆ. ಎಂದರೆ, ವಿಶ್ವದ ಎಲ್ಲ ಕಡೆಯೂ ಪ್ರಾಂಪ್ಟ್ ಎಂಜಿನಿಯರ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಕೆಲವು ಕುತೂಹಲಕರ ಸಂಗತಿಗಳು
ಪ್ರಾಂಪ್ಟ್ ಎಂಜಿನಿಯರಿಂಗ್ನ ಬೇರುಗಳನ್ನು 1970 ರ ದಶಕದಲ್ಲಿ ಟೆರ್ರಿ ವಿನೋಗ್ರಾಡ್ನ SHRDLU ಎಂಬ ವ್ಯವಸ್ಥೆಗಳಲ್ಲಿ ಗುರುತಿಸಬಹುದು. ಇದು "ಬ್ಲಾಕ್ ವರ್ಲ್ಡ್" ಬಗ್ಗೆ ಅರ್ಥಮಾಡಿಕೊಳ್ಳಲು ಸರಳವಾದ ಪ್ರಾಂಪ್ಟ್ಗಳನ್ನು ಬಳಸಿತು. 2021ರಲ್ಲಿ GPT-3 ಬಿಡುಗಡೆಯೊಂದಿಗೆ ಪ್ರಾಂಪ್ಟ್ ಎಂಜಿನಿಯರಿಂಗ್ಗೆ ಹೆಚ್ಚಿನ ಬೇಡಿಕ ಬಂತು.
2023ರಿಂದ ಗೂಗಲ್ನಲ್ಲಿ “ಪ್ರಾಂಪ್ಟ್ ಎಂಜಿನಿಯರಿಂಗ್” ಎಂಬ ಪದಗುಚ್ಛವನ್ನು ಹುಡುಕುವವರ ಸಂಖ್ಯೆ 400% ಜಾಸ್ತಿಯಾಗಿದೆ.
ಪರಿಣಾಮಕಾರಿ ಪ್ರಾಂಪ್ಟ್ ಎಂಜಿನಿಯರಿಂಗ್ ಕೀವರ್ಡ್ಗಳ ಮೇಲೆ ನಿಲ್ಲದೆ ಸ್ಪಷ್ಟ ಸೂಚನೆಗಳ ಕಡೆ ಗಮನ ಕೇಂದ್ರೀಕರಿಸುತ್ತದೆ. ಇದು ಸಂದರ್ಭ, ಬಳಕೆದಾರರ ಉದ್ದೇಶ ಮತ್ತು ವಿವರವಾದ ಸೂಚನೆಗಳನ್ನು ಎಐ ಮಾಡೆಲ್ಗೆ ಅರ್ಥಮಾಡಿಸಲು ಯತ್ನಿಸುತ್ತದೆ.
ಪ್ರಾಂಪ್ಟ್ ಎಂಜಿನಿಯರಿಂಗ್ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಹೊಸ ಔಷಧ ಅನ್ವೇಷಣೆ, ಲಾಜಿಸ್ಟಿಕ್ಸ್ ನಿರ್ವಹಣೆ, ವಂಚನೆ ತಡೆಯುವುದು ಹಾಗೂ ಹಣಕಾಸು ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಎಲ್ಲೆಲ್ಲಿ ಎಐ ಬಳಕೆ ಇದೆಯೋ ಅಲ್ಲೆಲ್ಲಾ ಪ್ರಾಂಪ್ಟ್ ಬಳಕೆಯಾಗುತ್ತದೆ.
ಈ ಕೌಶಲ್ಯ ಈಗ ಹೆಚ್ಚಿನ ಬೇಡಿಕೆಯಲ್ಲಿದ್ದರೂ, ಸ್ವತಂತ್ರ ಕೆಲಸವಾಗಿ ಪ್ರಾಂಪ್ಟ್ ಎಂಜಿನಿಯರಿಂಗ್ ಮುಂದೆಯೂ ಇರಲಿದೆಯೇ ಎಂಬ ವಿಚಾರ ಚರ್ಚೆಯಲ್ಲಿದೆ. AI ಮಾದರಿಗಳು ಹೆಚ್ಚು ಸ್ಮಾರ್ಟ್ ಆಗುತ್ತಾ ಹೋಗುತ್ತಿರುವಂತೆ ಎಐ ಟೂಲ್ಗಳೇ ಪ್ರಾಂಪ್ಟ್ಗಳನ್ನು ರಚಿಸಿ ಅದನ್ನು ಜಾರಿಗೊಳಿಸುತ್ತವೆ. ಹೀಗಾಗಿ ವಿಶೇಷವಾಗಿ ಪ್ರಾಂಪ್ಟ್ ಎಂಜಿನಿಯರ್ಗಳ ಅಗತ್ಯ ಕಡಿಮೆಯಾಗಬಹುದು ಕೆಲವು ತಜ್ಞರು ನಂಬುತ್ತಾರೆ. ಆದರೆ AI ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇದು ನಿರ್ಣಾಯಕ ಕೌಶಲ್ಯವಾಗಿ ಮುಂದೆಯೂ ಉಳಿಯುತ್ತದೆ ಎಂದು ಇನ್ನೂ ಕೆಲವರು ವಾದಿಸುತ್ತಾರೆ.





