AI ಬರವಣಿಗೆಯಿಂದ ಇಕೋಸಿಸ್ಟಮ್ ನಿರ್ಮಾಣದ ಕಡೆಗೆ
ಜಾಗತಿಕ ತಂಡದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಸುವರ್ಣಾವಕಾಶ | ಮಾಡೆಲ್ ಬಳಕೆಯಿಂದ ಬಿಲ್ಡ್ ಮಾಡುವ ಅನುಭವ
ಐದು ವರ್ಷಗಳ ಹಿಂದೆ ವಿಜಯ ಕರ್ನಾಟಕದ ಕಚೇರಿಯಲ್ಲಿ ‘ಎಐ ಪರ್ತಕರ್ತ ವರ್ಸಸ್ ಮನುಷ್ಯ ಪರ್ತಕರ್ತ – ಸವಾಲೋ, ಸಹಕಾರವೋ?’ ಎಂಬ ವಿಷಯದ ಮೇಲೆ ನಮ್ಮ ಸಹೋದ್ಯೋಗಿಗಳಿಗೆ ವಿಶೇಷ ಆನ್ಲೈನ್ ಉಪನ್ಯಾಸ ನೀಡುವ ಅವಕಾಶ ಸಿಕ್ಕಿತ್ತು. ಸುದೀರ್ಘ ಅವಧಿಯವರೆಗೆ ನಿರಂತರವಾಗಿ ಹರಿದಿದ್ದ ಮಾತಿನ ಲಹರಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಬಗ್ಗೆ ನನಗಿದ್ದ ಅಪಾರ ಆಸಕ್ತಿಯನ್ನು ಅನಾವರಣಗೊಳಿಸಿತ್ತು. ಎಂದರೆ ಅದಾಗಲೇ ಎಐ ಮಾಯೆ ನನ್ನನ್ನು ಆವರಿಸಿತ್ತು. ಹಾಗೆಂದು ಅದು ದಿಡೀರನೆ ಬಂದ ಆಕರ್ಷಣೆಯಾಗಿರಲಿಲ್ಲ, ಸುಮಾರು 25 ವರ್ಷಗಳ ಕಾಲ ನನ್ನೊಳಗೇ ಮೊಳೆತು ನಿಧಾನವಾಗಿ ಬೆಳೆಯುತ್ತಾ ಬಂದಿದ್ದ ತಂತ್ರಜ್ಞಾನದ ಕಡೆಗಿನ ನನ್ನ ಮೋಹ-ವ್ಯಾಮೋಹ ಕೊನೆಗೆ ಎಐ ಕಡೆಗೂ ತಿರುಗುವಂತೆ ಮಾಡಿತ್ತು. ಚಾಟ್ಜಿಪಿಟಿ ಬಿಡುಗಡೆಯಾಗಿಲ್ಲದ ಹೊತ್ತಿನಲ್ಲೇ ನನಗೆ ಎಐ ಮೇಲೆ ಕುತೂಹಲ ಹೆಚ್ಚಿತ್ತು. ಅಂದಿನಿಂದಲೂ ಈ ಕ್ರಾಂತಿಕಾರಿ ತಂತ್ರಜ್ಞಾನವನ್ನು ಸೂಕ್ಷ್ಮವಾಗಿ ಫಾಲೋ ಮಾಡುತ್ತಾ ಬಂದಿದ್ದೆ.
ನವೆಂಬರ್ 2022ರಲ್ಲಿ ಚಾಟ್ ಜಿಪಿಟಿ ಬಿಡುಗಡೆಯಾಗುವುದರೊಂದಿಗೆ ಇಡೀ ಜಗತ್ತು ಎಐನ ಮೋಹದ ಬಲೆಯಲ್ಲಿ ಬಿತ್ತು. ಅದರಲ್ಲಿ ನಾನೂ ಒಬ್ಬ. ಅಂದಿನಿಂದಲೂ ಎಐನ ಪ್ರತಿ ಬೆಳವಣಿಗೆಯನ್ನು ಗಮನಿಸುತ್ತಾ ಹೋದೆ, ನೂರಾರು ವೆಬ್ ಪುಟಗಳನ್ನು ಓದಿದೆ, ಎಐ ಕುರಿತೇ ನೂರಾರು ಗಂಟೆಗಳಷ್ಟು ವೀಡಿಯೊಗಳನ್ನು ನೋಡಿದೆ, ನೋಡುತ್ತಾ, ಓದುತ್ತಾ ಹೋದಂತೆ ಎಐನ ಅಪಾರ ಸಾಧ್ಯತೆಗಳು ಮತ್ತು ಅಪಾಯಗಳು ಮನವರಿಕೆಯಾಗುತ್ತಾ ಹೋಯಿತು. ಆ ತಂತ್ರಜ್ಞಾನವನ್ನು ಇನ್ನಷ್ಟು ಆಳವಾಗಿ ತಿಳಿಯುವ ತುಡಿತ ಹೆಚ್ಚಾಯಿತು. ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡು ದುಡಿಯುವ ದಾರಿ ಮಾಡಿಕೊಳ್ಳಬೇಕು, ಬೇಕಾದ್ದನ್ನು ಕಲಿಯುವ ಅಸ್ತ್ರವಾಗಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ. ಆದರೆ ತಲೆಯೊಳಗೆ ಎಷ್ಟೇ ಜ್ಞಾನವಿದ್ದರೂ ಈ ಜಗತ್ತು ಬೆಲೆಕೊಡುವುದು ಸರ್ಟಿಫಿಕೇಟ್ಗೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎನ್ನುವುದು ಬೇರೆ ಮಾತು. ಹೀಗಾಗಿ ಟೆಕ್ ಜಗತ್ತಿನಲ್ಲಿ ವಿಪರೀತ ವ್ಯಾಲ್ಯೂ ಇರುವ ಗೂಗಲ್ ಕಂಪನಿಯ ಕೋರ್ಸ್ಗಳಿಗಾಗಿ ತಡಕಾಡಿ ‘Google Prompting Essentials’ ಎಂಬ ಕೋರ್ಸ್ ಪೂರ್ಣಗೊಳಿಸಿದೆ. ಇದಾದ ಮೇಲೆ ಏಜೆಂಟಿಕ್ ಎಐ ಮೇಲೆ ‘Understanding Agentic AI’ ಎಂಬ ಸರ್ಟಿಫಿಕೇಟ್ ಕೂಡ ನನ್ನದಾಗಿಸಿಕೊಂಡೆ ಹಾಗೂ ಲೋಕಲೈಸೇಷನ್ ಪ್ರಕ್ರಿಯೆಯಲ್ಲಿ ಎಐ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಯಲು ‘Linguistic Prompt Design Training’ ಕೋರ್ಸ್ ಸರ್ಟಿಫಿಕೇಟ್ ಅನ್ನೂ ನನ್ನದಾಗಿಸಿಕೊಂಡೆ. ಈ ಕೋರ್ಸ್ಗಳು ನನಗೆ ಎಐ ತಂತ್ರಜ್ಞಾನದ ಬಗೆಗೆ ಆಳವಾದ ತಿಳಿವಳಿಕೆ ನೀಡಿದವು. ಎಐ ಟೂಲ್ಗಳನ್ನು ಬಳಸುವ ಕೌಶಲ್ಯ ಇನ್ನಷ್ಟು ಶಾರ್ಪ್ ಆಯಿತು. ಇದು ಎಐ ಮಾಡೆಲ್ಗಳಿಗೇ ತರಬೇತಿ ನೀಡುವ ಹೊಸ ಉದ್ಯೋಗಾವಕಾಶಗಳ ಲೊಕಕ್ಕೆ ದಾರಿ ತೆರೆಯಿತು. ಅಂತರರಾಷ್ಟ್ರೀಯ ಮಟ್ಟದ ಎಐ ತರಬೇತಿ ಏಜೆನ್ಸಿಗಳಲ್ಲಿ AI Trainer ಆಗಿ ಗಂಟೆಗಳ ಲೆಕ್ಕದಲ್ಲಿ ಕೆಲಸ ಮಾಡುವ ಫ್ರೀಲ್ಯಾನ್ಸ್ ಕೆಲಸಗಳು ಹುಡುಕಿ ಬಂದವು. ಏಕ ಕಾಲಕ್ಕೆ ನಾಲ್ಕೈದು ಕಂಪನಿಗಳಿಗೆ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಲಾರಂಭಿಸಿದೆ. ಇದು ಎಐ ಮಾಡೆಲ್ಗಳಲ್ಲಿ ಇರಬಹುದಾದ ದೋಷಗಳು, ಸಮಸ್ಯೆಗಳ ಕುರಿತು ಅರಿವು ನೀಡಿತು. ಎಂದರೆ, ಎಐ ಮಾಡೆಲ್ಗಳು ಬುದ್ಧಿವಂತ ವ್ಯವಸ್ಥೆಗಳಾಗಿ ಬೆಳೆಯಲು ಇನ್ನೂ ಸಾಕಷ್ಟು ತರಬೇತಿ ಅಗತ್ಯವಿರುವುದು ಮನವರಿಕೆಯಾಯಿತು. ಒಟ್ಟಾರೆ ಎಐ ತಂತ್ರಜ್ಞಾನದ ಬಗೆಗೆ ತಿಳಿವಳಿಕೆ ವಿಸ್ತರಿಸುತ್ತಾ ಹೋಯಿತು.
ಈ ನಡುವೆ, ನನ್ನ ಪತ್ರಕರ್ತ ಗೆಳೆಯ ನಟೇಶ್ ಬಾಬು ತಮ್ಮ ‘ವಿಕ ಮನಿ’ ವಾರ ಪತ್ರಿಕೆಯಲ್ಲಿ ಬರೆಯುವಂತೆ ಕೇಳಿದರು. ಅಲ್ಲಿಂದ ಎಐ ಕುರಿತ ನನ್ನ ಬರವಣಿಗೆ ಆರಂಭವಾಯಿತು. ಈವರೆಗೆ ಎಐ ಕುರಿತು ಓದುತ್ತಾ, ವೀಡಿಯೋಗಳನ್ನು ನೋಡುತ್ತಾ, ಟೂಲ್ಗಳನ್ನು ಬಳಸುತ್ತಾ ಇದ್ದವನು ಈಗ ಎಐ ಕುರಿತು ಬರೆಯಲು ಆರಂಭಿಸಿದೆ. ಇದು ಈ ತಂತ್ರಜ್ಞಾನವನ್ನು ಇನ್ನಷ್ಟು ಆಳಕ್ಕೆ ಇಳಿದು ಇಳಿಯಲು ಸಂದರ್ಭವನ್ನು ಒದಗಿಸಿಕೊಟ್ಟಿತು. ಪ್ರತಿ ಲೇಖನ ಬರೆಯುವಾಗಲೂ ಬಹಳಷ್ಟು ಓದುತ್ತಿದ್ದೆ, ತುಂಬಾ ರಿಸರ್ಚ್ ಮಾಡುತ್ತಿದ್ದೆ, ಗಂಟೆ ಗಟ್ಟಲೆ ಅದಕ್ಕಾಗಿಯೇ ಮೀಸಲಿಡುತ್ತಿದ್ದೆ. ರಾಶಿ ರಾಶಿ ಮಾಹಿತಿ ಕಲೆ ಹಾಕಿ, ಅದರಲ್ಲಿ ಬೇಕಾದ್ದನ್ನು ಸೋಸಿ ಲೇಖನಗಳನ್ನು ಬರೆಯುತ್ತಿದ್ದೆ. ವಿಕ ಮನಿ ಪತ್ರಿಕೆಯಲ್ಲಿ ಪ್ರತಿ ಭಾನುವಾರ ನಾನು ಬರೆಯುತ್ತಿದ್ದ ‘ಎಐ ಅನಂತ ಅವತಾರ’ ಎಂಬ ಅಂಕಣ ಸುಮಾರು ಒಂದು ವರ್ಷ ಕಾಲ ತುಂಬಾ ಚೆನ್ನಾಗಿ ಮೂಡಿಬಂತು. ಅದ್ಭುತ ಪ್ರತಿಕ್ರಿಯೆ ಬಂತು, ಸಾಕಷ್ಟು ಪ್ರಶಂಸೆಗಳು ಬಂದವು. ನಾನು ಬರೆದಿದ್ದನ್ನು ಪುಸ್ತಕ ಮಾಡುವ ಆಲೋಚನೆ ಅಂಕಣ ಆರಂಭಿಸಿದಾಗಲೇ ಇತ್ತು. ಅದೇ ಶಿಸ್ತಿನಲ್ಲಿ ಲೇಖನಗಳನ್ನು ಬರೆದಿದ್ದೆ. ನಾನು ಈವರೆಗೆ ಬೆರೆದಿದ್ದನ್ನು ಕೂಡಿಸಿ, ಇನ್ನಷ್ಟು ಸೇರಿಸಿ ಒಂದೊಳ್ಳೆ ಪುಸ್ತಕ ರೂಪಿಸುವ ಕೆಲಸ ಈಗ ಅಂತಿಮ ಹಂತದಲ್ಲಿದೆ. ಈ ನಡುವೆ ಒಂದು ಅದ್ಬುತ ಘಟಿಸಿದೆ.
ಈವರೆಗೆ ಎಐ ಕುರಿತು ಬರೆಯುತ್ತಿದ್ದವನು, ಎಐ ಟೂಲ್ಗಳನ್ನು ಬಳಸುತ್ತಿದ್ದವನು, ಎಐ ಕುರಿತು ಅಪಾರ ಆಸಕ್ತಿ ಇಟ್ಟುಕೊಂಡವನಿಗೆ ಜಗತ್ತಿನ ಅತಿದೊಡ್ಡ ಎಐ ಇಕೋಸಿಸ್ಟಮ್ ನಿರ್ಮಾಣದಲ್ಲಿ ಪಾಲುದಾರನಾಗುವ ಅವಕಾಶ ಒದಗಿ ಬಂತು. ಲೆನೊವೊ ಮತ್ತು ಮೋಟೊರೋಲ ಕಂಪನಿಗಳು ಜಂಟಿಯಾಗಿ ವಿಶ್ವದ ಅತಿದೊಡ್ಡ Personal Ambient Intelligence ಸಿಸ್ಟಮ್ ಅಭಿವೃದ್ಧಪಡಿಸುತ್ತಿವೆ. ‘Lenovo Qira ಮತ್ತು ‘Motorola Qira’ ಎಂಬ ಹೆಸರಿನಲ್ಲಿ ಈ ಪರ್ಸನಲ್ ಎಐ ಏಜೆಂಟ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದು ಲ್ಯಾಪ್ಟಾಪ್, ಕಂಪ್ಯೂಟರ್ಗಳ ತಯಾರಿಕೆಯಲ್ಲಿ ಇಡೀ ಜಗತ್ತಿನಲ್ಲಿ ಅತಿದೊಡ್ಡ ಸಂಸ್ಥೆಯಾಗಿರುವ ಲೆನೊವೊ ಕಂಪನಿಯ ಅತಿದೊಡ್ಡ ಎಐ ಯೋಜನೆ. ಇದೇ ತಿಂಗಳು ಲಾಸ್ವೆಗಾಸ್ನಲ್ಲಿ ನಡೆದ ವಿಶ್ವದ ಅತಿದೊಡ್ಡ ‘ಕನ್ಸೂಮರ್ ಎಲೆಕ್ಟ್ರಾನಿಕ್ ಶೋ’ನಲ್ಲಿ ಲೆನೊವೊ ಈ ಖೀರಾ ಯೋಜನೆಯನ್ನು ಪ್ರಕಟಿಸಿದೆ. ಇದು ಈವರೆಗೆ ಅಪ್ಲಿಕೇಶನ್ ರೂಪದಲ್ಲಿದ್ದ ಎಐ ತಂತ್ರಜ್ಞಾನವನ್ನು ಕಾಂಟೆಕ್ಸ್ಟ್ ಅವೇರ್, ಸಿಸ್ಟಮ್ ಲೆವೆಲ್ ಎಂದರೆ ಸಂದರ್ಭ, ಸನ್ನಿವೇಶಗಳ ಅರಿವಿರುವ ಆಪರೇಟಿಂಗ್ ಸಿಸ್ಟಮ್ ಒಳಗೇ ಅಡಗಿ ಕುಳಿತ “ಸೂಪರ್ ಏಜೆಂಟ್” ಆಗಿ ರೂಪಿಸುತ್ತದೆ. ಎಂದರೆ ಲ್ಯಾಪ್ಟಾಪ್, ಮೊಬೈಲ್, ವೇರೆಬಲ್ ಸಾಧನಗಳು ಮುಂತಾದ ಕಡೆಗಳಲ್ಲಿ ಒಂದೇ ಎಐ ನಮ್ಮ ‘ಪರ್ಸನಲ್ ಎಐ” ಆಗಿ ನಮ್ಮ ಡಿಜಿಟಲ್ ಟ್ವಿನ್ನಂತೆ ವರ್ತಿಸುತ್ತದೆ. ಒಂದು ಕಡೆ ಶುರು ಮಾಡಿದ ಕೆಲಸವನ್ನು ಮತ್ತೊಂದು ಕಡೆ ಪೂರ್ಣಗೊಳಿಸಬಹುದು. ಮೊಬೈಲ್ನಲ್ಲಿರುವ ಕಂಟೆಂಟ್ ಅನ್ನು ಲ್ಯಾಪ್ಟಾಪ್ನಲ್ಲಿ ಬಳಸಬಹುದು. ವೇರಬಲ್ ಸಾಧನಗಳಲ್ಲಿರುವ ಮಾಹಿತಿ ಮೊಬೈಲ್ನಲ್ಲೂ ಲಭ್ಯ. ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಇದು ಅನನ್ಯವಾದ ಎಐ ಯೋಜನೆ. ಕೆಲವೇ ಕೆಲವು ದೈತ್ಯ ಕಂಪನಿಗಳು ಮಾತ್ರ ಇಂಥ ವ್ಯವಸ್ಥೆ ರೂಪಿಸುತ್ತಿವೆ. ಮೈಕ್ರೊಸಾಫ್ಟ್ ಕೋ-ಪೈಲಟ್, ಸ್ಯಾಮ್ಸಂಗ್ನ ಗ್ಯಾಲಕ್ಸಿ ಎಐ, ಆ್ಯಪಲ್ ಇಂಟೆಲಿಜೆನ್ಸ್, ಗೂಗಲ್ ಜೆಮಿನಿ ಇಂಥದೇ ಎಐ ಇಕೋಸಿಸ್ಟಮ್ಗಳು. ಆದರೆ, ಗೂಗಲ್ ಮತ್ತು ಮೈಕ್ರೊಸಾಫ್ಟ್ ಹೊರತುಪಡಿಸಿದರೆ ಉಳಿದ ಯೋಜನೆಗಳು ಅಷ್ಟೇನೂ ಯಶಸ್ಸು ಸಾಧಿಸಿಲ್ಲ. ಲೆನೊವೊ ರೂಪಿಸುತ್ತಿರುವ ಸ್ಮಾರ್ಟ್ ಏಜೆಂಟ್ ಈ ಎಲ್ಲಾ ಯೋಜನೆಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತದೆ.
ಇಷ್ಟು ದೊಡ್ಡ ಜಾಗತಿಕ ಎಐ ಯೋಜನೆಯಲ್ಲಿ ನೇರವಾಗಿ ಕೆಲಸ ಮಾಡುವ ಅವಕಾಶ ಈಗ ನನ್ನ ಪಾಲು. ಇದು ಒಂದು ಎಐ ಇಕೋಸಿಸ್ಟಮ್ ಅನ್ನು ಬಿಲ್ಡ್ ಮಾಡುವ ಪ್ರಾಯೋಗಿಕ ಅನುಭವ. ಭಾರತವೂ ಸೇರಿದಂತೆ ಏಷ್ಯಾ, ಅರಬ್ ದೇಶಗಳು, ಲ್ಯಾಟಿನ್ ಅಮೆರಿಕ, ಯೂರೋಪ್ನ ಸುಮಾರು 40ಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿಸ್ಟಮ್ ಬಿಲ್ಡ್ ಆಗುತ್ತಿದೆ. ಈ ಯೋಜನೆಯ ಕೋರ್ ತಂಡದಲ್ಲಿ ನಾನೂ ಒಬ್ಬನಾಗಿರುವುದು ಬಹಳ ಹೆಮ್ಮೆಯಿದೆ. ಟ್ರಾನ್ಸ್ಪರ್ಫೆಕ್ಟ್ ಎಂಬ ಅಮೆರಿಕದ ಸಂಸ್ಥೆಯ ಮೂಲಕ ಅಮೆರಿಕ, ಬ್ರೆಜಿಲ್, ಚೀನಾ ಮತ್ತು ಇಂಡಿಯಾದಲ್ಲಿ ಕೆಲಸ ಮಾಡುವ ಗ್ಲೋಬಲ್ ಟೀಮ್ನಲ್ಲಿ ಭಾರತದಿಂದ ಕೆಲಸ ಶುರುವಾಗಿದೆ. ಜಗತ್ತಿನ ವಿವಿಧ ಭಾಷೆಗಳಿಗೆ ಎಐ ತಂತ್ರಜ್ಞಾನವನ್ನು ಅಳವಡಿಸುವ ‘ಎಐ ಗ್ಲೋಬಲೈಸೇಷನ್’ ತಂಡದಲ್ಲಿ ನನ್ನದು ಗುರುತರ ಜವಾಬ್ದಾರಿ. ಬೇರೆ ಬೇರೆ ಟೈಮ್ಝೋನ್ಗಳಲ್ಲಿರುವ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿದ್ದು ಕೆಲಸ ಮಾಡುವುದು ದೊಡ್ಡ ಸವಾಲು. ಈವರೆಗೆ ಎಐ ಕುರಿತು ಬರೆಯುತ್ತಿದ್ದವನು ಈಗ ನೇರವಾಗಿ ಒಂದು ಜಾಗತಿಕ ಎಐ ವ್ಯವಸ್ಥೆಯನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವುದು ನನಗೆ ದೊರೆತ ಅಪೂರ್ವ ಅವಕಾಶವೇ ಸರಿ.
20 ವರುಷಗಳ ನನ್ನ ವೃತ್ತಿ ಬದುಕಿನಲ್ಲಿ ಇದೊಂದು ಮೈಲಿಗಲ್ಲು. ಎಐ ಬಿಲ್ಡ್ ಮಾಡುವಲ್ಲಿ ನೇರ ಅನುಭವ ಪಡೆಯುವ ಸುವರ್ಣಾವಕಾಶ. ಒಂದು ಎಐ ವ್ಯವಸ್ಥೆಗೆ ಬುದ್ದಿವಂತಿಕೆ ತುಂಬುವ ಮತ್ತು ವಿವಿಧ ಸಂಸ್ಕೃತಿಗಳಿಗೆ ಅದನ್ನು ಒಗ್ಗಿಸುವ ಪ್ರಕ್ರಿಯೆಯನ್ನು ಖುದ್ದು ಅನುಭವಿಸುವ ಅವಕಾಶ, ಎಐ ತಪ್ಪು ಮಾಡಿದಾಗ ಅದನ್ನು ತಿದ್ದಿ ಬುದ್ದಿ ಹೇಳುವ ಬಗೆ ಹೇಗೆ ಎನ್ನುವ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ. ಇಂತಹ ಅನನ್ಯ ಮತ್ತು ನನ್ನ ಮಟ್ಟಿಗೆ ಅನೂಹ್ಯ ಅವಕಾಶ ಎಐ ಕುರಿತ ನನ್ನ ತಿಳಿವಳಿಕೆಯನ್ನು ವಿಸ್ತರಿಸುವುದು ಮಾತ್ರವಲ್ಲದೆ ನನ್ನ ಬದುಕಿಗೂ ಹೊಸ ದಿಕ್ಕು ನೀಡುವ ವಿಶ್ವಾಸವಿದೆ. ಕನ್ನಡ ಭಾಷೆಯ ಮೇಲಿನ ಜ್ಞಾನ, ಸಾಹಿತ್ಯದ ತಿಳಿವಳಿಕೆ, ಸಂಸ್ಕೃತಿಗಳ ಕುರಿತ ಸೂಕ್ಷ್ಮಗ್ರಹಿಕೆ, ಪರ್ತಕರ್ತನಾಗಿ ಪಡೆದಿರುವ ಲೋಕಜ್ಞಾನ ಒಂದು ಎಐ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಇಷ್ಟು ಉಪಯೋಗಕ್ಕೆ ಬರಬಲ್ಲದು ಎಂಬುದನ್ನು ನಾನೆಂದೂ ಎಣಿಸಿರಲಿಲ್ಲ. ಯಾವ ಜ್ಞಾನವೂ ಮೇಲಲ್ಲ, ಯಾವ ತಿಳಿವಳಿಕೆಯೂ ಕೀಳಲ್ಲ, ಯಾವ ಓದೂ ನಗಣ್ಯವಲ್ಲ, ಎಲ್ಲಕ್ಕೂ ಬೆಲೆ ಇದೆ, ಕಾಲ ಕೂಡಿಬರಬೇಕಷ್ಟೆ.


