AI ಮಾಯಾಜಾಲ
ಉತ್ಪ್ರೇಕ್ಷೆ ಮತ್ತು ವಾಸ್ತವಗಳ ಸುತ್ತ
ಡಾ. ರಮೇಶ್ ನಿಂಬೆಮರದಳ್ಳಿ
ಬಹುತೇಕ ಪಾಲು ತಂತ್ರಜ್ಞಾನ ಅಧಾರಿತವಾಗಿ ಮುನ್ನಡೆಯುತ್ತಿರುವ ಇವತ್ತಿನ ಜಗತ್ತಿನಲ್ಲಿ, ಕೃತಕ ಬುದ್ದಿಮತ್ತೆ (ಎಐ-ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ನಮ್ಮ ಕಾಲದ ಅತ್ಯಂತ ಪರಿವರ್ತನಶೀಲ ತಂತ್ರಜ್ಞಾನಗಳಲ್ಲಿ ಒಂದು. ಆದರೆ, ಇಂಥ ಕ್ರಾಂತಿಕಾರಿ ತಂತ್ರಜ್ಞಾನದ ಸುತ್ತ ಕೆಲವು ತಪ್ಪು ಕಲ್ಪನೆಗಳು, ಉತ್ಪ್ರೇಕ್ಷೆಗಳು ಹರಡಿವೆ. ಎಐನ ನಿಜವಾದ ಶಕ್ತಿ, ಸಾಧ್ಯತೆ ಮತ್ತು ವಾಸ್ತವಾಂಶಗಳ ಮೇಲೆ ಇದರ ಉತ್ಪ್ರೇಕ್ಷೆಗಳ ನೆರಳು ಬಿದ್ದಿದೆ. ಎಐ ಅಸಿಸ್ಟೆಂಟ್, ಚಾಟ್ಬಾಟ್, ಡೇಟಾ ಅನಲಿಸಿಸ್, ಕಂಪ್ಯೂಟರ್ ವಿಷನ್, ರೋಬಾಟಿಕ್ಸ್, ಡೀಪ್ ಲರ್ನಿಂಗ್, ಮಷೀನ್ ಲರ್ನಿಂಗ್, ಜನರೇಟಿವ್ ಎಐ ಹಾಗೂ ಎಲ್ಎಲ್ಎಂಗಳವರೆಗೆ ವಿವಿಧ ರೂಪದಲ್ಲಿ ಹರಡಿಕೊಂಡಿರುವ ಎಐ ನಮ್ಮ ದೈನಂದಿನ ಬದುಕಿನ ಮೇಲೆ ಐಎ ಪ್ರಭಾವ ಹೆಚ್ಚುತ್ತಾ ಸಾಗುತ್ತಿದೆ. ಹೀಗಾಗಿ ಎಐನ ನಿಜ ಸ್ವರೂಪವನ್ನು ಅರಿಯುವುದು ಎಲ್ಲರಿಗೂ ಜರೂರಾಗಿದೆ. ಇದರಿಂಧ ಪ್ರಭಾವಶಾಲಿ ತಂತ್ರಜ್ಞಾನದ ಕುರಿತು ಕೆಲವರಿಗೆ ಇರುವ ಅನಗತ್ಯ ಭೀತಿಯನ್ನು ಹೋಗಲಾಡಿವುದರ ಜೊತೆಗೆ ಎಐನ ಹೊಸ ಸಾಧ್ಯತೆಗಳನ್ನು ನ್ಯಾಯಯುತವಾಗಿ ಮತ್ತು ಕಾನೂನುಬದ್ಧವಾಗಿ ಬಳಸಿಕೊಳ್ಳಲು ಅವಕಾಶ ದೊರೆಯುತ್ತದೆ.
ಈ ಹಿನ್ನೆಲೆಯಲ್ಲಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕುರಿತು ನಮ್ಮ ಸುತ್ತ ಹರಡಿರುವ ಕೆಲವು ಉತ್ಪ್ರೇಕ್ಷೆಗಳು, ಅಪನಂಬಿಕೆಗಳೇನು ಹಾಗೂ ಅದರ ವಾಸ್ತವಾಂಶಗಳೇನು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
ಉತ್ಪ್ರೇಕ್ಷೆ: ಎಐ, ಮಾನವನಂತೆಯೇ ಯೋಚಿಸಬಲ್ಲದು ಮತ್ತು ಅನುಭವಿಸಬಲ್ಲದು
ವಾಸ್ತವ: ಜಗತ್ತಿನ ವಿವಿಧ ದೇಶಗಳು ಮತ್ತು ಕಂಪನಿಗಳು ಅತ್ಯಾಧುನಿಕ ರೋಬಾಟ್ಗಳನ್ನು ರೂಪಿಸುವಲ್ಲಿ ಪೈಪೋಟಿಗೆ ಬಿದ್ದಿವೆ. ಆಪ್ಟಿಮಸ್, ಸೋಫಿಯಾ, ಅಟ್ಲಾಸ್, ಪೆಪ್ಪರ್, ಫೆಡಾರ್ ಮುಂತಾದ ಅತ್ಯಾಧುನಿಕ ರೋಬಾಟ್ಗಳ ಸೃಷ್ಟಿಯೇ ಇದಕ್ಕೆ ಸಾಕ್ಷಿ. ಜನರ ಪ್ರಶ್ನೆಗಳಿಗೆ ಸಾವಧಾನಿಯಾಗಿ ಉತ್ತರಿಸುವ, ಮಾತು ಬೆಳೆಸುತ್ತಾ ಸಂವಹನಕ್ಕಿಳಿಯುವ ಸೋಫಿಯಾ ರೋಬಾಟ್ ಕಂಡ ಬಹಳಷ್ಟು ಜನರು ‘ರೋಬಾಟ್ ಮನುಷ್ಯರಂತೆಯೇ ಯೋಚಿಸಬಲ್ಲದು ಮತ್ತು ಭಾವನೆಗಳನ್ನು ಗ್ರಹಿಸಬಲ್ಲದು’ ಎಂಬ ಉತ್ಪ್ರೇಕ್ಷೆಯಲ್ಲಿದ್ದಾರೆ. ಆದರೆ ಅದು ನಿಜವಲ್ಲ, ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಯಾವುದೇ ರೋಬಾಟ್ ಮನುಷ್ಯನಷ್ಟು ಸಂಕೀರ್ಣವಾಗಿ ಯೋಚಿಸುವ ಮತ್ತು ನಮ್ಮಂತೆ ಭಾವನೆಗಳನ್ನು ಗ್ರಹಿಸುವ ಅಥವಾ ಅಷ್ಟೇ ಸ್ಪಷ್ಟವಾಗಿ ವ್ಯಕ್ತಪಡಿಸುವ ಶಕ್ತಿಯನ್ನು ಪಡೆದಿಲ್ಲ.
ಉತ್ಪ್ರೇಕ್ಷೆ: ಎಐ ತಂತ್ರಜ್ಞಾನವು ಮಾನವನ ಬುದ್ಧಿಮತ್ತೆಯನ್ನು ಮೀರುವ ಕಾಲ ಸನ್ನಿಹಿತವಾಗಿದೆ
ವಾಸ್ತವ: ಈ ಹೇಳಿಕೆ ನಿಜವೇ ಆದರೂ ಇದು ಯಾವಾಗ ಸಾಧ್ಯ ಎನ್ನುವ ವಿಚಾರದಲ್ಲಿ ಇದು ಉತ್ಪ್ರೇಕ್ಷೆಯ ಹೇಳಿಕೆಯಾಗಿದೆ. ಸದ್ಯದ ಬೆಳವಣಿಗೆಗಳ ಪ್ರಕಾರ, ಮನುಷ್ಯನ ಬುದ್ಧಿವಂತಿಕೆಯನ್ನು ಮೀರಿಸಬಲ್ಲ ಎಐ ರೂಪುಗೊಳ್ಳಲು ಇನ್ನೂ ಅನೇಕ ವರ್ಷಗಳ ಅಗತ್ಯವಿದೆ. ಇನ್ನು ಕೆಲ ವರ್ಷಗಳಲ್ಲಿ ಅಂತ ಬೆಳವಣಿಗೆಯನ್ನು ಕಾಣಬಹುದು ಎಂದು ಯಾರಾದರೂ ಹೇಳುತ್ತಿದ್ದರೆ ಅವರು ಎಐ ಬೆಳವಣಿಗೆ ಕುರಿತು ಹೆಚ್ಚಿನ ತಿಳಿವಳಿಕೆ ಹೊಂದಿಲ್ಲ ಎನ್ನಬಹುದು. ಮನುಷ್ಯನ ಮೆದುಳಿನ ರಚನೆ, ಅದರೊಳಗೆ ನಡೆಯುವ ಪ್ರಕ್ರಿಯೆಗಳು, ಮನುಷ್ಯನ ಅತ್ಯಂತ ಸಂಕೀರ್ಣವಾದ ಆಲೋಚನಾ ಕ್ರಮವನ್ನು ನಕಲು ಮಾಡಿ ಅದೇ ಪ್ರಕ್ರಿಯೆಯನ್ನು ಯಂತ್ರದೊಳಗೂ ಸೃಷ್ಟಿಸುವುದು ಅತ್ಯಂತ ಕ್ಲಿಷ್ಟಕರವಾದ ಕೆಲಸ.
ಕೆಲವು ವಿಶೇಷ ವಿಶೇಷ ಸಂದರ್ಭಗಳಲ್ಲಿ ಉದಾಹರಣೆಗೆ, ಚೆಸ್, ಗೋ ನಂತಹ ಬೋರ್ಡ್ ಗೇಮ್ಗಳು, ವೀಡಿಯೊ ಗೇಮ್ಗಳು, ಡ್ರೋಣ್ ರೇಸಿಂಗ್ನಂತಹ ಸ್ಕಿಲ್ ಗೇಮ್ಗಳಲ್ಲಿ ಎಐ ಮನುಷ್ಯರನ್ನು ಹಿಂದಿಕ್ಕಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅದರಲ್ಲೂ ಹೊಸ ಔಷಧಗಳ ಸಂಶೋಧನೆಯಲ್ಲಿ ಎಐ ಮನುಷ್ಯನಿಗಿಂತಲೂ ಮುಂದಿದೆ. ಇವೆಲ್ಲ ನಿಗದಿತ ಸಂದರ್ಭದ ನಿಶ್ಚಿತ ಕೌಶಲ್ಯಗಳ ಬಳಕೆಗೆ ಉದಾಹರಣೆಗಳು. ಇವೇ ಕೌಶಲ್ಯಗಳನ್ನು ವಿವಿಧ ಸಂದರ್ಭಗಳಿಗೆ ಹೊಂದಿಸಿಕೊಂಡು ಬಳಸುವ ವಿಚಾರದಲ್ಲಿ ಎಐ ಮನುಷ್ಯನನ್ನು ದಾಟಲು ಸಾಧ್ಯವಾಗಿಲ್ಲ. ಮನುಷ್ಯನಿಗೇ ವಿಶಿಷ್ಟವಾಗಿರುವ ಕಾಮನ್ ಸೆನ್ಸ್ನಂತಹ ಬುದ್ಧಿವಂತಿಕೆಯನ್ನು ಸಾಧಿಸಲು ಎಐಗೆ ಕಾಲ ಇನ್ನೂ ದೂರವಿದೆ. ಯಾಕೆಂದರೆ ಒಂದು ಕಡೆ ಕಲಿತ ಜ್ಞಾನವನ್ನು ಇತರ ಕಡೆಗಳೆಲ್ಲೂ ಪರಿಣಾಮಕಾರಿಯಾಗಿ ಬಳಬಲ್ಲ ಜ್ಞಾನವೇ ಜನರಲ್ ಇಂಟೆಲಿಜೆನ್ಸ್. ಇದನ್ನು ‘ಕೃತಕ ಸಾಮಾನ್ಯ ಬುದ್ಧಿಮತ್ತೆ’ (ಎಜಿಐ) ಎಂದು ಕರೆಯುತ್ತಾರೆ. ಇದನ್ನು ಸಾಧಿಸಲು ಹಲವಾರು ವರ್ಷಗಳ ಅಗತ್ಯವಿದೆ.
ಸಧ್ಯಕ್ಕೆ ದಕ್ಷಿಣ ಕೊರಿಯಾದ ಯಾಂಗ್ಹೂನ್ ಕಿಮ್ ಜಗತ್ತಿನ ಅತ್ಯುತ್ತಮ ಐಕ್ಯೂ ಹೊಂದಿದ್ದು, ಅವರು 276 IQ ಪಾಯಿಂಟ್ ಗಳಿಸಿದ್ದಾರೆ. ಇವರಿಗೆ ಹೋಲಿಸಿದರೆ ಜಗತ್ತಿನ ಹಲವು ಎಐ ಮಾಡೆಲ್ಗಳಲ್ಲಿ ಕ್ಲಾಡ್-3 ಎನ್ನುವ ಎಐ ಮಾಡೆಲ್, 101 IQ ಪಾಯಿಂಟ್ಗಳನ್ನು ಗಳಿಸಿದೆ. ಜಗತ್ತಿನ ಅತ್ಯುತ್ತಮ ಎಐ ಮಾಡೆಲ್ಗಳಲ್ಲಿ ಇದೇ ಗರಿಷ್ಠ IQ ಆಗಿದೆ. ಇದನ್ನುಗಮನಿಸಿದರೆ ಒಬ್ಬ ಅತ್ಯಂತ ಬುದ್ಧಿವಂತ ಮನುಷ್ಯನ IQನ ಅರ್ಧದಷ್ಟು ಬುದ್ಧಿವಂತಿಕೆಯನ್ನೂ ಎಐ ಗಳಿಸಿಲ್ಲ. ಇಡೀ ಜಗತ್ತು ಬೆರಗುಗಣ್ಣಿನಿಂದ ನೋಡುವ ChatGPT-4 ಗಳಿಸಿದ್ದು 85 IQ. ಇನ್ನು ಗೂಗಲ್ನ ಅಡ್ವಾನ್ಸ್ಡ್ ಜೆಮಿನಿ ಮತ್ತು ಮೆಟಾದ ಲಾಮಾ ಮಾಡೆಲ್ಗಳು 80 IQ ದಾಟಿಲ್ಲ. ಹೀಗಾಗಿ ಜಗತ್ತಿನ ಮೋಸ್ಟ್ ಇಂಟೆಲಿಜೆಂಟ್ ಮನುಷ್ಯನಿಗೆ ಸಾಟಿಯಾಗಬಲ್ಲ ಅಥವ ಅವನನ್ನು ಮೀರಬಲ್ಲ ಎಐ ರೂಪುಗೊಳ್ಳಲು ಇನ್ನೂ ಹಲವು ವರ್ಷಗಳೇ ಬೇಕು. ಇನ್ನೊಂದು ವಿಷಯವನ್ನು ಹೇಳಲೇಬೇಕು.
ಉತ್ಪ್ರೇಕ್ಷೆ: ಎಐ ಕೇವಲ ಕಂಪ್ಯೂಟರ್ ಆಧಾರಿತ ಕೆಲಸಕ್ಕೇ ಸೀಮಿತವಾಗಿದ್ದು, ಮನುಷ್ಯನು ಮಾಡುವ ಶ್ರಮದಾಯಕ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ
ವಾಸ್ತವ: ಎಐ ಅಥವಾ ಕೃತಕ ಬುದ್ದಿಮತ್ತೆ ತನ್ನ ಚಾಣಾಕ್ಷತೆ ತೋರಿಸಲು ಆರಂಭಿಸಿದ್ದೇ ಕಂಪ್ಯೂಟರ್ ಅಪ್ಲಿಕೇಶನ್ಗಳಲ್ಲಿ. ಆ ಬಳಿಕ ದತ್ತಾಂಶ ವಿಶ್ಲೇಷಣೆಯಲ್ಲಿ ತನ್ನ ಬುದ್ಧಿವಂತಿಕೆ ತೋರಿಸಿತು. ಆದರೆ ಎಐ ಕ್ಷೇತ್ರದಲ್ಲಿ ಹೆಚ್ಚಿನ ಆವಿಷ್ಕಾರಗಳು ನಡೆಯುತ್ತಾ ಹೋದಂತೆ ಈಗ ಎಐನ ಕಾರ್ಯಕ್ಷೇತ್ರ ವಿಸ್ತಾರಗೊಂಡಿದೆ. ಡೇಟಾ ಅನಲಿಸಿಸ್ನಿಂದ ಆರಂಭಗೊಂಡು, ಕಂಪ್ಯೂಟರ್ ವಿಷನ್ ಮೂಲಕ ಮನುಷ್ಯನಂತೆ ಜಗತ್ತನ್ನು ನೋಡಲು ಕಲಿತಿದೆ. ವಿವಿಧ ರೋಬಾಟ್, ರೋಬಾಬಿಟ್ ಹ್ಯಾಂಡ್ಗಳ ರೂಪದಲ್ಲಿ ಕೈಗಾರಿಕೆಗಳಲ್ಲಿ ಅತ್ಯಂತ ಶ್ರಮದಾಯಕ ಕೆಲಸಗಳನ್ನು ಮಾಡಲಾರಂಭಿಸಿದೆ. ಕಾರು, ಡ್ರೋಣ್, ವಿಮಾನ, ಬುಲೆಟ್ ಟ್ರೈನ್ಗಳನ್ನುಓಡಿಸಲು ಶಕ್ತವಾಗಿದೆ. ವಿವಿಧ ಕೈಗಾರಿಕಾ ಯಂತ್ರಗಳ ಮೆದುಳು ಸೇರಿ ಅವುಗಳನ್ನು ಸ್ವಯಂಚಾಲಿತವಾಗಿ ಮುನ್ನಡೆಸುತ್ತಿದೆ. ಹೀಗಾಗಿ, ಕಂಪ್ಯೂಟರ್ ಪ್ರೋಗ್ರಾಂನಿಂದ ಆರಂಭವಾಗಿದ್ದ ಎಐ ಈಗ ನಾನಾ ಬಗೆಯ ಭೌತಿಕ ರೂಪಗಳನ್ನು ಧರಿಸಿದ್ದು, ಮನುಷ್ಯ ಮಾಡುವ ಅನೇಕ ಕೆಲಸಗಳನ್ನು ಮಾಡಲು ಆರಂಭಿಸಿದೆ.
ಉತ್ಪ್ರೇಕ್ಷೆ: ಕೆಲಸಗಳನ್ನು ಕಿತ್ತುಕೊಂಡು ಮನುಷ್ಯರನ್ನು ಎಐ ಬೀದಿಪಾಲು ಮಾಡಲಿದೆ
ವಾಸ್ತವ: ಮನುಷ್ಯ ಮಾಡುವ ಶ್ರಮದಾಯಕ ಕೆಲಸಗಳನ್ನು ಎಐ ಮಾಡಲು ಸಾಧ್ಯವಿಲ್ಲ ಎನ್ನುವ ಅಪನಂಬಿಕೆಯನ್ನು ಎಐನ ಸಾಮರ್ಥ್ಯ ತಿಳಿಯದವರು ಹುಟ್ಟಹಾಕಿದ್ದರೆ, ಮನುಷ್ಯರನ್ನು ಬೀದಿಪಾಲು ಮಾಡುತ್ತದೆ ಎಂಬ ಭಯ ಕೃತಕ ಬುದ್ಧಿಮತ್ತೆಯಲ್ಲಿ ಅಪರಿಮಿತ ವಿಶ್ವಾಸ ಇಟ್ಟಿರುವವರ ಬಳಗದಲ್ಲಿದೆ. ಸದ್ಯದ ಮಟ್ಟಿಗೆ ಮನುಷ್ಯ ಮಾಡುವ ಅಗಾಧ ಕೆಲಸಗಳಲ್ಲಿ ಸ್ವಲ್ಪ ಪ್ರಮಾಣದ ಕೆಲಸಗಳನ್ನೂ ಎಐ ಬದಲಾಯಿಸಲೂ ಸಾಧ್ಯವಾಗಿಲ್ಲ. ಇನ್ನೂ ಹಲವಾರು ವರ್ಷಗಳವರೆಗೆ ಮನುಷ್ಯರನ್ನು ಬಲಾಯಿಸಬಲ್ಲ ಸಾಮರ್ಥ್ಯ ಅದಕ್ಕೆ ದಕ್ಕುವುದಿಲ್ಲ. ಆದರೆ, ಕೆಲವು ಕೆಲಸಗಳು ಎಐ ಪಾಲಾಗುವುದು ನಿಜ, ಕೆಲವು ಕೆಲಸಗಳು ತಮ್ಮ ಸ್ವರೂಪವವನ್ನೇ ಬದಲಾಯಿಸಿಕೊಳ್ಳವುದೂ ಖರೆ. ಹಾಗೆ ಮನುಷ್ಯರ ಜೊತೆ ಎಐ ಸಹವರ್ತಿಯಾಗಿ ದುಡಿಯುವುದೂ ನಿಜ. ಎಜಿಐ ಹುಟ್ಟು ಪಡೆಯುವ ಕಾಲಕ್ಕೆ ಮನುಷ್ಯರ ಎಲ್ಲಾ ಕೆಲಸಗಳನ್ನು ಎಐ ಮಾಡಲು ಶಕ್ತವಾಗಿರುತ್ತದೆ.
ಉತ್ಪ್ರೇಕ್ಷೆ: ಎಲ್ಲಾ ಸಮಸ್ಯೆಗಳಿಗೂ ಎಐನಿಂದ ಪರಿಹಾರ ಶತಃಸಿದ್ಧ
ವಾಸ್ತವ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಐ ಅತ್ಯಂತ ಪ್ರಬಲ ಸಾಧನ ಎನ್ನುವುದು ನಿಜ. ಆದರೆ ಸದ್ಯಕ್ಕೆ ಇದಕ್ಕೆ ಸಾಕಷ್ಟು ಇತಿ ಮಿತಿಗಳಿವೆ. ‘100% ಸ್ವಯಂಚಾಲಿತ’ ಎನ್ನುವ ಕೆಲಸಗಳು ಅತ್ಯಂತ ಸೀಮಿತ. ಎಐ ಬಳಕೆಯಾಗುವ ಸಾವಿರಾರು ಕೆಲಸಗಳಲ್ಲಿ ಈಗಲೂ ಮನಷ್ಯರ ಮೇಲ್ವಿಚಾರಣೆ ಅತ್ಯಗತ್ಯವಾಗಿ ಬೇಕಾಗಿದೆ. ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಈಗ ಎಐ ನೂರಾರು ಪಟ್ಟು ಬೆಳೆಯಬೇಕು. ಇದು ಸಾಧ್ಯವಾಗುವುದು ಕ್ವಾಂಟಂ ಕಂಪ್ಯೂಟರ್ ಮತ್ತು ಎಐ ಜೊತೆಗೂಡಿ ಆರ್ಟಿಫಿಷಿಯಲ್ ಸೂಪರ್ ಇಂಟೆಲಿಜೆನ್ಸ್ (ಎಎಸ್ಐ) ಪ್ರವರ್ಧಮಾನಕ್ಕೆ ಬಂದಾಗ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಅಲ್ಲದಿದ್ದರೂ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸ ವಿಜ್ಞಾನಿಗಳದ್ದು.



