AI ನಿಂದ 18 ಸಾವಿರ ಉದ್ಯೋಗಿಗಳು ಮನೆಗೆ; ಮುಂದಿದೆ ಮಾರಿ ಹಬ್ಬ
ಟಿಸಿಎಸ್ನಲ್ಲಿ 12 ಸಾವಿರ ಜಾಬ್ ಕಟ್, ಫ್ಯೂಚರ್-ರೆಡಿ: ಜಾಬ್ ಕಟ್ನ ಇನ್ನೊಂದು ಹೆಸರು
ಡಾ.ರಮೇಶ್ ನಿಂಬೆಮರದಳ್ಳಿ
12,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟ ಟಿಸಿಎಸ್
ಜಾಬ್ ಕಟ್ ಪಟ್ಟಿಯಲ್ಲಿ ಕಿರಿಯ, ಹಿರಿಯ ಉದ್ಯೋಗಿಗಳು
ಆದಾಯ ಸ್ಥಿರವಿದ್ದರೂ ಭವಿಷ್ಯಕ್ಕೆ ಸಜ್ಜಾಗಲು ಈ ಕ್ರಮ
2025ರಲ್ಲಿ ಜಾಗತಿಕವಾಗಿ 169 ಕಂಪನಿಗಳಲ್ಲಿ 80 ಸಾ. ಜಾಬ್ ಕಟ್
ಇಂಟೆಲ್, ಮೈಕ್ರೊಸಾಫ್ಟ್, ಗೋಗಲ್ನಿಂದಲೂ ಇದೇ ಕ್ರಮ
ಮುಂದಿನ ದಿನಗಳಲ್ಲಿ ಹೆಚ್ಚಲಿದೆ ನಿರುದ್ಯೋಗ ಪರ್ವ
ಎಲ್ಲಾ ಮನುಷ್ಯರನ್ನೂ ಮೀರಿಸಬಲ್ಲ ಜಿಪಿಟಿ-5 ಶೀಘ್ರ ಬಿಡುಗಡೆ
ನಿರೀಕ್ಷೆ ಮೀರಿ ಎಐ ಆಟೊಮೇಷನ್, ಎಐ ಏಜೆಂಟ್ಗಳ ಬಳಕೆ
ಎಐ ತಂತ್ರಜ್ಞಾನ ಹೊಸ ಉದ್ಯೋಗಗಳು ಸೃಷ್ಟಿಸುತ್ತದೆ. ಹಳೆಯ ಬೋರಿಂಗ್ ಕೆಲಸಗಳನ್ನು ಎಐ ಆಟೊಮೇಟ್ ಮಾಡಿ ಕೆಲಸವನ್ನು ಸುಲಭಗೊಳಿಸುತ್ತದೆ. ಅಷ್ಟೇ ಏಕೆ ಮನುಷ್ಯನ ಬದುಕನ್ನೇ ಸರಳಗೊಳಿಸುತ್ತದೆ ಎಂಬುದು ಎಐ ಕುರಿತು ಮೊದಲೆಲ್ಲಾ ಇದ್ದ ನಂಬಿಕೆ. ಇದು ಘಟಿಸುವುದು ನಿರೀಕ್ಷಿತವೇ ಆಗಿದ್ದರೂ ಇಷ್ಟು ಬೇಗ ನಡೆತ್ತಿರುವುದು ನಿರೀಕ್ಷಿತವಲ್ಲ. ಹೌದು! ಹಲವು ವರ್ಷಗಳ ಕಾಲ ಚಾಲ್ತಿಯಲ್ಲಿದ್ದ “ಮಾನವ-AI ಸಹಯೋಗ” ಎಂಬ ನಿರೂಪಣೆ ಅರ್ಥ ಕಳೆದುಕೊಂಡಿದೆ. ಎಂದರೆ, ಮನುಷ್ಯ ಮತ್ತು ಎಐ ಒಟ್ಟಿಗೇ ಕೆಲಸ ಮಾಡುತ್ತಾರೆ ಎನ್ನುವುದು ನಿರೂಪಣೆಯ ತಾತ್ಪರ್ಯ. ಈ ಸಹಯೋಗದ ರೇಷಿಯೋ ಎಷ್ಟು ಎಂದು ಯಾರೂ ಹೇಳಲಿಲ್ಲ. ನಾವೂ ಯೋಚಿಸಲಿಲ್ಲ.
ಆದರೆ, ಎಐ ಕುರಿತು ಇದ್ದ ನಂಬಿಕೆ ಈಗ ಬುಡಮೇಲಾಗಿದೆ. ಔದ್ಯೋಗಿಕ ಚಿತ್ರಣವೇ ಬದಲಾಗಿದೆ. ಎಐ ಕುರಿತು ಆಶಾವಾದಿದೃಷ್ಟಿಕೋನ ಈಗಿನಕಠೋರ ವಾಸ್ತವದ ಎದುರು ಉಡುಗಿ ಹೋಗಿದೆ. AI ಕೆಲಸ ಹೆಚ್ಚಿಸುವುದಿಲ್ಲ ಬದಲುಬೃಹತ್ಪ್ರಮಾಣದಲ್ಲಿಉದ್ಯೋಗಗಳನ್ನು ಇಲ್ಲವಾಗಿಸುತ್ತದೆ ಎನ್ನುವುದು ಖಚಿತವಾಗಿದೆ. ತಂತ್ರಜ್ಞಾನಉದ್ಯಮದಲ್ಲಿಜಾಬ್ ಕಟ್ ಎಂಬ ಸುದ್ದಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. ಈಉದ್ಯೋಗಕಡಿತವುದೈತ್ಯಕಂಪನಿಗಳೂ ಸೇರಿದಂತೆ ಜಾಬ್ ಮಾರ್ಕೆಟ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. AI ಯಾಂತ್ರೀಕರಣವನ್ನು ತೆರೆದ ತೋಳಿನಿಂದ ಅಪ್ಪಿಕೊಂಡಿರುವ ವಲಯದಲ್ಲಿ ಎಐ ಪರಿಣಾಮ ಇನ್ನೂ ಭೀಕರವಾಗಲಿದೆ ಎನ್ನುವ ಸ್ಪಷ್ಟಚಿತ್ರಣ ಕಾಣಿಸುತ್ತಿದೆ.
ಜಾಗತಿಕ ಅನಿಶ್ಚಿತತೆ, ಎಐ ಅಡ್ಡಪರಿಣಾಮಗಳ ಎಫೆಕ್ಟ್
ಜಾಗತಿಕ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿರುವ ಭಾರತೀಯ ಐಟಿ ವಲಯವು ಕಾರ್ಯಸ್ಥಳ ರೂಪಾಂತರದ ಮುಂಚೂಣಿಯಲ್ಲಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಇನ್ಫೋಸಿಸ್ ಮತ್ತು ವಿಪ್ರೋ ಸೇರಿದಂತೆ ಪ್ರಮುಖ ಭಾರತೀಯ ಐಟಿ ಕಂಪನಿಗಳು ಸ್ಥಿರ ಅಥವಾ ಹೆಚ್ಚುತ್ತಿರುವ ಆದಾಯದ ಹೊರತಾಗಿಯೂ ಉದ್ಯೋಗಗಳನ್ನು ಕಡಿಮೆ ಮಾಡುತ್ತಿವೆ ಇಲ್ಲವೇ ನೇಮಕಾತಿಯನ್ನು ನಿಧಾನಗೊಳಿಸುತ್ತಿವೆ. ಇದು ಯಾಂತ್ರೀಕರಣದ ಕಡೆ ಕಂಪನಿಗಳ ಯೋಜಿತ ಬದಲಾವಣೆ. ಟಿಸಿಎಸ್ ಸುಮಾರು 2% ಉದ್ಯೋಗಿಗಳನ್ನು ಕಡಿತ ಮಾಡುವುದಾಗಿ ಘೋಷಿಸಿದೆ. ಮಧ್ಯಮ ಮತ್ತು ಹಿರಿಯ ಹುದ್ದೆಯಲ್ಲಿರುವವರೂ ಜಾಬ್ ಕಟ್ ಲಿಸ್ಟ್ನಲ್ಲಿದ್ದಾರೆ ಎನ್ನುವುದು ವಿಶೇಷ. ಇನ್ಫೋಸಿಸ್ ಹೊಸ ಪದವೀಧರರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನು ಸಾಕಷ್ಟು ಕಡಿಮೆ ಮಾಡಿದೆ. ಈಗಾಗಲೇ ಆಫರ್ ಲೆಟರ್ ಪಡೆದವರನ್ನು ಕಾಯಿಸುತ್ತಿದೆ. ವಿಪ್ರೋ ಕೂಡ ಕೆಲವು ನಿಗದಿತ ಹುದ್ದೆಗಳನ್ನು ಕೈಬಿಡುತ್ತಿದೆ. ಜಾಗತಿಕ ಐಟಿ ಸೇವೆಗಳ ಪವರ್ಹೌಸ್ ಆಗಿರುವ ಈ ಕಂಪನಿಗಳ ಈ ಕ್ರಮಗಳು AI ತಂತ್ರಜ್ಞಾನದ ಅಡ್ಡಪರಿಣಾಮಗಳನ್ನು ಮತ್ತು ಒಟ್ಟಾರೆ ಜಾಗತಿಕ ಮಾರುಕಟ್ಟೆಯಲ್ಲಿರುವ ಅನಿಶ್ಚಿತತೆ ಮತ್ತು ಅತಂತ್ರತೆಯನ್ನು ಸ್ಪಷ್ಟವಾಗಿ ತೋರ್ಪಡಿಸುತ್ತಿವೆ. ಇದು ಉದ್ಯಮದ ಭವಿಷ್ಯಕ್ಕೆ ಕನ್ನಡಿಯಾಗಿದೆ.
ಇದು ಜಾಗತಿಕ ಲೆಕ್ಕಾಚಾರ
ಹಾಗೆಂದು ಈ ವಿದ್ಯಮಾನ ಭಾರತಕ್ಕೆ ಮಾತ್ರ ಎಂದು ಭಾವಿಸಬೇಕಿಲ್ಲ. ಇದು ವಿಶ್ವಾದ್ಯಂತ ತಂತ್ರಜ್ಞಾನ ದೈತ್ಯ ಕಂಪನಿಗಳ ಮೇಲೆ ಪರಿಣಾಮ ಬೀರುವ ಜಾಗತಿಕ ಪ್ರವೃತ್ತಿ. ಸೆಮಿಕಂಡಕ್ಟರ್ ಉದ್ಯಮದ ಅಡಿಪಾಯವಾಗಿರುವ ಇಂಟೆಲ್, 15% ಉದ್ಯೋಗಿಗಳ ಕಡಿತ ಮಾಡುವುದಾಗಿ ಹೇಳಿದೆ. ಇದರ ಭಾಗವಾಗಿ ಅಮೆರಿಕದಲ್ಲಿ 5,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡುವುದಾಗಿ ತಿಳಿಸಿದೆ. ಜಾಗತಿಕ ಭೌಗೋಳಿಕ ಕಾರ್ಯತಂತ್ರಗಳು ಮತ್ತು ಇದರ ಫಲವಾಗಿ ಸೃಷ್ಟಿಯಾಗಿರುವ ಆರ್ಥಿಕ ಅನಿಶ್ಚಿತತೆ ಮತ್ತು ಎಐ ತಂತ್ರಜ್ಞಾನದ ಅನಿರೀಕ್ಷಿತ ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ. ಭವಿಷ್ಯದ ಉದ್ಯಮದಲ್ಲಿ ಆಟೊಮೇಷನ್ ನಿರ್ಣಾಯಕವಾಗಿರುತ್ತದೆ ಎಂದು ಅರಿತ ದೈತ್ಯ ಹಾರ್ಡ್ವೇರ್ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು “ಫ್ಯೂಚರ್ ರೆಡಿ”ಯಾಗುವಂತೆ ರೀಸ್ಟ್ರಕ್ಚರ್ ಮಾಡುತ್ತಿವೆ.
ತಾಂತ್ರಿಕ ಬದಲಾವಣೆಗಳಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್, ಜಾಗತಿಕವಾಗಿ ಸುಮಾರು 9,100 ಉದ್ಯೋಗಿಗಳನ್ನು ಕೈಬಿಟ್ಟಿದೆ. ಇದರಿಂದ ಎಕ್ಸ್ಬಾಕ್ಸ್, ಮಾರಾಟ ಮತ್ತು ಕಾನೂನು ವಿಭಾಗಗಳು ಸೇರಿದಂತೆ ನಿರ್ಣಾಯಕ ವಿಭಾಗಗಳ ಮೇಲೆ ಪರಿಣಾಮ ಬೀರಿದೆ. ಅಷ್ಟೇ ಅಲ್ಲ ಕಂಪನಿ ಪಾಕಿಸ್ತಾನದಿಂದ ಹೊರಬರಲೂ ಇದು ಕಾರಣವಾಗಿದೆ. ಈ ನಿರ್ಧಾರಗಳ ಹಿಂದಿರುವುದು ಅದೇ ನಿರಾಕರಿಸಲಾಗದ ಶಕ್ತಿ ಎಐ.
ವಿರೋಧಾಭಾಸ ಎಂದರೆ, ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳನ್ನು ತೋರಿಸುವ, ಸಂಬಂಧಿಸಿದ ಕಂಪನಿಗಳೊಂದಿಗೆ ಸಂಪರ್ಕಿಸುವ ಜಾಬ್ ಪೋರ್ಟಲ್ಗಳೂ ಕೂಡ ಕೆಲಸಗಾರರನ್ನು ಕಡಿಮೆ ಮಾಡುತ್ತಿವೆ. ಇನ್ಡೀಡ್ ಮತ್ತು ಗ್ಲಾಸ್ಡೋರ್ ಎಂಬ ಉದ್ಯೋಗ ಕಂಪನಿಗಳು 1,300 ಉದ್ಯೋಗಿಗಳನ್ನು ವಜಾಗೊಳಿಸಿವೆ. ಈ ಆಂತರಿಕ ವಿರೋಧಾಭಾಸವು ಬದಲಾವಣೆ ಎಷ್ಟು ವ್ಯಾಪಕವಾಗಿದೆ ಎನ್ನುವುದನ್ನು ಒತ್ತಿಹೇಳುತ್ತದೆ. ಕೆಲಸ ಕೊಡಿಸುವ ಈ ಕಂಪನಿಗಳು ತಮ್ಮ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು AI ಅನ್ನು ಬಳಸಿಕೊಳ್ಳುತ್ತಿವೆ. ಅಂದರೆ, ಆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿವೆ.
ಒಟ್ಟಾರೆಯಾಗಿ 2025ರಲ್ಲಿ ವಿಶ್ವದಾದ್ಯಂತ ಸುಮಾರು 169 ಕಂಪನಿಗಳಲ್ಲಿ ಈವರೆಗೆ 80 ಸಾವಿರ ಉದ್ಯೋಗಿಗಳನ್ನು ಕೈಬಿಡಲಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ.
"ಫ್ಯೂಚರ್-ರೆಡಿ" ಸಿದ್ಧಾಂತದ ಹುನ್ನಾರ ಏನು?
ಅಷ್ಟಕ್ಕೂ ಇಷ್ಟು ಪ್ರಮಾಣದಲ್ಲಿ ಉದ್ಯೋಗ ಕಡಿತ ಯಾಕೆ ಎಂಬ ಪ್ರಶ್ನೆಗೆ, ನಾವು ನಮ್ಮ ಕಂಪನಿಯನ್ನು “ಫ್ಯೂಚರ್-ರೆಡಿ”ಯಾಗಿಸುತ್ತಿದ್ದೇವೆ ಎನ್ನುವುದು ಅವರ ಉತ್ತರ. ಆಶ್ಚರ್ಯ ಎಂದರೆ, ಈ ಕಂಪನಿಗಳ ಆದಾಯ ಕುಸಿಯುತ್ತಿಲ್ಲ. ಆದಾಯ ಹೆಚ್ಚುತ್ತಿದೆ ಇಲ್ಲವೇ ಸ್ಥಿರವಾಗಿದೆ. ಹಾಗಿದ್ದೂ ಉದ್ಯೋಗ ಕಡಿತ ಯಾಕೆ? ಉತ್ತರ, ಅವರೇ ಹೇಳುವ ಹಾಗೆ ಅವರ “ಫ್ಯೂಚರ್-ರೆಡಿ” ಸಿದ್ದಾಂತದಲ್ಲಿದೆ. ಇದು ಕಂಪನಿಯ ಕೇವಲ ದೈನಂದಿನ ವೆಚ್ಚಗಳನ್ನು ಕಡಿಮೆ ಮಾಡುವುದಲ್ಲ. ಇದು ತಮ್ಮ ಕೆಲಸ, ಕೆಲಸಗಾರರು ಮತ್ತು ಕಾರ್ಯತಂತ್ರವನ್ನು ಮೂಲಭೂತವಾಗಿ ಮರುವ್ಯಾಖ್ಯಾನಿಸುವ ಕ್ರಮವಾಗಿದೆ. ಇದೇ ಕಂಪನಿಗಳು GenAI ಮತ್ತು ಭಾರಿ ಡೇಟಾ ವಿಶ್ಲೇಷಿಸುವ, ಪ್ರಾಜೆಕ್ಟ್ ನಿರ್ವಹಣೆಯನ್ನು ಇನ್ನಷ್ಟು ಸರಳೀಕರಿಸುವ, ಅಗತ್ಯಕ್ಕೆ ತಕ್ಕಂತೆ ತನ್ನಿಂತಾನೇ ಕೋಡ್ಗಳನ್ನು ಬರೆಯುವ ಯಾಂತ್ರೀಕೃತ ಸೇವೆಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿವೆ. ಇದು ಸಹಜವಾಗಿಯೇ ಮೇಲಿನ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಇಲ್ಲವೇ ಮೇಲ್ವಿಚಾರಣೆ ಮಾಡುವ ಉದ್ಯೋಗಿಗಳನ್ನು ಕಡಿಮೆ ಮಾಡುವ ಅನಿವಾರ್ಯತೆ ಬರುತ್ತದೆ. ಒಂದು ಹಂತದಲ್ಲಿ ಬಹಳ ಸಂಕೀರ್ಣ ಕೆಲಸಗಳೆಂದು ಭಾವಿಸಿ, ಅವು ಎಂದಿಗೂ ಸೇಫ್ ಎಂದು ಭಾವಿಸಿದ ಉದ್ಯೋಗಳೂ ಕೂಡ ಈ ಬುದ್ಧಿವಂತ ವ್ಯವಸ್ಥೆಯ ಬಲಿಪಶುಗಳಾಗುತ್ತಿವೆ.
AI ಅಭಿವೃದ್ಧಿಯಲ್ಲಿ ಪ್ರವರ್ತಕ ಕಂಪನಿಯಾಗಿರುವ ಗೂಗಲ್ ಕೂಡ ತನ್ನ ಸ್ಮಾರ್ಟ್ ಟಿವಿ ವಿಭಾಗದಲ್ಲಿ ಸಿಬ್ಬಂದಿ ಕಡಿತಗೊಳಿಸಿ. ನಾವು "AI ಯೋಜನೆಗಳ ಮೇಲೆ ಹೆಚ್ಚು ಗಮನಹರಿಸಲು" ಹಣ ಹೂಡುತ್ತಿದ್ದೇವೆ ಎನ್ನುವ ಮೂಲಕ ಇಡೀ ಉದ್ಯಮದ ದಿಕ್ಕು ಯಾವ ಕಡೆಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಮಹಾ ಪರಿವರ್ತನೆಗೆ ನಾಂದಿ
ಈ ಉದ್ಯೋಗ ಕಡಿತದ ಪರಿಣಾಮ ತುಂಬಾ ಆಳವಾಗಿದೆ. ಕೆಲವು ಪ್ರತಿಪಾದಕರು ಹೇಳುವಂತೆ AI ಹೊಸ, ಉನ್ನತ-ಕೌಶಲ್ಯವುಳ್ಳ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂಬುದೆಲ್ಲಾ ಪೂರ್ಣ ಸತ್ಯವಲ್ಲ ಎಂಬುದು ಸಾಬೀತಾಗಿದೆ. ಈಗ ನಾವು ನೋಡುತ್ತಿರುವ ಉದ್ಯೋಗ ಕಡಿತಗಳು ಕೇವಲ ತಂತ್ರಜ್ಞಾನ ಉದ್ಯಮದಲ್ಲಿ ನಡೆಯಬಹುದಾದ ಸಾಮಾನ್ಯ ಘಟನೆಯಲ್ಲ. ಈ ಘಟನೆ ಮುಂದೆ ಬರಲಿರುವ ಭಾರಿ ಔದ್ಯೋಗಿಕ ಬದಲಾವಣೆಯನ್ನು ಸೂಚಿಸುತ್ತಿವೆ. ಹಾಗೆ AI ಆಟೊಮೇಷನ್ ಎನ್ನುವುದು ಭವಿಷ್ಯದಲ್ಲಿ ನಡೆಯುವ ವಿದ್ಯಮಾನವಲ್ಲ, ಅದು ಈಗಾಗಲೇ ಶುರುವಾಗಿದೆ ಎನ್ನುವುದನ್ನು ಸಾರಿ ಹೇಳುತ್ತಿವೆ. ಎಐ ತಂತ್ರಜ್ಞಾನ ವಿಕಸನಗೊಳ್ಳುತ್ತಲೇ ಇದ್ದು, ಅದರ ಸಾಮರ್ಥ್ಯಗಳೂ ತೀವ್ರಗೊಳ್ಳುತ್ತಿವೆ. ಸ್ಯಾಮ್ ಆಲ್ಟ್ಮನ್ ಹೇಳಿರುವಂತೆ ಆಗಷ್ಟ್ ಅಂತ್ಯದ ವೇಳೆಗೆ ಬಿಡುಗಡೆಯಾಗಬಹುದಾದ ಜಿಪಿಟಿ-5 ಜಗತ್ತಿನ ಯಾವುದೇ ಮನುಷ್ಯನನ್ನು ಮೀರಿಸಬಲ್ಲಷ್ಟು ಸ್ಮಾರ್ಟ್ ಆಗಿರುತ್ತದೆ. ಹೀಗಾಗಿ ಉದ್ಯೋಗ ಕಡಿತದ ಈ ಪ್ರವೃತ್ತಿ ಮುಂದೆ ಹೆಚ್ಚಾಗುವುದಂತೂ ಖಚಿತ. ಎಲ್ಎಲ್ಎಂಗಳು ಹೆಚ್ಚು ಲಾಜಿಕಲ್ ಆದಷ್ಟೂ, ಎಐ ಏಜೆಂಟ್ಗಳು ಹೆಚ್ಚು ಸ್ಮಾರ್ಟ್ ಆದಷ್ಟೂ ಈ ಪ್ರವೃತ್ತಿಯ ವೇಗ ಹೆಚ್ಚುತ್ತದೆ. ಇದರ ಸಾಮಾಜಿಕ ಪರಿಣಾಮಗಳು ಈಗಷ್ಟೇ ತೆರೆದುಕೊಳ್ಳಲು ಪ್ರಾರಂಭಿಸಿದ್ದು, ಇದು ಯಾವ ಸ್ವರೂಪವನ್ನು ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕು. ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಂಪನಿಗಳು ಉದ್ಯೋಗ ನಷ್ಟದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ತಗ್ಗಿಸಲು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕು. ಇದರಲ್ಲಿ ಯುವಜನರಿಗೆ ಹೊಸ ಕಾಲದ ಕೌಶಲ್ಯಗಳನ್ನು ಶೀಘ್ರವಾಗಿ ಕಲಿಸುವುದರ ಜೊತೆಗೆ ಆರ್ಥಿಕ ಅಸಮಾನತೆಯನ್ನು ತಗ್ಗಿಸುವ ಯೋಜನೆಗಳನ್ನು ಹೆಚ್ಚಿಸಬೇಕು. ಒಟ್ಟಿನಲ್ಲಿ ಉದ್ಯೋಗ ಕಡಿತದ ವೇಗಕ್ಕೆ ಸಮನಾಗಿ ಯುವಜನರ ಕೌಶಲ್ಯ ಹೆಚ್ಚಬೇಕು. ಆಗ ಮಾತ್ರ ಫ್ಯೂಚರ್ ರೆಡಿ ಕಂಪನಿಗಳಿಗೆ ಫ್ಯೂಚರ್ ರೆಡಿ ಉದ್ಯೋಗಿಗಳು ತಯಾರಾಕಲು ಸಾಧ್ಯ.
ಪರಿಹಾರ, ಹೊಸ ಉದ್ಯೋಗ ಹುಡುಕಲು ನೆರವು: ಟಿಸಿಎಸ್
ಉದ್ಯೋಗ ಕಡಿತ ಮಾಡುವ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಟಿಸಿಎಸ್, “ಟಿಸಿಎಸ್, "ಫ್ಯೂಚರ್-ರೆಡಿ" ಸಂಸ್ಥೆಯಾಗಿ ಬೆಳೆಯುವ ಹಾದಿಯಲ್ಲಿದೆ. ಇದು ಹಲವು ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಉಪಕ್ರಮಗಳನ್ನು ಒಳಗೊಂಡಿದೆ. ಅವುಗಳಲ್ಲಿ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದು, ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುವುದು, ನಮ್ಮ ಗ್ರಾಹಕರಿಗೆ ಮತ್ತು ನಮಗಾಗಿ ಎಐಯನ್ನು ವ್ಯಾಪಕವಾಗಿ ಬಳಸುವುದು, ಪಾಲುದಾರಿಕೆಗಳನ್ನು ಹೆಚ್ಚಿಸುವುದು, ಮುಂದಿನ ಪೀಳಿಗೆಯ ಮೂಲಸೌಕರ್ಯವನ್ನು ರಚಿಸುವುದು ಹಾಗೂ ನಮ್ಮ ಉದ್ಯೋಗಿಗಳ ಪಡೆಯನ್ನು ಪುನರ್ ರಚಿಸುವುದೂ ಸೇರಿದೆ. ಇದರ ಭಾಗವಾಗಿ ನಾವು ಕೆಲವು ಸಹೋದ್ಯೋಗಿಗಳನ್ನು ಬಿಡುಗಡೆ ಮಾಡುತ್ತೇವೆ. ಇದು ಜಾಗತಿಕವಾಗಿ ನಮ್ಮ 2% ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಸಹೋದ್ಯೋಗಿಗಳಿಗೆ ಇದು ತುಂಬಾ ಕಷ್ಟಕರ ಸಮಯ ಎಂಬುದು ನಮಗೆ ಗೊತ್ತಿದೆ. ಅವರ ಸೇವೆಗಾಗಿ ನಾವು ಧನ್ಯವಾದಗಳನ್ನು ಹೇಳುತ್ತೇವೆ. ಅಲ್ಲದೆ ಉದ್ಯೋಗ ಕಳೆದುಕೊಳ್ಳುತ್ತಿರುವವರಿಗೆ ನೋಟಿಸ್ ಪೀರಿಯಡ್ ಪರಿಹಾರ, ಇನ್ಶೂರೆನ್ಸ್ ಅವಧಿ ವಿಸ್ತರಣೆ, ಹೊಸ ಉದ್ಯೋಗ ಹುಡುಕಿಕೊಳ್ಳಲು ಬೆಂಬಲ ಮತ್ತು ಕೌನ್ಸೆಲಿಂಗ್ ಒದಗಿಸುತ್ತೇವೆ,” ಎಂದು ತಿಳಿಸಿದೆ.
“ಎಐ ಕ್ಷೇತ್ರದ ಬೆಳವಣಿಗೆಗಳನ್ನು ನಿರಂತರವಾಗಿ ತಿಳಿಯಲು ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ ಮತ್ತು ಪರಿಚಿತರೊಂದಿಗೆ ಶೇರ್ ಮಾಡಿ”





