AI ಪ್ರೀತಿ, ಕ್ವಾಂಟಮ್ ಭೀತಿ
2025ರ ಟೆಕ್ ಟ್ರೆಂಡ್ಗಳು - ಭಾಗ 1
ಡಾ. ರಮೇಶ್ ನಿಂಬೆಮರದಳ್ಳಿ
2025 ಕ್ಕೆ ಕಾಲಿಡುತ್ತಿದ್ದಂತೆ ವಿಶ್ವದ ಆರ್ಥಿಕತೆಗಳು, ಕೈಗಾರಿಕೆಗಳು, ಮತ್ತು ಜನರ ದೈನಂದಿನ ಜೀವನವನ್ನು ಮುರಿದುಕಟ್ಟುವ ತಾಂತ್ರಿಕ ಪ್ರಗತಿಗಳ ಅಭೂತಪೂರ್ವ ಅಲೆಗೆ ಜಗತ್ತು ಸಾಕ್ಷಿಯಾಗುತ್ತಿದೆ. ಕೃತಕ ಬುದ್ಧಿಮತ್ತೆಯಿಂದ ಕ್ವಾಂಟಮ್ ಕಂಪ್ಯೂಟಿಂಗ್ವರೆಗೆ ವಿವಿಧ ಆವಿಷ್ಕಾರಗಳು ಉದ್ಯಮ, ವ್ಯವಹಾರಗಳಲ್ಲದೆ ಜನರ ಜೀವನದ ಮೇಲೂ ಅಗಾಧ ಪರಿಣಾಮ ಬೀರುತ್ತಿವೆ. 2025 ರಲ್ಲಿ ಮುನ್ನೆಲೆಗೆ ಬರುವ ಪ್ರಮುಖ ತಂತ್ರಜ್ಞಾನದ ಟ್ರೆಂಡ್ಗಳು ಹಾಗೂ ಜನರ ಬದುಕಿನ ಮೇಲೆ ಅವುಗಳ ಪರಿಣಾಮಗಳು ಏನೆಂಬುದರ ಮೇಲೆ ಪೂರ್ವಾವಲೋಕನ ಮಾಡಲಾಗಿದೆ. ಅದರ ಮೊದಲ ಭಾಗವನ್ನು ನೀಡಲಾಗಿದೆ.
AI: ಆಧುನಿಕ ಆವಿಷ್ಕಾರಗಳ ಮೆದುಳು
‘ಎಐ ಮನುಷ್ಯನ ಕೊನೆಯ ಆವಿಷ್ಕಾರ’ ಎಂಬ ಮಾತು ನಿಜವಾಗುವುದರ ಮೊದಲ ಹೆಜ್ಜೆಗಳನ್ನು ನಾವು ಈ ವರ್ಷದಲ್ಲಿ ಕಾಣುತ್ತೇವೆ. ಭವಿಷ್ಯದ ಎಲ್ಲಾ ಕ್ರಾಂತಿಕಾರಿ ಆವಿಷ್ಕಾರಗಳಿಗೆ ಮೆದುಳಾಗಿ ಕಾರ್ಯನಿರ್ವಹಿಸಲು ಕೃತಕ ಬುದ್ಧಿಮತ್ತೆಯು ಅಣಿಗೊಳ್ಳುವುದು ಢಾಳಾಗಿ ಗೋಚರಿಸುತ್ತಿದೆ. ಕೈಗಾರಿಕಾ ಉತ್ಪಾದನೆ ಮತ್ತು ಕಂಪನಿಗಳ ಕಾರ್ಯನಿರ್ವಹಣೆಗಳಲ್ಲಿ ಎಐ ಅಳವಡಿಕೆ ವೇಗ ಪಡೆಯಲಿದೆ. ವೈದ್ಯಕೀಯ ಆವಿಷ್ಕಾರಗಳಿಗೆ ಎಐ ವೇಗವರ್ಧನೆ ದೊರೆಯಲಿದೆ. ನಿಖರ ಮತ್ತು ಸಮಯೋಚಿತ ವಿಶ್ಲೇಷಣೆಗಳ ಮೂಲಕ AI-ಚಾಲಿತ ರೋಗನಿರ್ಣಯ ಸಾಧನಗಳು ಆರೋಗ್ಯ ರಕ್ಷಣೆಯಲ್ಲಿ ಅಗಾಧ ಪ್ರಗತಿ ತರಲಿವೆ. AI ಅಲ್ಗಾರಿದಮ್ಗಳು ರೋಗವನ್ನು ಅವುಗಳ ಲಕ್ಷಣಗಳನ್ನಾಧರಿಸಿ ನಿಖರವಾಗಿ ಊಹಿಸುವುದಲ್ಲದೆ ಚಿಕಿತ್ಸೆಯಲ್ಲೂ ನೆರವಾಗುತ್ತವೆ.
ಕೊರೋನಾ, HMPV ಯಂತಹ ವೈರಾಣುಗಳು ಮರುದಾಳಿಗೆ ಸಿದ್ಧವಾಗುತ್ತಿರುವ ಈ ಹೊತ್ತಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯುವಲ್ಲಿ ಎಐ ಬಳಕೆ ತೀವ್ರವಾಗಲಿದೆ. ವಿಪರೀತ ಎನ್ನುವಷ್ಟು ಹೆಚ್ಚುತ್ತಿರುವ ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚುವ ತಂತ್ರಜ್ಞಾನಗಳು ಪ್ರವರ್ಧಮಾನಕ್ಕೆ ಬರಲಿವೆ.
ಹೂಡಿಕೆಯ ಮಹಾಪೂರ: ಜಗತ್ತಿನಾದ್ಯಂತ ಎಐ ಕುರಿತ ಅನ್ವೇಷಣೆ ಮತ್ತು ಹೂಡಿಕೆಯಲ್ಲಿ ಭಾರಿ ಪೈಪೋಟಿಯೇ ಕಂಡುಬರುತ್ತಿದೆ. ಅಮೆರಿಕದ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲೇ ದಿನವೇ ಡೊನಾಲ್ಡ್ ಟ್ರಂಪ್ 500 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ‘ಸ್ಟಾರ್ಗೇಟ್’ ಎನ್ನುವ ಬೃಹತ್ ಎಐ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಓಪನ್ಎಐ, ಸಾಫ್ಟ್ಬ್ಯಾಂಕ್ ಮತ್ತು ಒರ್ಯಾಕಲ್ನಂತಹ ಐಟಿ ದಿಗ್ಗಜ ಸಂಸ್ಥೆಗಳು ಇದರಲ್ಲಿ ಕೈಜೋಡಿಸಿವೆ. ಭಾರತದಲ್ಲೂ ಎಐ ಸಂಬಂಧ ಭಾರಿ ಹೂಡಿಕೆಗೆ ಸರಕಾರವೇ ಮುಂದಾಗಿದೆ. ಎಐ ಸಂಶೋಧನೆಯಲ್ಲಿ ಜಿಪಿಯು (ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್) ಅತ್ಯಗತ್ಯವಾಗಿದ್ದು, 10 ಸಾವಿರ ಜಿಪಿಯುಗಳ ಖರೀದಿಗೆ ಟೆಂಡರ್ ಕರೆಯುವ ಸಿದ್ಧತೆಯಲ್ಲಿದೆ. ಚೀನಾ ಕೂಡ ಕೃತಕ ಬುದ್ಧಿಮತ್ತೆ ಸಂಶೋಧನೆಯಲ್ಲಿ ದಾಪುಗಾಲಿಟ್ಟಿದ್ದು, ಎಐ ಸಂಶೋಧನೆಗೆಂದೇ ಸುಮಾರು 91 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇನ್ನು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧನೆ ಮತ್ತು ನೀತಿ-ನಿರೂಪಣೆಯಲ್ಲಿ ಮುಂದಿರುವ ಯುರೋಪಿಯನ್ ಯೂನಿಯನ್, ಸೂಪರ್ ಕಂಪ್ಯೂಟರ್ ಮತ್ತು ಎಐ ಸಂಶೋಧನೆಗೆ ಪ್ರತ್ಯೇಕ ಸಂಶೋಧನಾ ಏಜೆನ್ಸಿ ರೂಪಿಸುವುದಾಗಿ ಪ್ರಕಟಿಸಿದೆ. ಜನವರಿ ತಿಂಗಳಾಂತ್ಯದ ವೇಳೆಗೆ ಈ ಕುರಿತು ವಿವರ ಪ್ರಕಟಗೊಳ್ಳುವ ಸಂಭವ ಇದೆ.
ಜನರೇಟಿವ್ ಝಮಾನಾ: ಜನರೇಟಿವ್ ಎಐಗಳ ಬಳಕೆ ವ್ಯಾಪಕಗೊಳ್ಳಲಿದೆ. ಜನರೇಟಿವ್ ಎಐ ಸೃಷ್ಟಿಸುವ ಕಂಟೆಂಟ್ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಿ ಹರಿಯಲಿದೆ. ಕೃತಕ ಬುದ್ಧಿಮತ್ತೆಯೇ ಕಥೆ ಹೆಣದು ಸಂಭಾಷಣೆ ಬರೆದು, ನಿರ್ದೇಶಿಸಿ ನೈಜ ಕಲಾವಿದರ ನಟೆನೆಯೇ ಇಲ್ಲದೆ ಒಂದು ಪೂರ್ತಿ ಸಿನಿಮಾವನ್ನು ತಾನೇ ಸೃಷ್ಟಿಸುವ ದಿನಗಳನ್ನು ಮುಂದೆ ಕಾಣಲಿದ್ದೇವೆ.
ಡೀಪ್ಫೇಕ್ ತಂತ್ರಜ್ಞಾನದ ಮೂಲಕ ಸೆಲೆಬ್ರಿಟಿಗಳ ಧ್ವನಿ ಮತ್ತು ದೇಹಗಳ ನಕಲಿ ಅವತಾರಗಳು ಸೃಷ್ಟಿಯಾಗುತ್ತವೆ. ಅಂತಹ ದೊಡ್ಡವರ ಹೆಸರಿನ ನಕಲಿ ಅವತಾರಗಳಿಂದ ಬ್ರ್ಯಾಂಡ್ಗಳ ಪ್ರಚಾರ, ಅನುಮೋದನೆ ಹೆಚ್ಚಲಿದೆ. ಸುಳ್ಳೇ ಸುಳ್ಳು ಸಲಹೆಗಳಿಗೆ ಜನರು ಮಾರು ಹೋಗುವುದನ್ನು ನೋಡಲಿದ್ದೇವೆ. ಸದ್ಗುರು ಜಗ್ಗಿ ವಾಸುದೇವ್, ಅಮಿತಾಬ್ ಬಚ್ಚನ್, ಸುಧಾಮೂರ್ತಿ ಮುಂತಾದವರು ಷೇರು ಮಾರುಕಟ್ಟೆ, ಯಾವುದೋ ಹೂಡಿಕೆಯನ್ನು ಬೆಂಬಲಿಸಿ ಜನರಿಗೂ ಹೂಡಿಕೆ ಮಾಡುವಂತೆ ಮನವಿ ಮಾಡುವ ಫೇಕ್ ವೀಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಸಾಕ್ಷಿ. ನಟಿ ರಶ್ಮಿಕಾ ಮಂದಣ್ಣ ಅವರ ಫೇಕ್ ವೀಡಿಯೊ ಎಬ್ಬಿಸಿದ ವಿವಾದವೂ ಈ ತಂತ್ರಜ್ಞಾನದ ಕರಾಳ ಮುಖವೇ ಆಗಿದೆ.
ಭಾಷೆ-ಸಾಹಿತ್ಯ ಕಲಿತವರಿಗೆ, ಸಂಸ್ಕೃತಿ ಅರಿತವರಿಗೆ ಸುಗ್ಗಿ ಕಾಲ
ಭಾರತದಲ್ಲಿ ಎಐ ಬೆಳವಣಿಗೆ ಅಮೋಘವಾಗಿ ಸಾಗುತ್ತಿರುವ ಹೊತ್ತಿನಲ್ಲೇ ಎಐ ಕೌಶಲ್ಯ ಇರುವುವರಿಗೆ ಸುಗ್ಗಿ ಕಾಲ ಆರಂಭವಾಗಿದೆ. ಕಂಪನಿಗಳಲ್ಲಿ ಎಐ ಬಳಕೆ ವ್ಯಾಪವಾಗುತ್ತಿದ್ದು, ಎಐ ಕೌಶಲ್ಯ ಹೊಂದಿದವರಿಗೆ ಕಂಪನಿಗಳು ಕರೆದು ಕೆಲಸ ಕೊಡುತ್ತಿವೆ. ವಾರ್ಷಿಕ 40 ಲಕ್ಷ ರೂ. ಆಸುಪಾಸಿನ ಸಂಬಳ ನೀಡುತ್ತಿವೆ. ಎಐ ಟ್ರೈನರ್ಗಳು ಭಾರತದಲ್ಲೇ ಕುಳಿತು ವಿದೇಶಿ ಸಂಸ್ಥೆಗಳಿಗೆ ಅರೆಕಾಲಿಕ ಕೆಲಸ ಮಾಡುತ್ತಾ ಗಂಟೆಯ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದಾರೆ. ಒಂದು ಗಂಟೆಗೆ 150 ಡಾಲರ್ ಅಂದರೆ ಸುಮಾರು 12700 ರೂ. ಪಡೆಯುವವರು ಬೆಂಗಳೂರಿನಲ್ಲೇ ಇದ್ದಾರೆ ಎಂದರೆ ಅಚ್ಚರಿಯಾಗಬಹುದು. ಕೋಡಿಂಗ್ ತಿಳಿವಳಿಕೆ, ಆಳವಾದ ಭಾಷಾ ಜ್ಞಾನ, ಆಯಾ ಪ್ರದೇಶದ ಸಾಂಸ್ಕೃತಿಕ ಅರಿವು ಇದ್ದವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಕಲಾ ಮಾಧ್ಯಮ ಓದಿ ಸಮಾಜದಲ್ಲಿ ಕೆಲಸಕ್ಕೆ ಬಾರದವರು ಎಂಬ ಹಣೆಪಟ್ಟಿ ಕಟ್ಟಿಕೊಂಡವರೆಲ್ಲ ಈ ಎಐ ಯುಗದಲ್ಲಿ ಕೈತುಂಬ ಗಳಿಕೆ ಮಾಡುತ್ತಿದ್ದಾರೆ. ಅವರು ಕಲಿತ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಒಳನೋಟವೇ ಅವರನ್ನು ಕಂಪನಿಗಳು ಕೈ ಬೀಸಿ ಕರೆವಂತೆ ಮಾಡಿದೆ. ಈ ಟ್ರೆಂಡ್ ಮುಂದೆ ಇನ್ನಷ್ಟು ಹೆಚ್ಚಲಿದೆ.
ಆಕಾಶದಿಂದಲೇ ಅಂತರ್ಜಾಲ ಸೇವೆ ನೀಡುವ ಸ್ಯಾಟ್ಕಾಮ್
ವಿಶ್ವದಾದ್ಯಂತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗಳು ನಡೆಯುತ್ತಿವೆ. ಸ್ಪೇಸ್ ಎಕ್ಸ್ ಇದರಲ್ಲಿ ಮುಂಚೂಣಿಯಲ್ಲಿದ್ದು, ಭಾರತದ ಇಸ್ರೋ ಕೂಡ ಸಾಕಷ್ಟು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಅದರಲ್ಲಿ ಚಂದ್ರಯಾನ-4 ಪ್ರಮುಖವಾದದ್ದು. ಈ ಯೋಜನೆ ಮೂಲಕ ಚಂದ್ರನ ಮೇಲ್ಮೈಯಿಂದ ಮಾದರಿಯನ್ನು ಸಂಗ್ರಹಿಸುವುದು ಇಸ್ರೋ ಗುರಿಯಾಗಿದೆ. ಅಲ್ಲದೆ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳಿಸಿಕೊಡುವ ‘ಗಗನಯಾನ’ಕ್ಕೂ ತಯಾರಿ ನಡೆಸುತ್ತಿದೆ.
ಮತ್ತೊಂದೆಡೆ, ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆಯ ಯುಗ ಆರಂಭವಾಗುತ್ತಿದೆ. ಎಂದರೆ ಆಕಾಶದಿಂದಲೇ ಇಂಟರ್ನೆಟ್ ಮತ್ತು ಕರೆ ಸೌಲಭ್ಯ ನೀಡಬಲ್ಲ ಸೇವೆ. ಬಿಎಸ್ಎನ್ಎಲ್ ಈಗಾಗಲೇ ಇಂತಹ ಸೇವೆ ಆರಂಭಿಸಿದ್ದು, ತುರ್ತು ಪರಿಸ್ಥಿತಿಗಳಿಗಷ್ಟೇ ಇದರ ಬಳಕೆಯನ್ನು ಸೀಮಿತಗೊಳಿಸಿದೆ. ಆದರೆ ಮುಂದಿನ ದಿನಗಳಲ್ಲಿ ಸ್ಪೇಸ್ ಎಕ್ಸ್, ಅಮೆಜಾನ್, ಜಿಯೋ, ಏರ್ಟೆಲ್ ಮುಂತಾದ ಸಂಸ್ಥೆಗಳು ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ತುದಿಗಾಲಲ್ಲಿ ನಿಂತಿವೆ. ಆಕಾಶದಿಂದ ಅಂತರ್ಜಾಲ ಸೇವೆ ಒದಗಿಸಲು ಪೈಪೋಟಿ ಏರ್ಪಟ್ಟಿದೆ. ಈ ಸೇವೆ ಭಾರತದಲ್ಲಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದ್ದು, ಕಾಡು-ಮೇಡು,- ಬೆಟ್ಟ-ಗುಡ್ಡ, ಮರುಭೂಮಿಯಲ್ಲೂ ಕರೆ ಸೌಲಭ್ಯ ಮತ್ತು ಇಂಟರ್ನೆಟ್ ಸೇವೆ ಬಳಸುವ ದಿನಗಳು ನಮ್ಮದಾಗಲಿವೆ.
ಭಾರತದಲ್ಲಿ ಟೆಲಿಕಾಮ್ (ಟೆಲಿ ಕಮ್ಯುನಿಕೇಶನ್) ಅಥವಾ ದೂರಸಂಪರ್ಕ ತಂತ್ರಜ್ಞಾನ ತಂದ ಕ್ರಾಂತಿಕಾರಿ ಬದಲಾವಣೆಗಳ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಅದೇ ರೀತಿಯಲ್ಲಿಯೇ ಹೊಸದಾಗಿ ಕಣ್ಣುಬಿಡುತ್ತಿರುವ ಸ್ಯಾಟ್ಕಾಮ್ (ಸ್ಯಾಟಲೈಟ್ ಕಮ್ಯುನಿಕೇಶನ್) ಅಥವಾ ಬಾಹ್ಯಾಕಾಶ ಸಂರ್ಪಕ ತಂತ್ರಜ್ಞಾನವು ಹೊಸ ರೀತಿಯ ಸಾಧ್ಯತೆಗಳನ್ನು ತೆರೆಯಲಿದೆ. ಹೊಸ ರೀತಿಯ ಉದ್ಯಮಗಳಿಗೆ ಅವಕಾಶ ಮಾಡಿಕೊಡಲಿದೆ. ಈಗ ‘ವರ್ಕ್ ಫ್ರಮ್ ಹೋಮ್’ ಕಲ್ಪನೆ ಹೆಚ್ಚು ಚಾಲ್ತಿಯಲ್ಲಿದೆ, ಮುಂದೆ ‘ವರ್ಕ್ ಫ್ರಮ್ ಎನಿವೇರ್’ ಎನ್ನುವ ಕಲ್ಪನೆ ನಿಜಾರ್ಥದಲ್ಲಿ ಸಾಕಾರಗೊಳ್ಳಲಿದೆ. ಇನ್ನು 5G ಸೇವೆ ದೇಶಾದ್ಯಂತ ಇನ್ನಷ್ಟು ವಿಸ್ತರಣೆಯಾಗಲಿದ್ದು, ಸುಲಲಿತ ಸಂಪರ್ಕ ಸಾಧ್ಯವಾಗಲಿದೆ. ಇದರೊಂದಿಗೆ ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಉಪಕರಣಗಳ ಬಳಕೆಯೂ ಹೆಚ್ಚಾಗಲಿದೆ.
ಯುದ್ಧಭೂಮಿಯಿಂದ ರೈತನ ಹೊಲಕ್ಕೆ ಡ್ರೋಣ್
ವಿಶ್ವದಲ್ಲೆಡೆ ಡೋಣ್ಗಳ ಬಳಕೆ ಜಾಸ್ತಿಯಾಗುತ್ತಿದೆ. ಡ್ರೋಣ್ ತಂತ್ರಜ್ಞಾನದಲ್ಲಿ ಅಭಿವೃದ್ಧಿಯಾಗುತ್ತಾ ಹೋದಂತೆ ಅದರ ಬಳಕೆಯ ಸಾಧ್ಯತೆಗಳೂ ವಿಸ್ತರಿಸುತ್ತಿವೆ. ರಷ್ಯಾ ಮತ್ತುಉಕ್ರೇನ್ ಯುದ್ಧ ಹಾಗೂ ಇಸ್ರೇಲ್ - ಇರಾನ್ – ಪ್ಯಾಲೆಸ್ತೇನ್ ನಡುವಿನ ಯುದ್ಧದಲ್ಲಿ ಈ ಡ್ರೋಣ್ಗಳನ್ನು ಯುದ್ದಾಸ್ತ್ರವಾಗಿ ಬಳಸುವುದನ್ನು ನಾವು ಗಮನಿಸಿದ್ದೇವೆ. ಈಗ ಕೃಷಿಯಲ್ಲಿ ಈ ಡ್ರೋಣ್ಗಳ ಬಳಕೆ ವ್ಯಾಪಕವಾಗಲಿದೆ. ಇದಕ್ಕೆ ಸಹಕಾರಿಯಾಗುವಂತೆ ಕೇಂದ್ರ ಸರಕಾರ ಡ್ರೋಣ್ ಉತ್ಪಾದನೆ, ಬಳಕೆ ಸಂಬಂಧ ನಿಯಮ ರೂಪಿಸಿದೆ; ದೇಶೀಯವಾಗಿ ಡ್ರೋಣ್ ಉತ್ಪಾದಿಸುವ ಸ್ಟಾರ್ಟ್ಅಪ್ಗಳಿಗೆ ಪ್ರೋತ್ಸಾಹ ನೀಡುತ್ತಿದೆ.
ಈ ಡ್ರೋಣ್ ಮೆದುಳಿಗೆ ಎಐ ಬುದ್ಧಿ ಸಂಯೋಜನೆಯಾಗುವುದರೊಂದಿಗೆ ಡ್ರೋಣ್ಗಳು ಸ್ವಯಂ ಚಾಲಿತವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಅವು ಹೆಚ್ಚು ಸ್ಮಾರ್ಟ್ ಆಗುತ್ತಾ ಹೋದಂತೆ ತಮಗೆ ವಹಿಸಿರುವ ಕೆಲಸದ ಕುರಿತು ಸ್ವಯಂ ನಿರ್ಧಾರ ಕೈಗೊಳ್ಳಲಿವೆ. ಹಲವು ಡ್ರೋಣ್ಗಳು ಪರಸ್ಪರ ಸಂವಹನದ ಮೂಲಕ ಸಂಘಟಿತವಾಗಿ ಸ್ವಯಂ ಕಾರ್ಯ ನಿರ್ವಹಿಸಲಿವೆ. ಇಂತಹ ಡ್ರೋಣ್ ನೆಟ್ವರ್ಕ್ ನಿರ್ವಹಿಸುವ, ಮುನ್ನಡೆಸುವ ಸೇವಾ ವೇದಿಕೆಗಳು ಅಸ್ತಿತ್ವಕ್ಕೆ ಬರಲಿವೆ.
ವೀಡಿಯೊಗ್ರಫಿ ಮತ್ತು ಮತ್ತು ಫೋಟೋಗ್ರಫಿಯಲ್ಲಿ ಈಗಿರುವ ಡ್ರೋಣ್ ಬಳಕೆ ಮತ್ತೊಂದು ಮಜಲಿಗೆ ಹೋಗಲಿದೆ.
ಸ್ಪೇಷಿಯಲ್ ಕಂಪ್ಯೂಟಿಂಗ್
ಡಿಜಿಟಲ್ ಮತ್ತು ಭೌತಿಕ ಜಗತ್ತುಗಳನ್ನು ಬೆಸೆಯುವ ಸ್ಪೇಷಿಯಲ್ ಕಂಪ್ಯೂಟಿಂಗ್ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆ ಇದೆ. ವರ್ಚುಯಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ ಮತ್ತು ಮಿಕ್ಸ್ಡ್ ರಿಯಾಲಿಟಿ ಎಂಬ ಮೂರೂ ತಂತ್ರಜ್ಞಾನಗಳು ಮಿಳಿತಗೊಂಡ ಸ್ಪೇಷಿಯಲ್ ಕಂಪ್ಯೂಟಿಂಗ್ ಜನರಿಗೆ ಹೊಸ ಅನುಭವ ಕೊಡಲು ಸಜ್ಜಾಗುತ್ತಿದೆ. ನಮ್ಮೆದುರಿನ ಬೌತಿಕ ಜಗತ್ತನ್ನು ನೋಡುತ್ತಲೇ ಅದರ ಮೇಲೆ ಡಿಜಿಟಲ್ ಜಗತ್ತು ಕೂಡ ತೇಲುವುದು ಇದರ ವಿಶೇಷ. ಇದು ಶಿಕ್ಷಣ, ತರಬೇತಿ, ಗೇಮಿಂಗ್, ಶಸ್ತ್ರಚಿಕಿತ್ಸೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ವಿನೂತನ ಅನುಭವಗಳಿಗೆ ದಾರಿ ಮಾಡಿಕೊಡಲಿದೆ.
ಡಿಜಿಟಲ್ ಸಹಾಯಕರೆಂಬ AI ಏಜೆಂಟ್ಗಳು
AI ಏಜೆಂಟ್ಗಳು ಅಥವಾ ಬುದ್ಧಿವಂತ ವರ್ಚುವಲ್ ಸಹಾಯಕರು 2025 ರಲ್ಲಿ ಹೆಚ್ಚು ಸ್ಮಾರ್ಟ್ ಆಗಲಿದ್ದಾರೆ. ಉದ್ಯೋಗಿಯ ಪರವಾಗಿ ಅವರ ವೇಳಾಪಟ್ಟಿಗಳನ್ನು ನಿರ್ವಹಿಸುವುದು, ಸಂಶೋಧನೆ ನಡೆಸುವುದು, ಸ್ವಯಂಚಾಲಿತವಾಗಿ ಇಮೇಲ್ಗಳನ್ನು ಓದುವ, ಅಗತ್ಯಕ್ಕೆ ತಕ್ಕಂತೆ ತನ್ನಿಂತಾನೇ ಪ್ರತಿಕ್ರಿಯಿಸುವ ಮತ್ತು ಗ್ರಾಹಕರ ಸಮಸ್ಯೆಗಳನ್ನು ನಿರ್ವಹಿಸುವಂತಹ ಸಂಕೀರ್ಣ ಕಾರ್ಯಗಳನ್ನು ಇವರು ನಿರ್ವಹಿಸಲಿದ್ದಾರೆ. ಇದೂವರೆಗೂ ನಾವು ನೋಡಿದ್ದು ಮಾಹಿತಿ ನೀಡುವ ಎಐ ಚಾಟ್ಬಾಟ್ಗಳು. ಬೆಂಗಳೂರಿನಿಂದ ಮೈಸೂರಿಗೆ ಯಾವು ರೈಲು, ಎಷ್ಟು ಗಂಟೆಗಿವೆ ಎಂದು ಕೇಳಿದರೆ ಅದರ ಕುರಿತು ಮಾಹಿತಿ ನೀಡುತ್ತಿದ್ದವು. ಸಿರಿ, ಅಲೆಕ್ಸಾ, ಗೂಗಲ್ ನೌ ಇದಕ್ಕೆ ಉದಾಹರಣೆಗಳು. ಆದರೆ, ಮುಂದೆ ನೋಡಲಿರುವ ಎಐ ಏಜೆಂಟ್ಗಳು ತಾವೇ ಸಂಶೋಧನೆ ನಡೆಸಿ ನಮ್ಮ ಅಗತ್ಯಕ್ಕೆ ತಕ್ಕಂತೆ, ನಮಗೆ ಅನುಕೂಲಕರವಾದ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿಕೊಡುತ್ತವೆ. ಜೊತೆಗೆ, ಕ್ಯಾಬ್ ಬುಕಿಂಗ್, ಹೋಟೆಲ್ ಬುಕಿಂಗ್ ಅನ್ನೂ ಅವುಗಳೇ ಸ್ವತಂತ್ರವಾಗಿ ನಿರ್ವಹಿಸಲಿವೆ.
ಗೂಗಲ್ ತನ್ನ ಜೆಮಿನಿ ಎಐ ಮಾಡೆಲ್ನ ಬೆಂಬಲದ ಮೇಲೆ ‘ಮ್ಯಾರಿನರ್’ಎಂಬ ಅತಿ ಬುದ್ಧಿವಂತ ಎಐ ಏಜೆಟ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ. ಮೈಕ್ರೋಸಾಫ್ಟ್ ಕೂಡ ತನ್ನ ಕೋಪೈಲಟ್ ಎಂಬ ಎಐ ಮಾಡೆಲ್ ಆಧರಿಸಿ ‘ಮೈಕ್ರೊಸಾಫ್ಟ್ 365’ ಎಂಬ ಸಮಗ್ರ ಕಾರ್ಪೊರೇಟ್ ಸೇವೆಗಳು ಮತ್ತು ‘ಏಝರ್’ ಎಂಬ ಕ್ಲೌಡ್ ಸೇವೆಗಳಲ್ಲಿ ಈ ಸ್ವಯಂ ಎಐ ಏಜೆಂಟ್ಗಳನ್ನು ಅಳವಡಿಸಿದೆ. ಈ ಏಜೆಂಟ್ಗಳು ವೈಯಕ್ತೀಕರಿಸಿದ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸುವುದರ ಜೊತೆಗೆ ನಿಯೋಜಿಸಿದ ಕೆಲಸವನ್ನು ಸಂಪೂರ್ಣ ಸ್ವಯಂಚಾಲಿತವಾಗಿ ನಿರ್ವಹಿಸುತ್ತವೆ. ಇಂಥ ಎಐ ಏಜೆಂಟ್ಗಳನ್ನು ನಾವು ನೀವೆಲ್ಲ ತಮ್ಮ ದೈನಂದಿನ ಕಾರ್ಯನಿರ್ವಹಣೆಗೆ ಡಿಟಿಟಲ್ ಸಹಾಯಕನಾಗಿ ಬಳಸಿಕೊಳ್ಳುವ ಕಾಲ ಹತ್ತಿರದಲ್ಲೇ ಇದೆ.



