ಎಐ ಸಮರ ಗೆದ್ದವನೇ ಮಹಾಶೂರ!
AI ಅನಂತ ಅವತಾರ – ಭಾಗ 8
ಡಾ.ರಮೇಶ್ ನಿಂಬೆಮರದಳ್ಳಿ
ಎಐ ಪೈಪೋಟಿಗೆ ತಿರುಗಿದ ಸುಂಕ ಸಮರ
ಸಾರ್ವಭೌವ ಎಐ ರೂಪಿಸುತ್ತ ದೇಶಗಳ ಚಿತ್ತ
ಅಮೆರಿಕದ ಅವಲಂಬನೆ ತಗ್ಗಿಸಲು ವಿವಿಧ ರಾಷ್ಟ್ರಗಳ ಕಾರ್ಯತಂತ್ರ
ಆತ್ಮನಿರ್ಭರತೆಯತ್ತ ದೃಢ ಹೆಜ್ಜೆ ಇಟ್ಟ ಭಾರತ
ಪ್ರತಿ ದೇಶದ ಮೇಲೂ ಅಮೆರಿಕ ವಿಧಿಸಿದ್ದ ಪ್ರತಿ ಸುಂಕ ಜಾಗತಿಕವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದನ್ನು ನೋಡಿದ್ದೇವೆ. ಯುಎಸ್ನ ಈ ಕ್ರಮಕ್ಕೆ ಚೀನಾ ಸೇರಿದಂತೆ ಹಲವು ದೇಶಗಳು ಪ್ರತೀಕಾರದ ಕ್ರಮಕ್ಕೆ ಮುಂದಾಗಿರುವುದನ್ನು ಕಂಡಿದ್ದೇವೆ. ಆ ಯೋಜನೆಗೆ ವಿರಾಮ ಘೋಷಿಸಿದ ಕೂಡಲೇ ಜಗತ್ತು ನಿರಾಳಗೊಂಡಿದ್ದನ್ನು ಷೇರು ಮಾರುಕಟ್ಟೆಗಳು ದೃಢಪಸಿದ್ದೂ ನಮ್ಮ ಮುಂದಿದೆ. ಈ ವಿದ್ಯಮಾನ ಜಾಗತಿಕವಾಗಿ ‘ಸ್ವಾವಲಂಬನೆ’ಯೆಂಬ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಜೊತೆಗೆ, ಎಐ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ನೇರ ಪೈಪೋಟಿಗೂ ಕಾರಣವಾಗಿದೆ. ಭಾರತವೂ ಸೇರಿದಂತೆ ದೇಶಗಳು ಹೇಗೆ ತಮ್ಮದೇ ಸಾರ್ವಭೌಮ ಎಐ ರೂಪಿಸುವಲ್ಲಿ ನಿರತವಾಗಿವೆ. ಈ ನಿಟ್ಟಿನಲ್ಲಿ ಎಜಿಐ ಕೈವಶ ಮಾಡಿಕೊಳ್ಳುವಲ್ಲಿ ಜಾಗತಿಕವಾಗಿ ನಡೆಯುತ್ತಿರುವ ತಂತ್ರ-ಪ್ರತಿತಂತ್ರ-ಕಾರ್ಯತಂತ್ರಗಳೇನು ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಪ್ರತಿ ಸುಂಕಕ್ಕೆ ಜಗತ್ತು ತಲ್ಲಣಗೊಂಡಿದೆ. ತನ್ನ ಯೋಜನೆಗೆ ಯುಎಸ್ ವಿರಾಮ ಘೋಷಿಸುತ್ತಲೇ ನಡುಕ ಸ್ವಲ್ಪ ನಿಂತಿದೆ. ಆದರೂ ಭೀತಿ ಮರೆಯಾಗಿಲ್ಲ. ಹೊಸ ಸುಂಕ ಪ್ರಕಟ, ವಿನಾಯಿತಿ ಘೋಷಣೆ, ವಿರಾಮ - ಹೀಗೆ ಅವರ ಸಂಕುದಾಟವೇ ಇದಕ್ಕೆ ಕಾರಣ. ಅಮೆರಿಕದ ನೇತೃತ್ವದಲ್ಲಿ ವಿಶ್ವ ನಿರಾಳವಲ್ಲ, ಸುರಕ್ಷಿತವೂ ಅಲ್ಲ ಎನ್ನುವ ಹೊಸ ಚಿಂತನೆ ಬಲವಾಗಲು ಇದು ಕಾರಣವಾಗಿದೆ. ಜೊತೆಗೆ, ಅಮೆರಿಕದ ಅತಿ ಅವಲಂಬನೆ ಎಂದಿಗೂ ಅಪಾಯಕಾರಿ ಎಂಬ ಸತ್ಯ ಹಲವು ದೇಶಗಳಿಗೆ ಮನವರಿಕೆಯಾಗತೊಡಗಿದೆ. ಈ ಚಿಂತನೆಯೇ ‘ವ್ಯಾಪಾರ ಯುದ್ಧ’ವಾಗಿ ಶುರುವಾದ ಸಂಘರ್ಷವನ್ನು ಈಗ ‘ಎಐ ಶಸ್ತ್ರಾಸ್ತ್ರ ಯುದ್ದ’ವಾಗಿ ಪರಿವರ್ತಿಸಿದೆ.
ಸಾಕಿನ್ನು ಈ ಅವಲಂಬನೆ
ಭಾರತವೂ ಸೇರಿದಂತೆ ವಿಶ್ವದ ಬಹುತೇಕ ದೇಶಗಳು ತಂತ್ರಜ್ಞಾನ, ವ್ಯಾಪಾರ ಮತ್ತು ಡಾಲರ್ಗಾಗಿ ಅಮೆರಿಕದ ಮೇಲೆ ಬಹುವಾಗಿ ಅವಲಂಬಿಸಿದ್ದು, ಹಲವು ದೇಶಗಳಿಗೆ ಇದು ಸಾಕಾಗಿ ಹೋಗಿದೆ. ಈ ಅವಲಂಬನೆಯೇ ದೊಡ್ಡಣ್ಣನ ಹುಚ್ಚಾಟಕ್ಕೆ ಕಾರಣವಿರಬಹುದು. ಅಮೆರಿಕದ ಅಸ್ಥಿರ ಮನಸ್ಥಿತಿ, ಏಕಪಕ್ಷೀಯ ನಿರ್ಧಾರಗಳು, ಸ್ವಹಿತಾಸಕ್ತಿಯ ತೀರ್ಮಾನಗಳು ಈ ಅವಲಂಬಿತ ದೇಶಗಳ ಮೇಲೆ ಭಾರಿ ದುಷ್ಪರಿಣಾಮ ಉಂಟು ಮಾಡುತ್ತಿವೆ. ಹೀಗಾಗಿಯೇ ಅವಲಂಬಿತ ದೇಶಗಳು ಅಮೆರಿಕದ ಅವಲಂಬನೆಯಿಂದ ಹೊರಬಂದು ಸ್ವಾವಲಂಬಿ ದೇಶವಾಗುವತ್ತ ಯೋಚಿಸುತ್ತಿವೆ. ಅಮೆರಿಕ ಮಾತ್ರವಲ್ಲದೆ ಉತ್ಪಾದನೆ ಮತ್ತು ಸರಬರಾಜಿನಲ್ಲಿ ವಿಶ್ವದ ಕೈಗಾರಿಕೆಯಾಗಿರುವ ಚೀನಾದ ಹಿಡಿತದಿಂದಲೂ ಹೊರಬರಲು ದೇಶಗಳು ಕಾಯುತ್ತಿವೆ. ಈ ಸ್ವಾವಲಂಬನೆಯ ಪರ್ವ ಕೈಗಾರಿಕೆ, ಮಿಲಿಟರಿ, ತಂತ್ರಜ್ಞಾನ, ಹಣಕಾಸು ಕ್ಷೇತ್ರಗಳಲ್ಲಿ ಶುರುವಾಗಿದ್ದು, ಈಗ ಎಐ ಕ್ಷೇತ್ರದಲ್ಲೂ ಭಾರಿ ಪೈಪೋಟಿಗೆ ದಾರಿ ಮಾಡಿಕೊಟ್ಟಿದೆ. ಚೀನಾ, ರಷ್ಯಾ, ಭಾರತ, ಜಪಾನ್, ದಕ್ಷಿಣ ಕೊರಿಯಾ ಹಾಗೂ ಯೂರೋಪಿನ ದೇಶಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಅಮೆರಿಕದ ಜೊತೆ ಪೈಪೋಟಿಗೆ ಇಳಿದಿವೆ. ಈ ತಂತ್ರಜ್ಞಾನವನ್ನು ತಮ್ಮ ಕೈವಶ ಮಾಡಿಕೊಳ್ಳಲು ಸಾವಿರಾರು ಕೋಟಿ ಹಣ ಹೂಡಿಕೆ ಮಾಡುತ್ತಿವೆ. ಖಾಸಗಿ ಕ್ಷೇತ್ರದಲ್ಲಿ ಎಐ ಅಭಿವೃದ್ಧಿಯನ್ನು ಬೆಂಬಲಿಸುತ್ತಾ ಹೊಸ ಎಐ ನೀತಿ ನಿರೂಪಣೆಯಲ್ಲೂ ತೊಡಗಿವೆ.
ಸ್ವಿಫ್ಟ್, ಡಾಲರ್ ಎಂಬ ಬಲೆ
ಅಮೆರಿಕ ಅವಲಂಬನೆ ಅದರ ಶತೃ ರಾಷ್ಟ್ರಗಳಿಗೆ ಮಾತ್ರವಲ್ಲದೆ ಮಿತ್ರ ರಾಷ್ಟ್ರಗಳಿಗೂ ಸಾಕಾಗಿ ಹೋಗಿದೆ. ಹೆಸರಿಗೆ ದ್ವಿಪಕ್ಷೀಯ ಸಹಭಾಗಿತ್ವವಿದ್ದರೂ ಅಮೆರಿಕದ ಮಿತ್ರತ್ವ ಏನಿದ್ದರೂ ಏಕಪಕ್ಷೀಯ ಅನುಕೂಲಕ್ಕೆ ಮಾತ್ರ. ತನ್ನ ಮೂಗಿನ ನೇರಕ್ಕೆ ಜಗತ್ತನ್ನು ನೋಡುವುದು, ತನ್ನ ಹಿತಾಸಕ್ತಿಗೆ ಅನುಗುಣವಾಗಿ ಇತರ ದೇಶಗಳನ್ನು ಬಳಸಿಕೊಳ್ಳುವುದು ಅಮೆರಿಕದ ರೂಢಿಗತ ಸಂಪ್ರದಾಯ. ಈ ಸತ್ಯ ಬಹಳ ಹಿಂದೆಯೇ ಹಲವರಿಗೆ ತಿಳಿದಿತ್ತಾದರೂ ಅದರಿಂದ ಹೊರಬರುವ ದಾರಿಗಳು ಇರಲಿಲ್ಲ. ಆದರೆ, ಈಗ ಒಂದೊಂದೇ ದಾರಿ ತೆರೆದುಕೊಳ್ಳುತ್ತಿದೆ. ಈ ಅವಕಾಶವನ್ನೇ ಬಳಸಿಕೊಂಡು ಅಮೆರಿಕದ ಮಿತ್ರ ರಾಷ್ಟ್ರಗಳ ಸಹಿತ ಶತೃರಾಷ್ಟ್ರಗಳೆಲ್ಲ ಸ್ವಾವಲಂಬಿ ದೇಶ ನಿರ್ಮಾಣದತ್ತ ಮುಖ ಮಾಡಿವೆ. ಜೊತೆಗೆ, ಅಮೆರಿಕ ಹೊರತಾದ ಜಾಗತಿಕ ನಾಯಕತ್ವ ರೂಪಿಸುವಲ್ಲಿಯೂ ಯತ್ನಿಸುತ್ತಿವೆ. ಇದಕ್ಕೆ ಸಾಕ್ಷಿಯೆಂಬಂತೆ ಅಮೆರಿಕ ಬೆಂಬಲಿತ ನೇಟೋ ಪಡೆಯನ್ನೇ ನೆಚ್ಚಿಕೊಂಡು ತಮ್ಮ ಸ್ವಂತ ರಕ್ಷಣಾ ಪಡೆಗೆ ಬಲ ತುಂಬುವುದನ್ನೇ ಮರೆತಿದ್ದ ಯೂರೋಪಿನ ಕೆಲ ದೇಶಗಳು ಈಗ ಮಿಲಿಟರಿ ಭದ್ರತೆಗೆ ಇನ್ನಿಲ್ಲದ ಆದ್ಯತೆ ನೀಡುತ್ತಿವೆ.
ಜಾಗತಿಕ ಬ್ಯಾಂಕಿಂಕ್ ವ್ಯವಹಾರ ಅಮೆರಿಕ ನಿಯಂತ್ರಿತ ಸ್ವಿಫ್ಟ್ ಜಾಲದ ಮೇಲೆ ನಿಂತಿದೆ. ‘ಸೋಸೈಟಿ ಫಾರ್ ವರ್ಲ್ಡ್ವೈಡ್ ಇಂಟರ್ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಶನ್’ ಎಂಬ ವಿಸ್ತೃತ ಹೆಸರು ಹೊಂದಿರುವ SWIFT ವ್ಯವಸ್ಥೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಅಂತಾರಾಷ್ಟ್ರೀಯ ಹಣ ವರ್ಗಾವಣೆ, ಹಣಪಾವತಿಗೆ ಬಳಸುವ ಜಾಗತಿಕ ನೆಟ್ವರ್ಕ್. SWIFT ಕೋಡ್ ಮೂಲಕ ಬ್ಯಾಂಕುಗಳು ಪರಸ್ಪರ ಸಂಪರ್ಕ ಸಾಧಿಸುತ್ತವೆ, ಇದರಿಂದ ವಿದೇಶಿ ಹಣ ವರ್ಗಾವಣೆ ವೇಗವಾಗಿ, ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಯುತ್ತದೆ. ಈ ವ್ಯವಸ್ಥೆ ಇಲ್ಲದೆ ವಿದೇಶಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಹಣ ವರ್ಗಾವಣೆ ಸಾಧ್ಯವಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಹಣ ವರ್ಗಾವಣೆಗೆ ಎಲ್ಲ ದೇಶಗಳೂ ಈ ಜಾಲವನ್ನು ಅವಲಂಬಿಸಲೇಬೇಕಾಗಿದೆ. ಆದರೆ ಈಗ ಇದಕ್ಕೆ ಪರ್ಯಾಯ ಜಾಲ ಕಟ್ಟುವ ಕಾರ್ಯ ಪ್ರಗತಿಯಲ್ಲಿದೆ. ಡಾಲರ್ಗೆ ಪ್ರತಿಯಾಗಿ ಇಂಟರ್ನ್ಯಾಷನಲ್ ಕರೆನ್ಸಿ ರೂಪಿಸುವ ಕೆಲಸ ಸದ್ದಿಲ್ಲದೇ ನಡೆಯುತ್ತಿದೆ. ಚೀನಾ ನಿಯಂತ್ರಿತ ಜಾಗತಿಕ ಸರಬರಾಜು ಜಾಲವನ್ನು ಕುಗ್ಗಿಸಿ ಭಾರತದಂತಹ ನಂಬಿಕಸ್ತ ದೇಶಗಳ ಮೂಲಕ ಹೊಸ ಸಪ್ಲೈ ಚೈನ್ ರೂಪಿಸುವತ್ತ ಜಾಗತಿಕ ಸಮುದಾಯ ಒಗ್ಗೂಡುತ್ತಿದೆ. ಅದಕ್ಕಾಗಿ ಪರಸ್ಪರ ಹಲವು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿವೆ.
ಶಾಶ್ವತ ದಾಸ್ಯದಿಂದ ಪಾರಾಗುವ ಯತ್ನ
ಆರ್ಥಿಕ ಸ್ವಾವಲಂಬನೆಗೆ ಎಲ್ಲ ದೇಶಗಳೂ ತುಡಿಯುತ್ತಿರುವ ಈ ಹೊತ್ತಿನಲ್ಲಿ ದೇಶಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೆಳವಣಿಗೆಯಲ್ಲೂ ಸ್ವಾವಲಂಬನೆ ಗಳಿಸಲು ಮುಂದಾಗಿವೆ. ಮುಂದಿನ ದಿನಗಳಲ್ಲಿ ಎಐ ತಂತ್ರಜ್ಞಾನ ಆರ್ಥಿಕತೆಯೂ ಒಳಗೊಂಡಂತೆ ಬದುಕಿನ ಎಲ್ಲ ಸ್ತರಗಳನ್ನೂ ಆವರಿಸಿಕೊಳ್ಳುವುದರಿಂದ ಎಐ ಅಭಿವೃದ್ಧಿ ಎಲ್ಲ ದೇಶಗಳಿಗೂ ಅತ್ಯಗತ್ಯವಾಗಿದೆ. ಈಗ ಎಐ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮುಂದೆ ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಸಮವಾಗಬಲ್ಲ ಎಜಿಐ (ಆರ್ಟಿಫೀಷಿಯಲ್ ಜನರಲ್ ಇಂಟೆಲಿಜೆನ್ಸ್) ಸೃಷ್ಟಿ ಮಾಡಿ ಅದೇ ವ್ಯವಸ್ಥೆಯನ್ನು ಇತರ ದೇಶಗಳು ಬಳಸಲು ಆರಂಭಿಸಿದರೆ ಅಂದಿನಿಂದ ಆ ದೇಶಗಳು ಅಮೆರಿಕದ ಶಾಶ್ವತ ಅವಲಂಬನೆಗೆ ಒಳಗಾಗಬೇಕಾಗುತ್ತದೆ. ಡಾಲರ್, ಬ್ಯಾಂಕಿಂಗ್ ನೆಟ್ವರ್ಕ್ ಮತ್ತು ಆರ್ಥಿಕ ನಿಯಂತ್ರಣಗಳ ಮೂಲಕ ಈಗ ಅಮೆರಿಕ ಹಲವು ದೇಶಗಳನ್ನು ಬುಗುರಿ ಆಡಿಸಿದಂತೆ ಆಡಿಸುತ್ತಿದೆ. ಇದೇ ಅಸ್ತ್ರಗಳನ್ನು ಬಳಸಿಕೊಂಡು ಇಡೀ ವಿಶ್ವವನ್ನು ಸುಮಾರು 80 ವರ್ಷಗಳಿಂದ ನಿಯಂತ್ರಿಸುತ್ತಾ ಬಂದಿದೆ.
ಆಯಾ ದೇಶಕ್ಕೆ ಅದರದೇ ಎಜಿಐ?
ಇನ್ನು, ಎಜಿಐ ಎಂಬ ‘ಮನುಕುಲುದ ಮಹಾ ವೆಪನ್’ ದೊರೆತರೆ ಬಡದೇಶಗಳ ಕಥೆ ಅಲ್ಲಿಗೆ ಮುಗಿದಂತೆಯೇ ಸರಿ. ಮುಂದೆ ಶತಮಾನಗಳ ಕಾಲ ಈ ದೇಶಗಳು ಅಮೆರಿಕದ ದಾಸ್ಯದಲ್ಲೇ ಉಳಿಯಬೇಕಾಗುತ್ತದೆ. ಯಾಕೆಂದರೆ ಎಐ ಅಭಿವೃದ್ದಿ ಎಂಬ ಹಾದಿ ಏಕಮುಖಿಯಾಗಿದ್ದು, ಮುಂದೆ ಹೋದರೆ ಹಿಂದೆ ಬರುವುದು ಭಾರಿ ಕಷ್ಟ. ಇದರ ಜೊತೆಗೆ ಅಮೆರಿಕದ ಸಂಸ್ಕೃತಿ, ಸಂಪ್ರದಾಯ, ಅವರ ಬದುಕಿನ ಕ್ರಮ, ಅವರದೇ ಆಲೋಚನೆ, ಅವರ ಪ್ರಭುತ್ವದ ಮಾದರಿ, ಅವರ ಶ್ರೇಷ್ಠತೆಯ ಗೀಳು – ಇವೆಲ್ಲವೂ ಯುಎಸ್ ರೂಪಿಸುವ ಎಜಿಐನ ಭಾಗವೇ ಆಗಿರುತ್ತವೆ. ಅಷ್ಟು ಮಾತ್ರವಲ್ಲ ಹೀಗೆ ರೂಪುಗೊಂಡ ಎಜಿಐ ಇತರೆ ದೇಶಗಳನ್ನು ದ್ವಿತೀಯ ದರ್ಜೆಯಲ್ಲಿ ನೋಡುವುದು ಎಜಿಐನ ಅಂತರ್ಗತ ಮೌಲ್ಯವೇ ಆಗಿಬಿಡುತ್ತದೆ. ಹೀಗೆ ಜೀವತಳೆದ ಎಜಿಐ ಬಡದೇಶಗಳ ಜನರಿಗೆ ನೀಡುವ ಸೇವೆಯೂ ದ್ವಿತೀಯ ದರ್ಜೆಯದೇ ಆಗಿರುತ್ತದೆ. ಈ ದೇಶಗಳ ಜನರ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ಆಲೋಚನಾ ಕ್ರಮಗಳೆಲ್ಲ ಶಾಶ್ವತವಾಗಿ ಅವಗಣನೆಗೆ ಒಳಗಾಗಿ ನಿಧಾನವಾಗಿ ಆಯಾ ಸಂಸ್ಕೃತಿಗಳು ಮರೆಯಾಗಲೂಬಹುದು. ಒಂದು ಸಂಸ್ಕೃತಿ ಮರೆಯಾಗುವುದೆಂದರೆ ಅದನ್ನು ಅನುಸರಿಸುವ ಸಮುದಾಯ ಮರೆಯಾಗುವುದೆಂದೇ ಅರ್ಥ. ಇಂತಹ ಭಯಂಕರ ಪರಿಣಾಮ ಹೊಂದಿರುವ ಎಜಿಐ ಅಮೆರಿಕ ಪ್ರಣೀತವಾಗಿರದೆ ಎಲ್ಲಾ ದೇಶಗಳೂ ತಮ್ಮದೇ ಎಜಿಐ ರೂಪಿಸಿಕೊಳ್ಳಬೇಕು. ಅವರ ಎಜಿಐ ಅವರ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವಂತಿರಬೇಕು. ಜನರ ಮೌಲ್ಯಗಳನ್ನು ಗೌರವಿಸುವಂತಿರಬೇಕು. ಆದರೆ, ಅಮೆರಿಕ ಎಜಿಐ ನಿರ್ಮಿಸಿ ಅದನ್ನು ಇಡೀ ಜಗತ್ತು ಬಳಸುವಂತಾದರೆ ಇವೆಲ್ಲ ಕನಸಿನ ಮಾತು.
ಈ ಎಚ್ಚರ ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಈಗಾಗಲೇ ಬಂದಿದೆ. ಟ್ರಂಪ್ ಶುರು ಮಾಡಿದ ಸುಂಕ ಸಮರ ಈ ಚಿಂತನೆಗೆ ಇನ್ನಷ್ಟು ವೇಗ ತುಂಬಿದೆ. ಇದೇ ಹಿನ್ನೆಲೆಯಲ್ಲಿ ನೋಡಿದರೆ ಅಮೆರಿಕ ಮತ್ತು ಚೀನಾ ನಡುವಿನ ಟ್ರೇಡ್ ವಾರ್ಗೆ ಹೊಸ ಅರ್ಥ ಬರುತ್ತದೆ. ಸುಂಕ ಸಮರ ಕೇವಲ ಆರ್ಥಿಕ ಸ್ಪರ್ಧೆಯಾಗಿರದೆ ಜಾಗತಿಕ ನಾಯಕತ್ವವವನ್ನು ಪ್ರತಿಬಿಂಬಿಸುವ ಅಧಿಕಾರ ಸ್ಪರ್ಧೆಯ ಸಂಕೇತವಾಗಿದೆ. ಆ ಸ್ಪರ್ಧೆಯೇ ಈಗ ಎಐ ಬೆಳವಣಿಗೆಯಲ್ಲಿ ವಿಸ್ತರಿಸಿಕೊಂಡಿದೆ. ಇದೇ ಕಾರಣಕ್ಕೆ ಎರಡೂ ದೇಶಗಳು ಬಿಲಿಯನ್ಗಟ್ಟಲೆ ಹಣ ಸುರಿದು ಎಜಿಐ ರೂಪಿಸುವಲ್ಲಿ ಪೈಪೋಟಿಗೆ ಬಿದ್ದಿವೆ. ಒಬ್ಬರನ್ನೊಬ್ಬರು ತಡೆಯಲು ಇನ್ನಿಲ್ಲದ ಕಸರಸ್ತು ನಡೆಸುತ್ತಿವೆ. ಎಐ ಅಭಿವೃದ್ಧಿಗೆ ಮೂಲದ್ರವ್ಯವಾಗಿರುವ ಜಿಪಿಯು ಚಿಪ್ಗಳು, ಸೆಮಿ ಕಂಡಕ್ಟರ್ ಉತ್ಪನ್ನಗಳು ಚೀನಾಕ್ಕೆ ಲಭ್ಯವಾಗದಂತೆ ಅಮೆರಿಕ ನಿರ್ಬಂಧ ಹೇರಿರುವುದು ಇದೇ ಕಸರತ್ತಿನ ಭಾಗ. ಇತ್ತ ಚೀನಾ ಕೂಡ ಪ್ರತಿತಂತ್ರ ಹೂಡುತ್ತಿದೆ. ಜಾಗತಿಕವಾಗಿ ಸುಮಾರು 60% ತನ್ನಲ್ಲಿ ಮಾತ್ರ ಲಭ್ಯವಿರುವ ಆದರೆ ಸೆಮಿಕಂಡಕ್ಟರ್ ಮತ್ತು ಹಲವು ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ನಿರ್ಣಾಯಕವಾಗಿರುವ ಅಪರೂಪದ ಲೋಹಗಳು ಅಮೆರಿಕಕ್ಕೆ ದೊರೆಯದಂತೆ ರಫ್ತು ನಿರ್ಬಂಧ ಹೇರಿದೆ. ಪ್ರಸ್ತುತ ಜಾಗತಿಕ ಸ್ಪರ್ಧೆ ಹೊಸ ದಿಕ್ಕಿಗೆ ಹೊರಳಿರುವುದನ್ನು ವಿವರಿಸಲು "AI ಶಸ್ತ್ರಾಸ್ತ್ರ ಸ್ಪರ್ಧೆ" ಎಂಬ ಪರಿಕಲ್ಪನೆಯನ್ನು ತಜ್ಞರು ಬಳಸುತ್ತಿದ್ದಾರೆ. ಯಾಕೆಂದರೆ, ಈಗಿರುವ ಯಾವುದೇ ಅತ್ಯಾಧುನಿಕ ಮಿಲಿಟರಿ ತಂತ್ರಜ್ಞಾನಕ್ಕಿಂತಲ್ಲೂ ಶಕ್ತಿಶಾಲಿ ಮತ್ತು ವಿಧ್ವಂಸಕಾರಿ ತಂತ್ರಜ್ಞಾನ ಎಂದರೆ ಅದು ಕೃತಕ ಬುದ್ಧಿಮತ್ತೆ. ಈ ತಂತ್ರಜ್ಞಾನದಲ್ಲಿ ಪಾರಮ್ಯ ಸಾಧಿಸಿದರೆ ಮಿಲಿಟರಿ ತಂತ್ರಜ್ಞಾನದಲ್ಲಿ ತನ್ನಿಂತಾನೇ ಪಾರಮ್ಯ ಸಾಧಿಸಬಹುದು.
ಈ ಹಿನ್ನೆಲೆಯಲ್ಲಿ ಅಪರೂಪದ ಲೋಹಗಳ ಲಭ್ಯತೆ ಇರುವ, ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ನಿಯಂತ್ರಣ ಹೊಂದಿರುವ, ಎಐ ಮಾಡೆಲ್ಗಳನ್ನು ಸೃಷ್ಟಿಸಲು ಬೇಕಾದ ಪರಿಣಿತ ಮಾನವ ಸಂಪನ್ಮೂಲ, ದೊಡ್ಡ ಮಟ್ಟದ ಡೇಟಾ ಹೊಂದಿರುವ ದೇಶ ಎಐ ಅಭಿವೃದ್ಧಿಯಲ್ಲಿ ಗೆಲ್ಲುತ್ತದೆ. ಎಲ್ಲರಿಗಿಂತ ಮೊದಲು ಕ್ವಾಂಟಮ್ ಕಂಪ್ಯೂಟರ್ ಮತ್ತು ಶಕ್ತಿಶಾಲಿ ಎಜಿಐ ಅಭಿವೃದ್ಧಿಪಡಿಸುವ ದೇಶ ಮುಂದೆ ಜಗತ್ತನ್ನು ಬಹಳ ಕಾಲ ಆಳಲಿದೆ. ಈ ಸತ್ಯ ಅರಿತೇ ಅಮೆರಿಕ-ಚೀನಾ ಪರಸ್ಪರ ಪೈಪೋಟಿಗೆ ಇಳಿದು ಪರಸ್ಪರರ ನಿಯಂತ್ರಣದಲ್ಲಿ ತೊಡಗಿವೆ. ಈ ಹಿನ್ನೆಲೆಯಲ್ಲಿ ಸುಂಕ ಸಮರ ಎನ್ನುವುದು ಈ ಪೈಪೋಟಿಯ ವಿಸ್ತೃತ ರೂಪವೇ ಆಗಿದೆ.
ಅಮೆರಿಕ ಮುಂದೆ, ಚೀನಾ ಹಿಂದೆ
ಕೃತಕ ಬುದ್ಧಿಮತ್ತೆಯ ಅಭಿವೃದ್ಧಿ ಮತ್ತು ಹೂಡಿಕೆಯಲ್ಲಿ ಅಮೆರಿಕವು ಮುಂಚೂಣಿಯಲ್ಲಿದ್ದು, ‘AI ಬಿಲ್ ಆಫ್ ರೈಟ್ಸ್ಗಾಗಿ ನೀಲನಕ್ಷೆ’ ಎಂಬ ಪ್ರಮುಖ ಇನಿಷಿಯೇಟಿವ್ ಪ್ರಾರಂಭಿಸಿದೆ. ಉನ್ನತ-ಮಟ್ಟದ AI ಚಿಪ್ಗಳ ಮೇಲೆ ರಫ್ತು ನಿಯಂತ್ರಣ ಹೇರಿದೆ. ಅಲ್ಲದೆ, ದೇಶೀಯ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಹೆಚ್ಚಿಸಲು ‘ಚಿಪ್ಸ್ ಮತ್ತು ಸೈನ್ಸ್ ಕಾಯ್ದೆ’ ಯನ್ನು ಜಾರಿಗೊಳಿಸಿದೆ. ಇದರ ಜೊತೆಗೆ ಇತ್ತೀಚಿಗಷ್ಟೇ 500 ಬಿಲಿಯನ್ ಡಾಲರ್ ಮೊತ್ತದ ‘ಸ್ಟಾರ್ಗೇಟ್’ಎಂಬ ಬೃಹತ್ ಎಐ ಯೋಜನೆ ಪ್ರಕಟಿಸಿದೆ. ಎಐ ಕ್ಷೇತ್ರದ ದಿಗ್ಗಜರಾದ ಓಪನ್ಎಐ, ಮೈಕ್ರೊಸಾಫ್ಟ್ ಮತ್ತು ಒರ್ಯಾಕಲ್ ಈ ಯೋಜನೆಯಲ್ಲಿರುವುದು ವಿಶೇಷ. ಅಮೆರಿಕದ ಜಿಪಿಟಿ ಸರಣಿ, ಜೆಮಿನಿ, ಕ್ಲಾಡ್, ಲಾಮಾ, ಮಿಸ್ಟ್ರಾಲ್ ಎಐ ಸಹಿತ ಇನ್ನೂ ಹತ್ತು ಹಲವು ಶಕ್ತಿಶಾಲಿ ಎಐ ಮಾಡೆಲ್ಗಳು ಜಾಗತಿಕವಾಗಿ ಸದ್ದು ಮಾಡುತ್ತಿವೆ. ಇಡೀ ಜಗತ್ತಿಗೇ ಅತ್ಯಾಧುನಿಕ ಚಿಪ್ಗಳನ್ನು ಸರಬರಾಜು ಮಾಡುವ ಎನ್ವಿಡಿಯಾ ಮತ್ತು ಎಎಮ್ಡಿ ಅಮೆರಿಕದಿಂದಲೇ ಕಾರ್ಯನಿರ್ವಹಿಸುತ್ತಿವೆ. ಕ್ಲೌಡ್ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಮೈಕ್ರೋಸಾಫ್ಟ್ ಅಝೂರ್, ಗೂಗಲ್ ಕ್ಲೌಡ್ ಮತ್ತು AWS ಯುಎಸ್ ಕಂಪನಿಗಳೇ ಆಗಿವೆ. ಮತ್ತೊಂದೆಡೆ, 2030 ರ ವೇಳೆಗೆ ಎಐ ತಂತ್ರಜ್ಞಾನದಲ್ಲಿ ವಿಶ್ವ ನಾಯಕನಾಗಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಚೀನಾ ಕೂಡ ಗುರಿಗಳನ್ನು ಹಾಕಿಕೊಂಡಿದೆ. ‘ನ್ಯೂ ಜನರೇಷನ್ AI ಡೆವಲಪ್ಮೆಂಟ್ ಪ್ಲಾನ್’ ರೂಪಿಸಿರುವ ಚೀನಾ AI ಸಂಶೋಧನೆ ಮತ್ತು ಮೂಲಸೌಕರ್ಯ ನಿರ್ಮಾಣಕ್ಕಾಗಿ ಗಣನೀಯವಾಗಿ ಹೂಡಿಕೆ ಮಾಡುತ್ತಿದೆ. ದೊಡ್ಡಮಟ್ಟದ ಬಳಕೆದಾರರ ಡೇಟಾ ಹೊಂದಿರುವ ಚೀನಾ, ಡೀಪ್ಸೀಕ್, ಎರ್ನೀ, ಕ್ವೆನ್ ಸೇರಿದಂತೆ ಹಲವು LLM ಗಳನ್ನು ಕಡಿಮೆ ಖರ್ಚಿನಲ್ಲಿ ಅಭಿವೃದ್ಧಿಪಡಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ.
ಯೂರೋಪ್ ಒಕ್ಕೂಟ ಕೂಡ ಮಾನವ-ಕೇಂದ್ರಿತ ಮತ್ತು ವಿಶ್ವಾಸಾರ್ಹ AI ಇಕೋಸಿಸ್ಟಮ್ ಬೆಳೆಸಲು ‘AI ಕಾಂಟಿನೆಂಟ್ ಆ್ಯಕ್ಷನ್ ಪ್ಲಾನ್’ ಅನ್ನು ಪರಿಚಯಿಸಿದೆ. ಅಪಾರ ಪ್ರತಿಭೆಗಳನ್ನು ಹೊಂದಿರುವ ಯೂರೋಪ್ ಒಕ್ಕೂಟಕ್ಕೆ ತನ್ನ ಸಾಮರ್ಥ್ಯವೇ ಪ್ಲಸ್ ಆಗಿದೆ. ಎಐ ಮನುಷ್ಯನ ಕೈ ಮೀರಿ ಹೋಗದಂತೆ ನೋಡಿಕೊಳ್ಳಲು ಹೆಚ್ಚಿನ ಗಮನ ಹರಿಸಿದ್ದು, ಸುರಕ್ಷಿತ ಎಐ ಬೆಳೆಸುವಲ್ಲಿ ನಿರತವಾಗಿದೆ. ಇಂಗ್ಲೆಂಡ್, ಕೆನಡಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುಎಇ ದೇಶಗಳೂ ಕೂಡ AI ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿವೆ. ಇಂಗ್ಲೆಂಡ್ ಎಐ ಸಂಶೋಧನೆಯಲ್ಲಿ ಮುಂದಿದ್ದರೆ, ಕೆನಡಾವು AI ಕಾರ್ಯತಂತ್ರದ ಮೇಲೆ ಗಮನ ಹರಿಸಿದೆ. ಇನ್ನು ಜಪಾನ್ ರೋಬಾಟಿಕ್ಸ್ನಲ್ಲಿ ಮುಂಚೂಣಿಯಲ್ಲಿದೆ, ದಕ್ಷಿಣ ಕೊರಿಯಾವು ಬೃಹತ್ ತಾಂತ್ರಿಕ ಸಂಸ್ಥೆಗಳನ್ನು ಹೊಂದಿದೆ ಮತ್ತು ಯುಎಇ ದೊಡ್ಡ ಹೂಡಿಕೆಗಳ ಮೂಲಕ AI ಅಭಿವೃದ್ಧಿಯ ರೇಸ್ನಲ್ಲಿದೆ. ಈ ಎಲ್ಲಾ ದೇಶಗಳೂ ತಮ್ಮ ರಾಷ್ಟ್ರೀಯ ಹಿತಾಸಕ್ತಿಗಳ ಆಧಾರದ ಮೇಲೆ AI ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿವೆ. ಹೀಗೆ ವಿಶ್ವದಾದ್ಯಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜನರಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಕೈವಶ ಮಾಡಿಕೊಳ್ಳಲು ವಿಪರೀತ ಪೈಪೋಟಿ ನಡೆಯುತ್ತಿದ್ದು, ಈ ಪೈಪೋಟಿಯಲ್ಲಿ ಗೆಲ್ಲುವವರು ಯಾರು ಎಂಬುದು ಮುಂದಿನ ಎರಡು ಮೂರು ವರ್ಷಗಳಲ್ಲಿ ಸ್ಪಷ್ಟವಾಗುವ ಲಕ್ಷಣಗಳಿವೆ.
ಮಾರ್ಡನ್ ಸಿಲ್ಕ್ ರೂಟ್ ಅಭಿವೃದ್ಧಿಯಲ್ಲಿ ಭಾರತ
ಅಮೆರಿಕದ ಅವಲಂಬನೆ ತಪ್ಪಿಸಿಕೊಳ್ಳಲು ಭಾರತವೂ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಚೀನಾ ಪ್ರಭಾವ ತಗ್ಗಿಸಿ ಜಾಗತಿಕವಾಗಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ‘ಉತ್ಪಾದನೆ’ಯನ್ನು ಮೂಲ ಅಸ್ತ್ರವಾಗಿಸಿಕೊಳ್ಳಲು ಯೋಜನೆ ರೂಪಿಸುತ್ತಿದೆ. ಒಂದೆಡೆ, ಕೈಗಾರಿಕೆಗಳ ಸ್ಥಾಪನೆಗೆ ನೆರವು, ರಸ್ತೆ, ರೈಲು, ಜಲಮಾರ್ಗವೂ ಸೇರಿದಂತೆ ಸಾಗಾಣಿಕೆಗೆ ಬೇಕಾದ ಮೂಲಸೌಕರ್ಯ ಸೃಷ್ಟಿ, ಕೌಶಲ್ಯ ಅಭಿವೃದ್ಧಿಗೆ ಸಹಕಾರದ ಮೂಲಕ ಉತ್ಪಾದನೆ ಹೆಚ್ಚಿಸಲು ಕಾರ್ಯತಂತ್ರ ರೂಪಿಸಿದೆ. ಮತ್ತೊಂದೆಡೆ, ಹೊಸ ಟ್ರೇಡ್ ರೂಟ್ಗಳ ಅಭಿವೃದ್ಧಿ, ವ್ಯಾಪಾರದ ದ್ವಿಪಕ್ಷಿಯ ಒಪ್ಪಂದಗಳ ಮೂಲಕ ಜಾಗತಿಕವಾಗಿ ಮಾರುಕಟ್ಟೆ ಸೃಷ್ಟಿಸಲು ಯತ್ನಿಸುತ್ತಿದೆ. ಈ ಉಪಕ್ರಮಗಳ ಮೂಲಕ ಕಡಿಮೆ ವೆಚ್ಚದಲ್ಲಿ ವಸ್ತುಗಳನ್ನು ಉತ್ಪಾದಿಸಿ ವಿಶ್ವದ ಮೂಲೆ ಮೂಲೆಗೂ ರಫ್ತು ಮಾಡಬೇಕೆಂಬುದು ಸರಕಾರದ ಗುರಿ. ಇದರ ಭಾಗವಾಗಿ ‘ಮಾರ್ಡನ್ ಸಿಲ್ಕ್ ರೂಟ್’ ಅಭಿವೃದ್ಧಿಗೆ ಪ್ಲಾನ್ ಹಾಕಿಕೊಂಡಿದೆ. ಸೂಯೆಜ್ ಕಾಲುವೆಯ ಮೂಲಕ ಹಾದುಹೋಗುವ ಈಗಿನ ಸರಕು ಸಾಗಣೆ ಮಾರ್ಗ ಜಾಗತಿಕ ತಲ್ಲಣಗಳಿಗೆ ನಡುಗುತ್ತದೆ. ಇಸ್ರೇಲ್-ಪ್ಯಾಲೇಸ್ತೇನ್ ಯುದ್ಧದ ಸಂದರ್ಭದಲ್ಲಿ ಸರಕು ಸಾಗಾಟಕ್ಕೆ ಎದುರಾದ ಸಂಕಷ್ಟಗಳೇ ಇದಕ್ಕೆ ಉಹಾರಣೆ. ಹೌತಿ ಬಂಡುಕೋರರ ಉಪಟಳ, ಸೊಮಾಲಿಯಾ ಕಡಲ್ಗಳ್ಳರ ಕಾಟ, ಈಜಿಪ್ಟ್ನ ನಿಯಂತ್ರಣ, ಬೃಹತ್ ಹಡಗುಗಳಿಂದ ಉಂಟಾಗುವ ಅಡಚಣೆ ಮುಂತಾದ ತೊಂದರೆಗಳು ಈ ಮಾರ್ಗ ಸರಕು ಸಾಗಣೆಗೆ ಸೂಕ್ತವಲ್ಲ ಎಂಬುದು ಮನವರಿಕೆಯಾಗಿದೆ.
ಈ ಹಿನ್ನೆಲೆಯಲ್ಲಿ ‘ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್’ (IMEC) ಯೋಜನೆಗೆ ಚಾಲನೆ ನೀಡಲಾಗಿದೆ. ಈ ಹಳೆಯ ‘ಸಿಲ್ಕ್ ರೂಟ್’ ಮೂಲಕ ಗಲ್ಫ್ ದೇಶಗಳು, ಯೂರೋಪ್ ಒಕ್ಕೂಟ ಮತ್ತು ಅಮೆರಿಕಕ್ಕೆ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ವಸ್ತುಗಳನ್ನು ರವಾನಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಹೊಸ ಮಾರ್ಗ ಈಗಿನ ಸೂಯೆಜ್ ಮಾರ್ಗಕ್ಕೆ ಹೋಲಿಸಿದರೆ ಸಾಗಾಣಿಕೆ ವೆಚ್ಚ 30% ಅಗ್ಗವಾಗಿರುತ್ತದೆ ಮತ್ತು 40% ವೇಗವಾಗಿ ಸರಕನ್ನು ಸಾಗಿಸುತ್ತದೆ. ಇದರ ಲಾಭ ಪಡೆಯಲು ಯುಎಇ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಯುರೋಪಿಯನ್ ಯೂನಿಯನ್ ಈ ಯೋಜನೆಗೆ ಕೈಜೋಡಿಸಿವೆ. ಅಮೆರಿಕವೂ ಈ ಯೋಜನೆಯ ಪಾಲುದಾರ ಎನ್ನುವುದು ವಿಶೇಷ. ಮತ್ತೊಂದೆದೆ, ರಷ್ಯಾ ಸಹಭಾಗಿತ್ವದಲ್ಲಿ ಭಾರತ ಎರಡು ವ್ಯಾಪಾರ ಮಾರ್ಗಗಳನ್ನು ರೂಪಿಸುತ್ತಿದೆ. ಮೊದಲನೆಯದು, ಆರ್ಕೆಟಿಕ್ ಸಮುದ್ರದ ಮೂಲಕ ಹಾದುಹೋಗುವ ‘ನಾರ್ದನ್ ಸೀ ರೂಟ್’ (ಎನ್ಎಸ್ಆರ್), ಇದು ಯುರೋಪ್ ಮತ್ತು ಏಷ್ಯಾ ನಡುವಿನ ಸಾಗಾಣಿಕೆಯ ದೂರವನ್ನು ಕಡಿತಗೊಳಿಸುತ್ತದೆ. ಎರಡನೆಯದು, ವ್ಲಾಡಿವೋಸ್ಟಾಕ್ ಮತ್ತು ಚೆನ್ನೈ ನಡುವೆ ಸಂಪರ್ಕಿಸುವ ‘ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್’ (ಇಎಮ್ಸಿ). ಈ ಮಾರ್ಗ ಜಾಗತಿಕ ತಲ್ಲಣಗಳ ನಡುವೆಯೂ ಇಂಧನ ಮತ್ತು ವಸ್ತುಗಳ ಸಾಗಾಟವನ್ನು ಸುಗಮಗೊಳಿಸುವ ಗುರಿ ಹೊಂದಿದೆ.



