ವಾಟ್ಸ್ಆ್ಯಪ್ನಲ್ಲಿ ಇಲ್ಲದ ಫೀಚರ್ ಅರಟ್ಟೈನಲ್ಲಿ ಏನಿದೆ?
ಕೇಂದ್ರ ಸಚಿವರ ಬೆಂಬಲ | ಆ್ಯಪಲ್ ಸ್ಟೋರ್ನಲ್ಲಿ ನಂಬರ್ ಒನ್ | ಲಕ್ಷ ಲಕ್ಷ ಜನರಿಂದ ಬಳಕೆ
ಸ್ವದೇಶಿ ಭಾವ ತೀರ್ವವಾಗುತ್ತಿರುವ ಈ ಸಂದರ್ಭದಲ್ಲಿ ಭಾರತ ಮೂಲದ ಉತ್ಪನ್ನ, ಸೇವೆಗಳಿಗೆ ಇಲ್ಲಿ ಭಾರಿ ಬೇಡಿಕೆ ಕಂಡುಬರುತ್ತಿದೆ. ಇಂಥದೇ ಬೇಡಿಕೆ ಈಗ ತಮಿಳುನಾಡು ಮೂಲದ ಝೋಹೋ ಕಾರ್ಪೊರೇಷನ್ ಅವರ ಅರಟ್ಟೈ ಎಂಬ ಮೆಸೆಂಜರ್ಗೆ ಬಂದಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಝೋಹೋ ಬಗ್ಗೆ ಬೆಂಬಲದ ಮಾತುಗಳನ್ನಾಡಿದ್ದೇ ತಡ ಅರಟ್ಟೈ ಪ್ರತಿ ದಿನ ಲಕ್ಷಗಳಲ್ಲಿ ಡೌನ್ಲೋಡ್ ಆಗುತ್ತಿದೆ. ಕೇಂದ್ರ ಸಚಿವರ ಬೆಂಬಲ ದೊರೆತ ಕೇವಲ ಮೂರು ದಿನಗಳಲ್ಲಿ ದೈನಂದಿನ ಸೈನ್-ಅಪ್ಗಳು ಸುಮಾರು 3,000 ದಿಂದ 3,50,000 ಕ್ಕಿಂತ ಜಾಸ್ತಿಯಾಯಿತು. ಇದು ಭಾರತದಲ್ಲಿ ಆಪಲ್ನ ಆ್ಯಪ್ ಸ್ಟೋರ್ನಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ವಿಭಾಗದಲ್ಲಿ ನಂಬರ್ ಒನ್ ಸ್ಥಾನಕ್ಕೇರಿತು. ಈಗ ಜಾಗತಿಕ ದೈತ್ಯ ಮೆಸೆಂಜರ್ ಆ್ಯಪ್ ವಾಟ್ಸ್ಆ್ಯಪ್ಗೇ ಸಡ್ಡು ಹೊಡೆಯುತ್ತಿದೆ. ಇದನ್ನು ಭಾರತದಲ್ಲಿ ವಾಟ್ಸ್ಆ್ಯಪ್ ಕಿಲ್ಲರ್ ಎಂದೇ ಬಿಂಬಿಸಲಾಗುತ್ತಿದೆ. ಹಾಗಿದ್ದರೆ ಈ ಅರಟ್ಟೈನಲ್ಲಿ ಅಂಥಾ ವಿಶೇಷಗಳೇನಿವೆ. ಇದು ವಾಟ್ಸ್ಆ್ಯಪ್ಗಿಂತ ಹೇಗೆ ಭಿನ್ನ?
ಅರಟ್ಟೈ ಎಂದರೆ ತಮಿಳಿನಲ್ಲಿ ಸಂಭಾಷಣೆ, ಮಾತುಕತೆ ಅಥವಾ ಇನ್ನೂ ಗ್ರಾಮ್ಯ ಭಾಷೆಯಲ್ಲಿ ಹರಟೆ ಎಂದರ್ಥ. ಝೋಹೋ ಕಾರ್ಪೊರೇಷನ್ನ ಸಿಇಒ ಶ್ರೀಧರ್ ವೆಂಬು ಅವರು ಸಂದರ್ಶನದಲ್ಲಿ ವಿವರಿಸಿರುವ ಹಾಗೆ ಇದು ಸಹಜವಾಗಿ ಜನರು ನಡೆಸುವ ಹರಟೆಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಈ ಆ್ಯಪ್ಗೆ ಅರಟ್ಟೈ ಎಂದು ಹೆಸರು ಇಡಲಾಗಿದೆ.
ಅರಟ್ಟೈ ಮತ್ತು ವಾಟ್ಸ್ಆ್ಯಪ್ ಎರಡೂ ಒಂದೇ ವರ್ಗದ ಎಂದರೆ ಮೆಸೆಂಜರ್ ಅಪ್ಲಿಕೇಶನ್ಗಳು. ಜನರು ಪರಸ್ಪರ ಚಾಟ್ ಮಾಡಲು, ಫೈಲ್, ಚಿತ್ರ, ವಿಡಿಯೊಗಳನ್ನು ಕಳಿಸಲು ಮೆಸೆಂಜರ್ಗಳನ್ನು ಬಳಸುತ್ತಾರೆ. ವಾಯ್ಸ್ ಮತ್ತು ವೀಡಿಯೊ ಕಾಲಿಂಗ್ ಫೀಚರ್ಗಳೂ ಅದರಲ್ಲಿತ್ತವೆ. ಹೀಗಾಗಿ ಎರಡೂ ಒಂದೇ ರೀತಿಯ ಆ್ಯಪ್ಗಳು. ಆದರೆ ಕೆಲವು ಫೀಚರ್ಗಳು ಅರಟ್ಟೈ ಅನ್ನು ವಾಟ್ಸ್ಆ್ಯಪ್ಗಿಂತ ಭಿನ್ನವಾಗಿಸುತ್ತವೆ.
1. ಮೂಲಭೂತವಾಗಿ ಅರಟ್ಟೈ ಭಾರತದ ಕಂಪನಿಯಾಗಿರುವ ಕಾರಣ ಇದು ತನ್ನ ಬಳಕೆದಾರರ ಡೇಟಾವನ್ನು ಭಾರತದಲ್ಲೇ ಸ್ಟೋರ್ ಮಾಡುತ್ತದೆ. ಆದರೆ ವಾಟ್ಸ್ಆ್ಯಪ್ ವಿದೇಶದ ಸರ್ವರ್ಗಳಲ್ಲಿ ಭಾರತೀಯ ಬಳಕೆದಾರರ ಡೇಟಾವನ್ನು ಸ್ಟೋರ್ ಮಾಡುತ್ತದೆ. ಹೀಗಾಗಿ ಅದು ಈ ಡೇಟಾವನ್ನು ಹೇಗೆ ಬಳಸುತ್ತದೆ ಎಂಬ ಬಗ್ಗೆ ನಮಗೆ ತಿಳಿದಿಲ್ಲ. ಕೋಟ್ಯಂತರ ಭಾರತೀಯರು ವಾಟ್ಸ್ಆ್ಯಪ್ನಲ್ಲಿದ್ದು, ಅವರ ಎಲ್ಲಾ ಡೇಟಾ ದೇಶದ ಭದ್ರತಾ ದೃಷ್ಟಿಯಿಂದ ಬಹಳ ಸೂಕ್ಷ್ಮವಾದದ್ದು. ಅಂತಹ ಸೂಕ್ಷ್ಮ ಡೇಟಾವನ್ನು ನಿರ್ವಹಿಸುವ ವಾಟ್ಸ್ಆ್ಯಪ್ ಅದನ್ನು ಹೇಗೆ ಬಳಸುತ್ತದೆ ವಿಚಾರದಲ್ಲಿ ಭಾರತೀಯರಿಗೆ ಆತಂಕ ಇದ್ದೇ ಇದೆ. ಅಲ್ಲದೆ ಇಷ್ಟು ಬೃಹತ್ ಡೇಟಾ ದುಷ್ಟರ ಕೈಸೇರಿದರೆ ಎಂಬ ಆತಂಕವೂ ಇದೆ. ಯಾಕೆಂದರೆ, ಹಿಂದೊಮ್ಮೆ ಫೇಸ್ಬುಕ್ನ ಡೇಟಾ ಲೀಕ್ ಆಗಿ ಭಾರಿ ವಿವಾದ ಸೃಷ್ಟಿಯಾಗಿತ್ತು.
2. ಇನ್ನೊಂದು ಮುಖ್ಯವಾದ ಅಂಶವೆಂದರೆ ಅರಟ್ಟೈ ತನ್ನ ಬಳಕೆದಾರರ ಡೇಟಾವನ್ನು ಜಾಹೀರಾತುಗಳನ್ನು ಟಾರ್ಗೆಟ್ ಮಾಡಲು ಬಳಸುವುದಿಲ್ಲ. ಎಂದರೆ ಬಳಕೆದಾರರ ಬಳಕೆಯ ಮಾದರಿಯನ್ನು ಆಧರಿಸಿ ಅವರಿಗೆ ಜಾಹೀರಾತುಗಳನ್ನು ಪ್ರಕಟಿಸುವುದು. ಈ ಕೆಲಸವನ್ನು ವಾಟ್ಸ್ಆ್ಯಪ್ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ವಾಟ್ಸ್ಅಪ್ ಫೇಸ್ಬುಕ್ನೊಂದಿಗೆ ಸಂಯೋಜನೆಗೊಂಡಿದ್ದು, ಫೇಸ್ಬುಕ್ನಲ್ಲಿ ನಮಗೆ ಯಾವ ಜಾಹೀರಾತುಗಳನ್ನು ಪ್ರಕಟಿಸಬೇಕು ಎಂಬುದನ್ನು ವಾಟ್ಸ್ಆ್ಯಪ್ ಡೇಟಾ ತಿಳಿಸುತ್ತದೆ. ಇದು ಅನಗತ್ಯ ಕಿರಿಕಿರಿಗೆ ದಾರಿ ಮಾಡುಕೊಡುತ್ತದೆ. ಆದರೆ, ಅರಟ್ಟೈನಲ್ಲಿ ಈ ತಾಪತ್ರಯ ಇಲ್ಲ.
3. ವಾಟ್ಸ್ಆ್ಯಪ್ನಲ್ಲಿ ಬರುವ ಕೆಲವು ಸಂದೇಶಗಳನ್ನು ಸೇವ್ ಮಾಡಿಕೊಳ್ಳಲು ನಾವೆಲ್ಲ ಹೆಣಗಾಡುತ್ತೇವೆ. ಆ ಮೆಸೇಜ್ಗಳನ್ನು ಕಾಪಿ ಮಾಡಿ ನೋಟ್ಸ್ನಲ್ಲಿ ಸೇವ್ ಮಾಡುವ ತಂತ್ರವನ್ನು ಕೆಲವರು ಬಳಸುತ್ತಾರೆ. ಆದರೆ ಈ ಸಮಸ್ಯೆಗೆ ಅರಟ್ಟೈ ಪಾಕೆಟ್ ಎಂಬ ವಿಶೇಷ ಫೀಚರ್ ಮೂಲಕ ಪರಿಹಾರ ಹುಡುಕಿದೆ. ಇದರ ಮೂಲಕ ವಿವಿಧ ಚಾಟ್ಗಳಲ್ಲಿ ಬಂದ ಇಮೇಜ್, ವಿಡಿಯೊ, ಫೈಲ್ ಅಥವಾ ಚಾಟ್ಗಳನ್ನು ಒಂದೆಡೆ ಸೇವ್ ಮಾಡಬಹುದು. ಅವುಗಳನ್ನು ಬೇಕೆಂದಾಗ ಮತ್ತೆ ನೋಡಬಹುದು. ಈ ಫೀಚರ್ ವಾಟ್ಸ್ಆ್ಯಪ್ನಲ್ಲಿಲ್ಲ.
4. ಅರಟ್ಟೈನಲ್ಲಿ ವಾಟ್ಸ್ಆ್ಯಪ್ನಲ್ಲಿರುವಂತೆ ವಿಡಿಯೋ ಕಾಲ್ ಮಾಡಬಹುದು, ಗ್ರೂಪ್ ಕಾಲ್ ಮಾಡಲೂ ಅವಕಾಶವಿದೆ. ಆದರೆ, ಮೀಟಿಂಗ್ಗಳನ್ನು ಷೆಡ್ಯೂಲ್ ಮಾಡಬಹುದಾದ ವಾಟ್ಸ್ಆ್ಯಪ್ನಲ್ಲಿಲ್ಲದ ಒಂದು ವಿಶೇಷ ಫೀಚರ್ ಅರಟ್ಟೈನಲ್ಲಿದೆ. ಹೀಗಾಗಿ ಮೀಟಿಂಗ್ಗಳನ್ನು ಅರಟ್ಟೈನಲ್ಲಿಯೇ ಷೆಡ್ಯೂಲ್ ಮಾಡಿ, ನಿಗದಿತ ಸಮಯದಲ್ಲಿ ಮೀಟಿಂಗ್ ಮಾಡಬಹುದು. ಇದು ಸಣ್ಣ ಕಂಪನಿಗಳಿಗೆ ವರದಾನವಾಗಬಹುದು.
5. ಭಾರತದಲ್ಲಿ ಇಂದಿಗೂ ಕೀಪ್ಯಾಡ್ ಫೋನ್ಗಳನ್ನು ಜನರು ಬಳಸುತ್ತಾರೆ. ಅವುಗಳಲ್ಲಿ ಸ್ಟೋರೇಜ್ ಬಹಳ ಕಡಿಮೆ ಇರುತ್ತದೆ. ಜೊತೆಗೆ ಅವುಗಳ ಇಂಟರ್ನೆಟ್ ವೇಗ ಕೂಡ ಕಡಿಮೆ ಇರುತ್ತದೆ. ಅರಟ್ಟೈ ಕಡಿಮೆ ಸ್ಟೋರೇಜ್ ಸಾಮರ್ಥ್ಯವಿರುವ ಫೋನ್ಗಳಲ್ಲೂ ಕೆಲಸ ಮಾಡುತ್ತದೆ. ಅಲ್ಲದೆ, ಇಂಟರ್ನೆಟ್ ವೇಗ ಕಡಿಮೆ ಇರುವ ಪ್ರದೇಶಗಳಲ್ಲಿ ಅಂದರೆ 2ಜಿ, 3ಜಿ ನೆಟ್ವರ್ಕ್ಗಳಲ್ಲೂ ಕೆಲಸ ಮಾಡುತ್ತದೆ. ಆದರೆ ವಾಟ್ಸ್ಆ್ಯಪ್ ಹೆಚ್ಚು ಗಾತ್ರದ್ದಾಗಿದ್ದು, ಕಡಿಮೆ ಸ್ಟೋರೇಜ್ ಫೋನ್ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಇಂಟರ್ನೆಟ್ ವೇಗ ಕೂಡ ಜಾಸ್ತಿಯೇ ಬೇಕು.
6. ಗ್ರೂಪ್ ಚಾಟ್ಗಳಲ್ಲಿಯೇ ಅಂತರ್ಗತ ಸಮೀಕ್ಷೆ ಮತ್ತು ಈವೆಂಟ್ ವೇಳಾಪಟ್ಟಿ ಅರಟ್ಟೈನ ಮತ್ತೊಂದು ವೈಶಿಷ್ಟ್ಯ. ಎಂದರೆ, ಅರಟ್ಟೈ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಮಾತ್ರವಲ್ಲದೆ ಸಮೀಕ್ಷೆಗಳನ್ನೂ ನಡೆಸಬಹುದು. ಸಮುದಾಯದ ಕಾರ್ಯಕ್ರಮಗಳಲ್ಲಿ ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಈ ಫೀಚರ್ ವಾಟ್ಸ್ಆ್ಯಪ್ನಲ್ಲಿಲ್ಲ.
7. ವಾಟ್ಸ್ಆಪ್ನಲ್ಲಿ ಮೊಬೈಲ್ ನಂಬರ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳುತ್ತೇವೆ. ಆ ಬಳಿಕ ನಾವು ಯಾರೊಂದಿಗೆ ಚಾಟ್ ಮಾಡಿದರೂ ನಮ್ಮ ಮೊಬೈಲ್ ನಂಬರ್ ಅವರಿಗೆ ಗೋಚರಿಸುತ್ತದೆ. ಆದರೆ, ಅರಟ್ಟೈ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ರಿಜಿಸ್ಟರ್ ಮಾಡುವಾಗ ಮೊಬೈಲ್ ನಂಬರ್ ಕೇಳಿದರೂ ಆ ಬಳಿಕ ಅದರ ಅಗತ್ಯವಿರುವುದಿಲ್ಲ. ಯೂಸರ್ನೇಮ್/ಬಳಕೆದಾರರ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಅರಟ್ಟೈನಲ್ಲಿ ಮೊಬೈಲ್ ನಂಬರ್ ಬೇರೆಯವರಿಗೆ ತಿಳಿಯುವುದಿಲ್ಲ. ಬಹುತೇಕರಿಗೆ ಇದು ತುಂಬಾ ಅನುಕೂಲಕ್ಕೆ ಬರುತ್ತದೆ.
ಎಂಡ್-ಟು-ಎಂಡ್ ಎನ್ಕ್ರಿಪ್ಷನ್ನಲ್ಲಿ ವಾಟ್ಸ್ಆ್ಯಪ್ ವಿಶಿಷ್ಟವಾಗಿದೆ. ಎಂದರೆ, ಇದರ ಮೂಲಕ ನಾವು ಕಳಿಸುವ ಸಂದೇಶ, ವಿಡಿಯೊ, ಫೋಟೋ ಅಥವಾ ಇನ್ನಾವುದೇ ತೆರನಾದ ಸಂವಹನ ಗುಪ್ತ ಭಾಷೆಗೆ ಬದಲಾಗುತ್ತದೆ. ಹೀಗಾಗಿ ಯಾರೂ ಅದನ್ನು ಹ್ಯಾಕ್ ಮಾಡಿ ಓದಲು ಸಾಧ್ಯವಿಲ್ಲ. ಈ ಫೀಚರ್ ಅರಟ್ಟೈನಲ್ಲಿ ಸದ್ಯಕ್ಕಿಲ್ಲ, ಆದರೆ ನವೆಂಬರ್ ವೇಳೆಗೆ ಎನ್ಕ್ರಿಪ್ಷನ್ ಸೇವೆ ಪ್ರಾರಂಭಿಸುವುದಾಗಿ ಝೋಹೋ ಹೇಳಿದೆ.
ಒಟ್ಟಿನಲ್ಲಿ ಸ್ವದೇಶಿ ಚಳುವಳಿಯ ಅಲೆಯಲ್ಲಿ ತೇಲುತ್ತಿರುವ ಅರಟ್ಟೈ ಭಾರತದಲ್ಲಿ ವಾಟ್ಸ್ಆ್ಯಪ್ಗೆ ಸಡ್ಡು ಹೊಡೆಯುತ್ತಿದೆ. ನವೆಂಬರ್ ವೇಳೆಗೆ ಇನ್ನಷ್ಟು ವಿಶಿಷ್ಟ ಸೇವೆಗಳನ್ನು ಪರಿಚಯಿಸುವುದಾಗಿ ಝೋಹೋ ಪ್ರಕಟಿಸಿದೆ. ಆದರೆ, ಈಗ ಪ್ರಚಾರದ ಅಲೆಯಲ್ಲಿ ಸೇರ್ಪಡೆಯಾಗುತ್ತಿರುವ ಗ್ರಾಹಕರನ್ನು ಅರಟ್ಟೈ ಉಳಿಸಿಕೊಳ್ಳಲಿದೆಯೇ ಅಥವಾ ‘ಹೈಕ್’ ಎಂಬ ಆ್ಯಪ್ಗೆ ಆದ ಗತಿಯೇ ಇದಕ್ಕೂ ಆಗುತ್ತದೆಯೇ ಕಾದುನೋಡಬೇಕು.
ಅರಟ್ಟೈ ಆ್ಯಪ್ ಅನ್ನು ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು:
https://play.google.com/store/apps/details?id=com.aratai.chat&hl=en_IN




ತುಂಬಾ ಮಾಹಿತಿಪೂರ್ಣ ಬರಹ. ಧನ್ಯವಾದಗಳು ರಮೇಶ್ ಅವ್ರೆ..