ಸೈಬರ್ ವಂಚಕರಿಗೆ ಹಲವು ಮುಖ, ಹಲವು ದಾರಿ
ವಂಚನೆಗೆ ಒಳಗಾಗುವ ಮೊದಲು ಎಚ್ಚೆತ್ತುಕೊಳ್ಳಿ!
ಡಾ.ರಮೇಶ್ ನಿಂಬೆಮರದಳ್ಳಿ
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ವಿವಿಧ ಸಾಧ್ಯತೆಗಳನ್ನು ಹಿಂದಿನ ಲೇಖನಗಳಲ್ಲಿ ಓದಿದ್ದೇವೆ. ಇದರ ಅನುಕೂಲಗಳೆಷ್ಟೋ ತೊಂದರೆಗಳೂ ಅಷ್ಟೇ ಇವೆ ಎನ್ನುವುದರ ಎಚ್ಚರಿಕೆಯನ್ನೂ ನೋಡಿದ್ದೇವೆ. ಎಐಗೆ ಕರಾಳಮುಖವಿದೆ ಎನ್ನುವುದು ನಮಗೆ ತಿಳಿದಿದೆ. ಹ್ಯಾಕರ್ಗಳು ಮತ್ತು ಸೈಬರ್ ವಂಚಕರೇ ಈ ಕರಾಳ ಮುಖದ ಪ್ರತಿನಿಧಿಗಳು. ಇವರ ಅಕ್ರಮಗಳಿಗೆ ಎಐ ವರದಾನವಾಗಿರುವುದು ಮಾತ್ರವಲ್ಲ, ದೊಡ್ಡಮಟ್ಟದ ದಾಳಿ ನಡೆಸಲು ಬ್ರಹ್ಮಾಸ್ತ್ರವೇ ಆಗಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರ ಮೇಲೆ ಸೈಬರ್ ದಾಳಿಗಳ ವಿವಿಧ ರೂಪಗಳು ಮತ್ತು ಅವುಗಳಿಂದ ಪಾರಾಗುವ ದಾರಿಗಳ ಮೇಲೆ ಈ ಲೇಖನದಲ್ಲಿ ವಿವರಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಸೈಬರ್ ದಾಳಿಗಳು ಗಮನಾರ್ಹವಾಗಿ ಹೆಚ್ಚಿವೆ. ಮಾಧ್ಯಮಗಳಲ್ಲಿ ಸೈಬರ್ದಾಳಿ, ಸೈಬರ್ ಸೆಕ್ಯೂರಿಟಿ, ಸೈಬರ್ ವಂಚನೆ, ಸೈಬರ್ ಅಟ್ಯಾಕ್ ಎಂಬ ಸುದ್ದಿಗಳು ಸಾಮಾನ್ಯವಾಗಿರುವುದೇ ಇದಕ್ಕೆ ಸಾಕ್ಷಿ. ತಂತ್ರಜ್ಞಾನದ ಪ್ರಗತಿಯೊಂದಿಗೆ, ಸೂಕ್ಷ್ಮ ಮಾಹಿತಿ, ಆರ್ಥಿಕ ವ್ಯವಸ್ಥೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ದತ್ತಾಂಶಗಳು ಸೈಬರ್ ಕ್ರಿಮಿನಲ್ಗಳ ಗುರಿಯಾಗುತ್ತಿವೆ. ಸರಕಾರಿ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಖಾಸಗಿ ಕಂಪನಿಗಳು ಸೈಬರ್ ದಾಳಿಗಳಿಗೆ ಒಳಗಾಗಿವೆ. ಇದರ ಪರಿಣಾಮವಾಗಿ, ಜನರ ಗೌಪ್ಯತೆ, ಹಣಕಾಸು ನಷ್ಟ ಅಷ್ಟೇ ಏಕೆ ದೇಶದ ಭದ್ರತೆಗೇ ಇದರಿಂದ ಸವಾಲು ಎದುರಾಗಿದೆ. ಚೀನಾದ ಹ್ಯಾಕರ್ಗಳು ಅಮೆರಿಕದ ದೊಡ್ಡ ಟೆಲಿಕಾಂ ಕಂಪನಿಗಳು ಮತ್ತು ಸರಕಾರದ ಖಜಾನೆಯನ್ನೇ ಹ್ಯಾಕ್ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಇಸ್ರೇಲ್ ಸೈಬರ್ ದಾಳಿಯನ್ನು ಒಂದು ಯುದ್ಧ ತಂತ್ರವಾಗಿ ಬಳಸಿದ್ದನ್ನೂ ನಾವು ಗಮನಿಸಿದ್ದೇವೆ. ಇವೆಲ್ಲಾ ಸೈಬರ್ ದಾಳಿಕೋರರಿಂದ ದೇಶದ ಭದ್ರತೆಗೆ ಒದಗಬಹುದಾದ ಸಂಕಷ್ಟಗಳಿಗೆ ಉದಾಹರಣೆ. ಇಲ್ಲೆಲ್ಲ ಸೈಬರ್ದಾಳಿಕೋರರ ಅಸ್ತ್ರವಾಗಿರುವುದು ಇದೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ.
ಫೋನ್ ಕರೆಗಳ ಮೂಲಕ ನಿಮ್ಮನ್ನು ಸೈಬರ್ ಅರೆಸ್ಟ್ ಮಾಡಿದ್ಧೇವೆ ಎನ್ನುವ ಧಮಕಿಗಳು ದೇಶದಲ್ಲಿ ಸರ್ವೇಸಾಮಾನ್ಯವಾಗಿವೆ. ಸೈಬರ್ ವಂಚನೆ ಭಾರತದಲ್ಲೀಗ ವ್ಯಕ್ತಿಗತ ಸಮಸ್ಯೆಯಾಗಿ ಉಳಿಯದೆ ದೇಶದ ಸಾಮಾಜಿಕ ಸಮಸ್ಯೆಯ ರೂಪ ಪಡೆದಿದೆ. 2024ರಲ್ಲಿ 17 ಲಕ್ಷಕ್ಕೂ ಹೆಚ್ಚು ಸೈಬರ್ ಅಪರಾಧದ ದೂರುಗಳು ಭಾರತದಲ್ಲಿ ದಾಖಲಾಗಿವೆ. ಸುಮಾರು 22,800 ಕೋಟಿ ರೂಗಳಿಗೆ ಹೆಚ್ಚು ಹಣ ಅಮಾಯಕರ ಜೇಬಿನಿಂದ ಸೈಬರ್ ವಂಚಕರ ಖಾತೆ ಸೇರಿದೆ. ಎಸ್ಎಂಎಸ್ ಕಳಿಸಿ ಕ್ಲಿಕ್ ಮಾಡುವಂತೆ ಒತ್ತಾಯಿಸುವುದು, ಫೋನ್ ಮಾಡಿ ಬ್ಯಾಂಕ್ನ ಸಿಬ್ಬಂದಿ ಎಂದು ನಂಬಿಸಿ ಓಟಿಪಿ ಕೇಳುವುದು, ವಾಟ್ಸ್ಆ್ಯಪ್ಗೆ ಮೆಸೇಜ್ ಕಳಿಸಿ ನೀವು ಲಾಟರಿಯಲ್ಲಿ ಗೆದ್ದಿದ್ದೀರಿ. ಅದನ್ನು ನಿಮ್ಮದಾಗಿಸಿಕೊಳ್ಳಲು ಕೂಡಲೇ ಲಿಂಕ್ ಕ್ಲಿಕ್ ಮಾಡಿ ಎನ್ನುವುದು – ಇಂತಹ ಗಿಮಿಕ್ಗಳೆಲ್ಲ ಸೈಬರ್ ವಂಚನೆಯ ವಿವಿಧ ಮುಖಗಳೇ ಆಗಿರುತ್ತವೆ. ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನ ಸೈಬರ್ ದಾಳಿಕೋರರಿಗೆ ಬ್ರಹ್ಮಾಸ್ತ್ರವಾಗಿಬಿಟ್ಟಿದೆ. ಅಮಾಯಕರನ್ನು ಬಲೆಗೆ ಬೀಳಿಸುವುದು ಸುಲಭವಾಗಿದೆ. ಎಐ ತಂತ್ರಜ್ಞಾನದ ಕರಾಳ ಮುಖಗಳಲ್ಲಿ ಈ ಸೈಬರ್ ದಾಳಿಯೂ ಒಂದು.
ಹತ್ತಾರು ಮುಖ, ನೂರಾರು ದಾರಿ
ಸೈಬರ್ ವಂಚಕರಿಗೆ ಹಲವು ಮುಖಗಳು, ಹಲವಾರು ದಾರಿಗಳು. ನಿಜ ಹೇಳಬೇಕೆಂದರೆ ಈ ವಂಚಕರಿಗೆ ಮುಖವೇ ಇಲ್ಲ. ಎಲ್ಲೋ ಗುಪ್ತ ಸ್ಥಳಗಳಲ್ಲಿ ಕುಳಿತು ತಮ್ಮ ಗುರುತುಗಳನ್ನು ಮರೆಮಾಚಿ ಅಕ್ರಮ ಎಸಗುತ್ತಾರೆ. ಇವರ ಕಳ್ಳದಾರಿಗಳು ಜನರಿಗೆ ತಿಳಿದು ಅವರು ಎಚ್ಚೆತ್ತುಕೊಳ್ಳುವ ಹೊತ್ತಿಗೆ ವಂಚಕರು ಹೊಸ ದಾರಿಗಳನ್ನು ಹುಡುಕಿಕೊಂಡಿರುತ್ತಾರೆ. ಇಮೇಲ್, ಎಸ್ಎಂಎಸ್ ಮೂಲಕ ಅಮಾಯಕರಿಗೆ ಗಾಳ ಹಾಕುವುದು ಮೊದಲಿಂದಲೂ ಇತ್ತು. ಆ ಕುರಿತು ಜನರಿಗೆ ಒಂದಿಷ್ಟು ಜಾಗೃತಿ ಮೂಡಿ ಜನರು ಹುಷಾರಾಗುತ್ತಿದ್ದರು. ಅಷ್ಟರಲ್ಲಿ ಈ ಓಟಿಪಿ ವ್ಯವಸ್ಥೆ ಸೈಬರ್ ವಂಚಕರಿಗೆ ಹೊಸ ದಾರಿ ತೆರೆದಂತಾಗಿದೆ. ಇತ್ತೀಚೆಗೆ ಸೈಬರ್ ಅರೆಸ್ಟ್ ಎನ್ನುವ ಹೊಸ ವಂಚನೆ ಭಾರತದ ಬಹುತೇಕರನ್ನು ಬಾಧಿಸುತ್ತಿದೆ. ಸಾಮಾನ್ಯರು ಮಾತ್ರವಲ್ಲದೆ, ದೊಡ್ಡ ದೊಡ್ಡ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಸಿನಿಮಾ ನಟರು, ಉದ್ಯಮಿಗಳು ಅಷ್ಟೇ ಏಕೆ ಪೊಲೀಸ್ ಅಧಿಕಾರಿಗಳೂ ಇದರ ಬಲಿಪಶುಗಳಾಗಿದ್ದಾರೆ.
ಹೀಗಾಗಿ ನಾವು ಸೈಬರ್ ವಂಚಕರು ಬಳಸುವ ಕಳ್ಳ ದಾರಿಗಳನ್ನು ಅರಿತುಕೊಳ್ಳಬೇಕು. ಅವರು ಬಳಸುವ ಹೊಸ ತಂತ್ರಗಳನ್ನೂ ತಿಳಿಯಬೇಕು. ಆಗ ಮಾತ್ರ ವಂಚನೆಗೆ ಒಳಗಾಗದೆ ಉಳಿಯಲು ಸಾಧ್ಯ.
· ಡೀಪ್ಫೇಕ್ ಮೂಲಕ ಡೀಪ್ ವಂಚನೆ: ಸೈಬರ್ ಕಳ್ಳರು ನಿರಂತರವಾಗಿ ಹೊಸ ತಂತ್ರಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಎಐ ಮತ್ತು ಮಷೀನ್ ಲರ್ನಿಂಗ್ ಬಳಸಿ, ಅವರು ಇನ್ನೂ ಸೂಕ್ಷ್ಮವಾದ ವಂಚನೆಯ ಜಾಲಗಳನ್ನು ಹೆಣೆಯುತ್ತಿದ್ದಾರೆ. ‘ಡೀಪ್ಫೇಕ್’ ತಂತ್ರಜ್ಞಾನದ ಮೂಲಕ ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಧ್ವನಿಯನ್ನು ನಕಲು ಮಾಡಿ, ನಿಮ್ಮಿಂದ ಹಣವನ್ನು ವಂಚಿಸಬಹುದು. ನಿಮ್ಮದೇ ನಕಲಿ ಅವತಾರಗಳನ್ನು ಸೃಷ್ಟಿಸಿ ಅಸಹ್ಯ, ಅಸಭ್ಯ, ಅಶ್ಲೀಲ ವೀಡಿಯೊ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಬಹುದು.
ಕರೆ ಮತ್ತು ಎಸ್ಎಂಎಸ್ ಮೂಲಕ ವಂಚನೆ: ‘ನೀವು ಲಾಟರಿ ಗೆದ್ದಿದ್ದೀರಿ,’ ‘ನಿಮ್ಮ ಬ್ಯಾಂಕ್ ಖಾತೆಯನ್ನು ಲಾಕ್ ಮಾಡಲಾಗಿದ್ದು, ಅನ್ಲಾಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ,’ ಅದನ್ನು ನಿಮ್ಮದಾಗಿಸಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ ಎಂಬ ಮೆಸೇಜುಗಳು ಎಸ್ಎಂಎಸ್ ಮತ್ತು ವಾಟ್ಸ್ಆ್ಯಪ್ಗೆ ಬರುತ್ತವೆ. ಇಂಥ ಮೆಸೇಜುಗಳು ಬಂದಾಗ ಹುಷಾರಾಗಿರಿ.
ನೆರವಿನ ಹೆಸರಲ್ಲಿ ಮೋಸ: ನಿಮ್ಮ ಪರಿಚಯಸ್ತರು, ಸ್ನೇಹಿತರು, ಸಹೋದ್ಯೋಗಿಗಳು ಅಷ್ಟೇ ಏಕೆ ನಿಮ್ಮ ಬಾಸ್ಗಳ ಹೆಸರಿನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ಗಳ ಮೂಲಕ ಮೆಸೇಜ್ ಮಾಡಿ ‘ತಾವು ವಿಪರೀತ ಕಷ್ಟದಲ್ಲಿದ್ದು ಕೂಡಲೇ ಸಾಧ್ಯವಾದಷ್ಟು ಹಣ ಸಹಾಯ ಮಾಡಿ’ ಎಂದು ಕೇಳುತ್ತಾರೆ. ನೆರವು ನೀಡುವ ಮುನ್ನ ತಪ್ಪದೇ ಅವರ ಸಾಚಾತನವನ್ನು ಪರಿಶೀಲಿಸಿ.
· ಪಿಶಿಂಗ್ ಮತ್ತು ಇಮೇಲ್ ಮೋಸಗಳು: ವಂಚಕರು ವಿಶ್ವಾಸಾರ್ಹ ಸಂಸ್ಥೆಗಳ ಹೆಸರಿನಲ್ಲಿ ಅಂದರೆ ದೊಡ್ಡ ಕಾರ್ಪರೇಟ್ ಸಂಸ್ಥೆಗಳ ಹೆಸರಿನಲ್ಲಿ ಸುಳ್ಳು ಇಮೇಲ್ಗಳನ್ನು ಕಳುಹಿಸಿ ಪಾಸ್ವರ್ಡ್ಗಳು, ಕ್ರೆಡಿಟ್ ಕಾರ್ಡ್ ವಿವರಗಳು ಅಥವಾ ಇನ್ನಿತರೇ ಸೂಕ್ಷ್ಮ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಮಾಹಿತಿ ನೀಡುವ ಮುನ್ನ ಒಮ್ಮೆ ಯೋಚಿಸಿ.
· ಕ್ರೆಡಿಟ್ ಕಾರ್ಡ್ ವಂಚನೆ: ಬ್ಯಾಂಕ್ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ವಿವರ ಪಡೆಯುತ್ತಾರೆ. ಇಲ್ಲವೇ ನಕಲಿ ವೆಬ್ಸೈಟ್ಗಳ ಮೂಲಕವೂ ಈ ವಿವರವನ್ನು ಕದಿಯುತ್ತಾರೆ. ಬಳಿಕ ಅದೇ ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ಹೆಸರಿನಲ್ಲಿ ಖರೀದಿಗಳನ್ನು ಮಾಡುತ್ತಾರೆ. ಆದರೆ ಆ ಸಾಲದ ಹೊರೆ ಮಾತ್ರ ನಿಮ್ಮ ಹೆಗಲಿಗೆ ಬೀಳುತ್ತದೆ. ಜೊತೆಗೆ, ಕರೆ ಇಲ್ಲವೇ ಇಮೇಲ್ಗಳ ಮೂಲಕ ನಿಮ್ಮ ಆನ್ಲೈನ್ ಬ್ಯಾಂಕಿಂಗ್ ವಿವರ ಕದ್ದು ಬ್ಯಾಂಕ್ ಖಾತೆಗೆ ಲಾಗಿನ್ ಆಗಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಾರೆ.
· ನಕಲಿ ಜಾಹೀರಾತುಗಳ ವಂಚನೆ:
o ಗಣ್ಯರ ಹೆಸರಿನಲ್ಲಿ ಡೀಪ್ಫೇಕ್ ತಂತ್ರಜ್ಞಾನದ ಮೂಲಕ ನಕಲಿ ವೀಡಿಯೊ ಸೃಷ್ಟಿಸಿ ಸ್ಟಾಕ್ನಲ್ಲಿ ಹೂಡಿಕೆ ಮಾಡುವಂತೆ ಮರುಳು ಮಾಡಿ ವಂಚಿಸಲಾಗುತ್ತದೆ.
o ಸೆಲೆಬ್ರಿಟಿಗಳ ಹೆಸರಿನಲ್ಲಿ ಮತ್ತು ಸುಂದರ ಹುಡುಗಿಯರ ರೂಪದಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಅವರ ಖಾತೆಗಳನ್ನು ಫಾಲೋ ಮಾಡುವವರನ್ನು ವಂಚಿಸುತ್ತಾರೆ. ವೈಯಕ್ತಿಕ ಮತ್ತು ಫೋಟೋಗಳನ್ನು ಬಳಸಿ ಆಕ್ಷೇಪಾರ್ಹ ರೀತಿಯಲ್ಲಿ ನಕಲಿ ಫೋಟೋ, ವೀಡಿಯೊಗಳನ್ನು ಸೃಷ್ಟಿಸಿ ಹಣ ನೀಡುವಂತೆ ಪೀಡಿಸುತ್ತಾರೆ. ಹಣ ನೀಡಲು ಒಪ್ಪದಿದ್ದರೆ ಮಾಹಿತಿಯನ್ನು ವೈರಲ್ ಮಾಡುವುದಾಗಿ ಬೆದರಿಸುತ್ತಾರೆ.
o ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ಸ್ನೇಹಿತರನ್ನು ಗಳಿಸಿ, ಒಂಟಿತನ ಹೋಗಲಾಡಿಸಲು ಸಂಗಾತಿಯನ್ನು ಪಡೆಯಿರಿ ಎಂಬ ರೀತಿಯ ಜಾಹೀರಾತುಗಳ ಮೂಲಕ ವಂಚನೆಗಳು ನಡೆಯುತ್ತಿವೆ. ಆ್ಯಪ್ಗಳಿಗೆ ರಿಜಿಸ್ಟರ್ ಆದವರನ್ನು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲಾಗುತ್ತದೆ.
· ರ್ಯಾನ್ಸಮ್ವೇರ್ ದಾಳಿಗಳು: ನಿಮಗೆ ಅರಿವೇ ಇಲ್ಲದೆ ನೀವು ಮಾಡುವ ಆ್ಯಪ್ ಅಥವಾ ಸಾಫ್ಟ್ವೇರ್ ಡೌನ್ಲೋಡ್ಗಳ ಜೊತೆಗೆ ಮಾಲ್ವೇರ್ಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ಗಳಲ್ಲಿ ಇನ್ಸ್ಟಾಲ್ ಮಾಡಿ ಗೌಪ್ಯ ಮಾಹಿತಿ ಕದಿಯುತ್ತಾರೆ. ಇಲ್ಲವೇ ನಿಮ್ಮ ಕಂಪ್ಯೂಟರ್ ಬ್ಲಾಕ್ ಮಾಡಿ ಹಣ ಕೊಟ್ಟರೆ ಮಾತ್ರ ಅನ್ಬ್ಲಾಕ್ ಮಾಡುವುದಾಗಿ ಬೇಡಿಕೆ ಇಡುತ್ತಾರೆ.
· ಲೈಂಗಿಕ ಕಿರುಕುಳ: ಸೋಷಿಯಲ್ ಮೀಡಿಯಾಗಳಲ್ಲಿ ದೊರೆಯುವ ಅಮಾಯಕ ಮಹಿಳೆಯರು ಮತ್ತು ಮಕ್ಕಳ ಫೋಟೋ, ವೀಡಿಯೊಗಳನ್ನು ಬಳಸಿ ಕೆಟ್ಟದಾಗಿ ವೀಡಿಯೊ ಮಾಡಲಾಗುತ್ತದೆ. ಬಳಿಕ ಹಣ ಮತ್ತು ಲೈಂಗಿಕ ಕ್ರಿಯೆಗೆ ಬೇಡಿಕೆ ಇಡುತ್ತಾರೆ. ಒಪ್ಪದಿದ್ದಾಗ ಆನ್ಲೈನ್ನಲ್ಲಿ ಮಾನ ಹರಾಜು ಹಾಕುವ ಕೃತ್ಯಗಳಿಗೆ ಮುಂದಾಗುತ್ತಾರೆ.
· ಅಕೌಂಟ್ ಹ್ಯಾಕ್: ಹ್ಯಾಕರ್ಗಳು ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿದ್ದ ಮೂಲ ವಿಷಯಗಳನ್ನು ಅಳಿಸಿ ಅಲ್ಲಿ ಅಶ್ಲೀಲ ಇಲ್ಲವೇ ಅಕ್ರಮವಾದ ಮಾಹಿತಿಯನ್ನು ತುಂಬುತ್ತಾರೆ. ಇದರಿಂದ ನಮ್ಮ ಖಾತೆಯಲ್ಲಿದ್ದ ನಮ್ಮ ಅಮೂಲ್ಯ ನೆನಪುಗಳು ಕಳೆದುಹೋಗುವ ಅಪಾಯ ಒಂದೆಡೆಯಾದರೆ, ಹ್ಯಾಕರ್ಗಳು ಮಾಡುವ ಅಕ್ರಮಕ್ಕೆ ನಾವು ಶಿಕ್ಷೆಗೆ ಗುರಿಯಾಗುವ ಸಂಭವ ಇರುತ್ತದೆ.
ಸೈಬರ್ ವಂಚನೆಗಳಿಂದ ಪಾರಾಗುವುದು ಹೇಗೆ?
ಸೈಬರ್ ವಂಚಕರಿಂದ ಪಾರಾಗಲು ಹಲವು ದಾರಿಗಳಿವೆ. ನಮ್ಮ ಎಲ್ಲಾ ವಹಿವಾಟುಗಳು ಮತ್ತು ನಮ್ಮ ಆನ್ಲೈನ್ ವರ್ತನೆಗಳಲ್ಲಿ ಜಾಗರೂಕರಾಗಿರುವುದು ಮೊದಲ ದಾರಿ. ಇದರ ಹೊರತಾಗಿ ಈ ಕೆಳಗಿನ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿದರೆ ವಂಚನೆಯಿಂದ ದೂರ ಉಳಿಯಬಹುದು.
· ನಿಮ್ಮ ಸಾಧನಗಳಿಗೆ ಆ್ಯಂಟಿವೈರಸ್ ಹಾಕಿ: ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ಗಳಿಗೆ ಕಡ್ಡಾಯವಾಗಿ ಆ್ಯಂಟಿವೈರಸ್ ಬಳಸಿ. ಸಾವಿರಾರು ರೂಪಾಯಿ ಕೊಟ್ಟು ತಂದ ಸಾಧನಕ್ಕೆ ಸಾವಿರ ರೂಪಾಯಿಗೂ ಕಡಿಮೆ ಹಣಕ್ಕೆ ದೊರೆಯಬಹುದಾದ ಆ್ಯಂಟಿವೈರಸ್ ಹಾಕದೆ ಇರಬೇಡಿ. ಫೈರ್ವಾಲ್ಗಳನ್ನು ತಪ್ಪದೇ ಬಳಸಿ. ಇದು ಮಾಲ್ವೇರ್, ರ್ಯಾನ್ಸಮ್ವೇರ್ ಅಥವಾ ಯಾವುದೇ ರೀತಿಯ ವೈರಸ್ಗಳು ನಿಮ್ಮ ಮೊಬೈಲ್ ಪ್ರವೇಶಿಸದಂತೆ ತಡೆಯುತ್ತವೆ. ಈ ಮೂಲಕ ಮುಂದಿನ ಅಪಾಯಗಳಿಗೆ ತಡೆಗೋಡೆ ಹಾಕುತ್ತದೆ.
· ಸಾಫ್ಟ್ವೇರ್ ನವೀಕರಿಸಿ: ನಿಮ್ಮ ಆಪರೇಟಿಂಗ್ ಸಿಸ್ಟಮ್ಗಳು, ಬ್ರೌಸರ್ಗಳು ಮತ್ತು ಯಾವುದೇ ಅಪ್ಲಿಕೇಶನ್ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಿರಿ. ಹಳೆಯ ಅಪ್ಲಿಕೇಶನ್ಗಳು ವಂಚಕರು ಒಳನುಗ್ಗಲು ಸುಲಭ ದಾರಿಯಾಗುತ್ತವೆ.
· ವೈಯಕ್ತಿಕ ಮಾಹಿತಿ ರಹಸ್ಯವಾಗಿಡಿ: ನಿಮ್ಮ OTP, ಪಾಸ್ವರ್ಡ್ಗಳು ಮತ್ತು ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ತೀರಾ ವೈಯಕ್ತಿಕ ವಿವರಗಳು, ಮೊಬೈಲ್ ನಂಬರ್ ಶೇರ್ ಮಾಡಬೇಡಿ. ಖಾಸಗಿ ಫೋಟೊ, ವೀಡಿಯೊಗಳನ್ನು ಪೋಸ್ಟ್ ಮಾಡುವಾಗಲೂ ಹತ್ತಾರು ಬಾರಿ ಯೋಚಿಸಿ. ತೀರಾ ಅಗತ್ಯವಿದ್ದರಷ್ಟೇ ಶೇರ್ ಮಾಡಿ.
· ಬಲವಾದ ಪಾಸ್ವರ್ಡ್ ಬಳಸಿ: ನಿಮ್ಮ ಇಮೇಲ್ ಖಾತೆ, ಬ್ಯಾಂಕ್ ಖಾತೆಗಳೂ ಸೇರಿದಂತೆ ಎಲ್ಲಾ ಆನ್ಲೈನ್ ಲಾಗಿನ್ಗಳಿಗೆ ಕ್ಲಿಷ್ಟವಾಗಿರುವ ಮತ್ತು ಸುಲಭವಾಗಿ ಊಹಿಸಲು ಸಾಧ್ಯವಾಗದ ವಿಶಿಷ್ಟ ಪಾಸ್ವರ್ಡ್ಗಳನ್ನು ಬಳಸಿ. ಹೆಸರುಗಳು, ಜನ್ಮದಿನಾಂಕಗಳು ಅಥವಾ ಸಾಮಾನ್ಯ ಪದಗಳನ್ನು ಪಾಸ್ವರ್ಡ್ಗಳಾಗಿ ಬಳಸಬೇಡಿ. ಇವುಗಳನ್ನು ಊಹಿಸುವುದು ಕಳ್ಳರಿಗೆ ನೀರು ಕುಡಿದಷ್ಟು ಸುಲಭ. ಪಾಸ್ವರ್ಡ್ ಕಠಿಣವಾಗಿದ್ದಷ್ಟೂ ನಮ್ಮ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆ ಕಡಿಮೆ ಎನ್ನುವುದು ನೆನಪಿರಲಿ.
· ಎರಡು ಹಂತದ ದೃಢೀಕರಣ (2FA) ಸಕ್ರಿಯಗೊಳಿಸಿ: ಎಲ್ಲಾ ಆನ್ಲೈನ್ ಖಾತೆಗೂ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ ಎಂದರೆ ಲಾಗಿನ್ಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡುವುದು. ಇದು ಲಾಗಿನ್ ಮಾಡಲು ಪಾಸ್ವರ್ಡ್ನ ಜೊತೆಗೆ ಓಟಿಪಿ ನಮೂದಿಸುವುದನ್ನು ಕಡ್ಡಾಯಗೊಳಿಸುತ್ತದೆ. ಇದರಿಂದ ಕಳ್ಳರು ಪಾಸ್ವರ್ಡ್ ಕದ್ದರೂ ಓಟಿಪಿ ಇಲ್ಲದೇ ನಿಮ್ಮ ಖಾತೆಗೆ ಲಾಗಿನ್ ಆಗಲು ವಿಫಲರಾಗುತ್ತಾರೆ.
· ಉಚಿತ ವೈಫೈ ಬಳಸುವಾಗ ಎಚ್ಚರವಿರಲಿ: ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುವ ಉಚಿತ ಖಾಸಗಿ ವೈಫೈಗಳನ್ನು ಬಳಸುವಾಗ ಜಾಗರೂಕರಾಗಿರಿ. ಅವರ ವೈಫೈ ಬಳಸಲು ನೀವು ನೀಡುವ ಮಾಹಿತಿಯನ್ನು ವೈಫೈ ನಡೆಸುವವರು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ. ವಿಶೇಷವಾಗಿ ಅಂಥ ವೈಫೈ ಬಳಸಿ ಯಾವುದೇ ಆರ್ಥಿಕ ವಹಿವಾಟು ಎಂದರೆ ಹಣ ವರ್ಗಾಯಿಸುವುದು, ಹಣ ಪಡೆಯುವುದು, ಬ್ಯಾಂಕ್ ಖಾತೆಗೆ ಲಾಗಿನ್ ಆಗುವುದನ್ನು ಮಾಡಲೇಬೇಡಿ.
· ಪಿಶಿಂಗ್ ಇಮೇಲ್ಗಳ ಬಗ್ಗೆ ಹುಷಾರ್: ಅನಪೇಕ್ಷಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅನಪೇಕ್ಷಿತ ಚಿತ್ರ, ವೀಡಿಯೊಗಳನ್ನು ಡೌನ್ಲೋಡ್ ಮಾಡಬೇಡಿ. ಇಮೇಲ್ ಕಳುಹಿಸಿದವರ ವಿಳಾಸದ ಸಾಚಾತನ ಪರಿಶೀಲಿಸಿ. ಅವರ ಇಮೇಲ್ನ ವಿಷಯ, ಇಮೇಲ್ನಲ್ಲಿ ಬಳಿಸಿರುವ ಭಾಷೆ ಮತ್ತು ಸಿಗ್ನೇಚರ್ ಅನ್ನು ಸೂಕ್ಷ್ಮವಾಗಿ ಗಮನಿಸಿ. ಅದು ಕಳ್ಳರ ವೃತ್ತಿಪರವಲ್ಲದ ನಡೆಯನ್ನು ಸಾರಿ ಹೇಳುತ್ತದೆ.
· ಸಂಶಯಾಸ್ಪದ ಕರೆಗಳಿಗೆ ಕಿವಿಗೊಡಬೇಡಿ: ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಮತ್ತು ಎಸ್ಎಂಎಸ್ಗಳನ್ನು ನಂಬಬೇಡಿ. ವಾಟ್ಸಾಪ್ನಲ್ಲಿ ಬರುವ ಲಿಂಕ್ಗಳನ್ನು ತೆರೆಯುವ ಮೊದಲು ಅದರ ಸಾಚಾತನವನ್ನು ಪರಿಶೀಲಿಸಿ. ಅನುಮಾನ ಬಂದರೆ ಮುಂದುವರಿಯಬೇಡಿ.
· ಸುರಕ್ಷತೆ ಬಗ್ಗೆ ತಿಳಿದುಕೊಳ್ಳಿ: ಹೊಸ ರೀತಿಯ ಸೈಬರ್ ಅಪರಾಧಗಳ ಬಗ್ಗೆ ಅರಿವು ಬೆಳೆಸಿಕೊಳ್ಳಿ. ಅಲ್ಲದೆ, ಆನ್ಲೈನ್ನಲ್ಲಿ ಸುರಕ್ಷಿತವಾಗಿ ವ್ಯವಹರಿಸುವ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದನ್ನು ಮರೆಯಬೇಡಿ.
ವಂಚನೆಗೆ ಒಳಗಾದಾಗ ಭಯ ಬಿಟ್ಟು ದೂರು ಕೊಡಿ
ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ವಂಚಕರು ಬೀಸಿದ ಬಲೆಗೆ ಬಿದ್ದುಬಿಡುತ್ತೇವೆ. ಅರಿವಿದ್ದೋ, ಇಲ್ಲದೆಯೋ ಮೋಸ ಹೋಗಿರುತ್ತೇವೆ. ಅಂಥ ಸಂದರ್ಭದಲ್ಲಿ ಹೀಗಾಯಿತಲ್ಲ ಎಂದು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳದೆ ಮುಂದಿನ ದೊಡ್ಡ ಅನಾಹುತ ತಡೆಯಲು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಾಗುತ್ತದೆ.
· ನೀವು ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿದ್ದೀರಿ ಎಂಬುದು ತಿಳಿದ ತಕ್ಷಣವೇ ನ್ಯಾಷನಲ್ ಸೈಬರ್ ಕ್ರೈಮ್ ಹೆಲ್ಪ್ಲೈನ್ 1930 ಕ್ಕೆ ಕರೆ ಮಾಡಿ ದೂರು ದಾಖಲಿಸಿ. ನಿಮಗಾದ ಮೋಸದ ಪೂರ್ತಿ ವಿವರವನ್ನು ಅವರಿಗೆ ನೀಡಿ. ನಿಮ್ಮ ಬ್ಯಾಂಕ್ ಖಾತೆಯಿಂದ ವಂಚಕರು ಹಣ ಲಪಟಾಯಿಸಿದ್ದರೆ ಅದನ್ನು ಮರಳಿ ಕೊಡಿಸಲು ಅವಕಾಶ ಇರುತ್ತದೆ.
· ಸೈಬರ್ ವಂಚನೆಯ ದೂರನ್ನು ಕೇಂದ್ರ ಸರಕಾರದ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ನಲ್ಲೂ (https://cybercrime.gov.in/) ದೂರು ದಾಖಲಿಸಬಹುದು.
· ವಂಚನೆ ಬ್ಯಾಂಕ್ಗೆ ಸಂಬಂಧಿಸಿದ್ದಾದರೆ ತಕ್ಷಣವೇ ಬ್ಯಾಂಕ್ ಅಥವಾ ಸೇವಾದಾತರನ್ನು ಸಂಪರ್ಕಿಸಿ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ಮನವಿ ಮಾಡಿ. ಇದರಿಂದ ಇನ್ನಷ್ಟು ಅನಾಹುತ ತಪ್ಪುತ್ತದೆ.
· ಇಮೇಲ್ ಖಾತೆಯೂ ಸೇರಿದಂತೆ ನಿಮ್ಮ ಯಾವುದೇ ಖಾತೆಗೆ ಹ್ಯಾಕರ್ಗಳು ಕನ್ನ ಹಾಕಿದ್ದರೆ, ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣ ಲಪಟಾಸಿದ್ದರೆ ನಿಮ್ಮ ಖಾತೆಗಳ ಪಾಸ್ವರ್ಡ್ಗಳನ್ನು ಕೂಡಲೇ ಬದಲಾಯಿಸಿ.



