ಮೊಬೈಲ್ನಲ್ಲೇ ಸೈಬರ್ ವಂಚಕರಿದ್ದಾರೆ, ಎಚ್ಚರ!
ಸೈಬರ್ ಕಳ್ಳರ ಕರಾಳ ಮುಖ
ಡಾ.ರಮೇಶ್ ನಿಂಬೆಮರದಳ್ಳಿ
ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಸೈಬರ್ದಾಳಿ, ಸೈಬರ್ ಸೆಕ್ಯೂರಿಟಿ, ಸೈಬರ್ ವಂಚನೆ, ಸೈಬರ್ ಅಟ್ಯಾಕ್ ಎಂಬ ಸುದ್ದಿಗಳು ಸಾಮಾನ್ಯವಾಗಿವೆ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಸೈಬರ್ ದಾಳಿಗಳು ಹೆಚ್ಚಿರುವುದೇ ಇದಕ್ಕೆ ಕಾರಣ. ಇತ್ತೀಚೆಗೆ ಚೀನಾದ ಹ್ಯಾಕರ್ಗಳು ಅಮೆರಿಕದ ದೊಡ್ಡ ಟೆಲಿಕಾಂ ಕಂಪನಿಗಳು ಮತ್ತು ಸರಕಾರದ ಖಜಾನೆಯನ್ನೇ ಹ್ಯಾಕ್ ಮಾಡಿದ್ದ ಸುದ್ದಿಯನ್ನು ಓದಿದ್ದೇವೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಇಸ್ರೇಲ್ ಸೈಬರ್ ದಾಳಿಯನ್ನು ಒಂದು ಯುದ್ಧ ತಂತ್ರವಾಗಿ ಬಳಸಿದ್ದನ್ನೂ ನಾವು ಗಮನಿಸಿದ್ದೇವೆ.
ಭಾರತದಲ್ಲೂ ಸೈಬರ್ ಅಪರಾಧಗಳು ವಿಪರೀತ ಎನ್ನುವಷ್ಟು ಹೆಚ್ಚಿವೆ. ಫೋನ್ ಕರೆಗಳ ಮೂಲಕ ನಿಮ್ಮನ್ನು ಸೈಬರ್ ಅರೆಸ್ಟ್ ಮಾಡಿದ್ಧೇವೆ ಎನ್ನುವ ಧಮಕಿಗಳು ಸರ್ವೇಸಾಮಾನ್ಯವಾಗಿವೆ. ಸೈಬರ್ ವಂಚನೆ ಭಾರತದಲ್ಲೀಗ ವ್ಯಕ್ತಿಗತ ಸಮಸ್ಯೆಯಾಗಿ ಉಳಿದಿಲ್ಲ. ಬದಲಿಗೆ, ದೇಶದ ದೊಡ್ಡ ಸಮಸ್ಯೆಯ ರೂಪ ಪಡೆದಿದೆ. 2024ರಲ್ಲಿ 17 ಲಕ್ಷಕ್ಕೂ ಹೆಚ್ಚು ಸೈಬರ್ ಅಪರಾಧದ ದೂರುಗಳು ಭಾರತದಲ್ಲಿ ದಾಖಲಾಗಿವೆ. ಸುಮಾರು 22,800 ಕೋಟಿ ರೂಗಳಿಗೆ ಹೆಚ್ಚು ಜನರ ಹಣ ಸೈಬರ್ ವಂಚಕರ ಪಾಲಾಗಿದೆ. ಎಸ್ಎಂಎಸ್ ಕಳಿಸಿ ಕ್ಲಿಕ್ ಮಾಡುವಂತೆ ಒತ್ತಾಯಿಸುವುದು, ಫೋನ್ ಮಾಡಿ ಬ್ಯಾಂಕ್ನ ಸಿಬ್ಬಂದಿ ಎಂದು ನಂಬಿಸಿ ಓಟಿಪಿ ಕೇಳುವುದು, ವಾಟ್ಸ್ಆ್ಯಪ್ಗೆ ಮೆಸೇಜ್ ಕಳಿಸಿ ನೀವು ಲಾಟರಿಯಲ್ಲಿ ಗೆದ್ದಿದ್ದೀರಿ. ಅದನ್ನು ನಿಮ್ಮದಾಗಿಸಿಕೊಳ್ಳಲು ಕೂಡಲೇ ಲಿಂಕ್ ಕ್ಲಿಕ್ ಮಾಡಿ ಎಂಬಂತಹ ವಂಚನೆಗಳೆಲ್ಲ ಸೈಬರ್ ವಂಚನೆಯ ವಿವಿಧ ಮುಖಗಳೇ ಆಗಿವೆ.
ಸೈಬರ್ ವಂಚಕರ ಕರಾಳ ಮುಖಗಳು
ಸೈಬರ್ ವಂಚಕರಿಗೆ ಹಲವು ಮುಖಗಳು, ಹಲವು ದಾರಿಗಳು. ಕೆಲವು ಕಳ್ಳದಾರಿಗಳು ಜನರಿಗೆ ತಿಳಿದು ಅವರು ಎಚ್ಚೆತ್ತುಕೊಳ್ಳುವ ಹೊತ್ತಿಗೆ ವಂಚಕರು ಹೊಸ ದಾರಿಗಳನ್ನು ಹುಡುಕಿಕೊಂಡಿರುತ್ತಾರೆ. ಇಮೇಲ್, ಎಸ್ಎಂಎಸ್ ಮೂಲಕ ಅಮಾಯಕರಿಗೆ ಗಾಳ ಹಾಕುವುದು ಮೊದಲಿಂದಲೂ ಇತ್ತು. ಆದರೆ, ಓಟಿಪಿ ವ್ಯವಸ್ಥೆ ಬಂದಾಗಿನಿಂದ ಓಟಿಪಿ ಹೆಸರಿನಲ್ಲಿ ಅಕ್ರಮ ಜಾಸ್ತಿಯಾಗಿದೆ. ಇತ್ತೀಚೆಗೆ ಸೈಬರ್ ಅರೆಸ್ಟ್ ಎನ್ನುವ ಹೊಸ ವಂಚನೆ ಭಾರತದ ಬಹುತೇಕರನ್ನು ಬಾಧಿಸುತ್ತಿದೆ. ಹೀಗಾಗಿ ನಾವು ಸೈಬರ್ ವಂಚಕರು ಬಳಸುವ ಕಳ್ಳ ದಾರಿಗಳನ್ನು ಅರಿತುಕೊಳ್ಳಬೇಕು. ಅವರು ಬಳಸುವ ಹೊಸ ತಂತ್ರಗಳನ್ನೂ ತಿಳಿಯಬೇಕು. ಆಗ ಮಾತ್ರ ವಂಚನೆಗೆ ಒಳಗಾಗದೆ ಉಳಿಯಲು ಸಾಧ್ಯ.
ಕರೆ ಮತ್ತು ಎಸ್ಎಂಎಸ್ ಮೂಲಕ ವಂಚನೆ: ‘ನೀವು ಲಾಟರಿ ಗೆದ್ದಿದ್ದೀರಿ,’ ‘ನಿಮ್ಮ ಬ್ಯಾಂಕ್ ಖಾತೆಯನ್ನು ಲಾಕ್ ಮಾಡಲಾಗಿದ್ದು, ಅದನ್ನು ಅನ್ಲಾಕ್ ಮಾಡಲು ಲಿಂಕ್ ಕ್ಲಿಕ್ ಮಾಡಿ,’ ಅದನ್ನು ನಿಮ್ಮದಾಗಿಸಿಕೊಳ್ಳಲು ಲಿಂಕ್ ಕ್ಲಿಕ್ ಮಾಡಿ ಎಂಬ ಮೆಸೇಜುಗಳು ಎಸ್ಎಂಎಸ್ ಮತ್ತು ವಾಟ್ಸ್ಆ್ಯಪ್ಗೆ ಬರುತ್ತವೆ.
ಕಷ್ಟದಲ್ಲಿ ನೆರವು ಕೇಳುವ ವಂಚನೆ: ನಿಮ್ಮ ಪರಿಚಯಸ್ತರು, ಸ್ನೇಹಿತರು, ಸಹೋದ್ಯೋಗಿಗಳು ಅಷ್ಟೇ ಏಕೆ ನಿಮ್ಮ ಬಾಸ್ಗಳ ಹೆಸರಿನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ಗಳ ಮೂಲಕ ಮೆಸೇಜ್ ಮಾಡಿ ‘ತಾವು ವಿಪರೀತ ಕಷ್ಟದಲ್ಲಿದ್ದು ಕೂಡಲೇ ಸಾಧ್ಯವಾದಷ್ಟು ಹಣ ಸಹಾಯ ಮಾಡಿ’ ಎಂದು ಕೇಳುತ್ತಾರೆ.
· ಪಿಶಿಂಗ್ ಮತ್ತು ಇಮೇಲ್ ಮೋಸಗಳು: ವಂಚಕರು ವಿಶ್ವಾಸಾರ್ಹ ಸಂಸ್ಥೆಗಳ ಹೆಸರಿನಲ್ಲಿ ಸುಳ್ಳು ಇಮೇಲ್ಗಳನ್ನು ಕಳುಹಿಸಿ ಪಾಸ್ವರ್ಡ್ಗಳು, ಕ್ರೆಡಿಟ್ ಕಾರ್ಡ್ ವಿವರಗಳು ಅಥವಾ ಇನ್ನಿತರೇ ಸೂಕ್ಷ್ಮ ಮತ್ತು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ.
· ಕ್ರೆಡಿಟ್ ಕಾರ್ಡ್ ವಂಚನೆ: ಬ್ಯಾಂಕ್ ಸಿಬ್ಬಂದಿಯ ಹೆಸರಿನಲ್ಲಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ವಿವರ ಪಡೆಯುತ್ತಾರೆ. ಇಲ್ಲವೇ ನಕಲಿ ವೆಬ್ಸೈಟ್ಗಳ ಮೂಲಕವೂ ಈ ವಿವರವನ್ನು ಕದಿಯುತ್ತಾರೆ. ಬಳಿಕ ಅದೇ ಕ್ರೆಡಿಟ್ ಕಾರ್ಡ್ ಬಳಸಿ ನಿಮ್ಮ ಹೆಸರಿನಲ್ಲಿ ಖರೀದಿಗಳನ್ನು ಮಾಡುತ್ತಾರೆ. ಆದರೆ ಆ ಸಾಲದ ಹೊರೆ ಮಾತ್ರ ನಿಮ್ಮ ಮೇಲೆ. ಜೊತೆಗೆ, ಕರೆ ಇಲ್ಲವೇ ಇಮೇಲ್ಗಳ ಮೂಲಕ ನಿಮ್ಮ ಆನ್ಲೈನ್ ಬ್ಯಾಂಕಿಂಗ್ ವಿವರ ಕದ್ದು ಬ್ಯಾಂಕ್ನಿಂದ ಹಣವನ್ನು ತಮ್ಮ ಖಾತೆಗೆಳಿಗೆ ವರ್ಗಾಯಿಸಿಕೊಳ್ಳುತ್ತಾರೆ.
· ನಕಲಿ ಜಾಹೀರಾತುಗಳ ವಂಚನೆ:
o ಗಣ್ಯಾರ ಹೆಸರಿನಲ್ಲಿ ಡೀಪ್ಫೇಕ್ ತಂತ್ರಜ್ಞಾನದ ಮೂಲಕ ನಕಲಿ ವೀಡಿಯೊ ಸೃಷ್ಟಿಸಿ ಸ್ಟಾಕ್ನಲ್ಲಿ ಹೂಡಿಕೆ ಮಾಡುವಂತೆ ಮರುಳು ಮಾಡಿ ವಂಚಿಸಲಾಗುತ್ತದೆ.
o ಸೆಲೆಬ್ರಿಟಿಗಳ ಹೆಸರಿನಲ್ಲಿ ಮತ್ತು ಸುಂದರ ಹುಡುಗಿಯರ ರೂಪದಲ್ಲಿ ಸುಳ್ಳು ಪ್ರೊಫೈಲ್ ಸೃಷ್ಟಿಸಿ ಅವರ ಖಾತೆಗಳನ್ನು ಫಾಲೋ ಮಾಡುವವರನ್ನು ವಂಚಿಸುತ್ತಾರೆ. ವೈಯಕ್ತಿಕ ಮತ್ತು ಫೋಟೋಗಳನ್ನು ಬಳಸಿ ಆಕ್ಷೇಪಾರ್ಹ ರೀತಿಯಲ್ಲಿ ನಕಲಿ ಫೋಟೋ, ವೀಡಿಯೊಗಳನ್ನು ಸೃಷ್ಟಿಸಿ ಹಣ ನೀಡುವಂತೆ ಪೀಡಿಸುತ್ತಾರೆ. ಹಣ ನೀಡಲು ಒಪ್ಪದಿದ್ದರೆ ಮಾಹಿತಿಯನ್ನು ವೈರಲ್ ಮಾಡುವುದಾಗಿ ಬೆದರಿಸುತ್ತಾರೆ.
o ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ಸ್ನೇಹಿತರನ್ನು ಗಳಿಸಿ, ಒಂಟಿತನ ಹೋಗಲಾಡಿಸಲು ಸಂಗಾತಿಯನ್ನು ಪಡೆಯಿರಿ ಎಂಬಂತಹ ಜಾಹೀರಾತುಗಳ ಮೂಲಕ ವಂಚನೆಗಳು ನಡೆಯುತ್ತಿವೆ. ಆ್ಯಪ್ಗಳಿಗೆ ರಿಜಿಸ್ಟರ್ ಆದವರನ್ನು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಲಾಗುತ್ತದೆ.
· ರ್ಯಾನ್ಸಮ್ವೇರ್ ದಾಳಿಗಳು: ನಿಮ್ಮ ಅರಿವೇ ಇಲ್ಲದೆ ನೀವು ಮಾಡುವ ಆ್ಯಪ್ ಅಥವಾ ಸಾಫ್ಟ್ವೇರ್ ಡೌನ್ಲೋಡ್ಗಳ ಜೊತೆಗೆ ಮಾಲ್ವೇರ್ಗಳನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ಗಳಲ್ಲಿ ಇನ್ಸ್ಟಾಲ್ ಮಾಡಿ ಗೌಪ್ಯ ಮಾಹಿತಿ ಕದಿಯುತ್ತಾರೆ. ಇಲ್ಲವೇ ನಿಮ್ಮ ಕಂಪ್ಯೂಟರ್ ಬ್ಲಾಕ್ ಮಾಡಿ ಹಣ ಕೊಟ್ಟರೆ ಮಾತ್ರ ಅನ್ಬ್ಲಾಕ್ ಮಾಡುವುದಾಗಿ ಬೇಡಿಕೆ ಇಡುತ್ತಾರೆ.
· ಲೈಂಗಿಕ ಕಿರುಕುಳ: ಸೋಷಿಯಲ್ ಮೀಡಿಯಾಗಳಲ್ಲಿ ದೊರೆಯುವ ಅಮಾಯಕ ಮಹಿಳೆಯರು ಮತ್ತು ಮಕ್ಕಳ ಫೋಟೋ, ವೀಡಿಯೊಗಳನ್ನು ಬಳಸಿ ಕೆಟ್ಟದಾಗಿ ವೀಡಿಯೊ ಮಾಡಲಾಗುತ್ತದೆ. ಬಳಿಕ ಹಣ ಮತ್ತು ಲೈಂಗಿಕ ಕ್ರಿಯೆಗೆ ಬೇಡಿಕೆ ಇಡುತ್ತಾರೆ. ಒಪ್ಪದಿದ್ದಾಗ ಆನ್ಲೈನ್ನಲ್ಲಿ ಮಾನ ಹರಾಜು ಹಾಕುವ ಕೃತ್ಯಗಳಿಗೆ ಮುಂದಾಗುತ್ತಾರೆ.
· ಅಕೌಂಟ್ ಹ್ಯಾಕ್: ಹ್ಯಾಕರ್ಗಳು ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿದ್ದ ಮೂಲ ವಿಷಯಗಳನ್ನು ಅಳಿಸಿ ಅಲ್ಲಿ ಅಶ್ಲೀಲ ಇಲ್ಲವೇ ಅಕ್ರಮವಾದ ಮಾಹಿತಿಯನ್ನು ಹಾಕುತ್ತಾರೆ. ಇದರಿಂದ ಖಾತೆಯಲ್ಲಿದ್ದ ನಮ್ಮ ಅಮೂಲ್ಯ ನೆನಪುಗಳನ್ನು ಕಳೆದುಕೊಳ್ಳುವ ಅಪಾಯ ಒಂದೆಡೆಯಾದರೆ, , ಅಕ್ರಮದ ಕಾರಣಕ್ಕೆ ಮೂಲಕ ಶಿಕ್ಷೆಗೂ ಗುರಿಯಾಗುವ ಸಂಭವ ಇರುತ್ತದೆ.
ಸೈಬರ್ ವಂಚನೆಗಳಿಂದ ಪಾರಾಗುವುದು ಹೇಗೆ?
ಸೈಬರ್ ವಂಚಕರಿಂದ ಪಾರಾಗಲು ಹಲವು ದಾರಿಗಳಿವೆ. ನಮ್ಮ ಎಲ್ಲಾ ವಹಿವಾಟುಗಳು ಮತ್ತು ಆನ್ಲೈನ್ ನಡವಳಿಕೆಗಳಲ್ಲಿ ಜಾಗರೂಕರಾಗಿರುವುದು ಮೊದಲ ದಾರಿ. ಇದರ ಹೊರತಾಗಿ ಈ ಕೆಳಗಿನ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಿದರೆ ವಂಚನೆಯಿಂದ ದೂರ ಉಳಿಯಬಹುದು.
· ನಿಮ್ಮ ಸಾಧನಗಳಿಗೆ ಭದ್ರತೆಯ ಬೇಲಿ ಹಾಕಿ: ನಿಮ್ಮ ಕಂಪ್ಯೂಟರ್ ಮತ್ತು ಮೊಬೈಲ್ಗಳಿಗೆ ಕಡ್ಡಾಯವಾಗಿ ಆ್ಯಂಟಿವೈರಸ್ ಬಳಸಿ. ಸಾವಿರಾರು ರೂಪಾಯಿ ಕೊಟ್ಟು ತಂದ ಸಾಧನಕ್ಕೆ ಸಾವಿರ ರೂಪಾಯಿಗೂ ಕಡಿಮೆ ಹಣಕ್ಕೆ ದೊರೆಯಬಹುದಾದ ಆ್ಯಂಟಿವೈರಸ್ ಹಾಕದೆ ಇರಬೇಡಿ. ಫೈರ್ವಾಲ್ಗಳನ್ನು ತಪ್ಪದೇ ಬಳಸಿ.
· ಸಾಫ್ಟ್ವೇರ್ ನವೀಕರಿಸಿ: ನಿಮ್ಮ ಆಪರೇಟಿಂಗ್ ಸಿಸ್ಟಮ್ಗಳು, ಬ್ರೌಜರ್ಗಳು ಮತ್ತು ಯಾವುದೇ ಅಪ್ಲಿಕೇಶನ್ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಿರಿ. ಹಳೆಯ ಅಪ್ಲಿಕೇಶನ್ಗಳು ವಂಚಕರು ಒಳನುಗ್ಗಲು ಸುಲಭ ದಾರಿಯಾಗುತ್ತವೆ.
· ವೈಯಕ್ತಿಕ ಮಾಹಿತಿ ರಹಸ್ಯವಾಗಿಡಿ: ನಿಮ್ಮ OTP, ಪಾಸ್ವರ್ಡ್ಗಳು ಮತ್ತು ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಜೊತೆಗೆ, ಸಾಮಾಜಿಕ ಮಾಧ್ಯಮಗಳಲ್ಲಿ ತೀರಾ ವೈಯಕ್ತಿಕ ವಿವರಗಳು, ಮೊಬೈಲ್ ನಂಬರ್ ಶೇರ್ ಮಾಡಬೇಡಿ. ಖಾಸಗಿ ಫೋಟೊ, ವೀಡಿಯೊಗಳನ್ನು ಪೋಸ್ಟ್ ಮಾಡುವಾಗ ಯೋಚಿಸಿ.
· ಬಲವಾದ ಪಾಸ್ವರ್ಡ್ ಬಳಸಿ: ನಿಮ್ಮ ಇಮೇಲ್ ಖಾತೆ, ಬ್ಯಾಂಕ್ ಖಾತೆಗಳೂ ಸೇರಿದಂತೆ ಎಲ್ಲಾ ಆನ್ಲೈನ್ ಲಾಗಿನ್ಗಳಿಗೆ ಕ್ಲಿಷ್ಟವಾಗಿರುವ ಮತ್ತು ಸುಲಭವಾಗಿ ಊಹಿಸಲು ಸಾಧ್ಯವಾಗದ ವಿಶಿಷ್ಟ ಪಾಸ್ವರ್ಡ್ಗಳನ್ನು ಬಳಸಿ. ಹೆಸರುಗಳು, ಜನ್ಮದಿನಾಂಕಗಳು ಅಥವಾ ಸಾಮಾನ್ಯ ಪದಗಳನ್ನು ಪಾಸ್ವರ್ಡ್ಗಳಾಗಿ ಬಳಸಬೇಡಿ. ಇವುಗಳನ್ನು ಊಹಿಸುವುದು ಕಳ್ಳರಿಗೆ ನೀರು ಕುಡಿದಷ್ಟು ಸುಲಭ.
· ಎರಡು ಹಂತದ ದೃಢೀಕರಣ (2FA) ಸಕ್ರಿಯಗೊಳಿಸಿ: ಅವಕಾಶ ಇರುವ ಎಲ್ಲಾ ಆನ್ಲೈನ್ ಖಾತೆಗೂ ಎರಡು ಹಂತದ ದೃಢೀಕರಣ ವ್ಯವಸ್ಥೆಯನ್ನು ಸಕ್ರಿಯಗೊಳಿಸಿ. ಇದು ಲಾಗಿನ್ ಮಾಡಲು ಪಾಸ್ವರ್ಡ್ನ ಜೊತೆಗೆ ಓಟಿಪಿ ನಮೂದಿಸುವುದನ್ನು ಕಡ್ಡಾಯಗೊಳಿಸುತ್ತದೆ. ಇದರಿಂದ ಕಳ್ಳರು ಪಾಸ್ವರ್ಡ್ ಕದ್ದರೂ ಓಟಿಪಿ ಇಲ್ಲದೇ ನಿಮ್ಮ ಖಾತೆಗೆ ಲಾಗಿನ್ ಆಗಲು ವಿಫಲರಾಗುತ್ತಾರೆ.
· ಉಚಿತ ವೈಫೈ ಬಳಸುವಾಗ ಎಚ್ಚರವಿರಲಿ: ರೈಲು, ಬಸ್ ನಿಲ್ದಾಣ, ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ದೊರೆಯುವ ವೈಫೈಗಳನ್ನು ಬಳಸುವಾಗ ಜಾಗರೂಕರಾಗಿರಿ. ಹಾಗೆ ವೈಫೈ ಬಳಸಲು ನೀವು ನೀಡುವ ಮಾಹಿತಿಯನ್ನು ಕಳ್ಳರು ಕದ್ದು ಅದನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ. ವಿಶೇಷವಾಗಿ ಅಂಥ ವೈಫೈ ಬಳಸಿ ಯಾವುದೇ ಆರ್ಥಿಕ ವಹಿವಾಟು ಮಾಡಲೇಬೇಡಿ.
· ಪಿಶಿಂಗ್ ಇಮೇಲ್ಗಳ ಬಗ್ಗೆ ಹುಷಾರ್: ಅನಪೇಕ್ಷಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅನಪೇಕ್ಷಿತ ಚಿತ್ರ, ವೀಡಿಯೊಗಳನ್ನು ಡೌನ್ಲೋಡ್ ಮಾಡಬೇಡಿ. ಇಮೇಲ್ ಕಳುಹಿಸಿದವರ ವಿಳಾಸದ ಸಾಚಾತನ ಪರಿಶೀಲಿಸಿ. ಅವರ ಇಮೇಲ್ನ ವಿಷಯ, ಭಾಷೆ ಮತ್ತು ಸಿಗ್ನೇಚರ್ ಅನ್ನು ಸೂಕ್ಷ್ಮವಾಗಿ ಗಮನಿಸಿ. ಅದು ಕಳ್ಳರ ವೃತ್ತಿಪರವಲ್ಲದ ನಡೆಯನ್ನು ಸಾರಿ ಹೇಳುತ್ತದೆ.
· ಸಂಶಯಾಸ್ಪದ ಕರೆಗಳಿಗೆ ಕಿವಿಗೊಡಬೇಡಿ: ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳು ಮತ್ತು ಎಸ್ಎಂಎಸ್ಗಳನ್ನು ನಂಬಬೇಡಿ. ವಾಟ್ಸಾಪ್ನಲ್ಲಿ ಬರುವ ಲಿಂಕ್ಗಳನ್ನು ತೆರೆಯುವ ಮೊದಲು ಅದರ ಸಾಚಾತನವನ್ನು ಪರಿಶೀಲಿಸಿ.
· ಸುರಕ್ಷತೆಯ ಅರಿವಿರಲಿ: ಹೊಸ ರೀತಿಯ ಸೈಬರ್ ಅಪರಾಧಗಳ ಬಗ್ಗೆ ಅರಿವು ಬೆಳೆಸಿಕೊಳ್ಳಿ. ಅಲ್ಲದೆ, ಆನ್ಲೈನ್ನಲ್ಲಿ ಸುರಕ್ಷಿತವಾಗಿ ವ್ಯವಹರಿಸುವ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದನ್ನು ಮರೆಯಬೇಡಿ.
ವಂಚನೆಗೆ ಒಳಗಾದಾಗ ಏನು ಮಾಡಬೇಕು?
ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ವಂಚಕರು ಬೀಸಿದ ಬಲೆಗೆ ಬಿದ್ದುಬಿಡುತ್ತೇವೆ. ಅರಿವಿದ್ದೋ, ಇಲ್ಲದೆಯೋ ಮೋಸ ಹೋಗಿರುತ್ತೇವೆ. ಅಂಥ ಸಂದರ್ಭದಲ್ಲಿ ಹೀಗಾಯಿತಲ್ಲ ಎಂದು ಕೊರಗದೆ ಮುಂದಿನ ದೊಡ್ಡ ಅನಾಹುತ ತಡೆಯಲು ತಕ್ಷಣವೇ ಕಾರ್ಯಪ್ರವೃತ್ತರಾಗಿ.
· ತಕ್ಷಣವೇ ಬ್ಯಾಂಕ್ ಅಥವಾ ಸೇವಾದಾತರನ್ನು ಸಂಪರ್ಕಿಸಿ ನಿಮ್ಮ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ಮನವಿ ಮಾಡಿ.
ಮೋಸ ಹೋಗಿದ್ದು ಗೊತ್ತಾದ ಕೂಡಲೇ ಕೇಂದ್ರ ಸರಕಾರದ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಗೆ (https://cybercrime.gov.in/) ಭೇಟಿ ನೀಟಿ ದೂರು ದಾಖಲಿಸಿ.
· ನ್ಯಾಷನಲ್ ಸೈಬರ್ ಕ್ರೈಮ್ ಹೆಲ್ಪ್ಲೈನ್ 1930 ಗೆ ಕರೆ ಮಾಡಿಯೂ ದೂರು ದಾಖಲಿಸಬಹುದು.
· ನಿಮ್ಮ ಯಾವುದೇ ಖಾತೆಗೆ ಹ್ಯಾಕರ್ಗಳು ಕನ್ನ ಹಾಕಿದ್ದರೆ, ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣ ಲಪಟಾಸಿದ್ದರೆ ಕೂಡಲೇ ನಿಮ್ಮ ಪಾಸ್ವರ್ಡ್ಗಳನ್ನು ಬದಲಾಯಿಸಿ.
ಸೈಬರ್ ಕಳ್ಳರು ನಿರಂತರವಾಗಿ ಹೊಸ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. AI (ಕೃತಕ ಬುದ್ಧಿಮತ್ತೆ) ಮತ್ತು ಮಷೀನ್ ಲರ್ನಿಂಗ್ ಬಳಸಿ, ಅವರು ಇನ್ನೂ ಸೂಕ್ಷ್ಮವಾದ ವಂಚನೆಯ ಜಾಲಗಳನ್ನು ಹೆಣೆಯುತ್ತಿದ್ದಾರೆ. ‘ಡೀಪ್ಫೇಕ್’ ತಂತ್ರಜ್ಞಾನದ ಮೂಲಕ, ಅವರು ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಧ್ವನಿಯನ್ನು ನಕಲು ಮಾಡಿ, ನಿಮ್ಮಿಂದ ಹಣವನ್ನು ವಂಚಿಸಲೂಬಹುದು. ಇಂಥ ಯಾವುದೇ ರೀತಿಯ ವಂಚನೆಗೂ ನಿಮ್ಮ ಜಾಗೃತಿಯೇ ಉತ್ತರ. ಜೊತೆಗೆ, ವಂಚನೆ ನಡೆದಾಗ ತಕ್ಷಣವೇ ಕಾರ್ಯಪ್ರವೃತ್ತರಾದರೆ ಹೆಚ್ಚಿನ ಅನಾಹುತ ತಪ್ಪಿಸಬಹುದು.



