ಕೇಳಿದ್ದನ್ನು ಕಲಿಸುವ ಮನುಕುಲದ ಮಹಾಗುರು AI ಗೆ ನಮನ
ಎಐ ಒಂದು ತಂತ್ರಜ್ಞಾನ ಮಾತ್ರವಲ್ಲ, ಮನುಕುಲಕ್ಕೆ ದೊರೆತ ವರ
ಇಂದು ಶಿಕ್ಷಕರ ದಿನಾಚರಣೆ. ಎಲ್ಲರೂ ತಮ್ಮ ಮೇಷ್ಟ್ರುಗಳಿಗೆ ವಂದನೆ ಸಲ್ಲಿಸುತ್ತಿದ್ದಾರೆ. ನಾನೂ ನನಗೆ ವಿದ್ಯೆ ಕಲಿಸಿದ, ಬುದ್ಧಿ ಹೇಳಿದ, ಮಾರ್ಗದರ್ಶನ ಮಾಡಿದ ಗುರುಗಳಿಗೆ ನಮನ ಸಲ್ಲಿಸಿದ್ದೇನೆ. ಆದರೆ, ಒಬ್ಬ ಮಹಾಗುರುವಿಗೆ ನಮನ ಸಲ್ಲಿಸುವುದು ಬಾಕಿ ಇತ್ತು. ಅವರಿಗೆ ಹೇಗೆ ಗೌರವ ಸಲ್ಲಿಸಲಿ ಎಂದು ಯೋಚಿಸುತ್ತಾ ಇದ್ದಾಗ ಅವರ ಮಹತ್ವವನ್ನು ಬರೆದು ಇತರರಿಗೂ ತಿಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಯೋಚನೆ ಬಂತು. ಅದೇ ಸರಿಯಾದ ಮಾರ್ಗ ಎಂದೂ ಅನಿಸಿತು.
ಹಾಗಿದ್ದರೆ ನಾನು ಸೂಚಿಸುತ್ತಿರುವ ಆ ಮಹಾಗುರು ಯಾರು? ಅವರಿಗೇಗೆ ಮಹಾಗುರುವಿನ ಪಟ್ಟ ಎಂಬ ಯೋಚನೆ ಬಂದಿರಲು ಸಾಧ್ಯ. ಇದಕ್ಕೆಲ್ಲ ಮುಂದಿನ ಬರಹದಲ್ಲಿ ಉತ್ತರಿಸುತ್ತೇನೆ. ನಾನು ನಮಿಸಲು ಬಯಸುವ ಮಹಾಗುರು ಬೇರೆ ಯಾರೂ ಅಲ್ಲ "ಕೃತಕ ಬುದ್ಧಿಮತ್ತೆ" ಅಥವಾ "ಎಐ" ತಂತ್ರಜ್ಞಾನ. ಎಐ ಎನ್ನುವುದು ಮನುಕುಲದ ಮಹಾ ತಂತ್ರಜ್ಞಾನ. ಈವರೆಗಿನ ಎಲ್ಲಾ ಆವಿಷ್ಕಾರಗಳ ಮಾತೃ. ಅಷ್ಟು ಮಾತ್ರವಲ್ಲ ಇದು ಮನುಷ್ಯನ ಕೊನೆಯ ಆವಿಷ್ಕಾರವೂ ಹೌದು ಎನ್ನಲಾಗುತ್ತಿದೆ. ಆದಿಮಾನವ ನಾಗರಿಕನಾದ ಕಾಲದಿಂದಲೂ ಸಾವಿರಾರು ಆವಿಷ್ಕಾರಗಳನ್ನು ಮಾಡಿದ್ದಾನೆ. ಅವು ಮನುಷ್ಯನ ದಿಕ್ಕು ದೆಸೆಗಳನ್ನೆ ಬದಲಿಸಿವೆ. ಆದರೆ ಎಲ್ಲ ಅನ್ವೇಷಣೆ, ಆವಿಷ್ಕಾರಗಳಿಗಿಂತ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನವೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್.
ಈವರೆಗೆ ಬಂದಿರುವ ತಂತ್ರಜ್ಞಾನಗಳು ಮನುಷ್ಯ ಸಮಾಜವನ್ನು, ಬದುಕಿನ ರೀತಿ ನೀತಿಗಳನ್ನು ಬದಲಾಯಿಸಿವೆ. ಭೂಮಿ, ಬ್ರಹ್ಮಾಂಡದ ಕುರಿತ ನಮ್ಮ ತಿಳಿವಳಿಕೆಯನ್ನು ಬದಲಾಯಿಸಿವೆ ಮತ್ತು ವಿಸ್ತರಿಸಿವೆ. ಆದರೆ, ಎಐ ತಂತ್ರಜ್ಞಾನ ಮಾತ್ರ ಮನುಷ್ಯನ ಮೂಲ ಅಸ್ತಿತ್ವವನ್ನೇ ಬದಲಾಯಿಸುವ ಶಕ್ತಿ ಹೊಂದಿದೆ. ಎಂದರೆ ಮುಂದಿನ ದಶಕಗಳಲ್ಲಿ ಮನುಷ್ಯನ ಬದುಕು, ರೂಪ, ಶಕ್ತಿ ಸಾಮರ್ಥ್ಯಗಳು, ವ್ಯವಹರಿಸುವ ರೀತಿ ಈಗಿನಂತಿರುವುದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಮನುಷ್ಯನೇ ಪೂರ್ತಿಯಾಗಿ ರೂಪಾಂತರವಾಗುವ ಎಲ್ಲಾ ಸಾಧ್ಯತೆಗಳಿವೆ. ಮನುಷ್ಯೋತ್ತರ ಕಾಲಘಟ್ಟ ಎಂಬ ಹೊಸ ಕಾಲಘಟ್ಟದ ಸೃಷ್ಟಿಯಾಗಿದ್ದು, ಆ ಕುರಿತು ಚರ್ಚೆಗಳು ಶುರುವಾಗಿವೆ. ಇದು ಎಐ ಮನುಷ್ಯ ಮತ್ತು ಅವನ ಬದುಕಿನ ಮೇಲೆ ಉಂಟು ಮಾಡುವ ಅಗಾಧ ಪರಿಣಾಮ.
ಇಂದಿನ ಸಂದರ್ಭದ ಕುರಿತೇ ಮಾತನಾಡುವುದಾದರೆ, ಈಗಾಗಲೆ ಎಐ ಗುರುವಿನ ಸ್ಥಾನವನ್ನು ಅಲಂಕರಿಸಿದೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಬಹುತೇಕ ಯಾವುದೇ ರೀತಿಯ ಗೊಂದಲಗಳಿಗೆ ಸ್ಪಷ್ಟನೆ ನೀಡುತ್ತದೆ. ಬಹುತೇಕ ಭೂಮಿಯ ಮೇಲಿನ ಯಾವುದೇ ಜ್ಞಾನದ ಬಗ್ಗೆ ತಿಳಿವಳಿಕೆ ನೀಡುತ್ತದೆ. ಎಂದರೆ, ನಮಗೆ ಗೊತ್ತಿಲ್ಲದ ಯಾವುದೇ ವಿಚಾರದ ಬಗ್ಗೆ ಎಐನಿಂದ ಕಲಿಯಬಹುದು. ಸ್ನೇಹಿತನಂತೆ ಹರಟೆ ಹೊಡೆಯಬಹುದು. ಸಂಗಾತಿಯಂತೆ ಆಪ್ತ ಮಾತುಕತೆಯಲ್ಲಿ ತೊಡಗಬಹುದು. ಒಬ್ಬ ತಜ್ಞ ಸಲಹೆಗಾರನ ಹಾಗೆ ಬೇಕಾದ ವಿಚಾರದ ಬಗ್ಗೆ ಸಲಹೆ ನೀಡಬಲ್ಲದು. ಒಂದು ವಿಚಾರದ ಕುರಿತು ಆಳವಾಗಿ ಚಿಂತಿಸಬಯಸಿದರೆ ಒಬ್ಬ ಪಂಡಿತನಂತೆ ಗಹನ ಚರ್ಚೆಯಲ್ಲಿ ತೊಡಗಬಲ್ಲದು. ಇಷ್ಟೆಲ್ಲಾ ವಿವಿಧ ಅವತಾರಗಳಲ್ಲಿ ನಮಗೆ ನೆರವಾಗುತ್ತಿರುವ ಎಐ ನನ್ನ ದೃಷ್ಟಿಯಲ್ಲಿ ಇಡೀ ಮನುಕುಲಕ್ಕೇ ಮಹಾಗುರು. ಎಐನಿಂದ ಸಾಧ್ಯವಾಗಬಲ್ಲ ಮಹಾಕೆಲಸಗಳ ಬಗ್ಗೆ ಏನೂ ಹೇಳಿಲ್ಲ. ಇಲ್ಲಿ ಹೇಳಿರುವುದು ಕೇವಲ ಟಿಪ್ ಆಫ್ ದಿ ಐಸ್ಬರ್ಗ್. ಎಐನ ನಿಜ ಸಾಧ್ಯತೆಗಳು ಮುಂದಿನ ದಿಗನಳಲ್ಲಿ ತೆರೆದುಕೊಳ್ಳಲಿವೆ. ಇದರಿಂದ ಅಪಾಯಗಳೇನು ಇಲ್ಲವೆಂದಲ್ಲ. ಆದರೆ ಇದು ನಾವು ಈ ಮಹಾಗುರುವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರಲ್ಲಿ ಅಡಗಿದೆ.


