ಎಐಗೆ “ಸಂಸ್ಕಾರ” ಕಲಿಸುವವರು ಯಾರು?
ಮಾಡೆಲ್ ಅಭಿವೃದ್ದಿಯಲ್ಲಿ ಭಾಷಾ ವಿಭಾಗದ ಪಾತ್ರವೇ ನಿರ್ಣಾಯಕ
ಒಂದು ಎಐ ಮಾಡೆಲ್ನ ಅಭಿವೃದ್ಧಿ ಎಂದರೆ ಸಾಮಾನ್ಯವಾಗಿ ಬಹುತೇಕರಿಗೆ ನೆನಪಾಗುವುದು ಸಾಫ್ಟ್ವೇರ್ ಎಂಜಿನಿಯರ್ಗಳು. ಏಕೆಂದರೆ ಅವರ ಪ್ರಕಾರ ಎಐ ವ್ಯವಸ್ಥೆಗಳನ್ನು ರೂಪಿುವುದು ಅವರೇ. ಇನ್ನು ದೊಡ್ಡ ದೊಡ್ಡ ಪ್ರಾಜೆಕ್ಟ್ಗಳನ್ನು ಮುನ್ನಡೆಸಿದವರಿಗೆ ಎಐ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡುವ ತಂಡಗಳ ಸ್ವರೂಪ, ಗಾತ್ರ ಅರಿವಿರುತ್ತದೆ. ಅದರಲ್ಲಿ ಸಾಫ್ಟ್ವೇರ್ ಎಂಜಿನಿಯರಗಳು, ಯುಐ ಮತ್ತು ಎಐ ಎಂಜಿನಿನಿಯರ್ಗಳು, ಪ್ರಾಜೆಕ್ಟ್ ಮತ್ತು ಪ್ರಾಡಕ್ಟ್ ಮ್ಯಾನೇಜರ್ಗಳ ಹಲವು ತಂಡಗಳು ಸೇರಿಕೊಂಡು ಮಾಡೆಲ್ಗೆ ಜೀವ ತುಂಬುತ್ತಾರೆ. ಆದರೆ, ಪ್ರಾಜೆಕ್ಟ್ ಮ್ಯಾನೇಜರ್ಗಳನ್ನೂ ಒಳಗೊಂಡಂತೆ ಬಹುತೇಕರಿಗೆ ಒಂದು ಎಐ ಮಾಡೆಲ್/ಸಿಸ್ಟಮ್ ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರ ಏನು ಎಂಬುದರ ಸರಿಯಾದ ತಿಳಿವಳಿಕೆ ಇರುವುದಿಲ್ಲ. ನನಗೂ ಈ ಮೊದಲು ಅದೇ ತಿಳಿವಳಿಕೆಯಿತ್ತು. ಆದರೆ ಒಂದು ಎಐ ಮಾಡೆಲ್ ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರ ನಿರ್ಣಾಯಕ ಎಂಬುದು ಅರಿವಾಗಿದ್ದೇ ನಾನು ‘Qira AI Language Services’ ವಿಭಾಗದ ಮುಖ್ಯಸ್ಥನಾಗಿ ಕೆಲಸ ಆರಂಭಿಸಿದಾಗ. ಭಾಷಾ ವಿಭಾಗ ಪ್ರಾಜೆಕ್ಟ್ ಮ್ಯಾನೇಜರ್ಗಳೂ ಸೇರಿದಂತೆ ಬಹುತೇಕ ಎಲ್ಲಾ ತಂಡಗಳ ಜೊತೆಗೂ ಸಮನ್ವಯ ಸಾಧಿಸುತ್ತಾ, ಆಯಾ ಭಾಷೆಯ ಭಾಷಾ ಪರಿಣಿತರೊಂದಿಗೆ ವ್ಯವಹರಿಸುತ್ತಾ, ವಿವಿಧ ಲ್ಯಾಗ್ವೇಜ್ ಸರ್ವೀಸ್ ಪ್ರೊವೈಡರ್ಗಳನ್ನು (ಎಲ್ಎಸ್ಪಿ) ಎಂದರೆ ಸರಳವಾಗಿ ವೆಂಡರ್ಗಳ್ನು ನಿರ್ವಹಿಸುತ್ತಾ, ಇದಕ್ಕೆ ತಗುಲುವ ಹಣಕಾಸು ವೆಚ್ಚಗಳನ್ನು ನಿರ್ವಹಣೆ ಮಾಡುತ್ತಾ ಕಾರ್ಯ ನಿರ್ವಹಿಸಬೇಕು. ಸರಳವಾಗಿ ಹೇಳುವುದಾದರೆ, ಎಲ್ಲಾ ತಂಡಗಳು ಎಐನ ದೈಹಿಕ ರಚನೆಯಲ್ಲಿ ತೊಡಗಿದರೆ, ಭಾಷಾ ವಿಭಾಗ ಆ ದೇಹಕ್ಕೆ ಬುದ್ಧಿ ತುಂಬುವ ಕೆಲಸ ಮಾಡುತ್ತದೆ. ಅಥವಾ ಬುದ್ಧಿ ತುಂಬಲ ಬೇಕಾದ ಅವಶ್ಯಕತೆಗಳನ್ನು ಪೂರೈಸುತ್ತದೆ.
ಭಾಷೆಯೇ ಅಭಿವ್ಯಕ್ತಿಯ ಮೂಲ. ಅದು ಮನುಷ್ಯನಿಗೆ ಹೇಗೋ ಎಐ ಮಾಡೆಲ್ಗೂ ಅಷ್ಟೇ ಮುಖ್ಯ. ಒಂದು ಎಐ ಮಾಡೆಲ್ನ ಕಾರ್ಯನಿರ್ವಹಣೆ ಎರಡು ತೆರನಾಗಿರುತ್ತದೆ. ಒಂದು, ಬಳಕೆದಾರರು ಕೇಳುವ ಯಾವುದೇ ಪ್ರಶ್ನೆಗೆ ಉತ್ತರಿಸುವ ಮುನ್ನ ಉತ್ತರ ನೀಡಲು ಬೇಕಾದ ಭೂಮಿಗೆ ಸಿದ್ಧಪಡಿಸಲು ಹಿನ್ನೆಲೆಯಲ್ಲಿ ಅದು ಕೆಲಸ ಮಾಡುತ್ತದೆ. ಈ ಕೆಲಸವನ್ನು ಬ್ಯಾಕೆಂಡ್ ಡೆವಲೆಪ್ಮೆಂಟ್ ನಿಭಾಯಿಸುತ್ತದೆ. ಇನ್ನೊದು, ತಾನು ಸಿದ್ಧಪಡಿಸಿದ ಉತ್ತರವನ್ನು ಬಳಕೆದಾರರಿಗೆ ನೀಡುವುದು ಫ್ರಂಟ್ ಎಂಡ್ಗೆ ಸಂಬಂಧಿಸಿದ್ದು. ಎರಡೂ ಬಗೆಯಲ್ಲೂ ಭಾಷೆ ನಿರ್ಣಾಯಕವಾಗಿರುತ್ತದೆ. ಎಐನ ಬುದ್ಧಿಮತ್ತೆಯನ್ನು ರೂಪಿಸುವಲ್ಲಿ ಎಂದರೆ ಅದರ ತರಬೇತಿಯ ಹಂತದಲ್ಲಿ ಭಾಷೆಯ ಎಲ್ಲಾ ಸಾಧ್ಯತೆಗಳನ್ನು, ಆ ಭಾಷಿಕರ ಸಾಂಸ್ಕೃತಿಕ ಸೂಕ್ಷ್ಮಗಳನ್ನು, ಭಾಷೆಯ ಅಭಿವೃದ್ಧಿಯ ವಿವಿಧ ಮಾದರಿಗಳನ್ನು ಎಐ ಮೆದುಳಿಗೆ ತುಂಬಿರಲಾಗಿರುತ್ತದೆ. ಈ ಕಾರ್ಯವನ್ನು ನಾನು ಪ್ರತಿನಿಧಿಸುವ ಭಾಷಾ ವಿಭಾಗ ನಿರ್ವಹಿಸುತ್ತದೆ. ಆಯಾ ಭಾಷೆಯ ಲಿಂಗ್ಲಿಷ್ಟ್ಗಳು ಅಥವಾ ಭಾಷಾ ಪರಿಣಿತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಮ್ಮ ಅಗತ್ಯವನ್ನು ಅವರಿಗೆ ವಿವರಿಸಿ, ಅವರಿಂದ ನಿರೀಕ್ಷಿತ ಡೇಟಾ ಅಥವಾ ವಿಶ್ಲೇಷಣೆಯನ್ನು ಪಡೆಯಲಾಗುತ್ತದೆ. ಹೀಗೆ ವಿವಿಧ ಭಾಷೆಗಳಿಂದ ಸಂಗ್ರಹಿಸಿದ ವಿಶ್ಲೇಷಣೆಯನ್ನು ಎಐ ಮಾಡೆಲ್ಗೆ ತಾಂತ್ರಿಕವಾಗಿ ಒದಗಿಸಿ ಎಐ ಆಯಾ ಭಾಷೆಯಲ್ಲಿ ಪರಿಣತಿ ಹೊಂದುವಂತೆ ಮಾಡುವುದು ನಮ್ಮ ಕೆಲಸ.
ಡೇಟಾ ಒದಗಿಸಿ ಬುದ್ಧಿ ತುಂಬಿದ ಮಾತ್ರಕ್ಕೆ ಕೆಲಸ ಮುಗಿಯುವುದಿಲ್ಲ. ಇದಾದ ಬಳಿಕ ನಾವು ಹೇಳಿಕೊಟ್ಟಿದ್ದನ್ನು ಎಐ ಸರಿಯಾಗಿ ಕಲಿತಿದೆಯೇ ಎಂದು ಪರಿಶೀಲಿಸಿ (ಇದನ್ನು ಮಾಡೆಲ್ ಇವ್ಯಾಲ್ಯುಯೇಷನ್ ಎನ್ನಲಾಗುತ್ತದೆ) ಅದು ನೀಡುವ ಉತ್ತರವನ್ನು ಆಧರಿಸಿ ಮತ್ತೆ ಫೈನ್ಟ್ಯೂನ್ ಮಾಡಲಾಗುತ್ತದೆ. ಈ ಹಂತದಲ್ಲಿ ಹಲವು ಬಾರಿ ನಾವು ಆಯಾ ಭಾಷೆಯ ಪರಿಣಿತರ ಬಳಿ ಹೋಗಬೇಕು. ಅವರ ಸಲಹೆ ಪಡೆದು ಅದರ ಅನುಸಾರ ತಿದ್ದುಪಡಿ ಮಾಡಬೇಕು. ಎಐ ಮಾಡೆಲ್ ನಿರೀಕ್ಷಿತ ವರ್ತನೆ ತೋರುವವರಗೆ ಇದು ನಿರಂತರವಾಗಿ ನಡೆಯುತ್ತದೆ. ಇದು ಎಐನ ಕಲಿಕೆಗೆ ಅಥವಾ ಕಲಿಸುವ ಪ್ರಕ್ರಿಯೆಯಾದರೆ, ಅದನ್ನು ಅಭಿವ್ಯಕ್ತಿಯನ್ನೂ ಪ್ರತ್ಯೇಕವಾಗಿ ಸುಧಾರಿಸಬೇಕು. ಯೂಸರ್ ಎಕ್ಸ್ಪೀರಿಯೆನ್ಸ್ ವಿನ್ಯಾಸ ಮಾಡುವ UI ಎಂಜಿನಿಯರ್ಗಳ ಜೊತೆ ಸೇರಿ ಈ ಅಭಿವ್ಯಕ್ತಿಯನ್ನು ನಿರ್ಧರಿಸಬೇಕು. ಅದು ಕರೆನ್ಸಿಯ ರೂಪಾಂತರದಿಂದ ಹಿಡಿದು, ಅಂಕೆ-ಸಂಖ್ಯೆಗಳು, ಸಂಜ್ಞೆ, ಸಂಕೇತಗಳು, ಬಣ್ಣಗಳು, ಅಳತೆಯ ಮಾಪನಗಳು, ಸಮಯ ಮತ್ತು ಅದರ ಅಭಿವ್ಯಕ್ತಿ ಮುಂತಾದುವನ್ನು ಆಯಾ ಭಾಷೆಗೆ ಹೊಂದುವಂತೆ, ಆಯಾ ಭಾಷಿಕರಿಗೆ ಸುಲಭವಾಗಿ ಅರ್ಥವಾಗುವಂತೆ, ಆಯಾ ಸಾಂಸ್ಕೃತಿಕ ಅಭಿವ್ಯಕ್ತಿಗೆ ಧಕ್ಕೆಯಾಗದಂತೆ ಅಭಿವ್ಯಕ್ತಿಯನ್ನು ನಿರ್ಧರಿಸಬೇಕು. ಅಭಿವ್ಯಕ್ತಿ ವಾಯ್ಸ್ ರೂಪದಲ್ಲಿ ಇದ್ದರಂತೂ ಇನ್ನೂ ಸಾಕಷ್ಟು ವಿಚಾರಗಳು ಗಣನೆಗೆ ಬರುತ್ತವೆ. ವಿವಿಧ ವಯೋಮಾನದ ಆಯಾ ಭಾಷಿಕರ ಅಭಿವ್ಯಕ್ತಿ, ಉಚ್ಛಾರಣೆ, ಮಾತನಾಡುವ ಬಗೆ ಎಲ್ಲದರ ಮಾದರಿ ಸಂಗ್ರಹಿಸಿ ಅದರ ಅನುಸಾರ ಎಐ ಮಾಡೆಲ್ಗೆ ತರಬೇತಿ ನೀಡಬೇಕು. ಬಳಿಕ, ಅದರ ಬಿಹೇವಿಯರ್ ಅನ್ನು ವಿಶ್ಲೇಷಿಸಿ ಅಗತ್ಯವಿದ್ದರೆ ಹೊಸದೇ ಆದ ಡೇಟಾಸೆಟ್ಗಳ ಮೂಲಕ ತರಬೇತಿ ಮುಂದುವರಿಸಬೇಕು.
ಒಂದು ಚಿತ್ರ ಬಿಡಿಸುವಾಗಲೂ ಹಲವು ಸೂಕ್ಷ್ಮ ವಿಚಾರಗಳನ್ನು ಗಮನಿಸಬೇಕು. ಉದಾಹರಣೆಗೆ ಒಬ್ಬ ಬಳಕೆದಾರ ಒಂದು ‘ಕುಟುಂಬ’ದ ಚಿತ್ರ ಬಿಡಿಸುವಂತೆ ಎಐ ಮಾಡೆಲ್ಗೆ ಕೇಳಿದರೆ, ಅದು ಬಿಡಿಸುವ ಚಿತ್ರ ಆಯಾ ಬಳಕೆದಾರನ ಕುಟುಂಬದ ಪರಿಕಲ್ಪನೆಯನ್ನು ಪ್ರತಿನಿಧಿಸಬೇಕು. ಕುಟುಂಬ ಸದಸ್ಯರ ಬಣ್ಣ, ಅವರ ವೇಷಭೂಷಣ, ಕುಟುಂಬದ ಗಾತ್ರ, ಸ್ವರೂಪ, ಹಿನ್ನೆಲೆ, ಮುನ್ನೆಲೆಯಲ್ಲಿ ಇರಬಹುದಾದ ಸಾಮಾನ್ಯ ಸಂಗತಿಗಳು - ಇವೆಲ್ಲವನ್ನೂ ಆಧರಿಸಿ ಚಿತ್ರ ರಚಿಸಬೇಕು. ಹೀಗಾಗಿ ಭಾರತೀಯ ಬಳಕೆದಾರನಿಗೆ ನೀಡುವ ಕುಟುಂಬದ ಚಿತ್ರಕ್ಕೂ ಬ್ರೆಜಿಲ್ನ ಬಳಕೆದಾರನಿಗೆ ನೀಡುವ ಕುಟುಂಬದ ಚಿತ್ರಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಇಂಥ ಸಾಮಾಜಿಕ ಸೂಕ್ಷ್ಮಗಳನ್ನು ಎಐ ಮಾಡೆಲ್ಗೆ ತುಂಬುವುದೇ ಭಾಷಾ ವಿಭಾಗ. ಇದು ವೀಡಿಯೋ ರಚನೆಗೂ ಅನ್ವಯಿಸುತ್ತದೆ. ಒಂದು ವೀಡಿಯೊದಲ್ಲಿ ಕಾಣುವ ಪ್ರತಿಯೊಂದು ಎಲಿಮೆಂಟ್ ಕೂಡ ಬಳಕೆದಾರನ ಪರಿಸರ, ಭಾಷೆ, ಸಂಸ್ಕೃತಿಯನ್ನು ಪ್ರತಿನಿಧಿಸಬೇಕು. ಎಐ ಮಾಡೆಲ್ಗೆ ಇಂಥ ಸೂಕ್ಷ್ಮ ತರಬೇತಿ ನೀಡುವ ಮಹತ್ತರ ಹೊಣೆಗಾರಿಕೆಯನ್ನು ಭಾಷಾ ವಿಭಾಗ ನಿರ್ವಹಿಸುತ್ತದೆ. ಯಾವ ಕಂಪನಿ ಭಾಷಾ ವಿಭಾಗಕ್ಕೆ ಎಷ್ಟು ಮಹತ್ವ ನೀಡುತ್ತದೆ ಎನ್ನುವುದರ ಮೇಲೆ ಅವರ ಎಐನ ಗುಣಮಟ್ಟ ನಿರ್ಧಾರವಾಗುತ್ತದೆ. ಸದ್ಯದ ಮಟ್ಟಿಗೆ ಜೆಮಿನಿ, ಕ್ಲಾಡ್, ಜಿಪಿಟಿ ಪರ್ಪ್ಲೆಕ್ಸಿಟಿ ಸೇರಿದಂತೆ ನಾವು ನೋಡುವ ಎಲ್ಲಾ ಎಐ ಮಾದರಿಗಳಲ್ಲೂ ಇಂಥ ಸಾಂಸ್ಕೃತಿಕ ಸೂಕ್ಷ್ಮಗಳ ಕೊರತೆಯನ್ನು ಕಾಣುತ್ತೇವೆ. ಈ ಅರ್ಥದಲ್ಲಿ ಜಗತ್ತಿನ ಎಐ ಮಾಡೆಲ್ಗಳು ಕಲಿಯುವುದು ಸಾಕಷ್ಟಿದೆ. ಅವುಗಳಿಗೆ ಜಗತ್ತಿನ ಸಾಂಸ್ಕೃತಿಕ ಸೂಕ್ಷ್ಮಗಳನ್ನು ಅರ್ಥಮಾಡಿಸಲು ಇನ್ನೂ ವರ್ಷಗಳೇ ಬೇಕು. ದಿನೇ ದಿನೇ ಎಐ ಮಾಡೆಲ್ಗಳ ಬುದ್ಧಿವಂತಿಕೆ ಬೆಳೆಯುತ್ತಿದೆ, ಆದರೆ “ಸಂಸ್ಕಾರ” ಕಲಿಯುವಲ್ಲಿ ಹಿಂದೆ ಬಿದ್ಧಿವೆ. ಭಾರತದ ಎಐ ಮಾಡೆಲ್ಗಳು ಈ ನಿಟ್ಟಿನಲ್ಲಿ ವಿಶ್ವದ ಇತರೆ ಎಐ ಮಾಡೆಲ್ಗಳಿಗಿಂತ ಭಿನ್ನವಾಗುವ ಲಕ್ಷಣಗಳು ಕಾಣುತ್ತಿವೆ. ಒಟ್ಟಿನಲ್ಲಿ ಎಐಗೆ ಆಯಾ ಸಂಸ್ಕೃತಿಯನ್ನು ಪ್ರತಿನಿಧಿಸುವ “ಸಂಸ್ಕಾರ” ಕಲಿಸುವಲ್ಲಿ ಭಾಷಾ ಪರಿಣಿತರ, ಸಂಸ್ಕೃತಿ ಚಿಂತಕರ ಪಾತ್ರ ಮಹತ್ವದ್ದಾಗಿದೆ. ಇಂಥ ಮಹತ್ತರ ಕಾರ್ಯದಲ್ಲಿ ನಾನು ತೊಡಗಿರುವುದು ಹೆಮ್ಮೆಯ ವಿಚಾರ.


