ಎಐ ಬೆಳವಣಿಗೆ ಕೇವಲ ಭ್ರಾಂತಿಯೇ?
ಎಐ ಅನಂತ ಅವತಾರ | ಎಐ ಬಬಲ್: ಜೋರಾದ ಚರ್ಚೆ | ಆದಾಯವೇ ಇಲ್ಲದೆ ಮುಗಿಲೆತ್ತರಕ್ಕೇರಿದ ಕಂಪನಿಗಳ ಮೌಲ್ಯ
ಡಾ.ರಮೇಶ್ ನಿಂಬೆಮರದಳ್ಳಿ
‘ಎಐ ಬಬಲ್’ ಎನ್ನವುದು ಜಾಗತಿಕವಾಗಿ ಪ್ರಸ್ತುತ ಹೆಚ್ಚು ಚರ್ಚೆಯಲ್ಲಿರುವ ವಿಚಾರ. ಎಐ ಎನ್ನುವುದು ಸದ್ಯದಲ್ಲೇ ಮುಳುಗುವ ಹಡಗು ಎನ್ನುವುದು ಕೆಲವು ಹೂಡಿಕೆದಾರರ ಎಚ್ಚರಿಕೆಯಾದರೆ, ಥಟ್ಟನೆ ಮುಳುಗಲು ಇದು ಟೈಟಾಲಿಕ್ ಹಡಗಲ್ಲ, ಅತ್ಯಾಧುನಿಕ ವ್ಯವಸ್ಥೆಗಳಿರುವ ಅಲ್ಟ್ರಾ ಮಾಡ್ರನ್ ಕಾರ್ಗೋ ಶಿಪ್. ಹಾಗಾಗಿ ಇದು ದೀರ್ಘಕಾಲ ಮುನ್ನಡೆಯುತ್ತದೆ ಎನ್ನುವುದು ಎಐ ಅನ್ನು ಮೂಲಭೂತವಾಗಿ ಬಲ್ಲ ತಜ್ಞರ ಅಭಿಪ್ರಾಯ. ಈ ಎರಡೂ ಅಭಿಪ್ರಾಯಗಳನ್ನು ಕ್ರೋಢೀಕರಿಸುತ್ತಾ ಮಧ್ಯಮ ಹಾದಿಯನ್ನೂ ಲೇಖನದಲ್ಲಿ ಸಂಕ್ಷೇಪಿಸಲಾಗಿದೆ. ಅಂತಾರಾಷ್ಟ್ರೀಯ ಎಐ ವಿಜ್ಞಾನಿ ಪ್ರೊ.ಎಸ್.ಎಸ್ ಅಯ್ಯಂಗಾರ್ ಅವರು ಎಐ ಚರ್ಚೆಗೆ ಹೊಸ ನೋಟ ಒದಗಿಸಿದ್ದಾರೆ. ಉತ್ಪ್ರೇಕ್ಷೆಯನ್ನು ಒಪ್ಪಿಕೊಳ್ಳುತ್ತಲೇ ಎಐನ ದೀರ್ಘಕಾಲೀನ ಬೆಳವಣಿಗೆಯನ್ನು ಪ್ರತಿಪಾದಿಸಿದ್ದಾರೆ.
ಮನುಷ್ಯನ ಜೀವನ ‘ನೀರಿನ ಮೇಲಿನ ಗುಳ್ಳೆ’ ಎಂದು ನಮ್ಮ ಹಿರಿಯರು, ಜ್ಞಾನಿಗಳು ಹೇಳುವುದನ್ನು ಕೇಳಿದ್ದೇವೆ. ಅದು ನಿಜವೂ ಹೌದು. ಮನುಷ್ಯನ ಬದುಕು ನೀರ ಮೇಲಿನ ಗುಳ್ಳೆಯಷ್ಟೇ ಕ್ಷಣಿಕ. ಈ ‘ಗುಳ್ಳೆ’ ಎನ್ನುವ ಕಲ್ಪನೆ ಮನುಷ್ಯ ಬದುಕಿನಲ್ಲಿ ಎಷ್ಟು ಅರ್ಥಪೂರ್ಣವೋ ಆರ್ಥಿಕತೆ ವಿಚಾರದಲ್ಲೂ ಅಷ್ಟೇ ಮಹತ್ವಪೂರ್ಣ. ಒಂದು ಕಂಪನಿ, ಕ್ಷೇತ್ರ ಇಲ್ಲವೇ ಆರ್ಥಿಕ ಪತನವನ್ನು ಸೂಚಿಸಲು ಈ ಕಲ್ಪನೆ ಬಳಸಲಾಗುತ್ತದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವಿಚಾರದಲ್ಲೂ ಈ ಗುಳ್ಳೆಯ ಚರ್ಚೆ ಮುನ್ನೆಲೆಗೆ ಬಂದಿದೆ.
ಹೊಸದರ ಮೇಲಿನ ಅತ್ಯುತ್ಸಾಹವೇ ಗುಳ್ಳೆಗೆ ಮೂಲ
ಯಾವುದೇ ಹೊಸ ವಿಚಾರದ ಬಗೆಗೆ ಜನರಲ್ಲಿ ಅತ್ಯುತ್ಸಾಹ ಮೂಡುವುದು ಸಾಮಾನ್ಯ. ಹಲವು ಕಾರಣಳಿಗೆ ಹೊಸ ವಿಚಾರದ ಕುರಿತು ಎಲ್ಲರಲ್ಲೂ ಒಂದು ರೀತಿಯ ಸಂಚಲನ ಸೃಷ್ಟಿಯಾಗುತ್ತದೆ; ಕಲ್ಪನೆಗಳು ಗರಿಗೆದರುತ್ತವೆ; ಊಹೆ ಮೇರೆ ಮೀರುತ್ತದೆ. ಆರ್ಥಿಕ ಪರಿಭಾಷೆಯಲ್ಲಿ ಇದನ್ನು ‘ಸ್ಪೆಕ್ಯುಲೇಷನ್’ ಎನ್ನುತ್ತೇವೆ. ಹೀಗೆ ವಾಸ್ತವಕ್ಕಿಂತ ಊಹೆಯೇ ಹೆಚ್ಚಾದಾಗ ಅದು ಗುಳ್ಳೆಯಾಗಿ ಮಾರ್ಪಡುತ್ತದೆ. ಎಂದರೆ ಒಳಗೆಲ್ಲಾ ಖಾಲಿ ಖಾಲಿ, ಹೊರಗೆ ಮಾತ್ರ ಅದ್ಧೂರಿ. ಉದಾಹರಣೆಗೆ, 100 ರೂಪಾಯಿ ಬೆಲೆ ಬಾಳುವ, ಆಂತರಿಕ ಮೌಲ್ಯವಿಲ್ಲದ ಒಂದು ವಸ್ತು ಕಡಿಮೆ ಅವಧಿಯಲ್ಲಿ 1000 ರೂಪಾಯಿಯಾಗಿಬಿಟ್ಟರೆ ಅದಕ್ಕೆ ಅತಿಯಾದ ಸ್ಪೆಕ್ಯುಲೇಷನ್ ಕಾರಣವಾಗಿರುತ್ತದೆ. ಇಲ್ಲಿ ವಸ್ತುವಿನ ಕುರಿತು ಉತ್ಸಾಹ ಮೇರೆ ಮೇರಿ, ಉತ್ಪೇಕ್ಷೆ ಅತಿಯಾಗಿ, ಅದರ ಬೆಲೆ ಗಗನಕ್ಕೇರಿರುತ್ತದೆ. ಆ ಉತ್ಸಾಹ ಕುಗ್ಗಿದ ಕೂಡಲೇ ಮೇಲೇರಿದ್ದಕ್ಕಿಂತ ವೇಗವಾಗಿ ಅದರ ಬೆಲೆ ಪಾತಾಳಕೆ ಕುಸಿಯುತ್ತದೆ. ಈ ವಿದ್ಯಮಾನವನ್ನು ಸ್ಟಾಕ್ ಮಾರ್ಕೆಟ್ ಪರಿಭಾಷೆಯಲ್ಲಿ ಕರೆಕ್ಷನ್ ಮತ್ತು ಕ್ರ್ಯಾಶ್ ಎನ್ನುತ್ತಾರೆ. ಸರಳವಾಗಿ ಇದು ಒಂದು ವಸ್ತುವಿನ ಮೌಲ್ಯ ಪತನ.
ಹಾಗಿದ್ದರೆ ಏನಿದು ಎಐ ಬಬಲ್?
ಇತ್ತೀಚಿನ ಕೆಲ ತಿಂಗಳಿಂದ ‘ಎಐ ಬಬಲ್’ ಚರ್ಚೆ ಉತ್ತುಂಗಕ್ಕೇರಿದೆ. ಹೂಡಿಕೆದಾರರು ಭಯದಲ್ಲಿದ್ದಾರೆ. ಸ್ಟಾಕ್ ಮಾರ್ಕೆಟ್ಗಳು ಆತಂಕದಲ್ಲಿದ್ದು ಸ್ಪಷ್ಟ ದಿಕ್ಕು ಕಾಣದೆ ಒದ್ದಾಡುತ್ತಿವೆ. ಹೀಗಾಗಿಯೇ ಮಾರುಕಟ್ಟೆಯಲ್ಲಿ ಇನ್ನೂ ತಲ್ಲಣ ನಿಂತಿಲ್ಲ. ‘ಎಐ ಬಬಲ್’ ಎನ್ನುವುದು ಎಐ ಕ್ಷೇತ್ರದಲ್ಲೂ ಗುಳ್ಳೆ ಏರ್ಪಟ್ಟಿದೆ ಎನ್ನುವುದನ್ನು ಸೂಚಿಸುತ್ತಿದೆ. ಕೆಲವು ವಿಚಾರಗಳು ಇದನ್ನು ಪುಷ್ಟೀಕರಿಸುತ್ತಿವೆ.
ಗಗನಕ್ಕೇರಿದ ಷೇರು ಬೆಲೆ: ಎಐ ಕಂಪನಿಗಳ ಮೌಲ್ಯ ಅನಗತ್ಯವಾಗಿ ಏರಿಕೆಯಾಗಿದೆ. ‘ಮ್ಯಾಗ್ನಿಫಿಸೆಂಟ್ 7’ ಎಂದು ಕರೆಯಲಾಗುವ ಎನ್ವಿಡಿಯಾ, ಮೆಟಾ, ಆಲ್ಫಾಬೆಟ್, ಅಮೆಜಾನ್, ಟೆಸ್ಲಾ ಕಂಪನಿಗಳ ಷೇರು ಮೌಲ್ಯ ವಿಪರೀತ ಏರಿಕೆಯಾಗಿದೆ. ಅದರಲ್ಲೂ ಡಾರ್ಲಿಂಗ್ ಎನಿಸಿರುವ ಎನ್ವಿಡಿಯಾ ಷೇರುಗಳು ಕಳೆದ ಮೂರೇ ವರ್ಷಗಳಲ್ಲಿ ಸುಮಾರು 870% ಏರಿಕೆಯಾಗಿವೆ. ಜೊತೆಗೆ ಇದರ ಮಾರುಕಟ್ಟೆ ಮೌಲ್ಯ ಒಂದು ಟ್ರಿಲಿಯನ್ ಡಾಲರ್ನಿಂದ ಐದು ಟ್ರಿಲಿಯಲ್ ಡಾಲರ್ಗೆ ಏರಿದೆ. ಇದು ಭಾರತದ ಜಿಡಿಪಿಗಿಂತಲೂ ಜಾಸ್ತಿ.
ಮುಗಿಲು ಮುಟ್ಟಿದ ಮೌಲ್ಯ: ಎಐ ಕಂಪನಿಗಳ ಮೌಲ್ಯೀಕರಣದಲ್ಲೂ (ವ್ಯಾಲ್ಯುಯೇಷನ್) ಭಾರಿ ಏರಿಕೆಯಾಗಿದೆ. ಉದಾಹರಣೆಗೆ ಓಪನ್ಎಐನ ಈಗಿನ ಮೌಲ್ಯ ಸುಮಾರು 150 ಬಿಲಿಯನ್ ಡಾಲರ್ ಎಂದರೆ ಇದರ ನಿರೀಕ್ಷಿತ ಮಾರಾಟಕ್ಕಿಂತ 40 ಪಟ್ಟು ಜಾಸ್ತಿ. ಇನ್ನು ಆಂತ್ರೊಪಿಕ್ 2025ರ ಮಾರ್ಚ್ನಲ್ಲಿ 60 ಬಿಲಿಯನ್ ಡಾಲರ್ ಇದ್ದದ್ದು ಹೊಸ ಹೂಡಿಕೆ ಬಳಿಕ 170 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ಎರಡು ಮೂರು ವರ್ಷದ ಸಣ್ಣ ಸ್ಟಾರ್ಟಪ್ಗಳೆಲ್ಲ ಬಿಲಿಯನ್ ಡಾಲರ್ ಮೌಲ್ಯ ಹೊಂದಿವೆ. ಆದರೆ ಮಾರಾಟ ಮತ್ತು ಆದಾಯ ಈ ಮೌಲ್ಯಕ್ಕೆ ತಕ್ಕಂತಿಲ್ಲ. ಅಲ್ಲದೆ, ಕೆಲವು ಸ್ಟಾರ್ಟ್ಅಪ್ಗಳು ಸ್ಪಷ್ಟ ಉತ್ಪನ್ನಗಳಿಲ್ಲದೆ, ಸ್ಪಷ್ಟ ಆದಾಯದ ಗುರಿಯಿಲ್ಲೆ ಕೋಟಿಗಟ್ಟಲೆ ಹಣವನ್ನು ಹೂಡಿಕೆಯಾಗಿ ಪಡೆಯುತ್ತಿವೆ.
ವೃತ್ತಾಕಾರದ ಹೂಡಿಕೆ: ಎಐ ದೈತ್ಯ ಕಂಪನಿಗಳ ನಡುವಿನ ಮೆಗಾ-ಡೀಲ್ಗಳ ಬಗ್ಗೆ ಅಪಸ್ವರ ಎದ್ದಿದೆ. ಯಾಕೆಂದರೆ ಇದು “ವೃತ್ತಾಕಾರದ” ಹೂಡಿಕೆ. ಈ ಕಂಪನಿಗಳು ತಮ್ಮ ತಮ್ಮಲ್ಲೇ ಹೂಡಿಕೆ ಮಾಡಿಕೊಳ್ಳುತ್ತಿವೆ. ಎಂದರೆ ಹೂಡಿಕೆ ಹಣ ಆ ಕಂಪನಿಗಳಲ್ಲೇ ಗಿರಕಿ ಹೊಡೆಯುತ್ತಿದೆ.
ನಿರ್ವಹಣೆಗೆ ಬೇಕು ಲಕ್ಷಾಂತರ ಕೋಟಿ: ಎಐ ಮಾಡೆಲ್ಗಳನ್ನು ನಿರ್ವಹಿಸುವುದು ಭಾರಿ ವೆಚ್ಚದಾಯಕ. ಎಐ ಕಂಪನಿಗಳಿಗೆ ಡೇಟಾಸೆಂಟರ್ಗಳೇ ಜೀವಾಳ. ಈ ಡೇಟಾಸೆಂಟರ್ಗಳನ್ನು ದಿನದ 24 ಗಂಟೆಯೂ ಚಾಲನೆಯಲ್ಲಿಡಲು ಅಗಾಧ ವಿದ್ಯುತ್ ಶಕ್ತಿ ಮತ್ತು ಅಪಾರ ನೀರು ಬೇಕು. ಡೇಟಾ ಸೆಂಟರ್ಗಳನ್ನು ಸ್ಥಾಪಿಸಲೇ ಬಿಲಿಯನ್ ಡಾಲರ್ಗಟ್ಟಲೆ ಹಣ ಬೇಕು ಇನ್ನು ಅವುಗಳನ್ನು ನಡೆಸಲೂ ಕೋಟ್ಯಂತರ ಡಾಲರ್ ಬೇಕು. ಇದು ಎಐ ಕಂಪನಿಗಳ ಹಣವನ್ನೆಲ್ಲಾ ಕರಗಿಸಿ ಲಾಭವನ್ನೆಲ್ಲಾ ನುಂಗಿಹಾಕುತ್ತದೆ. ಪರಿಣಾಮ ಈ ಕಂಪನಿಗಳು ನಷ್ಟದ ಕೂಪಕ್ಕೆ ಬೀಳಬಹುದು ಎನ್ನುವುದು ತಜ್ಞರ ಎಚ್ಚರಿಕೆ.
ಹಣ ತೆರಲು ಗ್ರಾಹಕರು ಸಿದ್ಧರಿಲ್ಲ: ಎಐ ಸೇವೆಗಳನ್ನು ಬಳಸುವಲ್ಲಿ ಜನರು ಅದರಲ್ಲೂ ಭಾರತೀಯರು ವಿಪರೀತ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಅವರು ಪ್ರೀಮಿಯಂ ಸೇವೆಗಳಿಗೆ ಹಣ ಪಾವತಿಸಲು ಆಸಕ್ತಿ ತೋರಿಸುತ್ತಿಲ್ಲ. ಎಂದರೆ ಇವರು ಫ್ರೀ ಸೇವೆಗಳಲ್ಲೇ ಮಜಾ ಮಾಡುತ್ತಿದ್ದಾರೆ. ಎಂದರೆ ಗ್ರಾಹಕರ ಸಂಖ್ಯೆ ನಂಬಿ ಲಾಭದ ಆಸೆ ಇಟ್ಟುಕೊಳ್ಳುವಂತಿಲ್ಲ.
ಕೇಂದ್ರೀಕೃತಗೊಂಡ ಮಾರುಕಟ್ಟೆ: ಜಾಗತಿಕ ಎಐ ಕ್ಷೇತ್ರ ಕೆಲವೇ ಕಂಪನಿಗಳಲ್ಲಿ ಕೇಂದ್ರೀಕೃತವಾಗಿದೆ. ಅಮೆರಿಕದ ಪ್ರಮುಖ 7 ಎಐ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 22 ಲಕ್ಷ ಕೋಟಿ ಡಾಲರ್ಗಳು. ಇದು ಚೀನಾದ ಜಿಡಿಪಿಗಿಂತ ಹೆಚ್ಚು. 2025ರಲ್ಲಿ ಹೂಡಿಕೆಯಾಗಿರುವ ಒಟ್ಟು ಹಣದಲ್ಲಿ ಅರ್ಧದಷ್ಟು ಹಣ ಎಐ ಕಂಪನಿಗಳಲ್ಲೇ ಹೂಡಿಕೆಯಾಗಿದೆ. ಆದರೆ, ಇವುಗಳಲ್ಲಿ ಕೇವಲ 5% ಕಂಪನಿಗಳು ಮಾತ್ರ ಲಾಭದಲ್ಲಿವೆ. ಜಾಗತಿಕ ಚಿಪ್ ಸರಬರಾಜು ಕೂಡ ಕೆಲವೇ ಕಂಪನಿಗಳ ನಿಯಂತ್ರಣದಲ್ಲಿದೆ. ಈ ಕಂಪನಿಗಳ ಮೌಲ್ಯ ಕುಸಿದರೆ ಇಡೀ ಎಐ ಕ್ಷೇತ್ರವನ್ನೇ ಕೆಳಗೆ ಎಳೆದೊಯ್ಯುತ್ತವೆ ಎಂಬ ಆತಂಕವಿದೆ.
ಉತ್ಪ್ರೇಕ್ಷೆ ನಿಜ, ದೀರ್ಘಕಾಲೀನ ಪ್ರಭಾವ ಮರೆಯದಿರಿ
ಆದರೆ, ಮತ್ತೊಂದು ಕಡೆ ಆಶಾವಾದಿಗಳು ಎಐ ಮೇಲೆ ಭರವಸೆ ಕಳೆದುಕೊಂಡಿಲ್ಲ. ಅವರ ಪ್ರಕಾರ ಎಐ ತಂತ್ರಜ್ಞಾನ ಇಂಟರ್ನೆಟ್ನ ಸಹಜ ವಿಕಸನ. ಈಗ ಶೈಶವಾವಸ್ಥೆಯಲ್ಲಿರುವ ಎಐ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಎಐ ತಂತ್ರಜ್ಞಾನದ ಬಳಕೆಯ ಅನುಕೂಲಗಳು ಸಾಕಷ್ಟಿವೆ. ಜಗತ್ತಿನಾದ್ಯಂತ ಕಂಪನಿಗಳಲ್ಲಿ ಎಐ ಬಳಕೆಯ ವೇಗ ಹೆಚ್ಚಿದೆ. ಇವೆಲ್ಲಾ ಎಐ ಕ್ಷೇತ್ರದ ಮೇಲೆ ಆಸೆ ಹುಟ್ಟಿಸಿವೆ. ಎಐ ಅಳವಡಿಕೆಯಿಂದ ಕಂಪನಿಗಳ ವೆಚ್ಚ ತಗ್ಗಿದೆ. ಉದ್ಯೋಗ ಕಡಿತದಿಂದ ಲಾಭಾಂಶ ಏರಿಕೆಯಾಗಿದೆ. ಅಮೆರಿಕದಲ್ಲಿ ಡೇಟಾಸೆಂಟರ್ಗಳು, ಚಿಪ್ ತಯಾರಿಕೆ, ಸಂಶೋಧನೆಯ ಮೇಲೆ ವಿಪರೀತ ಹೂಡಿಕೆಯಾಗುತ್ತಿರುವುದರಿಂದ ಅದು ಅಲ್ಲಿನ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತಿದೆ. ಎಐ ತಂತ್ರಜ್ಞಾನ ಆರ್ಥಿಕತೆಗಳನ್ನು ಚೇತರಿಸುವುದು ಮಾತ್ರವಲ್ಲದೆ ಜನರ ಬದುಕನ್ನೂ ಸುಧಾರಿಸುತ್ತದೆ ಎಂಬುದು ಇವರ ವಾದ.
ಒಟ್ಟಿನಲ್ಲಿ ಎಐ ಬಬಲ್ ಸುತ್ತಲಿನ ಚರ್ಚೆ ಸಂಕೀರ್ಣವಾಗಿದೆ. ಎಐ ಕುರಿತು ಉತ್ಪ್ರೇಕ್ಷೆ ಇರುವುದು ನಿಜವಾದರೂ ಎಐನ ದೀರ್ಘಕಾಲೀನ ಪ್ರಭಾವವನ್ನು ನಿರಾಕರಿಸಲಾಗದು. ಇಂಟರ್ನೆಟ್ ಯುಗದಂತೆ, ಆರಂಭಿಕ ಹಂತದಲ್ಲಿ ಈ ರೀತಿಯ ಉತ್ಸಾಹ, ಉತ್ಪ್ರೇಕ್ಷೆ ಸಾಮಾನ್ಯ. ಈ ಹಂತದಲ್ಲಿ ಒಂದಿಷ್ಟು ಮಾರ್ಕೆಟ್ ಕರೆಕ್ಷನ್ ಆಗಲೂಬಹುದು. ಆದರೆ ದೀರ್ಘಕಾಲೀನವಾಗಿ ಎಐ ಅಸಾಧಾರಣವಾಗಿ ಬೆಳೆಯಲಿದೆ. ಎಐ ಕುರಿತ ಅತಿಯಾದ ಉತ್ಪ್ರೇಕ್ಷೆಗಳೆಲ್ಲವನ್ನೂ ನಂಬದೆ, ಎಐನ ಪರಿವರ್ತಕ ಶಕ್ತಿಯನ್ನು ಮರೆಯದೆ ಮುಂದುವರಿಯಬೇಕು.
ಡಾಟ್ ಕಾಮ್ ಬಬಲ್ನಲ್ಲಿ ಏನಾಗಿತ್ತು?
1990ರ ದಶಕದ ಕೊನೆಯ ಭಾಗ ಮತ್ತು 2000ನೇ ಇಸವಿಯ ಆರಂಭದಲ್ಲಿ ಸಂಭವಿಸಿದ ಡಾಟ್ಕಾಮ್ ಬಬಲ್ ಇಂಟರ್ನೆಟ್ ಆಧಾರಿತ ಕಂಪನಿಗಳ ಕುಸಿತವನ್ನು ಬಿಂಬಿಸುವ ಐತಿಹಾಸಿಕ ಘಟನೆ. 1995-2000 ಇಸವಿ ನಡುವೆ ನಾಸ್ದಾಕ್ ಶೇ. 400 ಕ್ಕೂ ಹೆಚ್ಚು ಏರಿಕೆಯಾಗಿತ್ತು. ಹೆಚ್ಚಿನ ಕಂಪನಿಗಳು ಸಮರ್ಪಕ ಆದಾಯವಿಲ್ಲದೆ, ಸ್ಪಷ್ಟವಾದ ವ್ಯವಹಾರ ಮಾದರಿ ಇಲ್ಲದೆ ಮಾರುಕಟ್ಟೆಗೆ ಬಂದಿದ್ದವು. “ಡಾಟ್ ಕಾಮ್” ಎಂಬ ಪದವನ್ನು ಹೆಸರಿಗೆ ಸೇರಿಸಿಕೊಂಡ ಎಲ್ಲಾ ವೆಬ್ಸೈಟ್ಗಳಿಗೂ ಹಣ ನದಿಯಂತೆ ಹರಿದುಬಂದಿತ್ತು. ಸಂಸ್ಥೆಗಳು ಅತಿಯಾದ ಪ್ರಚಾರ ಮಾಡುತ್ತಾ ಭವಿಷ್ಯದ ಕನಸು ಬಿತ್ತುತ್ತಿದ್ದವು. 2000ನೇ ಇಸವಿ ಮಾರ್ಚ್ನಲ್ಲಿ ನಾಸ್ದಾಕ್ 5,000 ಅಂಕ ದಾಟಿ ಬಳಿಕ ಎರಡು ವರ್ಷಗಳಲ್ಲಿ ಶೇ. 78 ರಷ್ಟು ಕುಸಿಯಿತು. ಲಕ್ಷಾಂತರ ಹೂಡಿಕೆದಾರರು ಬೀದಿಗೆ ಬಂದರು. 2002ರ ವೇಳೆಗೆ ಹೆಚ್ಚಿನ ಡಾಟ್ಕಾಮ್ ಕಂಪನಿಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಜನ ಕೆಲಸ ಕಳೆದುಕೊಂಡರು. ಆದರೂ ಅಮೆಜಾನ್, ಗೂಗಲ್, ಇ-ಬೇ ಮೊದಲಾದ ದಿಗ್ಗಜ ಕಂಪನಿಗಳು ಇದೇ ಕಾಲಘಟ್ಟದಿಂದ ಹೊರಬಂದು ಮುಂದಿನ ದಶಕಗಳ ಜಾಗತಿಕ ಡಿಜಿಟಲ್ ಆರ್ಥಿಕತೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
ಎಐ ಕ್ಷೇತ್ರ ಭದ್ರ ಅಡಿಪಾಯದ ಮೇಲಿದೆ: ಪ್ರೊ. ಎಸ್.ಎಸ್ ಅಯ್ಯಂಗಾರ್
ಎಐ, ರೋಬಾಟಿಕ್ಸ್ ಮತ್ತು ಸೈಬರ್ ಸೆಕ್ಯುರಿಟಿಯಲ್ಲಿ ಅಂತಾರಾಷ್ಟ್ರೀಯ ವಿಜ್ಞಾನಿ ಪ್ರೊ.ಎಸ್.ಎಸ್ ಅಯ್ಯಂಗಾರ್ ಅವರು ಎಐ ಸುತ್ತ ನಡೆಯುತ್ತಿರುವ ಚರ್ಚೆಗೆ ಹೊಸ ನೋಟ ಒದಗಿಸಿದ್ದಾರೆ. ಉತ್ಪ್ರೇಕ್ಷೆಯನ್ನು ಒಪ್ಪಿಕೊಳ್ಳುತ್ತಲೇ ಎಐನ ದೀರ್ಘಕಾಲೀನ ಬೆಳವಣಿಗೆಯನ್ನು ಪ್ರತಿಪಾದಿಸಿದ್ದಾರೆ. “ಎಐ ಗುಳ್ಳೆ ಎನ್ನುವುದು ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದ ಹೂಡಿಕೆಯಲ್ಲಾಗಿರುವ ಅಗಾಧ ಏರಿಕೆಯನ್ನು ಅರ್ಥೈಸುತ್ತಿದೆ. ತ್ವರಿತ ಬಂಡವಾಳದ ಒಳಹರಿವು, ವಿಪರೀತ ಮೌಲ್ಯಮಾಪನ ಮತ್ತು ತಂತ್ರಜ್ಞಾನ ಕಂಪನಿಗಳ ನಡುವಿನ ತೀವ್ರ ಸ್ಪರ್ಧೆಯನ್ನು ಇದು ಸೂಚಿಸುತ್ತಿದೆ. ಎಐ ಕ್ಷೇತ್ರದಲ್ಲಿ ಇರುವ ಉತ್ಪ್ರೇಕ್ಷೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ವಿಶೇಷವಾಗಿ ಆರಂಭಿಕ ಹಂತದ ಸ್ಟಾರ್ಟ್ಅಪ್ಗಳು ಮತ್ತು ಇನ್ನೂ ಸಾಬೀತಾಗದ ಅಪ್ಲಿಕೇಶನ್ಗಳಲ್ಲಿ ಉತ್ಪ್ರೇಕ್ಷೆ ನಿಚ್ಚಳವಾಗಿದೆ. ಆದರೆ ಎಐ ಲ್ಯಾಂಡ್ಸ್ಕೇಪ್ ಡಾಟ್ಕಾಮ್ಗಿಂತ ರಚನಾತ್ಮಕವಾಗಿ ಭಿನ್ನವಾಗಿದೆ. ಎಐ ಉತ್ಕರ್ಷವು ಔದ್ಯಮಿಕ ಯಾಂತ್ರೀಕರಣದಿಂದ ಜೈವಿಕ ತಂತ್ರಜ್ಞಾನ, ಲಾಜಿಸ್ಟಿಕ್ಸ್, ಶಿಕ್ಷಣ ಮತ್ತು ಗ್ರಾಹಕ ಉತ್ಪನ್ನಗಳವರೆಗೆ ವ್ಯಾಪಕವಾಗಿ ವಿಸ್ತರಿಸಿಕೊಂಡಿದೆ. ಇದು ಅಲ್ಪಾವಧಿಯಲ್ಲಿ ಅಪಮೌಲ್ಯಕ್ಕೆ ಒಳಗಾದರೂ ದೀರ್ಘಾವಧಿಯಲ್ಲಿ ಭದ್ರ ಬುನಾದಿಯಾಗುವುದನ್ನು ಸೂಚಿಸುತ್ತದೆ.
ಎಐನ ನಿರಂತರ ಬೆಳವಣಿಗೆ ಹಲವು ಶಕ್ತಿಗಳಿಂದ ಬೆಂಬಲಿತವಾಗಿದೆ. ಕಂಪ್ಯೂಟಿಂಗ್ ಮೂಲಸೌಕರ್ಯದಲ್ಲಿ ಬೃಹತ್ ಸುಧಾರಣೆಗಳು, ವಿಶೇಷ ಚಿಪ್ಗಳು, ವಿತರಿಸಿದ ಕ್ಲೌಡ್ ಸಿಸ್ಟಮ್ಗಳು ಮತ್ತು ಸುಧಾರಿತ ತರಬೇತಿ ಅಲ್ಗಾರಿದಮ್ಗಳು ಎಐ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿವೆ. ಇದರಿಂದ ವೆಚ್ಚ ತಗ್ಗಿರುವುದಲ್ಲದೆ ಸಾಮರ್ಥ್ಯವನ್ನೂ ಹೆಚ್ಚಿಸಿದೆ. ಪ್ರಮುಖ ಔದ್ಯಮಿಕ ಪ್ರಕ್ರಿಯೆಗಳಲ್ಲಿ ಎಐ ತಂತ್ರಜ್ಞಾನದ ಅಳವಡಿಕೆಯ ಲಾಭ ಗೋಚರಿಸುತ್ತಿದೆ. ಇದು ಕಂಪನಿಗಳಲ್ಲಿ ವಿಶ್ವಾಸ ಹೆಚ್ಚಿಸಿದ್ದು, ಎಐ ಅನ್ನು ಪ್ರಾಯೋಗಿಕವಾಗಿ ನೋಡದೆ ಮೂಲಾಧಾರ ತಂತ್ರಜ್ಞಾನವಾಗಿ ನೋಡುವ ಪರಿಪಾಠವನ್ನು ಬೆಳೆಸುತ್ತಿದೆ. ಎಐ ಅನ್ನು ನಿಯಂತ್ರಿಸುವ ನೀತಿ-ನಿರೂಪಣೆಗಳು ನಿಧಾನವಾಗಿ ಸ್ಪಷ್ಟಗೊಳ್ಳುತ್ತಿವೆ. ಇದು ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತಾ ಎಐನ ದೊಡ್ಡ ಪ್ರಮಾಣದ ನಿಯೋಜನೆಗೆ ದಾರಿ ಮಾಡಿಕೊಡುತ್ತಿದೆ. ಮುಖ್ಯವಾಗಿ, ಎಐ ತಂತ್ರಜ್ಞಾನವು ವಿದ್ಯುತ್ ಅಥವಾ ಇಂಟರ್ನೆಟ್ನಂತೆಯೇ ಸಾಮಾನ್ಯ ಉದ್ದೇಶದ ತಂತ್ರಜ್ಞಾನವಾಗಿದೆ. ಹೀಗಾಗಿ ಎಐ ತಂತ್ರಜ್ಞಾನವು ದೀರ್ಘಕಾಲೀನ ಬೆಳವಣಿಗೆಯನ್ನು ಸೂಚಿಸುತ್ತದೆ ಹಾಗೂ ದೂರಗಾಮಿಯಾಗಿ ಉಳಿಯಲಿದೆ.”



