ಡಿಜಿಟಲ್ ಅವಳಿ: ಅಮರತ್ವ ಪಡೆಯುವ ಸುಲಭ ದಾರಿ
AI ಅನಂತ ಅವತಾರ – ಭಾಗ 2
ಡಾ.ರಮೇಶ್ ನಿಂಬೆಮರದಳ್ಳಿ
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಸಂದರ್ಶನದಲ್ಲಿ ಎಐ ಸಾಧ್ಯತೆಗಳ ಕುರಿತು ಮಾತನಾಡುತ್ತಿದ್ದ ‘ಗೂಗಲ್ ಎಕ್ಸ್’ ಲ್ಯಾಬ್ನ ಸ್ಥಾಪಕ ಸೆಬಾಸ್ಟಿಯನ್ ಥ್ರನ್, ‘ಸಾವಿನ ನಂತರವೂ ಮನುಷ್ಯ ಜೀವಿಸಬಹುದು’ ಎಂಬ ಅಚ್ಚರಿಯ ಹೇಳಿಕೆ ನೀಡಿದರು. ಆ ಮಾತಿನ ಒಳಹೊಕ್ಕು ನೋಡಿದಾಗ ಅವರು ಹೇಳಿದ್ದು ‘ಹ್ಯೂಮನ್ ಡಿಜಿಟಲ್ ಟ್ವಿನ್’ ಎಂಬ ತಂತ್ರಜ್ಞಾನದ ಕುರಿತು ಎಂಬುದು ತಿಳಿಯಿತು. ಅಮರತ್ವದ ಆಸೆ ಹುಟ್ಟಿಸುತ್ತಿರುವ ಈ ತಂತ್ರಜ್ಞಾನದ ಬಗ್ಗೆ ಈ ವಾರದ ಲೇಖನದಲ್ಲಿ ವಿವರಿಸಲಾಗಿದೆ. ಜೊತೆಗೆ, ಸಾವಿನ ನಂತವೂ ಮನುಷ್ಯ ಡಿಜಿಟಲ್ ಜಗತ್ತಿನಲ್ಲಿ ‘ಜೀವಿಸುವುದನ್ನು’ ಈ ತಂತ್ರಜ್ಞಾನ ಸಾಧ್ಯವಾಗಿಸುವುದು ಹೇಗೆ ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.
ತಂತ್ರಜ್ಞಾನದ ಪ್ರಗತಿಯೊಂದಿಗೆ ಮಾನವ ಜೀವನದ ಹಲವು ಅಂಶಗಳು ಡಿಜಿಟಲ್ ಜಗತ್ತಿನೊಂದಿಗೆ ಹೆಣೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ "ಡಿಜಿಟಲ್ ಟ್ವಿನ್" ಅಥವಾ ಡಿಜಿಟಲ್ ಅವಳಿ ಎಂಬ ಪರಿಕಲ್ಪನೆ ಜನಪ್ರಿಯವಾಗುತ್ತಿದೆ. ಮನುಷ್ಯನ ನಡವಳಿಕೆ, ಆರೋಗ್ಯ, ಭಾವನೆಗಳು, ಮತ್ತು ಇನ್ನೂ ಹಲವು ಅಂಶಗಳನ್ನು ಅನುಕರಿಸುವ ‘ಮಾನವನ ಡಿಜಿಟಲ್ ಅವಳಿ’ (HDT) ತಂತ್ರಜ್ಞಾನವು ವ್ಯಕ್ತಿಯ ಮರಣಾನಂತರವೂ ಅವನು ‘ಜೀವಿಸಲು’ ಅನುವು ಮಾಡಿಕೊಡುತ್ತದೆ ಎಂದು ನಂಬಲಾಗಿದೆ. ಈ ತಂತ್ರಜ್ಞಾನ ಹಲವು ಸಾಮಾಜಿಕ ಪಲ್ಲಟ, ಹಲವು ರೀತಿಯ ಹೊಸ ಚರ್ಚೆಗಳನ್ನು ಹುಟ್ಟುಹಾಕಬಹುದು; ‘ಮನುಷ್ಯ’ ಎಂಬುದರ ಅರ್ಥವನ್ನೇ ಮರುವ್ಯಾಖ್ಯಾನಕ್ಕೆ ಒಳಪಡಿಸಬಹುದಾದ ಸಾಧ್ಯತೆಗಳೂ ಇವೆ.
ಏನಿದು ಡಿಜಿಟಲ್ ಅವಳಿ?
ಡಿಜಿಟಲ್ ಟ್ವಿನ್ ಎಂಬುದು ನೈಜ ಜಗತ್ತಿನ ಯಾವುದೇ ವಸ್ತು, ವ್ಯವಸ್ಥೆ ಅಥವಾ ವ್ಯಕ್ತಿಯ ಡಿಜಿಟಲ್ ನಕಲಾಗಿರುತ್ತದೆ. ಇದು IoT (ಇಂಟರ್ನೆಟ್ ಆಫ್ ಥಿಂಗ್ಸ್), AI ಮತ್ತು ರಿಯಲ್-ಟೈಮ್ ಡೇಟಾ ಅನಾಲಿಟಿಕ್ಸ್ ತಂತ್ರಜ್ಞಾನಗಳ ಸಂಯೋಜನೆಯಿಂದ ರೂಪುಗೊಂಡ ತಂತ್ರಜ್ಞಾನವಾಗಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದು ವ್ಯಕ್ತಿ, ವಸ್ತು ಅಥವಾ ವ್ಯವಸ್ಥೆಯ ಡಿಜಿಟಲ್ ಪ್ರತಿಕೃತಿ. ಇದು ನೈಜ ಜಗತ್ತಿನಲ್ಲಿರುವ ಯಾವುದೇ ಅಸ್ತಿತ್ವವನ್ನು ಡಿಜಿಟಲ್ ರೂಪದಲ್ಲಿ ಅನುಕರಿಸುತ್ತದೆ. ಇದರ ಮೂಲಕ ನಾವು ಭೌತಿಕ ಪ್ರಪಂಚದ ಸಂಕೀರ್ಣತೆಗಳನ್ನು ಡಿಜಿಟಲ್ ರೂಪದಲ್ಲಿ ಅರ್ಥಮಾಡಿಕೊಳ್ಳಲು, ವಿಶ್ಲೇಷಿಸಲು ಮತ್ತು ಸಮಸ್ಯೆಗಳನ್ನು ಮೊದಲೇ ಊಹಿಸಿ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.
ವ್ಯಕ್ತಿಗೆ ಹೊಸ ಅಸ್ತಿತ್ವ ನೀಡುವ ಮನುಷ್ಯನ ಅವಳಿ
ಡಿಜಿಟಲ್ ಟ್ವಿನ್ ತಂತ್ರಜ್ಞಾನವನ್ನು ಕೇವಲ ವಸ್ತು, ವ್ಯವಸ್ಥೆಗಳಿಗೆ ಮಾತ್ರವಲ್ಲದೆ ಮನುಷ್ಯನಿಗೂ ಅನ್ವಯಿಸಬಹುದು. ಇದನ್ನು ‘ಹ್ಯೂಮನ್ ಡಿಜಿಟಲ್ ಟ್ವಿನ್’ (HDT) ಅಥವಾ ‘ಮನುಷ್ಯನ ಡಿಜಿಟಲ್ ಅವಳಿ’ ಎಂದು ಕರೆಯಲಾಗುತ್ತದೆ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವ, ನಡವಳಿಕೆ, ಆಲೋಚನೆಗಳು ಮತ್ತು ಭಾವನೆಗಳನ್ನು ಡಿಜಿಟಲ್ ರೂಪದಲ್ಲಿ ಅನುಕರಿಸುವ ಡಿಜಿಟಲ್ ಪ್ರತಿಕೃತಿ. ಇನ್ನೂ ಸರಳವಾಗಿ, ಯಥಾವತ್ ನಮ್ಮನ್ನೇ ಹೋಲುವ, ಡಿಜಿಟಲ್ ಪ್ರಪಂಚದಲ್ಲಿ ಜೀವಂತವಾಗಿರುವ ನಮ್ಮದೇ ಒಂದು ನಕಲು. ಈ ನಕಲು ನಮ್ಮಂತೆಯೇ ನಡೆದುಕೊಳ್ಳುತ್ತದೆ, ನಮ್ಮಂತೆಯೇ ಆಲೋಚಿಸುತ್ತದೆ ಮತ್ತು ನಮ್ಮಂತೆಯೇ ಪ್ರತಿಕ್ರಿಯಿಸುತ್ತದೆ. ಇದನ್ನು ಸಾಧಿಸಲು ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್, ನ್ಯಾಚುಯಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ (NLP), ದೊಡ್ಡ ಪ್ರಮಾಣದ ಡೇಟಾ ವಿಶ್ಲೇಷಣೆ, ವರ್ಚುಯಲ್ ಹಾಗೂ ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ಸೆನ್ಸರ್ಗಳು, ವೇರೆಬಲ್ ಸಾಧನಗಳ ಸಹಾಯದಿಂದ ನೈಜ ಸಮಯದ ಡೇಟಾವನ್ನು ಕ್ಲೌಡ್ನಲ್ಲಿ ಸಂಗ್ರಹಿಸಿ ಭೌತಿಕ ಮತ್ತು ಡಿಜಿಟಲ್ ಅಸ್ತಿತ್ವಗಳ ನಡುವೆ ಏಕತೆ ಸಾಧಿಸಲಾಗುತ್ತದೆ.
ನಟರ ಅನುಪಸ್ಥಿತಿಯಲ್ಲೇ ನಟನೆ ಸಾಧ್ಯ
ಮನುಷ್ಯರ ಈ ‘ಡಿಜಿಟಲ್ ಅವಳಿ’ಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. ಉದಾಹರಣೆಗೆ, ಸಿನಿಮಾ ನಟರೊಬ್ಬರ ಡಿಜಿಟಲ್ ಟ್ವಿನ್ ರಚಿಸಿ ಅವರು ಜೀವಂತ ಇರುವಾಗಲೇ ಅವರ ಅನುಪಸ್ಥಿತಿಯಲ್ಲಿ ಸಿನಿಮಾನಗಳಲ್ಲಿ ನಟನೆಗೆ ಬಳಸಿಕೊಳ್ಳಬಹುದು ಅಥವಾ ಅವರ ಮರಣಾ ನಂತರ ಸಿನಿಮಾಗಳಲ್ಲಿ ಅವರ ನಟನೆಯನ್ನು ಮುಂದುವರಿಸಬಹುದು. ಎಂದರೆ, ನಟರು ಭೌತಿಕವಾಗಿ ಇಲ್ಲದಿದ್ದರೂ, ಅವರ ಡಿಜಿಟಲ್ ಅವಳಿ ನಟಿಸುವ ಪಾತ್ರಗಳು ಪರದೆಯ ಮೇಲೆ ಜೀವಂತವಾಗಿರುತ್ತವೆ. ಇದು ಕೇವಲ ಕಲ್ಪನೆಯಲ್ಲ, ಇಂತಹ ಪ್ರಯೋಗಗಳು ಈಗಾಗಲೇ ಹಾಲಿವುಡ್ನಲ್ಲಿ ನಡೆದಿವೆ. ‘ಸ್ಟಾರ್ವಾರ್ಸ್’ ನಟ ಪೀಟರ್ ಕುಶಿಂಗ್ ಅವರು ಮೃತರಾದ ಎಷ್ಟೋ ವರ್ಷಗಳ ನಂತರ ಅವರ ಹಿಂದಿನ ಸಿನಿಮಾಗಳ ದೃಶ್ಯಗಳನ್ನೇ ಬಳಸಿ ಸೃಷ್ಟಿಸಿದ ಅವರ ಡಿಜಿಟಲ್ ಟ್ವಿನ್, "ರೋಗ್ ಒನ್: ಎ ಸ್ಟಾರ್ ವಾರ್ಸ್ ಸ್ಟೋರಿ" ಚಲನಚಿತ್ರದಲ್ಲಿ ಅಭಿನಯಿಸಿತು. ಇತ್ತೀಚಿನ ವರ್ಷಗಳಲ್ಲಿ ಹಾಲಿವುಡ್ನ ಬ್ರೂಸ್ ವಿಲ್ಲೀಸ್, FKA ಟ್ವಿಗ್ಸ್, ಜ್ಯಾಕ್ ನಿಕ್ಲಾಸ್ ಅವರ ಡಿಜಿಟಲ್ ಅವಳಿಗಳನ್ನೂ ಸೃಷ್ಟಿಸಲಾಗಿದೆ.
ಡಿಜಿಟಲ್ ಅವಳಿಯ ಕಥೆ ಇಲ್ಲಿಗೇ ನಿಲ್ಲುವುದಿಲ್ಲ. ಈ ಸೈಬರ್ ಅಸ್ತಿತ್ವವನ್ನು ಸಾಹಿತ್ಯ, ಸಂಗೀತ ಮತ್ತು ಕಲೆಗೂ ಅನ್ವಯಿಸಬಹುದು. ಉದಾಹರಣೆಗೆ, ಒಬ್ಬ ಸಂಗೀತ ಸಂಯೋಜಕನ ಡಿಜಿಟಲ್ ಟ್ವಿನ್ ಅತನ ಮರಣದ ನಂತರವೂ ಹೊಸ ಸಂಗೀತ ಸೃಷ್ಟಿಸಬಹುದು. ಹಿನ್ನೆಲೆ ಗಾಯಕರು ಅವರ ಮರಣಾ ನಂತರವೂ ಹಾಡುವುದನ್ನು ಮುಂದುವರಿಸಬಹುದು.
ಪ್ರೀತಿ ಪಾತ್ರರ ನಂಟು ಅಜರಾಮರ
ಮನುಷ್ಯರ ಡಿಜಿಟಲ್ ಅವಳಿ ತಂತ್ರಜ್ಞಾನ ನಮ್ಮ ಪ್ರೀತಿ ಪಾತ್ರರನ್ನು ಎಂದೆಂದಿಗೂ ನಮ್ಮೊಂದಿಗೇ ಇರಿಸಿಕೊಳ್ಳಲು ಅವಕಾಶ ನೀಡುತ್ತದೆ. ಇದೊಂದು ರೀತಿಯಲ್ಲಿ ಮನುಷ್ಯನಿಗೆ ‘ಡಿಜಿಟಲ್ ಅಮರತ್ವ’ ನೀಡುತ್ತದೆ. ಒಬ್ಬ ವ್ಯಕ್ತಿ ಜೈವಿಕವಾಗಿ ತೀರಿಹೋಗಬಹುದು. ಆದರೆ ಅವರು ಜೀವಂತ ಇರುವಾಗಲೇ ಸೃಷ್ಟಿಸಿದ ಅವರ ‘ಡಿಜಿಟಲ್ ಅವಳಿ’ ಎಂದಿಗೂ ಸಾಯುವುದಿಲ್ಲ. ತೀರಿ ಹೋದ ವ್ಯಕ್ತಿಯ ಇಡೀ ವ್ಯಕ್ತಿತ್ವ ಡಿಜಿಟಲ್ ಜಗತ್ತಿನಲ್ಲಿ ಮರುಹುಟ್ಟು ಪಡೆದು ತನ್ನ ‘ಅಸ್ತಿತ್ವ’ ಮುಂದುವರಿಸುತ್ತದೆ. ತನ್ನ ಕುಟುಂಬದೊಂದಿಗೆ ಮಾತಾಡುತ್ತಾ, ನಗಿಸುತ್ತಾ, ಅಳಿಸುತ್ತಾ, ಹಳೆಯ ನೆನಪುಗಳನ್ನು ಮೆಲುಕುತ್ತಾ “ಜೀವನ” ಮುಂದುವರಿಸುತ್ತದೆ. ಯಾಕೆಂದರೆ ಈ ಡಿಜಿಟಲ್ ಅವಳಿಯಲ್ಲಿ ಅವರ ಹಿಂದಿನ ನೆನಪುಗಳು, ಅನುಭವಗಳೆಲ್ಲಾ ಜೋಪಾನವಾಗಿರುತ್ತವೆ. ಈ ತಂತ್ರಜ್ಞಾನ ಈ ಜಗತ್ತಿನೊಂದಿಗೆ ಮನುಷ್ಯನ ಡಿಜಿಟಲ್ ಅಸ್ತಿತ್ವ ಮತ್ತು ಶಾರೀರಿಕ ಅನುಪಸ್ಥಿತಿಯ ನಡುವೆ ಒಂದು ಹೊಸ ಬೆಸುಗೆಯನ್ನು ಬೆಸೆಯುತ್ತದೆ.
ಈ ತಂತ್ರಜ್ಞಾನ ಇನ್ನೂ ಹಲವು ರೂಪಗಳಲ್ಲಿ ಬಳಕೆಯಾಗುತ್ತದೆ. ಈ ಡಿಜಿಟಲ್ ಅವಳಿಯ ಸಹಾಯದಿಂದ ಅತ್ಯಂತ ಸಂಕೀರ್ಣವಾದ ಚಿಕಿತ್ಸೆಗಳನ್ನು ಸುಲಭವಾಗಿ ಕೈಗೊಳ್ಳಬಹುದು. ಉದಾಹರಣೆಗೆ, ಒಬ್ಬ ರೋಗಿಯ ಡಿಜಿಟಲ್ ಅವಳಿ ಸೃಷ್ಟಿಸಿ, ಅದರ ಮೂಲಕ ವೈದ್ಯರು ರೋಗ ಮತ್ತು ಚಿಕಿತ್ಸೆಯ ಪರಿಣಾಮಗಳನ್ನು ಮೊದಲೇ ಅರ್ಥಮಾಡಿಕೊಂಡು ಹೊಸ ಚಿಕಿತ್ಸೆಗಳನ್ನು ಪ್ರಯೋಗಿಸಬಹುದು. ಒಬ್ಬ ವ್ಯಕ್ತಿ ಏಕಕಾಲದಲ್ಲಿ ಹಲವು ಆನ್ಲೈನ್ ಮೀಟಿಂಗ್ಗಳಲ್ಲಿ ಭಾಗವಹಿಸಬಹುದು. ಶಿಕ್ಷಣದಲ್ಲಿ, ವಿದ್ಯಾರ್ಥಿಗಳ ಡಿಜಿಟಲ್ ಟ್ವಿನ್ಗಳನ್ನು ಬಳಸಿ ಅವರ ಕಲಿಕೆಯ ಪ್ರಕ್ರಿಯೆಯನ್ನು ವೈಯಕ್ತಿಕಗೊಳಿಸಬಹುದು. 4ನೇ ಕೈಗಾರಿಕಾ ಕ್ರಾಂತಿ (Industry 4.0) ಎಂದು ಕರೆಯಲಾಗುವ ಹೊಸ ಉತ್ಪಾದನಾ ಪ್ರಕ್ರಿಯೆಯಲ್ಲಿ ಡಿಜಿಟಲ್ ಟ್ವಿನ್ ಮಹತ್ವದ ಪಾತ್ರ ವಹಿಸಲಿದೆ. ಸ್ವಯಂಚಾಲಿತ ಯಂತ್ರಗಳು, ಸ್ವಯಂ ಉತ್ಪಾದನೆಯ ಸ್ಮಾರ್ಟ್ ಕೈಗಾರಿಕೆಗಳನ್ನು ಇದು ಸೃಷ್ಟಿಸಲಿದೆ.
‘ಮನುಷ್ಯತ್ವ’ದ ಹೊಸ ಸವಾಲುಗಳು
ಮನುಷ್ಯನ ಡಿಜಿಟಲ್ ಅವಳಿ ತಂತ್ರಜ್ಞಾನ ಮುಂದೆ ಹೊಸ ಸಾಧ್ಯತೆಗಳನ್ನು ತೆರೆಯುವಂತೆ ಹೊಸ ಸವಾಲುಗಳನ್ನೂ ನಮ್ಮ ಮುಂದಿಡಬಹುದು. ಮನುಷ್ಯರ ಡಿಜಿಟಲ್ ಟ್ವಿನ್ಗಳನ್ನು ದುರುದ್ದೇಶಪೂರಿತವಾಗಿ ಬಳಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಯ ಡಿಜಿಟಲ್ ಅವಳಿಯನ್ನು ಅವರ ಸಮ್ಮತಿಯಿಲ್ಲದೆ ಸೃಷ್ಟಿಸಿ, ಅದರ ಮೂಲಕ ಅವರ ವ್ಯಕ್ತಿತ್ವವನ್ನು ಹಾಳು ಮಾಡಬಹುದು. ಜೊತೆಗೆ, ಗೌಪ್ಯತೆ ಮತ್ತು ಸುರಕ್ಷತೆಯ ಪ್ರಶ್ನೆಗಳೂ ಎದುರಾಗುತ್ತವೆ.
ಡಿಜಿಟಲ್ ಲೋಕದಲ್ಲಿ ಡೇಟಾ ಎಂಬ ಅಮೂರ್ತ ರೂಪದಲ್ಲಿ ಅಸ್ತಿತ್ವ ಪಡೆಯುವ ಮನುಷ್ಯನ ಡಿಜಿಟಲ್ ಪ್ರತಿ ‘ಆಪ್ಟಿಮಸ್’ನಂತಹ ಅತ್ಯಾಧುನಿಕ ರೋಬಾಟ್ ಒಳಗೆ ಸೇರಿಕೊಂಡರೆ, ಮೃತ ವ್ಯಕ್ತಿಗೆ ಭೌತಿಕ ಅಸ್ತಿತ್ವವೂ ಒದಗುತ್ತದೆ. ಮನುಷ್ಯ ರೂಪದ ರೋಬಾಟ್ ಆ ಡಿಜಿಟಲ್ ವ್ಯಕ್ತಿಗೆ ಓಡಾಡುವ, ನೋಡುವ, ಎದುರಿಗಿದ್ದವರ ಜೊತೆ ಮಾತನಾಡುವ, ಅವರ ಮಾತು ಆಲಿಸುವ, ಕೈಕುಲುಕುವ, ನಗೆ, ಕೋಪವನ್ನೂ ವ್ಯಕ್ತಪಡಿಸುವ ಮನುಷ್ಯ ಚಹರೆಗಳ ಅಭಿವ್ಯಕ್ತಿಗೆ ದಾರಿಮಾಡಿಕೊಡುತ್ತದೆ.
ಉದಾಹರಣೆಗೆ, ‘ರಂಗಪ್ಪ’ ಎನ್ನುವ ವ್ಯಕ್ತಿಯೊಬ್ಬನ ಡಿಟಿಟಲ್ ಅವಳಿ ಸೃಷ್ಟಿಯಾಗಿದೆ ಎಂದಿಟ್ಟುಕೊಳ್ಳೋಣ. ಅವರು ಮೃತರಾದ ಬಳಿಕ ಅವರ ಡಿಜಿಟಲ್ ಅವಳಿಯನ್ನು ರೋಬಾಟ್ಗೆ ವರ್ಗಾಯಿಸಲಾಗಿದೆ ಎಂದು ಭಾವಿಸೋಣ. ಈಗ ರೋಬಾಟ್ ಒಳಗಿರುವ ರಂಗಪ್ಪನ ಅಸ್ತಿತ್ವವನ್ನು ಏನೆಂದು ಗುರುತಿಸುವುದು. ವ್ಯಕ್ತಿಯೋ? ಇಲ್ಲ ರೋಬಾಟೋ? ರಂಗಪ್ಪ ಜೈವಿಕ ಶರೀರವನ್ನು ಕಳೆದುಕೊಂಡಿರಬಹುದು ಆದರೆ ಆತನ ಅಸ್ತಿತ್ವ ಡಿಜಿಟಲ್ ಟ್ವಿನ್ ಮೂಲಕ ರೋಬಾಟ್ ಎಂಬ ಲೋಹದ ಶರೀರದಲ್ಲಿ ಜೋಪಾನವಾಗಿರುತ್ತದೆ. ಅದೇ ರಂಗಪ್ಪನ ವ್ಯಕ್ತಿತ್ವ, ಆಲೋಚನೆ, ಮಾತು, ಶೈಲಿ, ಭಾವನೆ ಎಲ್ಲವೂ ರೋಬಾಟ್ ಒಳಗೆ ಅಡಕವಾಗಿರುತ್ತದೆ. ಆಗ ರೋಬಾಟ್ ಅನ್ನು “ಅದು” ಎನ್ನುವುದೋ, ಅಥವಾ “ಅವನು” ಎನ್ನುವುದೋ ಎಂಬ ಪ್ರಶ್ನೆ ಮೂಡುತ್ತದೆ. ಆಗ ಕಾನೂನಾತ್ಮಕವಾಗಿ “ಮನುಷ್ಯ” ಎಂದರೇನು ಎಂಬುದನ್ನು ಹೊಸದಾಗಿ ವ್ಯಾಖ್ಯಾನಿಸಬೇಕಾಗುತ್ತದೆ. ಮನುಷ್ಯನನ್ನು ‘ಜೈವಿಕ ಮನುಷ್ಯ’, ‘ರೋಬಾಟ್ ಮನುಷ್ಯ’ ಎಂದು ಕರೆಯುವ ಭಿನ್ನ ಕಲ್ಪನೆಗಳೂ ಚಾಲ್ತಿಗೆ ಬರಬಹುದು. ಯಾಕೆಂದರೆ, ‘ಸೋಫಿಯಾ’ ಎಂಬ ಹ್ಯೂಮನಾಯ್ಡ್ ರೋಬಾಟ್ಗೆ ಸೌದಿ ಅರೇಬಿಯಾ ಸರಕಾರ 2017ರಲ್ಲೇ ನಾಗರಿಕತ್ವ ನೀಡಿದೆ. ಹಾಗಿದ್ದ ಮೇಲೆ ರಂಗಪ್ಪನ ಡಿಜಿಟಲ್ ಅವಳಿಯನ್ನು ಆಧರಿಸಿ ರಂಗಪ್ಪ ಇನ್ನೂ ಜೀವಂತ ಎಂದು ವಾದಿಸುವುದು ತಾರ್ಕಿಕವೇ ಆಗಿದೆ.
‘ಮೊಲೆ ಮುಡಿ ಬಂದಡೆ ಹೆಣ್ಣೆಂಬರು/ಗಡ್ಡ ಮೀಸೆ ಬಂದಡೆ ಗಂಡೆಂಬರು/ನಡುವೆ ಸುಳಿವ ಆತ್ಮನು/ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ ರಾಮನಾಥ,’ ಎನ್ನುವ ವಚನಕಾರರು ರೂಪ, ಬಣ್ಣ, ಅಂಗಗಳಿಂದ ಕೂಡಿದ ಮನುಷ್ಯನ ಶಾರೀರಿಕ ಚಹರೆ ‘ವ್ಯಕ್ತಿ’ಯೋ ಅಥವ ಅವರ ಬುದ್ಧಿ, ಭಾವ, ನೆನಪು, ಅನುಭವ, ಆತ್ಮಗಳಿಂದ ಕೂಡಿದ ಆಂತರ್ಯದ ಚಹರೆಯೇ ‘ವ್ಯಕ್ತಿ’ಯೋ ಎನ್ನುವ ಪ್ರಶ್ನೆಯನ್ನು ಮುಂದಿಡುತ್ತಾರೆ. ಹ್ಯೂಮನ್ ಡಿಜಿಟಲ್ ಟ್ವಿನ್ಗಳ ಕಾಲದಲ್ಲಿ ಈ ಪ್ರಶ್ನೆ ಪ್ರಾಮುಖ್ಯತೆ ಪಡೆಯುತ್ತದೆ. ಒಟ್ಟಿನಲ್ಲಿ ಮನುಷ್ಯನ ಡಿಜಿಟಲ್ ಅವಳಿ ತಂತ್ರಜ್ಞಾನ “ಮನುಷ್ಯತ್ವ”ವನ್ನು ಮರುವ್ಯಾಖ್ಯಾನಕ್ಕೆ ಒಡ್ಡುವಂತೂ ನಿಜ. ಸದ್ಯಕ್ಕೆ ಇವೆಲ್ಲಾ ನಮ್ಮ ಊಹೆ, ಕಲ್ಪನೆಗಳಷ್ಟೇ. ಈ ತಂತ್ರಜ್ಞಾನದ ನಿಜವಾದ ಪಲ್ಲಟಗಳನ್ನು, ಸವಾಲುಗಳನ್ನು ಅದು ಚಾಲ್ತಿಗೆ ಬಂದಾಗಲಷ್ಟೇ ನೋಡಲು ಸಾಧ್ಯ.
ಡಿಟಿಟಲ್ ಅವಳಿಯ ನೈಜ ಉದಾಹರಣೆಗಳು
ಹೃದಯದ ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆ ನಡೆಸಲು ಮತ್ತು ವಿಶ್ಲೇಷಿಸಲು TCS ಹೃದಯದ ಡಿಜಿಟಲ್ ಟ್ವಿನ್ ರಚಿಸಿದೆ
ಸೀಮೆನ್ಸ್, GE, ಟೆಸ್ಲಾ ಕಂಪನಿಗಳು ನೈಜ-ಸಮಯದಲ್ಲಿ ಕಾರ್ಯಕ್ಷಮತೆ ಮೇಲ್ವಿಚಾರಣೆ ಮಾಡಲು ಈ ತಂತ್ರಜ್ಞಾನವನ್ನು ಬಳಸುತ್ತಿವೆ
ಸಿಂಗಾಪುರ, ಬಾರ್ಸಿಲೋನಾ ಸ್ಮಾರ್ಟ್ ನಗರಗಳ ನಿರ್ವಹಣೆಯಲ್ಲೂ ಇದನ್ನು ಬಳಸಲಾಗುತ್ತಿದೆ
ಮೆಡ್ಟ್ರಾನಿಕ್ ಮತ್ತು ಫಿಲಿಪ್ಸ್ ತಮ್ಮ ವೈದ್ಯಕೀಯ ಸಾಧನಗಳ ಕಾರ್ಯಕ್ಷಮತೆ ಪರಿಶೀಲಿಸಲು ಹಾಗೂ ರೋಗಿಗಳ ಆರೋಗ್ಯ ಸ್ಥಿತಿ ಉತ್ತಮಗೊಳಿಸಲು ಡಿಜಿಟಲ್ ಟ್ವಿನ್ಗಳನ್ನು ರಚಿಸಿವೆ.
ನಾಸಾ ತನ್ನ ಬಾಹ್ಯಾಕಾಶ ಯಾನಗಳ ಡಿಜಿಟಲ್ ಟ್ವಿನ್ಗಳನ್ನು ರಚಿಸಿ ಆ ಯಾನಗಳ ಸ್ಥಿತಿಯನ್ನು ನಿಜ-ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತಿದೆ. ಸಮಸ್ಯೆಗಳನ್ನು ಮುಂಚಿತವಾಗಿಯೇ ಗುರುತಿಸಲು ಇದು ಸಹಕಾರಿ.
ಬೋಯಿಂಗ್ ತನ್ನ ವಿಮಾನಗಳ ಡಿಜಿಟಲ್ ಟ್ವಿನ್ಗಳನ್ನು ರಚಿಸಿ ಅವುಗಳನ್ನು ನಿರ್ವಹಿಸುತ್ತಿದೆ.



