ಲೇಖನ ಬರೆಯಲು ತಡಕಾಡಬೇಡಿ, ಎಐ ಬಳಸಿ ನೋಡಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 11: ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ಲೇಖನ ಬರೆಯಬೇಕಾದ ಸಂದರ್ಭ ಯಾರಿಗೆ ಯಾವಾಗ ಬೇಕಾದರೂ ಬರಬಹುದು. ಪರ್ತಕರ್ತರಿಗೆ ಅದು ದಿನ ನಿತ್ಯದ ಹೊಟ್ಟೆಪಾಡಿನ ಕೆಲಸ. ಶಿಕ್ಷಕರಿಗೆ ಲೇಖನ ಬರೆಯುವುದು ಅತಿ ಮುಖ್ಯ ಕೌಶಲ್ಯ. ಲೇಖನ ಎಂದರೆ ಅದು ಪೂರ್ಣಪ್ರಮಾಣದ ಲೇಖನವೇ ಆಗಬೇಕಿಲ್ಲ. ಒಂದು ವಿಚಾರವನ್ನು ಅಥವಾ ಆಲೋಚನೆಯನ್ನು ಬರಹದ ರೂಪದಲ್ಲಿ ವ್ಯವಸ್ಥಿತವಾಗಿ ಜೋಡಿಸುವ ಕ್ರಮ. ಹೀಗಾಗಿ ಎಲ್ಲರಿಗೂ ಲೇಖನ ಬರೆಯುವ ಕೌಶಲ ಇರಬೇಕು. ಆದರೆ ಲೇಖನ ಬರೆಯುವುದು ಸರಳ ಕೆಲಸವೇನೂ ಅಲ್ಲ. ಬರೆಯಲು ಕುಳಿತರೆ ಯೋಚನೆಗಳು ಢಾಳಾಗಿ ಹರಿದುಬರುತ್ತವೆ. ಅವುಗಳನ್ನು ಒಪ್ಪವಾಗಿ ಜೋಡಿಸುವುದೇ ಸವಾಲು. ಇನ್ನು ಮಾಹಿತಿ ಅಗತ್ಯವಿರುವ ಲೇಖನವಾದರಂತೂ ಮುಗಿದೇ ಹೋಯಿತು. ಪ್ರತಿಯೊಂದು ಮಾಹಿತಿಗೂ ತಡಕಾಡಬೇಕು. ಅಷ್ಟರಲ್ಲಿ ಬರೆಯುವ ಲಯ ತಪ್ಪಿ, ಹುಮ್ಮಸ್ಸು ಮಾಯವಾಗಿರುತ್ತದೆ. ಇರಲಿ, ಇಲ್ಲಿ ಲೇಖನ ಹೇಗೆ ಬರೆಯಬೇಕು ಎಂದು ನಿಮಗೆ ತಿಳಿಸಲು ನಾನು ಈ ಲೇಖನ ಬರೆಯುತ್ತಿಲ್ಲ. ಲೇಖನ ಬರೆಯುವ ಸಮಸ್ಯೆಗಳಿಗೆ ಒಂದು ಸುಲಭ ಪರಿಹಾರ ಇದೆ ಎನ್ನುವುದನ್ನು ತೋರಿಸುತ್ತಿದ್ದೇನೆ.
ಕಟ್ಟುಕಥೆ ಬಗ್ಗೆ ಎಚ್ಚರ ಇರಲಿ
ಏನದು ಪರಿಹಾರ? ಇದ್ದೇ ಇದ್ಯಲ್ಲ ಎಐ. ಲೇಖನಗಳನ್ನು ಬರೆಯಲು ನಾವು ಎಐ ಮಾಡೆಲ್ಗಳನ್ನು ಬಳಸಿಕೊಳ್ಳಬಹುದು. ಯಾವುದರಲ್ಲಿ ಎಡವಟ್ಟು ಮಾಡಿದರೂ ಲೇಖನ ಬರೆಯುವುದರಲ್ಲಿ ಮಾತ್ರ ಎಐ ಮಾಡೆಲ್ಗಳದು ಎತ್ತಿದ ಕೈ. ಅದರೆ, ಅದರಲ್ಲಿರುವ ಮಾಹಿತಿ ಸರಿ ಇದೆಯೇ ಎಂದು ನೋಡಿಕೊಳ್ಳಬೇಕು. ಇಲ್ಲವಾದರೆ ತಲೆಯ ಮೇಲೆ ಹೊಡೆದಂತೆ ಸುಳ್ಳುಗಳನ್ನೇ ಪೋಣಿಸುತ್ತಾ ಒಬ್ಬ ಸಂಶೋಧಕನೇ ಲೇಖನ ಬರೆಯುವಂತೆ ಬರೆದುಕೊಡುತ್ತವೆ. ಆದರೆ, ಅದರಲ್ಲಿರುವುದು ಬಹುತೇಕ ಕಟ್ಟುಕಥೆ. ಇದನ್ನು ಹ್ಯಾಲುಸಿನೇಷನ್ ಎನ್ನುತ್ತಾರೆ. ಎಂದರೆ, ಎಐ ಮಾಡೆಲ್ಗಳಿಗೆ ನಾವು ಕೇಳಿದ ವಿಷಯ ಗೊತ್ತಿಲ್ಲದಿದ್ದರೆ, ಸರಿಯಾಗಿ ಇಂಟರ್ನೆಟ್ನಲ್ಲಿ ಸಿಗದೇ ಹೋದರೆ ಸುಮ್ಮನೇ ಕಟ್ಟುಕಥೆ ಕಟ್ಟುತ್ತವೆ. ಒಟ್ಟಿನಲ್ಲಿ ಗ್ರಾಹಕ ಮಹಾಶಯರಿಗೆ ಯಾವುದನ್ನೂ ಇಲ್ಲ ಎನ್ನದೆ ಕೆಲಸ ಮಾಡಿಕೊಡಬೇಕು ಎನ್ನುವುದು ಅವುಗಳಿಗೆ ಹೇಳಿಕೊಟ್ಟಿರುವ ಮೂಲಭೂತ ಪಾಠ. ಹೀಗಾಗಿ ಸುಳ್ಳಾದರೂ ಹೇಳಿ ನಮ್ಮನ್ನು ಸಮಾಧಾನಪಡಿಸಲು ಯತ್ನಿಸುತ್ತವೆ. ಹೀಗಾಗಿ ನಾವು ನಮ್ಮ ಸೂಚನೆಯನ್ನೇ ಈ ವಿಷಯವನ್ನು ಸೇರಿಸಿಬಿಡಬೇಕು. ಸುಳ್ಳು ಹೇಳದೆ, ನಂಬಲರ್ಹ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರಾಮಾಣಿಕವಾಗಿ ಲೇಖನ ಬರೆಯಿರಿ ಎಂದು ಸೂಚನೆ ಕೊಟ್ಟರೆ ಎಐ ಮಾಡೆಲ್ಗಳು ಆದಷ್ಟೂ ಸತ್ಯಕ್ಕೆ ಹತ್ತಿರವಾಗಿರಲು ಯತ್ನಿಸುತ್ತವೆ.
ಹಾಗೆಂದು ಎಲ್ಲಾ ಸಮಯದಲ್ಲೂ ಎಐಗಳು ಸುಳ್ಳು ಮಾಹಿತಿಯನ್ನೇ ಒದಗಿಸುತ್ತವೆ ಎಂದಲ್ಲ. ಕೆಲವೊಮ್ಮೆ ಹಾಗಾಗುತ್ತದೆ. ನಾವು ಎಚ್ಚರವಹಿಸಬೇಕು. ಇಲ್ಲೊಂದು ವಿಚಾರವನ್ನು ಸ್ಪಷ್ಟಪಡಿಸಿಬಿಡುತ್ತೇನೆ. ಎಐ ಬಳಿ ಲೇಖನ ಬರೆಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ಪರಿಶೀಲಿಸಿದರೆ ಆ ಲೇಖನವನ್ನು ಎಲ್ಲಿಯೂ ಬಳಸಬೇಡಿ. ಎಐ ಬರೆದ ಲೇಖನವನ್ನು ಡ್ರಾಫ್ಟ್ ಎಂದುಕೊಂಡು ಅದನ್ನು ಓದಿ, ತಿದ್ದಿ ತೀಡಿ ನಿಮಗೆ ಬೇಕಾದಂತೆ ಲೇಖವನ್ನು ರೂಪಿಸಿಕೊಳ್ಳಿ. ಇದು ಲೇಖನದ ಚೆಂದದ ವಿಚಾರವಲ್ಲ. ತಪ್ಪು ಮಾಹಿತಿ ಇರಬಹುದಾದ ಸಾಧ್ಯತೆ ಒಂದು, ಅಪಾಯಕಾರಿ ಪೂರ್ವಗ್ರಹಗಳು ಲೇಖನದಲ್ಲಿ ಸೇರಿಬಿಡಬಹುದು. ಜೀವಂತ ಇಲ್ಲದ ವ್ಯಕ್ತಿಯ ಮಾತುಗಳನ್ನು ಲೇಖನದಲ್ಲಿ ಸೇರಿಸಿಬಿಡಬಹುದು. ಇನ್ನೂ ಏನೇನೋ ಯಡವಟ್ಟುಗಳು ಆಗುವ ಸಂಭವ ಇರುತ್ತದೆ. ಹೀಗಾಗಿ ನಮ್ಮ ಅಂತಿಮ ಪರಿಶೀಲನೆ ಅತ್ಯಗತ್ಯ.
ಇಷ್ಟೆಲ್ಲಾ ಸಮಸ್ಯೆ ಇದ್ದರೆ ಲೇಖನ ಬರೆಯುವುದ್ಕೆ ಎಐಗಳನ್ನೇಕೆ ಬಳಸಬೇಕು ಎಂದು ನೀವು ಯೋಚಿಸುತ್ತಿರಬಹುದು. ಮೇಲೆ ಹೇಳಿದ ಸಮಸ್ಯೆಗಳು ಬಂದೇ ಬರುತ್ತವೆ ಎಂದಲ್ಲ, ಸಂಭವ ಇದೆ ಎಂದಷ್ಟೇ ಹೇಳಿದೆ. ನಿಮ್ಮ ಆಲೋಚನೆಗಳಿಗೆ ಒಂದು ಆಕಾರ ಕೊಡುವುದಕ್ಕಾದರೂ ಈ ಡ್ರಾಫ್ಟ್ ಸಹಾಯಕವಾಗುತ್ತದೆ. ಮಾಹಿತಿ ಹುಡುವುದು ತಪ್ಪುತ್ತದೆ. ಲೇಖನದಲ್ಲಿ ಏನೆಲ್ಲಾ ಸೇರಿಸಬೇಕು ಎನ್ನುವುದು ತಿಳಿಯುತ್ತದೆ. ಹೀಗೆ ಬಹಳ ಸಮಯ ಉಳಿಯುತ್ತದೆ. ನೀವು ಯಾವ ಮಾಡೆಲ್ ಬಳಸುತ್ತೀರಿ ಮತ್ತು ನಿಮ್ಮ ಸೂಚನೆಗಳನ್ನು ಹೇಗೆ ಬರೆಯುತ್ತೀರಿ ಎನ್ನುವುದರ ಮೇಲೆ ಲೇಖನದ ಗುಣಮಟ್ಟ ಅಡಗಿರುತ್ತದೆ.
🧠 ಇಂದಿನ ಪ್ರಾಂಪ್ಟ್:
“ಹೊಸಬರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರಿಚಯಿಸುವ ಬಗ್ಗೆ ಸುಲಭವಾಗಿ ಅರ್ಥವಾಗುವಂತೆ 500 ಪದಗಳಲ್ಲಿ ಲೇಖನವನ್ನು ಬರೆಯಿರಿ. AI ಎಂದರೇನು, ಅದು ದೈನಂದಿನ ಜೀವನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಕುರಿತು ಎಲ್ಲರೂ ತಿಳಿಯುವುದು ಏಕೆ ಮುಖ್ಯ ಎಂಬುದನ್ನು ವಿವರಿಸಿ. ಸರಳ ಭಾಷೆ, ಸ್ಪಷ್ಟ ಉದಾಹರಣೆಗಳ ಸಹಿತ ಮಾಹಿತಿಯುಕ್ತ ಲೇಖನ ರಚಿಸಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ನಲ್ಲಿ ಬಳಸಿ:
ChatGPT → https://chatgpt.com
Gemini → https://gemini.google.com/app
Perplexity → https://www.perplexity.ai
Copilot → https://copilot.microsoft.com
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ಭವಿಷ್ಯವು AI ಬಗ್ಗೆ ಆತಂಕಪಡುವವರಿಗಲ್ಲ, ಅದನ್ನು ಅರ್ಥಮಾಡಿಕೊಳ್ಳುವವರಿಗಿದೆ”.
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence #Brainstroming #BusinessIdea


