ಇನ್ನು 6 ತಿಂಗಳಲ್ಲಿ ಎಚ್ಆರ್ ಕೆಲಸಕ್ಕೆ ಕಂಟಕ
ಎಐ ಅನಂತ ಅವತಾರ – ಭಾಗ 17
ಡಾ.ರಮೇಶ್ ನಿಂಬೆಮರದಳ್ಳಿ
· ಆಪತ್ತಿನಲ್ಲಿ ನೇಮಕಾತಿ ಸಿಬ್ಬಂದಿ ಮತ್ತು ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ಗಳು
· ಪೂರ್ತಿ ರಿಕ್ರೂಟ್ಮೆಂಟ್ ಕೆಲಸ ನಿಭಾಯಿಸುವ ಕಾಮೆಟ್ ಬ್ರೌಸರ್
· ಇನ್ನಾರು ತಿಂಗಳಲ್ಲಿ ಏಜೆಂಟಿಕ್ ಎಐನ ನಿಜ ಸಾಮರ್ಥ್ಯ ಬಯಲು
· 10 ಲಕ್ಷ ರಿಕ್ರೂಟರ್ ಉದ್ಯೋಗ ರೀಪ್ಲೇಸ್ ಆಗುವ ಆತಂಕ
· ಸೋಷಿಯಲ್ ಮೀಡಿಯಾ ಬಳಕೆ ತಗ್ಗಿಸಿ, ಎಐ ಕಲಿಯಿರಿ: ಅರವಿಂದ್ ಶ್ರೀನಿವಾಸ್ ಸಲಹೆ
ಇನ್ಸ್ಟಾಗ್ರಾಂನಲ್ಲಿ ಮಿತಿಯಿಲ್ಲದೆ ಸ್ಕ್ರಾಲ್ ಮಾಡುತ್ತಾ ಗಂಟೆಗಟ್ಟಲೆ ಸಮಯ ಕಳೆಯುವುದನ್ನು ನಿಲ್ಲಿಸಿ, ಎಐ ಬಳಕೆಯಲ್ಲಿ ಹೆಚ್ಚಿನ ಸಮಯ ವ್ಯಯಿಸಿ. ಇದರಿಂದ ನೀವು ಬೆಳೆಯುವುದು ಮಾತ್ರವಲ್ಲ ಸಮಾಜವೂ ಬೆಳೆಯುತ್ತದೆ. ಎಐ ಬಳಕೆಯ ಕಾರಣದಿಂದ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಜನ ಉದ್ಯೋಗ ಕಳೆದುಕೊಳ್ಳುತ್ತಾರೆ. ಆದರೆ ಎಐ ಬಳಕೆ ಕರಗತ ಮಾಡಿಕೊಳ್ಳುವವರು ಉದ್ಯೋಗ ಮಾರುಕಟ್ಟೆಯಲ್ಲಿ ಮುಂದಿರುತ್ತಾರೆ. ಒಂದೋ ಉದ್ಯೋಗ ಕಳೆದುಕೊಳ್ಳುವವರು ಸ್ವಂತ ಕಂಪನಿಗಳನ್ನು ಕಟ್ಟುತ್ತಾರೆ ಆಮೂಲಕ ಎಐ ಬಳಸುತ್ತಾರೆ. ಕೆಲಸ ಕಳೆದುಕೊಂಡವರು ಆಮೇಲೆ ಎಐ ಕಲಿತು ಹೊಸ ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಾರೆ.
-ಅರವಿಂದ್ ಶ್ರೀನಿವಾಸ್ ಸ್ಥಾಪಕ ಮತ್ತು ಸಿಇಒ, ಪರ್ಪ್ಲೆಕ್ಸಿಟಿ ಎಐ
“ಮುಂದಿನ ಆರು ತಿಂಗಳಿಂದ ಒಂದು ವರ್ಷದಲ್ಲಿ ರಿಕ್ರೂಟರ್ ಮತ್ತು ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ಗಳ ಕೆಲಸ ಬಹುತೇಕ ಏಜೆಂಟಿಕ್ ಎಐ ಪಾಲಾಗಲಿದೆ. ಎಐ ಗೆ ಹೊಂದಿಕೊಂಡವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಎಐಗೆ ಹೊಂದಿಕೊಳ್ಳದವರು ಹಿಂದೆ ಸರಿಯುತ್ತಾರೆ. ಇದು ನಡೆಯುವುದು ಖಚಿತ”- ಇದು ಪರ್ಪ್ಲೆಕ್ಸಿಟಿ ಎಐನ ಸ್ಥಾಪಕ ಮತ್ತು ಸಿಇಒ ಅರವಿಂದ್ ಶ್ರೀನಿವಾಸ್ ಕೊಟ್ಟ ನೇರ ವಾರ್ನಿಂಗ್.
ಮ್ಯಾಥ್ಯೂ ಬರ್ಮನ್ ಅವರ ಪಾಡ್ಕಾಸ್ಟ್ನಲ್ಲಿ ಏಜೆಂಟಿಕ್ ಎಐನ ಸಂಭವನೀಯ ಪರಿಣಾಮಗಳ ಕುರಿತು ಅವರು ವಿವರಿಸುತ್ತಾ ಎಐನಿಂದ ಭವಿಷ್ಯದಲ್ಲಿ ಉಂಟಾಗುವ ಉದ್ಯೋಗ ನಷ್ಟದ ಬಗ್ಗೆ ಎಚ್ಚರಿಸಿದರು. ಅದರಲ್ಲೂ ವಿಶೇಷವಾಗಿ ಅವರ “ಕಾಮೆಟ್” ಎಂಬ ಏಜೆಂಟಿಕ್ ಎಐ ಎಚ್ಆರ್ ಅಥವಾ ಮಾನವ ಸಂಪನ್ಮೂಲ ಉದ್ಯೋಗಿಗಳು ಮತ್ತು ಕಾರ್ಯನಿರ್ವಾಹಕ ಸಹಾಯಕರ ಬಹುತೇಕ ಕೆಲಸಗಳನ್ನು ತಾನೇ ಪೂರ್ತಿಯಾಗಿ ನಿರ್ವಹಿಸಲಿದೆ ಎಂದಿದ್ದಾರೆ. ಇದು ಮುಂದಿನ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಸಾಧ್ಯವಾಗಲಿದೆ ಎಂದವರು ಭವಿಷ್ಯ ನುಡಿದಿದ್ದಾರೆ.
ಮತ್ತೊಂದೆಡೆ, Fiverr ನ ಸಿಇಒ ಮಿಚಾ ಕೌಫ್ಮನ್ ಕೂಡ ಇದೇ ರೀತಿಯ ಬಾಂಬ್ ಸಿಡಿಸಿದ್ದಾರೆ. ಅವರು ತಮ್ಮ ಉದ್ಯೋಗಿಗಳಿಗೆ ಪತ್ರ ಬರೆದು ಎಐ ನನ್ನ ಕೆಲಸವೂ ಸೇರಿದಂತೆ ನಿಮ್ಮ ಕೆಲಸಗಳನ್ನು ಕಸಿಯಲಿದೆ. ಪ್ರೋಗ್ರಾಮರ್ಗಳು, ವಿನ್ಯಾಸಕರು, ಪ್ರಾಡಕ್ಟ್ ಮ್ಯಾನೇಜರ್ಗಳು, ಡೇಟಾ ಸೈಂಟಿಸ್ಟ್ಗಳು, ವಕೀಲರು, ಗ್ರಾಹಕ ಸೇವಾದಾರರು, ಮಾರಾಟಗಾರರು ಮತ್ತು ಹಣಕಾಸು ವೃತ್ತಿಪರರಿಗೆ ಎಐನಿಂದ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಎಐ ಕ್ಷೇತ್ರದ ದಿಗ್ಗಜರ ಈ ಹೇಳಿಕೆಗಳು ಎಐ ಉದ್ಯೋಗ ಕ್ಷೇತ್ರದಲ್ಲಿ ಉಂಟುಮಾಡುವ ಪಲ್ಲಟಗಳನ್ನು ಸಾರಿ ಹೇಳುತ್ತಿವೆ.
ಕಾಮೆಟ್ ಎಂಬ ಏಜೆಂಟಿಕ್ ಧೂಮಕೇತು
ಪರ್ಪ್ಲೆಕ್ಸಿಟಿ ಎಐ ತನ್ನದೇ ಏಜೆಂಟಿಕ್ ಎಐ ಸಾಮರ್ಥ್ಯದ ‘ಕಾಮೆಟ್’ ಎಂಬ ವೆಬ್ ಬ್ರೌಸರ್ ಬಿಡುಗಡೆ ಮಾಡಿದ್ದು, ಕೆಲವೇ ಜನರಿಗೆ ಇದನ್ನು ಪ್ರಾಯೋಗಿಕ ಬಳಕೆಗೆ ನೀಡಿದೆ. ಅದನ್ನು ಬಳಸಿದವರು ಅದರ ಸಾಧ್ಯತೆ ಮತ್ತು ಸಾಮರ್ಥ್ಯಗಳನ್ನು ಕಂಡು ದಂಗಾಗಿ ಹೋಗಿದ್ದಾರೆ. ಈ ಬ್ರೌಸರ್ ಮುಂದಿನ ದಿನಗಳಲ್ಲಿ ಎಲ್ಲರ ಬಳಕೆಗೂ ಸಿಗಲಿದ್ದು, ಮುಂದಿನ ಆರು ತಿಂಗಳು ಇಲ್ಲವೇ ವರ್ಷದಲ್ಲಿ ಭಾರಿ ಬದಲಾವಣೆಗೆ ಒಳಗಾಗಲಿದೆ. ಕಾಮೆಟ್ನ ನಿಜ ಸಾಮರ್ಥ್ಯ ಬಯಲಾಗುವುದೇ ಆಗ. ಈ ಏಜೆಂಟಕ್ ಎಐ ತರಬಹುದಾದ ನಿರುದ್ಯೋಗ ಸಾಧ್ಯತೆಯ ಕುರಿತು ಅರಿವಿಂದ್ ಶ್ರೀನಿವಾಸ್ ವಿವರಿಸಿದ್ದಾರೆ.
ಅವರೇ ಹೇಳುವಂತೆ, “ನೇಮಕಾತಿ ಮಾಡುವವರು ಒಂದು ವಾರದಲ್ಲಿ ಮಾಡುವ ಕೆಲಸವನ್ನು ಒಂದು ಎಐ ಪ್ರಾಂಪ್ಟ್ ಮಾಡುತ್ತದೆ. ಅಭ್ಯರ್ಥಿಗಳನ್ನು ಹುಡುಕುವುದು, ಅವರನ್ನು ಸಂಪರ್ಕಿಸುವುದು, ಅವರ ಇಮೇಲ್ಗಳನ್ನು ಟ್ರ್ಯಾಕ್ ಮಾಡಿ ಪ್ರತ್ಯುತ್ತರಗಳನ್ನು ಬರೆಯುವುದು, ಸಂಬಂಧಿಸಿದ ಗೂಗಲ್ ಶೀಟ್ಗಳನ್ನು ಅಪ್ಡೇಟ್ ಮಾಡುವುದು, ಅಭ್ಯರ್ಥಿಗಳನ್ನು ಪಾಲೋ-ಅಪ್ ಮಾಡುವುದು, ಕ್ಯಾಲೆಂಡರ್ಗಳನ್ನು ಸಿಂಕ್ ಮಾಡುವುದು, ಮೀಟಿಂಗ್ಗಳ ಮೊದಲು ಅದರ ಅಜೆಂಡಾವನ್ನು ಬ್ರೀಫಿಂಗ್ ಮಾಡುವಂತಹ ಕಾರ್ಯಗಳನ್ನು ಏಜೆಂಟಿಕ್ ಎಐ ಮೂಲಕ ಸ್ವಯಂಚಾಲಿತಗೊಳಿಸಬಹುದು. ಈ ಕೆಲಸಗಳನ್ನು ಮಾಡುವ ಎಚ್ಆರ್ ಮತ್ತು ಎಕ್ಸಿಕ್ಯೂಟಿವ್ ಏಜೆಂಟ್ಗಳ ಕೆಲಸ ಆಪತ್ತಿನಲ್ಲಿವೆ.”
10 ಲಕ್ಷ ಉದ್ಯೋಗಿಗಳಿಗೆ ಆಪತ್ತು
ಭಾರತದ ನೇಮಕಾತಿ ಉದ್ಯಮವು ಬಹು-ಬಿಲಿಯನ್ ಡಾಲರ್ ಉದ್ಯಮವಾಗಿದ್ದು, 2030ರ ವೇಳೆಗೆ $49 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ಐಟಿ ಉದ್ಯಮವೂ ಸೇರಿದಂತೆ ಎಲ್ಲಾ ಕಾರ್ಪೊರೇಟ್ ಕಂಪನಿಗಳಲ್ಲಿ ರಿಕ್ರೂಟರ್ಗಳ ಪಾತ್ರ ದೊಡ್ಡದು. ಅಲ್ಲದೆ ಅವರ ತಂಡವೂ ಹಿರಿದು. ಒಂದು ಅಂದಾಜಿನ ಪ್ರಕಾರ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಮಾನವ ಸಂಪನ್ಮೂಲ ವೃತ್ತಿಪರರು ಭಾರತದಾದ್ಯಂತ ನೇರವಾಗಿ ಅಥವಾ ಪರೋಕ್ಷವಾಗಿ ನೇಮಕಾತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ವಿಶೇಷವಾಗಿ ತಂತ್ರಜ್ಞಾನ ಕೇಂದ್ರ ಬೆಂಗಳೂರಿನಲ್ಲಿ ಐಟಿ ಮತ್ತು ಜ್ಞಾನಾಧಾರಿತ ಕ್ಷೇತ್ರದಲ್ಲಿ ಲಕ್ಷಕ್ಕೂ ಹೆಚ್ಚು ಮಾನವ ಸಂಪನ್ಮೂಲ ವೃತ್ತಿಪರರು ಇರಬಹುದೆಂದು ಅಂದಾಜಿಸಲಾಗಿದೆ. ಇವರ ಜೊತೆಗೆ ಉನ್ನತ ಹುದ್ದೆಗಳ ದಿನವಹಿ ವ್ಯವಹಾರಗಳನ್ನು ನಿಭಾಯಿಸುವ ಕಾರ್ಯನಿರ್ವಾಹಕ ಸಹಾಯಕರು ಕೂಡ ನಿರಂತರವಾಗಿ ಬೇಡಿಕೆಯಲ್ಲಿದ್ದಾರೆ. ಆದರೆ ಏಜೆಂಟಿಕ್ ಎಐ ಈ ಹುದ್ದೆಗಳು ನಿರ್ವಹಿಸುವ ಬಹುತೇಕ ಕೆಲಸಗಳನ್ನು ತಾನೇ ನಿರ್ವಹಿಸಲಿದೆ. ಎಂದರೆ ಇವರ ಸೇವೆ ಅಗತ್ಯವಿಲ್ಲ ಎಂದಾಯಿತು.
ಸಾಮಾನ್ಯವಾಗಿ ಎಚ್ಆರ್ ಅಥವಾ ಮಾನವ ಸಂಪನ್ಮೂಲ ಸಿಬ್ಬಂದಿ ನೇಮಕಾತಿ ಕೆಲಸ ನೋಡಿಕೊಳ್ಳುತ್ತಾರೆ. ಅಲ್ಲದೆ ಕಂಪನಿ ಉದ್ಯೋಗಿಗಳ ಸಂಬಂಳ, ರಜೆ, ಪ್ರಮೋಷನ್, ಪೆನ್ಷನ್ ಮತ್ತಿತರ ಕೆಲಸಗಳನ್ನು ನಿರ್ವಹಿಸುತ್ತಾರೆ. ಕಾಮೆಟ್ ರೀತಿಯ ಏಜೆಂಟಿಕ್ ಎಐ ಈ ಕೆಲಸಗಳನ್ನು ಆಟೋಮೇಟ್ ಮಾಡಲಿದೆ. ಹೀಗಾಗಿ ಬಹುತೇಕ ಎಚ್ಆರ್ ಉದ್ಯೋಗಿಗಳು ಕೆಲಸ ಕೆಳೆದುಕೊಳ್ಳುವ ಅಪಾಯವಿದೆ. ಹಾಗೆಂದು ಇಡೀ ಎಚ್ಆರ್ ಉದ್ಯೋಗವೇ ಇಲ್ಲವಾಗುವುದಿಲ್ಲ ಆದರೆ ಅವರ ಸಂಖ್ಯೆಯಂತೂ ಕಡಿಮೆಯಾಗುತ್ತದೆ ಎನ್ನುವುದಂತೂ ನಿಶ್ಚಿತ.
ಎಚ್ಆರ್ ಉದ್ಯೋಗದಲ್ಲಿ 15% ಕುಸಿತ
“ಎಐ ಅನ್ನು ಬಳಸುವಲ್ಲಿ ನಿಜವಾಗಿಯೂ ಮುಂಚೂಣಿಯಲ್ಲಿರುವವರು ಇಲ್ಲದವರಿಗಿಂತ ಹೆಚ್ಚು ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ. ಇದು ಖಚಿತವಾಗಿ ಸಂಭವಿಸಲಿದೆ. ಪುನರಾವರ್ತಿತ ಕಾರ್ಯಗಳು, ಡೇಟಾ ನಮೂದು, ಮೂಲ ಮಾಹಿತಿ ಸಂಗ್ರಹಣೆ ಅಥವಾ ಪ್ರಮಾಣೀಕೃತ ಸಂವಹನವನ್ನು ಒಳಗೊಂಡಿರುವ ಉದ್ಯೋಗಗಳು ಬಹುಬೇಗ ಎಐ ಪಾಲಾಗುವುದು ಖಚಿತ. ಈ ಉದ್ಯೋಗಗಳು ಬದಲಾಗುತ್ತವೆಯೇ ಎಂಬುದು ಈಗ ಪ್ರಶ್ನೆಯಲ್ಲ, ಬದಲಿಗೆ ಎಷ್ಟು ಬದಲಾಗುತ್ತವೆ ಎಂಬುದಾಗಿದೆ. ಉದಾಹರಣೆಗೆ, ಎಚ್ಆರ್ಗಳ ಬೇಡಿಕೆಯು ಈಗಾಗಲೇ ಕುಸಿಯುತ್ತಿದೆ. 2024 ರ ಆರಂಭದಲ್ಲಿ ಮಾನವ ಸಂಪನ್ಮೂಲ ಉದ್ಯೋಗಿಗಳ ಪೋಸ್ಟಿಂಗ್ಗಳಲ್ಲಿ 15% ಕುಸಿತವಾಗಿದೆ. ಇದು ಹೆಚ್ಚಿದ ಆಟೊಮೇಷನ್ ಅನ್ನ ಸೂಚಿಸುತ್ತದೆ. ಹಾಗೆಂದು ಇದು ಭಯಪಡುವ ಸಮಯವಲ್ಲ. ನಿರ್ಣಾಯಕವಾಗಿ ಮುಂದಿನ ಪಲ್ಲಟಕ್ಕೆ ಸಜ್ಜಾಗುವ ಸಮಯ,” ಎಂದು ಶ್ರೀನಿವಾಸ್ ಉದ್ಯೋಗ ಕ್ಷೇತ್ರದಲ್ಲಾಗುವ ಭಾರಿ ಪರಿವರ್ತನೆಯನ್ನು ವಿವರಿಸುತ್ತಾರೆ.
ಗಡಿಯಾರ ಟಿಕ್ ಟಿಕ್ ಎಂದು ಸಾಗುತ್ತಿದೆ, ಅಪಾಯ ಹತ್ತಿರವಾಗುತ್ತಿದೆ. ಕೆಲಸದ ಜಗತ್ತು ರೂಪಾಂತರಗೊಳ್ಳುತ್ತಿದೆ, ಮತ್ತು ನಿನ್ನೆಯ ಉದ್ಯೋಗಗಳು ನಾಳೆಯ ಉದ್ಯೋಗಗಳಲ್ಲ. ಇದು ನಿಮ್ಮ ಎಚ್ಚರಿಕೆಯ ಕರೆ. ಭವಿಷ್ಯವು ಕಲಿಯಲು, ಹೊಂದಿಕೊಳ್ಳಲು ಮತ್ತು ಎಐ ಯುಗಕ್ಕೆ ನುಗ್ಗಲು ಹೆದರದವರಿಗೆ ಸೇರಿರುತ್ತದೆ. ಅದು ಸಂಭವಿಸುವುದನ್ನು ನೋಡುತ್ತಾ ಕೂರಬೇಡಿ. ನೀವೇ ಅದನ್ನು ಸಂಭವಿಸುವಂತೆ ಮಾಡಿ.
ಯುವಜನರಿಗೆ ಶ್ರೀನಿವಾಸ್ ಕೊಟ್ಟ ಸಲಹೆಗಳೇನು?
ಎಐನಿಂದ ಉದ್ಯೋಗದ ಮೇಲಾಗುವ ಪರಿಣಾಮಗಳನ್ನು ವಿವರಿಸುತ್ತಲೇ ಕೂಡಲೇ ಬದಲಾಗುವಂತೆ ಶ್ರೀನಿವಾಸ್ ಕರೆ ನೀಡುತ್ತಾರೆ. ಅಲ್ಲದೆ, ಭವಿಷ್ಯವು ಎಐ ಜೊತೆಗೆ ಸ್ಪರ್ಧೆಗಿಳಿಯುವುದಲ್ಲ, ಬದಲಿಗೆ ಅದರೊಂದಿಗೇ ಕೆಲಸ ಮಾಡಲು ಕಲಿಯುವುದು. ಅದರ ಶಕ್ತಿಯನ್ನು ಬಳಸಿಕೊಳ್ಳುವುದು. ಜೊತೆಗೆ ಎಐ ನಕಲು ಮಾಡಲು ಸಾಧ್ಯವಾಗದ ಅನನ್ಯ ಮಾನವ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಸಲಹೆ ನೀಡುತ್ತಾರೆ.
ಎಐ ಸಾಕ್ಷರರಾಗಿ: ನೀವು ಕೋಡಿಂಗ್ ಮಾಸ್ಟರ್ ಆಗಬೇಕಾಗಿಲ್ಲ. ಆದರೆ ಎಐ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಸಾಮರ್ಥ್ಯಗಳೇನು? ಮತ್ತು ಅದರೊಂದಿಗೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪ್ರಾಂಪ್ಟ್ ಎಂಜಿನಿಯರಿಂಗ್ ಕಲಿಯುವುದು ತುಂಬಾ ಮುಖ್ಯ. ಏಕೆಂದರೆ, ಎಐ ಜೊತೆ “ಮಾತನಾಡಲು”, ಉತ್ತಮ ಫಲಿತಾಂಶಗಳನ್ನು ಪಡೆಯಲು ಒಳ್ಳೆಯ ಪ್ರಾಂಪ್ಟ್ ರಚಿಸುವುದು ಅತ್ಯಗತ್ಯ.
ಅಸಾಧಾರಣರಾಗಿ: ಫೈವರ್ನ ಸಿಇಒ ಹೇಳುವಂತೆ, ನಿಮ್ಮ ಕ್ಷೇತ್ರದಲ್ಲಿ ಕೇವಲ ಉತ್ತಮರಾಗಿರಬೇಡಿ; ಅಸಾಧಾರಣರಾಗಿರಿ. ಎಐ ಟೂಲ್ಗಳ ಬಳಕೆಯಿಂದ ನಿಮ್ಮ ಸಾಮರ್ಥ್ಯ ವೃದ್ಧಿಯಾಗಬೇಕು, ಕುಗ್ಗಬಾರದು.
ವಿಶಿಷ್ಟ ಕೌಶಲ್ಯ ಕರಗತ ಮಾಡಿಕೊಳ್ಳಿ: ಎಐ ಮನುಷ್ಯನ ಬಹುತೇಕ ಕೆಲಸಗಳನ್ನು ಮಾಡಬಹುದು, ಆದರ ಎಲ್ಲಾ ಕೆಲಸಗಳನ್ನಲ್ಲ. ಕೆಲವು ಕೆಲಸಗಳು ಮನುಷ್ಯ ವಿಶಿಷ್ಟ ಕೌಶಲ್ಯ ಮತ್ತು ಸಂವೇದನೆಯನ್ನು ಬಯುಸುತ್ತವೆ. ಅಂತಹ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ.
ವಿಮರ್ಶಾತ್ಮಕ ಚಿಂತನೆ ಮತ್ತು ಸಂಕೀರ್ಣ ಸಮಸ್ಯೆ ಪರಿಹಾರ ಸದ್ಯಕ್ಕಂತೂ ಮನುಷ್ಯನ ಕೆಲಸ. ಎಐ ಡೇಟಾವನ್ನು ವಿಶ್ಲೇಷಿಸಬಲ್ಲದು ಆದರೆ ಅದು ಎಲ್ಲಾ ಸೂಕ್ಷ್ಮ ಸಂದರ್ಭಗಳನ್ನು ವಿಶ್ಲೇಷಿಸುವುದಿಲ್ಲ. ಮಾನವ ಅಂಶಗಳನ್ನು ಪರಿಗಣಿಸಿ ಹೊಸ ಪರಿಹಾರಗಳನ್ನು ರೂಪಿಸುವುದು ನಾವೇ ಬೆಸ್ಟ್.
ಎಐ ಹೊಸ ಐಡಿಯಾಗಳನ್ನು ನಿಡಬಲ್ಲದು. ಆದರೆ ನಿಜವಾದ, ಕ್ರಾಂತಿಕಾರಿ ಅನ್ವೇಷಣೆಗಳು, ಕಲಾತ್ಮಕ ಸೃಷ್ಟಿ ಮತ್ತು ನವೀನ ಚಿಂತನೆ ಇನ್ನೂ ಮನುಷ್ಯರ ಕಕ್ಷೆಯಲ್ಲೇ ಇದೆ. ಹೀಗಾಗಿ ಕಲ್ಪನಾ ಶಕ್ತಿಯನ್ನು ಬೆಳೆಸಿಕೊಳ್ಳಿ.
ಸಂಬಂಧಗಳನ್ನು ಬೆಳೆಸುವುದು, ಹೇಳಲಾಗದ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು, ಸಂಘರ್ಷಗಳನ್ನು ಪರಿಹರಿಸುವುದು, ತಂಡಗಳನ್ನು ಪ್ರೇರೇಪಿಸುವುದು, ಗ್ರಾಹಕರೊಂದಿಗೆ ನಿಜ ಬೆಸೆಯುವುದು - ಇವು ಮಾನವನ ಅಂತರ್ಗತ ಸಾಮರ್ಥ್ಯಗಳು. ಇಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ.
ಜಗತ್ತಿನಲ್ಲಿ ಸ್ಥಿರವಾದದ್ದು ಬದಲಾವಣೆ ಮಾತ್ರ. ನಿರಂತರ ಕಲಿಕೆಯ ಮನಸ್ಥಿತಿಯನ್ನು ಅಳವಡಿಸಿಕೊಳ್ಳಿ. ಕುತೂಹಲಿಗಳಾಗಿರಿ. ಯಾವಾಗಲೂ ಹೊಸದಾಗಿ ಕಲಿಯಲು ಮತ್ತು ಕಲಿತಿದ್ದನ್ನು ಅಗತ್ಯವಿದ್ದಾಗ ಮರೆಯಲು ಸಿದ್ಧರಾಗಿರಿ.
ಎಐ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಅದರ ಪೂರ್ವಗ್ರಹಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ನೈತಿಕ ಬಳಕೆಯ ಮೇಲ್ವಿಚಾರಣೆ ಮಾಡುವುದು ಅತಿ ಮುಖ್ಯವಾಗುತ್ತದೆ. ನಾವು ಎಐಗೆ ನೈತಿಕ ದಿಕ್ಸೂಚಿಯಾಗಿರಬೇಕು.
ಹೊಸ ಉದ್ಯಮ ಕಟ್ಟಿ: ಸಾಂಪ್ರದಾಯಿಕ ಉದ್ಯೋಗಗಳು ಬದಲಾಗುತ್ತಿರುವಾಗ ನಿಮ್ಮದೇ ಅವಕಾಶಗಳನ್ನು ಸೃಷ್ಟಿಸುವುದು ಕಾರ್ಯಸಾಧ್ಯ ಮಾರ್ಗ. ನೀವು ಹೊಸ ಉದ್ಯಮಗಳನ್ನು ಶುರು ಮಾಡಲು ಮತ್ತು ಅವುಗಳನ್ನು ಅಭೂತಪೂರ್ವ ದಕ್ಷತೆಯೊಂದಿಗೆ ಮುನ್ನಡೆಸಲು ಎಐ ಪರಿಕರಗಳು ನಿಮಗೆ ಸಹಾಯ ಮಾಡುತ್ತವೆ. ಹಾಗಾಗಿ ನಿಮ್ಮೊಳಗಿನ ಕನಸಿಗೆ ಈಗಲೇ ಜೀವತುಂಬಿ.
ಎಚ್ಆರ್ಗೆ ಕಾಮೆಟ್ನ ಸವಾಲೇನು?
· ನಮಗೆ ಯಾವ ರೀತಿಯ ಎಷ್ಟು ಉದ್ಯೋಗಿಗಳು ಬೇಕೆಂದು ಕಾಮೆಟ್ಗೆ ವಿವರಿಸಿದರೆ ಸಾಕು. ಅದು ಲಿಂಕ್ಡ್ಇನ್ ಪ್ರೊಫೈಲ್ಗಳು ಮತ್ತಿತರ ಜಾಪ್ ಪೋರ್ಟಲ್ಗಳನ್ನು ತಡಕಾಡಿ ಯೋಗ್ಯವಾದ ಸಾವಿರಾರು ಅಭ್ಯರ್ಥಿಗಳನ್ನು ಪಟ್ಟಿ ಮಾಡುತ್ತದೆ.
· ಬಳಿಕ ಕಂಪನಿ ನಿಗದಿಪಡಿಸಿ ಸಂಕೀರ್ಣ ಮಾನದಂಡಗಳನ್ನು ಆಧರಿಸಿ ಅಭ್ಯರ್ಥಿಗಳ ಸಾಮರ್ಥ್ಯಗಳನ್ನು ಪರಿಶೀಲಿಸಿ ಶ್ರೇಣೀಕರಿಸುತ್ತದೆ. ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ವೈಯಕ್ತಿಕಗೊಳಿಸಿದ ಸಂದೇಶಗಳನ್ನು ಕಳುಹಿಸುತ್ತದೆ.
· ಸಂದರ್ಶನಗಳನ್ನು ತಾನೇ ನಿಗದಿಪಡಿಸುತ್ತದೆ ಮತ್ತು ಅವರೊಂದಿಗೆ ಆಗಾಗ್ಗೆ ಫಾಲೋ-ಅಪ್ ಮಾಡುತ್ತದೆ. ತಾನೇ ಪರೀಕ್ಷೆ ಒಡ್ಡಿ ಉತ್ತರಗಳನ್ನು ಪರಿಶೀಲಿಸಿ ಫಲಿತಾಂಶಗಳನ್ನು ಅಭ್ಯರ್ಥಿಗಳಿಗೆ ಕಳಿಸುತ್ತದೆ.
· ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ತಾನೇ ಸಂದರ್ಶನಗಳನ್ನು ಏರ್ಪಡಿಸುತ್ತದೆ. ಇಂಟರ್ವ್ಯೂನಲ್ಲಿ ಅಭ್ಯರ್ಥಿಗಳ ಉತ್ತರ, ನಡವಳಿಕೆ, ಆತ್ಮವಿಶ್ವಾಸ ಮತ್ತಿತರ ವಿಚಾರಗಳನ್ನು ವಿಶ್ಲೇಷಿಸಿ ಅಂತಿಮ ಪಟ್ಟಿ ಸಿದ್ಧಪಡಿಸುತ್ತದ.
· ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲನೆ, ಪರಿಕ್ಷೆ, ಸಂದರ್ಶನದಲ್ಲಿ ಅವರ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿ ಸೂಕ್ತ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತದೆ.
ಏಜೆಂಟಿಕ್ ಎಐ - ಎಐ ಏಜೆಂಟ್ ನಡುವಿನ ವ್ಯತ್ಯಾಸ
ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು, ನಾವು ಹೇಳುವ ಸುಂದರವಾದ ಚಿತ್ರವನ್ನು ರಚಿಸುವುದು ಎಲ್ಎಲ್ಎಂ. ಆದರೆ ಹೇಳಿದ ಕೆಲಸವನ್ನು ಮಾಡುವುದು ಏಜೆಂಟಿಕ್ ಎಐ. ಇದು ಹೆಚ್ಚು ಬುದ್ಧಿವಂತ ಉದ್ಯೋಗಿಯಂತೆ. ಸೂಚನೆಗಳಿಗಾಗಿ ಕಾಯದೆ ತನ್ನದೇ ಆದ ಗುರಿಗಳನ್ನು ತಾನೇ ಹೊಂದಿಸುತ್ತದೆ. ಅವುಗಳನ್ನು ಚಿಕ್ಕ ಚಿಕ್ಕ ಕಾರ್ಯಗಳಾಗಿ ವಿಭಜಿಸಿಕೊಳ್ಳುತ್ತದೆ. ನಂತರ ಮನುಷ್ಯನ ನಿರಂತರ ಮೇಲ್ವಿಚಾರಣೆಯಿಲ್ಲದೆ ಸ್ವತಂತ್ರವಾಗಿ ಅವುಗಳನ್ನು ಕಾರ್ಯಗತಗೊಳಿಸುತ್ತದೆ. ಪ್ರತಿ ಕೆಲಸದಿಂದಲೂ ಕಲಿಯುತ್ತದೆ ಮತ್ತು ಈ ಕಲಿಕೆಯನ್ನು ಬಳಸಿಕೊಂಡು ಮುಂದಿನ ಕೆಲಸಗಳನ್ನು ಸುಧಾರಿಸುತ್ತದೆ. ಅಲ್ಲದೆ ಬೇರೆ ಎಐ ವ್ಯವಸ್ಥೆಗಳು ಮತ್ತು ಹೊರಗಿನ ಡೇಟಾಬೇಸ್ನೊಂದಿಗೆ ಸಂಪರ್ಕ ಪಡೆದು ಕೆಲಸಗಳನ್ನು ಕಾರ್ಯನಿರ್ವಹಿಸುತ್ತದೆ. ಈ ಏಜೆಂಟಿಕ್ ಎಐ ಒಂದಾಗಿರಬೇಕಿಲ್ಲ, ನೂರಾರು, ಸಾವಿರಾರು ಇರಬಹುದು. ಒಟ್ಟಿನಲ್ಲಿ ಏಜೆಂಟಿಕ್ ಎಐ ಎಂದರೆ ಸ್ವಾಯತ್ತ ವ್ಯವಸ್ಥೆಯಾದರೆ ಎಐ ಏಜೆಂಟ್ಗಳೆಂದರೆ ನಮ್ಮ ಮೇಲ್ವಿಚಾರಣೆ ಇಲ್ಲದೆ ನಮಗಾಗಿ ರಾತ್ರಿ ಹಗಲು ಕೆಲಸ ಮಾಡಬಲ್ಲ ನುರಿತ ವೃತ್ತಿಪರರ ಪಡೆ. ಇವುಗಳಿಗೆ ಏಜೆಂಟಿಕ್ ಎಐ ಬೆನ್ನೆಲುಬಾಗಿರುತ್ತದೆ.



