ಶೀಘ್ರದಲ್ಲೇ ಮನುಷ್ಯನ ಮೀರಿಸುವ 'ಎಜಿಐ' ಬರಲಿದೆ: ವಿಜ್ಞಾನಿ ಪ್ರೊ.ಎಸ್.ಎಸ್ ಅಯ್ಯಂಗಾರ್ ಭವಿಷ್ಯ
ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ನ ಸಾಮರ್ಥ್ಯ ಊಹೆಗೂ ನಿಲುಕದ್ದು: ಅಯ್ಯಂಗಾರ್
ಪ್ರೊ.ಎಸ್.ಎಸ್ ಅಯ್ಯಂಗಾರ್ ಅವರ ಸಂದರ್ಶನ:
ಮೈಸೂರು ಜಿಲ್ಲೆಯಲ್ಲಿ ಹುಟ್ಟಿ, ಬೆಂಗಳೂರಿನ ಶ್ರೀರಾಮ್ಪುರದ ಗಲ್ಲಿಗಳಲ್ಲಿ ಬೆಳೆದು ಈಗ ವಿಶ್ವದ ಪ್ರಖ್ಯಾತ ಕಂಪ್ಯೂಟರ್ ವಿಜ್ಞಾನಿಯಾಗಿರುವ ಪ್ರೊ.ಎಸ್.ಎಸ್ ಅಯ್ಯಂಗಾರ್ ಅವರು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸದ್ಯದ ಸ್ಥಿತಿಗತಿ, ಭವಿಷ್ಯದ ಬೆಳವಣಿಗೆಯ ಕುರಿತು ಮಾತನಾಡಿದ್ದಾರೆ. ಡಾ.ರಮೇಶ್ ನಿಂಬೆಮರದಳ್ಳಿ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಂದಿನ ಐದು ವರ್ಷಗಳಲ್ಲಿ ಮನುಷ್ಯನಿಗೆ ಎಲ್ಲ ರೀತಿಯಲ್ಲೂ ಸರಿಸಾಟಿಯಾಗಬಲ್ಲ ಮತ್ತು ಕೆಲವು ಕ್ಷೇತ್ರಗಳಲ್ಲಿ ಮನುಷ್ಯನನ್ನೂ ಮೀರಿಸಬಲ್ಲ ಎಜಿಐ ಅಭಿವೃದ್ಧಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಎಐ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಡಿಜಿಟಲ್ ಡಿವೈಡ್ ಬಗ್ಗೆ ಮಾತನಾಡುತ್ತಾ, ಗ್ರಾಮೀಣ ಮಕ್ಕಳಿಗೆ ಎಐ ಶಿಕ್ಷಣ, ತರಬೇತಿ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಎಐ ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಯ ಕುರಿತು ಮಾತನಾಡುತ್ತಾ, ಮನುಷ್ಯನಿಗೂ ಮೀರಿದ ಸೂಪರ್ ಇಂಟೆಲಿಜೆಂಟ್ ವ್ಯವಸ್ಥೆಯ ಕುರಿತು ವಿವರಿಸಿದ್ದಾರೆ. ಅಲ್ಲದೆ, ಮುಂಬರುವ ರೋಬಾಟ್ಗಳ ಯುಗದ ಕಲ್ಪನೆಯನ್ನು ನಮ್ಮ ಓದುಗರಿಗಾಗಿ ಹಂಚಿಕೊಂಡಿದ್ದಾರೆ.
ಅಯ್ಯಂಗಾರ್ ಅವರ ಕುರಿತು ಹೆಚ್ಚಿನ ಓದಿಗೆ: https://en.wikipedia.org/wiki/Sundaraja_Sitharama_Iyengar
ಎಐ ಬಗ್ಗೆ ಭಾರತದಲ್ಲಿ ಸಾಕಷ್ಟು ಉತ್ಸಾಹ ಕಂಡುಬರುತ್ತಿದೆ. ನಿಮ್ಮ ಅಭಿಪ್ರಾಯದಲ್ಲಿ, ಜನರಲ್ಲಿ ಎಐ ಕುರಿತು ಇರುವ ಸಾಮಾನ್ಯ ತಪ್ಪು ಕಲ್ಪನೆಗಳೇನು?
ಭಾರತದಲ್ಲಿ ಎಐ ತಂತ್ರಜ್ಞಾನದ ಕುರಿತಾಗಿ ಬಹಳ ಉತ್ಸಾಹ ಇರುವುದು ಒಳ್ಳೆಯದೇ. ಇಲ್ಲಿ ತುಂಬಾ ಪ್ರತಿಭಾವಂತರಿದ್ದಾರೆ. ಬೇಸರದ ವಿಚಾರ ಎಂದರೆ, ಇವರಿಗೆ ಸೂಕ್ತ ‘ಮಾರ್ಗದರ್ಶನ’ ದೊರೆಯುತ್ತಿಲ್ಲ. ಪ್ರತಿಭಾವಂತರು ಇದ್ದರೆ ಸಾಲುವುದಿಲ್ಲ. ಆ ಪ್ರತಿಭೆಗಳನ್ನು ಒಂದು ನಿರ್ಧಿಷ್ಟ ದಿಕ್ಕಿನ ಕಡೆಗೆ ಕೊಂಡೊಯ್ಯುವ ಮಾರ್ಗದರ್ಶಕರು ಬೇಕು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲೂ ಸೂಕ್ತ ಮೆಂಟರ್ಗಳಿಲ್ಲ. ಪ್ರತಿಭಾವಂತರನ್ನು ತಿದ್ದಿ ತೀಡಿ ರೂಪಿಸಬೇಕು. ಅವರನ್ನು ಸ್ಪಷ್ಟವಾದ ಗುರಿಯ ಕಡೆ ಕೊಂಡೊಯ್ಯುವವರು ಬೇಕು. ಆಗ ಮಾತ್ರ ಭಾರತದಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಮನ್ನಣೆಯ ವಿಜ್ಞಾನಿಗಳು ಹುಟ್ಟಲು ಸಾಧ್ಯ ಹಾಗೂ ಜಾಗತಿಕ ಮಟ್ಟದ ಅನ್ವೇಷಣೆಗಳು ಜೀವ ತಳೆಯಲು ಸಾಧ್ಯ.
ಇನ್ನು, ನೀವು ಕೇಳಿದ ಎಐ ಕುರಿತ ತಪ್ಪು ಕಲ್ಪನೆಗಳ ವಿಚಾರಕ್ಕೆ ಬಂದರೆ, ಜನರಲ್ಲಿ ಎಐ ಕುರಿತು ಸಾಕಷ್ಟು ತಪ್ಪು ತಿಳಿವಳಿಕೆ ಇದೆ. ಒಂದಕ್ಕೊಂದು ಸಂಬಂಧ ಇಲ್ಲದ ಟೆಕ್ನಾಲಜಿಯನ್ನೂ ಎಐ ಎಂದೇ ತಿಳಿದವರು ಬಹಳಷ್ಟು ಜನ ಇದ್ದಾರೆ. ಎಐನಿಂದ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ನಂಬುವ ಆಶಾವಾದಿಗಳು, ಎಷ್ಟೋ ತಂತ್ರಜ್ಞಾನಗಳು ಬಂದಿವೆ, ಹೋಗಿವೆ ಹಾಗೆ ಎಐ ಕೂಡ ಎನ್ನುವ ನಿರಾಶಾವಾದಿಗಳು. ಜೊತೆಗೆ ಎಐ ಬಗ್ಗೆ ಏನನ್ನೂ ಸರಿಯಾಗಿ ತಿಳಿಯದೆ ಭಯ, ಗೊಂದಲದಲ್ಲಿ ಮುಳುಗಿರುವ ಜನ. ಇವರೆಲ್ಲರ ನಡುವೆ ವಾಸ್ತವವಾದಿಗಳು ಬಹಳ ಕಡಿಮೆ. ಎಐ ಕುರಿತು ನಿರಂತರ ಶಿಕ್ಷಣ, ಮಾರ್ಗದರ್ಶನ, ತರಬೇತಿ ಮಾತ್ರ ಇಂಥ ವಾಸ್ತವವಾದಿಗಳನ್ನು ಹುಟ್ಟುಹಾಕುತ್ತದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅನುಕೂಲಗಳು ನಗರ ಕೇಂದ್ರಿತವಾಗಿದ್ದು, ಹಳ್ಳಿ ಜನರಿಗೆ ಇದರ ಅನುಕೂಲಗಳು ದೊರೆಯುತ್ತಿಲ್ಲ ಎಂಬ ಮಾತಿಗೆ ನಿಮ್ಮ ಅಭಿಪ್ರಾಯವೇನು?
ಅದು ನಿಜ. ಯಾವುದೇ ತಂತ್ರಜ್ಞಾನ ಬಂದರೂ ಅದು ಹೆಚ್ಚು ನಗರಗಳಲ್ಲೇ ಕೇಂದ್ರೀಕರಣಗೊಳ್ಳುತ್ತದೆ. ಎಐ ವಿಚಾರದಲ್ಲೂ ಅದೇ ಆಗಿದೆ. ಈ ಡಿಜಿಟಲ್ ಡಿವೈಡ್ ಅನ್ನು ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಕಡಿಮೆ ಮಾಡಬೇಕು. ಯಾವುದೇ ತಂತ್ರಜ್ಞಾನದ ಅನುಕೂಲ ಹಳ್ಳಿಯ ಜನರಿಗೂ ತಲುಪುವಂತೆ ಮಾಡಬೇಕು. ಹಳ್ಳಿಗಳಲ್ಲಿ ಅತ್ಯಂತ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಎಐ ತಂತ್ರಜ್ಞಾನದ ಕುರಿತು ಶಿಕ್ಷಣ ನೀಡಬೇಕು, ಟೂಲ್ಗಳಿಗೆ ಉಚಿತ ಪ್ರವೇಶ ಒದಬೇಕು. ಆ ಮೂಲಕ ಇದರ ಅನುಕೂಲಗಳು ಅವರಿಗೂ ಲಭ್ಯವಾಗುವಂತೆ ಮಾಡಬೇಕು. ಈ ಎಐ ತಂತ್ರಜ್ಞಾನದ ಲಾಭವಂತೂ ಕಡ್ಡಾಯವಾಗಿ ಗ್ರಾಮೀಣ ಜನರಿಗೆ ತಲುಪಬೇಕು. ಈ ಹಂತದಲ್ಲಿ ನಾವು ಎಚ್ಚೆತ್ತುಕೊಳ್ಳದಿದ್ದರೆ ನಗರ-ಹಳ್ಳಿಗಳ ನಡುವೆ ಇರುವ ಕಂದಕ ಹೆಚ್ಚುತ್ತದೆ. ಎಂದರೆ ಈ ಡಿಜಿಟಲ್ ಡಿವೈಡ್ ಎನ್ನುವುದು ಎಂದೂ ಮುಚ್ಚಲಾಗದಷ್ಟು ದೊಡ್ಡದಾಗಿಬಿಡುತ್ತದೆ. ಹಾಗಾಗಿ ಪರಿಸ್ಥಿತಿ ಕೈಮೀರಿ ಹೋಗುವ ಮುಂಚೆ ಸರಕಾರ ಮತ್ತು ಅಕ್ಯಾಡೆಮಿಯಾ ಎಚ್ಚೆತ್ತುಕೊಂಡು ಎಐ ಕುರಿತ ಶಿಕ್ಷಣ ಮತ್ತು ಸೌಕರ್ಯಗಳನ್ನು ಹಳ್ಳಿಯ ಜನರಿಗೂ ತಲುಪಿಸಬೇಕು.
AI ಮತ್ತು ರೊಬಾಟಿಕ್ಸ್ ಉದ್ಯೋಗಗಳನ್ನು ಕಸಿಯುತ್ತವೆ ಎಂಬ ಆತಂಕವಿದೆ. ನಿಮ್ಮ ಪ್ರಕಾರ ಯಾವ ವೃತ್ತಿಗಳಿಗೆ ಹೆಚ್ಚಿನ ಅವಕಾಶಗಳಿವೆ?
ಎಐ ಮತ್ತು ರೋಬಾಟಿಕ್ಸ್ ತಂತ್ರಜ್ಞಾನದಿಂದ ಕೆಲಸಗಳು ಕಡಿಮೆಯಾಗುವುದು ನಿಜವೇ ಆದರೆ ಈಗಲೇ ಎಲ್ಲವೂ ಎಐ ವಶವಾಗುವುದಿಲ್ಲ. ಮುಂದಿನ ಹಲವು ವರ್ಷಗಳ ಕಾಲ ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯುರಿಟಿ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇದರ ವಿವಿಧ ಶಾಖೆಗಳಿಗೆ ಬೇಡಿಕೆ ಇರುತ್ತದೆ. ಎಐ ಮತ್ತು ಕ್ವಾಂಟಮ್ನಲ್ಲಿ ಇನ್ನೂ ಸಾಕಷ್ಟು ಕೆಲಸಗಳ ನಡೆಯಬೇಕು. ಭಾರತದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ಈಗಷ್ಟೇ ಕಣ್ಣು ಬಿಡುತ್ತಿದೆ. ಈ ಕ್ಷೇತ್ರದಲ್ಲಿ ಪ್ರತಿಭಾವಂತರ ಕೊರತೆ ಇದೆ. ದಿನ ಕಳೆದಂತೆ ಸೈಬರ್ ಭದ್ರತೆಗೆ ಮಹತ್ವ ಹೆಚ್ಚುತ್ತಾ ಹೋಗುತ್ತದೆ. ಸೈಬರ್ ಸೆಕ್ಯುರಿಟಿ ಎಕ್ಸ್ಪರ್ಟ್ಗಳು ಹೊಸ ರೀತಿಯ ಥ್ರೆಟ್ಗಳನ್ನು ಎದುರಿಸಲು ಸಜ್ಜಾಗಬೇಕು. ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಸಾಧನಗಳ ಬಳಕೆ ಭಾರತದಲ್ಲಿ ಹೆಚ್ಚಲಿದ್ದು, ಸೈಬರ್ ಅಪಾಯಗಳೂ ಹೆಚ್ಚಾಗಲಿವೆ. ಐಒಟಿ ಕ್ಷೇತ್ರ ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಬೆಳೆಯಲಿದೆ. ಎಡ್ಜ್ ಕಂಪ್ಯೂಟಿಂಗ್, ಇಂಡಸ್ಟ್ರಿ 4.0, ಸ್ಮಾರ್ಟ್ ಸಿಸ್ಟಮ್ಸ್, ಸ್ಮಾರ್ಟ್ ಸಿಟಿ, ಸ್ಮಾರ್ಟ್ ಹೋಮ್ ಮುಂತಾದ ಸ್ಮಾರ್ಟ್ ವ್ಯವಸ್ಥೆಗಳು ಅಸ್ತಿತ್ವಕ್ಕೆ ಬರುವುದರಿಂದ ಇಲ್ಲಿನ ಸ್ಮಾರ್ಟ್ನೆಸ್ಗೆ ಕಾರಣವಾಗುವುದೇ ಐಒಟಿ ಸಾಧನಗಳು ಮತ್ತು ನೆಟ್ವರ್ಕಿಂಗ್. ಈ ಕೌಶಲ್ಯಗಳನ್ನು ಕಲಿತರೆ ಹೆಚ್ಚಿನ ಅವಕಾಶಗಳಿವೆ.
ರೋಬಾಟಿಕ್ಸ್ ಕ್ಷೇತ್ರದಲ್ಲಿ ನಿಮ್ಮ ಸೇವೆ ಅನನ್ಯ. ಮುಂದಿನ ರೋಬಾಟ್ಗಳ ಜಗತ್ತು ಹೇಗಿರುತ್ತದೆ? ಆ ಭವಿಷ್ಯದ ಕಲ್ಪನೆಯನ್ನು ನಮಗಾಗಿ ಕಟ್ಟಿಕೊಡುವಿರಾ?
ರೋಬಾಟ್ಗಳ ಯುಗ ಆರಂಭವಾಗುವುದಕ್ಕೆ ಹೆಚ್ಚಿನ ಕಾಲ ಬೇಕಿಲ್ಲ. ಎಐ ಬೆಳವಣಿಗೆಯಲ್ಲಿ ರೋಬಾಟ್ಗಳ ಬೆಳವಣಿಗೆಯೂ ಇದೆ. ಎಐ ವ್ಯವಸ್ಥೆಗಳು ಹೆಚ್ಚೆಚ್ಚು ಇಂಟೆಲಿಜೆಂಟ್ ಆದಂತೆ ಈ ಪರಿಸರದೊಂದಿಗೆ ರೋಬಾಟ್ಗಳು ಪ್ರತಿಕ್ರಿಯಿಸುವ ಬುದ್ಧಿವಂತಿಕೆಯೂ ಹೆಚ್ಚುತ್ತದೆ. ಆರಂಭದಲ್ಲಿ ರೋಬಾಟ್ಗಳು ಕೈಗಾರಿಕೆಗಳು, ಮೈನಿಂಗ್, ಅಪಾಯಕಾರಿ ಕೆಲಸಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳಲ್ಲಿ ಬಳಕೆಗೆ ಬರುತ್ತವೆ. ಅದು ಈಗಾಗಲೇ ಆರಂಭವಾಗಿದೆ. ಅದಾದ ಬಳಿಕ ಸಾರ್ವಜನಿಕ ಸೇವೆಗಳಲ್ಲಿ ಅವುಗಳ ಬಳಕೆ ಆರಂಭವಾಗುತ್ತದೆ. ಬಳಿಕ ನಿಧಾನವಾಗಿ ಕೌಟುಂಬಿಕ ಅಥವಾ ವೈಯಕ್ತಿಕ ಬಳಕೆಗೆ ರೋಬಾಟ್ಗಳ ಬಳಕೆಯೂ ಶುರುವಾಗುತ್ತದೆ. ಮೊದ ಮೊದಲು ಈ ರೋಬಾಟ್ಗಳು ನಮ್ಮ ಮನೆಯ ಪೆಟ್ಗಳ ಹಾಗಿರುತ್ತವೆ. ಅವುಗಳೊಂದಿಗೆ ನಮ್ಮ ನಡವಳಿಕೆ ನಮ್ಮನೆಯ ಪೆಟ್ಗಳಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಆದರೆ, ಅದೇ ರೋಬಾಟ್ ದಿನಕಳೆದಂತೆ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾ ಹೋಗುತ್ತದೆ. ಅದೊಂದು ರೀತಿಯಲ್ಲಿ ನಮ್ಮನೆಯ ಮಕ್ಕಳು ದೊಡ್ಡವರಾಗುತ್ತಾ, ಬುದ್ಧಿವಂತಿಕೆಯನ್ನು ತೋರಿಸುವುದನ್ನು ನೋಡಿ ಚಕಿತಗೊಳ್ಳುವಂತೆ ಅಚ್ಚರಿಗೊಳ್ಳುತ್ತೇವೆ. ಈಗಿರುವ ನ್ಯಾರೋ ಎಐ ‘ಎಜಿಐ’ ಹಂತ ತಲುಪಿದ ಕೂಡಲೇ ಎಲ್ಲ ರೋಬಾಟ್ಗಳೂ ಮನುಷ್ಯನಷ್ಟೇ ಬುದ್ಧಿವಂತಿಕೆಯುಳ್ಳ ‘ಜೀವಿ’ಗಳಾಗಿ ಮನುಷ್ಯನ ಸಹವಾಸಿಗಳಾಗಿಬಿಡುತ್ತವೆ. ಆಗ ಅದೇ ಸಹಾಯಕ ರೋಬಾಟ್ ಮನೆಯ ಪ್ರಜ್ಞಾವಂತ ಸದಸ್ಯನಾಗಿಬಿಡುತ್ತದೆ.
ಈ ನಡುವೆ, ಮನುಷ್ಯ-ರೋಬಾಟ್ಗಳ ನಡುವೆ ಏರ್ಪಡುವ ಸಂಘರ್ಷಗಳ ಸ್ವರೂಪ ಏನು ಎನ್ನುವುದನ್ನು ಈಗಲೇ ಊಹಿಸುವುದು ಕಷ್ಟ. ಅದು ಸಹಮತವೋ, ಸಾಹಚರ್ಯವೋ ಇಲ್ಲ ಸಂಘರ್ಷವೋ ಎನ್ನುವುದು ತನ್ನ ಪರಿಸರದೊಂದಿಗೆ ರೋಬಾಟ್ಗಳ ಒಡನಾಟವನ್ನು ಅವಲಂಬಿಸಿರುತ್ತದೆ. ಎಎಸ್ಐ ಯಾವ ರೂಪದಲ್ಲಾದರೂ ತನ್ನ ಇರುವಿಕೆಯನ್ನು ತೋರ್ಪಡಿಸಬಹುದು. ರೋಬಾಟ್ ಅದರ ಭೌತಿಕ ರೂಪಗಳಲ್ಲಿ ಒಂದಾಗಿರುತ್ತದೆ. ಆಗ ರೋಬಾಟ್ಗಳೆಲ್ಲ ಪ್ರತ್ಯೇಕ ಅಲ್ಲ. ಜಗತ್ತಿನ ಎಲ್ಲ ಇಂಟೆಲಿಜೆನ್ಸ್ ವ್ಯವಸ್ಥೆಯ ಭಾಗವಾಗಿರುತ್ತವೆ.
ವಿದ್ಯಾರ್ಥಿಗಳಿಂದ ಹಿಡಿದು ಹಿರಿಯರು, ಮಹಿಳೆಯರು, ಸಣ್ಣ ವ್ಯಾಪಾರಿಗಳವರೆಗೆ ಎಲ್ಲರಿಗೂ ಸೈಬರ್ ಅಪರಾಧ ದೊಡ್ಡ ಸಮಸ್ಯೆಯಾಗಿದೆ. ಜನರು ಸೈಬರ್ ಅಪರಾಧಗಳಿಂದ ಪಾರಾಗಲು ನಿಮ್ಮ ಸಲಹೆಗಳೇನು?
ಭಾರತದಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ವಯಸ್ಸಾದವರು ಇಂಥ ಅಪರಾಧಗಳಿಗೆ ಬಲಿಯಾಗುತ್ತಿರುವುದನ್ನು ನಾನು ನೋಡಿದ್ದೇನೆ. ಸಣ್ಣ ವ್ಯಾಪಾರಿಗಳೂ ಕೂಡ ಮೋಸಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಎಂದರೆ ಈ ಅಪರಾಧಗಳ ಬಗ್ಗೆ ಹೆಚ್ಚು ತಿಳಿವಳಿಕೆ ನೀಡುವುದು. ಮೊದಲು ಹಿರಿಯ ನಾಗರಿಕರಿಗೆ ಸರಕಾರ ಸೂಕ್ತ ತರಬೇತಿಗಳನ್ನು ನೀಡಬೇಕು. ಒಂದು ನಿರ್ಧಿಷ್ಟ ವಯಸ್ಸು ದಾಟಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಈ ತರಬೇತಿಯನ್ನು ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕು. ಇದು ಪ್ರತಿ ಹಳ್ಳಿಗೂ ತಲುಪುವಂತೆ ಕ್ರಮ ವಹಿಸಬೇಕು. ತರಬೇತಿ ಎಂದರೆ ಅವರಿಗೆ ಸೈಬರ್ ಸೆಕ್ಯುರಿಟಿಯ ಮೂಲಭೂತ ವಿಚಾರಗಳನ್ನೇನು ತಿಳಿಸಬೇಕಿಲ್ಲ. ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಹಿರಿಯರು ಮಾಡಬೇಕಾದ್ದೇನು ಮಾಡಬಾರದ್ದೇನು ಎಂದು ಅವರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟರೆ ಸಾಕು. ಸುಮ್ಮನೆ ಪಾಠ ಮಾಡ್ತೀವಿ ಎಂದರೆ ಯಾರೂ ಬರುವುದಿಲ್ಲ. ಅವರಿಗೆ ಪ್ರೋತ್ಸಾಹ ನೀಡುವ ಹಾಗೆ ಯಾವುದಾದರೂ ಉತ್ತೇಜಕಗಳನ್ನ ಕೊಡಬೇಕು. ಅಮೆರಿಕದಲ್ಲಿ ಇಂಥ ಕಾರ್ಯಕ್ರಮಗಳಿವೆ. ಅವರಿಗೆ ಅತ್ಯಂತ ಸರಳ ಭಾಷೆಯಲ್ಲಿ ವಿವರಿಸಬೇಕು. ಭಾರತದಲ್ಲಿ ಲಕ್ಷಾಂತರ ಜನರಿರಬಹುದು. ಅವರೆಲ್ಲರನ್ನೂ ತಲುಪುವುದು ಅಷ್ಟು ಸುಲಭವಲ್ಲ ಎನ್ನುವುದು ನಿಜ. ಆದರೆ ಸರಕಾರ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ನಾನು ಈವರೆಗೆ ಅಮೆರಿಕಕ್ಕೆ ಸೇವೆ ಮಾಡಿದ್ದೇನೆ. ಭಾರತ ನನ್ನ ಜನ್ಮಭೂಮಿ. ಅದರಲ್ಲೂ ಕರ್ನಾಟಕ ನನ್ನ ತಾಯಿನಾಡು. ಸರಕಾರ ಮುಂದೆ ಬಂದರೆ ಇಲ್ಲಿ ನಾನು ಉಚಿತವಾಗಿ ಜನಸೇವೆ ಮಾಡಲು ಸಿದ್ಧನಿದ್ದೇನೆ. ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಾನೂ ಮಾಡುತ್ತೇನೆ. ಆದರೆ ಆ ಬದ್ಧತೆ ಸರಕಾರದ ಕಡೆಯಿಂದ ಬರಬೇಕು.
ಎಐ ಕಲಿಯಲಾಗದ ವಿಷಯ ಯಾವುದು? ಇದು ಯಾವ ಹಂತಕ್ಕೆ ಬೆಳೆಯಬಹುದು?
ನಾನು ಒಬ್ಬ ಕಂಪ್ಯೂಟರ್ ವಿಜ್ಞಾನಿಯಾಗಿ ಹೇಳುತ್ತಿದ್ದೇನೆ ಎಐನಿಂದ ಕಲಿಯಲಾಗದ್ದು ಯಾವುದೂ ಇಲ್ಲ. ಅದಕ್ಕೆ ಮನುಷ್ಯ ಕಲಿಯಬಲ್ಲ, ಈಗಾಗಲೇ ಕಲಿತಿರುವ ಯಾವುದೇ ವಿಷಯವನ್ನು ಕಲಿಸಬಹುದು. ಅದು ಸಾಹಿತ್ಯ ಇರಲಿ, ಸಂಗೀತ ಇರಲಿ. ಎಲ್ಲವನ್ನೂ ಎಐ ಕಲಿಯಲಿದೆ. ಒಟ್ಟಿನಲ್ಲಿ ಎಐ ಎಂಬುದು ಒಂದು ಶಕ್ತಿಶಾಲಿ ಮತ್ತು ಅತಿ ಬುದ್ಧಿವಂತ ವ್ಯವಸ್ಥೆ. ನನ್ನ ಪ್ರಕಾರ, ಹೆಚ್ಚೆಂದರೆ ಮುಂದಿನ ಐದು ವರ್ಷಗಳಲ್ಲಿ ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ (ಎಜಿಐ) ನೋಡಲಿದ್ದೇವೆ. ಎಜಿಐ ಎಂದರೆ ಎಲ್ಲಾ ವಿಷಯಗಳಲ್ಲೂ ಮನುಷ್ಯನನ್ನು ಸರಿಗಟ್ಟುವ ಇಲ್ಲವೇ ಮೀರುವ ‘ಇಂಟೆಲಿಜೆಂಟ್ ಸಿಸ್ಟಮ್.’ ಈಗಾಗಲೇ ಎಜಿಐನ ಚಹರೆಗಳು ಕೆಲವು ಎಐ ಮಾಡೆಲ್ಗಳಲ್ಲಿ ಕಂಡಿದೆ. ಜಿಪಿಟಿ-5 ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ.
ಸೂಪರ್ ಇಂಟೆಲಿಜೆನ್ಸ್ ಅನ್ನು ಸದ್ಯಕ್ಕೆ ನಿಖರವಾಗಿ ಪ್ರಿಡಿಕ್ಟ್ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಅದರ ನಿಜವಾದ ಸ್ವರೂಪ ಏನು, ಆ ಹಂತವನ್ನು ನಾವು ಹೇಗೆ ಸಾಧಿಸುತ್ತೇವೆ ಎಂಬುದರ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಈಗಿರುವ ಎಐ ವ್ಯವಸ್ಥೆಗಳು ದಿನೇ ದಿನೇ ಹೆಚ್ಚೆಚ್ಚು ಸ್ಮಾರ್ಟ್ ಆಗುತ್ತಾ ಹೋದರೆ ಸಾಲುವುದಿಲ್ಲ. ಎಂದರೆ, ಈಗಿರುವ ಜಿಪಿಟಿ-5 ಮುಂದೆ ಜಿಪಿಟಿ-10 ಕ್ಕೆ ಬೆಳೆಯಬಹುದು. ಅದು ಈಗಿರುವ ಮಾಡೆಲ್ಗಿಂತ ಹತ್ತುಪಟ್ಟು ಬುದ್ಧಿವಂತ ವ್ಯವಸ್ಥೆಯಾಗಬಹುದು. ಸ್ವತಂತ್ರವಾಗಿ ಕೆಲಸ ಮಾಡಬಲ್ಲ ಅಟಾನಮಸ್ ಏಜೆಂಟ್ ಸಾಮರ್ಥ್ಯಯೂ ಇರಬಹುದು. ಅಂದ ಮಾತ್ರಕ್ಕೆ ನಾವು ಎಎಸ್ಐ ಹಂತವನ್ನು ತಲುಪಲು ಸಾಧ್ಯವಿಲ್ಲ. ಯಾಕೆಂದರೆ ಎಐ ಬೆಳವಣಿಗೆ ರೇಖೀಯ ಬೆಳವಣಿಗೆಯಲ್ಲ. ದೊಡ್ಡ ಸ್ಥಿತ್ಯಂತರ ಆಗದ ಹೊರತು ಎಎಸ್ಐನ ಬೆಳವಣಿಗೆ ಆರಂಭವೂ ಆಗುವುದಿಲ್ಲ. ಆದರೆ ನನಗಂತೂ ಅನ್ನಿಸುತ್ತಿದೆ, ಇನ್ನು ಕೆಲವೇ ದಶಕಗಳಲ್ಲಿ ಎಐ ಬೆಳವಣಿಗೆ ಆ ಹಂತ ತಲುಪುತ್ತದೆ. ಅಲ್ಲಿಂದ ಮನುಷ್ಯ ಸಮಾಜದ ಭಾರಿ ರೂಪಾಂತರ ಆರಂಭವಾಗುತ್ತದೆ. ಆನಂತರದ ಬೆಳವಣಿಗೆಗಳನ್ನು ನಾವು ಊಹಿಸಲೂ ಸಾಧ್ಯವಿಲ್ಲ.
ಎಎಸ್ಐಗೆ ಸಮನಾದ ಇಂಟೆಲಿಜೆನ್ಸ್ ಅನ್ನು ದಕ್ಕಿಸಿಕೊಳ್ಳಲು ಬೇರೆ ಬೇರೆ ಪ್ರಯತ್ನಗಳೂ ನಡೆಯುತ್ತಿವೆ. ಎಲ್ಲವನ್ನೂ ನಾವು ಪ್ರೋಗ್ರಾಮ್ ಮಾಡಬಹುದು. ಈ ಜಗತ್ತು ಕಂಡ ಅತ್ಯಂತ ಜೀನಿಯಸ್ ವ್ಯಕ್ತಿ ಆಲ್ಬರ್ಟ್ ಐನ್ಸ್ಟೈನ್. ಇಡೀ ಜಗತ್ತಿಗೇ ಕಾಣದ ವಿಚಾರ ಅವರಿಗೆ ನೂರು ವರ್ಷಗಳ ಮೊದಲೇ ಕಾಣುವ ಅಮೂರ್ತ ದೃಷ್ಟಿಯಿತ್ತು. ಅವರನ್ನು ನಾವು ಪೂರ್ತಿಯಾಗಿ ಅರ್ಥಮಾಡಿಕೊಂಡರೆ ನಾವು ಅವರ ಬುದ್ಧಿವಂತಿಕೆಯನ್ನು ಪ್ರೊಗ್ರಾಮ್ ಮಾಡಬಹುದು. ಎಂದರೆ, ನಾವು ಕಂಪ್ಯೂಟರ್ನಲ್ಲಿ ಐನ್ಸ್ಟೈನ್ ಅವರ ಬುದ್ಧಿವಂತಿಕೆಯನ್ನು ಸಿಮ್ಯುಲೇಟ್ ಮಾಡಬಹುದು. ಆಗ ಎಐಗೆ ಮನುಷ್ಯನ ಅತಿ ಬುದ್ಧಿವಂತಿಕೆಯ ಜೊತೆಗೆ ಎಲ್ಲಾ ಸಾಧ್ಯತೆಯೂ ದಕ್ಕಿಬಿಡುತ್ತದೆ. ಅದೇ ರೀತಿ, ರೀ ಎನ್ಫೋರ್ಸ್ಮೆಂಟ್ ಲರ್ನಿಂಗ್ ಮೂಲಕ ನಮ್ಮ ಸುತ್ತಲ ಪರಿಸರವನ್ನು ಎಐ ತನ್ನಿಂತಾನೇ ಕಲಿಯುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ, ಇಲಾನ್ ಮಸ್ಕ್ ನಂತವರು ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ ಮೂಲಕ ಹ್ಯೂಮನ್ ಇಂಟೆಲಿಜೆನ್ಸ್ ಅನ್ನು ಎಐ ವ್ಯವಸ್ಥೆಗೆ ವರ್ಗಾಯಿಸುವ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಒಟ್ಟಿನಲ್ಲಿ ಯಾವುದಾದರೊಂದು ಮಾರ್ಗದಲ್ಲಿ ಸೂಪರ್ ಇಂಟೆಲಿಜೆನ್ಸ್ ಅಭಿವೃದ್ಧಿ ಸಾಧ್ಯವಾಗುತ್ತದೆ.



