ಕೋಡಿಂಗ್ ಗೊತ್ತಿಲ್ಲದಿದ್ದರೂ ಉಚಿತವಾಗಿ ವೆಬ್ಸೈಟ್ ರೂಪಿಸಬಹುದು, ಗೊತ್ತೇ?
AI ಅನಂತ ಅವತಾರ – ಭಾಗ 7
ಡಾ.ರಮೇಶ್ ನಿಂಬೆಮರದಳ್ಳಿ
ಉದ್ಯಮ ಕಟ್ಟುವವರಿಗೆ ಇದು ವರದಾನ
ಸರಳ ಭಾಷೆಯಿಂದಲೇ ಸಾಫ್ಟ್ವೇರ್ ರಚನೆ
ನಾನ್-ಕೋಡರ್ಗಳೂ ಪ್ರೋಗ್ರಾಮ್ ಬರೆಯುವುದು ಸಾಧ್ಯ
ಕೆಲವೇ ಗಂಟೆಗಳಲ್ಲಿ ಕನಸಿಗೆ ವ್ಯವಹಾರದ ರೂಪ
ಸ್ಟಾರ್ಟ್ಅಪ್ ಮಾಡುವುದು ಇನ್ನು ಸಲೀಸು
ಉತ್ಸಾಹಿ ಪತ್ರಕರ್ತರಿಗೆ ಡಿಜಿಟಲ್ ನ್ಯೂಸ್ ಮಾಡಲು ಸುವರ್ಣಾವಕಾಶ
24 ವರ್ಷದ ಅರ್ಜುನ್ಗೆ ಕಾಲೇಜು ದಿನಗಳಿಂದಲೂ ತಲೆಯಲ್ಲಿ ಒಂದು ಬಿಸಿನೆಸ್ ಐಡಿಯಾ ಕೊರೆಯುತ್ತಿತ್ತು. ಸ್ಥಳೀಯ ಕುಶಲಕರ್ಮಿಗಳನ್ನು ಜಾಗತಿಕ ಗ್ರಾಹಕರೊಂದಿಗೆ ಸಂಪರ್ಕಿಸುವ ಒಂದು ಆ್ಯಪ್ ನಿರ್ಮಿಸುವುದು ಅತನ ಕನಸು. ವಿದ್ಯಾಭ್ಯಾಸ ಮುಗಿಸಿ ಕ್ಯಾಂಪಸ್ನಿಂದ ಹೊರಬಿದ್ದವನೇ ಕನಸು ಸಾಕಾರಗೊಳಿಸುವಲ್ಲಿ ನಿರತನಾದ. ಅವನಿಗೆ ಕೋಡಿಂಗ್ ಜ್ಞಾನ ಇರಲಿಲ್ಲ, ಕೆಲಸ ಸಿಕ್ಕಿರಲಿಲ್ಲ, ಅಪ್ಪ, ಅಮ್ಮ, ಸ್ನೇಹಿತರಿಂದ ಕೂಡಿ ಹಾಕಿದ ಹಣ ಬಹಳ ಕಡಿಮೆ. ಕಡಿಮೆ ಖರ್ಚಿನಲ್ಲಿ ತನ್ನ ಕನಸಿನ ಆ್ಯಪ್ ನಿರ್ಮಿಸಲು ಹೆಣಗಾಡಿದರೂ ಸಾಧ್ಯವಾಗಲೇ ಇಲ್ಲ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಕುತೂಹಲಿಯಾಗಿದ್ದ ಅರ್ಜುನ್, ಉಚಿತ ಎಐ ಮಾಡೆಲ್ಗಳನ್ನು ಬಳಸಿ ಸುಲಭವಾಗಿ ಉದ್ಯಮ ಕಟ್ಟುವ ದಾರಿ ತಿಳಿದುಕೊಂಡ. ಸಹಜ ಭಾಷೆಯ ಮೂಲಕವೇ ಬಯಸಿದ ಆ್ಯಪ್ ಸೃಷ್ಟಿಸಿ ತನ್ನ ಕನಸು ನನಸಾಗಿಸಿಕೊಂಡ. ಎಐನಿಂದ ಅವನ ಬಿಸಿನೆಸ್ ಐಡಿಯಾ ಮೂರ್ತರೂಪ ಪಡೆಯಿತು.
ಅರ್ಜುನ್ ತನ್ನ ಕನಸಿನ ಆ್ಯಪ್ ರೂಪಿಸಲು ಬಳಸಿದ ವಿಧಾನವು ಈಗ “ವೈಬ್ ಕೋಡಿಂಗ್” ಎಂಬ ಹೆಸರಿನಲ್ಲಿ ಭಾರಿ ಜನಪ್ರಿಯವಾಗಿದೆ. ಈ ತಂತ್ರಜ್ಞಾನವು ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯುತ್ತಿದೆ. ತಮ್ಮ ಕನಸಿನ ಉದ್ಯಮ ಕಟ್ಟಲು ಕೈಬೀಸಿ ಕರೆಯುತ್ತಿದೆ.
ಎಐ ಟೂಲ್ ಬಳಸಿ ಕೋಡಿಂಗ್ ಮಾಡುವ ಪರಿಕಲ್ಪನೆ ಹೊಸದೇನೂ ಅಲ್ಲ. ಆದರೆ ಈಗಿನಷ್ಟು ಶಕ್ತಿಶಾಲಿ ಎಐ ಮಾಡೆಲ್ಗಳು ಹಿಂದೆ ಇರಲಿಲ್ಲ. ಅದೆಲ್ಲದಕ್ಕಿಂತ ಮುಖ್ಯವಾಗಿ ಎಐ ಮೂಲಕ ಆ್ಯಪ್, ಸಾಫ್ಟ್ವೇರ್ ಅಥವಾ ವೆಬ್ಸೈಟ್ ರೂಪಿಸುವ ಕೆಲಸಕ್ಕೆ “ವೈಬ್ ಕೋಡಿಂಗ್” ಎಂಬ ಹೆಸರಿಟ್ಟವರು ಓಪನ್ಎಐನ ಸಹ-ಸಂಸ್ಥಾಪಕ ಮತ್ತು ಟೆಸ್ಲಾದಲ್ಲಿ ಎಐ ಯೋಜನೆಗಳನ್ನು ಮುನ್ನಡೆಸಿದ ಆಂಡ್ರೆಜ್ ಕಾರ್ಪತಿ. ಇವರು ಫೆಬ್ರವರಿ 3 ರಂದು ಈ ಪರಿಕಲ್ಪನೆಯನ್ನು ಎಕ್ಸ್ನಲ್ಲಿ ಪರಿಚಯಿಸಿದರು. ಅವರೇ ವಿವರಿಸುವಂತೆ ಇನ್ನು ಮುಂದೆ ನಾವು ಕೋಡ್ ಬರೆಯಬೇಕಿಲ್ಲ ಬದಲಿಗೆ ನಾವು ನಿರ್ಮಿಸಲು ಹೊರಟ ಅಪ್ಲಿಕೇಶನ್ನ ವೈಬ್ ಅನ್ನು ಎಐಗೆ ವಿವರಿಸಿದರೆ ಸಾಕು.
ತಜ್ಞರ ಪ್ರಕಾರ, ವೈಬ್ ಕೋಡಿಂಗ್ ಉದ್ಯಮಶೀಲತೆಯಲ್ಲಿ ಕ್ರಾಂತಿ ತರುವ ಸಾಧ್ಯತೆ ಇದೆ. ಗಾರ್ಟ್ನರ್ ವರದಿಯ ಪ್ರಕಾರ, 2027ರ ವೇಳೆಗೆ 65% ಸಾಫ್ಟ್ವೇರ್ ಸೃಷ್ಟಿ ಎಐ-ಚಾಲಿತವಾಗಿರುತ್ತದೆ. ಇಲ್ಲವೇ ಲೋ-ಕೋಡ್ ಅಥವಾ ನೋ-ಕೋಡ್ ವೇದಿಕೆಗಳ ಮೂಲಕ ನಡೆಯುತ್ತದೆ. "ವೈಬ್ ಕೋಡಿಂಗ್ ಮೂಲಕ ಯುವಕರು ತಾಂತ್ರಿಕ ಸಂಕೀರ್ಣತೆಗಳ ಬಗ್ಗೆ ಚಿಂತಿಸದೆ ತಮ್ಮ ದೊಡ್ಡ ಆಲೋಚನೆಗಳ ಮೇಲೆ ಗಮನ ಕೇಂದ್ರೀಕರಿಸಬಹುದು. ಇದು ಕೋಡಿಂಗ್ ಜ್ಞಾನವಿಲ್ಲದವರಿಗೂ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಅವಕಾಶ ನೀಡುತ್ತದೆ," ಎಂದು ಹಿರಿಯ ಎಐ ಸಂಶೋಧಕಿ ಡಾ. ಪ್ರಿಯಾ ಮೆನನ್ ಹೇಳುತ್ತಾರೆ.
ಕನಸಿಗೆ ಜೀವ ತುಂಬುವುದು ಮಾತಾಡಿದಷ್ಟೇ ಸಲೀಸು
ವೈಬ್ ಕೋಡಿಂಗ್ ಎಂದರೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಸಾಫ್ಟ್ವೇರ್ ಅಥವಾ ಕೋಡ್ ರಚಿಸುವ ಒಂದು ಹೊಸ ವಿಧಾನ. ಇದರಲ್ಲಿ ಬಳಕೆದಾರರು ತಮ್ಮ ಆಲೋಚನೆಗಳನ್ನು ಸರಳ ಭಾಷೆಯಲ್ಲಿ ಉದಾಹರಣೆಗೆ, "ನನಗೊಂದು ಬ್ಲಾಗ್ ರಚಿಸು" ಎಂದು ಧ್ವನಿ ಇಲ್ಲವೇ ಪಠ್ಯದ ಮೂಲಕ ಎಐಗೆ ಪ್ರಾಂಪ್ಟ್ನಲ್ಲಿ ವಿವರಿಸುತ್ತಾರೆ. ಎಐ ಅಥವಾ LLMಗಳು, ಆ ಆಲೋಚನೆಯನ್ನು ಅರ್ಥಮಾಡಿಕೊಂಡು ಬ್ಲಾಗ್ ರಚಿಸಲು ಅಗತ್ಯವಿರುವ ಕೋಡ್ ರಚಿಸುತ್ತವೆ. ಬಳಿಕ ಅದರಲ್ಲಿರುವ ದೋಷಗಳನ್ನು ಸರಿಪಡಿಸುತ್ತವೆ. ಅಲ್ಲದೆ, ಇನ್ನಷ್ಟು ಸುಧಾರಣೆಗೆ ಸಲಹೆಗಳನ್ನೂ ನೀಡುತ್ತವೆ. ಹೀಗಾಗಿ ವೆಬ್ಸೈಟ್, ಆ್ಯಪ್ ರಚಿಸಲು ಇನ್ನು ಪ್ರೋಗ್ರಾಮಿಂಗ್ ಅಥವಾ ಕೋಡಿಂಗ್ ಜ್ಞಾನ ಇರಲೇಬೇಕಿಂದಿಲ್ಲ. ಯಾರು ಬೇಕಾದರೂ ತಮ್ಮ ಕನಸಿನ ವೆಬ್ಸೈಟ್, ಆ್ಯಪ್ಗಳನ್ನು ರಚಿಸಬಹುದು. ಇನ್ನೂ ಸರಳವಾಗಿ ಹೇಳುವುದಾದರೆ, ಇದು ನಮ್ಮ ಆಲೋಚನೆಗೆ ಎಐ ಕೋಡಿಂಗ್ ಮೂಲಕ ಜೀವ ತುಂಬುವ ಹೊಸ ವಿಧಾನ.
ದೊಡ್ಡ ಕನಸಿನ ಪುಟ್ಟ ಹಾದಿ
ವೈಬ್ ಕೋಡಿಂಗ್ ಕೇವಲ ಹೊಸಬರು, ಡೆವಲಪರ್ಗಳಿಗೆ ಮಾತ್ರವಲ್ಲದೆ ಮಾರ್ಕೆಟಿಂಗ್, ವಿನ್ಯಾಸ ಮತ್ತು ವ್ಯಾಪಾರ ತಂತ್ರಗಾರಿಕೆ ರೂಪಿಸುವ ವೃತ್ತಿಯಲ್ಲಿರುವವರಿಗೂ ಬಹಳ ಉಪಯುಕ್ತವಾಗಿದೆ. ಕೋಡಿಂಗ್ ಜ್ಞಾನವಿಲ್ಲದವರು ಈಗ ವೆಬ್ಸೈಟ್ಗಳನ್ನು ರಚಿಸುವುದು ನೀರು ಕುಡಿದಷ್ಟೇ ಸಲೀಸಾಗಿದೆ. "ನನಗೆ ಕೋಡಿಂಗ್ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಎಐ ಅಸಿಸ್ಟೆಂಟ್ ಮೂಲಕ ನನ್ನ ಸ್ಟಾರ್ಟ್ಅಪ್ಗಾಗಿ ಒಂದು ವೆಬ್ಸೈಟ್ ಅನ್ನು ಕೆಲವೇ ಗಂಟೆಗಳಲ್ಲಿ ರಚಿಸಿದೆ," ಎಂದು ಡಿಜಿಟಲ್ ಉದ್ಯಮಿ ಸಾರಾ ಪಟೇಲ್ ಹೇಳುತ್ತಾರೆ.
ತಂತ್ರಜ್ಞಾನ ಎಲ್ಲರಿಗೂ ಸುಲಭವಾಗಿ ದಕ್ಕುವಂತಾದರೆ ಅದು ಜನರ ಬದುಕನ್ನು ಅನೂಹ್ಯ ರೀತಿಯಲ್ಲಿ ಪರಿವರ್ತಿಸಬಲ್ಲದು ಎಂಬುದಕ್ಕೆ ವೈಬ್ ಕೋಡಿಂಗ್ ಉದಾಹರಣೆ. ನೀವು ಉದ್ಯಮಿಯಾಗಿರಿ, ಸಾಫ್ಟ್ವೇರ್ ತಜ್ಞರಾಗಿರಿ ಇಲ್ಲವೇ ಹೊಸ ಉದ್ಯಮ ಕಟ್ಟುವ ಕನಸುಗಾರನಾಗಿರಿ ಎಐ ಸಹಾಯದ ಮೂಲಕ ನಡೆಸುವ ಈ ವೈಬ್ ಕೋಡಿಂಗ್ ಹೊಸ ಸಾಧ್ಯತೆಗಳನ್ನು ತೆರೆಯುತ್ತಿದೆ. ಮುಂದಿನ ನಿಮ್ಮ ದೊಡ್ಡ ಆ್ಯಪ್, ವೆಬ್ಸೈಟ್ ಅಥವಾ ಬಿಸಿನೆಸ್ ಆರಂಭ ನಿಮ್ಮ ಆಪ್ತ ಗೆಳೆಯನ ಜೊತೆಗಿನ ಮಾತುಕತೆಯಷ್ಟೇ ಸುಲಭ. ಅರ್ಜುನ್ನ ಕತೆಯಂತೆ, ಒಂದು ಆಲೋಚನೆ ಮತ್ತು ಹೊಸ ತಂತ್ರಜ್ಞಾನವನ್ನು ಸ್ವೀಕರಿಸುವ ಧೈರ್ಯವಿದ್ದರೆ ಸಾಕು. ಒಂದು ಪ್ರಾಂಪ್ಟ್ನಲ್ಲಿ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ.
ಉಚಿತವಾಗಿ ಆ್ಯಪ್ ರಚಿಸುವುದು ಹೇಗೆ?
ವೈಬ್ ಕೋಡಿಂಗ್ ಎನ್ನುವುದು ಮನುಷ್ಯರ ಆಲೋಚನೆ ಮತ್ತು ಎಐ ಸಾಮರ್ಥ್ಯದ ಸಂಗಮ. ತಮ್ಮ ಆಲೋಚನೆಗಳನ್ನು ಸರಳ ಭಾಷೆಯಲ್ಲಿ ಜೆಮಿನಿ, ಗ್ರಾಕ್, ಡೀಪ್ಸೀಕ್, ಕ್ಲಾಡ್, ಜಿಪಿಟಿ4 ಮುಂತಾದ ಯಾವುದೇ ಎಐ ಮಾಡೆಲ್ಗಳಿಗೆ ವಿವರಿಸಿದರೆ ಆ ಆಲೋಚನೆಯನ್ನು ಕೋಡ್ ಆಗಿ ಪರಿವರ್ತಿಸುತ್ತವೆ. ಒಮ್ಮೆ ಸೃಷ್ಟಿಸಿದ ಕೋಡ್ ಅನ್ನು ನಿರಂತರ ಸಂವಾದದ ಮೂಲಕ ಸುಧಾರಿಸುತ್ತಾ ಹೋಗಬಹುದು. ನಮಗೆ ಸಮಾಧಾನ ಎನಿಸುವ ಅಂತಿಮ ಆವೃತ್ತಿಯನ್ನು ಟೆಸ್ಟ್ ಮಾಡಿ, ಅದರಲ್ಲಿ ದೋಷಗಳನ್ನು ಸರಿಪಡಿಸಬಹುದು. ಕೊನೆಗೆ ಆನ್ಲೈನ್ ಸರ್ವರ್ಗಳನ್ನು ಬಳಸಿ ಡಿಪ್ಲಾಯ್ ಮಾಡಬಹುದು. ನಿಮ್ಮದೇ ವೆಬ್ಸೈಟ್, ಆ್ಯಪ್ ರಚಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:
ಆಲೋಚನೆಯಿಂದ ಪ್ರಾಂಪ್ಟ್ಗೆ: ಮೊದಲು ನಿಮಗೆ ಸೂಕ್ತವೆನಿಸುವ ಎಐ ಮಾಡೆಲ್ ಆಯ್ಕೆ ಮಾಡಿ. ಬಳಿಕ, ನಿಮ್ಮ ಆಲೋಚನೆ ಅಥವಾ ಬಿಸಿನೆಸ್ ಐಡಿಯಾವನ್ನು ಸರಳವಾದ ಇಂಗ್ಲಿಷ್ ಭಾಷೆಯಲ್ಲಿ ಎಐ ಮಾಡೆಲ್ಗೆ ವಿವರಿಸಿ. ನೀವು ರೂಪಿಸಲು ಬಯಸುವ ಅಪ್ಲಿಕೇಶನ್ ಯಾವ ರೀತಿ ಇರಬೇಕು ಎನ್ನುವುದು ಎಐಗೆ ಸರಿಯಾಗಿ ತಿಳಿಯಬೇಕು. ಎಐ ಮಾಡೆಲ್ಗೆ ‘ಡೆವಲಪರ್ ರೋಲ್’ ನೀಡಿ ಅದು ಸೂಕ್ತ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಬೇಕು. ವೆಬ್ಸೈಟ್ ಡೆವಲಪರ್ಗೆ ಸೂಚನೆ ನೀಡುವಂತೆ ಎಐಗೆ ತಿದ್ದುಪಡಿ ಸೂಚನೆಗಳನ್ನು ನೀಡುತ್ತಾ ತಮ್ಮ ಅಂತಿಮ ಉತ್ಪನ್ನದ ರೂಪು ರೇಷೆ ತಯಾರಿಸಬೇಕು.
ಕಾರ್ಯ ವಿಭಜನೆ: ಬಳಕೆದಾರರೊಂದಿಗೆ ಚರ್ಚಿಸಿ ತಯಾರಿಸಿದ ರೂಪುರೇಷೆಯ ಅನುಸಾರ ಎಐ ಮಾಡೆಲ್ ನಿಮ್ಮ ಆಲೋಚನೆಯನ್ನು ತರ್ಕಬದ್ಧ ಕಾರ್ಯಗಳಾಗಿ ವಿಭಜಿಸುತ್ತದೆ.
ಕೋಡ್ ರಚನೆ: ಅಂತಿಮ ರೂಪುರೇಷೆಯನ್ನು ಆಧರಿಸಿ ಎಐ ಮಾಡೆಲ್ ಕೋಡ್ ಬರೆಯಲು ಆರಂಭಿಸುತ್ತದೆ. ಕೆಲವೇ ನಿಮಿಷಗಳಲ್ಲಿ ನಿಮ್ಮ ಆ್ಯಪ್ ಇಲ್ಲವೇ ವೆಬ್ಸೈಟ್ ಸಿದ್ದವಾಗುತ್ತದೆ.
ಪರಿಶೀಲನೆ/ಪರಿಷ್ಕರಣೆ: ಬಳಿಕ, ಈಗಾಗಲೇ ಸಿದ್ಧವಾಗಿರುವ ಕೋಡ್ ಅನ್ನು ಪರಿಶೀಲಿಸಲು, ಎಐ ಮಾಡೆಲ್ಗೆ ನೀವು ಸೂಚಿಸಬಹುದು. ತಾನೇ ಬರೆದಿರುವ ಪ್ರೋಗ್ರಾಮ್ ಅನ್ನು ವಿಶ್ಲೇಷಿಸಿ ಕೋಡ್ನಲ್ಲಿರುವ ದೋಷಗಳನ್ನು (ಡೀಬಗ್) ಸರಿಪಡಿಸುತ್ತದೆ. ನೀವು ಎಐ ಜೊತೆ ಸಂವಾದ ಮಾಡುತ್ತಾ ತಮಗೆ ಬೇಕಾದಂತೆ ಪ್ರೋಗ್ರಾಮ್ ಅನ್ನು ಸುಧಾರಿಸಬಹುದು ಇಲ್ಲವೇ ತಿದ್ದುಪಡಿ ಮಾಡಬಹುದು.
ನಿಯೋಜನೆ: ಕೊನೆಯಲ್ಲಿ ನಿಮ್ಮ ಆ್ಯಪ್ ಅಥವಾ ವೆಬ್ಸೈಟ್ ಅನ್ನು ಸುಲಭವಾಗಿ ಸರ್ವರ್ಗಳ ಮೂಲಕ ಜನರ ಬಳಕೆಗೆ ಲಭ್ಯಗೊಳಿಸಬಹುದು.
ಈಗಿರುವ ಎಐ ಮಾಡೆಲ್ಗಳನ್ನು ಬಳಸಿ ಅದರಲ್ಲೂ ಉಚಿತ ಪ್ಲಾನ್ಗಳ ಮೂಲಕ ಸದ್ಯಕ್ಕೆ ಕ್ಲಿಷ್ಟಕರವಾದ ಮತ್ತುಸಂಕೀರ್ಣವಾದ ಅಪ್ಲಿಕೇಶನ್ಗಳನ್ನು ರೂಪಿಸಲು ಸಾಧ್ಯವಿಲ್ಲ. ಸರಳ ಮತ್ತು ಮಧ್ಯಮ ಹಂತದ ಪ್ರೋಗ್ರಾಮ್ಗಳನ್ನು ಮಾತ್ರ ಈಗ ಸೃಷ್ಟಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಎಐ ಮಾಡೆಲ್ಗಳು ಅಪ್ಗ್ರೇಡ್ ಆಗುತ್ತಾ ಹೋದಂತೆ, ಇನ್ನಷ್ಟು ಸ್ಮಾರ್ಟ್ ಆಗುತ್ತಾ ಹೋದಂತೆ ಎಂಥದೇ ಪ್ರೋಗ್ರಾಮ್, ಅಪ್ಲಿಕೇಶನ್ ಅಥವಾ ಸಾಫ್ಟ್ವೇರ್ಗಳನ್ನು ಎಐ ಮೂಲಕವೇ ರೂಪಿಸಲು ಸಾಧ್ಯವಿದೆ.
ಉತ್ಸಾಹಿ ಪರ್ತಕರ್ತರಿಗೆ ವರದಾನ
ಪತ್ರಿಕೋದ್ಯಮದಲ್ಲಿ ಅಪಾರ ಅನುಭವ, ಜ್ಞಾನ ಮತ್ತು ಸೂಕ್ತ ಪರಿಣತಿ ಹೊಂದಿರುವ ನೂರಾರು ಯುವ ಉತ್ಸಾಹಿ ಪತ್ರಕರ್ತರು ತಮ್ಮದೇ ಸ್ವಂತ ಡಿಜಿಟಲ್ ನ್ಯೂಸ್ ಮೀಡಿಯಾ ಆರಂಭಿಸಲು ಹಂಬಲಿಸುತ್ತಾರೆ. ಆದರೆ ನಾನ್-ಕೋಡಿಂಗ್ ಹಿನ್ನೆಲೆ, ಸೂಕ್ತ ಮಾರ್ಗದರ್ಶನದ ಕೊರತೆ, ಹಣಕಾಸಿನ ತೊಂದರೆಯಿಂದ ಅವರ ಕನಸು ಮನಸಲ್ಲೇ ಉಳಿಯುತ್ತದೆ. ಆದರೆ ಇನ್ನು ಕೊರಗಬೇಕಿಲ್ಲ. ವೈಬ್ ಕೋಡಿಂಗ್ ತಂತ್ರಜ್ಞಾನವನ್ನು ಬಳಸಿ ತಮ್ಮದೇ ನ್ಯೂಸ್ ವೆಬ್ಸೈಟ್ ಅಥವಾ ಅಪ್ಲಿಕೇಶನ್ಗಳನ್ನು ವೆಚ್ಚವಿಲ್ಲದೆ ಸೃಷ್ಟಿಸಬಹುದು. "ಸ್ಥಳೀಯ ಸುದ್ದಿಗಳನ್ನು ಪ್ರಕಟಿಸಲು ಒಂದು ವೆಬ್ಸೈಟ್ ಬೇಕು," ಎಂಬಂತಹ ಸರಳ ಪ್ರಾಂಪ್ಟ್ನಿಂದ ನಿಮ್ಮ ಡಿಜಿಟಲ್ ಮೀಡಿಯಾ ಆಲೋಚನೆಗೆ ಜೀವ ತುಂಬಬಹುದು. ಹಂತ ಹಂತವಾಗಿ ನಿಮ್ಮ ಆಲೋಚನೆಯನ್ನು ಸೂಕ್ತ ರೀತಿಯಲ್ಲಿ ಎಐ ಮಾಡೆಲ್ಗೆ ವಿವರಿಸುತ್ತಾ ಹೋದಂತೆ ನೀವು ಬಯಸಿದ ವೆಬ್ಸೈಟ್ ನಿಮ್ಮ ಕಣ್ಣೆದುರೇ ತೆರೆದುಕೊಳ್ಳುತ್ತದೆ. ಈ ರೀತಿಯಾಗಿ, ಕೋಡಿಂಗ್ ಜ್ಞಾನವಿಲ್ಲದೆಯೂ, ಯುವ ಪತ್ರಕರ್ತರು ತಮ್ಮ ನ್ಯೂಸ್ ವೆಬ್ಸೈಟ್ಗಳನ್ನು ಉಚಿತವಾಗಿ ಗಂಟೆಗಳಲ್ಲೇ ರಚಿಸಿ, ಸ್ಥಳೀಯ ಮಟ್ಟದಲ್ಲಿ ಕಾರ್ಯಾರಂಭ ಮಾಡಬಹುದು.
ವೈಬ್ ಕೋಡಿಂಗ್ ಟೂಲ್ಗಳು
Replit: ಇದು ****ಬ್ರೌಸರ್-ಆಧಾರಿತ IDE (ಒಂದು ಅಪ್ಲಿಕೇಶನ್ ಅಭಿವೃದ್ಧಿಗೆ ಅಗತ್ಯವಿರುವ ಸಾಫ್ಟ್ವೇರ್) ಆಗಿದ್ದು, ರೆಪ್ಲಿಟ್ ಏಜೆಂಟ್ ಎಂಬ AI ಸಹಾಯಕವನ್ನು ಹೊಂದಿದೆ. ಇದು ನೈಸರ್ಗಿಕ ಭಾಷೆಯ ಪ್ರಾಂಪ್ಟ್ಗಳನ್ನು ಅರ್ಥಮಾಡಿಕೊಂಡು ಕೋಡ್ ಬರೆಯುತ್ತದೆ ಮತ್ತು ಡೀಬಗ್ ಮಾಡುತ್ತದೆ. ಅಗತ್ಯವಾಗಿ ಬೇಕಿರುವ ಎಐ ವೈಶಿಷ್ಟ್ಯಗಳೊಂದಿಗೆ ಉಚಿತ ಯೋಜನೆ ಇದೆ. ಜೊತೆಗೆ ಸುಧಾರಿತ ವೈಶಿಷ್ಟ್ಯಗಳಿಗಾಗಿ ತಿಂಗಳಿಗೆ $20 ಡಾಲರ್ಗಳ ಪಾವತಿ ಪ್ಲಾನ್ ಕೂಡ ಲಭ್ಯವಿದೆ. ಇದು ಹೊಸಬರಿಗೆ ಸೂಕ್ತವಾಗಿದೆ.
Bolt.new: ಪ್ರಾಂಪ್ಟ್ಗಳ ಮೂಲಕ ಬ್ರೌಸರ್ನಲ್ಲಿ ನೇರವಾಗಿ ನೈಜ-ಸಮಯದ ಫುಲ್-ಸ್ಟ್ಯಾಕ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ಇದು ಸೂಕ್ತ. ಬೀಟಾ ಹಂತದಲ್ಲಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅದರ ನಿಯೋಜನೆ ಹಂತದಲ್ಲಿ ಪಾವತಿ ಮಾಡಿದ ಪ್ಲಾನ್ ಅಗತ್ಯವಿದೆ.
Lovable: ಕೋಡಿಂಗ್ ಬಗ್ಗೆ ಏನೂ ತಿಳಿಯದವರು ನೈಸರ್ಗಿಕ ಭಾಷೆಯ ವಿವರಣೆಗಳ ಮೂಲಕ ಅಪ್ಲಿಕೇಶನ್ಗಳನ್ನು ನಿರ್ಮಿಸಲು ಲವಬಲ್ ಉಪಯುಕ್ತ. ನಮ್ಮ ಅಪ್ಲಿಕೇಶನ್ ಹೇಗೆ ಕಾಣುತ್ತದೆ ಎಂಬುದು ಅದರ ನಿರ್ಮಾಣ ಹಂತದಲ್ಲೇ ಕಾಣುತ್ತದೆ. ಎಂದರೆ ಲೈವ್ ಪ್ರೀವ್ಯೂ ಇದರ ವಿಶೇಷತೆ. ಉಚಿತ ಮತ್ತು ಪಾವತಿ ಪ್ಲಾನ್ಗಳ ಆಯ್ಕೆಯನ್ನು ಹೊಂದಿದೆ. ಇದರ ಇಂಟರ್ಫೇಸ್ ಕೂಡ ಸರಳವಾಗಿದ್ದು, ಬಳಸುವುದು ಸುಲಭ.
Rosebud AI: ಗೇಮ್ಗಳ ರಚನೆಗೆ ಇದು ಉಪಯುಕ್ತ. ****ಕೋಡ್ ರಚಿಸುವುದು ಮಾತ್ರವಲ್ಲದೆ ಎಐ ಉತ್ಪಾದಿತ ಚಿತ್ರಗಳು ಮತ್ತು 3D ಪರಿಕರಗಳನ್ನೂ ನೀಡುತ್ತದೆ. ಉಚಿತ ಬಳಕೆಗೆ ಸಾಪ್ತಾಹಿಕ ಮಿತಿಗಳಿದ್ದು, ವಿಸ್ತೃತ ಬಳಕೆಗಾಗಿ ಪಾವತಿಸಿದ ಯೋಜನೆಯ ಅಗತ್ಯವಿದೆ.
V0: ಸರಳವಾದ UI (ಯೂಸರ್ ಇಂಟರ್ಫೇಸ್) ಘಟಕಗಳು ಮತ್ತು ಸಣ್ಣ ವೆಬ್ ಅಪ್ಲಿಕೇಶನ್ಗಳನ್ನು ರಚಿಸಲು ಇದು ಸೂಕ್ತ. ಅಪ್ಲಿಕೇಶನ್ನ ಫ್ರಂಟ್ ಎಂಡ್ ಅಭಿವೃದ್ಧಿ, ಪ್ರೋಟೊಟೈಪ್ ಮತ್ತು ತ್ವರಿತ ಪರೀಕ್ಷೆ ಕೈಗೊಳ್ಳಲು ಇದನ್ನು ಬಳಸಬಹುದು.
Windsurf: ಕೋಡಿಯಮ್ ರೂಪಿಸಿರುವ ಇದು ಉಚಿತ ಎಐ ಚಾಲಿತ "ಏಜೆಂಟಿಕ್ IDE" ಆಗಿದೆ. ನೈಸರ್ಗಿಕ ಭಾಷೆಯ ಪ್ರಾಂಪ್ಟ್ಗಳಿಂದ ಬಹು-ಫೈಲ್ಗಳ ಸಂಪಾದನೆ ಮತ್ತು ಪ್ರಾಜೆಕ್ಟ್ ಉದ್ದಕ್ಕೂ ಇದರ ನೆರವು ಪಡೆಯಬಹುದು. ಇದಕ್ಕೆ ಹೆಚ್ಚಿನ ಸ್ವಾಯತ್ತತೆಯಿದ್ದು, ಕೋಪೈಲಟ್-ರೀತಿಯ ಅನುಭವವ ನೀಡುತ್ತದೆ. ಹೀಗಾಗಿ ಇದು ಸಂಕೀರ್ಣ ಪ್ರಾಜೆಕ್ಟ್ ರೂಪಿಸಲು ಅತ್ಯುತ್ತಮವಾಗಿದೆ.



