ಆ್ಯಕ್ಷನ್ ಆಟಿಕೆಯೆಂಬ ಹೊಸ ಕ್ರೇಜ್
AI ಅನಂತ ಅವತಾರ – ಭಾಗ 10
ಡಾ.ರಮೇಶ್ ನಿಂಬೆಮರದಳ್ಳಿ
ಜಿಬ್ಲಿ-ಶೈಲಿಯ ಚಿತ್ರಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದನ್ನು ನೋಡಿದ್ದೇವೆ. ಎಲ್ಲರೂ ತಮ್ಮ, ತಮ್ಮ ಮಕ್ಕಳು ಮತ್ತು ತಮ್ಮ ಕುಟುಂಬದ ಜಿಬ್ಲಿ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದನ್ನು ಕಂಡಿದ್ದೇವೆ. ಇದೀಗ ಅಂಥದೇ ಮತ್ತೊಂದು ಎಐ ಟ್ರೆಂಡ್ ವೈರಲ್ ಆಗಿದೆ. ಅದೇ AI-ಜನರೇಟೆಡ್ ಆ್ಯಕ್ಷನ್ ಫಿಗರ್ಸ್! ನಮ್ಮನ್ನು ನಾವು ಆಟಿಕೆಯಂತಹ ಆಕೃತಿಗಳ ರೂಪದಲ್ಲಿ ಕಾಣಲು ಬಯಸುವುದೇ ಈ ಟ್ರೆಂಡ್. ಎಐ ಮಾಡೆಲ್ನ ಈ ಕೌಶಲ್ಯವನ್ನು ತಾಂತ್ರಿಕ ಪರಿಭಾಷೆಯಲ್ಲಿ ‘ಸ್ಟೈಲ್-ಟ್ರಾನ್ಸ್ಫರ್’ ಎನ್ನಲಾಗುತ್ತದೆ.
ತಮ್ಮ ಫೋಟೋಗಳನ್ನು ಚಾಟ್ಜಿಪಿಟಿಗೆ ಅಪ್ಲೋಡ್ ಮಾಡಿ, ತಮ್ಮನ್ನು ತಾವು ಪ್ಲಾಸ್ಟಿಕ್ ಪ್ಯಾಕೇಜಿಂಗ್ನೊಂದಿಗೆ ಕಲೆಕ್ಟಿಬಲ್ ಆ್ಯಕ್ಷನ್ ಫಿಗರ್ ರೂಪದಲ್ಲಿ ಅಂದರೆ ಬ್ಯಾಟ್ಮ್ಯಾನ್, ಸ್ಪೈಡರ್ ಮ್ಯಾನ್, ಐರನ್ ಮ್ಯಾನ್, ಸೂಪರ್ಮ್ಯಾನ್, ಬ್ಲ್ಯಾಕ್ ಪ್ಯಾಂಥರ್, ವಂಡರ್ ವುಮನ್, ಬಾರ್ಬಿ ಡಾಲ್ ಅಥವಾ ಯಾವುದೇ ಆಕೃತಿಗಳ ರೂಪದಲ್ಲಿ ತನ್ನನ್ನು ಚಿತ್ರಿಸುವಂತೆ ಜಿಪಿಟಿಗೆ ಕೇಳಿದರೆ ಕ್ಷಣಗಳಲ್ಲಿ ಅದು ರಿಯಲಿಸ್ಟಿಕ್ ಆಕೃತಿಗಳನ್ನು ಚಿತ್ರಿಸುತ್ತದೆ. ಇದು ನಿಜವಾದ ಆಟಿಕೆಯನ್ನೂ ಮೀರಿಸುವಂತೆ ನೈಜವಾಗಿರುತ್ತದೆ. ಈ ಟ್ರೆಂಡ್ನಿಂದಾಗಿ ಜಿಬ್ಲಿ-ಶೈಲಿಯ ಚಿತ್ರಗಳ ಬಳಿಕ ಜಗತ್ತಿನಾದ್ಯಂತ ಜನರು ಮತ್ತೆ ಚಾಟ್ಜಿಪಿಟಿಗೆ ಮುಗಿಬಿದ್ದಿದ್ದಾರೆ.
ಸೃಜನಶೀಲತೆಯ ಹೊಸ ಆಟ
ಎಐ ಮನುಷ್ಯ ಸೃಜನಶೀಲತೆಯನ್ನು ತನ್ನ ಕೈವಶ ಮಾಡಿಕೊಳ್ಳುತ್ತಿದೆ ಎನ್ನುವುದು ದಿನೇ ದಿನೆ ದೃಢವಾಗುತ್ತಿದೆ. ಇದಕ್ಕೆ ಎಐ ನಿರ್ಮಿತ ಜಿಬ್ಲಿ ಶೈಲಿಯ ಚಿತ್ರ, ಆ್ಯಕ್ಷನ್ ಫಿಗರ್ ಟ್ರೆಂಡ್ ಹಾಗೂ ಯಾವುದೇ ಚಿತ್ರವನ್ನು ಯಾವುದೇ ಕಲಾಕೃತಿಯ ಶೈಲಿಗೆ ಬದಲಾಯಿಸುವ ಎಐ ಸಾಮರ್ಥ್ಯವೇ ಇದಕ್ಕೆ ಸಾಕ್ಷಿ. ಎಲ್ಲರೂ ತಮ್ಮ ವ್ಯಕ್ತಿತ್ವವನ್ನು ಒಂದು ಡಿಜಿಟಲ್ ಆಟಿಕೆಯಾಗಿ ಪರಿವರ್ತಿಸಲು ಇದು ಅವಕಾಶ ನೀಡುತ್ತದೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರೆಯ ಆ್ಯಕ್ಷನ್ ಫಿಗರ್ ರಚಿಸಬಹುದು. ಅಷ್ಟೇ ಏಕೆ ಈ ಆ್ಯಕ್ಷನ್ ಫಿಗರ್ಗಳಿಗೆ ಯಕ್ಷಗಾನ ಕಲಾವಿದನ ಉಡುಗೆ ಅಥವಾ ಮೈಸೂರು ಪೇಟವನ್ನೂ ತೊಡಿಸಿ ನೋಡಬಹುದು. ಕಲ್ಪನೆಗೆ, ಸೃಜನಶೀಲತೆಗೆ ಮಿತಿಯೇ ಇಲ್ಲ.
ಎಲ್ಲಕ್ಕೂ ತಮ್ಮನ್ನು ತಾವು ತೆರೆದುಕೊಳ್ಳುವ, ಒಡ್ಡಿಕೊಳ್ಳುವ ಹಂಬಲದ ಯುವ ಜನರಲ್ಲಿ ಈ ಟ್ರೆಂಡ್ ಜನಪ್ರಿಯವಾಗಿದೆ. ಈ ರೀತಿಯ ಡಿಜಿಟಲ್ ರಚನೆಗಳು ಕೇವಲ ಮನರಂಜನೆಯನ್ನಷ್ಟೇ ಅಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ವೈಯಕ್ತಿಕ ಬ್ರ್ಯಾಂಡಿಂಗ್ ಮಾಡಲೂ ಸಹಾಯ ಮಾಡುತ್ತವೆ. ತಮ್ಮದೇ ಅಥವಾ ತಮ್ಮ ಮೆಚ್ಚಿನ ಆ್ಯಕ್ಷನ್ ಫಿಗರ್ ರೂಪಿಸಿಕೊಳ್ಳಲು ಕೋಡಿಂಗ್ ಜ್ಞಾನದ ಅಗತ್ಯವಿಲ್ಲ. ಚಾಟ್ಜಿಪಿಟಿ ಬಳಸಲು ಗೊತ್ತಿದ್ದು, ಸೂಚನೆಯನ್ನು ಸ್ಪಷ್ಟವಾಗಿ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಬರೆಯುವುದು ಗೊತ್ತಿದ್ದರೆ ಸಾಕು. ನೀವು ಬಯಸುವ ಆ್ಯಕ್ಷನ್ ಫಿಗರ್ ಕ್ಷಣಗಳಲ್ಲೇ ಸಿದ್ಧವಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ #AIBarbie ಮತ್ತು #ActionFigureChallenge ಎಂಬ ಹ್ಯಾಷ್ಟ್ಯಾಗ್ಗಳು ಈ ಟ್ರೆಂಡ್ನ ಜನಪ್ರಿಯತೆಯನ್ನು ತೋರಿಸುತ್ತವೆ.
ಹೊಸ ಉದ್ಯಮಕ್ಕೆ ದಾರಿ
ಈ ಟ್ರೆಂಡ್ ಭವಿಷ್ಯದಲ್ಲಿ ಹೊಸ ಉದ್ಯಮಶೀಲತೆಗೂ ದಾರಿಮಾಡಬಹುದು. ಉದಾಹರಣೆಗೆ, ಭಾರತೀಯ ಆಟಿಕೆ ತಯಾರಕರು ಡಿಜಿಟಲ್ ಕಲೆಕ್ಟಿಬಲ್ಗಳನ್ನು ರಚಿಸಬಹುದು ಅಥವಾ AI ಮತ್ತು ಸಾಂಪ್ರದಾಯಿಕ ಕಲೆಯನ್ನು ಸಂಯೋಜಿಸುವ ಸ್ಟಾರ್ಟ್ಅಪ್ಗಳು ಹುಟ್ಟು ಪಡೆಯಬಹುದು. ಸಿನಿಮಾ ತಾರೆಯರು, ಸಾಹಿತಿಗಳು, ರಾಜಕಾರಣಿಗಳು ಮತ್ತಿತರ ಜನಪ್ರಿಯ ವ್ಯಕ್ತಿಗಳ 3ಡಿ ಆಕೃತಿಗಳನ್ನು ಎಐ ಮೂಲಕ ಅತಿ ಸುಲಭವಾಗಿ ಸೃಷ್ಟಿಸಿ ಆ ಆಕೃತಿಗಳನ್ನು 3ಡಿ ಪ್ರಿಂಟಿಂಗ್ ಬಳಸಿ ಮುದ್ರಿಸಬಹುದು ಅಂದರೆ ನೈಜ ಆಕೃತಿಗಳನ್ನು ತಯಾರಿಸಬಹುದು. ಇದು ಒಂದು ದೊಡ್ಡ ಉದ್ಯಮವೇ ಆಗುವ ಅವಕಾಶಗಳಿವೆ.
ನಮ್ಮವರ ಮತ್ತು ನಾವು ಮೆಚ್ಚುವ ವ್ಯಕ್ತಿಗಳ ಚಿತ್ರಗಳನ್ನು ಫ್ರೇಮ್ ಹಾಕಿಸಿ ಮನೆಯಲ್ಲಿ ಹಾಕಿಕೊಳ್ಳುವುದು ಇದೂವರೆಗೂ ನಡೆದುಕೊಂಡು ಬಂದ ರೂಢಿ. ಮುಂದಿನ ದಿನಗಳಲ್ಲಿ ನಮ್ಮವರನ್ನು ಆಕೃತಿಗಳಾಗಿ ಸೃಷ್ಟಿಸಿಕೊಂಡು ನಮ್ಮ ಮನೆಯೊಳಗಿನ ಶೋಕೇಸ್ನಲ್ಲೋ, ಟೇಬಲ್ ಮೇಲೋ ಇರಿಸಿಕೊಳ್ಳುವುದು ಇನ್ನೂ ಹೆಚ್ಚು ಆಪ್ತವೆನಿಸಿಕೊಳ್ಳುತ್ತದೆ. ದೇವರ ಮೂರ್ತಿಗಳಿಗೂ ಇದು ಅನ್ವಯಿಸುತ್ತದೆ. ಈವರೆಗೆ ಕಲಾವಿದರು ರೂಪಿಸಿರುವ ಬಹುತೇಕ ಒಂದೇ ಮಾದರಿಯ ದೇವರ ಚಿತ್ರಗಳನ್ನು, ಮೂರ್ತಿಗಳನ್ನು ನೋಡಿದ್ದೇವೆ. ಅವುಗಳನ್ನೇ ವರ್ಷಾನು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದೇವೆ. ಆದರೆ ಇನ್ನು ಮುಂದೆ ನಮಗೆ ಇಷ್ಟವಾಗುವ ದೇವರ ಇಷ್ಟವಾಗುವ ಭಂಗಿ, ಸನ್ನಿವೇಶದಲ್ಲಿ ಮೂರ್ತಿ ರಚಿಸಿಕೊಳ್ಳಬಹುದು. ಪರ್ವತವನ್ನು ಹೊತ್ತು ಹಾರುತ್ತಿರುವ ಮಾರುತಿ, ರಾಮ, ಲಕ್ಷ್ಮಣರನ್ನು ಹೊತ್ತು ನಿಂತಿರುವ ಹನುಮಂತ, ತನ್ನ ವಿಶ್ವರೂಪ ಹೊತ್ತು ನಿಂತ ವಿಷ್ಣು, ಕಾಳಿಂಗ ಮರ್ದನ ಮಾಡುತ್ತಿರುವ ಕೃಷ್ಣ, ಹಿರಣ್ಯಕಶಿಪುವಿನ ರೂಪದಲ್ಲಿ ಹೆಗಲಿಗೆ ಗದೆಯೇರಿಸಿ ನಿಂತಿರುವ ಅಣ್ಣಾವ್ರು, ಹೆಲಿಕಾಪ್ಟರ್ ಶಾಟ್ನಲ್ಲಿ ಧೋನಿ, ಸ್ಟ್ರೈಟ್ ಡ್ರೈವ್ನಲ್ಲಿ ತೆಂಡೂಲ್ಕರ್ - ಹೀಗೆ ಸಾಧ್ಯತೆಗಳು ಅನಂತ. ತಮ್ಮಿಷ್ಟದ ದೈವವನ್ನು, ಆಟಗಾರರನ್ನು, ಸೆಲೆಬ್ರಿಟಿ, ರಾಜಕಾರಣಿಗಳನ್ನು ತಮಗಿಷ್ಟದ ಭಂಗಿಗಳಲ್ಲಿ ಮೂರ್ತಿ ರೂಪಕ್ಕೆ ಇಳಿಸಿ ಪೂಜಿಸುವುದು, ಆರಾಧಿಸುವುದು, ಮನೆಯಲ್ಲಿ ಅಲಂಕರಿಸುವುದು ಎಷ್ಟು ಚೆನ್ನ ಅಲ್ಲವೇ? ಇಂಥ ಹತ್ತು ಹಲವು ಸಾಧ್ಯತೆಗಳು ಈ 3ಡಿ ಆ್ಯಕ್ಷನ್ ಫಿಗರ್ ಫೀಚರ್ ಅಥವಾ ಇನ್ನೂ ಸುಧಾರಿತ ಎಐಗಳಿಂದ ತೆರೆದುಕೊಳ್ಳುತ್ತವೆ.
ಕೈಗೆಟುಕುವ ಬೆಲೆಗೆ ಲಭ್ಯವಿರುವ 3ಡಿ ಪ್ರಿಂಟರ್ಗಳ ಮೂಲಕ ತಮಗೆ ಬೇಕಾದ ಆಟಿಕೆಯನ್ನು ಪ್ಲಾಸ್ಟಿಕ್, ಲೋಹ, ಮಿಶ್ರಲೋಹಗಳಿಂದ ಮನೆಯಲ್ಲೇ ರೂಪಿಸಿಕೊಳ್ಳುವ ಅವಕಾಶ ಈಗಾಗಲೇ ಇದೆ. ಈವರೆಗೆ ಇಂಥ ಬೊಂಬೆ ಅಥವಾ ಫಿಗರ್ಗಳನ್ನು 3ಡಿ ಅವತಾರದಲ್ಲಿ ರೂಪಿಸುವುದು ವೆಚ್ಚದಾಯಕವಾಗಿತ್ತು. ಆದರೆ ಈಗ ವೆಚ್ಚದ ಗೊಡವೆ ಇಲ್ಲ. ಎಐ ಮಾಡೆಲ್ ಮೂಲಕ ಬೇಕಾದ ಆಕೃತಿಗಳನ್ನು ಬೇಕಾದ ಭಂಗಿಯಲ್ಲಿ 3ಡಿ ಅವತಾರದಲ್ಲಿ ಕ್ಷಣದಲ್ಲೇ ವಿನ್ಯಾಸಗೊಳಿಸಬಹುದು. ಆ ವಿನ್ಯಾಸವನ್ನೇ 3ಡಿ ಪ್ರಿಂಟರ್ ಮೂಲಕ ಮೂರ್ತಿಯಾಗಿ ಪರಿವರ್ತಿಸಬಹುದು. ಜೋಡಿಗಳು, ದಂಪತಿಗಳು ತಮ್ಮ ಜೋಡಿಸಿದ ಕೈಗಳನ್ನು ಎರಕ ಹೊಯ್ದು ಆಕೃತಿಯಾಗಿ ಮನೆಗೊಯ್ಯುವ ಪ್ರವೃತ್ತಿ ಜಪಾನ್ ಸೇರಿದಂತೆ ಈಗಾಗಲೇ ಹಲವು ದೇಶಗಳಲ್ಲಿ ಜನಪ್ರಿಯವಾಗಿದೆ. ಹೊಸ ಮನೆಯ ಗೃಹಪ್ರವೇಶಕ್ಕೆ ಮನೆಯೊಡೆಯ-ಒಡತಿಯರ ಹೆಜ್ಜೆ ಗುರುತುಗಳನ್ನು ನೆಲದ ಮೇಲೆ ಮೂಡಿಸುವ ಪ್ರವೃತ್ತಿ ಭಾರತದಲ್ಲಿ ಗಮನ ಸೆಳೆಯುತ್ತಿದೆ. ಸ್ವ-ವ್ಯಾಮೋಹ ಉತ್ತುಂಗದಲ್ಲಿರುವ ಈ ಕಾಲದಲ್ಲಿ ತಮ್ಮದೇ 3ಡಿ ಮೂರ್ತಿಗಳನ್ನು ಮನೆಯಲ್ಲಿ ಇರಿಸಿಕೊಳ್ಳುವ ಹೊಸ ಪ್ರವೃತ್ತಿಗೂ ಈ ತಂತ್ರಜ್ಞಾನ ನಾಂದಿ ಹಾಡುವ ಸಾಧ್ಯತೆ ಇದೆ.
ಕಲಾವಿದರ ಆತಂಕ: ಎಐ ಮಾಡೆಲ್ಗಳು ಯಾರನ್ನೇ ಹೋಲುವ ಅಥವಾ ಅಸ್ತಿತ್ವದಲ್ಲೇ ಇಲ್ಲದ ಪೂರ್ತಿ ಕಾಲ್ಪನಿಕವಾದ ರಿಯಲಿಸ್ಟಿಕ್ ಚಿತ್ರಗಳನ್ನು, ಕಲಾಕೃತಿಗಳನ್ನು ಅಷ್ಟೇ ಏಕೆ 3ಡಿ ಆಕೃತಿಗಳನ್ನು ಕ್ಷಣ ಮಾತ್ರದಲ್ಲಿ ರಚಿಸಬಲ್ಲವು. ಇದು ಫೋಟೋಗ್ರಾಫರ್ಗಳು, ಚಿತ್ರ ಕಲಾವಿದರು ಮತ್ತು ಗ್ರಾಫಿಕ್ ಡಿಸೈನ್ ಮಾಡುವವರ ಜೀವನೋಪಾಯಕ್ಕೆ ಧಕ್ಕೆ ತರುವ ಎಲ್ಲಾ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಜಾಗತಿಕವಾಗಿ ಕಲಾವಿದರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. #StarterPackNoAI ಎಂಬ ಪ್ರತಿರೋಧದ ಹ್ಯಾಷ್ಟ್ಯಾಗ್ ಭಾರಿ ಜನಪ್ರಿಯವಾಗಿದ್ದು, ಕಲಾವಿದರು ತಮ್ಮ ಕೈಯಿಂದ ರಚಿಸಿದ ಆ್ಯಕ್ಷನ್ ಫಿಗರ್ಗಳನ್ನು ಹಂಚಿಕೊಂಡು ಎಐ ಜನರೇಟೆಡ್ ಕಲಾಕೃತಿಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
AI-ಜನರೇಟೆಡ್ ಆ್ಯಕ್ಷನ್ ಫಿಗರ್ ಟ್ರೆಂಡ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮತ್ತೊಂದು ಸಾಧ್ಯತೆಯನ್ನು ತೆರೆದಿಟ್ಟಿದೆ. ಎಐ ವ್ಯವಸ್ಥೆ ದಿನೇ ದಿನೇ ಬುದ್ಧಿಶಾಲಿಯಾಗುತ್ತಾ, ಕ್ರಿಶಾಶೀಲವಾಗುತ್ತಾ ಹೋಗುತ್ತಿರುವುದನ್ನು ಸಾಭೀತುಪಡಿಸುತ್ತಿದೆ. ಇದು ಜನರಿಗೆ ತಮ್ಮ ಕಲ್ಪನೆಗಳನ್ನು ಸೃಜನಾತ್ಕಕ ದಾರಿಗಳಲ್ಲಿ ವ್ಯಕ್ತಪಡಿಸಲು ಹೊಸ ವೇದಿಕೆಯನ್ನು ಒದಗಿಸುತ್ತಿದೆ. ಆದರೆ, ಇದರ ಜೊತೆಗೆ ಗೌಪ್ಯತೆ, ಪರಿಸರದ ನಾಶ ಮತ್ತು ಕಲಾವಿದರ ಜೀವನೋಪಾಯದ ಅಂಶಗಳನ್ನು ನಾವು ಮರೆಯಬಾರದು. ನಾವು ಎಐನ ಇಂಥ ಟ್ರೆಂಡ್ಗಳನ್ನು ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸುತ್ತಲೇ ಜವಾಬ್ದಾರಿಯುತವಾಗಿ ಎಐ ತಂತ್ರಜ್ಞಾನವನ್ನು ಬಳಸಬೇಕು. ಸೃಜನಶೀಲತೆಯ ಈ ಡಿಜಿಟಲ್ ಯುಗದಲ್ಲಿ, ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಕಲೆಗಳ ಸಂಯೋಜನೆಯಾಗಬೇಕು.
ಸುಂದರ ಶೈಲಿಯಲ್ಲಿ ವಿಧಾನಸೌಧ
‘ಶೈಲಿ ವರ್ಗಾವಣೆ’ (Style Transfer) ಎಂಬ ವೈಶಿಷ್ಟ್ಯವು ಒಂದು ಚಿತ್ರದ ಕಲಾತ್ಮಕ ಶೈಲಿಯನ್ನು ಮತ್ತೊಂದು ಚಿತ್ರಕ್ಕೆ ಅನ್ವಯಿಸುವ ಮೂಲಕ ಹೊಸ ಮತ್ತು ಸೃಜನಾತ್ಮಕ ಫಲಿತವನ್ನು ಉತ್ಪಾದಿಸುವ ತಂತ್ರಜ್ಞಾನವಾಗಿದೆ. ಇದು ಡೀಪ್ ನ್ಯೂರಲ್ ನೆಟ್ವರ್ಕ್ಗಳ ಮೂಲಕ ನಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ ಮೊದಲು ಒಂದು ಚಿತ್ರದ ವಿಷಯ (content) ಮತ್ತು ಅದರ ಶೈಲಿ (style) ಯನ್ನು ಎಐ ಪ್ರತ್ಯೇಕಿಸುತ್ತದೆ. ಅದೇ ರೀತಿ ಮತ್ತೊಂದು ಚಿತ್ರದ ವಿಷಯ ಮತ್ತು ಶೈಲಿಯನ್ನು ಪ್ರತ್ಯೇಕಿಸಿ ಬಳಿಕ ಬದಲಾವಣೆ ಆಗಬೇಕಿರುವ ಚಿತ್ರದ ವಿಷಯಕ್ಕೆ ಮತ್ತೊಂದು ಚಿತ್ರದ ಶೈಲಿಯನ್ನು ಸೂಕ್ಷ್ಮವಾಗಿ ಅನ್ವಯಿಸುತ್ತದೆ. ಅಂತಿಮವಾಗಿ ಒಂದು ಹೊಸ ಶೈಲಿಯ ಚಿತ್ರ ರೂಪು ಪಡೆಯುತ್ತದೆ. ಅಂದರೆ ಇದು ಒಂದು ಚಿತ್ರದ ಕಂಟೆಂಟ್ ಮತ್ತು ಮತ್ತೊಂದು ಚಿತ್ರದ ಶೈಲಿಯ ಸಂಯೋಜನೆಯಾಗಿರುತ್ತದೆ. ಉದಾಹರಣೆಗೆ, ವಿಧಾನ ಸೌಧದ ಚಿತ್ರವನ್ನು ಐತಿಹಾಸಿಕ ಜೆರುಸಲೆಮ್ನಲ್ಲಿರುವ ಪವಿತ್ರ ಡೋಮ್ ಆಫ್ ದಿ ರಾಕ್ ಕಟ್ಟಡದ ವಾಸ್ತುಶೈಲಿಗೆ ಒಗ್ಗಿಸುವಂತೆ ಚಾಟ್ಜಿಪಿಟಿಯನ್ನು ಕೇಳಿದಾಗ ಬಂದ ಫಲಿತಾಂಶ ಅಚ್ಚರಿ ಮೂಡಿಸಿತು. ವಿಧಾನಸೌಧದ ಮೂಲ ವಾಸ್ತುಶಿಲ್ಪವನ್ನು ಕಾಯ್ದುಕೊಂಡು ಜೆರುಸಲೆಮ್ ಕಟ್ಟಡದ ವಿಶಿಷ್ಟ ಬಂಗಾರದ ಗೋಳಾಕಾರವನ್ನು, ಸಂದರ ನೀಲಿ ಚಿತ್ತಾರವನ್ನು ಮತ್ತು ಅದರ ಸೊಬಗನ್ನು ವಿಧಾನಸೌಧಕ್ಕೆ ಸೇರಿಸಿತು. ಅಂದರೆ, ಇಲ್ಲಿ ವಿಧಾನಸೌಧದ ಚಿತ್ರದ ಕಂಟೆಂಟ್ ಹಾಗೂ ಡೋಮ್ ಆಫ್ ದಿ ರಾಕ್ ಕಟ್ಟಡದ ಶೈಲಿ ಎರಡೂ ಸಂಯೋಜನೆಗೊಂಡಿವೆ. ಈ ತಂತ್ರವು ಕಲೆ, ಛಾಯಾಗ್ರಹಣ, ಆಟಿಕೆ ವಿನ್ಯಾಸ ಮತ್ತು ಇತರ ಕ್ಷೇತ್ರಗಳಲ್ಲಿ ಅನನ್ಯ ಸೃಜನಶೀಲತೆಗೆ ಅವಕಾಶ ಮಾಡಿಕೊಟ್ಟಿದೆ.
ನಿಮ್ಮ ಸ್ವಂತ ಆ್ಯಕ್ಷನ್ ಫಿಗರ್ ರಚಿಸುವುದು ಸುಲಭ
ಚಾಟ್ಜಿಪಿಟಿಯನ್ನು ತೆರೆಯಿರಿ: ಚಾಟ್ಜಿಪಿಟಿ ವೆಬ್ಸೈಟ್ ಅಥವಾ ಆ್ಯಪ್ಗೆ ಭೇಟಿ ನೀಡಿ (chatgpt.com). ಇದು ಉಚಿತವಾಗಿದ್ದು, ಎಲ್ಲರಿಗೂ ಲಭ್ಯವಿದೆ.
ಫೋಟೋ ಅಪ್ಲೋಡ್ ಮಾಡಿ: ನಿಮ್ಮ ಪೂರ್ಣ ದೇಹ ಕಾಣುವಂತಹ ಫೋಟೋವನ್ನು ಅಪ್ಲೋಡ್ ಮಾಡಿ. ಇದಕ್ಕಾಗಿ ಅಲ್ಲಿ ಕಾಣುವ ‘+’ ಚಿಹ್ನೆಯನ್ನು ಕ್ಲಿಕ್ ಮಾಡಿ.
ಪ್ರಾಂಪ್ಟ್ ಟೈಪ್ ಮಾಡಿ: ಈ ಪ್ರಾಂಪ್ಟ್ ಬಳಸಬಹುದು “Transform the uploaded image into a collectable action figure inspired by a Yakshagana dancer, reflecting Karnataka culture with a vibrant red, gold, and yellow costume, detailed jewellery, and a traditional conical headdress, while retaining the dancer's facial features and expressive pose. Include a child-safe plastic sword and a miniature taala as accessories in a clear blister package with deep red, gold colors, featuring the text "Karunada Yakshagana" (bold) and "The Spirit of Karnataka" (smaller font) on the packaging.”
ಚಿತ್ರವನ್ನು ಡೌನ್ಲೋಡ್ ಮಾಡಿ: ಕೆಲವೇ ಸೆಕೆಂಡ್ಗಳಲ್ಲಿ, ನಿಮ್ಮ ಫೋಟೊವನ್ನು ಹೋಲುವ ಆದರೆ ಯಕ್ಷಗಾನದ ಆ್ಯಕ್ಷನ್ ಫಿಗರ್ ಸಿದ್ಧವಾಗುತ್ತದೆ!
ಮೇಲಿನ ಪ್ರಾಂಪ್ಟ್ ಒಂದು ಉಹಾರಣೆಯಷ್ಟೇ. ನೀವು ಯಾವುದೇ ವೃತ್ತಿ, ವ್ಯಕ್ತಿ ಅಥವಾ ಶೈಲಿಯನ್ನು ಆಧರಿಸಿ ಆ್ಯಕ್ಷನ್ ಫಿಗರ್ ರಚಿಸಬಹುದು.




