ಎಜುಕೇಷನ್ನಲ್ಲಿ ಬದಲಾವಣೆ ತರಲಿದೆ ಎಐ
AI ಅನಂತ ಅವತಾರ – ಭಾಗ 11
ಡಾ.ರಮೇಶ್ ನಿಂಬೆಮರದಳ್ಳಿ
ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರಲಿರುವ ಎಐ
ಶಿಕ್ಷಕರ ನೆರವಿಲ್ಲದೆಯೇ ಕಲಿಕೆಗೆ ದಾರಿ
ಉಚಿತವಾಗಿ ಯಾವುದೇ ಕೋರ್ಸ್ ಕಲಿಯುವ ಮುಕ್ತ ಅವಕಾಶ
ಕ್ಲಾಸ್ರೂಮ್ ಕಲಿಕೆಗೂ ಇನ್ನು ಎಐ ಬೆಂಬಲ
ಮಕ್ಕಳಲ್ಲಿ ಮೌಲ್ಯಗಳು ಮರೆಯಾಗುವ ಆತಂಕ
ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಓದುತ್ತಿರುವ 14 ವರ್ಷದ ತನ್ಮಯಿ ಪ್ರತಿ ಬೆಳಗ್ಗೆ ತನ್ನ ಟ್ಯಾಬ್ಲೆಟ್ ತೆರೆದಾಗ ಅವಳಿಗೆ ಪ್ರೀತಿಯ ಸ್ವಾಗತ ಕೋರುವುದು ಅವಳ ಶಾಲೆಯ ಗುರುವಲ್ಲ ಬದಲಿಗೆ "AI ಗುರು" (ಕೃತಕ ಬುದ್ಧಿಮತ್ತೆಯ ಶಿಕ್ಷಕ). ಅವಳಿಗೆ ಗಣಿತದ ಪಾಠ ಹೇಳಿಕೊಡುವ ಆ ಎಐ ಮೇಷ್ಟ್ರು, ತನ್ಮಯಿ ಅಷ್ಟು ಸುಲಲಿತವಾಗಿ ಮತ್ತು ವೇಗವಾಗಿ ಉತ್ತರ ಕೊಡುವುದನ್ನು ನೋಡಿ ಹುಡುಗಿ ಚುರುಕಿರುವುದನ್ನು, ಕಲಿಕೆಯಲ್ಲಿ ಮುಂದಿರುವುದನ್ನು ಅರಿಯುತ್ತಾರೆ. ಇದನ್ನು ಆಧರಿಸಿ ಅವಳ ಕಲಿಕೆಗೆ ಹೊಂದಿಕೊಳ್ಳುವಂತೆ ಪ್ರಶ್ನೆಗಳನ್ನು ಸ್ವಯಂಚಾಲಿತವಾಗಿ ಕಠಿಣಗೊಳಿಸುತ್ತಾರೆ. ಇದನ್ನು ಕಂಡು “ಮೇಷ್ಟ್ರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ,” ಎಂದು ತನ್ಮಯಿ ನಸುನಗುತ್ತಾಳೆ. ಕೇಂದ್ರ ಸರ್ಕಾರ PM SHRI ಯೋಜನೆಯಡಿಯಲ್ಲಿ ಕೆಲ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ AI ಆಧಾರಿತ ಶಿಕ್ಷಣವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಪರಿಣಾಮ, ಮಕ್ಕಳಲ್ಲಿ ಅಗಾಧ ಬದಲಾವಣೆ ಕಾಣುತ್ತಿದೆ. ಈ ಯೋಜನೆಯ ಅನುಕೂಲ ಪಡೆಯುತ್ತಿರುವ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಲ್ಲಿ ತನ್ಮಯಿ ಕೂಡ ಒಬ್ಬಳು. ಈ ಯೋಜನೆ ಹಳ್ಳಿ ಮಕ್ಕಳಿಗೆ ಕಲಿಕೆಯಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವುದು ಮಾತ್ರವಲ್ಲದೆ, ಕಲಿಕೆಯ ವೇಗವನ್ನೂ ಹೆಚ್ಚಿಸುತ್ತಿದೆ.
ಇನ್ನು, ಅಮೆರಿಕದ ನ್ಯೂಜೆರ್ಸಿಯ ನ್ಯೂವರ್ಕ್ ಎಂಬ ನಗರದಲ್ಲಿ ಶಿಕ್ಷಕ ಆಂಥನಿ ಜಾನ್ಸನ್ ತನ್ನ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ AI ಟೂಲ್ಗಳನ್ನು ಬಳಸಿ ಗಣಿತದ ಪ್ರಶ್ನೆಗಳನ್ನು ರೂಪಿಸುತ್ತಿದ್ದಾರೆ. “ಒಬ್ಬ ಬಾಲಕನಿಗೆ ಕ್ರಿಕೆಟ್ ಇಷ್ಟ, ಅವನಿಗೆ IPL ಸ್ಕೋರ್ಗಳನ್ನೇ ಆಧಾರವಾಗಿಟ್ಟುಕೊಂಡು ಪ್ರಶ್ನೆಗಳನ್ನು ರೂಪಿಸಿದೆ,” ಎಂದು ಅವರು ಶಾಲೆಗೆ ಭೇಟಿ ಕೊಟ್ಟ ಬಿಲ್ ಗೇಟ್ಸ್ ಅವರಿಗೆ ವಿವರಿಸುತ್ತಾರೆ. ತಮಗಾದ ಈ ಅನುಭವವನ್ನು ಬಿಲ್ ಗೇಟ್ಸ್ ತಮ್ಮ ಬ್ಲಾಗಿನಲ್ಲಿ ಬರೆಯುತ್ತಾ, “ಈ ಎಐ ಟೂಲ್ಗಳನ್ನು ಬಳಸುತ್ತಾ ಶಿಕ್ಷಕರು ಬೋಧನೆಯಲ್ಲಿ ಎಷ್ಟು ಕ್ರಿಯಾಶೀಲವಾಗಿದ್ದಾರೆ ಎನ್ನುವುದನ್ನು ಕಂಡು ನಾನು ದಂಗಾಗಿಹೋದೆ,’’ ಎನ್ನುತ್ತಾರೆ.
ಮೇಲಿನ ಎರಡೂ ಉದಾಹರಣೆಗಳು ಜಾಗತಿಕ ಶಿಕ್ಷಣವನ್ನು ಎಐ ಮರುರೂಪಿಸುತ್ತಿರುವುದನ್ನು ಸಾದರಪಡಿಸುತ್ತಿವೆ. ಎಐ ಬೆಂಬಲದ ಮೂಲಕ ವಿದ್ಯಾರ್ಥಿಗಳು ಆಟವಾಡಿಕೊಂಡೇ ಕಲಿಯುತ್ತಾರೆ. ಶಿಕ್ಷಕರು ಪ್ರತಿ ವಿದ್ಯಾರ್ಥಿಯ ಅಗತ್ಯಕ್ಕೆ ತಕ್ಕಂತೆ ಬೋಧನೆಯನ್ನು ಕಸ್ಟಮೈಸ್ ಮಾಡಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ನಗರ, ಹಳ್ಳಿ ಎಂಬ ಬೇಧವಿಲ್ಲದೆ ಶಿಕ್ಷಣದಲ್ಲಿ ಎಐ ಪರಿವರ್ತನೆ ತರಲಿದೆ. ಕಲಿಕೆ ಮತ್ತು ಬೋಧನೆ ಎರಡೂ ಇನ್ನು ಮುಂದೆ ಮೊದಲಿನಂತಿರುವುದಿಲ್ಲ.
ಪ್ರತಿಯೊಬ್ಬರಿಗೂ ಪರ್ಸನಲ್ ಗುರು
AI ಶಿಕ್ಷಣ ಕ್ಷೇತ್ರವನ್ನು ಆಮೂಲಾಗ್ರವಾಗಿ ಬದಲಾಯಿಸಲಿದೆ. ಈವರೆಗೆ ಒಂದು ಸರಾಸರಿ ಶಾಲೆಯಲ್ಲಿ ಶಿಕ್ಷಕರು 40ಕ್ಕೂ ಹೆಚ್ಚು ಮಕ್ಕಳಿಗೆ ಒಂದೇ ರೀತಿಯಲ್ಲಿ ಪಾಠ ಹೇಳಬೇಕು. ಆದರೆ DIKSHA ಮತ್ತು E-PATHSHALA ಎಂಬ ಸರ್ಕಾರದ ಪ್ಲಾಟ್ಫಾರ್ಮ್ಗಳ ಸಹಾಯದಿಂದ ಈಗ ಕಲಿಕೆಯನ್ನು ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಸ್ಮಾರ್ಟ್ ಪಾಠಗಳನ್ನು ನೀಡಲು ಸಾಧ್ಯವಾಗಿದೆ. “ಭವಿಷ್ಯದಲ್ಲಿ ಪ್ರತಿಯೊಂದು ಮಗುವೂ ಎಐ ಮೂಲಕ ತನಗೇ ಪ್ರತ್ಯೇಕವಾದ ಪರ್ಸನಲ್ ಗುರುವನ್ನು ಹೊಂದಲು ಸಾಧ್ಯವಿದೆ,’’ ಎಂಬ NITI ಆಯೋಗದ ಅಭಿಜಯ್ ಅರೋರ ಅವರ ಮಾತು ಇದನ್ನೇ ಪ್ರತಿಬಿಂಬಿಸುತ್ತಿದೆ.
ಬೋಧನೆಗೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಅಳೆಯಲೂ ಎಐ ಬಳಕೆಯಾಗುತ್ತಿದೆ. ನೂರಾರು ವಿದ್ಯಾರ್ಥಿಗಳಿಗೆ ಟೆಸ್ಟ್ ಅಥವಾ ಪರೀಕ್ಷೆ ಕೊಟ್ಟು ಅವರ ಉತ್ತರಗಳನ್ನು ಮೌಲ್ಯಮಾಪನ ಮಾಡಲು ದಿನಗಳೇ ಹಿಡಿಯುತ್ತವೆ. ಆದರೆ ಇನ್ನು ಮುಂದೆ ಹಾಗಿಲ್ಲ. ಪರೀಕ್ಷೆ ಎಲ್ಲಾ ಮಕ್ಕಳಿಗೂ ಒಂದೇ ಹಾಗಿರಬೇಕಿಲ್ಲ. ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಶ್ನೆ ಪತ್ರಿಕೆಯೂ ಭಿನ್ನವಾಗುತ್ತದೆ. ಇನ್ನು ಎಐ ಬಳಸಿ ನೀಡುವ ಪರೀಕ್ಷೆಯ ಮೌಲ್ಯಮಾಪನವೂ ಕ್ಷಣದಲ್ಲಿ ಸಿದ್ಧವಾಗುತ್ತದೆ. ಜೊತೆಗೆ ಪ್ರತಿ ಮಗುವಿನ ಕಲಿಕಾ ಪ್ರಗತಿಯನ್ನು ಟ್ರ್ಯಾಕ್ ಮಾಡುವುದೂ ಸುಲಭ.
ಬೆಂಗಳೂರು ಮೂಲದ 22 ವರ್ಷದ ರಾಜೇಶ್ ಎಂಬ ಯುವಕ AI ಆಧಾರಿತ ತರಬೇತಿಯ ಮೂಲಕ ಕಾರುಗಳ ರಿಪೇರಿ ಕಲಿತಿದ್ದಾರೆ. “ಗ್ಯಾರೇಜ್ಗೆ ಹೋಗದೆ ಕೆಲಸಕ್ಕೆ ಸಿದ್ಧನಾಗಿದ್ದೇನೆ,” ಎನ್ನುವುದು ಅವರ ವಿಶ್ವಾಸದ ಮಾತು. "ಸ್ಕಿಲ್ ಇಂಡಿಯಾ" ಯೋಜನೆಯ ಅಂಗವಾಗಿ, AI ತಂತ್ರಜ್ಞಾನದ ಮುಖಾಂತರ ಹಳ್ಳಿಗಾಡಿನ ಯುವಕರಿಗೂ ಸುಲಭವಾಗಿ ಉದ್ಯೋಗ ಕೌಶಲ್ಯ ಕಲಿಸಬಹುದು ಎಂಬುದರ ಆಶಾದಾಯಕ ಉದಾಹರಣೆ ಇದು.
ಶಿಕ್ಷಕರು ಬೋಧಕರಲ್ಲ, ಮಾರ್ಗದರ್ಶಕರು
AI ತಂತ್ರಜ್ಞಾನ ಶಾಲೆಗಳಲ್ಲಿ ಶಿಕ್ಷಕರನ್ನು ಬದಲಾಯಿಸುತ್ತದೆ ಎಂಬ ಆತಂಕವಿದೆ. ಆದರೆ ಇದು ಶಿಕ್ಷಕರನ್ನು ಬದಲಾಯಿಸುವುದಿಲ್ಲ ಬದಲಿಗೆ ಅವರು ನಿರ್ವಹಿಸುವ ಪಾತ್ರವನ್ನು ಬದಲಾಯಿಸುತ್ತದೆ ಎನ್ನುತ್ತಾರೆ ಎಐ ತಜ್ಞರು. ಇದನ್ನೇ UNESCO ಇನ್ನೊಂದು ರೀತಿಯಲ್ಲಿ “AI ಶಿಕ್ಷಕರನ್ನು ಪಾಠ ಹೇಳುವ ಬೋಧಕರಿಂದ ಮಾರ್ಗದರ್ಶಕರಾಗಿ ಪರಿವರ್ತಿಸುತ್ತದೆ” ಎನ್ನುತ್ತದೆ. ಆದರೆ ಭಾರತದ ಬಹುತೇಕ ಶಿಕ್ಷಕರು AI ಕುರಿತು ತಿಳಿವಳಿಕೆ ಪಡೆದಿಲ್ಲ. ಹೀಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಶಿಕ್ಷಕರಿಗೆ AI ಶಿಕ್ಷಣ ನೀಡಲು ಯೋಜನೆ ರೂಪಿಸಲಾಗಿದೆ.
ಭಾರತದಲ್ಲಿ ಬೈಜೂಸ್, ವೇದಾಂತು, ಟಾಪರ್, ಅನ್ಅಕಾಡೆಮಿ, ಅಪ್ಗ್ರ್ಯಾಡ್ ಮುಂತಾದ ಖಾಸಗಿ ಎಜುಕೇಷನ್ ಟೆಕ್ನಾಲಜಿ ಕಂಪನಿಗಳು ಈಗ AI ಆಧಾರಿತ ಪಾಠಗಳನ್ನು ಬೋಧಿಸುತ್ತಿವೆ. ಕೆಲವು ಶಾಲಾ ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸಿದ್ದರೆ ಮತ್ತೆ ಕೆಲವು ಕೌಶಲ್ಯ ನಿರ್ಮಾಣದಲ್ಲಿ ತೊಡಗಿವೆ. ಎಐ ಬಳಸಿ ನಾವು ಯಾವುದೇ ಕಲಿಕೆಯನ್ನು ಸ್ವಯಂ ಕಲಿಯಬಹುದು. ಹೋಟೆಲ್ನಲ್ಲಿ ಒಂದು ಬಾರಿ ಊಟಕ್ಕೆ ಖರ್ಚು ಮಾಡುವ ಹಣದಲ್ಲಿ ಹೊಸ ಕೌಶಲ್ಯವನ್ನು ನಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ಇನ್ನು ಮುಂದೆ ಯಾವ ಜ್ಞಾನವೂ ಕಲಿಕೆಯಿಂದ ದೂರವಲ್ಲ.
ಉನ್ನತ ಶಿಕ್ಷಣದಲ್ಲಿ ಎಐ ಬಳಕೆ
ಉನ್ನತ ಶಿಕ್ಷಣದಲ್ಲೂ ಎಐ ಬಳಕೆ ಹೆಚ್ಚುತ್ತಿದೆ. IIT ಮದ್ರಾಸ್ನಲ್ಲಿ ವಿದ್ಯಾರ್ಥಿಗಳನ್ನು ಅವರ ಆಸಕ್ತಿಗೆ ತಕ್ಕಂತೆ ಸಂಶೋಧನಾ ವಿಷಯಗಳನ್ನು ಹೊಂದಿಸುವ AI ಟೂಲ್ಗಳನ್ನು ಬಳಕೆ ಮಾಡಲಾಗುತ್ತಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಲು AI ಬಳಸಲಾಗುತ್ತಿದೆ. ಜೊತೆಗೆ, ಅಶೋಕ, ಅಮಿಟಿ, SRM ಮುಂತಾದ ಖಾಸಗಿ ವಿಶ್ವವಿದ್ಯಾಲಯಗಳು ಕಲಿಕೆ, ಬೋಧನೆ ಮತ್ತು ಆಡಳಿತದಲ್ಲಿ ವ್ಯಾಪಕವಾಗಿ ಎಐ ತಂತ್ರಜ್ಞಾನ ಬಳಸುತ್ತಿವೆ. ಕಲಿಕೆಯಲ್ಲಿ ಹಿಂದುಳಿದು ಕಾಲೇಜು ತೊರೆಯುವುವರನ್ನು ಪತ್ತೆ ಮಾಡಲೂ ತಂತ್ರಜ್ಞಾನ ಬಳಕೆಯಾಗುತ್ತಿದೆ. ವರ್ಚುಯಲ್ ಲ್ಯಾಬ್ಗಳು, ಆಡಳಿತವನ್ನು ಸುಗಮಗೊಳಿಸುವ ಚಾಟ್ಬಾಟ್ಗಳು, ಕೃತಿಚೌರ್ಯ ಪತ್ತೆ ಮುಂತಾದ ಕಡೆ ಎಐ ಬಳಕೆ ಮಾಡುತ್ತಿವೆ.
ಎಐ ಮಹತ್ವ ಅರಿತಿರುವ ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಉನ್ನತ ಶಿಕ್ಷಣದಲ್ಲಿ ಎಐ ಕಲಿಕೆಯನ್ನು ಉತ್ತೇಜಿಸುತ್ತಿದೆ. ಪದವಿ ವಿದ್ಯಾರ್ಥಿಗಳಿಗೆ ಎಐ ಮತ್ತು ಡೇಟಾ ಸೈನ್ಸ್ ಕೋರ್ಸ್ಗಳನ್ನು ಕಲಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಅಲ್ಲದೆ ಎಲ್ಲಾ ವಿಶ್ವವಿದ್ಯಾಲಯಗಳು ‘ನ್ಯಾಷನಲ್ ಹೈಯರ್ ಎಜುಕೇಶನ್ ಕ್ವಾಲಿಫಿಕೇಶನ್ ಫ್ರೇಮ್ವರ್ಕ್’(NHEQF) ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದೆ. SWAYAM ಎಂಬ ಎಐ ಆಧಾರಿತ ಬೋಧನಾ ಕ್ರಮ ಅಳವಡಿಸಿಕೊಂಡಿರುವ ವೇದಿಕೆಯ ಮೂಲಕ ‘ಮ್ಯಾಸೀವ್ ಓಪನ್ ಆನ್ಲೈನ್ ಕೋರ್ಸ್’ (MOOC) ಅಡಿಯಲ್ಲಿ ಬೋಧಿಸುವ ಕೋರ್ಸ್ಗಳಿಗೆ ಯುಜಿಸಿಯ ಬೆಂಬಲವಿದೆ. ಇಲ್ಲಿ ಭಾರತದ ಟಾಪ್ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಎಐ, ಡೇಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಸೇರಿದಂತೆ ನೂರಾರು ಕೋರ್ಸ್ಗಳನ್ನು ಉಚಿತವಾಗಿ ಕಲಿಯಬಹುದು. ಸಣ್ಣ ಮೊತ್ತ ಪಾವತಿಸಿ ಸರ್ಟಿಫಿಕೇಟ್ ಕೂಡ ಪಡೆಯಬಹುದು. ಈ ನಿಟ್ಟಿನಲ್ಲಿ ಗೂಗಲ್ ಮತ್ತು ಮೈಕ್ರೊಸಾಫ್ಟ್ಗಳೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ.
ಮೌಲ್ಯ ಶಿಕ್ಷಣದ ಗತಿಯೇನು?
AI ತಂತ್ರಜ್ಞಾನದ ಮೂಲಕ ಕಲಿಕೆಗೆ ಒತ್ತು ಕೊಡುವುದರಲ್ಲಿ ಕೆಲ ಅಪಾಯಗಳೂ ಇವೆ. ಎಐ ಮೂಲಕ ಮಕ್ಕಳು ಶಿಕ್ಷಕರ ಹೆಚ್ಚಿನ ನೆರವಿಲ್ಲದೆ ಕಲಿಯುವುದರಿಂದ ಅವರು ಕಲಿಕೆಯ ಮಾನವೀಯ ಸ್ಪರ್ಶದಿಂದ ವಂಚಿತರಾಗುತ್ತಾರೆ. ಅವರಿಗೆ ಸಾಮಾಜಿಕ ಮೌಲ್ಯಗಳನ್ನು ಬೋಧಿಸುವ ಅವಕಾಶವೂ ತಪ್ಪಿ ಹೋಗಬಹುದು. ಸಹಪಾಠಿಗಳೊಂದಿಗೆ ಆಡಿ ನಲಿಯುವ ಅವರ ಜೀವನದ ಅಮೂಲ್ಯ ಕ್ಷಣಗಳು ಇಲ್ಲವಾಗಬಹುದು. ಶಿಕ್ಷಕರು ಬೋಧಿಸುವ ಶಿಸ್ತು ಇಲ್ಲವಾಗಿ ಮಕ್ಕಳು ಬುದ್ಧಿವಂತರಾಗಿ ಆದರೆ ಅಶಿಸ್ತು ಮೈಗೂಡಿಸಿಕೊಂಡು ಬೆಳೆಯಬಹುದು. ಚಿಕ್ಕ ವಯಸ್ಸಿಗೇ ದೊಡ್ಡ ದೊಡ್ಡ ವಿಚಾರಗಳು ತಲೆಗೆ ತುಂಬಿಕೊಂಡು ದಾರಿ ತಪ್ಪುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಮುಗ್ಧತೆಯೇ ಮಕ್ಕಳ ಆಸ್ತಿ. ಆದರೆ, ಎಐ ಮೂಲಕ ಬಹುಬೇಗನೇ ಹೊಸತನ್ನು ಕಲಿಯುವ, ಜಗತ್ತನ್ನು ಅರಿಯುವ ಮಕ್ಕಳು ಮಕ್ಕಳಾಗುಳಿಯದೆ ಬೇಗನೇ ದೊಡ್ಡವರಾಗಿಬಿಡಬಹುದು. ಇದು ‘ಮಕ್ಕಳ’ ಮರುವ್ಯಾಖ್ಯಾನಕ್ಕೂ ದಾರಿ ಮಾಡಿಕೊಡುತ್ತದೆ. ಜಗತ್ತಿನ ಜ್ಞಾನವನ್ನು ಕಲಿಸುವುದರ ಮೇಲೆ ಕೇಂದ್ರೀಕೃತಗೊಂಡಿರುವ ನಮ್ಮ ಶಿಕ್ಷಣಕ್ಕೆ ಆ ಮೇಲೆ ಸಂಸ್ಕಾರ ಕಲಿಸುವುದೇ ಮುಖ್ಯವಾಗುತ್ತದೆ. ಸಾಮಾಜಿಕವಲ್ಲದ ಶಿಕ್ಷಣ, ಮೌಲ್ಯ ರಹಿತ ಜ್ಞಾನವನ್ನೇ ಹೊತ್ತ ತಲೆಮಾರು ಕಟ್ಟುವ ಸಮಾಜ ಹೇಗಿರಬಹುದು ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.
AI ಮೂಲಕ ತನ್ಮಯಿ, ರಾಜೇಶ್ ಮತ್ತು ಇತರ ಲಕ್ಷಾಂತರ ಜನರಿಗೆ ಕಲಿಕೆಯಲ್ಲಿ ಹೊಸ ಹಾದಿ ತೆರೆದಿದೆ ಎನ್ನುವುದು ನಿಜ. ಆದರೆ ಈ ತಂತ್ರಜ್ಞಾನ ಮಾನವೀಯತೆಯಿಂದ ಕೂಡಿರಬೇಕು. UNESCO ಹೇಳುವಂತೆ, “ಡಿಜಿಟಲ್ ಜಗತ್ತಿನಲ್ಲಿ ಹೇಗೆ ಉತ್ತಮ ಮನುಷ್ಯರಾಗಬೇಕು ಎಂಬುದನ್ನು ಕಲಿಯುವುದು ನಿಜವಾದ ಶಿಕ್ಷಣವಾಗಬೇಕಿದೆ.” ಮಕ್ಕಳ ಭವಿಷ್ಯ, ಶಿಕ್ಷಣದ ಭವಿಷ್ಯ ನಮ್ಮ ಕೈಯ್ಯಲ್ಲೇ ಇದೆ. ಶಿಕ್ಷಣದಲ್ಲಿ ಎಐ ತಂತ್ರಜ್ಞಾನವನ್ನು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಇವೆರಡರ ಭವಿಷ್ಯ ಅಡಗಿದೆ. ಎಐ ನಮ್ಮ ಮಕ್ಕಳನ್ನು ಪರಿವರ್ತಿಸಲಿದೆಯೋ, ದಾರಿತಪ್ಪಿಸಲಿದೆಯೋ ಎನ್ನುವುದನ್ನು ನೋಡಲು ಇನ್ನಷ್ಟು ವರ್ಷಗಳು ಕಾಯಬೇಕು.
ಭಾರತದ ಪ್ರಮುಖ ಎಡ್ಟೆಕ್ ಕಂಪನಿಗಳು
ಬೈಜುಸ್: 2011ರಲ್ಲಿ ಆರಂಭವಾದ ಬೆಂಗಳೂರು ಆಧಾರಿತ ಬೈಜುಸ್ ಭಾರತದಲ್ಲಿನ ಅತ್ಯಂತ ದೊಡ್ಡ ಎಡ್ಟೆಕ್ ಸಂಸ್ಥೆಗಳಲ್ಲೊಂದು. K–12 ತರಗತಿಗಳ ವಿದ್ಯಾರ್ಥಿಗಳಿಗೂ JEE, NEET, UPSC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತದೆ. ಇದು ಕಲಿಕೆಯನ್ನು ಮನರಂಜನೆಯ ರೀತಿಯಲ್ಲಿ ತಲುಪಿಸಲು ಸಮ್ಮರಿ, ಅನಿಮೇಶನ್, ವಿಡಿಯೋ ಪಾಠಗಳನ್ನು ಬಳಸುತ್ತದೆ.
ವೇದಾಂತು: 2014ರಲ್ಲಿ ಆರಂಭವಾದ ಬೆಂಗಳೂರು ಮೂಲದ ವೇದಾಂತು ಲೈವ್ ಕ್ಲಾಸ್ಗಳ ಮೂಲಕ 1-12ನೇ ತರಗತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತದೆ. W.A.V.E. ಎಂಬ ಎಐ ಆಧಾರಿತ ತಂತ್ರಜ್ಞಾನ ಇದರ ವೈಶಿಷ್ಟ್ಯತೆ. ಇದು ತರಗತಿಯ ವೇಳೆ ವಿದ್ಯಾರ್ಥಿಯ ಗಮನ, ಉತ್ತರಗಳ ವೇಗ ಮತ್ತು ಪ್ರತಿಕ್ರಿಯೆಗಳನ್ನು ಗಮನಿಸಿ ಪಾಠದ ಶೈಲಿಯನ್ನು ತಕ್ಷಣವೇ ಬದಲಾಯಿಸುತ್ತದೆ.
ಟಾಪರ್: 2013ರಲ್ಲಿ ಮುಂಬೈಯಲ್ಲಿ ಪ್ರಾರಂಭವಾದ ಟಾಪರ್ ಈಗ ಬೈಜುಸ್ನ ಅಂಗಸಂಸ್ಥೆ. ಇದು CBSE, ICSE ಮತ್ತು ರಾಜ್ಯ ಮಂಡಳಿಗಳ ಪಠ್ಯಕ್ರಮವನ್ನು ಬೋಧಿಸುತ್ತಿದೆ. ಟಾಪರ್ನ ಎಐ ತಂತ್ರಜ್ಞಾನವು ‘ಅಡಾಪ್ಟಿವ್ ಲರ್ನಿಂಗ್’ ಎಂಬ ತಂತ್ರವನ್ನು ಬಳಸುತ್ತದೆ.
ಅನ್ಅಕಾಡೆಮಿ: 2015ರಲ್ಲಿ ಪ್ರಾರಂಭವಾದ ಅನ್ಅಕಾಡೆಮಿ UPSC, SSC, ಬ್ಯಾಂಕ್, ಮತ್ತು ರಾಜ್ಯ ಮಟ್ಟದ ಪರೀಕ್ಷೆಗಳಿಗಾಗಿ ತಯಾರಿ ನೀಡುವ ಪ್ರಮುಖ ವೇದಿಕೆಯಾಗಿದೆ. ಇದರ ಎಐ ತಂತ್ರಜ್ಞಾನ ವಿದ್ಯಾರ್ಥಿಯ ಕಲಿಕೆಯ ಇತಿಹಾಸದ ಆಧಾರದ ಮೇಲೆ ಕೋರ್ಸ್ಗಳನ್ನು ಶಿಫಾರಸು ಮಾಡುತ್ತದೆ. ‘ಲರ್ನಿಂಗ್ ಗ್ರಾಫ್’ ಎಂಬ ವೈಶಿಷ್ಟ್ಯವು ವಿದ್ಯಾರ್ಥಿಯ ಕಲಿಕೆ ನಡವಳಿಕೆ ಆಧರಿಸಿ ಪಠ್ಯಕ್ರಮವನ್ನು ರೂಪಿಸುತ್ತದೆ.
ಖಾನ್ ಅಕಾಡೆಮಿ: ಅಮೆರಿಕ ಮೂಲದ ಖಾನ್ ಅಕಾಡೆಮಿಯು ಉಚಿತವಾಗಿ ಪಾಠಗಳನ್ನು ಒದಗಿಸುತ್ತಾ, ಅಭ್ಯಾಸ, ಪ್ರಗತಿಯನ್ನು ವಿಶ್ಲೇಷಿಸುತ್ತದೆ. ಕೇಂದ್ರ ಸರಕಾರ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮುಂತಾದ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಕಲಿಕೆಯನ್ನು ಒದಗಿಸುತ್ತಿದೆ. ಜೊತೆಗೆ, ಕರ್ನಾಟಕ ಸರಕಾರದೊಂದಿಗೂ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯಾದ್ಯಂತ ಸರಕಾರಿ ಶಾಲೆಗಳ 1 ರಿಂದ 10 ನೇ ತರಗತಿ ಮಕ್ಕಳಿಗೆ ಎಐ ಆಧಾರಿತ ಪಾಠ-ಪ್ರವಚನ ಸೇವೆ ಒದಗಿಸುತ್ತಿದೆ.
ಅಪ್ಗ್ರ್ಯಾಡ್: 2015ರಲ್ಲಿ ಮುಂಬೈಯಲ್ಲಿ ಆರಂಭವಾದ ಅಪ್ಗ್ರ್ಯಾಡ್ ಮುಖ್ಯವಾಗಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. IIIT-ಬೆಂಗಳೂರು, ಮಿಚಿಗನ್ ಸ್ಟೇಟ್ ಯೂನಿವರ್ಸಿಟಿ ಮುಂತಾದ ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರಿಕೆಯಲ್ಲಿ ಪಠ್ಯಕ್ರಮಗಳನ್ನು ನೀಡುತ್ತಿದೆ.
ಸಿಂಪ್ಲಿಲರ್ನ್: 2010ರಲ್ಲಿ ಆರಂಭವಾದ ಸಿಂಪ್ಲಿಲರ್ನ್ ವೃತ್ತಿಪರರಿಗಾಗಿ ಆನ್ಲೈನ್ ಬೂಟ್ಕ್ಯಾಂಪ್ ತರಬೇತಿಗಳನ್ನು ನೀಡುತ್ತದೆ. AI, ಕ್ಲೌಡ್, ಸೈಬರ್ ಸೆಕ್ಯುರಿಟಿ ಸೇರಿದಂತೆ ಹಲವು ಕ್ಷೇತ್ರಗಳ ಕೋರ್ಸ್ಗಳು ಇಲ್ಲಿ ಲಭ್ಯವಿವೆ. ಇವರ ಸ್ಯಾಂಡ್ಬಾಕ್ಸ್ ಲ್ಯಾಬ್ಗಳಲ್ಲಿ ವಿದ್ಯಾರ್ಥಿಗಳು ಸಂಶೋಧನೆಯ ಅಭ್ಯಾಸ ಕೈಗೊಳ್ಳಬಹುದು.
ಫಿಸಿಕ್ಸ್ ವಾಲಾ: 2016ರಲ್ಲಿ ಅಲಖ್ ಪಾಂಡೆ ಆರಂಭಿಸಿದ ಫಿಸಿಕ್ಸ್ ವಾಲಾ ಇದೀಗ ಭಾರತದಲ್ಲಿನ ಪ್ರಮುಖ ಎಡ್ಟೆಕ್ ಸಂಸ್ಥೆಯಾಗಿದೆ. JEE, NEET ಮತ್ತು UPSC ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಇದು GPT-4o ಆಧಾರಿತ Alakh AI ತಂತ್ರಜ್ಞಾನ ಪರಿಚಯಿಸಿದೆ. ಇದರಲ್ಲಿ AI ಗುರು ಮತ್ತು ಸ್ಮಾರ್ಟ್ ಡೌಟ್ ಎಂಜಿನ್ ಎಂಬ ವೈಶಿಷ್ಟ್ಯಗಳಿವೆ. ಫಿಸಿಕ್ಸ್ ವಾಲಾ ಆಂಧ್ರ ಪ್ರದೇಶ ಸರ್ಕಾರದ ಜೊತೆ ಸೇರಿ ಮೊದಲ AI ಇನ್ಸ್ಟಿಟ್ಯೂಟ್ ಸ್ಥಾಪಿಸುತ್ತಿದೆ ಮತ್ತು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜೊತೆಗೆ 84 ಶಾಲೆಗಳಲ್ಲಿ 4300 ವಿದ್ಯಾರ್ಥಿಗಳಿಗೆ NEET, JEE ತರಗತಿಗಳನ್ನು ನೀಡುತ್ತಿದೆ. ಜೊತೆಗೆ, "ಪ್ರಾಜೆಕ್ಟ್ ಭಾರತ್” ಮುಖಾಂತರ ಐದು ಸ್ಥಳೀಯ ಭಾಷೆಗಳಲ್ಲಿ AI ಆಧಾರಿತ ಪಾಠಗಳನ್ನು ನೀಡುತ್ತಿದೆ.
ಕುತೂಹಕಲಕಾರಿ ಸಂಗತಿಗಳು
2019ರಿಂದ CBSE ಪರಿಚಯಿಸಿದ AI ಕೋರ್ಸ್ಗೆ ದೇಶಾದ್ಯಂತ 8 ಲಕ್ಷ ವಿದ್ಯಾರ್ಥಿಗಳು ಸೇರಿದ್ದಾರೆ.
ಭಾರತದಲ್ಲಿ 1,000ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು 42,000ಕ್ಕೂ ಹೆಚ್ಚು ಕಾಲೇಜುಗಳಿವೆ. ಪ್ರತಿ ವರ್ಷ 4 ಕೋಟಿ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರ ₹10,372 ಕೋಟಿಯ IndiaAI ಯೋಜನೆಯ ಮೂಲಕ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ AI ಅಭಿವೃದ್ಧಿಗೆ ಯೋಜನೆ ರೂಪಿಸಿದೆ.
ಕೇಂದ್ರ ಸರಕಾರ ₹500 ಕೋಟಿ ಹೂಡಿಕೆಯೊಂದಿಗೆ 2025ರ ವರ್ಷಾಂತ್ಯದೊಳಗೆ AI ಸೆಂಟರ್ ಆಫ್ ಎಕ್ಸೆಲೆನ್ಸ್ ಸ್ಥಾಪಿಸುವ ಗುರಿ ಹೊಂದಿದೆ.
ಮಹಾರಾಷ್ಟ್ರದಲ್ಲಿ ‘ಯೂನಿವರ್ಸಲ್ ಎಐ ಯೂನಿವರ್ಸಿಟಿ’ ಸ್ಥಾಪಿಸಲಾಗಿದ್ದು, ಇದು ಭಾರತದಲ್ಲಿ AI ಕ್ಷೇತ್ರಕ್ಕೆ ಸಮರ್ಪಿತವಾದ ಮೊದಲ ವಿಶ್ವವಿದ್ಯಾಲಯವಾಗಿದೆ.
ಮೈಕ್ರೋಸಾಫ್ಟ್, ಭಾರತದಲ್ಲಿ ₹25,000 ಕೋಟಿಯ AI ಮತ್ತು ಕ್ಲೌಡ್ ಮೂಲಸೌಕರ್ಯ ವಿಸ್ತರಣೆ ಯೋಜನೆಯನ್ನು ಘೋಷಿಸಿದೆ. 2030ರೊಳಗೆ 1 ಕೋಟಿ ಭಾರತೀಯರಿಗೆ AI ತರಬೇತಿ ನೀಡಲು ಗುರಿಯೂ ಇದೆ.
ಭಾರತೀಯ ಕಂಪನಿಯಾದ Meritus AI ಏಷ್ಯಾ ಖಂಡದಾದ್ಯಂತ 72,000 ಶಿಕ್ಷಕರಿಗೆ AI ಆಧಾರಿತ ಬೋಧನಾ ತರಬೇತಿ ನೀಡಲು ಯೋಜನೆ ರೂಪಿಸಿದೆ.
ಸಂಪರ್ಕ್ ಫೌಂಡೇಶನ್ Sampark TV ಮೂಲಕ 25,000 ಸರ್ಕಾರಿ ಶಾಲೆಗಳಲ್ಲಿ AI ಆಧಾರಿತ ಕಲಿಕೆ ನೀಡಲು ಮುಂದಾಗಿದೆ.



