ಹೊಸ ಕಾಲದ ವಕೀಲಿಕೆಗೆ ಎಐ ಸಾಥ್
AI ಅನಂತ ಅವತಾರ – ಭಾಗ 14
ಡಾ.ರಮೇಶ್ ನಿಂಬೆಮರದಳ್ಳಿ
ಬೆಂಗಳೂರಿನಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ಲಾಯರ್ ಹರೀಶ್ ತನ್ನ ಕ್ಲೈಂಟ್ಗೆ ಒಂದು ವಾಣಿಜ್ಯ ಒಪ್ಪಂದ ಮಾಡಿಕೊಡಬೇಕಿತ್ತು. ಅವರು ಎಐ ಮಾಡೆಲ್ ಒಂದಕ್ಕೆ ಒಪ್ಪಂದದ ಪೂರ್ಣ ವಿವರವನ್ನು ಒದಗಿಸಿದರು. ಆ ಎಐ ಟೂಲ್ ತನ್ನೊಳಗಿನ ಡೀಪ್ ರೀಸರ್ಚ್ ಮೂಲಕ ಆನ್ಲೈನ್ನಲ್ಲಿರುವ ಭಾರತದ ಕಾನೂನು ಕಡತಗಳನ್ನೆಲ್ಲಾ ತಡಕಾಡಿ ಮೂರು ನಿಮಿಷಗಳಲ್ಲಿ ಹರೀಶ್ ಅವರ ಕ್ಲೈಂಟ್ಗೆ ಬೇಕಾಗಿದ್ದ 40 ಪುಟಗಳ ವಾಣಿಜ್ಯ ಒಪ್ಪಂದವನ್ನು ಸಿದ್ಧಪಡಿಸಿತು. ಬಳಿಕ ಹರೀಶ್ ಅದನ್ನು ಸ್ವತಃ ಪರಿಶೀಲಿಸಿ ಅರ್ಧ ಗಂಟೆಯಲ್ಲಿ ಒಪ್ಪಂದವನ್ನು ಕ್ಲೈಂಟ್ ಕೈಗಿತ್ತರು. ಈ ಒಪ್ಪಂದವನ್ನು ಅವರೇ ಸ್ವತಃ ತಯಾರಿಸುವುದಿದ್ದರೆ ಕನಿಷ್ಟವೆಂದರೂ ಅರ್ಧ ದಿನ ಹಿಡಿಯುತ್ತಿತ್ತು. ಅಂದರೆ, ಅರ್ಧ ದಿನ ಹಿಡಿಯುತ್ತಿದ್ದ ಒಪ್ಪಂದ ತಯಾರಿಸುವ ಕೆಲಸ ಬಿಸಿ ಕಾಫಿ ತಣ್ಣಗಾಗುವ ಹೊತ್ತಿನಲ್ಲಿ ಸಿದ್ಧವಾಗಿತ್ತು – ಇದು ಭವಿಷ್ಯವಲ್ಲ, ಈಗ ಕಾನೂನು ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನ. ಭಾರತೀಯ ಕಾನೂನು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಎಂಬ ಲೀಗಲ್ ಗುರುವಿನ ಆಮಗನವಾಗಿದ್ದು, ಲಾಯರ್ಗಳ ಕೆಲಸಕ್ಕೆ ವೇಗ ಬಂದಿದೆ. ಹಲವು ಕೆಲಸಗಳನ್ನು ಒಟ್ಟಿಗೇ ಮಾಡಬಲ್ಲಷ್ಟು ಹೆಚ್ಚಿನ ಕೈಗಳು ಬಂದಿವೆ. ಹಳೆಯ ಕಡತಗಳಲ್ಲಿರುವ ಸಾರಾಂಶ ಗ್ರಹಿಸುವ ಹೊಸ ಒಳನೋಟ ಬಂದಿದೆ.
ಸಹಾಯಕನಲ್ಲ, ಕಾನೂನು ಗುರು
ಎಐ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿ ಪಲ್ಲಟ ತಂದ ಹಾಗೆ ಕಾನೂನು ಕ್ಷೇತ್ರದಲ್ಲೂ ಭಾರಿ ಬದಲಾವಣೆ ತರುತ್ತಿದೆ. ದಿನಗಟ್ಟಲೆ ಹಿಡಿಯುತ್ತಿದ್ದ ಕೆಲಸವನ್ನು ಎಐ ಕ್ಷಣಗಳಲ್ಲೇ ಮಾಡಿ ಮುಗಿಸುತ್ತಿದೆ. ಅತ್ಯಂತ ಕ್ಲಿಷ್ಟ ಸಮಸ್ಯೆಗಳಿಗೆ ಸರಳವಾಗಿ ಪರಿಹಾರಗಳನ್ನು ಸೂಚಿಸುತ್ತಿದೆ. ಸಾವಿರಾರು ಪುಟಗಳಷ್ಟು ದೊಡ್ಡದಾದ ಹಳೆಯ ತೀರ್ಪುಗಳನ್ನು ಕೆಲವೇ ಪುಟಗಳಲ್ಲಿ ಸಾರಾಂಶೀಕರಿಸಿ ಸುಲಭವಾಗಿ ಅರಗಿಸಿಕೊಳ್ಳಲು ಅನುವು ಮಾಡಿಕೊಡುತ್ತಿದೆ. ಕಾನೂನಿನಲ್ಲಿರುವ ಗ್ರೇ ಏರಿಯಾಗಳನ್ನು ಪತ್ತೆ ಮಾಡಿ ಲಾಯರ್ಗಳಿಗೆ ವಾದಕ್ಕೆ ಒಳದಾರಿ ಮಾಡಿಕೊಡುತ್ತಿದೆ. ಕ್ಲಿಷ್ಟಕರ ಕಾನೂನುಗಳನ್ನು ಸರಳವಾಗಿ ನಿರೂಪಿಸುವ ದಾರಿಗಳನ್ನು ಹೇಳಿಕೊಡುತ್ತಿದೆ. ಈಗ ಯಾವುದೇ ಒಪ್ಪಂದಗಳು, ಕರಾರು ಪತ್ರಗಳು, ಪಿಟಿಷನ್ಗಳನ್ನು ತಯಾರಿಸುವುದು ಕಷ್ಟವಲ್ಲ. ಸೂಕ್ತ ವಿವರಗಳನ್ನು ಎಐ ಮಾಡೆಲ್ಗೆ ಒದಗಿಸಿ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು ಬಳಿಕ ಮತ್ತೆ ಮತ್ತೆ ಪರಿಷ್ಕರಿಸಬಹುದು. ನ್ಯಾಯಾಲಯದ ಅತ್ಯಂತ ಸೂಕ್ಷ್ಮ ಮತ್ತು ಕಠಿಣ ತೀರ್ಪುಗಳನ್ನು ಎಐ ಮಾಡೆಲ್ಗೆ ಸಲ್ಲಿಸಿ ಆ ಕುರಿತು ಅತ್ಯಂತ ಅನುಭವಿ ಲಾಯರ್ ಜೊತೆ ಚರ್ಚಿಸಿದ ಹಾಗೆ ಸುಧೀರ್ಘವಾಗಿ ಚರ್ಚೆ ನಡೆಸಬಹುದು. ಇಂಥ ಹಲವು ಸಾಧ್ಯತೆಗಳನ್ನು ಎಐ ಕಾನೂನು ವೃತ್ತಿಪರರಿಗೆ ಒದಗಿಸುತ್ತಿದೆ. ಈ ಹೊಸ ತಂತ್ರಜ್ಞಾನಕ್ಕೆ ಒಗ್ಗಿದವರು ಬೆಳೆಯುತ್ತಾರೆ. ನಿರ್ಲಕ್ಷಿಸಿದವರು ಮೂಲೆಗುಂಪಾಗುತ್ತಾರೆ ಎನ್ನುವುದು ಈಗಾಗಲೇ ಗೋಚರವಾಗುತ್ತಿದೆ.
2025ರ Manupatra ಸಮೀಕ್ಷೆಯ ಪ್ರಕಾರ, 78% ಭಾರತೀಯ ವಕೀಲರು ಸಂಶೋಧನೆಗಾಗಿ ಈಗಾಗಲೇ AI ಟೂಲ್ಗಳನ್ನು ಬಳಸುತ್ತಿದ್ದು, ಇವರಲ್ಲಿ 80% ಮಂದಿ ಎಐ ಬಳಕೆಯಿಂದ ತಮ್ಮ ಸಮಯ "ಗಣನೀಯ"ವಾಗಿ ಉಳಿತಾಯವಾಗಿದೆ ಎಂದಿದ್ದಾರೆ.
ಪರಿಶೀಲನೆಗೆ ವಕೀಲರೇ ಬೇಕು
ಕಾನೂನು ಕ್ಷೇತ್ರದಲ್ಲಿ ನಡೆಯುತ್ತಿರುವ ಆಟೊಮೇಷನ್ ಪ್ರಕ್ರಿಯೆ ಸದ್ಯಕ್ಕೆ ಲಾಯರ್ಗಳ ಸಮಯವನ್ನು ಉಳಿಸುತ್ತಿದೆಯೇ ಹೊರತು ಅವರನ್ನು ಬದಲಿಸುತ್ತಿಲ್ಲ. ಮೆಕಿನ್ಸೆ ಪ್ರಕಾರ ಸದ್ಯಕ್ಕೆ ವಕೀಲರು ಮಾಡುವ 23% ಕೆಲಸವನ್ನು ತಕ್ಷಣವೇ ಸ್ವಯಂಚಾಲಿತಗೊಳಿಸಬಹುದು. ಆದರೆ, ಎಐ ತಂತ್ರಜ್ಞಾನದ ಸುಳ್ಳುಬಾಕತನ (hallucinations) ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳುತ್ತದೆ. ಅಂಥ ಸುಳ್ಳುಗಳನ್ನು ಪತ್ತೆ ಮಾಡಲು ವಕೀಲರ ಪರಿಶೀಲನೆ ಅತ್ಯಗತ್ಯ. ಇದರ ಜೊತೆಗೆ, ವಾದ ವಿವಾದಗಳಿಗೆ ಸೂಕ್ತವಾಗಿ ಭಾರತೀಯ ಸನ್ನಿವೇಶನಗಳ ಕೊರತೆ ಈ ಎಐ ಮಾಡೆಲ್ಗಳಲ್ಲಿ ಎದ್ದು ಕಾಣುತ್ತಿದೆ ಎಂಬುದನ್ನು Manupatra ಅಧ್ಯಯನವು ಗುರುತಿಸಿದೆ. ಹೀಗಾಗಿ ಕಾನೂನು ದಾಖಲೆಗಳನ್ನು ವಕೀಲರು ಅಂತಿಮವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. "ಯಂತ್ರಗಳು ಸಹಾಯ ಮಾಡಬಹುದು. ಆದರೆ ಅವು ಮಾನವ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ" ಎಂದು ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದು ಇದನ್ನೇ.
ಕಾನೂನು ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ!
ಕಾನೂನು ವಿದ್ಯಾರ್ಥಿಗಳು ಇನ್ನು ಮುಂದೆ ಕೇವಲ ಕಾನೂನು ಪುಸ್ತಕಗಳನ್ನೇ ಓದಿದರೆ ಸಾಲುವುದಿಲ್ಲ. ಕಾನೂನುಗಳ ಅರ್ಥ, ವ್ಯಾಪ್ತಿ ಮತ್ತು ಸಂದರ್ಭಾನುಸಾರ ಅವುಗಳ ನಿರೂಪಣೆ ತಿಳಿದರೆ ಸಾಕಾಗುವುದಿಲ್ಲ. ಅವರ ಓದು ಮತ್ತು ಅರಿವಿನ ವ್ಯಾಪ್ತಿ ವಿಸ್ತರಿಸಬೇಕು. ತಿಳಿವಳಿಕೆಯೂ ವಿಸ್ತಾರವಾಗಬೇಕು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಯ 2025ರ AI & ಲಾ ಫೋರಮ್, ಪಠ್ಯಕ್ರಮದಲ್ಲಿ ಪ್ರಾಂಪ್ಟ್ ಇಂಜಿನಿಯರಿಂಗ್ ಮತ್ತು ನೀತಿಶಾಸ್ತ್ರದ ಕಾರ್ಯಾಗಾರಗಳ ಮಹತ್ವವನ್ನು ಒತ್ತಿ ಹೇಳಿದೆ. ವಿದ್ಯಾರ್ಥಿಗಳಿಗೆ ಜೆಮಿನಿ, ಚಾಟ್ಜಿಪಿಟಿ, ಹಾಗೂ ಇಂಡಿಕ್ LLM ಗಳಿಗೆ ಪ್ರೀಮಿಯಂ ಪ್ರವೇಶ ನೀಡಲು ಶಿಫಾರಸು ಮಾಡಿದೆ. ಕಾನೂನು ವಿದ್ಯಾರ್ಥಿಗಳು ಮತ್ತು ಜೂನಿಯರ್ ಲಾಯರ್ಗಳು ಈ ಕೌಶಲ್ಯ ಗಳಿಸುವ ಕಡೆ ಗಮನ ಹರಿಸಬೇಕು. ಇದರ ಜೊತೆಗೆ, ಭವಿಷ್ಯದ ಲಾಯರ್ಗಳು ಕೆಳಗಿನ ಕೌಶಲ್ಯ ಗಳಿಸಿದರೆ ಅವರು ವೃತ್ತಿಯಲ್ಲಿ ಬೆಳೆಯಲು ಮತ್ತು ಉಳಿಯಲು ಸಾಧ್ಯವಾಗುತ್ತದೆ.
ಡೇಟಾ ಮತ್ತು ಪ್ರಾಂಪ್ಟ್ ತಿಳಿವಳಿಕೆ: ಇದರಿಂದ ಡೇಟಾವನ್ನು ವಿಶ್ಲೇಷಿಸಿ ಡೇಟಾದಲ್ಲಿರುವ ಒಳನೋಟಗಳನ್ನು ಗಳಿಸುವುದು ಸುಲಭವಾಗುತ್ತದೆ. ಅಲ್ಲದೆ, ಪ್ರಾಂಪ್ಟ್ ಬರೆಯುವ ಕೌಶಲ್ಯವಿದ್ದರೆ ಎಐ ಮಾಡೆಲ್ಗಳಿಂದ ಬೇಕಾದ ಉತ್ತರವನ್ನು ಪಡೆಯುವುದು ಸಾಧ್ಯ.
ಎಐ ಎಥಿಕ್ಸ್: ಎಐ ತಂತ್ರಜ್ಞಾನವನ್ನು ನ್ಯಾಯುಯುತ ದಾರಿಗಳಲ್ಲಿ ಬಳಸುವುದನ್ನು ತಿಳಿದಿರಬೇಕು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಂಪನಿಯೂ ಎಐನ ಎಥಿಕಲ್ ಬಳಕೆ ಕುರಿತು ನಿಯಮಗಳನ್ನು ರೂಪಿಸುತ್ತವೆ. ಹೀಗಾಗಿ ಅದರ ತಿಳಿವಳಿಕೆ ಅತ್ಯಗತ್ಯ.
ಕಂಪ್ಯುಟೇಷನಲ್ ಲಾ ಬೇಸಿಕ್ಸ್: ವಿವಿಧ ಸರ್ವರ್, ಕಂಪ್ಯೂಟರ್ ಅಥವಾ ಕ್ಲೌಡ್ ಸರ್ವರ್ಗಳಿಂದ ಅಗತ್ಯ ಫೈಲ್ಗಳು ಮತ್ತು ಲಾಗ್ ರಿಜಿಸ್ಟ್ರಿಗಳನ್ನು ಪಡೆಯಲು Python, regex, API ಗಳ ಬಳಕೆ ತಿಳಿದಿರಬೇಕು.
ವಕೀಲಿಕೆಯ ಹೊಸ ಹುದ್ದೆಗಳು
ಒಂದು ಕಡೆ ವಕೀಲರಿಗೆ ನೆರವಾಗುವಂತೆ ಎಐ ಟೂಲ್ಗಳು ಅಭಿವೃದ್ಧಿಯಾಗಿದ್ದರೆ ಮತ್ತೊಂದು ಕಡೆ ವಕೀಲರಿಗೆ ಹೊಸ ರೀತಿಯ ಉದ್ಯೋಗಗಳೇ ತೆರೆದುಕೊಳ್ಳುತ್ತಿವೆ.
ಕಾನೂನು ತಂತ್ರಜ್ಞರು: ಲೀಗಲ್ ಪ್ರಾಂಪ್ಟ್ಗಳನ್ನು ವಿನ್ಯಾಸಗೊಳಿಸಲು ಮತ್ತು ಡೇಟಾವನ್ನು ಆಡಿಟ್ ಮಾಡಲು ಈ ತಜ್ಞರ ಅಗತ್ಯವಿದೆ. ಡಿಜಿಟಲ್ ಇನ್ನೊವೇಶನ್ ಗ್ರೂಪ್ ಈಗಾಗಲೇ ಇಂತಹ 20 ತಜ್ಞರನ್ನು ನೇಮಿಸಿಕೊಂಡಿದೆ.
AI-ಆಡಳಿತ ಸಲಹೆಗಾರ: ಕೇಂದ್ರ ಸರಕಾರ ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿರುವ ಡಿಜಿಟಲ್ ಇಂಡಿಯಾ (ಜವಾಬ್ದಾರಿಯುತ ಎಐ) ನಿಯಮಗಳ ಕುರಿತು ತಮ್ಮ ಕ್ಲೈಂಟ್ಗಳಿಗೆ ಮಾರ್ಗದರ್ಶನ ನೀಡಲು ಇಂಥ ತಜ್ಞರ ಅಗತ್ಯವಿದೆ.
ODR (ಆನ್ಲೈನ್ ಡಿಸ್ಪ್ಯೂಟ್ ರೆಸೊಲ್ಯೂಷನ್) ಕೇಸ್ ಮ್ಯಾನೇಜರ್ಗಳು: ಕೆಲವು ವ್ಯಾಜ್ಯಗಳ ಪರಿಹಾರಕ್ಕೆ ಕೋರ್ಟ್ ಮೆಟ್ಟಿಲು ತುಳಿಯದೆ ಆನ್ಲೈನ್ ಮೂಲಕವೇ ಕಾನೂನು ಪರಿಹಾರ ಸೂಚಿಸಲು ಇಂಥವರು ಬೇಕಾಗುತ್ತಾರೆ. ಇ-ಕಾಮರ್ಸ್, ಫುಡ್ ಡೆಲಿವರಿ ಮತ್ತಿತರ ಗ್ರಾಹಕ ಕೇಂದ್ರಿತ ಕಂಪನಿಗಳಿಗೆ ಹೆಚ್ಚಾಗಿ ಇವರ ಸೇವೆಯ ಅಗತ್ಯವಿದೆ.
AI ಟೂಲ್ಗಳಿಂದ ಮಾಡಬಹುದಾದ ಲೀಗಲ್ ಕೆಲಸಗಳು
ಒಪ್ಪಂದಗಳ ರಚನೆ: NDA (Non-Disclosure Agreements), ಲೀಸ್/ಸೇಲ್ ಡೀಡ್ಗಳು, ಬಾಡಿಗೆ ಒಪ್ಪಂದಗಳು, ಹಣಕಾಸು ಲೇವಾದೇವಿಯ ಕರಾರುಗಳು ಮತ್ತು ಇತರ ವಾಣಿಜ್ಯ ಒಪ್ಪಂದಗಳನ್ನು ವೇಗವಾಗಿ ಮತ್ತು ನಿಖರವಾಗಿ ರಚಿಸಬಹುದು.
ಒಪ್ಪಂದ ಪರಿಶೀಲನೆ ಮತ್ತು ವಿಶ್ಲೇಷಣೆ: ಕರಡು ಒಪ್ಪಂದಗಳನ್ನು ಪರಿಶೀಲಿಸಿ, ಅದರಲ್ಲಿರುವ ಸಮಸ್ಯಾತ್ಮಕ ಅಂಶಗಳನ್ನು ಗುರುತಿಸಿ ತಿದ್ದುಪಡಿ ಮಾಡುವುದು ಸುಲಭ.
ಕೋರ್ಟ್ ಅರ್ಜಿಗಳ ಸಿದ್ಧತೆ: ಹಳೆಯ ಪ್ರಕರಣಗಳ ಉಲ್ಲೇಖಗಳ ಸಹಿತ ಹೊಸ ಕೇಸ್ಗಳಿಗೆ ಅರ್ಜಿಗಳನ್ನು ಕೆಲವೇ ನಿಮಿಷಗಳಲ್ಲಿ ಸಿದ್ಧಪಡಿಸುವುದು ಸಾಧ್ಯ.
ಕಾನೂನು ಸಂಶೋಧನೆ ಮತ್ತು ವಿಶ್ಲೇಷಣೆ: ಕೆಲವು ಮಹತ್ವದ ಪ್ರಕರಣಗಳ ಕೇಸ್ ಬ್ರೀಫ್ಗಳನ್ನು ಸಿದ್ಧಪಡಿಸುವುದು, ಕೇಸ್ಗೆ ಅನುಕೂಲವಾಗುವಂತೆ ಪೂರ್ವ ನಿದರ್ಶನಗಳನ್ನು ಹುಡುಕಿ ತೆಗೆಯುವುದು ಮತ್ತು ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುವುದು ಬಹಳ ಸುಲಭ.
ದಾಖಲೆಗಳ ಸಾರಾಂಶ: ನ್ಯಾಯಾಲಯದ ಆದೇಶಗಳು ಮತ್ತು ಇತರ ದೀರ್ಘವಾದ ದಾಖಲೆಗಳನ್ನು ಸಂಕ್ಷಿಪ್ತಗೊಳಿಸುವುದು. ಪ್ರಮುಖ ಅಂಶಗಳನ್ನು ಮಾತ್ರ ಹೆಕ್ಕಿ ತೆಗೆಯುವುದು, ಅದಕ್ಕೆ ತಕ್ಕಂತೆ ಪ್ರತಿವಾದಗಳನ್ನು ರೂಪಿಸುವಂತಹ ಕೆಲಸಗಳಲ್ಲಿ ಎಐನದು ಎತ್ತಿದ ಕೈ.
ವಿವಾದ ಪರಿಹಾರ ನಿರ್ವಹಣೆ: ಆನ್ಲೈನ್ ವಿವಾದ ಪರಿಹಾರ ಕಾರ್ಯವಿಧಾನಗಳನ್ನು ಸುಗಮಗೊಳಿಸುವ ಕೆಲಸವನ್ನು ಎಐ ಬಳಸಿ ಮಾಡಬಹುದು.
ಟ್ರೇಡ್ಮಾರ್ಕ್ ಮೇಲ್ವಿಚಾರಣೆ: ಟ್ರೇಡ್ಮಾರ್ಕ್ ರಿಜಿಸ್ಟ್ರಿಗಳಲ್ಲಿನ ಹೊಸ ನೋಂದಣಿಗಳನ್ನು ಅಥವಾ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಎಐ ಬಳಸಬಹುದು.
ಡೇಟಾ ಆಡಿಟಿಂಗ್ ಮತ್ತು ಪ್ರಾಂಪ್ಟ್ ವಿನ್ಯಾಸ: AI ವ್ಯವಸ್ಥೆಗಳಿಗಾಗಿ ಡೇಟಾವನ್ನು ಪರಿಶೀಲಿಸುವುದು ಮತ್ತು ಕೃತಕ ಬುದ್ಧಿಮತ್ತೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ನಿರ್ದಿಷ್ಟ ಸೂಚನೆಗಳನ್ನು ವಿನ್ಯಾಸಗೊಳಿಸುವುದಕ್ಕೂ ಎಐಗಳನ್ನೇ ಬಳಸಬಹುದು. ಇದನ್ನೇ ಮೆಟಾ ಪ್ರಾಂಪ್ಟ್ ಎನ್ನಲಾಗುತ್ತದೆ.
ಕಾನೂನು ಅನುಸರಣೆ: ಯಾವುದೇ ಉದ್ಯಮ/ವ್ಯವಹಾರ ಸ್ಥಾಪಿಸಲು ಇಲ್ಲವೇ ಅದನ್ನು ಕಾನೂನಾತ್ಮಕವಾಗಿ ನಿರ್ವಹಿಸಲು ಅಗತ್ಯವಿರುವ ಕಾನೂನು ಅನುಸರಣೆಯಲ್ಲಿ ಎಐ ನೆರವಾಗುತ್ತದೆ.
ಎಐನಿಂದ ಕೆಲಸ ಸುಲಭವಾಗಬಹುದು, ಗುಣಮಟ್ಟವೂ ಹೆಚ್ಚಬಹುದು. ಆದರೆ, ಮನುಷ್ಯನ ನಾವೀನ್ಯತೆ ಮತ್ತು ಸೃಜನಾತ್ಮಕ ಚಿಂತನಶೀಲತೆಗೆ ಎಐ ಬದಲಿ ಆಗಲು ಸಾಧ್ಯವಿಲ್ಲ.
-ಡಾ. ಡಿ.ವೈ. ಚಂದ್ರಚೂಡ್ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ
ನ್ಯಾಯ ತೀರ್ಮಾನಗಳಲ್ಲಿ ಮನುಷ್ಯರಿಗೆ ತಂತ್ರಜ್ಞಾನವು ಪೂರಕವಾಗಿರಬೇಕು, ಪರ್ಯಾಯವಲ್ಲ. ತಂತ್ರಜ್ಞಾನದ ಬಳಕೆ ಯಾವಾಗಲೂ ನೈತಿಕತೆ, ನಂಬಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವಲ್ಲಿ ಮಾತ್ರ ಬಳಕೆಯಾಗಬೇಕು. ನ್ಯಾಯದಾನದ ಆಂತರ್ಯದಲ್ಲಿ ಮನುಷ್ಯನಿರಬೇಕೇ ಹೊರತು ತಂತ್ರಜ್ಞಾನವಲ್ಲ.
-ಬಿ. ಆರ್. ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿ
ಎಐ ಎಷ್ಟೇ ಅಭಿವೃದ್ಧಿಯಾಗಿರಬಹುದು. ಆದರೆ, ಅದಕ್ಕೆ ಮಾನವೀಯ ಸಹಾನುಭೂತಿ, ಕರುಣೆ ಮತ್ತು ತರ್ಕ ಶಕ್ತಿಯ ಕೊರತೆ ಇದೆ. ಇವು ನ್ಯಾಯದಾನದ ಅವಿಭಾಜ್ಯ ಅಂಗಗಳು.
-ಹಿಮಾ ಕೋಹ್ಲಿ ಸುಪ್ರೀಂಕೋರ್ಟ್ನ ಮಾಜಿ ನ್ಯಾಯಾಧೀಶರು



