ಇಂಡಸ್ಟ್ರಿ 4.0: ಮೊಬೈಲ್ನಲ್ಲೇ ಇಡೀ ಕಾರ್ಖಾನೆ ನಿರ್ವಹಣೆ
ಉತ್ಪಾದನೆಯ ನಾಲ್ಕನೇ ಅವತಾರ | ಬೆಳಗ್ಗೆ ಆರ್ಡರ್ ಮಾಡಿದ್ರೆ ಸಂಜೆಯೊಳಗೆ ಉತ್ಪಾದನೆ | ಅದೇ ದಿನ ಮನೆ ಬಾಗಿಲಿಗೆ ಡೆಲವರಿ
ಇತ್ತೀಚಿನ ಯಾವುದೇ ಆಧುನಿಕ ಕಾರ್ಖಾನೆ, ಆಸ್ಪತ್ರೆ ಅಥವಾ ಸರಕು ಸಾಗಣೆ ಕೇಂದ್ರಕ್ಕೆ ಹೋದರೂ, ಅಲ್ಲಿ ಒಂದು ಮೌನವಾದ ಕ್ರಾಂತಿಯನ್ನು ನೀವು ಗ್ರಹಿಸಬಹುದು. ಯಂತ್ರಗಳು ಒಂದಕ್ಕೊಂದು ಮಾತನಾಡುತ್ತವೆ, ನಿರ್ಧಾರಗಳನ್ನು ಮಿಲಿಸೆಕೆಂಡ್ಗಳಲ್ಲಿ ತೆಗೆದುಕೊಳ್ಳಲಾಗುತ್ತದೆ, ಮತ್ತು ಮಾನವ ಕಾರ್ಮಿಕರಿಗೆ ಬೆಂಬಲ ಹೆಚ್ಚುತ್ತಿದೆ. ಬುದ್ಧಿವಂತ ವ್ಯವಸ್ಥೆಗಳು ಹೆಚ್ಚುತ್ತಿವೆ. ಇಂಡಸ್ಟ್ರಿ 4.0 ಎಂದು ವ್ಯಾಪಕವಾಗಿ ಕರೆಯಲ್ಪಡುವ 4ನೇ ಕೈಗಾರಿಕಾ ಕ್ರಾಂತಿಯು ಸರಕುಗಳನ್ನು ಉತ್ಪಾದಿಸುವ ಮತ್ತು ಸೇವೆಗಳನ್ನು ತಲುಪಿಸುವ ವಿಧಾನದಲ್ಲಿ ನಾಲ್ಕನೇ ಪ್ರಮುಖ ಕ್ರಾಂತಿಯನ್ನು ಸೂಚಿಸುತ್ತದೆ. ಹಿಂದಿನ ಕೈಗಾರಿಕಾ ಪ್ರಗತಿಗಳಿಗಿಂತ ಭಿನ್ನವಾಗಿ, ಇದು ನಾವು ಖರೀದಿಸುವ ಆಹಾರ ಉತ್ಪನ್ನಗಳಿಂದ ಹಿಡಿದು ನಾವು ಅವಲಂಬಿಸಿರುವ ಸಾರ್ವಜನಿಕ ಸೇವೆಗಳವರೆಗೆ ದೈನಂದಿನ ಜೀವನದ ಪ್ರತಿಯೊಂದು ವಿಚಾರವನ್ನೂ ಬದಲಿಸುತ್ತದೆ.
4ನೇ ಕೈಗಾರಿಕಾ ಕ್ರಾಂತಿಯ ಸ್ವರೂಪವೇನು?
ಇಂಡಸ್ಟ್ರಿ 4.0 ಎಂದರೆ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳಾದ AI, ರೊಬೋಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ (IoT), ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ವಿಶ್ಲೇಷಣೆಗಳನ್ನು ಉತ್ಪಾದನೆ ಮತ್ತು ಸೇವಾ ಕೈಗಾರಿಕೆಗಳೊಂದಿಗೆ ಸಂಯೋಜಿಸುವುದು. ಹಿಂದಿನ ಕೈಗಾರಿಕಾ ಕ್ರಾಂತಿಗಳು ಕಾರ್ಮಿಕರನ್ನು ಯಾಂತ್ರೀಕರಿಸಿದವು, ವಿದ್ಯುತ್ ಅನ್ನು ಪರಿಚಯಿಸಿದವು ಮತ್ತು ಕಂಪ್ಯೂಟರ್ಗಳನ್ನು ಕಾರ್ಯಸ್ಥಳಕ್ಕೆ ತಂದವು. ಆದರೆ ಈ ಕ್ರಾಂತಿ ಎಲ್ಲವನ್ನೂ ಸಂಪರ್ಕಿಸುತ್ತದೆ ಮತ್ತು ಸಿಂಕ್ರೊನೈಸ್ ಮಾಡುತ್ತದೆ
ಇಲ್ಲಿನ ಯಂತ್ರಗಳು ಮೆಕ್ಯಾನಿಕಲ್ ಯಂತ್ರಗಳಾಗಿರುವುದಿಲ್ಲ. ಇಒಟಿ ಸಾಧನದಿಂದ ಸ್ಮಾರ್ಟ್ ಯಂತ್ರಗಳಾಗಿರುತ್ತವೆ. ಇಂಥ ಬುದ್ಧಿವಂತ ಯಂತ್ರಗಳಿಂದ ದತ್ತಾಂಶವನ್ನು ಸಂಗ್ರಹಿಸಲಾಗುತ್ತದೆ. ಪ್ರತಿದಿನವೂ ಈ ಯಂತ್ರಗಳು ಕಲಿಯುತ್ತಾ ಸುಧಾರಿಸುತ್ತಾ ಹೋಗುತ್ತವೆ ಹಾಗೂ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ. ಪ್ರೊಡಕ್ಷನ್ ಲೈನ್ನಲ್ಲಿನ ಸಮಸ್ಯೆಗಳನ್ನು ಸ್ವಯಂ-ಸರಿಪಡಿಸಿಕೊಳ್ಳುತ್ತವೆ. ತೊಂದರೆಗಳು ಸಂಭವಿಸುವ ಮೊದಲೇ ಪೂರೈಕೆ ಸರಪಳಿಗಳು ಅವುಗಳನ್ನು ಪತ್ತೆ ಮಾಡುತ್ತವೆ. ಒಂದು ಮೊಬೈಲ್ ಫೋನ್ನಿಂದ ಇಡೀ ಕಾರ್ಖಾನೆಗಳನ್ನು ಮೇಲ್ವಿಚಾರಣೆ ಮಾಡಬಹುದು.
ಎಲ್ಲರನ್ನೂ ಪ್ರಭಾವಿಸುವ ಕ್ರಾಂತಿ
ಕೈಗಾರಿಕಾ ಕ್ರಾಂತಿಯು ಮೇಲ್ನೋಟಕ್ಕೆ ಉದ್ಯಮ ಕ್ರಾಂತಿ, ಇಲ್ಲವೇ ತಾಂತ್ರಿಕ ಕ್ರಾಂತಿಯಂತೆ ಕಂಡರೂ ಇದು ಪ್ರತಿಯೊಬ್ಬರನ್ನೂ ಪ್ರಭಾವಿಸುತ್ತದೆ. ಇದರ ಪ್ರಭಾವ ಹಲವು ತೆರನಾಗಿರುತ್ತದೆ. ಉದ್ಯೋಗ ಕಡಿತದಿಂದ ಆರಂಭಗೊಂಡು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಕಡಿಮೆ ಬೆಲೆಯ ಉತ್ಪನ್ನಗಳು ದೊರೆಯುವವರೆಗೂ ಇದರ ಪ್ರಭಾವ ವ್ಯಾಪಿಸಿದೆ.
ಉತ್ತಮ ಗುಣಮಟ್ಟದ ಉತ್ಪನ್ನಗಳು: ಕ್ಯಾಮರಾ ಕಣ್ಣು ಹೊಂದಿರುವ ಸ್ವಯಂಚಾಲಿತ ವ್ಯವಸ್ಥೆಗಳು ಉತ್ಪಾದನೆ ಹಂತದಲ್ಲಿ ಯಾವುದೇ ದೋಷಗಳಿದ್ದರೆ ಅವುಗಳನ್ನು ಹೆಚ್ಚು ನಿಖರವಾಗಿ ಪತ್ತೆ ಮಾಡುತ್ತವೆ. ಇದರಿಂದ ಗುಣಮಟ್ಟದಲ್ಲಿ ರಾಜಿಯಾಗುವುದು ತಪ್ಪುತ್ತದೆ.
ವೇಗವಾದ ಸೇವೆಗಳು: ವೇಗ 4ನೇ ಕೈಗಾರಿಕಾ ಕ್ರಾಂತಿಯ ಅತಿ ಪ್ರಮುಖ ಲಾಭ. ಯಾವುದೇ ಉತ್ಪನ್ನವಾದರೂ ಅತ್ಯಂತ ವೇಗವಾಗಿ ಉತ್ಪಾದನೆಯಾಗುತ್ತವೆ. ಅದೇ ದಿನ ಉತ್ಪಾದಿಸಿ ಅದೇ ದಿನ ಡೆಲಿವರಿಯೂ ಆಗಬಹುದು. ಇದು ಆನ್ ಡಿಮಾಂಡ್ ಉತ್ಪಾದನೆಗೂ ದಾರಿ ಮಾಡಿಕೊಡುತ್ತದೆ. ಗ್ರಾಹಕರಿಂದ ಬೇಡಿಕೆ ಬಂದಾಗ ಉತ್ಪಾದಿಸಿ ಡೆಲಿವರಿ ಮಾಡುವುದು.
ಸುರಕ್ಷಿತ ವಾತಾವರಣ: ರೋಬೋಟ್ಗಳು ಅಪಾಯಕಾರಿ ಅಥವಾ ಪುನರಾವರ್ತಿತ ಕೆಲಸಗಳನ್ನು ತೆಗೆದುಕೊಳ್ಳುತ್ತವೆ, ಇದರಿಂದ ಮಾನವ ಕಾರ್ಮಿಕರು ಅಪಾಯಕಾರಿ ಕೆಲಸಗಳಿಂದ ದೂರವಿರುತ್ತಾರೆ. ಉದ್ಯೋಗಗಳು ಕಡಿತವಾಗುವುದು ನಿಜವಾದರೂ ಬಹುತೇಕ ಇಲ್ಲಿನ ಉದ್ಯೋಗಿಗಳು ಮತ್ತು ಕಾರ್ಮಿಕರು ತಮ್ಮ ಪಾತ್ರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಕಾರ್ಮಿಕರು ವ್ಯವಸ್ಥೆಗಳನ್ನು ನಿರ್ವಹಿಸುತ್ತಾರೆ, ಡೇಟಾವನ್ನು ವಿಶ್ಲೇಷಿಸುತ್ತಾರೆ, ಸಮಸ್ಯೆಗಳನ್ನು ಪರಿಹರಿಸುತ್ತಾರೆ ಮತ್ತು ಬುದ್ಧಿವಂತ ಯಂತ್ರಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ವಿನ್ಯಾಸ, ಕೋಡಿಂಗ್, ನಿರ್ವಹಣೆ ಮತ್ತು ಡಿಜಿಟಲ್ ನಿರ್ವಹಣೆಯಲ್ಲಿಯೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ.
ಭಾರತದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಆಟೊಮೇಷನ್
ಭಾರತದ ಉತ್ಪಾದನೆ, ವಾಹನ, ಔಷಧ, ಜವಳಿ ಮತ್ತು ಸರಕು ಸಾಗಣೆ ವಲಯಗಳು ಗಮನಾರ್ಹ ವೇಗದಲ್ಲಿ ಆಟೊಮೇಷನ್ ಅಳವಡಿಸಿಕೊಳ್ಳುತ್ತಿವೆ. ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮಗಳು ಕಂಪನಿಗಳು ಆಧುನೀಕರಣಗೊಳ್ಳಲು ಪ್ರೋತ್ಸಾಹಿಸುತ್ತಿವೆ. ಸಣ್ಣ ಕೈಗಾರಿಕೆಗಳಿಗೆ ಕೈಗೆಟುಕುವ ದರದಲ್ಲಿ ಐಒಟಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೃಷಿಯೂ ಕೂಡ ಆಧುನಿಕ ವಿಧಾನಕ್ಕೆ ತೆರೆದುಕೊಳ್ಳುತ್ತಿದೆ. ಸ್ಮಾರ್ಟ್ ನೀರಾವರಿ, ಡ್ರೋನ್ ಆಧಾರಿತ ಮೇಲ್ವಿಚಾರಣೆ ಮತ್ತು ಎಐ ಚಾಲಿತ ಬೆಳೆ ವಿಶ್ಲೇಷಣೆಯ ಮೂಲಕ 4ನೇ ಕೈಗಾರಿಕಾ ಕ್ರಾಂತಿಗೆ ಕೃಷಿಯೂ ಸಾತ್ ನೀಡುತ್ತಿದೆ.
4ನೇ ಕೈಗಾರಿಕಾ ಕ್ರಾಂತಿಯ ಮೂಲ ತಂತ್ರಜ್ಞಾನ
ಇಂಡಸ್ಟ್ರಿ 4.0 ಪ್ರಮುಖವಾದ ಐದು ತಂತ್ರಜ್ಞಾನಗಳ ಮೇಲೆ ನಿಂತಿದೆ. ಎಐ ಅಥವಾ ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮೂಲಕ ನಡೆಯುವ ಆಟೊಮೇಷನ್, ಯಂತ್ರಗಳನ್ನು ಸ್ಮಾರ್ಟ್ ಆಗಿಸುವ ಇಂಟರ್ನೆಟ್ ಆಫ್ ಥಿಂಗ್ಸ್, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್ ತಂತ್ರಜ್ಞಾನಗಳು ಈ ಕ್ರಾಂತಿಯನ್ನು ಸಾಕಾರಗೊಳಿಸುತ್ತವೆ. ಉತ್ಪಾದನೆಯ ಮಾದರಿಗಳನ್ನು ಎಐ ವಿಶ್ಲೇಷಿಸುತ್ತದೆ ಮತ್ತು ಕಲಿಯುತ್ತದೆ, ಇದರ ಆಧಾರದ ಮೇಲೆ ಮುಂಬರುವ ವೈಫಲ್ಯಗಳನ್ನು ಊಹಿಸುತ್ತದೆ. ಅಲ್ಲದೆ, ಸ್ವಯಂಚಾಲಿತ ನಿರ್ಧಾರಗಳನ್ನು ತೆಗೆದುಕೊಂಡು ಇಂಥ ಸಮಸ್ಯೆಗಳನ್ನು ತಾನೇ ಸರಿಪಡಿಸುತ್ತದೆ. ಇನ್ನು, ರೋಬೋಟಿಕ್ಸ್ ತನಗೆ ಕೊಟ್ಟ ಕೆಲಸವನ್ನು ದಣಿವಿಲ್ಲದೆ ನಿರಂತರವಾಗಿ ಮಾಡುತ್ತದೆ. ಇದು ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ ಗುಣಮಟ್ಟವನ್ನೂ ಕಾಪಾಡುತ್ತದೆ. ಸೆನ್ಸರ್ಗಳು ತಾಪಮಾನದಿಂದ ಯಂತ್ರದ ಸುಸ್ಥಿತಿಯವರೆಗೆ ಎಲ್ಲವನ್ನೂ ಪತ್ತೆಹಚ್ಚುತ್ತವೆ. ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಿ ತಕ್ಷಣವೇ ಪ್ರಕ್ರಿಯೆಗೊಳಿಸಲು ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್ ನೆರವಾಗುತ್ತದೆ. ಭಾರಿ ಪ್ರಮಾಣದ ಡೇಟಾವನ್ನು ವಿಶ್ಲೇಷಿಸುವ ಬಿಗ್ ಡೇಟಾ ಅನಾಲಿಟಿಕ್ಸ್, ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಕ್ರಾಂತಿಯಿಂದ ಸಮಸ್ಯೆಗಳೇನು ಇಲ್ಲವೆಂದಲ್ಲ. ಲಕ್ಷಾಂತರ ಉದ್ಯೋಗಿಗಳು ಪ್ರಸ್ತುತವಾಗಿರಲು ಮರುಕೌಶಲ್ಯ ಹೊಂದಬೇಕಾಗುತ್ತದೆ. ಸಂಪರ್ಕ ಹೆಚ್ಚಿದಂತೆ ಸೈಬರ್ ದಾಳಿಗಳ ಅಪಾಯವೂ ಹೆಚ್ಚುತ್ತದೆ. ಇದರ ಸುರಕ್ಷತೆಗೆ ಭಾರಿ ಹೂಡಿಕೆಯ ಅಗತ್ಯವಿದೆ. ಸಣ್ಣ ಕಂಪನಿಗಳು ದೊಡ್ಡ ಹೂಡಿಕೆ ಮಾಡಿದರಷ್ಟೇ ಅಸ್ತಿತ್ವದಲ್ಲರಲು ಸಾಧ್ಯ. AI ಸ್ವಾಯತ್ತತೆಯನ್ನು ಗಳಿಸಿದಂತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವು ಪ್ರಮುಖವಾಗುತ್ತದೆ.
ಸ್ವಯಂ ನಿರ್ವಹಣೆಯಾಗುವ ಸ್ವಾಯತ್ತ ಕಾರ್ಖಾನೆಗಳು
ಮುಂದಿನ ದಶಕವು ಇನ್ನಷ್ಟು ಆಳವಾದ ಯಾಂತ್ರೀಕರಣವನ್ನು ಕಾಣಲಿದೆ. ಸಂಪೂರ್ಣ ಸ್ವಾಯತ್ತ ಕಾರ್ಖಾನೆಗಳು, AI-ನಿರ್ವಹಣೆಯ ಸರಬರಾಜು ಸರಪಳಿಗಳು, ವೈಯಕ್ತಿಕಗೊಳಿಸಿದ ಗ್ರಾಹಕ ಉತ್ಪನ್ನಗಳು ಮತ್ತು ಮಾನವ-ರೋಬೋ ಸಹಯೋಗಗಳು ಸಾಮಾನ್ಯವಾಗುತ್ತವೆ. ಇಂಡಸ್ಟ್ರಿ 4.0 ಕೇವಲ ಯಂತ್ರಗಳು ಚುರುಕಾಗಿ ಕೆಲಸ ಮಾಡುವ ಬಗ್ಗೆ ಮಾತ್ರವಲ್ಲ - ಇದು ಕೈಗಾರಿಕೆಗಳು ಹೆಚ್ಚು ಮಾನವ-ಕೇಂದ್ರಿತವಾಗುವುದಾಗಿರುತ್ತದೆ.
ಕ್ರಾಂತಿಗಳು ಸಮಾಜವನ್ನು ಮರುರೂಪಿಸುತ್ತವೆ. ಹಾಗೆ ಈ ಕ್ರಾಂತಿಯೂ ಅದಕ್ಕೆ ಭಿನ್ನವಾಗಿಲ್ಲ. 4ನೇ ಕೈಗಾರಿಕಾ ಕ್ರಾಂತಿಯಿಂದ ಸಮಾಜ ವಿಪರೀತ ಬದಲಾಗುತ್ತದೆ. ಹೆಚ್ಚಿನ ಉತ್ಪಾದಕತೆ ಮತ್ತು ಹೊಸ ಆರ್ಥಿಕ ಬೆಳವಣಿಗೆಯ ಭರವಸೆ ನೀಡುತ್ತದೆ. ಆದರೆ ಇದರ ನಿಜವಾದ ಯಶಸ್ಸು ಜನರು ಮತ್ತು ಸಂಸ್ಥೆಗಳು ಈ ಹೊಸ ವ್ಯವಸ್ಥೆಗೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಡಿಜಿಟಲ್ ಮತ್ತು ಭೌತಿಕ ಪ್ರಪಂಚಗಳ ನಡುವಿನ ಗೆರೆಗಳು ಮಸುಕಾಗುತ್ತಿರುವಂತೆ ಇದು ಬರೀ ಕ್ರಾಂತಿಯಲ್ಲ ಬದಲಿಗೆ ಮನು ಕುಲದ ರೂಪಾಂತರ ಎಂಬುದು ಸ್ಪಷ್ಟವಾಗುತ್ತಿದೆ.


