GenAI ಎಂದರೆ ನಿಮ್ಮ ಕೈಯ್ಯಲ್ಲಿರುವ ಮಂತ್ರ ದಂಡ
AI ಅನಂತ ಅವತಾರ – ಭಾಗ 3
ಡಾ.ರಮೇಶ್ ನಿಂಬೆಮರದಳ್ಳಿ
ನಾಯಿಗಳು ಕ್ಯಾಟ್ವಾಕ್ ಮಾಡುವ, ನೀರೇ ಹೆಣ್ಣಾಗಿ ಕುಣಿಯುವ, ಮರೆಯಾಗಿರುವ ಕನ್ನಡದ ಪ್ರಸಿದ್ಧ ನಟರು ಹಬ್ಬಗಳಲ್ಲಿ ಶುಭಾಶಯ ಹೇಳುವಂತಹ ವೀಡಿಯೊಗಳನ್ನು ನಾವೆಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ನೋಡಿದ್ದೇವೆ. ಆದರೆ, ಇಂಥ ಚಮತ್ಕಾರಗಳ ಹಿಂದೆ ಅಡಗಿರುವುದು ಜನರೇಟಿವ್ ಎಐ ಎನ್ನುವುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಇನ್ನೂ ಕೆಲವರಿಗೆ ಎಐ ಎಂದರೆ ChatGPT ಎಂಬಂತಾಗಿದೆ. ಅಷ್ಟರಮಟ್ಟಿಗೆ ಅದು ಜನಪ್ರಿಯ. ಆದರೆ, ಎಐ ಎಂಬ ವಿಶಾಲ ಸಮುದ್ರಕ್ಕೆ ಬಂದು ಸೇರುವ ಒಂದು ನದಿ ಈ ಚಾಟ್ಜಿಪಿಟಿ. ಈ ಹಿನ್ನೆಲೆಯಲ್ಲಿ ವಿಸ್ತೃತ ಎಐ ಮತ್ತು ಜನರೇಟಿವ್ ಎಐ ನಡುವಿನ ಭಿನ್ನತೆಯನ್ನು ಬಿಚ್ಚಿಡುತ್ತಾ, ಜನರೇಟಿವ್ ಎಐ ತಂತ್ರಜ್ಞಾನದ ಸಾಮರ್ಥ್ಯ, ಅಪಾಯ ಮತ್ತು ಅನಂತ ಸಾಧ್ಯತೆಗಳ ಮೇಲೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.
ಅಲೆಕ್ಸಾ, ಬೆಂಗಳೂರಿನಲ್ಲಿ ಇವತ್ತು ಹವಾಮಾನ ಹೇಗಿದೆ?/ಅಲೆಕ್ಸಾ, ನನಗೊಂದು ಜೋಕ್ ಹೇಳು/ಅಲೆಕ್ಸಾ, ಇಂದಿನ ಟಾಪ್ ಸುದ್ದಿಗಳೇನು?/ಅಲೆಕ್ಸಾ, ಸಂಗೀತ ಪ್ಲೇ ಮಾಡು/ಅಲೆಕ್ಸಾ, ಲೈಟ್ಗಳನ್ನು ಆಫ್ ಮಾಡು - ಇಂಥ ಹೇಳಿಕೆ ಅಥವಾ ಮಾತುಗಳನ್ನು ನಾವೆಲ್ಲ ಅಮೆಜಾನ್ ಸಾಧನಗಳಲ್ಲಿ ಬಹಳ ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ. ‘ಆಲ್ರೈಟ್..’ ಎಂದು ಅಲೆಕ್ಸಾ ನಮ್ಮೊಡನೆ ಮಾತಿಗಿಳಿಯುತ್ತದೆ. ಹೀಗೆ ನಮ್ಮೊಡನೆ ಸಂವಹನ ನಡೆಸಬಲ್ಲ ತಂತ್ರಜ್ಞಾನವೇ ಚಾಟ್ಬಾಟ್. ಆ ಚಾಟ್ಬಾಟ್ಗೆ ಬೆನ್ನೆಲುಬಾಗಿ ನಿಂತಿರುವ ತಂತ್ರಜ್ಞಾನವೇ ಜನರೇಟಿವ್ ಎಐ.
ಈಗಂತೂ AI ಅಥವಾ ಕೃತಕ ಬುದ್ಧಿಮತ್ತೆ ಬಗ್ಗೆ ಜನಸಾಮಾನ್ಯರಿಗೂ ಅರಿವಿದೆ. ಎಐ ಎಂದೊಡನೆ ಬಹುತೇಕರಿಗೆ ಥಟ್ಟನೆ ನೆನಪಾಗುವುದು ChatGPT. ಅಷ್ಟರಮಟ್ಟಿಗೆ ಎಐ ತಂತ್ರಜ್ಞಾನವನ್ನು ಜನಪ್ರಿಯಗೊಳಿಸಿದ ಮತ್ತು ಜನರ ಬಳಿ ಕೊಂಡೊಯ್ದ ಶ್ರೇಯಸ್ಸು ಚಾಟ್ಜಿಪಿಗೆ ಸಲ್ಲುತ್ತದೆ. ಆದರೆ, ಚಾಟ್ಜಿಪಿಟಿಯೇ ಎಐ ಎಂಬುದು ಹಲವರ ತಿಳಿವಳಿಕೆ. ವಾಸ್ತವ ಏನೆಂದರೆ, ಚಾಟ್ಜಿಪಿಟಿ ಎನ್ನುವುದು ಬೃಹತ್ ಆಲದಮರದಂತಹ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಒಂದು ರೆಂಬೆಯಷ್ಟೇ. ಎಂದರೆ, ಆ ತಂತ್ರಜ್ಞಾನದ ಒಂದು ಶಾಖೆ. ಅದನ್ನೇ ಜನರೇಟಿವ್ ಎಐ ಎಂದು ಕರೆಯಲಾಗುತ್ತದೆ.
ಸೃಷ್ಟಿಶೀಲತೆಗೆ ಹೊಸ ಹೆಸರು
ಜನರೇಟಿವ್ ಎಐ ಹೆಸರೇ ಹೇಳುವಂತೆ ಹೊಸದನ್ನು ಜನರೇಟ್ ಮಾಡಬಲ್ಲ ಎಂದರೆ ಸೃಷ್ಟಿಸಬಲ್ಲ ತಂತ್ರಜ್ಞಾನ. ಇದು ಕೃತಕ ಬುದ್ಧಿಮತ್ತೆ ಎಂಬ ವಿಶಾಲವಾದ ತಂತ್ರಜ್ಞಾನದ ಒಂದು ಅಂಗ. ತನ್ನ ಸೃಷ್ಟಿಶೀಲತೆಯಿಂದಾಗಿಯೇ ಇದು ವಿಶೇಷ ಗಮನ ಸೆಳೆದಿದೆ. ಚಿತ್ರ, ಪಠ್ಯ, ಧ್ವನಿ ಇಲ್ಲವೇ ಸಂಗೀತ ಮತ್ತು ವೀಡಿಯೊಗಳನ್ನು ಸೃಷ್ಟಿಸುವುದು ಇದರ ಸಾಮರ್ಥ್ಯ. ಇದು ಡೇಟಾದಲ್ಲಿನ ಮಾದರಿಗಳನ್ನು ಮತ್ತು ಮಾಹಿತಿಯನ್ನು ಆಧರಿಸಿ ಹೊಸ ರೀತಿಯ ಕಂಟೆಂಟ್ ಅಥವಾ ವಿಷಯವನ್ನು ಸೃಷ್ಟಿಸುತ್ತದೆ.
ಮನುಷ್ಯ ಬೌದ್ಧಿಕತೆಯ ಎಲ್ಲೆ ಮೀರುವಂತೆ ಸೃಷ್ಟಿಯಾಗಿರುವ ರಾಶಿಗಟ್ಟಲೆ ಲಕ್ಷಾಂತರ ಕೃತಿಗಳು, ಇಡೀ ವಿಶ್ವವನ್ನೇ ತಮ್ಮ ಕ್ಯಾನ್ವಾಸ್ನಲ್ಲಿ ಹಿಡಿದಿಟ್ಟಿರುವ ಚಿತ್ರಕಲೆಗಳು, ವಿಶ್ವದ ಮೂಲೆ ಮೂಲೆಯನ್ನೂ ಪ್ರತಿಫಲಿಸುವ ಚಿತ್ರಗಳು, ವಿಶ್ವದೆಲ್ಲೆಡೆ ಜನರನ್ನು ಮೋಡಿ ಮಾಡಿರುವ ಸಂಗೀತ, ಪಶು, ಪಕ್ಷಿ, ಪರಿಸರಾದಿಯಾಗಿ ಜಗತ್ತಿನ ವಿವಿಧ ರೀತಿಯ ಧ್ವನಿಗಳು, ಜನರ ಬದುಕೇ ಬಿಂಬವಾಗಿರುವ ಸಿನಿಮಾಗಳು – ಇಷ್ಟು ಅಗಾಧವಾದ ಮನುಷ್ಯ ಸೃಷ್ಟಿಗಳನ್ನು ವಿಶ್ಲೇಷಣೆ ಮಾಡುವ ಜನರೇಟಿವ್ ಎಐ ಅಲ್ಲಿನ ಮಾದರಿಗಳನ್ನು ಅರ್ಥ ಮಾಡಿಕೊಳ್ಳುತ್ತದೆ. ವಿವಿಧ ವಸ್ತು, ವಿಷಯ, ವ್ಯಕ್ತಿಗಳ ಬಣ್ಣ, ಆಕಾರ, ರಚನೆಯನ್ನು ಗ್ರಹಿಸುತ್ತದೆ. ಹೀಗೆ ಕಲಿತ ಬುದ್ಧಿಯಿಂದ ಹೊಸದಾಗಿ ಅದೇ ರೀತಿಯ ಚಿತ್ರ, ಸಂಗೀತ, ವೀಡಿಯೊ, ಕಲಾಕೃತಿಗಳನ್ನು ಸೃಷ್ಟಿಸುತ್ತದೆ.
ಮನುಷ್ಯ ಕಲಾತ್ಮಕತೆಯನ್ನೂ ಮೀರಿ...
ಜನರೇಟಿವ್ ಎಐನ ಸೃಜನಶೀಲತೆ ಮನುಷ್ಯರು ಸೃಷ್ಟಿಸುವ ಕಲಾತ್ಮಕತೆಗಷ್ಟೇ ನಿಲ್ಲುವುದಿಲ್ಲ. ಮನುಷ್ಯ ಸೃಷ್ಟಿಸಲು ವರ್ಷಗಳೇ ತಗುಲುವ, ಮನುಷ್ಯನಿಗೆ ಕಷ್ಟಸಾಧ್ಯವಿರುವ ಇಲ್ಲವೇ ಆತನಿಗೆ ಸಾಧ್ಯವೇ ಆಗದ್ದನ್ನೂ ಇದು ಸೆಕೆಂಡ್ಗಳಲ್ಲಿ ಸೃಷ್ಟಿಸುತ್ತದೆ. ಉದಾಹರಣೆಗೆ, ಒಂದು ಚಿತ್ರ ಬಿಡಿಸುವ ಎಐ, ಅದರ ನೂರಾರು ರೂಪಾಂತರಗಳನ್ನು ಕ್ಷಣದಲ್ಲೇ ಸೃಷ್ಟಿಸಬಹುದು. ಆದರಿದು ಮನುಷ್ಯನಿಗೆ ಸಾಧ್ಯವಿಲ್ಲ. ಲೈವ್ ಭಾಷಣವನ್ನು ನೂರಾರು ಭಾಷೆಗಳಿಗೆ ಏಕಕಾಲಕಕ್ಕೆ ಅನುವಾದ ಮಾಡಬಲ್ಲದು. ಆದರೆ ಮನುಷ್ಯನಿಗೆ ಇದು ನಿಲುಕದ ಮಾತು. ಒಬ್ಬ ವ್ಯಕ್ತಿ ಒಮ್ಮೆಗೆ ಒಬ್ಬರು ಅಥವಾ ಇಬ್ಬರ ಜೊತೆ ಮಾತ್ರ ಸಂಭಾಷಣೆ ನಡೆಸಬಹುದು. ಆದರೆ ಎಐ ಚಾಟ್ಬಾಟ್ ಒಟ್ಟಿಗೇ ಲಕ್ಷಾಂತರ ಜನರೊಂದಿಗೆ ಸಂಭಾಷಣೆ, ಸಂವಹನ ನಡೆಸುತ್ತಿರುತ್ತದೆ. ಇಂಥ ಅನಂತ ಸಾಧ್ಯತೆಗಳು ಜನರೇಟಿವ್ ಎಐಗೆ ಇವೆ.
ಮತ್ತೊಂದು ಉದಾಹರಣೆ, ಡಾಲ್-ಇ ಎಂಬ ಜನರೇಟಿವ್ ಎಐಗೆ ‘ಚಂದ್ರನ ಮೇಲೆ ಬಾಹ್ಯಾಕಾಶ ವಿಜ್ಞಾನಿಯ ಕುದುರೆ ಸವಾರಿ’ಯ ಚಿತ್ರ ರಚಿಸುವಂತೆ ಕೇಳಿದರೆ ಅದು ನಿಜವೇನೋ ಎಂಬಂತೆ ಚಿತ್ರ ರಚಿಸುತ್ತದೆ. ಇದನ್ನು ಸಾಧ್ಯವಾಗಿಸಲು ಅದು ಹಲವು ತಂತ್ರಗಳನ್ನು ಬಳಸುತ್ತದೆ. ತನ್ನ ಸ್ಮರಣೆಯಲ್ಲಿರುವ ಚಂದ್ರನ ಮೇಲ್ಮೈ, ಅದರ ವಾತಾವರಣ ಮತ್ತಿತರ ವಿವರಗಳು, ವಿವಿಧ ತಳಿಯ ಕುದುರೆಯ ನಾನಾ ಬಗೆಯ ಚಿತ್ರಗಳು, ಬಾಹ್ಯಾಕಾಶ ಯಾನಿ ಮತ್ತು ಅವರು ಧರಿಸುವ ಸೂಟ್ಗಳು ಹಾಗೂ ಬಾಹ್ಯಾಕಾಶ ಯಾನದ ವೈಜ್ಞಾನಿಕ ಅರಿವು – ಈ ಎಲ್ಲದರ ಜ್ಞಾನವನ್ನು ಕರತಲಾಮಲಕ ಮಾಡಿಕೊಂಡಿರುವ ಈ ಎಐ, ಇದೇ ಜ್ಞಾನದ ಆಧಾರದ ಮೇಲೆ ‘ಕುದುರೆ ಮೇಲೆ ಕುಳಿತು ಚಂದ್ರನ ಮೇಲೆ ಸವಾರಿ ಮಾಡುವ ಬಾಹ್ಯಾಕಾಶ ವಿಜ್ಞಾನಿಯ ಚಿತ್ರ’ವನ್ನು ರಚಿಸುತ್ತದೆ. ಹೀಗಾಗಿ ಮನುಷ್ಯ ಸೃಜನಶೀಲತೆಯ ವಿಸ್ತರಣೆಯೇ ಈ ಜನರೇಟಿವ್ ಎಐ. ಇದು ಕಲಾಕಾರನೂ ಹೌದು, ಸಂಗೀತಗಾರನೂ ಹೌದು. ಸಾಹಿತಿಯೂ, ಸಂಶೋಧಕನೂ ಹೌದು, ಶಿಲ್ಪಕಲೆಯೂ ಸಾಧ್ಯ. ಹಾಡು ಹಾಡಬಲ್ಲದು, ಸಂಗೀತ ಸಂಯೋಜಿಸಬಲ್ಲದು. ದೃಶ್ಯಗಳನ್ನು ಸೃಷ್ಟಿಸಿ, ಸಿನಿಮಾ ನಿರ್ದೇಶಕನಾಗಿಯೂ ವರ್ತಿಸಬಲ್ಲದು.
ಕಲೆ-ಸಾಹಿತ್ಯ-ಸಂಗೀತದಿಂದ ಸಿನಿಮಾವರೆಗೆ
ಜನರೇಟಿವ್ ಎಐ ವಿವಿಧ ಕ್ಷೇತ್ರಗಳಲ್ಲಿ ಮತ್ತು ಸೇವೆಗಳಲ್ಲಿ ಬಳಕೆಯಾಗುತ್ತಿದೆ. ಇದು ಅಲೆಕ್ಸಾ ರೀತಿಯ ಚಾಟ್ಬಾಟ್ಗಳ ಮೂಲಕ ಗ್ರಾಹಕ ಸೇವೆಯಲ್ಲಿ ಶುರುವಾಗಿ ಈಗ ವಿವಿಧ ಕ್ಷೇತ್ರಗಳಿಗೆ ವಿಸ್ತರಣೆಯಾಗಿದೆ. ದಶಕಗಳಿಂದ ಈ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರೂ ChatGPT ಬಿಡುಗಡೆ ಬಳಿಕ ಇದರ ಅಭಿವೃದ್ಧಿಗೆ ವೇಗ ದೊರೆಯಿತು.
· ಚಾಟ್ಬಾಟ್: ಜನರೇಟಿವ್ ಎಐ ತಂತ್ರಜ್ಞಾನದ ಉತ್ಪನ್ನವಾಗಿರುವ ಚಾಟ್ಬಾಟ್ಗಳು ಮನುಷ್ಯರೊದಿಗೆ ಸಂವಾದ ನಡೆಸುತ್ತವೆ. ಇವು ಗ್ರಾಹಕ ಸೇವೆ, ತಾಂತ್ರಿಕ ಬೆಂಬಲ ನೀಡುವಲ್ಲಿ ಬಳಕೆಯಾಗುತ್ತಿವೆ. ವೈಯಕ್ತಿಕ ಸಹಾಯಕರಂತೆಯೂ ಬಳಸಬಹುದು. ChatGPT, ಜೆಮಿನಿ, ಅಲೆಕ್ಸಾ ಇದಕ್ಕೆ ಉಹಾರಣೆ.
· ಚಿತ್ರ, ವೀಡಿಯೊ ಸೃಷ್ಟಿ: ಮೊದಲೇ ಹೇಳಿರುವಂತೆ ಜನರೇಟಿವ್ ಎಐ ಮಾದರಿಗಳು ಹೊಸ ಚಿತ್ರ, ಮತ್ತು ವೀಡಿಯೊಗಳನ್ನು ಸೃಷ್ಟಿಸಬಲ್ಲವು. ಇದರಿಂದ ಚಿತ್ರಕಲೆ, ಶಿಲ್ಪಕಲೆ, ಕಟ್ಟಡಗಳ ವಿನ್ಯಾಸ ರಚನೆಯಲ್ಲಿ ಬಳಸಬಹುದು. ಆನಿಮೇಷನ್, ಸಿನಿಮಾ, ಡಾಕ್ಯುಮೆಂಟರಿಗಳ ನಿರ್ಮಾಣ, ಪೂರ್ತಿ ವೀಡಿಯೊ ಗೇಮ್ ಅನ್ನು ಜನರೇಟಿವ್ ಎಐ ಬಳಸಿ ನಿರ್ಮಿಸಬಹುದು. DALL-E, ಮಿಡ್ಜರ್ನಿ, ಸ್ಟೇಬಲ್ ಡಿಫ್ಯೂಷನ್ ಇದಕ್ಕೆ ಉಹಾಹರಣೆ.
· ಧ್ವನಿ ಹಾಗೂ ಸಂಗೀತ ಸೃಷ್ಟಿ: ಮಾತನ್ನು ಧ್ವನಿಯಾಗಿ ಪರಿವರ್ತಿಸುವುದು, ಸಂಗೀತ ಸಂಯೋಜನೆ, ಹೊಸ ಸಂಗೀತ ಸೃಷ್ಟಿ, ವಿವಿಧ ಧ್ವನಿಗಳ ಸೃಷ್ಟಿಯಲ್ಲೂ ಇವುಗಳನ್ನು ಬಳಸಬಹುದು. ಯಾವುದೇ ವ್ಯಕ್ತಿಯ ಧ್ವನಿಯನ್ನು ಮರುಸೃಷ್ಟಿಸಬಹುದು. ಡೀಪ್ಫೇಕ್ ವೀಡಿಯೋಗಳಲ್ಲಿ ಬಳಕೆಯಾಗುತ್ತಿರುವುದು ಇದೇ ತಂತ್ರಜ್ಞಾನ. Jukedeck, Amper Music ಎಂಬ ಎಐಗಳು ಈ ಕೆಲಸ ಮಾಡುತ್ತವೆ.
· ಬರವಣಿಗೆ: ಚಾಟ್ ಮಾಡುವುದರಿಂದ ಆರಂಭವಾದ ಪಠ್ಯ ಸೃಷ್ಟಿ ಇದೀಗ ವಿಸ್ತಾರಗೊಂಡಿದೆ. ಈಗ ಜನರೇಟಿವ್ ಎಐ ಲೇಖನ, ಕಥೆ, ಕವಿತೆಗಳನ್ನು ರಚಿಸಬಲ್ಲದು. ಅಂಕಿ ಅಂಶಗಳನ್ನು ಆಧರಿಸಿ ವರದಿಗಳನ್ನು ರಚಿಸಬಲ್ಲದು, ವಿಶ್ಲೇಷಿಸಬಲ್ಲದು. ಸುದ್ದಿ ಮತ್ತು ವಿಶ್ಲೇಷಣೆಗಳನ್ನು ಬರೆಯಬಲ್ಲದು. ಹೀಗಾಗಿ ಹಲವು ಜಾಗತಿಕ ಮಾಧ್ಯಮ ಸಂಸ್ಥೆಗಳು ಈಗಾಗಲೇ ಇದರ ಸೇವೆ ಪಡೆಯುತ್ತಿವೆ. GPT-3, GPT-4 ಮತ್ತಿತರ ಎಐ ಮಾಡೆಲ್ಗಳು ಈ ಕೆಲಸ ಮಾಡುತ್ತವೆ.
· ವೈದ್ಯಕೀಯ: ವೈದ್ಯಕೀಯ ಚಿತ್ರಗಳ ವಿಶ್ಲೇಷಣೆ, ಹೊಸ ಔಷಧಿಯ ಆವಿಷ್ಕಾರ, ಮತ್ತು ರೋಗ ನಿರ್ಣಯದಲ್ಲಿ ಇದು ವೈದ್ಯರು ಮತ್ತು ಸಂಶೋಧಕರಿಗೆ ನೆರವಾಗುತ್ತಿದೆ. ಕೋವಿಡ್ ಸಮಯದಲ್ಲಿ ಎಕ್ಸರೇ ಆದರಿಸಿ ಕೊರೊನಾ ಸೋಂಕಿನ ಪತ್ತೆಗೆ ಬಳಸಿದ್ದು ಇದೇ ತಂತ್ರಜ್ಞಾನ. ಈಗ ಎಂಆರ್ಐ, ಸಿ.ಟಿ ಸ್ಕ್ಯಾನ್ ಮತ್ತು ರಕ್ತದ ಮಾದರಿಗಳನ್ನು ಆಧರಿಸಿ ಕ್ಯಾನ್ಸರ್ನಂತ ಮಾರಕ ರೋಗ ಪತ್ತೆಗೂ ಇದನ್ನು ಬಳಸಿಕೊಳ್ಳಲಾಗುತ್ತಿದೆ. IBM Watson Health ಈ ಸೇವೆಯಲ್ಲಿ ತೊಡಗಿದೆ.
· ವ್ಯವಸಾಯ: ಜನರೇಟಿವ್ ಎಐ ವ್ಯವಸಾಯ ಕ್ಷೇತ್ರದಲ್ಲಿ ಬೆಳೆ ಉತ್ಪಾದನೆ, ಕೀಟ ನಿಯಂತ್ರಣ, ಮತ್ತು ಮಣ್ಣಿನ ಗುಣಮಟ್ಟ ವಿಶ್ಲೇಷಣೆಯಲ್ಲಿಯೂ ಸಹಾಯ ಮಾಡುತ್ತಿದೆ. ಇದು ರೈತರಿಗೆ ಸಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುತ್ತಿದೆ. FarmWise, Blue River Technology ಎಂಬ ಎಐ ಮಾಡೆಲ್ಗಳು ಈ ಕ್ಷೇತ್ರದಲ್ಲಿ ತೊಡಗಿಕೊಂಡಿವೆ.
· ಶಿಕ್ಷಣ: ಜನರೇಟಿವ್ ಎಐ ವಿದ್ಯಾರ್ಥಿಗಳಿಗೆ ವೈಯಕ್ತೀಕರಿಸಿದ ಶಿಕ್ಷಣ ನೀಡಲು ಅಂದರೆ ಪ್ರತಿ ವಿದ್ಯಾರ್ಥಿಯ ಅಗತ್ಯ ಮತ್ತು ಕಲಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ಒದಗಿಸಲು ಇದು ಸಹಾಯಕ. ಹೊಸ ಭಾಷಾ ಕಲಿಕೆ ಮತ್ತು ಸಂಶೋಧನೆಯನ್ನು ಇದು ಸರಳೀಕರಿಸುತ್ತದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಇದನ್ನು ಬಳಸಿಕೊಳ್ಳುತ್ತಿವೆ. ಆನ್ಲೈನ್ ಕಲಿಕೆಯಲ್ಲಿ ಖಾನ್ ಅಕಾಡೆಮಿ, ಹೊಸ ಭಾಷೆ ಕಲಿಸುವ Duolingo ಈ ತಂತ್ರಜ್ಞಾನ ಬಳಸುತ್ತಿವೆ.
ಕಿಡಿಗೇಡಿಗಳಿಗಿದು ಬ್ರಹ್ಮಾಸ್ತ್ರ
ಅಪಾರ ಸಾಮರ್ಥ್ಯ ಹೊಂದಿರುವ ಜನರೇಟಿವ್ ಎಐ ಜನರ ಉದ್ಯೋಗ ಕಸಿಯುವಲ್ಲಿ ಮುಂಚೂಣಿಯಲ್ಲಿರುತ್ತದೆ. ಗ್ರಾಹಕ ಸೇವೆ, ಪತ್ರಿಕೋದ್ಯಮ, ಮನರಂಜನಾ ಕ್ಷೇತ್ರದಲ್ಲಿ ಸಾಕಷ್ಟು ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತೆ ಮಾಡುತ್ತದೆ. ಈ ತಂತ್ರಜ್ಞಾನ ಬಳಸಿ ಸೃಷ್ಟಿಸುವ ನಕಲಿ ಚಿತ್ರ, ವೀಡಿಯೊ, ಯಾರದ್ದೋ ಧ್ವನಿಗೆ ಯಾರದ್ದೋ ಮುಖ – ಇಂಥ ಅಪಸವ್ಯಗಳು ಹೆಚ್ಚುತ್ತವೆ. ದುಷ್ಕೃತ್ಯ ಮಾಡುವ ಕಿಡಿಗೇಡಿಗಳಿಗೆ ಇದು ಬ್ರಹ್ಮಾಸ್ತ್ರ ಇದ್ದಂತೆ. ಒಬ್ಬ ವ್ಯಕ್ತಿ, ಸಂಸ್ಥೆ, ಸಮುದಾಯದ ವಿರುದ್ಧ ಅಪಪ್ರಚಾರ ಮಾಡಲು ಬಯಸುವರಿಗೆ ಇದು ಮಾರಕಾಸ್ತ್ರವೇ ಸರಿ. ಸೊಷಿಯಲ್ ಮೀಡಿಯಾಗಳಲ್ಲಿ ನಕಲಿ ಬದುಕು, ನಕಲಿ ಆಡಂಬರ, ನಕಲಿ ಪ್ರೀತಿಯ ಕಂಡು ಅಸಲಿ ಎಂದೇ ಭಾವಿಸಿ ಮರುಗುವ, ಕೊರಗುವ, ಕಕ್ಕುಲಾತಿ ತೋರುವ ಜನರಿಗೆ ಜನರೇಟಿವ್ ಎಐ ಸೃಷ್ಟಿಸುವ ದಾರಿತಪ್ಪಿಸುವ ಕಂಟೆಂಟ್ ಇನ್ನಷ್ಟು ದಾರಿ ತಪ್ಪಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಇರಲಿ, ಇದೆಲ್ಲಾ ಎಲ್ಲಾ ತಂತ್ರಜ್ಞಾನಕ್ಕೂ ಇದ್ದಿದ್ದೇ. ರೋಗ ನಿವಾರಣೆಗೆ ನುಂಗುವ ಮಾತ್ರೆಯಿಂದ ಸೈಡ್ ಎಫೆಕ್ಟ್ ಮಾಮೂಲಿ ಅಲ್ವಾ? ಇದು ಹೊಸ ರೋಗಕ್ಕೆ ದಾರಿ ಮಾಡಿಕೊಡದೆ ಸೈಡ್ ಎಫೆಕ್ಟ್ ಮಾತ್ರವೇ ಆಗುಳಿಯಲಿ ಎಂಬುದೇ ನಮ್ಮ ಆಶಯ.
ಜಗತ್ತಿನ ಟಾಪ್ ಎಐ ಮಾಡೆಲ್ಗಳು
· GPT-4o - ಓಪನ್ಎಐ
· Claude 3.5 Sonnet - ಆಂಥ್ರೊಪಿಕ್
· Gemini 2.0 - ಗೂಗಲ್ ಡೀಪ್ಮೈಂಡ್
· Grok 3 - xAI (ಇಲಾನ್ ಮಸ್ಕ್ ಕಂಪನಿ)
· Qwen 2.5-Max - ಆಲಿಬಾಬಾ
· Llama 3.1 - ಮೆಟಾ
· DeepSeek-V3 - ಡೀಪ್ಸೀಕ್
· Mistral 7B - ಮಿಸ್ಟ್ರಾಲ್ ಎಐ
· Watsonx - IBM
· DALL-E - ಓಪನ್ಎಐ



