ಕೃಷಿಗೆ ವರದಾನ, ದೇಶ ರಕ್ಷಣೆಗೆ ಹೊಸ ಅಸ್ತ್ರ
AI ಅನಂತ ಅವತಾರ – ಭಾಗ 13
ಡಾ.ರಮೇಶ್ ನಿಂಬೆಮರದಳ್ಳಿ
ಸ್ಮಾರ್ಟ್ ಕೃಷಿಯಿಂದ ನಗರ ಯೋಜನೆವರೆಗೆ ಬಿಎಫ್ಎಸ್ ವರದಾನ
ಬರಗಾಲ, ಪ್ರವಾಹದ ಅನಾಹುತ ತಡೆಗೂ ಸಹಕಾರಿ
ಪ್ರವಾಸೋದ್ಯಮಕ್ಕೆ ಉತ್ತೇಜನ, ಇಂಧನ ಕ್ಷೇತ್ರಕ್ಕೂ ಎನರ್ಜಿ
ಡೇಟಾ ಆಧರಿತ ಸ್ಮಾರ್ಟ್ ಗವರ್ನೆಸ್ಗೆ ದಾರಿ
“ಭಾರತದ ಕೃಷಿ ಮಾನ್ಸೂನ್ ಮಾರುತಗಳೊಂದಿಗೆ ಆಡುವ ಜೂಜು” ಎನ್ನುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮಾತು. ಇದು ಮಾತಲ್ಲ, ವಾಸ್ತವ. ಭಾರತದ ಬೆನ್ನೆಲುಬಾಗಿರುವ ಕೃಷಿ ಇಂದಿಗೂ ಮಳೆಯನ್ನು ಬಹುವಾಗಿ ಅವಲಂಬಿಸಿದೆ. ದೇಶದ ಜಿಡಿಪಿಗೆ ಕೃಷಿಯ ಕೊಡುಗೆ 19% ಇದ್ದರೂ ದೇಶದ ಅರ್ಧದಷ್ಟು ಜನರು ಬೇಸಾಯವನ್ನೇ ನಂಬಿ ಬುದುಕುತ್ತಿದ್ದಾರೆ. ಕೃಷಿಯಾಧಾರಿತ ಕೈಗಾರಿಕೆ, ಸರಕು ಸಾಗಣೆ, ಮೂಲಸೌಕರ್ಯ ನಿರ್ಮಾಣ, ಪ್ರವಾಸೋದ್ಯಮ, ಆತಿಥ್ಯ ಉದ್ಯಮ, ನಗರ ಯೋಜನೆ, ಆಹಾರ ಹಣದುಬ್ಬರ – ಇವೆಲ್ಲವೂ ಮಳೆಯಿಂದ ನಿಯಂತ್ರಣಗೊಳ್ಳುವ ಕ್ಷೇತ್ರಗಳು. ಇಷ್ಟೇ ಏಕೆ ದೇಶದ ಭದ್ರತೆಯೂ ಹವಾಮಾನ ವೈಪರೀತ್ಯದ ಮೇಲೆ ಅಬಲಂಬಿತವಾಗಿದೆ. ಈ ಎಲ್ಲದರ ಮೇಲೂ ಪಾಸಿಟಿವ್ ಪರಿಣಾಮ ಬೀರುವ ವಿಶ್ವಾಸವನ್ನು ‘ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್’ ನೀಡಿದೆ.
ರೈತರ ಬದುಕು ಎಷ್ಟು ಅನಿಶ್ಚಿತ ಎನ್ನುವುದನ್ನು ಹೇಳಬೇಕಾಗಿಲ್ಲ. ಮಳೆಯನ್ನೇ ನಂಬಿರುವ ಅವರ ಬೇಸಾಯವಂತೂ ಇನ್ನೂ ಅತಂತ್ರ. ಮಳೆಯ ಪ್ರಮಾಣ ಮತ್ತು ಸಮಯದ ಸರಿಯಾದ ಅಂದಾಜು ಇಲ್ಲದೆ ರೈತರು ನಷ್ಟ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಮಳೆ ಬರುವ ನಿರೀಕ್ಷೆಯಲ್ಲಿ ಬಿತ್ತಿ ಬಂದಾಗ ಮಳೆಯೇ ಬಾರದೆ ಬಿತ್ತಿದ ಬೀಜವೆಲ್ಲಾ ಮಣ್ಣಾಗಿ ಹೋಗುತ್ತದೆ. ಮಳೆ ಬಂದು ಬಿತ್ತನೆಗೆ ಭೂಮಿ ಹದವಾಗಿದೆ ಎಂದು ಖುಷಿಯಿಂದಲೇ ಬಿತ್ತನೆ ಮಾಡಿ ಮನೆ ಕಡೆಗೆ ಹೆಜ್ಜೆ ಹಾಕುವಾಗ ಬಿರುಸಾಗಿ ಸುರಿವ ಮಳೆ ಬಿತ್ತಿದ ಬೀಜವನ್ನು ನೀರಲ್ಲಿ ಕೊಚ್ಚಿ ಹೊತ್ತೊಯ್ಯುತ್ತದೆ. ಬೆಳೆದು ನಿಂತಿರುವ ಭತ್ತ, ಗೋದಿ, ರಾಗಿ ಮತ್ತಿತರ ಬೆಳೆಯನ್ನು ಇನ್ನೇನು ಕಟಾವು ಮಾಡುಷ್ಟರಲ್ಲಿ ಭಾರಿ ಮಳೆ ಸುರಿದು ಕೈಗೆ ಬಂದ ಬೆಳೆ ನೀರಿನಲ್ಲಿ ಮುಳುಗಿ ಹೋಗುತ್ತದೆ. ಮಳೆ ಬರುವ ನಂಬಿಕೆ ಕಳೆದುಹೋಗಿ ರಾತ್ರಿ-ಹಗಲು ನಿದ್ದೆ ಕೆಟ್ಟು ಬೆಳೆಗೆ ನೀರು ಹಾಯಿಸಿ ಬಂದ ಮರುಕ್ಷಣವೇ ಭಾರಿ ಮಳೆ ಸುರಿದು ಪಟ್ಟ ಶ್ರಮವೆಲ್ಲಾ ನೀರಿನಲ್ಲಿ ಕರಗಿ ಹೋಗುತ್ತದೆ. ಕಟಾವು ಮಾಡಿ ಒಣಗಲು ಬಿಟ್ಟ ಫಸಲು ದಿಢೀರನೆ ಸುರಿವ ಮಳೆಯಿಂದ ಹೊಲದಲ್ಲೇ ಕೊಳೆಯುತ್ತದೆ. ಇನ್ನೂ ಕೆಲವೊಮ್ಮೆ ಕಟಾವಾಗಿ, ಒಕ್ಕಣೆ ಮುಗಿದು ಚೀಲಕ್ಕೆ ತುಂಬುವ ಹೊತ್ತಲ್ಲಿ ಫಸಲು ನೀರು ಪಾಲಾಗುವುದಿದೆ – ಇಂತಹ ಹತ್ತಾರು ಅನಿಶ್ಚಿತತೆಯನ್ನು ರೈತರು ಎದುರಿಸುತ್ತಾರೆ. ಮಳೆಯನ್ನು ನಿಖರವಾಗಿ ಅಂದಾಜು ಮಾಡಲಾಗದ ಸ್ಥಿತಿಯೇ ಇದಕ್ಕೆಲ್ಲಾ ಕಾರಣ. ಆದರೆ ಈಗ ಜಾರಿಗೆ ಬಂದಿರುವ ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ ಎಂಬ ಹೊಸ ಹವಾಮಾನ ಮುನ್ಸೂಚನಾ ವ್ಯವಸ್ಥೆ ದೇಶದ 14 ಕೋಟಿ ರೈತರಿಗೆ ಆಶಾಕಿರಣವಾಗಿದೆ. ಕೆಲವೇ ಗಂಟೆಗಳಲ್ಲಿ ಮಳೆಯ ಮುನ್ಸೂಚನೆಯನ್ನು ನಿಖರವಾಗಿ ನೀಡುವ ಮೂಲಕ ರೈತರಿಗೆ ನೆರವಾಗಲಿದೆ. ಒಂದು ಅಂದಾಜಿನ ಪ್ರಕಾರ ಈ ಹೊಸ ಹವಾಮಾನ ಮುನ್ಸೂಚನಾ ವ್ಯವಸ್ಥೆಯಿಂದ ದೇಶದಲ್ಲಿ 15% ಇಳುವರಿ ಹೆಚ್ಚಾಗುತ್ತದೆ.
ಸ್ಮಾರ್ಟ್ ಕೃಷಿಗೆ ರಿಯಲ್ಟೈಮ್ ಡೇಟಾ
ಇದರ ಜೊತೆಗೆ, ಭಾರತದಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವ ಎಐ ಆಧಾರಿತ ಸ್ಮಾರ್ಟ್ ಕೃಷಿಗೆ ನಿಖರವಾದ ಡೇಟಾ ಅತಿ ಮುಖ್ಯ. ಬೇಸಾಯದ ವಿವಿಧ ಹಂತಗಳಲ್ಲಿ, ಹೊಲಗಳಲ್ಲಿ ಅಳವಡಿಸಿರುವ ವಿವಿಧ ಸೆನ್ಸರ್ಗಳಿಗೆ ರಿಯಲ್ಟೈಮ್ನಲ್ಲಿ ಡೇಟಾ ಲಭ್ಯವಾಗಬೇಕು. ಉದಾಹರಣೆಗೆ ಸ್ವಯಂಚಾಲಿತವಾಗಿ ನೀರು ಹಾಯಿಸುವ ಎಐ ವ್ಯವಸ್ಥೆಗೆ ಮಣ್ಣಿನ ತೇವಾಂಶದ ಮಾಹಿತಿ, ವಾತಾವರಣದಲ್ಲಿರುವ ತೇವಾಂಶ, ಮಳೆಯ ಮುನ್ಸೂಚನೆಯ ಮಾಹಿತಿ ಲಭ್ಯವಾಗಬೇಕು. ಈ ಎಲ್ಲಾ ಮಾಹಿತಿಯನ್ನು ಸಂಸ್ಕರಿಸಿ ಬೆಳೆಗೆ ನೀರು ಹಾಯಿಸುವ ಪ್ರಮಾಣ ಮತ್ತು ಸಮಯವನ್ನು ಅದು ನಿರ್ಧರಿಸುತ್ತದೆ. ಈ ಸ್ಮಾರ್ಟ್ ಫಾರ್ಮಿಂಗ್ ಪರಿಕರಗಳೆಲ್ಲ ಕ್ಲೌಡ್ನೊಂದಿಗೆ ಸಂಪರ್ಕಗೊಂಡಿರುತ್ತವೆ. ಆ ಕ್ಲೌಡ್ ಸೇವಾದಾರರು ಬಿಎಫ್ಎಸ್ನೊಂದಿಗೆ ಸಂಪರ್ಕಗೊಂಡಿದ್ದು, ನಿರಂತರವಾಗಿ ಹವಾಮಾನದ ಮಾಹಿತಿ ಪಡೆಯುತ್ತಾರೆ. ಒಟ್ಟಾರೆ ದೇಶದಲ್ಲಿ ಎಐ ಆಧಾರಿತ ಕೃಷಿ ವ್ಯಾಪಕಗೊಳ್ಳಬೇಕಾದರೆ, ಯಶಸ್ವಿಯಾಗಬೇಕಾದರೆ ನಿಖರ ಹವಾಮಾನ ಮುನ್ಸೂಚನಾ ವ್ಯವಸ್ಥೆ ಅತ್ಯಗತ್ಯವಾಗಿ ಬೇಕು. ಆ ಅಗತ್ಯವನ್ನು ಹೊಸ ವ್ಯವಸ್ಥೆ ಪೂರೈಸುತ್ತದೆ.
ಬರಗಾಲ ಎದುರಿಸಲು ನೆರವು
ಬಿಎಫ್ಎಸ್ ಮೂಲಕ ಹೈಪರ್ ಲೋಕಲ್ ಹವಾಮಾನ ಮುನ್ಸೂಚನೆಯಿಂದ ಪ್ರವಾಹ, ಚಂಡಮಾರುತಗಳಿಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಇದರಿಂದ ಜನ, ಜಾನುವಾರುಗಳ ರಕ್ಷಣೆಯಲ್ಲದೆ ಆಸ್ತಿ ಪಾಸ್ತಿಗಳ ರಕ್ಷಣೆಯೂ ಸಾಧ್ಯವಾಗುತ್ತದೆ. 2024 ರಲ್ಲಿ, ಅಕಾಲಿಕ ಮಳೆಯಿಂದಾಗಿ ದೇಶದ ರೈತರು ಅಂದಾಜು 17 ಸಾವಿರ ಕೋಟಿ ರೂಪಾಯಿಯಷ್ಟು ಬೆಳೆ ನಷ್ಟ ಅನುಭವಿಸಿದ್ದರು. BFS ಮೂಲಕ ನೀಡುವ ಆರಂಭಿಕ ಎಚ್ಚರಿಕೆಗಳು ಈ ನಷ್ಟವನ್ನು ಕಡಿಮೆ ಮಾಡಬಹುದು. ಸಾಕಷ್ಟು ಮಳೆ ಬರುತ್ತದೆ ಇಲ್ಲವೇ ಬರುವುದಿಲ್ಲ ಎಂಬ ನಿಖರವಾದ ಮಾಹಿತಿಯಿದ್ದರೆ ಸಣ್ಣ ರೈತರು ಅನಗತ್ಯವಾಗಿ ಬೆಳೆ ನಷ್ಟ ಮಾಡಿಕೊಂಡು ಸಾಲದ ಹೊರೆ ಹೊರುವುದನ್ನು ತಪ್ಪಿಸುತ್ತದೆ.
ಮಳೆಯೇ ಬಾರದ ಸ್ಥಿತಿ ಎದುರಾದಾಗ ಮೊದಲೇ ಎಚ್ಚರಿಸಿ ಜನರು ಮತ್ತು ಸರಕಾರಿ ವ್ಯವಸ್ಥೆ ಬರಗಾಲಕ್ಕೆ ಸಜ್ಜಾಗುವಂತೆ ಮಾಡಬಹುದು. ಇದು ಸಾಕಷ್ಟು ಪೂರ್ವಭಾವಿಯಾಗಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸಹಾಯಕವಾಗುತ್ತದೆ.
ಇಂಧನ ಕ್ಷೇತ್ರಕ್ಕೂ ಹೊಸ ಎನರ್ಜಿ
ಹೊಸ ಹವಾಮಾನ ಮುನ್ಸೂಚನೆ ಕೈಗಾರಿಕೆಗಳಿಗೂ ಅನುಕೂಲಕರವಾಗಿದೆ. ಭಾರತದ ಒಟ್ಟು ವಿದ್ಯುತ್ ಉತ್ಪಾದನೆಗೆ 10% ಕೊಡುಗೆ ನೀಡುವ ನವೀಕರಿಸಬಹುದಾದ ಇಂಧನ ಕಂಪನಿಗಳಿಗೆ ಗಾಳಿ ಮತ್ತು ಬಿಸಿಲು ಕುರಿತ ನಿಖರತೆ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ. 51,300 ಕೋಟಿ ರೂ. ವಹಿವಾಟು ಹೊಂದಿರುವ ನಿರ್ಮಾಣ ಕ್ಷೇತ್ರಕ್ಕೆ ಬಿರುಗಾಳಿಯೇ ಶತೃವಾಗಿದೆ. ಬಿರುಗಾಳಿ ವೇಗ ಮತ್ತು ದಿಕ್ಕಿನ ಸ್ಪಷ್ಟತೆ ಇದ್ದರೆ ಯೋಜನೆಗಳನ್ನು ಹೆಚ್ಚಿನ ವಿಳಂಬವಿಲ್ಲದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬಹುದು. ವಿಳಂಬವಿಲ್ಲದೆ ಯೋಜನೆಗಳು ಪೂರ್ಣಗೊಳ್ಳುವುದರಿಂದ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು.
ಅಪಾಯಕ್ಕೆ ಸಿಲುಕುವ ಪ್ರವಾಸಿಗರಿಗೆ ನೆರವು
ವಾಯುಯಾನ, ರೈಲ್ವೆ ಮತ್ತು ಪ್ರವಾಸೋದ್ಯಮದಂತಹ ಪ್ರಯಾಣಿಕ ಕೇಂದ್ರಿತ ಕ್ಷೇತ್ರಗಳು ಹೊಸ ವ್ಯವಸ್ಥೆಯ ನಿಖರತೆಯಿಂದ ಲಾಭ ಪಡೆಯುತ್ತವೆ. ಮಂಜಿನ ಕಾರಣದಿಂದಾಗಿ ಉಂಟಾದ ವಿಳಂಬಗಳಿಂದ 2024 ರಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಸುಮಾರು 16,600 ಕೋಟಿ ರೂ. ನಷ್ಟ ಉಂಟಾಗಿತ್ತು. ನಿಖರವಾದ ಹವಾಮಾನ ಡೇಟಾ ಲಭ್ಯತೆ ಇದ್ದರೆ ಯೋಜಿತ ಪ್ರಯಾಣಗಳ ಮೂಲಕ ಅಡಚಣೆಗಳನ್ನು ಕಡಿಮೆಗೊಳಿಸಿ, ಜನರ ಪ್ರಯಾಣವನ್ನು ಸುರಕ್ಷಿತಗೊಳಿಸಬಹುದು. ವಾರ್ಷಿಕವಾಗಿ 2.5 ಲಕ್ಷ ಕೋಟಿ ರೂಗಳಷ್ಟು ವಹಿವಾಟುವ ನಡೆಸುವ ಪ್ರವಾಸೋದ್ಯಮಕ್ಕೆ ಅನಿರೀಕ್ಷಿತ ಮತ್ತು ಅಪಾರ ಮಳೆಯೇ ಅಡ್ಡಿ. ಪ್ರವಾಸಿಗರು ಸಾಮಾನ್ಯವಾಗಿ ಹವಾಮಾನವನ್ನು ನೋಡಿಕೊಂಡೇ ಪ್ರವಾಸಗಳನ್ನು ಪ್ಲಾನ್ ಮಾಡುತ್ತಾರೆ. ಆದರೆ ಸೂಕ್ತ ಮುನ್ಸೂಚನೆ ಇಲ್ಲದೆ ಪ್ರವಾಸದ ಮಧ್ಯದಲ್ಲಿ ಅಪಾಯಕ್ಕೆ ಸಿಲುಕುವುದೇ ಹೆಚ್ಚು.
ಸೂಕ್ತ ನಿರ್ಧಾರಕ್ಕೆ ಡೇಟಾ ನೆರವು
ನೀತಿ, ನಿರ್ಧಾರಗಳ ವಿಚಾರದಲ್ಲಿ ಸರಕಾರಕ್ಕೂ ಬಿಎಫ್ಎಸ್ನಿಂದ ಸಾಕಷ್ಟು ಅನುಕೂಲವಿದೆ. ಇದು ನೀಡುವ ಸಕಾಲಿಕ ಮತ್ತು ಸೂಕ್ತ ಹವಾಮಾನ ಮುನ್ಸೂಚನೆಗಳು ಸೂಕ್ತ ಸಮಯದಲ್ಲಿ ಜನರನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಜನರ ಪ್ರಾಣ ಹಾನಿ ತಪ್ಪುತ್ತದೆ. ಜೊತೆಗೆ ಆರ್ಥಿಕ ನಷ್ಟವನ್ನೂ ಕಡಿಮೆ ಮಾಡಬಹುದು. 2020 ರಲ್ಲಿ ಅಂಫಾನ್ ಚಂಡಮಾರುತದಿಂದ ಸುಮಾರು 1.16 ಲಕ್ಷ ಕೋಟಿಯಷ್ಟು ಹಾನಿಯಾಗಿತ್ತು. ಸಚಿವ ಜಿತೇಂದ್ರ ಸಿಂಗ್ ಹೇಳುವಂತೆ ಇದು ಜನರ ಸುರಕ್ಷತೆಯಲ್ಲಿ ‘ಬಹುದೊಡ್ಡ ಜಿಗಿತ’ ಅಲ್ಲದೆ ಇದು ಡೇಟಾ-ಆಧಾರಿತ ಹೊಸ ಆಡಳಿತ ವೈಖರಿಗೆ ನಾಂದಿ ಹಾಡುತ್ತದೆ.
ಆಹಾರ ಹಣದುಬ್ಬರಕ್ಕೆ ಮೂಗುದಾರ
ಭಾರತದಲ್ಲಿ ಆಹಾರ ಹಣದುಬ್ಬರದ ಏರಿಕೆಗೆ ಹವಾಮಾನ ಪ್ರಮುಖ ಕಾರಣವಾಗಿದೆ. ಮಳೆ ಕೊರತೆ ಕಾರಣವಾಗಿ ಆಲೂಗಡ್ಡೆ, ಟೊಮೇಟೊ, ಬೇಳೆಕಾಳು ಮುಂತಾದ ತರಕಾರಿ ಮತ್ತು ಆಹಾರಧಾನ್ಯಗಳ ಕೊರತೆ ಕಾಡುತ್ತದೆ. ಇದು ಬೇಡಿಕೆಯನ್ನು ಹೆಚ್ಚಿಸಿ ಬೆಲೆಯನ್ನೂ ಹೆಚ್ಚಿಸುತ್ತದೆ. ಇದು ಆಹಾರ ಹಣದುಬ್ಬರ ಹೆಚ್ಚಾಗಲು ಕಾರಣವಾಗುತ್ತದೆ. ಸದ್ಯ ಆಹಾರ ಹಣದುಬ್ಬರ 1.78% ಇದೆ. ಇದಕ್ಕೆ ಕಾರಣ ತರಕಾರಿ, ಹಣ್ಣು, ಬೇಳೆ ಕಾಳುಗಳು ಬೆಲೆ ನಿಯಂತ್ರಣದಲ್ಲಿರುವುದೇ ಆಗಿದೆ. ಹೀಗಾಗಿ ಆಹಾರೋತ್ಪನ್ನಗಳ ಬೆಲೆ ಏರುವುದೆಂದರೆ ಹಣದುಬ್ಬರ ಹೆಚ್ಚುವುದೆಂದೇ ಅರ್ಥ.
ಆಹಾರೋತ್ಪನ್ನಗಳ ಬೆಲೆ ಏರಿಕೆಯು ಅಂದರೆ ಆಹಾರ ಹಣದುಬ್ಬರಕ್ಕೆ ಕಾರಣವಾಗುವ ಹವಾಮಾನ ವೈಪರೀತ್ಯ ಒಟ್ಟಾರೆ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಕುರಿತು ಸ್ವತಃ ಆರ್ಬಿಐ ಆತಂಕ ವ್ಯಕ್ತಪಡಿಸಿದೆ. ಹಣದುಬ್ಬರ ದೀರ್ಘಕಾಲದಿಂದ ‘ಸ್ಥಿರ’ವಾಗಿರುವುದಕ್ಕೆ ಈ ಹವಾಮಾನ ವೈಪರೀತ್ಯವೇ ಕಾರಣ ಎಂದು ಆರ್ಬಿಐ ಹೇಳಿದೆ. ಇದು ಒಟ್ಟಾರೆ ಹಣಕಾಸು ನೀತಿ ಅಥವಾ ಬಡ್ಡಿದರ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ. ಇದು ಹವಾಮಾನ ಆಧಾರಿತ ಅಂಶಗಳನ್ನು ಆರ್ಥಿಕ ಯೋಜನೆಗಳೊಂದಿಗೆ ಸಂಯೋಜಿಸುವ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ನಿಟ್ಟಿನಲ್ಲಿ ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ ಒಂದು ಆರ್ಥಿಕ ಅಸ್ತ್ರವಾಗಿಯೂ ಮಹತ್ವ ಪಡೆಯುತ್ತದೆ.
ಒಟ್ಟಾರೆಯಾಗಿ ಹವಾಮಾನವನ್ನು ಕರಾರುವಕ್ಕಾಗಿ ಊಹಿಸುವುದು ಸಾಧ್ಯವಾದರೆ ಅದು ದೇಶದ ಕೃಷಿಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಕೃಷಿ ಬೆಳವಣಿಗೆಯೊಂದಿಗೆ ಕೃಷಿ ಆಧಾರಿತ ಕೈಗಾರಿಕಾ ಕ್ಷೇತ್ರವು ಅರಳುತ್ತದೆ. ಜೊತೆಗೆ ಆಹೋರೋತ್ಪನ್ನಗಳ ಬೆಲೆ ಇಳಿದು ಹಣದುಬ್ಬರವೂ ಇಳಿಕೆಯಾಗುತ್ತದೆ. ಹಣದುಬ್ಬರ ಇಳಿಕೆಯಾಗುವುದರೊಂದಿಗೆ ದೇಶದ ಆರ್ಥಿಕತೆಗೆ ಉತ್ತೇಜನಕಾರಿ ಹಣಕಾಸು ನೀತಿ ಪ್ರಕಟಿಸಿಲು ಆರ್ಬಿಐಗೆ ಅವಕಾಶ ದೊರೆಯುತ್ತದೆ. ಇದು ದೇಶದ ಒಟ್ಟಾರೆ ಪ್ರಗತಿಗೆ ಮುನ್ನುಡಿಯಾಗುತ್ತದೆ. ಈ ನಿಟ್ಟಿನಲ್ಲಿ ಬಿಎಫ್ಎಸ್ ಕೇವಲ ಹವಾಮಾನ ಅಳೆಯುವ ಟೂಲ್ ಆಗಿರದೆ ದೇಶದ ಆರ್ಥಿಕತೆಯ ದಿಕ್ಕು ದೆಸೆ ಮತ್ತು ಬೆಳವಣಿಗೆಯ ವೇಗವನ್ನು ನಿರ್ಧರಿಸುವ ಅಸ್ತ್ರವೂ ಆಗಿದೆ.
ದೇಶ ರಕ್ಷಣೆಯ ಪ್ರಚಂಡ ಶಕ್ತಿ
ಭಾರತದ ದೇಸೀ ಹವಾಮಾನ ಮುನ್ಸೂಚನಾ ವ್ಯವಸ್ಥೆ ಕೇವಲ ಕೃಷಿ ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಮಾತ್ರವೇ ಸಹಕಾರಿಯಾಗದೆ ಭಾರತದ ರಕ್ಷಣಾ ಪಡೆಗಳಿಗೂ ನೆರವಾಗಲಿದೆ. ಮಿಲಿಟರಿ ಸಂಘರ್ಷಗಳು, ಯುದ್ಧ ಮತ್ತಿತರ ಸಂದಿಗ್ಧ ಸ್ಥಿತಿಗಳಲ್ಲಿ ಸೇನಾಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ರವಾನಿಸಲು ವಾತಾವರಣ ತಿಳಿಯಾಗಿರುವುದು ಅತಿ ಮುಖ್ಯ. ಜೊತೆಗೆ ಯುದ್ಧ ಆರಂಭವಾದರೆ ಕದನ ಕಣದಲ್ಲಿ ಹವಾಮಾನ ವೈಪರೀತ್ಯಗಳಿದ್ದರೆ ವಾಯುಸೇನೆಯ ಸಾಮರ್ಥ್ಯವನ್ನು ಪೂರ್ತಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಯುದ್ಧ ಸಿದ್ಧತೆಗೆ, ಸೇನಾ ಜಮಾವಣೆಗೆ, ಶಸ್ತ್ರಾಸ್ತಗಳ ಸಾಗಣೆಗೆ ಹವಾಮಾನದ ನಿಖರ ಮಾಹಿತಿ ಅತ್ಯಗತ್ಯ. ಜೊತೆಗೆ, ಗಡಿಯಲ್ಲಿ ಶತೃಗಳ ಮೇಲೆ ಡ್ರೋಣ್ ಮತ್ತಿತರ ಉಪಕರಣಗಳ ಮೂಲಕ ಕಣ್ಣಿಡಲು ಹವಾಮಾನ ಸೂಕ್ತ ರೀತಿಯಲ್ಲಿರಬೇಕು. ಹೀಗಾಗಿ ಒಟ್ಟಾರೆ ಸೇನಾ ಕಾರ್ಯಾಚರಣೆಗೆ ಗಾಳಿಯ ವೇಗ, ದಿಕ್ಕು, ಮಂಜು ಮುಂತಾದ ವಿಚಾರಗಳಲ್ಲಿ ಹವಾಮಾನದ ನಿಖರ ಮಾಹಿತಿ ಅತಿ ಮುಖ್ಯವಾಗುತ್ತದೆ. ಭಾರತದಾಚೆಗಿನ ಹವಾಮಾನ ಚಿತ್ರಣ ನೀಡುವ ಇಂಥ ಕ್ರಿಟಿಕಲ್ ಮಾಹಿತಿಗಾಗಿ ಭಾರತ ಈವರೆಗೆ ಯುಎಸ್ ಮತ್ತು ಯೂರೋಪ್ನ ಹವಾಮಾನ ಮುನ್ಸೂಚನೆಯ ಡೇಟಾವನ್ನು ಅವಲಂಬಿಸಿತ್ತು. ಆದರೆ ಇನ್ನು ಮುಂದೆ ಯಾರ ಮಾಹಿಗೂ ಕಾಯಬೇಕಿಲ್ಲ. ಆಶ್ಚರ್ಯ ಎಂದರೆ ನಾವು ನೀಡುವ ಡೇಟಾವನ್ನು ಇತರೆ ದೇಶಗಳು ಬಳಸಲು ಸಜ್ಜಾಗಿವೆ. ಈ ನಿಟ್ಟಿನಲ್ಲಿಯೂ ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ ದೇಶ ರಕ್ಷಣೆಯ ಹೊಸ ‘ಸ್ಟ್ರ್ಯಾಟೆಜಿಕ್ ವೆಪನ್’ ಆಗಿದ್ದು, ಆತ್ಮನಿರ್ಭರತೆಯ ಪ್ರತೀಕವಾಗಿದೆ. ಭಾರತ ಮತ್ತು ಅದರ ಸುತ್ತ 3 ಸಾವಿರ ಕಿ.ಮೀ ವ್ಯಾಪ್ತಿಯಲ್ಲಿ 20 ಮೀಟರ್ ವ್ಯಾಪ್ತಿಯ ನಿಖರತೆಯಲ್ಲಿ ಜಿಪಿಎಸ್ ಸೇವೆ ನೀಡುವ ನಮ್ಮ ‘ನಾವಿಕ್’, ಹವಾಮಾನದ ಇಂಚಿಂಚೂ ಮಾಹಿತಿ ಒದಗಿಸುವ ‘ಬಿಎಫ್ಎಸ್’, ಶತೃ ದಾಳಿಗಳಿಂದ ದೇಶದ ವಾಯುಗಡಿಯನ್ನು ರಕ್ಷಿಸುತ್ತಿರುವ ‘ಅಕಾಶ್ತೀರ್’ ಒಗ್ಗೂಡಿ ಭಾರತದ ರಕ್ಷಣಾ ವ್ಯವಸ್ಥೆಗೆ ಪ್ರಚಂಡ ಶಕ್ತಿ ನೀಡಿವೆ.
ಬೆಂಗಳೂರು ಪ್ರವಾಹಕ್ಕೂ ಪರಿಹಾರ?
ಬೆಂಗಳೂರು ಸೇರಿದಂತೆ ಯಾವುದೇ ಮಹಾನಗರದ ಯೋಜನೆಗೆ ಮಳೆ, ಗಾಳಿ ಕುರಿತಾದ ನಿಖರತೆ ಅತಿ ಮುಖ್ಯ. ಬಿಎಫ್ಎಸ್ ಮೂಲಕ ಒಂದು ಸೀಸನ್ನಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಅಂದಾಜು ಮಾಡಿ ಅದಕ್ಕೆ ತಕ್ಕಂತೆ ಪ್ರವಾಹ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬಹುದು. ಇಲ್ಲವಾದರೆ ಚೆನ್ನೈ, ಬೆಂಗಳೂರಿನಂತಹ ನಗರಗಳು ದಿಢೀರನೆ ಸುರಿಯುವ ಮಳೆಯಲ್ಲಿ ಮುಳುಗಿ ಹೋಗುತ್ತವೆ. ಪ್ರತಿ ವರ್ಷದ ಮಳೆಗಾಲದಲ್ಲೂ ಬೆಂಗಳೂರಿನಲ್ಲಿ ಪ್ರವಾಹ, ಮನೆಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ನಗರಗಳಲ್ಲಿ ಉಂಟಾಗುವ ಪ್ರವಾಹವೊಂದೇ ದೇಶದಲ್ಲಿ ವಾರ್ಷಿಕವಾಗಿ ಸುಮಾರು 150 ಕೋಟಿ ರೂಗಳಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ. ಹಣದ ನಷ್ಟ ಒಂದು ಕಡೆ ಇರಲಿ, ಮನೆಗೆ ನೀರು ನುಗ್ಗಿ ನಿಲ್ಲಲೂ ಜಾಗ ಇಲ್ಲದಾದಾಗ ಜನರ ಬವಣೆಯನ್ನು ನೋಡಲಾಗುವುದಿಲ್ಲ. ಇಂಥ ಬವಣೆಗೆ ಬಿಎಫ್ಎಸ್ನಿಂದ ಒಂದಿಷ್ಟು ಪರಿಹಾರ ದೊರೆಯುವ ಭರವಸೆಯಿದೆ.



