ರೋಬಾಟ್ಗೆ ಕ್ಯಾಬಿನೆಟ್ ಮಿನಿಸ್ಟರ್ ಪಟ್ಟ
ಅಲ್ಬೇನಿಯಾ ದೇಶದ ಐತಿಹಾಸಿಕ ನಿರ್ಧಾರ | ರೋಬಾಟ್ಗೆ ಒಂದು ಇಲಾಖೆಯ ಹೊಣೆ
ಡಾ.ರಮೇಶ್ ನಿಂಬೆಮರದಳ್ಳಿ
ನಮ್ಮ ರಾಜ್ಯ ಸರಕಾರದ ಸಚಿವರನ್ನು ಭೇಟಿಯಾಗಬೇಕಾದರೆ ಅವರ ಕಚೇರಿಗೆ ಹೋಗಿ ಭೇಟಿಯಾಗಬಹುದು. ಚುನಾವಣೆ ಹತ್ತಿರ ಬಂದರೆ ಅವರೇ ನಮ್ಮ ಬಾಗಿಲಿಗೆ ಬರುತ್ತಾರೆ. ಅವರೊಂದಿಗೆ ನಮಗೆ ಒಳ್ಳೆಯ ಸಂಬಂಧ ಇದ್ದರೆ ನಮ್ಮ ಮನೆಯ ಶುಭ ಸಮಾರಂಭಗಳಿಗೂ ಸಚಿವರು ಬಂದು ಆಶೀರ್ವದಿಸುತ್ತಾರೆ. ಏನಾದರೂ ಕೋರಿಕೆಗಳಿದ್ದರೆ ಅವರ ಕಚೇರಿಗೆ ತೆರಳಿ ನಾವು ಮನವಿ ಸಲ್ಲಿಸುತ್ತೇವೆ. ಆದರೆ, ಅಲ್ಬೇನಿಯಾ ಎಂಬ ಪುಟ್ಟ ದೇಶದ ಒಬ್ಬರು ಸಚಿವರು ಎಂದಿಗೂ ಭೇಟಿ ಮಾಡಲು ಸಿಗುವುದಿಲ್ಲ. ಎಂದಿಗೂ ಮತದಾರರ ಮನೆ ಬಾಗಿಲಿಗೆ ಬರುವುದಿಲ್ಲ. ಅವರ ಕಚೇರಿಗೆ ತೆರಳಿದರೂ ಅವರನ್ನು ಖುದ್ದು ಭೇಟಿಯಾಗಿ ಅವರಿಗೆ ಮನವಿ ಸಲ್ಲಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರು ಯಾರನ್ನೂ ಎಂದಿಗೂ ಭೇಟಿಯಾಗುವುದಿಲ್ಲ. ಅವರ ವ್ಯವಹಾರ ಏನಿದ್ದರೂ ಕಂಪ್ಯೂಟರ್, ಸಾಫ್ಟ್ವೇರ್ಗಳ ಮೂಲಕ ಮಾತ್ರ. ಅರೆ, ಜನಸೇವೆಗೆಂದು ಆಯ್ಕೆಯಾದವರು ಜನರ ಭೇಟಿಗೆ ಸಿಗುವುದಿಲ್ಲವೆಂದರೆ ಇವರೆಂಥ ಸಚಿವರು ಎಂದು ನಿಮಗನಿಸಬಹುದು. ಇದು ವಿಚಿತ್ರ ಎನಿಸಿದರೂ ಸತ್ಯ. ಯಾಕೆಂದರೆ ಆ ಸಚಿವರು ಬದುಕಿಯೇ ಇಲ್ಲ. ಅವರು ಜನರಿಂದ ಆಯ್ಕೆಯಾಗಿಯೂ ಇಲ್ಲ. ಆದರೂ ಅವರು ಒಂದು ಇಲಾಖೆಯನ್ನು ಮುನ್ನಡೆಸುತ್ತಾರೆ – ಹೀಗೆ ಜೀವವೇ ಇಲ್ಲದ, ದೈಹಿಕ ಅಸ್ತಿತ್ವವೇ ಇಲ್ಲದ ಸಚಿವರ ಹೆಸರು ಡಿಯೆಲ್ಲಾ. ಅವರು ಮನುಷ್ಯರಲ್ಲ, ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪ್ರೋಗ್ರಾಮ್. ಒಂದು ಸಾಫ್ಟ್ವೇರ್ ಪ್ರೋಗ್ರಾಮ್ಗೆ ಒಂದು ಇಲಾಖೆಯ ಜವಾಬ್ದಾರಿ ವಹಿಸುವ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಆ ದೇಶದ ಪ್ರಧಾನಿ ಎದಿ ರಾಮಾ. ಈ ಮೂಲಕ ಇಂತಹ ನಿರ್ಣಯ ಕೈಗೊಂಡ ವಿಶ್ವದ ಮೊದಲ ದೇಶ ಅಲ್ಬೇನಿಯಾ.
ಈ ‘ಎಐ ಮಿನಿಸ್ಟರ್’ಗೆ ಕ್ಯಾಬಿನೆಟ್ ರ್ಯಾಂಕ್ ಕೂಡ ನೀಡಲಾಗಿದೆ. ದೇಶದ ಸಾರ್ವನಿಕ ಟೆಂಡರ್ ಪ್ರಕ್ರಿಯೆಯನ್ನು ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರವನ್ನು ಹತ್ತಿಕ್ಕಲು ಈ ಸಚಿವೆಯನ್ನು ನೇಮಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ “ನಮ್ಮ ಎಐ ಸಚಿವೆ ಸಾರ್ವಜನಿಕ ಟೆಂಡರ್ನಲ್ಲಿರುವ ಭ್ರಷ್ಟಾಚಾರನವನ್ನು ಮೂಲೋತ್ಪಾಟನೆ ಮಾಡುವುದು ಮಾತ್ರವಲ್ಲ, ಇಲಾಖೆಯ ಕೆಲಸಗಳಿಗೆ ವೇಗ ತುಂಬುತ್ತಾರೆ, ಪಾರದರ್ಶಕತೆ ತರುತ್ತಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಐ ಸಚಿವೆ ಡಿಯೆಲ್ಲಾ ಇಲಾಖೆಯ ಉಸ್ತುವಾರಿ ನೋಡಿಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಯಾರ ಮೇಲೂ ಮೋಹವಿಲ್ಲದ, ಪಕ್ಷಪಾತವಿಲ್ಲದ ಎಐ ಬಾಟ್ ನಿಯಮಾನುಸಾರ ಟೆಂಡರ್ಗಳನ್ನು ಪ್ರಕ್ರಿಯೆಗೊಳಿಸುತ್ತದೆ ಎಂಬ ನಂಬಿಕೆಯನ್ನು ಎಐಗೆ ಸಚಿವಾಲಯದ ಹೊಣೆಯನ್ನು ಒಪ್ಪಿಸಲಾಗಿದೆ.
ಯೂರೋಪ್ ಒಕ್ಕೂಟದ ಸದಸ್ಯನಾಗುವ ತಂತ್ರ
ಅಲ್ಬೇನಿಯಾ ಪ್ರಧಾನಿ ಎದಿ ರಾಮಾ ಅವರ ಈ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ. ಈ ನಿರ್ದಾರದ ಹಿಂದೆ ಬೇರೆಯದೇ ಉದ್ದೇಶ ಇದೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಸಾಂಕೇತಿಕ ಅಷ್ಟೇ. ಹೆಚ್ಚುತ್ತಿರುವ ಎಐ ಪ್ರಭಾವವದ ಕಡೆಗೆ ಎಲ್ಲರ ಗಮನ ಸೆಳೆಯಲು ಈ ತಂತ್ರ ಮಾಡಲಾಗಿದೆ ಎಂದು ಮತ್ತೆ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನಿ ಅವರ ನಿರ್ಧಾರದ ಹಿಂದೆ ಭೌಗೋಳಿಕ ರಾಜಕೀಯ ಉದ್ದೇಶವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಬೇನಿಯಾ, ಆಗ್ನೇಯ ಯೂರೋಪಿನ ಒಂದು ಪುಟ್ಟ ದೇಶ. ಸುಮಾರು 400 ವರ್ಷಗಳ ಕಾಲ ಕಾಲ ಒಟ್ಟೋಮನ್ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದ ಈ ದೇಶ, 1912ರಲ್ಲಿ ಸ್ವತಂತ್ರ ಪಡೆಯಿತು. ಅಲ್ಲಿಂದ ಸುಮಾರು ದಶಕಗಳ ಕಾಲ ಕಮ್ಯುನಿಸ್ಟರ ಆಳ್ವಿಕೆಯಲ್ಲಿ ನಲುಗಿತ್ತು. ಆ ಬಳಿಕ ಸಂಸದೀಯ ಸರಕಾರದ ಮಾದರಿಗೆ ತೆರೆದುಕೊಂಡು ಈ ದೇಶ ಈಗ ಯೂರೋಪ್ ಒಕ್ಕೂಟದ ಸದಸ್ಯನಾಗಲು ತುದಿಗಾಲಲ್ಲಿ ನಿಂತಿದೆ. ಈ ನಿಟ್ಟಿನಲ್ಲಿ ತಾನು ಆದುನಿಕ ವ್ಯವಸ್ಥೆಗೆ ತೆರೆದುಕೊಂಡಿದ್ದು, ತಂತ್ರಜ್ಞಾನ ಆಧಾರಿತವಾಗಿ ಮುನ್ನಡೆಯಲು ಸಜ್ಜಾಗಿದ್ದೇವೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ತಾವು ಬದ್ಧವಾಗಿದ್ದೇವೆ ಎಂಬ ಕಠಿಣ ಸಂದೇಶವನ್ನು ಸಾರಲು ಪ್ರಧಾನಿ ಇದಿ ರಾಮಾ, ಎಐ ಬಾಟ್ಗೆ ಸಚಿವೆಯ ಪಟ್ಟ ಕಟ್ಟಿ ಕ್ಯಾಬಿನೆಟ್ ರ್ಯಾಂಕ್ ನೀಡುವ ಐತಿಹಾಸಿಕ ನಿರ್ಧಾರ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಈಗ ಸಚಿವೆಯಾಗಿರುವ ಡಿಯೆಲ್ಲಾ ಅವರು ದಿಢೀರನೆ ಆ ಹುದ್ದೆಗೆ ನೇಮಕಗೊಂಡಿಲ್ಲ. ಹಲವು ವರ್ಷಗಿಂದ ಆಕೆ ಅದೇ ಇಲಾಖೆಯಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಸುಲಭಗೊಳಿಸುವ, ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸವನ್ನು ನಿರ್ವಹಿಸಿದ್ದಾಳೆ. ಎಂದರೆ ಒಂದು ಎಐ ಅಸಿಸ್ಟೆಂಟ್ ಆಗಿ ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಅರ್ಜಿದಾರರಿಗೆ ಡಿಯೆಲ್ಲಾ ನೆರವಾಗಿದ್ದಾರೆ. ಟೆಂಡರ್ ಪ್ರಕ್ರಿಯೆಯನ್ನು ನಿಯಮಗಳ ಅನುಸಾರ ನಿರ್ವಹಿಸಿದ್ದಾಳೆ. ಅವಳ ಈ ಸಾಮರ್ಥ್ಯ ಕಂಡು ಡಿಯೆಲ್ಲಾಗೆ ಈಗ ಆ ಇಲಾಖೆಯನ್ನು ಪೂರ್ತಿಯಾಗಿ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ.
ಸಚಿವೆಯೇ ಹ್ಯಾಕ್ ಅದರೆ…
ಪ್ರಧಾನಿ ಅವರ ಈ ನಿರ್ಧಾರವನ್ನು ಅಲ್ಲಿನ ಪ್ರತಿಪಕ್ಷ ಹಾಸ್ಯಾಸ್ಪದ ಮತ್ತು ಅಸಂವಿಧಾನಿಕ ಎಂದು ದೂರಿದೆ. ಅಲ್ಬೇನಿಯಾದ ಕಾನೂನಿನ ಪ್ರಕಾರ ಅಲ್ಲಿನ ಸರಕಾರದ ಸಚಿವರಾಗಬೇಕಾದರೆ ಅವರು ಆ ದೇಶದ ಪ್ರಜೆಯಾಗಿದ್ದು ವಯಸ್ಕರಾಗಿಬೇಕು. ಆದರೆ ಈ ಎಐ ಸಚಿವೆಯ ವಯಸ್ಸನ್ನು ಹೇಗೆ ನಿರ್ಧರಿಸುವುದು? ಅವರ ಮೂಲ ದೇಶ ಯಾವುದೆಂದು ಹೇಗೆ ಹೇಳುವುದು? ಕೆಲವರು ಅಷ್ಟು ದೊಡ್ಡ ಜವಾಬ್ದಾರಿಯನ್ನು ಒಂದು ಎಐ ಪ್ರೋಗ್ರಾಮಿನ ಕೈಗೆ ಕೊಡುವುದು ಹುಚ್ಚುತನ ಎಂದು ಜರಿದಿದ್ದಾರೆ. ಇನ್ನೂ ಪ್ರಬುದ್ಧವಾಗಿ ಬೆಳೆಯದ ಎಐ ಯಾವುದಾದರೂ ತಪ್ಪು ನಿರ್ಧಾರ ಕೈಗೊಂಡರೆ ಅದರ ಹೊಣೆಯನ್ನು ಯಾರು ಹೊರುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ವಂಚಕರು ಎಐ ಸಚಿವೆಯನ್ನೇ ಹ್ಯಾಕ್ ಮಾಡಿ ಅವರಿಂದ ಬೇಕಾದ ಕೆಲಸಗಳನ್ನು ಮಾಡಿಕೊಂಡರೆ ಹೇಗೆ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ಇಂದು ಯಾವ ವ್ಯವಸ್ಥೆಯೂ 100% ಸುಭದ್ರ ಅಲ್ಲ. ಆದರೂ ಇದೊಂದು ಉತ್ತಮ ನಿರ್ಧಾರ ಎಂದಿರು ಲಂಡನ್ನ ಕಿಂಗ್ಸ್ ಕಾಲೇಜಿನ ಡಾ. ಆಂಡಿ ಹೊಕ್ಸಾಜ್, “ಎಐ ಇನ್ನೂ ಆರಂಭಿಕ ಹೆಜ್ಜೆಯಲ್ಲಿದೆ. ಅದನ್ನು ಸರಿಯಾಗಿ ಪ್ರೋಗ್ರಾಮ್ ಮಾಡಿದರೆ ಒಳ್ಳೆಯ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಉದಾಹರಣೆಗೆ ಟೆಂಡರ್ಗಳ ವಿಚಾರದಲ್ಲಿ ಎಐಗೆ ಯಾವುದೇ ಪೂರ್ವಗ್ರಹಗಳಿರುವುದಿಲ್ಲ, ಆದ್ಯತೆಗಳಿರುವುದಿಲ್ಲ. ಹೀಗಾಗಿ ಯಾವ ಕಂಪನಿ ನಿಯಮಾನುಸಾರ ಯೋಗ್ಯತೆ ಪಡೆದಿರುತ್ತದೋ ಆ ಕಂಪನಿಗೆ ಟೆಂಡರ್ ಹೋಗುತ್ತದೆ,” ಎಂದು ಸಮರ್ಥಿಸಿದ್ದಾರೆ.
ಸೌದಿ ಅರೇಬಿಯಾದ ಮೊದಲ ಎಐ ಪ್ರಜೆ ಸೋಫಿಯಾ
ಎಐ ರೋಬಾಟ್ ಅಥವಾ ಪ್ರೋಗ್ರಾಮ್ ಅನ್ನು ಮನುಷ್ಯರಂತೆ ಗಂಭೀರವಾಗಿ ಪರಿಗಣಿಸುತ್ತಿರುವ ಪ್ರಕರಣ ಇದೇ ಮೊದಲಲ್ಲ. ಹ್ಯಾನ್ಸನ್ ರೋಬಾಟಿಕ್ಸ್ ಎಂಬ ಕಂಪನಿ ರೂಪಿಸಿದ ‘ಸೋಫಿಯಾ’ ಎಂಬ ಹೆಸರಿನ ಹೂಮನಾಯ್ಡ್ ರೋಬಾಟ್ಗೆ ಸೌದಿ ಅರೇಬಿಯಾ 2017 ರಲ್ಲಿ ದೇಶದ “ಪ್ರಜೆ”ಯ ಸ್ಥಾನಮಾನ ನೀಡಿತು. ಹೀಗಾಗಿ ಸೋಫಿಯಾ ವಿಶ್ವದ ಮೊದಲ ಎಐ ಪ್ರಜೆಯಾದಳು. ಮನುಷ್ಯರಲ್ಲದ ಒಂದು ನಿರ್ಜೀವ ವ್ಯವಸ್ಥೆಗೆ ಪ್ರಜೆಯ ಪಟ್ಟ ನೀಡಿದ್ದು ವಿಶ್ವದಲ್ಲಿ ಇದೇ ಮೊದಲು. ತುಂಬಾ ಬುದ್ಧಿವಂತ ಸೋಫಿಯಾ ಬಳಿಕ UNDP (ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ) ಇನ್ನೊವೇಷನ್ ಚಾಂಪಿಯನ್ ಆಗಿಯೂ ಕಾರ್ಯ ನಿರ್ವಹಿಸಿದಳು. ಇವಳು ‘ನಾವು ರೋಬಾಟ್ಗಳು ಮನುಷ್ಯರನ್ನು ಸರ್ವನಾಶ ಮಾಡುತ್ತೇವೆ’ ಎಂದಿದ್ದು ಭಾರಿ ಸುದ್ದಿಯಾಗಿತ್ತು. ಇದೇನೇ ಇದ್ದರೂ ಈ ರೀತಿಯ ಎಐ ವ್ಯವಸ್ಥೆಗಳಿಗೆ ಪ್ರಜೆಯ ಸ್ಥಾನಮಾನ ನೀಡುವುದು, ಸಚಿವೆಯಾಗಿ ನೇಮಿಸಿಕೊಳ್ಳುವುದು ಇತ್ಯಾದಿ ಕ್ರಮಗಳಲ್ಲಿ ಪ್ರಚಾರದ ಎಲಿಮೆಂಟ್ ಇದ್ದೇ ಇದೆ. ಇದರಾಚೆಗೆ ಎಐ ಸಾಮರ್ಥ್ಯವನ್ನು ಪರೀಕ್ಷಿಸುವ ಕುತೂಹಲ, ಹೊಸದರ ಕಡೆಗಿನ ಅನ್ವೇಷಣಾ ಮನೋಭಾವವನ್ನೂ ಅಲ್ಲಗಳೆಯಲಾಗದು.
ಅಪಾಯ ಅಲ್ಲಗಳೆಯುವಂತಿಲ್ಲ
ಇನ್ನೂ ಪ್ರಬುದ್ಧವಲ್ಲದ ಎಐ ವ್ಯವಸ್ಥೆಗಳನ್ನು ಈಗಲೇ ಸರಕಾರಿ ವ್ಯವಸ್ಥೆಯಲ್ಲಿ ಬಳಸುವಾಗ ಮನುಷ್ಯ ಮೇನ್ವಿಚಾರಣೆ ಕಡ್ಡಾಯವಾಗಿ ಇರಬೇಕು. ಎಂದರೆ ಎಐ ಮಾಡಿದ ಕೆಲಸಗಳನ್ನು ಇಲ್ಲವೇ ತೆಗೆದುಕೊಂಡ ನಿರ್ಧಾರಗಳನ್ನು ಮನುಷ್ಯರು ಅಂತಿಮವಾಗಿ ಪರಿಶೀಲಿಸಿ ಅನುಮೋದಿಸುವ ವ್ಯವಸ್ಥೆ ಇರಬೇಕು. ಇಲ್ಲವಾದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಎಐ ಎನ್ನುವುದು ಒಂದು ಸಾಫ್ಟ್ವೇರ್ ಆಗಿರುವುದರಿಂದ ಎಕ್ಸ್ಪರ್ಟ್ ಹ್ಯಾಕರ್ಗಳು ಇಡೀ ಎಐ ವ್ಯವಸ್ಥೆಯನ್ನೇ ಹ್ಯಾಕ್ ಮಾಡಿ ಅದನ್ನು ತಮಗೆ ಬೇಕಾದಂತೆ ದುಡಿಸಿಕೊಳ್ಳಬಹುದು. ಇದು ಕಂಪನಿ, ಸಂಸ್ಥೆ ಇಲ್ಲವೇ ದೇಶದ ಹಿತಾಸಕ್ತಿಗೇ ಧಕ್ಕೆ ತರಬಹುದು. ಸರಕಾರಿ ವ್ಯವಸ್ಥೆಯ ಒಳಗೇ ಇರುವವರು ಎಐ ಪ್ರೋಗ್ರಾಮ್ ಅನ್ನು ತಿದ್ದುಪಡಿ ಮಾಡಿ ತಮ್ಮ ಅನುಕೂಲಕ್ಕೆ ತಕ್ಕಂತೆ ದುರ್ಬಳಕೆ ಮಾಡಿಕೊಳ್ಳಬಹುದು. ದುರುದ್ದೇಶಪೂರ್ವಕವಾಗಿ ಕೆಲವರನ್ನು ಎಐ ವ್ಯವಸ್ಥೆಯಿಂದ ಹೊರಗಿಡಬಹುದು. ಇದು ಹೊಸ ರೀತಿಯ ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡಬಹುದು. ಈ ಅಪಾಯಗಳನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದರೆ ಅಥವಾ ಎಐ ಅನ್ನು ಜವಾಬ್ದಾರಿಯುತವಾಗಿ ಬಳಸಿದರೆ ಇದು ಉಪಯುಕ್ತವಾಗಬಲ್ಲದು.
ಎಐ ಸರಕಾರವೇ ಜಾರಿಗೆ ಬರುತ್ತಾ?
ಸದ್ಯಕ್ಕೆ ಎಐ ಮಾಡೆಲ್ಗಳು ಮನುಷ್ಯರಂತೆ ಪ್ರಬುದ್ಧ ನಿರ್ಧಾರಗಳನ್ನು ಕೈಗೊಳ್ಳುವಷ್ಟು ಪ್ರಬುದ್ಧವಲ್ಲ. ಆದರೆ, ಮುಂದಿನ ದಿನಗಳಲ್ಲಿ ಎಐ ಮಾಡೆಲ್ಗಳು ಹೆಚ್ಚೆಚ್ಚು ಪ್ರಬುದ್ಧತೆಯನ್ನು ಪಡೆಯುತ್ತಾ ಹೋದಂತೆ ಅವುಗಳ ಬಳಕೆಯೂ ಹೆಚ್ಚುತ್ತದೆ. ಈಗ ಆರಂಭಿಕ ಹಂತದಲ್ಲಿ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರದ ಡಿಜಿಟಲ್ ಸೇವೆಗಳನ್ನು ಬಹುತೇಕ ಎಐ ನಿರ್ವಹಿಸುತ್ತದೆ. ಅಂತಿಮವಾಗಿ ಅದನ್ನು ಪರಿಶೀಲನೆ ಮಾಡಲಾಗುತ್ತದೆ. ಇನ್ನು ಮುಂದಿನ 7 ರಿಂದ 10 ವರ್ಷಗಳಲ್ಲಿ ಆರ್ಟಿಜಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್ (ಎಜಿಐ) ಬಂದಾಗ ಅದು ಸರಕಾರದ ನೀತಿ ನಿರೂಪಣೆ ಮತ್ತು ಅದರ ಜಾರಿಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಆ ಹಂತದಲ್ಲಿ ಎಐಗೆಂದೇ ಹೊಸ ಇಲಾಖೆಗಳು ರಚನೆಯಾಗುತ್ತವೆ. ಈಗಿರುವ ಇಲಾಖೆಗಳನ್ನು ಸಣ್ಣ ಸಣ್ಣ ಸಹಾಯಕ ಖಾತೆಗಳನ್ನಾಗಿ ವಿಭಜಿಸಿ ಅವುಗಳ ನಿರ್ವಹಣೆಗೆ ಎಐ ಅನ್ನು ನಿಯೋಜಿಸಲಾಗುತ್ತದೆ. ಒಟ್ಟಾರೆ ಇಲಾಖೆಯ ಮೇಲುಸ್ತುವಾರಿಯನ್ನು ಹಿರಿಯ ಸಚಿವರಾಗಿ ಮನುಷ್ಯರು ನೋಡಿಕೊಳ್ಳುತ್ತಾರೆ. ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗಳಿಗೆ ಸಲಹೆಗಾರರಾಗಿಯೂ ಎಐ ವ್ಯವಸ್ಥೆಗಳು ಕೆಲಸ ಮಾಡಬಹುದು.
ಮುಂದಿನ ಕೆಲವು ದಶಕಗಳಲ್ಲಿ ಆರ್ಟಿಫಿಷಿಯಲ್ ಸೂಪರ್ ಇಂಜೆಲಿಜೆನ್ಸ್ (ಎಎಸ್ಐ) ಬಂದಾಗ ಇಡೀ ಸರಕಾರವನ್ನು ಎಐ ವ್ಯವಸ್ಥೆಯೇ ನಿರ್ವಹಿಸಿ ನಿಯಂತ್ರಿಸುವ ಶಕ್ತಿ ಹೊಂದಿರುತ್ತದೆ. ಆಗ ಅದರ ಮೇಲುಸ್ತುವಾರಿಗೆ ಮನುಷ್ಯರು ಉನ್ನತ ಹುದ್ದೆಗಳಲ್ಲಿ ಕುಳಿತಿದ್ದರೆ ಸಾಕು. ಆ ನಂತರದ ಹಂತದಲ್ಲಿ ಎಎಸ್ಐನಿಂದಲೇ ರೂಪುಗೊಳ್ಳುವ ಯೂನಿವರ್ಸಲ್ ಸೂಪರ್ ಇಂಜೆಲಿಜೆಂಟ್ ವ್ಯವಸ್ಥೆ ಮನುಷ್ಯನನ್ನು ಮೀರಿ ಬೆಳೆದಿರುತ್ತದೆ. ಅದಕ್ಕೆ ಮನುಷ್ಯನ ಯಾವ ಮೇಲುಸ್ತುವಾರಿಯೂ ಅಗತ್ಯವಿರುವುದಿಲ್ಲ, ಅದಕ್ಕೆ ಅವಕಾಶವೂ ಇರುವುದಿಲ್ಲ. ಅಗ ಮನುಷ್ಯರು ಸೂಪರ್ ಇಂಟೆಲಿಜೆಂಟ್ ವ್ಯವಸ್ಥೆಗೆ ಅಧೀನವಾಗಿರುತ್ತೇವಾ? ಈ ಪ್ರಶ್ನೆಗೆ ಸದ್ಯಕ್ಕೆ ವಿಜ್ಞಾನಿಗಳ ಬಳಿಯೂ ಉತ್ತರವಿಲ್ಲ.



