ಡೀಪ್ ರೀಸರ್ಚ್ ಬಳಸಿ ದಿನಗಳಲ್ಲಿ ಆಗುವ ಕೆಲಸವನ್ನು ನಿಮಿಷಗಳಲ್ಲಿ ಮಾಡಿ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ 10: ದಿನಕ್ಕೊಂದು ಪ್ರಾಂಪ್ಟ್, ಕನ್ನಡದಲ್ಲಿ
ಇಂಟರ್ನೆಟ್ನಲ್ಲಿ ಯಾವುದಾರೂ ಮಾಹಿತಿಯನ್ನು ಕರಾರುವಕ್ಕಾಗಿ ಹುಡುಕುವುದು ಭಾರಿ ಕಷ್ಟದ ಕೆಲಸ. ಅದರಲ್ಲೂ ಹಲವು ವಿಧವಾದ ಮಾಹಿತಿಯನ್ನು ಒಮ್ಮೆಲೇ ಹುಡುಕುವುದು ಇನ್ನೂ ಕಷ್ಟದ ಕೆಲಸ. ಉದಾಹರಣೆಗೆ ನೀವು ಡಾ.ರಾಜ್ಕುಮಾರ್ ಅವರ ಕುರಿತು ಒಂದು ಲೇಖನ ಅಥವಾ ಪುಸ್ತಕ ಬರೆಯುತ್ತಿದ್ದೀರಿ ಎಂದು ಭಾವಿಸಿ. ಆಗ ನಿಮಗೆ ರಾಜ್ಕುಮಾರ್ ಅವರ ಕುರಿತಾದ ಬದುಕಿನ ಎಲ್ಲಾ ವಿವರಗಳೂ ಅಗತ್ಯವಿರುತ್ತದೆ. ಅವರ ಹುಟ್ಟು, ಬೆಳೆದು ಬಂದ ರೀತಿ, ಕೌಟುಂಬಿಕ ವಿವರ, ಸಿನಿಮಾ ಕ್ಷೇತ್ರದಲ್ಲಿ ಅವರ ಸಾಧನೆ, ನಟಿಸಿರುವ ಚಿತ್ರಗಳು, ಅವುಗಳ ವರ್ಷ, ಇವರೊಂದಿಗೆ ನಟಿಸಿದ ನಟಿಯರು ಇತ್ಯಾದಿ ಸಾಕಷ್ಟು ಮಾಹಿತಿಯನ್ನು ಕಲೆಹಾಕಬೇಕಿರುತ್ತದೆ. ಈ ಮಾಹಿತಿ ಒಂದೇ ಕಡೆ ದೊರೆಯುವುದು ದುರ್ಲಭ. ಡಾ.ರಾಜ್ಕುಮಾರ್ ಅವರ ಕುರಿತು ಈಗಾಗಲೇ ಬಂದಿರುವ ಸಮಗ್ರ ಕೃತಿಗಳನ್ನು ತರಿಸಿಕೊಂಡು ಪ್ರತಿ ಪುಟವನ್ನು ಜಾಲಾಡಿದರೆ ನಮಗೆ ಬೇಕಾದ ಮಾಹಿತಿ ದೊರೆಯಬಹುದು. ಆದರೆ ಎಲ್ಲವೂ ಒಂದೇ ಕೃತಿಯಲ್ಲಿ ದೊರೆಯುತ್ತದ ಎಂಬ ಖಾತ್ರಿಯೂ ಇಲ್ಲ. ಹಾಗಿದ್ದರೆ ಎಲ್ಲಾ ಮಾಹಿತಿಯನ್ನು ಎಲ್ಲಿ ಹುಡುಕುವುದು? ಹೇಗೆ ಹುಡುಕುವುದು?
ಸರ್ಚ್ ಎಂಜಿನ್ ಎಂಬ ವರದಾನ
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂಟರ್ನೆಟ್ ಎನ್ನುವುದು ಜಗತ್ತಿನ ಬಹುತೇಕ ವಿಚಾರವನ್ನು ಒಳಗೊಂಡಿರುವ ಅಗಾಧ ಜ್ಞಾನಸಾಗರ. ಆದರೆ, ಸಮಸ್ಯೆ ಇರುವುದೇ ಅಲ್ಲಿ. ಸಾಗರದಲ್ಲಿ ನಮಗೆ ಬೇಕಾಗಿರುವುದನ್ನು ಹುಡುಕುವುದು ಹೇಗೆ? ಇಲ್ಲಿ ಗೂಗಲ್ ಸರ್ಚ್ ನಮ್ಮ ಆಪದ್ಬಾಂಧವ. ಆದರೆ ಇಲ್ಲೊಂದು ಸಮಸ್ಯೆ ಇದೆ. ಗೂಗಲ್ ಸರ್ಚ್ನಲ್ಲಿ ಎಲ್ಲಾ ಮಾಹಿತಿಯನ್ನು ಒಮ್ಮೆಲೇ ಹುಡುಕಲು ಸಾಧ್ಯವಿಲ್ಲ. ಒಂದೊಂದೇ ಮಾಹಿತಿಯನ್ನು ಹೆಕ್ಕಿ ತೆಗೆಯಬೇಕು. ಹತ್ತಾರು ಬಾರಿ ಸರ್ಚ್ ಮಾಡಿ ಗೂಗಲ್ ತೆಗೆದುಹಾಕಿದ ಸಾವಿರಾರು ಪುಟಗಳಲ್ಲಿ ನಮಗೆ ಬೇಕಾಗಿರುವುದು ಎಲ್ಲಿದೆ ಎಂದು ಪತ್ತೆ ಮಾಡಬೇಕು. ದೊರೆತ ಒಂದೊಂದೇ ಮಾಹಿತಿಯನ್ನು ಒಂದೆಡೆ ವ್ಯವಸ್ಥಿತವಾಗಿ ಸಂಗ್ರಹಿಸುತ್ತಾ ಹೋಗಬೇಕು. ಆದರೆ ನಮಗೆ ಮಾಹಿತಿ ಕೊಡುತ್ತಿರುವ ಬ್ಲಾಗ್, ವೆಬ್ಸೈಟ್ ಅಥವಾ ವಿಕಿಪೀಡಿಯಾ ಪುಟದಲ್ಲಿರುವ ಮಾಹಿತಿ ಸರಿಯೋ, ತಪ್ಪೋ ಎನ್ನುವುದನ್ನು ಮತ್ತೆ ಪರಿಶೀಲಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಕೆಲವು ನಂಬಲರ್ಹ ಮೂಲಗಳಿಂದ ಮಾಹಿತಿ ತೆಗೆದುಕೊಳ್ಳಬಹುದು. ಉದಾಹರಣೆಗೆ ವಿಕಿಪೀಡಿಯಾ ತಕ್ಕಮಟ್ಟಿಗೆ ನಂಬಲರ್ಹ ಮಾಹಿತಿಯ ಮೂಲ. ಆದರೆ, ಅಲ್ಲಿ ಯಾರು ಬೇಕಾದರೂ ಮಾಹಿತಿ ತುಂಬಲು ಅವಕಾಶ ಇರುವುದರಿಂದ ಯಾರೋ ಎಳಸುಗಳು ತುಂಬಿದ ತಪ್ಪಾದ ಮಾಹಿತಿಯನ್ನು ಸರಿಯೆಂದು ನಂಬಲೇಬೇಕು. ಅಂತಹ ಲಕ್ಷಾಂತರ ಲೇಖನಗಳು ಇಂದಿಗೂ ವಿಕಿಪೀಡಿಯಾದಲ್ಲಿವೆ.
ಸಂಶೋಧಕರ ಆಪದ್ಬಾಂಧವ ಡೀಪ್ ರೀಸರ್ಚ್
ಈ ಸಮಸ್ಯೆಗಳಿಗೆಲ್ಲ ಈಗ ಸ್ವಲ್ಪವಾದರೂ ಪರಿಹಾರ ಸಿಕ್ಕಿದೆ. ಅದುವೇ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ. ಎಐ ತಂತ್ರಜ್ಞಾನವನ್ನು ಬಳಸಿ ಸುಲಭವಾಗಿ ಬೇಕಾದ ಮಾಹಿತಿಯನ್ನು ಹುಡುಕಬಹುದು. ಎಲ್ಲಾ ಎಐ ಮಾಡೆಲ್ಗಳೂ ಇದನ್ನು ಮಾಡಲಾರವು. ಯಾಕೆಂದರೆ ಎಲ್ಲಾ ಎಐ ಮಾಡೆಲ್ಗಳೂ ರಿಯಲ್-ಟೈಮ್ ಇಂಟರ್ನೆಟ್ಗೆ ಸಂಪರ್ಕಗೊಂಡಿರುವುದಿಲ್ಲ. ಹೀಗಾಗಿ ಅವುಗಳಿಗೆ ಎಲ್ಲಿಯವರೆಗೆ ಇಂಟರ್ನೆಟ್ನ ಮಾಹಿತಿಯನ್ನು ಒದಗಿಸಿ ತರಬೇತಿ ನೀಡಲಾಗಿರುತ್ತದೋ ಅಲ್ಲಿಯವರೆಗೆ ಮಾತ್ರ ಮಾಹಿತಿಯನ್ನು ನೀಡಬಲ್ಲವು. ಉದಾಹರಣೆಗೆ ಚಾಟ್ಜಿಪಿಟಿ-5 ಅನ್ನು 2024ರ ಡಿಸೆಂಬರ್ವರೆಗೆ ಒಟ್ಟಾರೆ ಇಂಟರ್ನೆಟ್ನ ಮಾಹಿತಿ ನೀಡಿ ತರಬೇತಿ ನೀಡಲಾಗಿದೆ ಎಂದರೆ ಇದೇ ಚಾಟ್ಜಿಪಿಟಿ ಬಳಸಿ 2025ರ ವರ್ಷಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ. ಹಾಗೆ ಮಾಹಿತಿ ಕೊಟ್ಟರೂ ಅದು ಸಮರ್ಪಕವಾಗಿರುವುದಿಲ್ಲ. ಹೀಗಾಗಿ ಲೇಟೆಸ್ಟ್ ಮಾಹಿತಿ ಹುಡುಕುವಾಗ ಇಂಟರ್ನೆಟ್ಗೆ ನೇರವಾಗಿ ಸಂಪರ್ಕಗೊಂಡಿರುವ ಎಲ್ಎಲ್ಎಮ್ಗಳನ್ನು ಬಳಸಬೇಕು.
ಕೇಳಿದ ಮಾಹಿತಿಯನ್ನು ಹೆಕ್ಕಿ ತೆಗೆಯುವ ಕಾಮೆಟ್ ಬ್ರೌಸರ್
Perplexity AI ನ ಕಾಮೆಟ್ ಬ್ರೌಸರ್ ಈ ಕೆಲಸವನ್ನು ಸುಲಭವಾಗಿ ಮಾಡುತ್ತದೆ. ಇದು ಏಜೆಂಟಿಕ್ ಬ್ರೌಸರ್ ಆಗಿದ್ದು, ರಿಯಲ್-ಟೈಮ್ ಇಂಟರ್ನೆಟ್ಗೆ ಸಂಪರ್ಕಗೊಂಡಿದೆ. ಹೀಗಾಗಿ ಅದು ಒದಗಿಸುವ ಮಾಹಿತಿ ಲೇಟೆಸ್ಟ್ ಆಗಿರುತ್ತದೆ. ನಾವು ಕೇಳಿದ ಪ್ರಶ್ನೆಯನ್ನು ಅರ್ಥಮಾಡಿಕೊಂಡು ಸಾವಿರಾರು ಮೂಲಗಳನ್ನು ಶೋಧಿಸಿ, ನಮಗೆ ನಿಖರವಾಗಿ ಬೇಕಾಗಿರುವ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಕ್ರಮಬದ್ಧವಾಗಿ ಜೋಡಿಸಿ ನಾವು ಕೇಳಿದ ಫಾರ್ಮ್ಯಾಟ್ನಲ್ಲಿ ಒದಗಿಸುತ್ತದೆ. ಇದನ್ನು ಎಲ್ಎಲ್ಎಂ ಅಥವಾ ಎಐ ಮಾಡೆಲ್ಗಳ ವಿಚಾರದಲ್ಲಿ ‘ಡೀಪ್ ರಿಸರ್ಚ್’ ಎಂದು ಕರೆಯಲಾಗುತ್ತದೆ. ಬಹುತೇಕ ಎಲ್ಲಾ ಎಐ ಮಾಡೆಲ್ಗಳೂ ಈ ಫೀಚರ್ ಅನ್ನು ಒಳಗೊಂಡಿರುತ್ತವೆ. ಆದರೆ, ಎಲ್ಲವೂ ರಿಯಲ್-ಟೈಮ್ ಇಂಟರ್ನೆಟ್ಗೆ ಸಂಪರ್ಕ ಹೊಂದಿರುವುದಿಲ್ಲ. ಕೆಲವೇ ಕೆಲವು ಮಾಡೆಲ್ಗಳೂ ಈ ಕೆಲಸ ಮಾಡಬಲ್ಲವು. ಅವುಗಳಲ್ಲಿ ಪರ್ಪ್ಲೆಕ್ಸಿಟಿ ಎಐ ಕೂಡ ಒಂದು.
ನಾವು ಕೇಳುವ ಪ್ರಶ್ನೆಯನ್ನು ಆದಷ್ಟೂ ವಿವರವಾಗಿ, ಸ್ಪಷ್ಟವಾಗಿ ಬರೆಯಬೇಕು. ನಮಗೆ ಏನು ಬೇಕು, ಎಲ್ಲಿಂದ ಮಾಹಿತಿ ಶೋಧಿಸಬೇಕು, ಯಾವ ಮಾನದಂಡಗಳ ಆಧಾರದಲ್ಲಿ ಮಾಹಿತಿಯನ್ನು ನಂಬಲರ್ಹ ಎಂದು ಪರಿಭಾವಿಸಬೇಕು ಎಂಬಿತ್ಯಾದಿ ವಿವರಗಳನ್ನು ನಮೂದಿಸಿ, ಅಂತಿಮವಾಗಿ ನಮಗೆ ಯಾವ ಫಾರ್ಮ್ಯಾಟ್ನಲ್ಲಿ ಮಾಹಿತಿಯ ಔಟ್ಪುಟ್ ಬೇಕಾಗಿದೆ ಎಂಬುದನ್ನು ತಪ್ಪದೇ ನಮೂದಿಸಬೇಕು. ನಮಗೆ ಬೇಕಿರುವ ಮಾಹಿತಿ ಲೇಖನವೋ, ವರದಿಯೋ, ಟೇಬಲ್ ರೂಪದಲ್ಲೂ, ಚಾರ್ಟ್ಗಳ ರೂಪದಲ್ಲೋ ಜೊತೆಗೆ ವರ್ಡ್, ಎಕ್ಸೆಲ್, ಪಿಡಿಎಫ್ ಇತ್ಯಾದಿ ಫೈಲ್ ಫಾರ್ಮ್ಯಾಟ್ಗಳಲ್ಲಿ ಬೇಕಿದ್ದರೆ ಅದನ್ನು ನಮೂದಿಸಬೇಕು. ಆಗ ಎಐ ನಮ್ಮ ಅಗತ್ಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಅರ್ಥಮಾಡಿಕೊಂಡು ಆಳವಾಗಿ ಸಂಶೋಧನೆ ನಡೆಸುತ್ತದೆ. ಹೀಗಾಗಿ ಇದಕ್ಕಾಗಿ 10-15 ನಿಮಿಷಗಳನ್ನು ತೆಗೆದುಕೊಳ್ಳಬಹುದು. ನಾವು ತಾಳ್ಮೆಯಿಂದ ಕಾಯಬೇಕು. ಒಮ್ಮೆ ಮಾಹಿತಿಯನ್ನು ಕೊಟ್ಟ ನಂತರ ಅದರಲ್ಲಿ ನಾವು ಬಯಸಿದ ಹಾಗೆ ಮಾಹಿತಿ ಇಲ್ಲದೇ ಹೋದರೆ ಮತ್ತೆ ಮರು ಪ್ರಾಂಪ್ಟ್ಗಳ ಮೂಲಕ ಅದನ್ನು ತಿದ್ದುಪಡಿ ಮಾಡುತ್ತಾ ಹೋಗಬೇಕು. ಕೆಲ ಹೊತ್ತಿನ ನಂತರ ನಾವು ಬಯಸಿದ ಮಾಹಿತಿ ದೊರೆಯುತ್ತದೆ. ಮಾಹಿತಿ ಎಷ್ಟು ನಿಖರ ಮತ್ತು ಸ್ಪಷ್ಟವಾಗಿರುತ್ತದೆ ಎನ್ನುವುದು ನಮ್ಮ ಪ್ರಾಂಪ್ಟ್ ಅನ್ನು ಅವಲಂಬಿಸಿರುತ್ತದೆ.
ಕಾಮೆಟ್ ಉಚಿತವಾಗಿದ್ದು, ಮೊಬೈಲ್ನಲ್ಲೂ ಲಭ್ಯವಿದೆ. ಆದರೆ, ಮಾಹಿತಿ ತಪ್ಪಿರಬಹುದು. ಮತ್ತೆ ಮತ್ತೆ ಪ್ರಾಂಪ್ಟಿಂಗ್ ಮಾಡುತ್ತಾ ನಿರೀಕ್ಷಿತ ಫಲಿತಾಂಶ ಪಡೆಯಬಹುದು. ಡೀಪ್ ರೀಸರ್ಚ್ ಎನ್ನುವುದು ಸಂಶೋಧಕರಿಗೆ ನಿಜವಾಗಿಯೂ ವರ ಇದ್ದಂತೆ. ದಿನಗಟ್ಟಲೆ ತೆಗೆದುಕೊಳ್ಳುವ ಮಾಹಿತಿಯನ್ನು ಗಂಟೆಗಳಲ್ಲಿ ಹುಡುಕಿ ತೆಗೆಯಬಹುದು. ನಮಗೆ ಬೇಕಾದ ಕ್ರಮದಲ್ಲಿ ಜೋಡಿಸಬಹುದು. ಮಾಹಿತಿಯ ಒಳಗೆ ಅಡಗಿರುವ ‘ಮಾದರಿ’ಯನ್ನು ಗುರುತಿಸಬಹುದು. ಇವೆಲ್ಲಾ ಆಫ್ಲೈನ್ನಲ್ಲಿ ನಾವು ಮಾಡುವ ಸಂಶೋಧನೆಯಿಂದ ಸಾಧ್ಯವಿಲ್ಲ. ಇದು ಸಂಶೋಧಕರಿಗೆ ಮಾತ್ರವಲ್ಲದೆ ಎಲ್ಲರಿಗೂ ಅನುಕೂಲವಾಗುವ ಫೀಚರ್. ವಿಶೇಷವಾಗಿ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪತ್ರಕರ್ತರಿಗೆ ಹೆಚ್ಚು ಉಪಯೋಗಕ್ಕೆ ಬರುತ್ತದೆ. ಎಐ ಮಾಡೆಲ್ಗಳನ್ನು ಬಳಸಿ ಡೀಪ್ ರೀಸರ್ಚ್ ಮಾಡಲು ಇಂದು ಕೊಟ್ಟಿರುವ ಪ್ರಾಂಪ್ಟ್ ಅನ್ನು ಕಾಮೆಟ್ ಎಂಬ ಬ್ರೌಸರ್ನಲ್ಲಿ ಬಳಸಿ ಪರೀಕ್ಷಿಸಬಹುದು. ಆದರೆ, ಮರೆಯದೇ ಚಾಟ್ ವಿಂಡೋದಲ್ಲಿ ಕಾಣಿಸುವ ಡೀಪ್ ರೀಸರ್ಚ್ ಎಂಬ ಬಟನ್ ಆಯ್ಕೆ ಮಾಡಿ.
🧠 ಇಂದಿನ ಪ್ರಾಂಪ್ಟ್:
“ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ, ಕ್ಷೇತ್ರದ ಬಗೆಗೆ ಅಪಾರ ಜ್ಞಾನ ಹೊಂದಿರುವ [ಸಿನಿಮಾ ತಜ್ಞ]ನಾಗಿರುವ ನೀವು, ಕನ್ನಡದ ಹೆಸರಾಂತ ನಟ [ಡಾ.ರಾಜ್ಕುಮಾರ್] ಅವರು ನಟಿಸಿದ ಎಲ್ಲಾ ಕನ್ನಡ ಚಲನಚಿತ್ರಗಳ ಪಟ್ಟಿಯನ್ನು ಕ್ರಮಬದ್ಧವಾದ ಟೇಬಲ್ ರೂಪದಲ್ಲಿ ಒದಗಿಸಿ:
- ಪಟ್ಟಿಯು ರಾಜಕುಮಾರ್ ನಟಿಸಿದ ಮೊದಲ ಚಿತ್ರದಿಂದ ಕೊನೆಯ ಚಿತ್ರಗಳವರೆಗೆ ಬಿಡುಗಡೆಯಾದ ವರ್ಷದ ಅನುಸಾರ ಕಾಲಾಕ್ರಮದಲ್ಲಿ ಇರಲಿ
- ಚಿತ್ರದ ಹೆಸರು, ತೆರೆಕಂಡ ವರ್ಷ ಮತ್ತು ರಾಜ್ಕುಮಾರ್ ಜೊತೆ ನಟಿಸಿದ ನಾಯಕಿಯ ಹೆಸರು ವಿವರ ಇರಲಿ
- ಟೇಬಲ್ ಕ್ರಮ ಹೀಗಿರಲಿ:
ಚಿತ್ರದ ಹೆಸರು-ತೆರೆಕಂಡ ವರ್ಷ-ನಾಯಕಿಯ ಹೆಸರು
ಆಳವಾದ ಸಂಶೋಧನೆ ನಡೆಸಿ ಈ ಮಾಹಿತಿಯನ್ನು ನಂಬಲರ್ಹ ಮೂಲಗಳಿಂದ ಶೋಧಿಸಿ, ಬಳಿಕ ಅದನ್ನು ಸರಿ ಇದೆಯೇ ಎಂದು ಪರಿಶೀಲಿಸಿ ಎಕ್ಸೆಲ್ ಫೈಲ್ನಲ್ಲಿ ಕೇಳಿದ ಮಾಹಿತಿಯನ್ನು ಒದಗಿಸಿ. ಪ್ರಶ್ನೆಗಳಿದ್ದರೆ ಮೊದಲೇ ಪರಿಹರಿಸಿಕೊಳ್ಳಿ.”
💻 ಈ ಪ್ರಾಂಪ್ಟ್ ಅನ್ನು ನೇರವಾಗಿ ಕೆಳಗಿನ ಎಐ ಟೂಲ್ನಲ್ಲಿ ಬಳಸಿ:
Perplexity → https://www.perplexity.ai
🗣️ ನಿಮ್ಮ ಅನುಭವವನ್ನು ಕಾಮೆಂಟ್/ಸ್ಟೇಟಸ್ನಲ್ಲಿ ಹಂಚಿಕೊಳ್ಳಿ. ಇನ್ನೂ ಹೆಚ್ಚಿನ ಸಹಾಯ ಅಗತ್ಯವಿದ್ದರೆ ಸಂಕೋಚವಿಲ್ಲದೆ ನಮ್ಮನ್ನು ಸಂಪರ್ಕಿಸಿ.
🌍 ಕನ್ನಡದಲ್ಲಿ AI ಕಲಿಯುವ #ಕನ್ನಡದಲ್ಲಿಪ್ರಾಂಪ್ಟಿಂಗ್ ಅಭಿಯಾನದಲ್ಲಿ ಭಾಗವಹಿಸಿ, ಸರಳವಾಗಿ ಎಐ ಬಳಸುವುದನ್ನು ಕಲಿಯಿರಿ.
ಇಮೇಲ್ ಮೂಲಕ ಪ್ರತಿದಿನ ಪ್ರಾಂಪ್ಟ್, ಎಐ ಕುರಿತ ಅಪ್ಡೇಟ್ಸ್, ಲೇಖನಗಳು ಬೇಕೇ?
ಇಲ್ಲಿ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ: www.abhinavaai.tech
📲 ನಮ್ಮ WhatsApp ಚಾನೆಲ್ಗೆ ಸೇರಿ: https://shorturl.at/eFArX
🧡 “ಮಾಹಿತಿ ಎಲ್ಲೆಡೆಯೂ ಇದೆ, ಆದರೆ ಅರಿವು ಆಳವಾದ ಹುಡುಕಾಟದಲ್ಲಿ ಮಾತ್ರ ಸಿಗುತ್ತದೆ.”
#KannadaPrompting | #AIinKannada | #KannadaPrompts | #AbhinavaAI | #DrRameshE | #ArtificialIntelligence #Brainstroming #BusinessIdea


