ಉದ್ಯೋಗ ಸಾಗರದಲ್ಲಿ ಎಐ ಸುನಾಮಿ
AI ಅನಂತ ಅವತಾರ – ಭಾಗ 6
ಡಾ.ರಮೇಶ್ ನಿಂಬೆಮರದಳ್ಳಿ
ಸಂಪೂರ್ಣ ಸ್ವತಂತ್ರವಾಗಿ ಕೆಲಸ ಮಾಡುವ ಮ್ಯಾನಸ್ ಎಂಬ ಸ್ವಾಯತ್ತ ಎಐ ಏಜೆಂಟ್ ಹೇಗೆ ಲಕ್ಷಾಂತರ ಉದ್ಯೋಗಗಳಿಗೆ ಕತ್ತರಿ ಹಾಕಲಿದೆ ಎನ್ನುವುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಒಟ್ಟಾರೆ ಉದ್ಯೋಗ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಪರಿವರ್ತನೆಗಳೇನು ಎಂಬುದನ್ನು ಈ ಸಂಚಿಕೆಯಲ್ಲಿ ಚರ್ಚಿಸಲಾಗಿದೆ. ಎಐ, ಒಂದೆಡೆ ಲಕ್ಷಾಂತರ ಉದ್ಯೋಗಗಳನ್ನು ಕಸಿಯುತ್ತಿದ್ದರೆ ಮತ್ತೊಂದೆಡೆ, ಲಕ್ಷಾಂತರ ಹೊಸ ಕೆಲಸಗಳನ್ನೂ ಹುಟ್ಟುಹಾಕುತ್ತಿದೆ. ತಕ್ಷಣಕ್ಕೆ ಯಾವ ಕೆಲಸಗಳು ಹೆಚ್ಚು ಅಪಾಯದಲ್ಲಿವೆ, ಯಾವ ಕೆಲಸಗಳು ಹೊಸದಾಗಿ ಹುಟ್ಟಿಕೊಳ್ಳುತ್ತಿವೆ ಎನ್ನುವುದನ್ನೂ ಲೇಖನ ಒಳಗೊಂಡಿದೆ. ಹೊಸ ಕೌಶಲಗಳನ್ನು ಕಲಿತು ಹೊಸ ಅವಕಾಶಕ್ಕಾಗಿ ಸಜ್ಜಾಗುವುದೇ ಈ ಕಂಟಕದಿಂದ ಪಾರಾಗುವ ಏಕೈಕ ಮಾರ್ಗವಾಗಿದೆ.
ಶಂಕರ್, ತನ್ನ ಏರಿಯಾದಲ್ಲಿ ಕಾಡುತ್ತಿದ್ದ ನೆಟ್ವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದ. ಸಿಟ್ಟಿನಿಂದಲೇ ಟೆಲಿಕಾಂ ಕಂಪನಿಗೆ ಕರೆ ಮಾಡಿದ. ಆ ಕಡೆಯಿಂದ ಒಂದು ಸಿಹಿ ಧ್ವನಿ, “ನಮಸ್ಕಾರ, ಶಂಕರ್ರವರೇ! ನಿಮ್ಮ ಸಮಸ್ಯೆ ಏನು?” ಎಂದು ಕೇಳಿತು. ಶಂಕರ್ ತನ್ನ ತೊಂದರೆಯನ್ನು ಸಿಟ್ಟಿನಲ್ಲೇ ವಿವರಿಸಿದ. ಅದರೆ ಆ ಕಡೆಯಿದ್ದ ಕಾಲ್ಸೆಂಟರ್ ಹುಡುಗಿ ಶಾಂತವಾಗಿ ಆಲಿಸುತ್ತಾ, ಸಾವಧಾನವಾಗಿ ಉತ್ತರಿಸುತ್ತಿದ್ದಳು. ಶಂಕರ್ನ ಸಮಸ್ಯೆ ಸರಿಯಾಗಲು ಸೆಟ್ಟಿಂಗ್ನಲ್ಲಿ ಕೆಲವು ಬದಲಾವಣೆ ಸೂಚಿಸಿ, ತನ್ನ ಕಡೆಯಿಂದಲೇ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದಳು. ಎರಡೇ ನಿಮಿಷದಲ್ಲಿ ಮಾತುಕತೆ ಮುಗಿಯಿತು; ಸಮಸ್ಯೆ ಬಗೆಹರಿದು ಹೋಯಿತು; ಶಂಕರ್ ಸಂತೋಷದಿಂದ “ಧನ್ಯವಾದ” ಹೇಳಿದ. ಆ ಕಡೆಯಿಂದ, “ವಂದನೆಗಳು, ಶುಭವಾಗಲಿ ನಿಮಗೆ. ನಾನು ನಿಮ್ಮ ಎಐ ಸಹಾಯಕಿ,” ಎಂದು ಕರೆ ಬಂದ್ ಆಯಿತು. ಶಂಕರ್ಗೆ ಶಾಕ್ ಆಯಿತು. ತಾನು ಇಷ್ಟೊತ್ತು ಮಾತಾಡಿದ್ದು ಹುಡುಗಿಯ ಜೊತೆ ಅಲ್ಲ, ಎಐ ಚಾಟ್ಬಾಟ್ ಜೊತೆ ಎಂಬುದು ತಡವಾಗಿ ತಿಳಿಯಿತು.
ಇದು, ಮುಂದೆ ಉದ್ಯೋಗ ಮಾರುಕಟ್ಟೆಯಲ್ಲಿ ನಾವು ನೋಡಲಿರುವ ಒಂದು ಮಹಾಪರಿವರ್ತನೆಗೆ ಪೀಠಿಕೆಯಾಗಿದೆ. ಕೃತಕ ಬುದ್ಧಿಮತ್ತೆ (AI) ಎಂಬ ತಂತ್ರಜ್ಞಾನ ಇಂದು ಶಂಕರ್ನಂತಹ ಕೋಟ್ಯಂತರ ಗ್ರಾಹಕರಿಗೆ ಸಹಾಯ ಮಾಡುತ್ತಾ, ನೂರಾರು ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಾ ತಾನೇ ಕಾಲ್ ಸೆಂಟರ್ ಕೆಲಸವನ್ನು ನಿಭಾಯಿಸುತ್ತಿದೆ. ಗೂಗಲ್ನ Duplex ಈಗಾಗಲೇ ಗ್ರಾಹಕ ಸೇವೆಗಳಲ್ಲಿ ಕೆಲಸ ಮಾಡುತ್ತಿದೆ. ಗ್ರಾಹಕನಿಗೆ ತಾನು ಎಐ ಜೊತೆ ಮಾತಾಡುತ್ತಿದ್ದೇನೆ ಎಂಬ ಸುಳಿವೂ ದೊರೆಯದಷ್ಟು ಸಹಜವಾಗಿ ಇದು ಕೆಲಸ ಮಾಡುತ್ತದೆ. ಇದಕ್ಕೆ “ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್” (NLP) ಎಂಬ ತಂತ್ರಜ್ಞಾನ ಸಹಾಯ ಮಾಡುತ್ತದೆ. ಇದು ಎಐಗೆ ಮನುಷ್ಯರ ಭಾಷೆಯನ್ನು ಅರ್ಥಮಾಡಿಕೊಂಡು ಉತ್ತರಿಸುವ ಶಕ್ತಿ ನೀಡುತ್ತದೆ. ದಿನಕ್ಕೆ 24 ಗಂಟೆಯೂ ಕೆಲಸ ಮಾಡಬಲ್ಲ, ಮನುಷ್ಯರಂತೆ ತಪ್ಪು ಮಾಡದ, ಒಮ್ಮೆಗೇ ಹಲವು ಗ್ರಾಹಕರೊಂದಿಗೆ ಮಾತನಾಡಬಲ್ಲ ಹಾಗೂ ಎಲ್ಲವನ್ನೂ ಸ್ವತಂತ್ರವಾಗಿ ನಿರ್ವಹಿಸುವ ಇದನ್ನು ‘ಸಂವಾದಾತ್ಮಕ AI ಏಜೆಂಟ್’ ಎಂದು ಕರೆಯುತ್ತಾರೆ. ಮುಂದಿನ ದಿನಗಳಲ್ಲಿ ಕಂಪನಿಗಳಿಂದ ನಾವು ಸ್ವೀಕರಿಸುವ ಬಹುತೇಕ ಕರೆಗಳು ಇದೇ ಎಐ ಏಜೆಂಟ್ನಿಂದ ಬಂದಿರುತ್ತವೆ. ಅದು ನಮಗೆ ತಿಳಿಯುವ ಹೊತ್ತಿಗೆ ಮಾತುಕತೆ ಮುಗಿದೇ ಹೋಗಿರುತ್ತದೆ.
ಮನುಷ್ಯರಂತೆಯೇ ಮಾತಾಡುವ, ಆಲೋಚಿಸುವ ಈ ತಂತ್ರಜ್ಞಾನ ದಿನವೂ ಲಕ್ಷಾಂತರ ಕೆಲಸಗಳನ್ನು ತಮ್ಮ ಕೈವಶ ಮಾಡಿಕೊಳ್ಳುತ್ತಿದೆ. ಹಾಗಂತ ಇದು ಬರೀ ಕೆಲಸ ಕಿತ್ತುಕೊಳ್ಳುತ್ತಿಲ್ಲ, ಹೊಸ ಅವಕಾಶಗಳನ್ನೂ ಹೊತ್ತು ತರುತ್ತಿದೆ. ವರ್ಲ್ಡ್ ಎಕನಾಮಿಕ್ ಫೋರಮ್ನ 2025ರ ‘ಫ್ಯೂಚರ್ ಆಫ್ ಜಾಬ್ಸ್ ರಿಪೋರ್ಟ್’ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಎಐನಿಂದ ವಿಶ್ವದಾದ್ಯಂತ 1.9 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಅದರಲ್ಲಿ ದೊಡ್ಡ ಪಾಲು ಭಾರತಕ್ಕೇ ದೊರೆಯಲಿದೆ. ಸ್ಮಾರ್ಟ್ ಸಾಫ್ಟ್ವೇರ್ ರೂಪಿಸುವ ಎಐ ತಜ್ಞರು, ಡೇಟಾ ವಿಶ್ಲೇಷಕರು, ಅಥವಾ ಕಾರ್ಖಾನೆಗಳಲ್ಲಿ ರೋಬಾಟ್ಗಳನ್ನು ನಿರ್ವಹಿಸುವ ತಂತ್ರಜ್ಞರು—ಇವೆಲ್ಲಾ ಹೊಸದಾಗಿ ಸೃಷ್ಟಿಯಾಗುವ ಹೊಸ ಹುದ್ದೆಗಳು. NASSCOM ಹೇಳುವಂತೆ, 2028ರ ವೇಳೆಗೆ ಎಂದರೆ ಮುಂದಿನ ಮೂರು ವರ್ಷಗಳಲ್ಲಿ ಭಾರತ ಒಂದರಲ್ಲೇ ಸುಮಾರು 27 ಲಕ್ಷ ಹೊಸ ಎಐ ಉದ್ಯೋಗಗಳು ಸೃಷ್ಟಿಯಾಗುತ್ತವೆ.
ಸಾಫ್ಟ್ವೇರ್ ರಚಿಸಲು ಎಂಜಿನಿಯರ್ ಬೇಕಿಲ್ಲ
ಮಾಹಿತಿ ತಂತ್ರಜ್ಞಾನ ಕ್ಷೇತ್ರ ಭಾರತದ ಆರ್ಥಿಕತೆಯ ಬೆನ್ನೆಲುಬು. ಸಾಫ್ಟ್ವೇರ್ ರಚನೆಯಿಂದ ಸೈಬರ್ ಸುರಕ್ಷತೆವರೆಗೆ ಎಐ ಎಲ್ಲವನ್ನೂ ವೇಗಗೊಳಿಸುತ್ತಿದೆ. TCS, ಇನ್ಫೋಸಿಸ್ನಂತಹ ಕಂಪನಿಗಳು ಎಐ ಬಳಸಿ ಕೆಲಸವನ್ನು ಸುಲಭಗೊಳಿಸುತ್ತಿವೆ. ಇದರಿಂದ ಸದ್ಯಕ್ಕೆ ಕೋಡರ್ಗಳು ಮತ್ತು ಇಂಜಿನಿಯರ್ಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಅಚ್ಚರಿಯ ಬೆಳವಣಿಗೆ. ಆದರೆ, ಇನ್ನು ಕೆಲವೇ ವರ್ಷಗಳಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಕೃತಕ ಬುದ್ದಿಮತ್ತೆಯು ಈಗಾಗಲೇ ಸರಳವಾದ ಸಾಫ್ಟ್ವೇರ್ಗೆ ಬೇಕಾದ ಅಷ್ಟೂ ಕೋಡ್ ಅನ್ನು ಬರೆಯುತ್ತಿದೆ. ಪ್ರೋಗ್ರಾಮ್ನಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿ ಅದನ್ನು ಸರಿಪಡಿಸುವ ಕೆಲಸವನ್ನೂ (ಇದನ್ನು ಬಗ್ ಫಿಕ್ಸಿಂಗ್ ಎನ್ನಲಾಗುತ್ತದೆ) ಎಐ ಮಾಡುತ್ತಿದೆ. ಒಂದು ಸಾಫ್ಟ್ವೇರ್ಗೆ ಬೇಕಾದ ನೀಲನಕ್ಷೆ, ಫ್ರೇಮ್ವರ್ಕ್ ತಯಾರಿಸಲು ಎಐ ಬಳಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಹಲವು ಎಐ ಏಜೆಂಟ್ಗಳು ಕೂಡಿ ಅತ್ಯಂತ ಸಂಕೀರ್ಣವಾದ ಸಾಫ್ಟ್ವೇರ್ ಅನ್ನೂ ರೂಪಿಸುತ್ತವೆ. ಆಗ ಸಾಫ್ಟ್ವೇರ್ ಎಂಜಿನಿಯರ್ಗಳು ತಮ್ಮ ಕೋಡಿಂಗ್ ವೃತ್ತಿ ಬಿಟ್ಟು ಇತರೆ ಎಐ ನಿರ್ವಹಣೆಯ ಕೆಲಸಗಳತ್ತ ಮುಖ ಮಾಡಬೇಕಾಗುತ್ತದೆ.
ವಕೀಲಿಕೆ ಇನ್ನು ಕಷ್ಟಕಷ್ಟ
ಕೃತಕ ಬುದ್ಧಿಮತ್ತೆ ಕಾನೂನು ಕ್ಷೇತ್ರವನ್ನು ಗಣನೀಯವಾಗಿ ಬದಲಾಯಿಸುತ್ತಿದೆ. ವಿಶೇಷವಾಗಿ ದಾಖಲೆಗಳ ವಿಶ್ಲೇಷಣೆ ಮತ್ತು ಕಾನೂನು ಸಂಬಂಧಿ ಸಂಶೋಧನೆಯಲ್ಲಿ. ‘ಲೀಗಲ್ ಟೆಕ್’ ಸಾಫ್ಟ್ವೇರ್ಗಳು ಲಕ್ಷಾಂತರ ಪುಟಗಳ ಕಾನೂನು ದಾಖಲೆಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಕ್ಯಾನ್ ಮಾಡಿ, ಮುಖ್ಯವಾದ ಅಂಶಗಳನ್ನು ಗುರುತಿಸಬಲ್ಲವು. ಇದು ವಕೀಲರಿಗೆ ಗಂಟೆಗಟ್ಟಲೇ ಇಲ್ಲವೇ ದಿನಗಟ್ಟಲೆ ತೆಗೆದುಕೊಳ್ಳಬಹುದು. NASSCOM 2025ರ ವರದಿಯ ಪ್ರಕಾರ, ಭಾರತದಲ್ಲಿ 15-20% ಕಾನೂನು ಸಂಶೋಧನಾ ಕೆಲಸಗಳು ಈಗ ಎಐ ಮೂಲಕ ಸ್ವಯಂಚಾಲಿತವಾಗಿವೆ. ಇದರಿಂದ ಕಾನೂನು ಸಹಾಯಕರಿಗೆ ಹೆಚ್ಚಿನ ಕೆಲಸವಿಲ್ಲ. ಆದರೆ ಎಐ ತಂತ್ರಜ್ಞಾನವನ್ನು ಸಂಯೋಜಿಸುವ ಮತ್ತು ನೈತಿಕ ಸಮಸ್ಯೆಗಳನ್ನು ನಿರ್ವಹಿಸುವ ಹೊಸ ಕೆಲಸಗಳು ಸೃಷ್ಟಿಯಾಗುತ್ತಿವೆ.
ನ್ಯಾಯಮೂರ್ತಿಗೆ ಯಂತ್ರವೇ ಸಹಾಯಕ
ನ್ಯಾಯದಾನ ಕ್ಷೇತ್ರದಲ್ಲಿ ಎಐ ತೀರ್ಪುಗಾರರು ನ್ಯಾಯಾಲಯಗಳಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಐ ಆಧಾರಿತ ವ್ಯವಸ್ಥೆಗಳು ಪ್ರಕರಣಗಳ ಇತಿಹಾಸವನ್ನು ವಿಶ್ಲೇಷಿಸಿ, ಶಿಕ್ಷೆಯ ಸಾಧ್ಯತೆಗಳನ್ನು ಊಹಿಸಬಲ್ಲವು ಮತ್ತು ದೊಡ್ಡ ಪ್ರಮಾಣದ ಡೇಟಾದಿಂದ ಮಾಹಿತಿ ಒದಗಿಸಬಲ್ಲವು. ಭಾರತದಲ್ಲಿ, ಸುಪ್ರೀಂ ಕೋರ್ಟ್ನ SUVAS (Supreme Court Vidhik Anuvaad Software) ಎಂಬ AI ಉಪಕರಣವು ಈಗಾಗಲೇ ಇಂಗ್ಲಿಷ್ ತೀರ್ಪುಗಳನ್ನು ಭಾಷಾಂತರಿಸುತ್ತಿದೆ. ಇದು ನ್ಯಾಯದಾನದ ವೇಗವನ್ನು ಹೆಚ್ಚಿಸಿದೆ. ಆದರೆ, ಎಐ ತೀರ್ಪುಗಳಲ್ಲಿ ಪಕ್ಷಪಾತದ ಆತಂಕ ಇದೆ. ಎಂದರೆ, ಡೇಟಾದಲ್ಲಿ ತಪ್ಪಿದ್ದರೆ ತೀರ್ಮಾನಗಳೂ ತಪ್ಪಾಗಬಹುದು. ಭವಿಷ್ಯದಲ್ಲಿ, ನ್ಯಾಯಾಧೀಶರ ಸಹಾಯಕನಾಗಿ AI ಬೆಳೆಯಬಹುದು, ಆದರೆ ನ್ಯಾಯಮೂರ್ತಿಯ ಸ್ಥಾನವನ್ನು ಸಂಪೂರ್ಣವಾಗಿ ತೆಗೆದುಕೊಳ್ಳುವ ಸಾಧ್ಯತೆ ಎಜಿಐ ಬರುವವರೆಗೂ ಇಲ್ಲ.
ಡೇಟಾ ಎಂಟ್ರಿ ಕೆಲಸ ಮರೆತುಬಿಡಿ
ಹಣಕಾಸು ಕ್ಷೇತ್ರದಲ್ಲಿ ಎಐ ದೊಡ್ಡ ಪರಿವರ್ತನೆ ತರುತ್ತಿದೆ, ವಿಶೇಷವಾಗಿ ವಂಚನೆ ಪತ್ತೆ, ಸಾಲ ನಿರ್ವಹಣೆ ಮತ್ತು ಗ್ರಾಹಕ ಸೇವೆಯಲ್ಲಿ ಇದರ ಬಳಕೆ ಹೆಚ್ಚುತ್ತಿದೆ. ಆರ್ಬಿಐ ವರದಿಯ ಪ್ರಕಾರ, 2025ರಲ್ಲಿ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ 25% ವಹಿವಾಟು ಸಂಸ್ಕರಣೆಗಳು ಎಐ ಮೂಲಕ ನಡೆಯುತ್ತಿವೆ. ಇದು ಸಾಮಾನ್ಯ ಲೆಕ್ಕಿಗರು ಮತ್ತು ಡೇಟಾ ಎಂಟ್ರಿ ಕೆಲಸಗಳನ್ನು ಕಡಿಮೆ ಮಾಡಿದೆ. ಎಐ ಚಾಟ್ಬಾಟ್ಗಳು ಗ್ರಾಹಕರಿಗೆ 24/7 ಸಲಹೆ ನೀಡುತ್ತಿವೆ. SBI ಮತ್ತು HDFC ಬ್ಯಾಂಕ್ಗಳು ಈಗಾಗಲೇ ಇಂಥ ಚಾಟ್ಬಾಟ್ಗಳನ್ನು ಕೆಲಸಕ್ಕಿಳಿಸಿವೆ. ಜೊತೆಗೆ, ಎಐ ಆಧಾರಿತ ಟ್ರೇಡಿಂಗ್ ಆಲ್ಗಾರಿದಮ್ಗಳು ಷೇರು ಮಾರುಕಟ್ಟೆಯಲ್ಲಿ ವೇಗವಾಗಿ ಕಾರ್ಯನಿರ್ವಹಿಸುತ್ತಿವೆ. ಇದು ಸಾಂಪ್ರದಾಯಿಕ ಟ್ರೇಡರ್ಗಳಿಗೇ ಸವಾಲು ಒಡ್ಡಿದೆ. ಆದರೆ, ಇದರ ಜೊತೆಗೇ ಫಿನ್ಟೆಕ್ ಡೆವಲಪರ್ಗಳು ಮತ್ತು ಎಐ ರಿಸ್ಕ್ ಅನಾಲಿಸ್ಟ್ಗಳಂತಹ ಹೊಸ ಉದ್ಯೋಗಗಳು ಕಣ್ಣುಬಿಡುತ್ತಿವೆ.
ಶಾಲಾ ಮಕ್ಕಳಿಗೂ ಕೋಡಿಂಗ್ ಕಲಿಕೆ
ಉದ್ಯೋಗ ಕ್ಷೇತ್ರದಲ್ಲಿ ಎಐ ಭಾರಿ ಬದಲಾವಣೆ ತರುತ್ತಿರುವ ಮತ್ತು ತರಲಿರುವ ಕಾರಣದಿಂದ ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಉದ್ಯೋಗಿಗಳಿಗೆ ಎಐ ತರಬೇತಿ ನೀಡಿ ಸಜ್ಜುಗೊಳಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳ ಮೂಲಕ ಶಾಲೆಗಳಲ್ಲೂ ಎಐ ಹಾಗೂ ಕೊಡಿಂಗ್ ಕಲಿಸುವ ಯೋಜನೆ ರೂಪಿಸಿದೆ. ಐಐಟಿಗಳ ಜೊತೆ YUVAi ಎಂದರೆ “ಯೂತ್ ಫಾರ್ ಉನ್ನತಿ ಆಂಡ್ ವಿಕಾಸ್ ವಿತ್ ಎಐ” ಎಂಬ ಉಪಕ್ರಮ ಆರಂಭಿಸಲಾಗಿದ್ದು, 8ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕೌಶಲಗಳನ್ನು ಕಲಿಸುವುದು ಮತ್ತು ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವುದು ಇದರ ಗುರಿ.
ಬಿಪಿಒ ಉದ್ಯೋಗಿಗಳಿಗೆ ಅಪಾಯ
ಬಹುತೇಕ ಎಲ್ಲಾ ಉದ್ಯೋಗಗಳಲ್ಲೂ ಎಐ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತಿದೆ. ಆದರೆ ಕೆಲವು ಕ್ಷೇತ್ರಗಳು ಮತ್ತು ಉದ್ಯೋಗಗಳು ಹೆಚ್ಚು ಇಕ್ಕಟ್ಟಿಗೆ ಸಿಲುಕುತ್ತವೆ. ಅವುಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವುದು BPO ಕ್ಷೇತ್ರ. 2025ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಜನರೇಟಿವ್ ಎಐ ಚಾಟ್ಬಾಟ್ಗಳ ಮೂಲಕ ಮುಂದಿನ ಒಂದು ದಶಕದಲ್ಲಿ BPO ಕ್ಷೇತ್ರದಲ್ಲಿ ಉದ್ಯೋಗಗಳು ಗಣನೀಯವಾಗಿ ಕಡಿಮೆಯಾಗಲಿವೆ. NASSCOM ವರದಿಯಂತೆ, ಭಾರತದ ಐಟಿ ಕ್ಷೇತ್ರದಲ್ಲಿ ಸುಮಾರು 16 ಲಕ್ಷ ಜನ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಅಂದಾಜು 9 ಲಕ್ಷ ಜನರು ಕಡಿಮೆ ಕೌಶಲ್ಯವಿರುವ ಸೇವೆಗಳು ಮತ್ತು BPO ಉದ್ಯೋಗಗಳಲ್ಲಿ ತೊಡಗಿದ್ದಾರೆ. ಈ ಪೈಕಿ 20-30% ಉದ್ಯೋಗಗಳು ಈಗಾಗಲೇ ಎಐ ಆಟೊಮೇಷನ್ಗೆ ಒಳಗಾಗಿವೆ.
ಇನ್ನು, ಉತ್ಪಾದನಾ ಕ್ಷೇತ್ರದಲ್ಲಿ ಸರಳ ಮತ್ತು ಪುನರಾವರ್ತಿತ ಕೆಲಸಗಳು ಎಐ ಚಾಟ್ಬಾಟ್ ಮತ್ತು ರೋಬಾಟ್ಗಳಿಂದ ಬದಲಾಗುತ್ತಿವೆ. ದೇಶದ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ಪಾಲು 15-17% ಇದೆ. ಇಲ್ಲಿ ಹೆಚ್ಚಿನ ಕೌಶಲ್ಯವಿಲ್ಲದ ಕಾರ್ಮಿಕರ ಸಂಖ್ಯೆಯೇ ದೊಡ್ಡದಿದೆ. ಮೆಕ್ಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್ನ 2023ರ ವರದಿಯ ಪ್ರಕಾರ, ಎಐ ಮತ್ತು ಆಟೊಮೇಷನ್ನಿಂದಾಗಿ 2030ರ ವೇಳೆಗೆ ವಿಶ್ವದಾದ್ಯಂತ 40 ಕೋಟಿ ಉದ್ಯೋಗಗಳು ಇಲ್ಲವಾಗಬಹುದು. ಇದರಲ್ಲಿ ಭಾರತದ ಕೈಗಾರಿಕಾ ವಲಯದಲ್ಲಿ ಸುಮಾರು 5-7 ಲಕ್ಷ ಕೆಲಸಗಳು ತೊಂದರೆಗೆ ಸಿಲುಕಬಹುದು. ಟಾಟಾ ಮೋಟಾರ್ಸ್ನಂತಹ ಆಟೊಮೊಬೈಲ್ ಕಂಪನಿಗಳು ಈಗಾಗಲೇ AI ರೋಬಾಟ್ಗಳನ್ನು ತಮ್ಮ ಉತ್ಪಾದನಾ ಘಟಕಗಳಲ್ಲಿ ಬಳಸುತ್ತಿವೆ, ಇದರಿಂದ ಅಸೆಂಬ್ಲಿ ಲೈನ್ ಕೆಲಸಗಾರರಿಗೆ ಬೇಡಿಕೆ ಕುಸಿಯುತ್ತಿದೆ.
<aside> <img src="/icons/push-pin_gray.svg" alt="/icons/push-pin_gray.svg" width="40px" />
ಹೊಸ ಕೆಲಸಗಳು ನಿಮಗಾಗಿ ಕಾಯುತ್ತಿವೆ
ಎಐನಿಂದ ಭಾರತದಲ್ಲಿ ಕೆಲವು ಉದ್ಯೋಗಗಳಿಗೆ ಬೇಡಿಕೆ ಕಡಿಮೆಯಾಗುವ, ಉದ್ಯೋಗಗಳೇ ಇಲ್ಲವಾಗುವ ಸನ್ನಿವೇಶಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಹೊಸ ಉದ್ಯೋಗಗಳು ಮತ್ತು ಹೊಸ ಕ್ಷೇತ್ರಗಳೇ ಸೃಷ್ಟಿಯಾಗಲಿವೆ.
ಎಐ ಸ್ಪೆಷಲಿಸ್ಟ್ ಮತ್ತು ಡೆವಲಪ್ಪರ್: AI ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಈ ಯಂತ್ರಗಳನ್ನು ರೂಪಿಸುವ, ನಿರ್ವಹಿಸುವ ಮತ್ತು ಸುಧಾರಿಸುವ ತಜ್ಞರ ಬೇಡಿಕೆ ಜಾಸ್ತಿಯಾಗುತ್ತಿದೆ. NASSCOM ವರದಿಯ ಪ್ರಕಾರ, 2027ರ ವೇಳೆಗೆ ಭಾರತದಲ್ಲಿ AI ಮಾರುಕಟ್ಟೆ 17 ಬಿಲಿಯನ್ ಡಾಲರ್ ತಲುಪಲಿದೆ. ಇದರಿಂದ ಸುಮಾರು 27 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು. ಇದರಲ್ಲಿ ಮಷೀನ್ ಲರ್ನಿಂಗ್ ಇಂಜಿನಿಯರ್ಗಳು, ಡೇಟಾ ಸೈಂಟಿಸ್ಟ್ಗಳು, ಮತ್ತು ಎಐ ರಿಸರ್ಚರ್ಗಳಿಗೆ ಬೇಡಿಕೆ ಜಾಸ್ತಿ.ರೋಬಾಟ್ಗಳನ್ನು ತಯಾರಿಸುವ ಅಥವಾ ಸ್ಮಾರ್ಟ್ ಸಾಫ್ಟ್ವೇರ್ ರಚಿಸುವರು, ಪೈಥಾನ್, ಟೆನ್ಸರ್ಫ್ಲೋನಂತಹ ಪ್ರೋಗ್ರಾಮಿಂಗ್ ಲ್ಯಾಂಗ್ಲೇಜ್ ಕಲಿತವರಿಗೆ ಹೆಚ್ಚು ಡಿಮ್ಯಾಂಡ್.
AI ನೈತಿಕತೆ ಮತ್ತು ನೀತಿ ನಿರೂಪಣೆ: ಎಐ ತಂತ್ರಜ್ಞಾನದ ಬಳಕೆ ಹೆಚ್ಚುತ್ತಾ ಹೋದಂತೆ, ಅದರ ಸರಿಯಾದ ಬಳಕೆ ಮತ್ತು ನೈತಿಕತೆಯ ಬಗ್ಗೆ ಚರ್ಚೆ ಜೋರಾಗುತ್ತಿದೆ. ಇದರಿಂದ ಎಐ ಎಥಿಕ್ಸ್ ಆಫೀಸರ್ ಎಂಬ ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ತಜ್ಞರು ಎಐ ತಂತ್ರಜ್ಞಾನವು ಜನರಿಗೆ ತೊಂದರೆಯಾಗದಂತೆ ಮತ್ತು ಜನರ ಗೌಪ್ಯತೆ ಕಾಪಾಡುವಂತೆ, ಪಕ್ಷಪಾತವಿಲ್ಲದೇ ಸೇವೆ ಒದಗಿಸುವಂತೆ ನೋಡಿಕೊಳ್ಳುತ್ತಾರೆ. ಕಾರ್ಖಾನೆಗಳಲ್ಲಿ ಸೋಷಿಯಲ್ ವೆಲ್ಫೇರ್ ಆಫೀಸರ್ ಇದ್ದಂತೆ ಎಥಿಕ್ಸ್ ಆಫೀಸರ್, ಎಐ ಮೂಲಕ ಜನರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಸರಕಾರ ಮತ್ತು ಕಂಪನಿಗಳು ಎಐ ಸಂಬಂಧಿ ನೀತಿ ರೂಪಿಸುವವರಿಗೂ ಬೇಡಿಕೆ ಹೆಚ್ಚಲಿದೆ. ಇದಕ್ಕೆ ತಂತ್ರಜ್ಞಾನದ ಜೊತೆಗೆ ಕಾನೂನು ಮತ್ತು ಸಾಮಾಜಿಕ ಜ್ಞಾನವೂ ಇರಬೇಕಾಗುತ್ತದೆ.
ರೈತನ ಹೊಲದಲ್ಲಿ ಎಐ ತಜ್ಞರಿಗೆ ಕೆಲಸ: ಕೃಷಿಯಲ್ಲಿ ಭಾರತದ ಅರ್ಧದಷ್ಟು ಜನ ಕೆಲಸ ಮಾಡುತ್ತಾರೆ. ಎಐ ತಂತ್ರಜ್ಞಾನ ಇಲ್ಲಿಯೂ ನೆಲೆಯೂರಲು ಸಜ್ಜಾಗುತ್ತಿದೆ. ಹವಾಮಾನ ಪರಿಶೀಲನೆ, ಮಣ್ಣು ಪರೀಕ್ಷೆ, ತೋಟದ ಕಾವಲು ಕಾಯುವುದು, ನೀರಿನ ನಿರ್ವಹಣೆ ಮುಂತಾದ ಕೆಲಸಗಳನ್ನು ಮಾಡುತ್ತಿವೆ. ಇದು ವ್ಯಾಪಕವಾಗಿ ಬಳಕೆಗೆ ಬರಲು ಹೆಚ್ಚು ದಿನಗಳು ಬೇಕಾಗಿಲ್ಲ. ವರ್ಲ್ಡ್ ಎಕನಾಮಿಕ್ ಫೋರಮ್ನ ‘AI ಫಾರ್ ಇಂಡಿಯಾ 2030’ ಯೋಜನೆ, ಕೃಷಿಯನ್ನು ಆಧುನಿಕಗೊಳಿಸಿ ಹಳ್ಳಿಗಳಲ್ಲೂ ತಜ್ಞರಿಗೆ ಕೆಲಸ ನೀಡುತ್ತದೆ ಎನ್ನಲಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ, ತಮಿಳುನಾಡು ಮತ್ತು ಗುಜರಾತ್ಗಳಲ್ಲಿ ಈಗಾಗಲೇ ಎಐ ರೋಬಾಟ್ಗಳು ಕಾರ್ಖಾನೆಗಳನ್ನು ಸ್ಮಾರ್ಟ್ ಮಾಡುತ್ತಿವೆ. ಆದರೆ ಇಂಥ ಸ್ಮಾರ್ಟ್ ಯಂತ್ರಗಳ ನಿರ್ವಹಣೆಗೆ ನುರಿತ ಕೆಲಸಗಾರರ ಕೊರತೆ ಇದೆ.
ಆರೋಗ್ಯ ತಂತ್ರಜ್ಞರು: ಎಐ ಅತಿಹೆಚ್ಚು ಬಳಕೆಯಾಗುತ್ತಿರುವುದು ವೈದ್ಯಕೀಯ ಕ್ಷೇತ್ರದಲ್ಲಿ. ರೋಗಪತ್ತೆಯಿಂದ ಹಿಡಿದು ಚಿಕಿತ್ಸೆಯವರೆಗೆ ಹಲವು ಹಂತಗಳಲ್ಲಿ ಎಐ ಬಳಕೆಯಾಗುತ್ತಿದೆ. ಹೀಗಾಗಿ ಎಐ ಮೆಡಿಕಲ್ ಟೆಕ್ನೀಷಿಯನ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಲ್ಲಿ ವೈದ್ಯಕೀಯ ಜ್ಞಾನದ ಜೊತೆಗೆ ಎಐ ಜ್ಞಾನವೂ ಅಗತ್ಯ.



