ಡಾ. ರಮೇಶ್ ನಿಂಬೆಮರದಳ್ಳಿ
ಬೆಳಗ್ಗೆ ಎದ್ದ ತಕ್ಷಣ ಹಾಲ್ನಲ್ಲಿ ಯಾರೋ ನಡೆದಾಡುವ ಸದ್ದು. ಕಣ್ಣುಜ್ಜಿ ನೋಡಿದರೆ, ನೆಲದ ಮೇಲೆ ಬಿದ್ದಿದ್ದ ಮಕ್ಕಳ ಆಟಿಕೆಗಳನ್ನು ಒಂದೊಂದಾಗಿ ಎತ್ತಿ ಬುಟ್ಟಿಗೆ ಹಾಕುತ್ತಿರುವ ಐದಡಿ ಎತ್ತರದ ಆಳು. ಕಿಟಕಿಯ ಪರದೆ ಸರಿಸಿ, ಡೈನಿಂಗ್ ಟೇಬಲ್ ಮೇಲಿದ್ದ ರಾತ್ರಿ ಇಟ್ಟಿದ್ದ ನೀರಿನ ಲೋಟವನ್ನು ಸಿಂಕ್ನಲ್ಲಿಟ್ಟು ಮುಗುಳ್ನಗುತ್ತದೆ. ಆ ಮುಖದಲ್ಲಿ ಜೀವಂತ ಕಣ್ಣುಗಳಿಲ್ಲ, ಬದಲಿಗೆ ನಗು ಬೀರುವ ಒಂದು ಮುದ್ದಾದ ಪುಟ್ಟ ಪರದೆ ಇದೆ!
ಇದು ಹಾಲಿವುಡ್ ಸಿನಿಮಾದ ದೃಶ್ಯವಲ್ಲ. ಇಂಥದ್ದೊಂದು ದಿನ ನಮ್ಮ ಮನೆಗಳಲ್ಲೂ ನಿಜವಾಗಬಹುದು ಎಂಬುದನ್ನು ತೋರಿಸಲು ಫೇಸ್ಬುಕ್, ವಾಟ್ಸಾಪ್ ಒಡೆಯ ಮೆಟಾ ಸಂಸ್ಥೆ ಸದ್ದಿಲ್ಲದೆ ಸಿದ್ಧಪಡಿಸಿರುವ ಹೊಸ ಅತಿಥಿಯ ಹೆಸರೇ ‘ಮ್ಯಾಕ್ಸ್’ (MAX).
ಕಳೆದ ಕೆಲ ವರ್ಷಗಳಿಂದ ಎಐ ಅಥವಾ ಕೃತಕ ಬುದ್ಧಿಮತ್ತೆ ನಮ್ಮ ಮೊಬೈಲ್ ಪರದೆಯೊಳಗೆ ಅಕ್ಷರ ಟೈಪ್ ಮಾಡುವ, ಫೋಟೋ ಸೃಷ್ಟಿಸುವ ಮಾಯಾವಿ ಅಷ್ಟೇ ಆಗಿತ್ತು. ಆದರೆ ಆ ಮಾಯಾವಿಗೆ ಎರಡು ಕಾಲು, ಎರಡು ಕೈ, ಕಣ್ಣು ಮತ್ತು ಕಿವಿಗಳನ್ನು ಕೊಟ್ಟು ನಿಜ ಜಗತ್ತಿಗೆ ನಡೆದುಕೊಂಡು ಬರುವಂತೆ ಮಾಡಿದರೆ ಹೇಗಿರುತ್ತದೆ? ಮೆಟಾ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಂಡ್ರೂ ಬಾಸ್ವರ್ತ್ ಅವರ ಮಾತುಗಳಲ್ಲೇ ಹೇಳುವುದಾದರೆ, ಮೆಟಾದ ಬುದ್ಧಿವಂತ ಎಐ ತಂತ್ರಜ್ಞಾನವಾದ ‘ಮ್ಯೂಸ್’ಗೆ ಒಂದು ಭೌತಿಕ ಶರೀರ ಕೊಡುವ ಸಾಹಸವೇ ಈ ‘ಮ್ಯಾಕ್ಸ್’ ರೋಬೋಟ್.
ಕಾರ್ಖಾನೆಯ ದೈತ್ಯರ ನಡುವೆ ಮನೆಗೆ ಬಂದ ಗೆಳೆಯ
ಇವತ್ತು ಜಗತ್ತಿನಲ್ಲಿ ರೋಬೋಟ್ ಅಂದಕೂಡಲೇ ಇಲಾನ್ ಮಸ್ಕ್ ಅವರ ‘ಟೆಸ್ಲಾ ಆಪ್ಟಿಮಸ್’ ನೆನಪಾಗುತ್ತದೆ. ಆದರೆ ಆ ರೋಬೋಟ್ಗಳು ಎಪ್ಪತ್ತೈದರಿಂದ ನೂರು ಕೆಜಿ ತೂಕವಿರುವ, ಉಕ್ಕಿನ ಮೈಕಟ್ಟಿನ ದೈತ್ಯ ಯಂತ್ರಗಳು. ಅವುಗಳ ಮುಖ್ಯ ಕೆಲಸ ಕಾರ್ಖಾನೆಗಳಲ್ಲಿ ಭಾರವಾದ ಕಾರಿನ ಬಿಡಿಭಾಗಗಳನ್ನು ಎತ್ತುವುದು, ಗೋದಾಮುಗಳಲ್ಲಿ ಸರಕು ಸಾಗಿಸುವುದು. ಅಪ್ಪಿತಪ್ಪಿ ಅಂಥ ಬಲಶಾಲಿ ಯಂತ್ರ ನಮ್ಮ ಮನೆಯೊಳಗೆ ಬಂದರೆ, ಅದು ಹೆಜ್ಜೆಯಿಡುವ ರಭಸಕ್ಕೆ ಸೋಫಾ ಮುರಿಯಬಹುದು, ಕಾಲಬುಡದಲ್ಲಿ ಓಡಾಡುವ ಮಕ್ಕಳಿಗೆ ಅಥವಾ ಬೆಕ್ಕಿಗೆ ತೊಂದರೆಯಾಗಬಹುದು.
ಮೆಟಾ ಸಂಸ್ಥೆಯ ‘ಮ್ಯಾಕ್ಸ್’ ಎಲ್ಲರಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ನಿಲ್ಲುವುದು ಇಲ್ಲಿಯೇ. ಮ್ಯಾಕ್ಸ್ನ ತೂಕ ಕೇವಲ 48 ಕೆಜಿ, ಎತ್ತರ ಐದು ಅಡಿ. ಅಂದರೆ ನಮ್ಮ ಮನೆಯ ಹದಿನೈದರ ಹರೆಯದ ಹುಡುಗನಷ್ಟೇ ಹಗುರ ಮತ್ತು ಚೊಕ್ಕಟ. ಚೀನಾದ ಶಾಂಘೈನ ಪ್ರಸಿದ್ಧ ರೋಬೋಟ್ ತಯಾರಿಕಾ ಕಂಪನಿ ‘ಫೂರಿಯರ್’ ಜೊತೆಗೂಡಿ ಕೇವಲ ಮೂರೇ ತಿಂಗಳಲ್ಲಿ ಮೆಟಾ ಇದನ್ನು ರೂಪಿಸಿದೆ.
ಇದರ ಕೈಗಳು ಭಾರವಾದ ಕಬ್ಬಿಣದ ತುಂಡುಗಳನ್ನು ಎತ್ತುವ ಕೊಕ್ಕೆಗಳಲ್ಲ; ಮನುಷ್ಯರಂತೆಯೇ ಐದು ಬೆರಳುಗಳನ್ನು ಹೊಂದಿರುವ ನಾಜೂಕಿನ ಕೈಗಳು. ನೆಲದ ಮೇಲೆ ಬಿದ್ದಿರುವ ಸಣ್ಣ ಪೆನ್ಸಿಲ್, ಕಾಗದದ ಚೂರು ಅಥವಾ ತೆಳುವಾದ ಗಾಜಿನ ಲೋಟವನ್ನು ಒಡೆಯದಂತೆ ಎತ್ತಿಕೊಳ್ಳುವಷ್ಟು ಸೂಕ್ಷ್ಮ ಸ್ಪರ್ಶ ಇದರಲ್ಲಿದೆ. ಮುಖದ ಜಾಗದಲ್ಲಿರುವ ಪುಟ್ಟ ಪರದೆ ಕೇವಲ ಅಲಂಕಾರಕ್ಕಲ್ಲ; ನೀವು ಹೇಳಿದ ಕೆಲಸ ಅದಕ್ಕೆ ಅರ್ಥವಾಯಿತೋ ಇಲ್ಲವೋ ಎಂಬುದನ್ನು ಅದು ಕಣ್ಣು ಮಿಟುಕಿಸಿ, ಮುಖ ತಿರುಗಿಸಿ, ಗೊಂದಲದ ನಗು ಬೀರಿ ನಮಗೆ ತಿಳಿಸುತ್ತದೆ. ಸುಮಾರು ಹದಿನೈದು ಅಡಿ ದೂರದಿಂದಲೇ ನಾವು ಕರೆದರೆ ಓಗೊಡುವ ಕಿವಿಗಳು, ಮೂರು ಮೀಟರ್ ದೂರದಿಂದಲೇ ನಾವು ಮಾಡುವ ಕೈಸನ್ನೆಗಳನ್ನು ಗುರುತಿಸುವ ದೃಷ್ಟಿ ಇದಕ್ಕೆ ದಕ್ಕಿದೆ.
ಮ್ಯಾಕ್ಸ್ ಬೊಂಬೆಗೆ ಮ್ಯೂಸ್ ಎಂಬ ಮೆದುಳು
ಕೇವಲ ಮೈಕಟ್ಟು ಇದ್ದರೆ ರೋಬೋಟ್ ಒಂದು ಬೊಂಬೆಯಷ್ಟೇ. ಅದಕ್ಕೆ ಆಲೋಚಿಸುವ, ಗ್ರಹಿಸುವ, ತೀರ್ಮಾನ ತೆಗೆದುಕೊಳ್ಳುವ ಪ್ರಜ್ಞೆ ಬೇಕಲ್ಲವೇ? ಆ ಪ್ರಜ್ಞೆಯೇ ಮೆಟಾದ ‘ಮ್ಯೂಸ್’.
ಇತ್ತೀಚೆಗಷ್ಟೇ ಮೆಟಾ ಪರಿಚಯಿಸಿದ ಈ ‘ಮ್ಯೂಸ್’ ಕೇವಲ ಒಂದು ಚಾಟ್ಬಾಟ್ ಅಲ್ಲ; ಅದೊಂದು ಸ್ವತಂತ್ರವಾಗಿ ಕೆಲಸಗಳನ್ನು ನಿಭಾಯಿಸಬಲ್ಲ ‘ವೈಯಕ್ತಿಕ ಕಾರ್ಯದರ್ಶಿ’. ನಮ್ಮ ಮನೆಯಲ್ಲಿ ವಸ್ತುಗಳು ಎಲ್ಲೆಲ್ಲಿರುತ್ತವೆ, ನಾವು ದಿನನಿತ್ಯ ಯಾವ ಸಮಯಕ್ಕೆ ಏನೇನು ಮಾಡುತ್ತೇವೆ, ನಮ್ಮ ಅಭ್ಯಾಸಗಳೇನು ಎಂಬುದನ್ನೆಲ್ಲ ಇದು ನೆನಪಿಟ್ಟುಕೊಳ್ಳುತ್ತದೆ.
ಇದನ್ನು ಊಹಿಸಿಕೊಳ್ಳಿ: ಹಾಲ್ನಲ್ಲಿ ಕುಳಿತು, “ಮ್ಯಾಕ್ಸ್, ಅಡುಗೆಮನೆಯಲ್ಲಿ ಚಹಾ ಕುಡಿದ ಕಪ್ ಇಟ್ಟಿದ್ದೇನೆ, ಸಿಂಕ್ಗೆ ಹಾಕಿ ಸ್ವಲ್ಪ ಹೊತ್ತು ಹಾಲ್ ಕಿಟಕಿ ತೆಗೆದಿಡು” ಎಂದು ನೀವು ಹೇಳುತ್ತೀರಿ. ಮೊದಲು ಆ ಮಾತನ್ನು ಮೆದುಳಿನಲ್ಲಿರುವ ‘ಮ್ಯೂಸ್’ ಅರ್ಥೈಸಿಕೊಳ್ಳುತ್ತದೆ. ನಂತರ ಮ್ಯಾಕ್ಸ್ನ ಕಣ್ಣುಗಳು ಅಡುಗೆಮನೆಯ ದಾರಿಯನ್ನು ಹುಡುಕುತ್ತವೆ. ಕಾಲುಗಳು ಹೆಜ್ಜೆಯಿಡುತ್ತವೆ. ಕೈಗಳು ಕಪ್ ಅನ್ನು ಹಿಡಿಯುತ್ತವೆ. ನಡುವೆ ಅಡ್ಡಬರುವ ಚಾಪೆ ಅಥವಾ ಕಾಲೊರೆಸುವ ಮ್ಯಾಟ್ ಅನ್ನು ನೋಡಿ ಎಡವದಂತೆ ದಾಟಿ ಹೋಗುತ್ತವೆ. ಕಂಪ್ಯೂಟರ್ ಪರದೆಯಲ್ಲಿದ್ದ ಆಲೋಚನೆ, ವಾಸ್ತವ ನೆಲದಲ್ಲಿ ಭೌತಿಕ ಕ್ರಿಯೆಯಾಗಿ ಬದಲಾಗುವ ಮ್ಯಾಜಿಕ್ ಇದು!
ಮೆಟಾ ಕಂಪನಿಯ ಈ ನಡೆಯ ಹಿಂದಿರುವ ತಂತ್ರವೇನು?
ಟೆಸ್ಲಾದಂತಹ ಸಂಸ್ಥೆಗಳು ಕಾರ್ಖಾನೆಗಳನ್ನು ಗುರಿಯಾಗಿಸಿಕೊಂಡಿದ್ದರೆ, ಮಾರ್ಕ್ ಜುಕರ್ಬರ್ಗ್ ಅವರ ಮೆಟಾ ಕಂಪನಿ ಮೊದಲಿನಿಂದಲೂ ಮನುಷ್ಯರ ವೈಯಕ್ತಿಕ ಬದುಕು ಮತ್ತು ಮನೆಯ ಒಳಗಿನ ಸಂವಹನದಲ್ಲೇ ಬದುಕುತ್ತಿದೆ. ನಾವೆಲ್ಲರೂ ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಬಳಸುತ್ತೇವೆ. ಮೆಟಾ ಈಗಾಗಲೇ ಮಾರಾಟ ಮಾಡುತ್ತಿರುವ ‘ರೇ-ಬಾನ್ ಮೆಟಾ’ ಸ್ಮಾರ್ಟ್ ಕನ್ನಡಕಗಳನ್ನು ಧರಿಸಿ ಲಕ್ಷಾಂತರ ಜನ ತಮ್ಮ ಮನೆಗಳಲ್ಲಿ ಓಡಾಡಿದ್ದಾರೆ, ಅಡುಗೆ ಮಾಡಿದ್ದಾರೆ, ಮಕ್ಕಳ ಜೊತೆ ಆಟವಾಡಿದ್ದಾರೆ. ಈ ಕನ್ನಡಕಗಳ ಮೂಲಕ ಮನುಷ್ಯರ ನೈಜ ದಿನಚರಿಯನ್ನು, ಅವರ ಕಣ್ಣೋಟವನ್ನೇ ಮೆಟಾದ ಕೃತಕ ಬುದ್ಧಿಮತ್ತೆ ಲಕ್ಷಾಂತರ ಗಂಟೆಗಳ ಕಾಲ ಕಣ್ಣಾರೆ ಕಂಡಿದೆ! ಜಗತ್ತಿನ ಬೇರೆ ಯಾವ ಕಂಪನಿಗೂ ಇಂಥ ಅಮೂಲ್ಯವಾದ ‘ಮನೆ ಪರಿಸರದ ಮಾಹಿತಿ’ ಲಭ್ಯವಿಲ್ಲ. ಆದ್ದರಿಂದಲೇ, ಮೆಟಾ ನೇರವಾಗಿ ಕಾರ್ಖಾನೆಗಳ ಕಡೆಗೆ ನೋಡದೆ, ನಮ್ಮ ನಿಮ್ಮ ಮನೆಗಳ ಲಿವಿಂಗ್ ರೂಮನ್ನೇ ತನ್ನ ಮೊದಲ ಅಂಗಳವನ್ನಾಗಿ ಆರಿಸಿಕೊಂಡಿದೆ.
ಬೆರಗಿನ ನಡುವೆ ಕಾಡುವ ಆತಂಕಗಳು ಮತ್ತು ವಾಸ್ತವ
ಹಾಗಾದರೆ, ನಾಳೆಯೇ ಈ ಮ್ಯಾಕ್ಸ್ ರೋಬೋಟ್ ಅಂಗಡಿಗಳಲ್ಲಿ ಸಿಗುತ್ತದೆಯೇ? ಖಂಡಿತ ಇಲ್ಲ. ತಂತ್ರಜ್ಞಾನ ಎಷ್ಟು ಆಕರ್ಷಕವಾಗಿದೆಯೋ, ಅಷ್ಟೇ ಸವಾಲುಗಳೂ ಇದರ ಮುಂದಿವೆ. ಮೊದಲನೆಯದಾಗಿ, ಮನೆಯ ಖಾಸಗಿತನ. ನಮ್ಮ ಬೆಡ್ರೂಮ್, ಹಾಲ್, ಅಡುಗೆಮನೆಯಲ್ಲೆಲ್ಲ ಕ್ಯಾಮೆರಾ ಮತ್ತು ಮೈಕ್ರೊಫೋನ್ ಹೊತ್ತು ತಿರುಗುವ ಯಂತ್ರವೊಂದು ಓಡಾಡುತ್ತಿದ್ದರೆ, ನಮ್ಮ ಮನೆಯ ಮಾತುಗಳು, ಖಾಸಗಿ ಕ್ಷಣಗಳು ಸುರಕ್ಷಿತವಾಗಿರುತ್ತವೆಯೇ? ಎರಡನೆಯದಾಗಿ, ತಾಂತ್ರಿಕ ಮಿತಿಗಳು. ಸದ್ಯಕ್ಕೆ ಮ್ಯಾಕ್ಸ್ನ ಬ್ಯಾಟರಿ ಒಂದೂವರೆಯಿಂದ ಎರಡು ಗಂಟೆಗಳ ಕಾಲವಷ್ಟೇ ಬರುತ್ತದೆ. ಅಷ್ಟರಲ್ಲಿ ಅದು ಮತ್ತೆ ಚಾರ್ಜ್ ಆಗಬೇಕು. ಇದು ಸದ್ಯಕ್ಕೆ ಮೆಟ್ಟಿಲುಗಳನ್ನು ಹತ್ತಲು ಹೆಣಗಾಡುತ್ತಿದೆ. ಮೂರನೆಯದಾಗಿ, ಸಾಮಾಜಿಕ ಬದಲಾವಣೆ. ಮುಂಬರುವ ದಿನಗಳಲ್ಲಿ ಇದು ವಯಸ್ಸಾದ ತಂದೆ-ತಾಯಂದಿರಿಗೆ ಆಸರೆಯಾಗಬಲ್ಲ ಗೆಳೆಯನಾಗುತ್ತದೆಯೇ? ಅಥವಾ ನಮ್ಮ ಮನೆಯ ಕೆಲಸದಾಕೆ, ಮನೆಗೆಲಸದ ಸಹಾಯಕರಿಗೆ ಪರ್ಯಾಯವಾಗಿ ನಿಲ್ಲುತ್ತದೆಯೇ? ಎಂಬ ಚರ್ಚೆಗಳು ಈಗಲೇ ಶುರುವಾಗಿವೆ.
ಪರದೆ ಕಳಚಿ ನಿಲ್ಲುತ್ತಿರುವ ಭವಿಷ್ಯ
ಹಿಂದೆ ಊರಿಗೆ ಒಂದೇ ಲ್ಯಾಂಡ್ಲೈನ್ ಫೋನ್ ಇತ್ತು. ನಂತರ ಪ್ರತಿಯೊಬ್ಬರ ಜೇಬಿಗೂ ಮೊಬೈಲ್ ಬಂತು. ಕಂಪ್ಯೂಟರ್ ಎಂಬುದು ಮೇಜಿನ ಮೇಲಿಂದ ಅಂಗೈಗೆ ಇಳಿದು ಬಂತು. ಈಗ ಅದೇ ತಂತ್ರಜ್ಞಾನ ತನ್ನ ಕೈಕಾಲುಗಳನ್ನು ಚಾಚಿಕೊಂಡು ನಮ್ಮ ಕಣ್ಣೆದುರಿಗೆ ಎದ್ದು ನಿಲ್ಲುತ್ತಿದೆ. ಮೆಟಾದ ‘ಮ್ಯಾಕ್ಸ್’ ಕೇವಲ ವೈಜ್ಞಾನಿಕ ಅಚ್ಚರಿಯಲ್ಲ; ಅದು ಮನುಷ್ಯ ಮತ್ತು ಯಂತ್ರದ ನಡುವಿನ ಸಂಬಂಧದ ಹೊಸ ಅಧ್ಯಾಯ. ಈ ರೋಬೋಟ್ ನಮ್ಮ ಮನೆಗೆ ಯಾವಾಗ ಬರಬಹುದು ಎಂಬುದು ಮುಖ್ಯವಲ್ಲ, ಆದರೆ ಅದು ಬಂದಾಗ ನಮ್ಮ ಬದುಕು, ಮನೆ ಮತ್ತು ದಿನಚರಿಗಳು ಹೇಗೆ ಬದಲಾಗುತ್ತವೆ. ಆ ಬದಲಾವಣೆಯ ನಡುವೆಯೂ ನಾವು ನಮ್ಮ ತನವನ್ನು ಹೇಗೆ ಕಾಪಿಟ್ಟುಕೊಳ್ಳುತ್ತೇವೆ ಎನ್ನುವುದೇ ಈಗಿರುವ ಬಹುದೊಡ್ಡ ಪ್ರಶ್ನೆ.


