ಸೈಬರ್ ವಂಚಕರ ಕಾಟ, ಕ್ರಿಪ್ಟೋ ಓಟ
2025ರ ಟೆಕ್ ಟ್ರೆಂಡ್ಗಳು - ಭಾಗ 2
ಡಾ. ರಮೇಶ್ ನಿಂಬೆಮರದಳ್ಳಿ
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ನಡೆಯುತ್ತಿರುವ ಆವಿಷ್ಕಾರಗಳು, ಇದರಿಂದಾಗಿ ಉದ್ಯೋಗ, ವ್ಯವಹಾರ, ಮತ್ತು ಜನರ ಬದುಕಿನ ಮೇಲೆ ಆಗುತ್ತಿರುವ ಪಲ್ಲಟಗಳನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಅದರ ಮುಂದುವರಿದ ಭಾಗವಾಗಿ, ಈ ವರ್ಷ ಮುಂಚೂಣಿಗೆ ಬರಲಿರುವ ಇನ್ನಷ್ಟು ತಂತ್ರಜ್ಞಾನಗಳ ಕಡೆ ಗಮನ ಹರಿಸೋಣ. ಕ್ರಿಪ್ಟೋ ಕರೆನ್ಸಿ-ಬ್ಲಾಕ್ಚೈನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಈ ವರ್ಷ ಸದ್ದು ಮಾಡಲಿರುವ ಅತಿದೊಡ್ಡ ತಂತ್ರಜ್ಞಾನಗಳು. ಡಿಜಿಟಲ್ ಗೋಲ್ಡ್ ಎಂದೇ ಕರೆಯಲಾಗುವ ಕ್ರಿಪ್ಟೋಕರೆನ್ಸಿ ಲೋಕದಲ್ಲಿ ಏನಾಗುತ್ತಿದೆ, ಕ್ವಾಂಟಮ್ ಕಂಪ್ಯೂಟಿಂಗ್ ಮಾಡಬಲ್ಲ ಪವಾಡಗಳೇನು ಎಂಬುದನ್ನು ಈ ಎರಡನೇ ಕಂತಿನಲ್ಲಿ ವಿವರಿಸಲಾಗಿದೆ.
ಕ್ರಿಪ್ಟೋ ಜಗತ್ತಿನಲ್ಲಿ ಡಿಜಿಟಲ್ ಗೋಲ್ಡ್ ರಶ್
2024ರ ನವೆಂಬರ್ ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದಾಗಿನಿಂದ ಜಗತ್ತಿನೆಲ್ಲೆಡೆ ಡಿಜಿಟಲ್ ಗೋಲ್ಡ್ ರಶ್ ಶುರುವಾಗಿದೆ. ಅದರಲ್ಲೂ ಅವರು ಅಧಿಕಾರ ವಹಿಸಿಕೊಂಡ ಜನವರಿ 20ರ ಬಳಿಕ ಕ್ರಿಪ್ಟೋ ವಹಿವಾಟು ಜಾಸ್ತಿಯಾಗಿದೆ. ಕ್ರಿಪ್ಟೋಕರೆನ್ಸಿಯನ್ನು ಈಗ ಡಿಜಿಟಲ್ ಗೋಲ್ಡ್ ಎಂದೇ ಪರಿಭಾವಿಸಲಾಗುತ್ತಿದೆ. ಪರಿಣಾಮ, ಈ ಡಿಟಿಟಲ್ ಚಿನ್ನವನ್ನು ತನ್ನದಾಗಿಸಿಕೊಳ್ಳುವ ಹಂಬಲ ಜಗತ್ತಿನಾದ್ಯಂತ ಹೂಡಿಕೆದಾರರಿಗೆ ಮಾತ್ರವಲ್ಲದೆ ಸಂಸ್ಥೆಗಳು ಮತ್ತು ಸರಕಾರಗಳಿಗೂ ಹೆಚ್ಚಿದೆ. ಹೀಗಾಗಿ ಕ್ರಿಪ್ಟೋ ಮಾರುಕಟ್ಟೆ ತೀರ್ವ ಏರುಗತಿಯಲ್ಲಿರುವುದನ್ನು ಕಾಣುತ್ತೇವೆ. ಟ್ರಂಪ್ ಆಯ್ಕೆಗೂ ಮೊದಲು 69,000 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದ ಬಿಟ್ಕಾಯಿನ್ (ಇದು ಅತ್ಯಂತ ಜನಪ್ರಿಯ ಮತ್ತು ಅತಿದೊಡ್ಡ ಕ್ರಿಪ್ಟೋಕರೆನ್ಸಿ), ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಮರುಕ್ಷಣವೇ ರ್ಯಾಲಿ ಆರಂಭಿಸಿ 1,09,358 ಡಾಲರ್ ಮುಟ್ಟಿ ಬಂದಿದೆ. ಇದೇ ವರ್ಷದ ಅಂತ್ಯದ ವೇಳೆಗೆ ಬಿಟ್ಕಾಯಿನ್ ಬೆಲೆ 2,50,000 ಡಾಲರ್ (ಅಂದರೆ ಆಗಿನ ಒಂದು ಬಿಟ್ಕಾಯಿನ್ ಬೆಲೆ ಅಂದಾಜು ₹2,15,00,000.) ಮುಟ್ಟಲಿದೆ ಎಂದು ಕ್ರಿಪ್ಟೋ ತಜ್ಞರು ಅಂದಾಜಿಸಿದ್ದಾರೆ.
ಕ್ರಿಪ್ಟೋಕರೆನ್ಸಿಗಳದ್ದು ನಾಗಾಲೋಟವಾದರೆ, ಇತ್ತ ಅದರ ಮೂಲ ತಂತ್ರಜ್ಞಾನವಾದ ಬ್ಲಾಕ್ಚೈನ್ನ ಓಟವೂ ಈ ವರ್ಷ ಜೋರಾಗಲಿದೆ. ಈ ತಂತ್ರಜ್ಞಾನವನ್ನು ಉತ್ಪನ್ನಗಳ ಪೂರೈಕೆ ಸರಪಳಿ ನಿರ್ವಹಣೆ, ಹಣಕಾಸು ವರ್ಗಾವಣೆ, ಜನರಿಗೆ ಸರಕಾರ ನೀಡುವ ವಿವಿಧ ಸೇವೆಗಳು ಮತ್ತು ಮತದಾನ ವ್ಯವಸ್ಥೆಗಳಲ್ಲೂ ಬಳಸುವ ಕಡೆಗೆ ಚಿಂತನ ಮಂಥನ ನಡೆಯುತ್ತಿದೆ. ವಿಕೇಂದ್ರೀಕೃತ ಹಣಕಾಸು (DeFi- Decentralized Finance) ವೇದಿಕೆಗಳ ಅಭಿವೃದ್ಧಿಯೂ ಹೆಚ್ಚಲಿದೆ. ಈ ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆ ಬ್ಯಾಂಕ್ಗಳೆಂಬ ಮಧ್ಯವರ್ತಿ ಸಂಸ್ಥೆಗಳ ಅಗತ್ಯವಿಲ್ಲದೆ, ಆರ್ಬಿಐ ನಂತಹ ಯಾವುದೇ ಕೇಂದ್ರ ಸಂಸ್ಥೆಯ ನಿಯಂತ್ರಣವಿಲ್ಲದೆ ಜನರು-ಜನರ ನಡುವೆ, ಜನರು-ಉದ್ಯಮಗಳ ನಡುವೆ ಮತ್ತು ಉದ್ಯಮ-ಉದ್ಯಮಗಳ ನಡುವೆ ಹಣಕಾಸು ಲೇವಾದೇವಿಯನ್ನು ಸಾಧ್ಯವಾಗಿಸಲಿದೆ.
ಡಿಜಿಟಲ್ ರುಪೀ, ಭಾರತದ ಕ್ರಿಪ್ಟೋ
ಭಾರತದಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿಗೆ ನೇರ ಉತ್ತೇಜನ ಇಲ್ಲವಾದರೂ ಡಿಜಿಟಲ್ ರುಪೀ ಹೆಸರಿನಲ್ಲಿ ಆರ್ಬಿಐ ಕೂಡ ಕ್ರಿಪ್ಟೋಕರೆನ್ಸಿ ಬಳಕೆಯನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ. ಹೋಲ್ಸೇಲ್ CBDC (ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ) ಹೆಸರಿನಲ್ಲಿ ಬ್ಯಾಂಕ್ಗಳಿಗೆ ಇದರ ಪೈಲಟ್ ಯೋಜನೆ ಆರಂಭಿಸಿದ್ದ ಆರ್ಬಿಐ, ಈಗ ಡಿಜಿಟಲ್ ರುಪೀ ಬಳಕೆಯನ್ನು ರೀಟೇಲ್ ಗ್ರಾಹಕರಿಗೂ ಮುಕ್ತಗೊಳಿಸಿದೆ. ರೈತರಿಗೆ ಸಾಲ ವಿತರಿಸಲೂ ಈ ಡಿಜಿಟಲ್ ರುಪೀ ಬಳಕೆಯನ್ನು ಆರಂಭಿಸಲಾಗಿದೆ. ಇದು ಪ್ರೋಗ್ರಾಮೆಬಲ್ ಕರೆನ್ಸಿಯಾಗಿದ್ದು (ಪ್ರೋಗ್ರಾಮೆಬಲ್ ಕರೆನ್ಸಿ ಎಂದರೆ ನಿಶ್ಚಿತ ಉದ್ದೇಶಕ್ಕೆ ಮಾತ್ರವೇ ಬಳಕೆಯಾಗುವಂತೆ ಆ ಕರೆನ್ಸಿಯನ್ನು ಪ್ರೋಗ್ರಾಮ್ ಮಾಡಲಾಗಿರುತ್ತದೆ. ಉದಾಹರಣೆಗೆ ದಿನಸಿ ಸಾಮಾನುಗಳ ಖರೀದಿಗೆಂದು ಸರಕಾರ ತನ್ನ ಪಡಿತರ ಸಹಾಯಧನದ ಭಾಗವಾಗಿ ಅರ್ಹ ಬಡವರಿಗೆ ಡಿಜಿಟಲ್ ರುಪೀಯನ್ನು ವಿತರಿಸಿದರೆ ಅವರು ಆ ಹಣವನ್ನು ದಿನಸಿ ಖರೀದಿಗಲ್ಲದೆ ಬೇರೆ ಯಾವುದಕ್ಕೂ ಬಳಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವಾಗಿ ಇದೇ ಡಿಜಿಟಲ್ ರುಪೀಯನ್ನು ವಿತರಿಸಿದರೆ, ಅದನ್ನು ಶಿಕ್ಷಣ ವೆಚ್ಚಕ್ಕಲ್ಲದೆ ಬೇರೆಲ್ಲೂ ಬಳಸಲು ಬರುವುದಿಲ್ಲ.), ನಿಶ್ಚಿತ ಬಳಕೆಯ ಮಿತಿಯನ್ನು ಹೊಂದಿರುತ್ತದೆ. ಮೋಸ, ನಕಲಿ ವಹಿವಾಟುಗಳಿಗೆ ಕಡಿವಾಣ ಹಾಕಲು ಆಸ್ತಿಪಾಸ್ತಿಗಳ ನೋಂದಣಿಗೂ ಈ ಬ್ಲಾಕ್ಚೈನ್ ತಂತ್ರಜ್ಞಾನ ಬಳಸುವತ್ತ ಚಿಂತನೆ ನಡೆಸಿದೆ.
ಸಾವಿಗೂ ಅಂಜದ ಸರದಾರನಿಗೆ $TRUMP ಉಡುಗೊರೆ
ಕ್ರಿಪ್ಟೋಕರೆನ್ಸಿ ಬೆಂಬಲಿಸುವ ಡೊನಾಲ್ಡ್ ಟ್ರಂಪ್ ಅವರ ಗೆಲುವಿನ ದಿನದಿಂದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ನಾಗಾಲೋಟದಲ್ಲಿದೆ. ಇದೀಗ ಸ್ವಂತಃ ಟ್ರಂಪ್ ಅವರೇ ತಮ್ಮ ಹೆಸರಿನ $TRUMP ಎಂಬ ಮೀಮ್ ಕಾಯಿನ್ (ಮೀಮ್ ಕರೆನ್ಸಿ ಎನ್ನವುದು ಇಂಟರ್ನೆಟ್ ಮೀಮ್ಗಳಿಂದ ಅಂದರೆ ವಿಡಂಬನೆಗಳಿಂದ ಪ್ರೇರಿತವಾದ ಕ್ರಿಪ್ಟೋಕರೆನ್ಸಿ. ಇದನ್ನು ತಮಾಷೆಗಾಗಿ ರಚಿಸಲಾಗುತ್ತದೆ. ಇದರಲ್ಲಿ ಹೂಡಿಕೆ ಅಪಾಯಕಾರಿ. $Dogecoin ಮತ್ತು $Shiba Inu ಎರಡು ಅತ್ಯಂತ ಜನಪ್ರಿಯ ಮೀಮ್ ಕಾಯಿನ್ಗಳು) ಬಿಡಗಡೆ ಮಾಡಿದ್ದಾರೆ. ಜನವರಿ 17, 2025 ರ ಶನಿವಾರ $TRUMP ಕಾಯಿನ್ ಬಿಡುಗಡೆ ಮಾಡಿ ಟ್ರಂಪ್ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಕಟಿಸಿದರು. ಕೆಲವೇ ಗಂಟೆಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿ ಸುಮಾರು 300% ಏರಿಕೆ ಕಂಡಿತು. ಆಗ ಇದರ ಮಾರುಕಟ್ಟೆ ಮೌಲ್ಯ ಅಂದಾಜು 15 ಬಿಲಿಯನ್ ಡಾಲರ್ವರೆಗೆ ಏರಿತ್ತು. ಆದರೆ, ಆ ಬಳಿಕ ಈ ಕರೆನ್ಸಿ ಸಾಕಷ್ಟು ಕುಸಿದಿದೆ. ಸಾವಿಗೂ ಅಂಜದೆ ಹೋರಾಡಿ ಗೆದ್ದ ಟ್ರಂಪ್ ಅವರ ನಾಯಕತ್ವ ಮತ್ತು ಅವರ ನೀತಿಗಳಿಗೆ ಗೌರವ ಸೂಚಕವಾಗಿ ಈ ಕರೆನ್ಸಿಯನ್ನು ಸೃಷ್ಟಿಸಲಾಗಿದೆ.
$TRUMP ನಾಣ್ಯವನ್ನು ಸೊಲಾನಾ ಎನ್ನುವ ಬ್ಲಾಕ್ಚೈನ್ ತಂತ್ರಜ್ಞಾನದ ಮೇಲೆ ನಿರ್ಮಿಸಲಾಗಿದ್ದು, ಟ್ರಂಪ್ ಅವರ CIC ಡಿಜಿಟಲ್ LLC ಎಂಬ ಸಂಸ್ಥೆ ಇದನ್ನು ನಿರ್ವಹಿಸುತ್ತಿದೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಹೀಗೆ ಲಾಭದಾಯಕ ವಹಿವಾಟಿನಲ್ಲಿ ಪಾಲ್ಗೊಳ್ಳುವುದು ಹಿತಾಸಕ್ತಿ ಸಂಘರ್ಷ ಮತ್ತು ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೇ ವೇಳೆ, ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ತನ್ನದೇ $MELANIA ಎಂಬ ಕರೆನ್ಸಿಯನ್ನು ಬಿಡುಗಡೆ ಮಾಡಿದ್ದಾರೆ.
ಹೆಚ್ಚಲಿದೆ ಸೈಬರ್ ವಂಚಕರ ಉಪಟಳ
ಸೈಬರ್ದಾಳಿ, ಸೈಬರ್ ಸೆಕ್ಯೂರಿಟಿ, ಸೈಬರ್ ವಂಚನೆ ಎಂಬ ಪದಗಳು ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿವೆ. ಇದಕ್ಕೆ ಕಾರಣ ವಿಶ್ವದಾದ್ಯಂತ ಸೈಬರ್ ದಾಳಿಗಳು ಹೆಚ್ಚಿರುವುದು. ಇತ್ತೀಚೆಗೆ ಚೀನಾದ ಹ್ಯಾಕರ್ಗಳು ಅಮೆರಿಕದ ದೊಡ್ಡ ಟೆಲಿಕಾಂ ಕಂಪನಿಗಳು ಮತ್ತು ಸರಕಾರದ ಖಜಾನೆಯನ್ನು ಹ್ಯಾಕ್ ಮಾಡಿದ್ದಾರೆಂದು ವರದಿಯಾಗಿದೆ. ಮತ್ತೊಂದೆಡೆ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಇಸ್ರೇಲ್ ಸೈಬರ್ ದಾಳಿಯನ್ನು ಒಂದು ಯುದ್ಧ ತಂತ್ರವಾಗಿ ಬಳಸಿದ್ದನ್ನು ನಾವು ಗಮನಿಸಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಸೈಬರ್ ದಾಳಿಗಳು ಹೆಚ್ಚಿವೆ. ಮುಖ್ಯವಾಗಿ ಫೋನ್ ಕರೆಗಳ ಮೂಲಕ ಸೈಬರ್ ಅರೆಸ್ಟ್ ಮಾಡುವಂತಹ ವಂಚನೆ ಪ್ರಕರಣಗಳು ವಿಪರೀತ ಜಾಸ್ತಿ ಆಗಿದ್ದು, ಈ ವಂಚಕರ ಕಳ್ಳಾಟಗಳು ಹೊಸ ರೂಪ ಪಡೆಯುವ ಸಾಧ್ಯತೆಗಳಿವೆ. ಇಂತಹ ಸೈಬರ್ ವಂಚನೆಗಳನ್ನು ತಪ್ಪಿಸಲು ಸರಕಾರ ಹಲವು ಹೊಸ ಕಾಯಿದೆಗಳನ್ನು ರೂಪಿಸುತ್ತಿದೆ. ವಿಶೇಷವಾಗಿ ಟ್ರಾಯ್, ಮೊಬೈಲ್ ಸೇವಾ ಪೂರೈಕೆದಾರರಿಗೆ ಸೂಚನೆ ನೀಡಿದ್ದು, ಸೈಬರ್ ದಾಳಿಗೆ ಸಂಬಂಧಿಸಿದ ಕರೆಗಳು, ಮೆಸೇಜ್ಗಳನ್ನು ಫಿಲ್ಟರ್ ಮಾಡಲು ಕಟ್ಟಪ್ಪಣೆ ಮಾಡಿದೆ. ಹೀಗಾಗಿ ಎಲ್ಲಾ ಟೆಲಿಕಾಮ್ ಕಂಪನಿಗಳು ಈಗಾಗಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿಕೊಂಡು ಈ ರೀತಿಯ ವಂಚಕರನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಹೀಗಾಗಿ ಸೂಕ್ಷ್ಮ ಮತ್ತು ವೈಯಕ್ತಿಕ ಮಾಹಿತಿಯ ದುರ್ಬಳಕೆಗೆ ಕಡಿವಾಣ ಬೀಳುವ ಸಂಭವ ಇದೆಯಾದರೂ ಜನರು ಈ ಇಂಥ ಸೈಬರ್ ವಂಚನೆಗಳ ವಿಚಾರದಲ್ಲಿ ವಿಪರೀತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಭವಿಷ್ಯದ ಓಟಕ್ಕೆ ಕ್ವಾಂಟಮ್ ವೇಗ
ಈಗಾಗಲೇ ಕಂಪ್ಯೂಟಿಂಗ್ ಸಾಮರ್ಥ್ಯದಲ್ಲಿ ಧೂಳೆಬ್ಬಿಸಿರುವ ಕ್ವಾಂಟಮ್ ಕಂಪ್ಯೂಟರ್ಗಳ ಬೆಳವಣಿಗೆ 2025 ರಲ್ಲೂ ಮುನ್ನಡೆಯಲಿದೆ. ಇವು ಮನುಕುಲ ಹಿಂದೆಂದೂ ಕಂಡರಿಯದ ಸಂಸ್ಕರಣಾ ಶಕ್ತಿಯನ್ನು ಪಡೆಯಲಿವೆ. ಕ್ವಾಂಟಮ್ ಕಂಪ್ಯೂಟರ್ಗಳನ್ನು ಕ್ರಿಪ್ಟೋಗ್ರಫಿ, ವಿನೂತನ ಔಷಧಗಳ ತಯಾರಿಕೆ ಮತ್ತು ಕ್ಲೈಮೇಟ್ ಮಾಡೆಲಿಂಗ್ನಲ್ಲಿನ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತಿದೆ.
IBM, ಗೂಗಲ್, ಮೈಕ್ರೊಸಾಫ್ಟ್, ಇಂಟೆಲ್, ಅಲಿಬಾಬಾ, ಡಿ-ವೇವ್ ಮುಂತಾದ ಕಂಪನಿಗಳು ಕ್ವಾಂಟಮ್ ಕಂಪ್ಯೂಟರ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಗೂಗಲ್, ಕ್ವಾಂಟಮ್ ಕಂಪ್ಯೂಟಿಂಗ್ ಮಾಡಲೆಂದೇ ‘ವಿಲ್ಲೋ’ ಎನ್ನುವ ಕ್ವಾಂಟಮ್ ಪ್ರೊಸೆಸರ್ ಅಭಿವೃದ್ಧಿಪಡಿಸಿದೆ. ಇದು ಇತ್ತೀಚಿಗೆ ತೋರ್ಪಸಿದ ಸಾಮರ್ಥ್ಯ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಜಗತ್ತಿನ ಅತಿ ವೇಗದ ಸೂಪರ್ಕಂಪ್ಯೂಟರ್ ಅಮೆರಿಕದ ‘ಎಲ್ ಕ್ಯಾಪ್ಟನ್’ ಇದರ ಮುಂದೆ ಧೂಳಿನ ಕಣಕ್ಕೆ ಸಮ. ‘ಎಲ್ ಕ್ಯಾಪ್ಟನ್’ನ ಕಂಪ್ಯೂಟಿಂಗ್ ಸಾಮರ್ಥ್ಯ ಒಂದು ಮರಳ ಕಣದಷ್ಟು ಎಂದುಕೊಂಡರೆ, ಈ ಕ್ವಾಂಟಮ್ ಪ್ರೊಸೆಸರ್ನ ಸಾಮರ್ಥ್ಯ ಜಗತ್ತಿನ ಎಲ್ಲ ಸಮುದ್ರ ದಂಡೆಯಲ್ಲೂ ಇರಬಹುದಾದ ಒಟ್ಟೂ ಮರಳಿನ ಕಣಗಳಷ್ಟು ಎನ್ನಬಹುದು.
ಇತ್ತೀಚೆಗೆ ಈ ‘ವಿಲ್ಲೋ’ ಪ್ರೊಸೆಸರ್ ಒಂದು ಸಮಸ್ಯೆಯನ್ನು ಕೇವಲ 5 ನಿಮಿಷದಲ್ಲಿ ಪರಿಹರಿಸಿದೆ. ವಿಜ್ಞಾನಿಗಳೇ ಹೇಳುವಂತೆ ಇದೇ ಸಮಸ್ಯೆಯನ್ನು ಪರಿಹರಿಸಲು ‘ಎಲ್ ಕ್ಯಾಪ್ಟನ್’ ಎಂಬ ಸೂಪರ್ ಕಂಪ್ಯೂಟರ್ಗೆ 10 ಸೆಪ್ಟಿಲಿಯನ್ ವರ್ಷಗಳು ಬೇಕಾಗಬಹುದಂತೆ. ಇಷ್ಟು ಅಗಾಧ ಸಾಮರ್ಥ್ಯವಿರುವ ಕ್ವಾಂಟಮ್ ಕಂಪ್ಯೂಟರ್ ಅಚ್ಚರಿಯ ಅಲೆ ಎಬ್ಬಿಸುವುದನ್ನು ಸದ್ಯದಲ್ಲೇ ನೋಡುವ ಸಾಧ್ಯತೆ ಇದೆ.
ಕ್ವಾಂಟಮ್ ಕ್ರಿಪ್ಟೋಗ್ರಫಿ: ಕ್ವಾಂಟಮ್ ಕಂಪ್ಯೂಟಿಂಗ್ ಮುಂದುವರೆದಂತೆ, ಸಾಂಪ್ರದಾಯಿಕ ಕ್ರಿಪ್ಟೋಗ್ರಾಫಿಕ್ ವಿಧಾನಗಳು ದುರ್ಬಲವಾಗುತ್ತಿವೆ. ಯಾವ ದೇಶ ಮೊದಲು ಈ ಕ್ವಾಂಟಮ್ ಕಂಪ್ಯೂಟಿಂಗ್ನಲ್ಲಿ ಪಾರಮ್ಯ ಸಾಧಿಸುತ್ತದೆಯೇ ಆ ದೇಶ ಇಡೀ ವಿಶ್ವದ ಯಾವುದೇ ಅಥವಾ ಎಲ್ಲಾ ಡೇಟಾವನ್ನೂ ಕದಿಯುವ ಸಾಮರ್ಥ್ಯ ಪಡೆಯುತ್ತದೆ. ಹೀಗಾಗಿಯೇ 2025 ರಲ್ಲಿ, ಸಂಶೋಧಕರು ಕ್ವಾಂಟಮ್ ಹ್ಯಾಕಿಂಗ್ ವಿರುದ್ಧ ಡೇಟಾವನ್ನು ಸುರಕ್ಷಿತಗೊಳಿಸುವ ಹೊಸ ಅಲ್ಗಾರಿದಮ್ಗಳನ್ನು ಅಭಿವೃದ್ಧಪಡಿಸುವಲ್ಲಿ ಹಗಲಿರುಳೂ ದುಡಿಯುತ್ತಿದ್ದಾರೆ. ಬಡ ಮತ್ತು ಮುಂದುವರಿಯುತ್ತಿರುವ ದೇಶಗಳ ಮಿಲಿಟರಿ, ಹಣಕಾಸು, ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯ ಸುರಕ್ಷತೆ ಮತ್ತು ಆ ದೇಶದ ಜನರ ಖಾಸಗಿತನದ ಗೌಪ್ಯತೆ ಕಾಪಾಡುವುದೇ ಬಹುದೊಡ್ಡ ಸವಾಲಾಗಲಿದೆ.
10 ಸೆಪ್ಟಿಲಿಯನ್ ಅಂದ್ರೆ ಎಷ್ಟು?
10 ಸೆಪ್ಟಿಲಿಯನ್ ವರ್ಷಗಳು ಎಷ್ಟು ದೀರ್ಘಾವಧಿ ಕಾಲ ಎನ್ನುವುದನ್ನು ಸರಳವಾಗಿ ವಿವರಿಸುವ ಭಾಷೆ ನಮಗಿನ್ನೂ ಲಭ್ಯವಿಲ್ಲ; ಹಾಗೇ ಇಷ್ಟು ಸುದೀರ್ಘ ಕಾಲಾವಧಿಯನ್ನು ಗ್ರಹಿಸುವ ಶಕ್ತಿ ಮನುಷ್ಯನ ಮೆದುಳಿಗೂ ಇಲ್ಲ ಎನ್ನುವುದು ವಿಜ್ಞಾನಿಗಳೇ ಹೇಳುವ ಮಾತು. ಆದರೂ ಒಂದು ಉಹಾಹರಣೆ ಮೂಲಕ ಗ್ರಹಿಸಲು ಪ್ರಯತ್ನಿಸೋಣ.
ವಿಜ್ಞಾನಿಗಳ ಪ್ರಕಾರ ಗ್ರಹ-ತಾರೆ-ನಕ್ಷತ್ರಗಳಿರುವ ಇಡೀ ಬ್ರಹ್ಮಾಂಡ ಹುಟ್ಟಿ 13.8 ಬಿಲಿಯನ್ ವರ್ಷಗಳಾಗಿವೆ. ಅರ್ಥಮಾಡಿಕೊಳ್ಳಲು ಸುಲಭವಾಗಲೆಂದು ಇಷ್ಟು ಸುಧೀರ್ಘ ಕಾಲಮಾನವನ್ನು ಒಂದು ಸೆಕೆಂಡ್ಗೆ ಸಮ ಎಂದು ಭಾವಿಸಿದರೆ, 10 ಸೆಪ್ಟಿಲಿಯನ್ ವರ್ಷಗಳನ್ನು 1000 ದಿನಗಳಿಗಿಂತಲೂ ಹೆಚ್ಚು ಎಂದು ಪರಿಗಣಿಸಬಹುದು.
ಈಗ ಒಂದು ಸೆಕೆಂಡ್ ಮತ್ತು 8 ಕೋಟಿ 64 ಲಕ್ಷ ಸೆಕೆಂಡ್ಗಳ ನಡುವೆ ಇರಬಹುದಾದ ಬೃಹತ್ ವ್ಯತ್ಯಾಸವೇ ಸೂಪರ್ ಕಂಪ್ಯೂಟರ್ ಮತ್ತು 'ವಿಲ್ಲೋ'ನ ಕ್ವಾಂಟಮ್ ಕಂಪ್ಯೂಟಿಂಗ್ ಸಾಮರ್ಥ್ಯದಲ್ಲಿರುವ ವ್ಯತ್ಯಾಸ.
ಮನಸ್ಸಿನಿಂದಲೇ ಸಾಧನಗಳ ನಿಯಂತ್ರಣ
ಅಭಿವೃದ್ಧಿ ಹಂತದಲ್ಲಿರುವ ಬ್ರೈನ್ ಕಂಪ್ಯೂಟರ್ ಇಂಟರ್ಫೇಸ್ (BCI) ತಂತ್ರಜ್ಞಾನವು ಮುಂಚೂಣಿಗೆ ಬರುವ ಸಾಧ್ಯತೆ ಇದೆ. ನ್ಯೂರಾಲಿಂಕ್ ಸಂಸ್ಥೆ ವಿಶೇಷ ನ್ಯಾನೋ ಚಿಪ್ ಅಭಿವೃದ್ಧಿಪಡಿಸಿ ಮನುಷ್ಯನ ಮೆದುಳಿಗೆ ಅಳವಡಿಸಿದೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನವು ನೇರವಾಗಿ ಕಂಪ್ಯೂಟರ್, ಮೊಬೈಲ್, ವಾಹನಗಳು ಸೇರಿ ಯಾವುದೇ ಡಿಜಿಟಲ್ ಸಾಧನವನ್ನು ಮನಸ್ಸಿನಿಂದಲೇ ನಿಯಂತ್ರಿಸುವ ಸಾಮರ್ಥ್ಯ ನೀಡಲಿದೆ. ಮುಂದೆ ಇದು ಮನಸ್ಸಿನಿಂದ ಮನುಷ್ಯರನ್ನೇ ನಿಯಂತ್ರಿಸುವ ಅಥವಾ ಶತೃಗಳನ್ನು ಕುಳಿತಲ್ಲೇ ಕುಣಿಸುವ ಹೊಸ ಸವಾಲುಗಳೂ ಇದರಿಂದ ಎದುರಾಗಬಹುದು.
ಈ ಎಲ್ಲಾ ತಂತ್ರಜ್ಞಾನಗಳ ಜೊತೆಗೆ ಜನಬಳಕೆ ರೋಬಾಟ್ಗಳ ಅಭಿವೃದ್ಧಿ ಸಾಕಷ್ಟು ಮಹತ್ವ ಪಡೆಯಲಿದೆ. ಈ ನಿಟ್ಟಿನಲ್ಲಿ ಟೆಸ್ಲಾ, ಬೋಸ್ಟನ್ ಡೈನಾಮಿಕ್ಸ್ ಸೇರಿದಂತೆ ಹಲವು ಕಂಪನಿಗಳು ಸ್ಮಾರ್ಟ್ ಹ್ಯೂಮನಾಯ್ಡ್ ರೋಬಾಟ್ಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಕೈಗಾರಿಕೆ, ಉದ್ಯಮಗಳೇ ಅಲ್ಲದೆ ಮನೆಯಂಗಳಕ್ಕೂ ಈ ರೋಬಾಟ್ಗಳು ಹೆಜ್ಜೆ ಇಡುವುದನ್ನು ಮುಂದಿನ ದಿನಗಳಲ್ಲಿ ನೋಡಲಿದ್ದೇವೆ. ಹೋಟೆಲ್ಗಳು, ಬಾಣಸಿಗ ರೋಬಾಟ್, ಸರ್ವರ್ ರೋಬಾಟ್ಗಳನ್ನು ಸೇವೆಗಿಳಿಸಲಿವೆ. ಹಿನ್ನೆಲೆಗೆ ಸರಿದಿರುವ 3D ಪ್ರಿಂಟಿಂಗ್, ಅಂಗಾಂಗ ಸೃಷ್ಟಿಸುವ ಬಯೋ ಪ್ರಿಂಟಿಂಗ್ ಮುನ್ನೆಲೆಗೆ ಬರುವ ಸಾಧ್ಯತೆಯೂ ಕಾಣುತ್ತಿದೆ. CRISPR ನಂತಹ ಜೀನ್ ಎಡಿಟಿಂಗ್ ತಂತ್ರಜ್ಞಾನದ ಮೂಲಕ ಆನುವಂಶೀಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವ ಪ್ರಯತ್ನಗಳು ಆರಂಭವಾಗಿವೆ. ವೈಯಕ್ತೀಕರಿಸಿದ ಔಷಧಗಳ ತಯಾರಿಕೆಗೂ ಇದು ದಾರಿ ಮಾಡಿಕೊಡುತ್ತಿದೆ. ಈ ತಂತ್ರಜ್ಞಾನಗಳು ಅನುಕೂಲಗಳನ್ನು ಹೊತ್ತು ತರುತ್ತಿರುವ ಬೆನ್ನಲ್ಲೇ ಅಪಾಯಗಳನ್ನೂ ಅಡಗಿಸಿಕೊಂಡು ಬರುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ.



