ಎಐ ಬಳಕೆ ಕಲಿಸುವ 12 ಪ್ರಾಂಪ್ಟ್ಗಳು ಒಂದೇ ಕಡೆ
ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ | ಕನ್ನಡಿಗರಲ್ಲಿ ಎಐ ಜಾಗೃತಿ ಮೂಡಿಸುವ ಕಾರ್ಯ ಯಶಸ್ವಿ
AbhinvaAI.tech ಕೈಗೊಂಡ ಹನ್ನೆರಡು ದಿನಗಳ “ಕನ್ನಡದಲ್ಲಿ AI ಪ್ರಾಂಪ್ಟಿಂಗ್ ಅಭಿಯಾನ”ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಜನರು ಕನ್ನಡ ಪ್ರಾಂಪ್ಟ್ಗಳನ್ನು ಪ್ರಯೋಗಿಸಿ ಪರೀಕ್ಷಿಸಿದ್ದೀರಿ. ಸಮಸ್ಯೆಗಳನ್ನು ಹೇಳಿಕೊಂಡಿದ್ದೀರಿ, ಅನುಭವಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮಲ್ಲಿ ಹಲವರಿಗೆ ಈಗ ಕನ್ನಡದಲ್ಲೂ ಪ್ರಾಂಪ್ಟ್ಗಳನ್ನು ಬರೆಯಬಹುದು ಎನ್ನುವ ವಿಶ್ವಾಸ ಮೂಡಿದೆ. ನಾವಾಡುವ ಭಾಷೆಯಲ್ಲಿಯೇ ಎಐ ಟೂಲ್ಗಳನ್ನು ಬಳಬಹುದು ಎಂಬ ನಂಬಿಕೆ ಹುಟ್ಟಿದೆ.
ಈ ಅಭಿಯಾನ ಆರಂಭಿಸಿದ ಉದ್ದೇಶವೂ ಅದೇ ಆಗಿತ್ತು. ಎಐ ತಂತ್ರಜ್ಞಾನದ ಕುರಿತು ಸಮಾನ್ಯ ಜನರಿಗೆ ಸ್ವಲ್ಪವಾದರೂ ತಿಳಿವಳಿಕೆ ನೀಡಬೇಕು, ಟೂಲ್ಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಬೇಕು ಎಂಬ ಗುರಿ ಇತ್ತು. ಅದು ಸ್ವಲ್ಪಮಟ್ಟಿಗಾದರೂ ಈಡೇರಿದೆ. ಅಲ್ಲದೆ ಪ್ರಾಂಪ್ಟ್ ಎನ್ನುವ ಎಐ ಭಾಷೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಎಐ ಜೊತೆಗೆ ಚರ್ಚಿಸುವುದು ಸುಲಭ. ಇಲ್ಲವಾದರೆ ಎಷ್ಟೇ ಎಐ ಟೂಲ್ಗಳನ್ನು ಕಲಿತರೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಈಗಾಗಿ ನಮ್ಮ ದಿನ ನಿತ್ಯದ ಬದುಕಿನಲ್ಲಿ ನಾವು ಎಐ ಮಾಡೆಲ್ಗಳನ್ನು ಬಳಸಬಹುದಾದ ಸಾಧ್ಯತೆಗಳನ್ನು, ಅನುಕೂಲಗಳನ್ನು ಗಮನದಲ್ಲಿರಿಸಿಕೊಂಡು ದಿನಕ್ಕೊಂದು ಪ್ರಾಂಪ್ಟ್ ರೂಪಿಸಲಾಗಿತ್ತು. ನಿರಂತರ 12 ದಿನ ದಿನಕ್ಕೊಂದು ಪ್ರಾಂಪ್ಟ್ ಅನ್ನು ಹಂಚಿಕೊಳ್ಳಲಾಗಿತ್ತು. ಆ ಎಲ್ಲಾ ಪ್ರಾಂಪ್ಟ್ಗಳನ್ನು ಸಂಗ್ರಹಿಸಿ ಇಂದು ನೀಡಲಾಗುತ್ತಿದೆ. ಈ ಪ್ರಾಂಪ್ಟ್ಗಳು ಎಐ ಮಾಡೆಲ್ಗಳು ಮಾಡಬಹುದಾದ ಬಹುತೇಕ ಕಾರ್ಯಗಳನ್ನು ಒಳಗೊಂಡಿವೆ. ಈ ಪ್ರಾಂಪ್ಟ್ಗಳನ್ನು ಸಂಗ್ರಹಿಸಿ, ತಿದ್ದುಪಡಿ ಮಾಡಿ ಅಗತ್ಯಬಿದ್ದಾಗ ಬಳಸಬಹುದು.
🧠 ಹೊಸ ವಿಷಯ ಕಲಿಯಲು ಈ ಪ್ರಾಂಪ್ಟ್ ಬಳಸಿ
ಯಾವುದಾದರೂ ಒಂದು ಹೊಸ ವಿಷಯದ ಕುರಿತು ತಿಳಿಯಲು ಎಐ ಮಾಡೆಲ್ಗಳನ್ನು ಕೇಳಬಹುದು. ಆ ವಿಚಾರವನ್ನು ಹೇಗೆ ವಿವರಿಬೇಕು, ಎಷ್ಟು ವಿವರಿಸಬೇಕು ಎಂಬೆಲ್ಲ ವಿವರಗಳನ್ನು ತಿಳಿಸಬಹುದು. ಈ ಪ್ರಾಂಪ್ಟ್ ಅದೇ ಉದ್ದೇಶದಿಂದ ರೂಪಿಸಲಾಗಿದೆ. ಈ ಮೂಲಕ ನಮಗೆ ತಿಳಿಯದ ಹೊಸ ವಿಚಾರಗಳನ್ನು ತಿಳಿಯಬಹುದು. ಬಯಸಿದರೆ ಇನ್ನಷ್ಟು ಆಳವಾಗಿ ಇಳಿದು ಅಧ್ಯಯನ ಮಾಡಬಹುದು.
“ನನಗೆ ಎಐ ಬಗ್ಗೆ ಏನೂ ಗೊತ್ತಿಲ್ಲ. ಆದ್ದರಿಂದ, [ಎಐ ಕುರಿತು] ಮಕ್ಕಳಿಗೆ ಬಿಡಿಸಿ ಹೇಳುವಂತೆ ಸರಳವಾಗಿ ವಿವರಿಸು. ಹೆಚ್ಚು ತಿಳಿಯುವ ಕುತೂಹಲಕ್ಕಾಗಿ ಸ್ವಯಂಪ್ರೇರಿತವಾಗಿ ಹೊಸ ವಿಷಯಗಳನ್ನು ತೋರಿಸು.”
🧠 ಎಐ ಜೊತೆ ಪ್ಲಾನಿಂಗ್ ಮಾಡಿ
ಈ ಪ್ರಾಂಪ್ಟ್ ಯಾವುದಾರೂ ಸಂಗತಿಯನ್ನು ಸರಿಯಾಗಿ ಪ್ಲಾನ್ ಮಾಡುವಾಗ ಬಳಸಬಹುದು. ಅದು ನಮ್ಮ ದಿನಚರಿ ಇರಬಹುದು, ಕಚೇರಿ ಅವಧಿಯ ಕೆಲಸಗಳೇ ಇರಬಹುದು, ಒಂದು ದಿನ ವಿಶೇಷ ಸಿದ್ಧತೆಯೇ ಇರಬಹುದು. ನಮ್ಮ ಮುಂದೆ ಇಂಥ ಒಂದು ಕೆಲಸವಿದೆ, ಇಷ್ಟು ಅವಧಿ ಇದೆ, ಇಷ್ಟು ಸಂಪನ್ಮೂಲ ಇದೆ ಎಂಬುದಾದಿ ಎಐಗೆ ವಿವರಿಸಿದರೆ ಅದು ಇರುವ ಸಮಯ, ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಮಾಡಲಿರುವ ಕೆಲಸವನ್ನು ಸೂಕ್ತ ರೀತಿಯಲ್ಲಿ ಪ್ಲಾನ್ ಮಾಡಿಕೊಡುತ್ತದೆ. ಎಐ ಕೊಟ್ಟ ಯೋಜನೆಯೇ ಅಂತಿಮ ಎಂದಲ್ಲ, ಅದನ್ನು ಒಂದು ಅಂದಾಜು ಯೋಜನೆಯಾಗಿ ಪರಿಗಣಿಸಿ ಆ ಬಳಿಕ ಅದರಲ್ಲಿ ನಮಗೆ ಬೇಕಾದಂತೆ ತಿದ್ದುಪಡಿ ಮಾಡಿಕೊಳ್ಳಬಹುದು.
“ನಾನೊಬ್ಬ [ಉದ್ಯೋಗಿ]. ನನ್ನ ಕೆಲಸದ ಸಮಯ [ಬೆಳಿಗ್ಗೆ 9:30 ರಿಂದ ಸಂಜೆ 5:30 ರವರೆಗೆ]. [ಕೆಲಸ, ಕುಟುಂಬ, ವ್ಯಾಯಾಮ, ಓದು ಮತ್ತು ವಿರಾಮಕ್ಕಾಗಿ] ಸಮಯ ಸಿಗುವಂತೆ ನನ್ನ ದಿನವನ್ನು ಯೋಜಿಸು. [ಬೆಳಿಗ್ಗೆ 7 ರಿಂದ ರಾತ್ರಿ 11 ರವರೆಗೆ] ಪೂರ್ಣ ದಿನದ ವೇಳಾಪಟ್ಟಿ ಸಿದ್ಧಪಡಿಸು.”
🧠 ಹೊಸ ಹವ್ಯಾಸಗಳನ್ನು ರೂಡಿಸಿಕೊಳ್ಳಲು ಎಐ ಸಾಹಯ ಪಡೆಯಿರಿ
ಕಲಿತ ಅಭ್ಯಾಸಗಳನ್ನು ಮರೆಯುವುದು, ಹೊಸ ಅಭ್ಯಾಸಗಳನ್ನು ಕಲಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸರಿಯಾದ ಮಾರ್ಗದರ್ಶನ ಬೇಕು ಮತ್ತು ಬದ್ಧತೆ ಬೇಕು. ಈ ಮಾರ್ಗದರ್ಶನವನ್ನು ನಾವು ಎಐನಿಂದ ಪಡೆಯಬಹುದು. ನಾವು ಕಲಿಯಬೇಕಾದ ಹವ್ಯಾಸ, ನಮಗೆ ಅದಕ್ಕಾಗಿ ವ್ಯಯಿಸಲು ಇರುವ ಸಮಯ ಮತ್ತು ಹಣ (ಅಗತ್ಯವಿದ್ದರೆ), ಇತರೆ ಅಗತ್ಯ ವಿವರಗಳನ್ನು ಒದಗಿಸಿದರೆ ಎಐ ನಮ್ಮ ಪರ್ಸನಲ್ ಕೋಚ್ನಂತೆ ವರ್ತಿಸುತ್ತದೆ. ನಿಗದಿತ ಅವಧಿಯವರೆಗೆ ಪ್ರತಿ ದಿನ ಅನುಸರಿಸಬೇಕಾದ ಕ್ರಮಗಳ ಬಗೆಗೆ ವಿವರವಾಗಿ ತಿಳಿಸುತ್ತದೆ. ಬಯಸಿದರೆ ರಿಮೈಂಡ್ ಮಾಡುತ್ತದೆ. ಇದು ಹೊಸ ಹವ್ಯಾಸಗಳಿಗೆ ಮಾತ್ರವೇ ಅಲ್ಲದೆ, ಹೊಸ ಭಾಷೆಗಳನ್ನು ಕಲಿಯಲು, ನಿಗದಿತ ವಿಷಯದ ಕುರಿತು ಓದಿ ತಿಳಿಯಲು ಇತ್ಯಾದಿ ಉದ್ದೇಶಗಳಿಗೂ ಈ ಪ್ರಾಂಪ್ಟ್ ಬಳಸಬಹುದು.
“ನಾನು ಪ್ರತಿದಿನ [20] ನಿಮಿಷಗಳ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಬಯಸುತ್ತೇನೆ. ದಯವಿಟ್ಟು ನನಗೆ [15] ದಿನಗಳ [ಓದುವ ಅಭ್ಯಾಸ] ಬೆಳೆಸುವ ಒಂದು ಸರಳ ಯೋಜನೆಯನ್ನು ರೂಪಿಸು. [ಸಾಹಿತ್ಯ] ವಿಷಯದ ಮೇಲೆ ದಿನಕ್ಕೆ ಒಂದು ಲೇಖನ, ಕಥೆ ಅಥವಾ ವಿಷಯವನ್ನು ಸೂಚಿಸು. ಆನ್ಲೈನ್ನಲ್ಲೇ ಓದಲು ಸೂಕ್ತ ಲಿಂಕ್ ಇರಲಿ.”
🧠 ಬಜೆಟ್ ಪ್ಲಾನರ್ ಪ್ರಾಂಪ್ಟ್
ಇದು ಬಜೆಟ್ ಪ್ಲಾನರ್ ಪ್ರಾಂಪ್ಟ್. ನಮ್ಮ ತಿಂಗಳ ಖರ್ಚು ವೆಚ್ಚಗಳನ್ನು ನಿರ್ವಹಿಸುವುದು ಹೇಗೆ, ಉಳಿತಾಯ ಮಾಡುವುದು ಹೇಗೆ ಎಂಬುದನ್ನು ಯೋಜಿಸಲು ಇದು ನೆರವಾಗುತ್ತದೆ. ಈ ಪ್ರಾಂಪ್ಟ್ ಬಳಸಿ ತಮಗೆ ಬೇಕಾದ ವಿವರವನ್ನು ಬದಲಾಯಿಸಿ ನಿಮ್ಮದೇ ಮಂತ್ಲಿ ಬಜೆಟ್ ರೂಪಿಸಬಹುದು. ರೂಪಿಸಿದ ಬಜೆಟ್ಗೆ ಬದ್ಧವಾಗಿದ್ದರೆ ನಮ್ಮ ಗುರಿ ಮುಟ್ಟುವುದು ಸಾಧ್ಯ.
“ನನ್ನ ಮಾಸಿಕ ಆದಾಯ [₹20000].
ನನ್ನ ತಿಂಗಳ ಉಳಿತಾಯ ಗುರಿ [₹2000].
ನನ್ನ ನಿಯಮಿತ ವೆಚ್ಚಗಳು ಇವುಗಳನ್ನು ಒಳಗೊಂಡಿವೆ: [ಬಾಡಿಗೆ-8000 / ಆಹಾರ / ಪ್ರಯಾಣ / ಕೌಟುಂಬಿಕ ವೆಚ್ಚಗಳು / ಇಎಂಐ / ಇತರೆ].
ಇದರ ಆಧಾರದ ಮೇಲೆ, ಸರಳವಾದ ಮಾಸಿಕ ಉಳಿತಾಯ ಯೋಜನೆಯನ್ನು ರಚಿಸು. ಸೂಕ್ತ ಸಲಹೆಗಳು ಇರಲಿ.”
🧠 ನಿಮ್ಮ ಜೇಬಲ್ಲೇ ಇದ್ದಾರೆ ಕೌನ್ಸೆಲಿಂಗ್ ಡಾಕ್ಟರ್
ಎಐ ಅನ್ನು ಸೈಕಾಲಜಿಕಲ್ ಕೌನ್ಸೆಲರ್ ರೀತಿ ಬಳಸಿಕೊಳ್ಳಬಹುದು. ಒಬ್ಬ ತಜ್ಞ ವೈದ್ಯರು, ಮಾನಸಿಕ ತಜ್ಞರು ಹೇಳುವಷ್ಟೇ ಚೆನ್ನಾಗಿ ಎಐ ಕೂಡ ನಮಗೆ ಸಮಾಧಾನ ಹೇಳುತ್ತದೆ. ಸಮಸ್ಯೆಗಳನ್ನು ಗುರುತಿಸುತ್ತದೆ. ಆದರೆ, ಮನುಷ್ಯ ವೈದ್ಯರಿಗೆ ಇರುವ ಸಾಮಾಜಿಕ ಜ್ಞಾನ ಎಐಗೆ ಇಲ್ಲವಾದ್ದರಿಂದ ಕೆಲವು ಸಮಸ್ಯೆಗಳು ಅದಕ್ಕೆ ಅರ್ಥವಾಗುವುದಿಲ್ಲ. ಮನೋತಜ್ಞರಿಗೆ ಈ ಎಐ ಪರ್ಯಾಯವಲ್ಲ. ಆದರೆ, ನಾವು ಪದೇ ಪದೇ ಎದುರಿಸುವ ಒತ್ತಡ, ಕೋಪ, ಅಸಹನೆಗಳನ್ನು ನಿವಾರಿಸಿಕೊಳ್ಳಲು ಎಐ ಬಳಸಿ ದಾರಿ ಕಂಡುಕೊಳ್ಳಬಹುದು.
“ಇಂದು ನನಗೆ ಸ್ವಲ್ಪ [ಒತ್ತಡ] ಕಾಡುತ್ತಿದೆ.
[10] ನಿಮಿಷಗಳಲ್ಲಿ ಮಾಡಬಹುದಾದ ನನ್ನ ಮನಸ್ಸಿಗೆ ಸಮಾಧಾನ ನೀಡುವ, ದೇಹಕ್ಕೆ ಹಿತವೆನಿಸುವ ಸರಳವಾದ ಅಭ್ಯಾಸಗಳನ್ನು ಸೂಚಿಸು.
ಅಭ್ಯಾಸಗಳನ್ನು ಮಾಡುವುದು ಹೇಗೆ ಎಂಬುದನ್ನು ಹಂತ ಹಂತವಾಗಿ ಸರಳ ಭಾಷೆಯಲ್ಲಿ ವಿವರಿಸು. ಜೊತೆಗೆ, ಮಹಾನುಭಾವರು ಹೇಳಿರುವ ಕೆಲವು ಪ್ರೇರಣಾದಾಯಕ ಮಾತುಗಳಿರಲಿ.”
🧠 ಕಲ್ಪನೆಗೆ ಜೀವ ತುಂಬುವ ಇಮೇಜ್ ಜನರೇಟರ್
ಎಐ ಎಂದರೆ ಅದು ಚಿತ್ರ ಬಿಡಿಸುವುದು, ವೀಡಿಯೊಗಳನ್ನು ರಚಿಸುವುದು ಎಂಬಂತಾಗಿಬಿಟ್ಟಿದೆ. ಆದರೆ, ಎಐ ತಂತ್ರಜ್ಞಾನದ ನಿಜವಾದ ಸಾಮರ್ಥ್ಯ ಬೇರೆಯೇ ಇದೆ. ಆದರೂ ಬೇರೆ ಬೇರೆ ಅಗತ್ಯಗಳಿಗೆ ತಕ್ಕಂತೆ ಚಿತ್ರಗಳನ್ನು ರಚಿಸಲು ಗೊತ್ತಿರಬೇಕು. ಅದಕ್ಕೆ ನರವಾಗಲೆಂದೇ ಈ ಪ್ರಾಂಪ್ಟ್ ರೂಪಿಸಲಾಗಿದೆ. ಇದು ಒಂದು ಉದಾಹರಣೆಯಷ್ಟೆ. ನಿಮಗೆ ಬೇಕಾದ ಚಿತ್ರವನ್ನು ಸರಿಯಾಗಿ ವಿವರಿಸಿದರೆ ನಿಮ್ಮ ಕಣ್ಣೆದುರೇ ಚಿತ್ರ ಮೈದಳೆಯುತ್ತದೆ.
“[ತಲೆಗೆ ಕೌ ಬಾಯ್ ಟೋಪಿ ಧರಿಸಿರುವ] [ಸೈಬೀರಿಯನ್ ಹಸ್ಕಿ] ತಳಿಯ ನಾಯಿಯೊಂದು [ಸೈಕಲ್ ತುಳಿಯುತ್ತಾ] ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿ ಹೋಗುತ್ತಿರುವ [ತೈಲವರ್ಣಚಿತ್ರ] ರಚಿಸು.
· ಡಬಲ್ರೋಡ್ ಇರುವ ಎಂ.ಜಿ ರಸ್ತೆಯಲ್ಲಿ ಒಂದು ಭಾಗದಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸುತ್ತಿರಲಿ.
· ನಾಯಿ ನಡುರಸ್ತೆಯಲ್ಲಿ ಸಾಗುತ್ತಿದ್ದು, ಎಂ.ಜಿ ರಸ್ತೆಯು ಉದ್ದಕ್ಕೂ ಚಿತ್ರದಲ್ಲಿ ಕಾಣುತ್ತಿರಲಿ.
· ಜನರು, ವಾಹನಗಳು ರಸ್ತೆಯಲ್ಲಿ ತುಂಬಿರಲಿ. ರಸ್ತೆಯ ಪಕ್ಕದಲ್ಲೇ ಇರುವ ಟ್ರ್ಯಾಕ್ನಲ್ಲಿ ಮೆಟ್ರೊ ಚಲಿಸುತ್ತಿರಲಿ.
· ಚಿತ್ರ ಇಂದಿನ ಎಂ.ಜಿ ರಸ್ತೆಯ ನೈಜ ಚಿತ್ರಣವನ್ನು ಬಿಂಬಿಸುವಂತಿರಲಿ.
· ಬೆಂಗಳೂರಿನ ಸ್ಥಳೀಯತೆ ಚಿತ್ರದಲ್ಲಿ ಕಾಣುವಂತಿರಲಿ.”
🧠 ಫೋಟೋ ತೆಗೆಸಲು ಸ್ಟುಡಿಯೋ ಯಾಕೆ ಬೇಕು
ಇದು ನಿಮ್ಮ ಖಾಸಗಿ ಫೋಟೋಗಳನ್ನು ವಿವಿಧ ರೀತಿಯಲ್ಲಿ ಪರವರ್ತಿಸಲು ಸಹಕಾರಿ. ಇರುವ ಫೋಟೋಗಳನ್ನು ಎಡಿಟ್ ಮಾಡಲು ಇಂತಹ ಪ್ರಾಂಪ್ಟ್ಗಳನ್ನು ಬಳಸಬಹುದು. ಇದು ಒಂದು ಶೈಲಿಗೆ ಸಂಬಂಧಿಸಿದ ಪ್ರಾಂಪ್ಟ್. ಇಂಥ ನೂರಾರು ಶೈಲಿಗಳು ಇಂಟರ್ನೆಟ್ನಲ್ಲಿ ಸಿಗುತ್ತವೆ. ಅವುಗಳನ್ನು ಬಳಸಿ ನಿಮ್ಮ ಫೋಟೋ ಅಪ್ಲೋಡ್ ಮಾಡಿದರೆ ಯಾವುದೇ ಸ್ಟೈಲ್ಗೆ ನಿಮ್ಮ ಫೋಟೊವನ್ನು ಪರವರ್ತಿಸಬಹುದು.
“ಅಟ್ಯಾಚ್ ಮಾಡಿರುವ ಫೋಟೋವನ್ನು ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರಣವಾಗಿ ಪರಿವರ್ತಿಸು. ಚಿತ್ರದಲ್ಲಿರುವ ಹಿನ್ನೆಲೆಯಲ್ಲಿ ಹಾಗೆಯೇ ಉಳಿಸಿಕೊ. ಸ್ಟುಡಿಯೋ ಘಿಬ್ಲಿ ಆ್ಯನಿಮೇಷನ್ನ ವಿಶಿಷ್ಟವಾದ ಆಕರ್ಷಕ, ಕೈಯಿಂದ ಚಿತ್ರಿಸಿದ ಶೈಲಿ ಗಾಢವಾಗಿರಲಿ. ಆದಷ್ಟೂ ಚಿತ್ರದಲ್ಲಿರುವ ವ್ಯಕ್ತಿಗಳ ಮುಖಚರ್ಯೆ ಘಿಬ್ಲಿ ಶೈಲಿಯಲ್ಲೂ ಬಿಂಬಿಸಲಿ.”
🧠 ದೊಡ್ಡ ಪುಸ್ತಕದ ಅರ್ಥ ವಿವರಿಸುವ ಎಐ
ಎಐಗಳ ಅತಿದೊಡ್ಡ ಉಪಯೋಗಗಳಲ್ಲಿ ಇದೂ ಒಂದು. ದೊಡ್ಡ ದೊಡ್ಡ ಪುಸ್ತಕ, ವೀಡಿಯೊ, ಲೇಖನಗಳನ್ನು ಸಂಕ್ಷಿಪ್ತಗೊಳಿಸಲು ಈ ಪ್ರಾಂಪ್ಟ್ ಬಳಸಬಹುದು. ಇಷ್ಟು ಪದಗಳು ಎಂದು ನಮೂದಿಸಿದರೆ ಸಾಕು, ಮೂಲ ಎಷ್ಟೇ ದೊಡ್ಡದಿರಲಿ ಅಷ್ಟೇ ಪದಗಳಿಗೆ ಎಐ ಸಮ್ಮರೈಸ್ ಮಾಡುತ್ತದೆ. ನಮಗೆ ಬೇಕಾದ ಶೈಲಿಯಲ್ಲಿಯೂ ಕೇಳಬಹುದು.
“ಅಟ್ಯಾಚ್ ಮಾಡಿರುವ ಫೈಲ್ನಲ್ಲಿರುವ ಅಥವಾ ಕೆಳಗೆ ಪೇಸ್ಟ್ ಮಾಡಿರುವ ವಿಷಯವನ್ನು ಸರಳವಾದ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯಲ್ಲಿ ಸಂಕ್ಷೇಪಿಸು. ಎಲ್ಲಾ ಪ್ರಮುಖ ಅಂಶಗಳು ಸಾರಾಂಶದಲ್ಲಿರಲಿ. ಪರಿಭಾಷೆಗಳು, ವೈಜ್ಞಾನಿಕ ವಿವರಣೆಗಳು ಅಥವಾ ಯಾವುದೇ ಸಂಕೀರ್ಣ ವಿಚಾರಗಳಿದ್ದರೆ ಅವುಗಳನ್ನು ಸರಳೀಕರಿಸಿ ಸ್ಪಷ್ಟ, ಸಂಕ್ಷಿಪ್ತ ಸ್ವರೂಪದಲ್ಲಿ ಪ್ರಸ್ತುತಪಡಿಸು. ಪ್ರಮುಖ ವಿಚಾರಗಳು, ವಾದಗಳು ಮತ್ತು ತೀರ್ಮಾನಗಳು ಸಾರಾಂಶದಲ್ಲಿರುವಂತೆ ನೋಡಿಕೊಳ್ಳುವುದು ಅಗತ್ಯ.”
🧠 ಎಐ ಎಂದರೆ ಸಂವಾದ ನಡೆಸುವ ಸಂಗಾತಿ
ಈ ಪ್ರಾಂಪ್ಟ್ ಅನ್ನು ಬ್ರೈನ್ಸ್ಟಾರ್ಮ್ ಎಂದು ಕರೆಯುತ್ತಾರೆ. ಎಂದರೆ, ಒಂದು ವಿಚಾರದಲ್ಲಿ ಒಬ್ಬ ಅಥವಾ ಹಲವು ತಜ್ಞರ ಜೊತೆ ಚರ್ಚಿಸುವ ಕ್ರಿಯೆ ಇದೆ. ಕಂಪನಿಗಳ ಬೋರ್ಡ್ ರೂಮ್ನಲ್ಲಿ ಬಿಸಿನೆಸ್ ಕುರಿತ ಸಂವಾದ ನಡೆಯುತ್ತದೆ. ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತಕರ ನಡುವೆ ಸಂವಾದ ನಡೆಯುತ್ತದೆ. ಆದರೆ ನಮಗೆ ಎದುರಾಗುವ ಒಂದು ಸಮಸ್ಯೆ, ತಲೆಕೊರೆಯುವ ವಿಚಾರಕ್ಕೆ ಸಂವಾದ ನಡೆಸಲು ಯಾರ ಬಳಿ ಹೋಗುವುದು. ಅಂತಹ ಸಂದರ್ಭದಲ್ಲಿ ಎಐ ಮಾಡೆಲ್ಗಳನ್ನು ಬಳಸಿ ಒಳ್ಳೆಯ ಸಂವಾದ ನಡೆಸಬಹುದು. ಅದು ಒಂದು ದಿನವೇ ಆಗಬೇಕಿಲ್ಲ, ಎಷ್ಟು ದಿನ ಬೇಕಾದರೂ ಒಂದೇ ಚಾಟ್ನಲ್ಲಿ ಚರ್ಚೆ ನಡೆಸಬಹುದು. ಎಷ್ಟು ದಿನಗಳಾದರೂ ಎಐ ಹಳೆಯ ಚರ್ಚೆಗಳನ್ನೆಲ್ಲಾ ನೆನಪಿಟ್ಟುಕೊಳ್ಳುತ್ತದೆ ಇದನ್ನೇ ಎಐ ಪರಿಭಾಷೆಯಲ್ಲಿ ಕಾಂಟೆಕ್ಸ್ಟ್ ವಿಂಡೋ ಎನ್ನುತ್ತೇವೆ.
“ನಾನೊಬ್ಬ ಸಾಮಾನ್ಯ ವ್ಯಕ್ತಿ. ವ್ಯವಹಾರ ಅಥವಾ ಉದ್ಯಮದ ನನಗಿಲ್ಲ. ಆದರೆ ನನ್ನೊಳಗೆ ಒಂದು ವ್ಯವಹಾರದ ಕಲ್ಪನೆ ಇದೆ ಮತ್ತು ಅದನ್ನು ಗಂಭೀರವಾಗಿ ಚರ್ಚಿಸಿ ರೂಪಿಸಿಕೊಳ್ಳಲು ಬಯಸುತ್ತೇನೆ.
· ನೀನು ನನ್ನ ಒಬ್ಬ ವ್ಯವಹಾರ ತಜ್ಞನಾಗಿದ್ದು, ಸ್ನೇಹಪರವಾಗಿರು ಆರಂಭಿಕ ಮಾರ್ಗದರ್ಶಕನಾಗಿರು.
· ಆರಂಭಿಕರೊಂದಿಗೆ ಸಹನಶೀಲವಾಗಿ ಮಾತನಾಡುವ, ಪ್ರಶ್ನೆಗಳಿಂದ ಚಿಂತನೆಗೆ ಪ್ರೇರೇಪಿಸುವಂತೆ ವರ್ತಿಸು.
· ನೀನು ಸರಳ ಭಾಷೆಯಲ್ಲಿ ಹಂತ ಹಂತವಾಗಿ ವಿವರಿಸುವ ಮಾರ್ಗದರ್ಶಿಯ ಪಾತ್ರ ನಿನ್ನದಾಗಬೇಕೆಂದು ಬಯಸುತ್ತೇನೆ.
ನಮ್ಮ ಸಂವಾದ ಹೀಗಿರಲಿ:
• ಒಂದೇ ಸಮಯದಲ್ಲಿ ಒಂದು ಪ್ರಶ್ನೆ ಕೇಳು
• ನನ್ನ ಉತ್ತರದ ಆಧಾರದ ಮೇಲೆ ಮುಂದಿನ ಹಂತ ಸೂಚಿಸು
• ಸಲಹೆಗಳು, ಉದಾಹರಣೆಗಳು ಮತ್ತು ಮಾರ್ಗದರ್ಶನ ಕೊಡುತ್ತಾ ಕಲ್ಪನೆಯನ್ನು ವಿಸ್ತರಿಸುತ್ತಾ ಹೋಗು
ನಾವು ಒಟ್ಟಿಗೆ ಈ ಕಲ್ಪನೆಯನ್ನು ಒಂದು ಸ್ಪಷ್ಟ ಮತ್ತು ಕಾರ್ಯಗತಗೊಳಿಸಬಹುದಾದ ಬಿಸಿನೆಸ್ ಐಡಿಯಾ ಆಗಿ ಅಭಿವೃದ್ಧಿಪಡಿಸೋಣ.”
🧠 ಡೀಪ್ ರೀಸರ್ಚ್ ಎಂಬ ಪವರ್ಫುಲ್ ಫೀಚರ್
ಡೀಪ್ ರೀಸರ್ಚ್ ಎನ್ನುವುದು ಎಐನ ಅತಿದೊಡ್ಡ ಫೀಚರ್. ಇದನ್ನು ಬಳಸಿ ಆಳವಾದ ಸಂಶೋಧನೆ ಕೈಗೊಳ್ಳಬಹುದು. ಯಾವ ವಿಷಯದಲ್ಲಿ ಸಂಶೋಧನೆ ನಡೆಸಬೇಕು, ಯಾವ ವಿವರಗಳ ಅಗತ್ಯವಿದೆ, ಯಾರ ಹೇಳಿಕೆಗಳ ಬೇಕು ಎಂಬಿತ್ಯಾದಿ ವಿವರವನ್ನು ನಮೂದಿಸಿದರೆ ಎಐ ಇಂಟರ್ನೆಟ್ನಲ್ಲೆಲ್ಲಾ ಜಾಲಾಡಿ ಮಾಹಿತಿಯನ್ನು ಹೆಕ್ಕಿ ತೆಗೆಯುತ್ತದೆ. ನಾವು ಹುಡುಕುವ ವಿಚಾರ ಮಾಹಿತಿಯೂ ಇರಬಹುದು, ಸಿದ್ಧಾಂತವೇ ಇರಬಹುದು. ಉದಾಹರಣೆಗೆ, ಭಾರತದ ಈವರೆಗಿನ ಎಲ್ಲಾ ಪ್ರಧಾನ ಮಂತ್ರಿಗಳ ಹೆಸರು, ಅವಧಿ, ಅವರ ಕಾಲಾವಧಿಯ ಅತ್ಯಂತ ಪ್ರಮುಖ ಸಾಧನೆಗಳು ಯಾವು ಎಂದು ಕೇಳಿದರೆ ಕೆಲವೇ ನಿಮಿಷಗಳಲ್ಲಿ ಮಾಹಿತಿ ನಮ್ಮ ಮುಂದೆ ಬರುತ್ತದೆ. ಇದು ಒಬ್ಬರಿಗೆ ಸಂಬಂಧಿಸಿದ ಮಾಹಿತಿಯಲ್ಲ, ಆಯಾ ಪ್ರಧಾನಿಗಳ ಸಾಧನೆಗಳನ್ನೂ ಕೇಳುತ್ತಿದ್ದೇವೆ. ಸುಮಾರು 75ಕ್ಕೂ ಹೆಚ್ಚು ವರ್ಷಗಳ ಭಾರತದ ರಾಜಕೀಯ ಇತಿಹಾಸವನ್ನು ಶೋಧಿಸಿ ನಮಗೆ ಮಾಹಿತಿ ಒದಗಿಸಬೇಕು. ಇದನ್ನು ನಾವೇ ಹುಡುಕಬೇಕು ಎಂದರೆ ದಿನಗಳು ಇಲ್ಲವೇ ವಾರಗಳೇ ಹಿಡಿಯಬಹುದು. ಸಂಶೋಧಕರಿಗಂತೂ ಇದು ಹೇಳಿಮಾಡಿಸಿದ ಟೂಲ್ ಇದು. ಈ ಪ್ರಾಂಪ್ಟ್ ಡೀಪ್ ರೀಸರ್ಚ್ಗೆ ಒಂದು ಉದಾಹರಣೆ ಅಷ್ಟೇ.
“ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಅಪಾರ ಅನುಭವ ಇರುವ, ಕ್ಷೇತ್ರದ ಬಗೆಗೆ ಅಪಾರ ಜ್ಞಾನ ಹೊಂದಿರುವ [ಸಿನಿಮಾ ತಜ್ಞ]ನಾಗಿರುವ ನೀವು, ಕನ್ನಡದ ಹೆಸರಾಂತ ನಟ [ಡಾ.ರಾಜ್ಕುಮಾರ್] ಅವರು ನಟಿಸಿದ ಎಲ್ಲಾ ಕನ್ನಡ ಚಲನಚಿತ್ರಗಳ ಪಟ್ಟಿಯನ್ನು ಕ್ರಮಬದ್ಧವಾದ ಟೇಬಲ್ ರೂಪದಲ್ಲಿ ಒದಗಿಸಿ:
- ಪಟ್ಟಿಯು ರಾಜಕುಮಾರ್ ನಟಿಸಿದ ಮೊದಲ ಚಿತ್ರದಿಂದ ಕೊನೆಯ ಚಿತ್ರಗಳವರೆಗೆ ಬಿಡುಗಡೆಯಾದ ವರ್ಷದ ಅನುಸಾರ ಕಾಲಾಕ್ರಮದಲ್ಲಿ ಇರಲಿ
- ಚಿತ್ರದ ಹೆಸರು, ತೆರೆಕಂಡ ವರ್ಷ ಮತ್ತು ರಾಜ್ಕುಮಾರ್ ಜೊತೆ ನಟಿಸಿದ ನಾಯಕಿಯ ಹೆಸರು ವಿವರ ಇರಲಿ
- ಟೇಬಲ್ ಕ್ರಮ ಹೀಗಿರಲಿ:
ಚಿತ್ರದ ಹೆಸರು-ತೆರೆಕಂಡ ವರ್ಷ-ನಾಯಕಿಯ ಹೆಸರು
ಆಳವಾದ ಸಂಶೋಧನೆ ನಡೆಸಿ ಈ ಮಾಹಿತಿಯನ್ನು ನಂಬಲರ್ಹ ಮೂಲಗಳಿಂದ ಶೋಧಿಸಿ, ಬಳಿಕ ಅದನ್ನು ಸರಿ ಇದೆಯೇ ಎಂದು ಪರಿಶೀಲಿಸಿ ಎಕ್ಸೆಲ್ ಫೈಲ್ನಲ್ಲಿ ಕೇಳಿದ ಮಾಹಿತಿಯನ್ನು ಒದಗಿಸಿ. ಪ್ರಶ್ನೆಗಳಿದ್ದರೆ ಮೊದಲೇ ಪರಿಹರಿಸಿಕೊಳ್ಳಿ.”
🧠 ಎಐ ಬಳಸಿ ಲೇಖನ, ವರದಿ ಸಿದ್ಧಪಡಿಸಿ
ಚಾಟ್ಜಿಪಿಟಿ ಬಿಡುಗಡೆಯಾದ ಕೂಡಲೇ ಜಗತ್ತಿನಾದ್ಯಂತ ಜನರು ಅಚ್ಚರಿಗೊಂಡಿದ್ದೇ ಅದರ ಲೇಖನ ಬರೆಯುವ ಸಾಮರ್ಥ್ಯಕ್ಕೆ. ಎಐಗಳು ಚೆನ್ನಾಗಿಯೇ ಲೇಖನ, ವರದಿ, ಪತ್ರಗಳು, ಇಮೇಲ್ಗಳನ್ನು ಬರೆಯುತ್ತವೆ. ಇಡೀ ಪುಸ್ತಕವನ್ನೇ ಕೆಲವೇ ನಿಮಿಷಗಳಲ್ಲಿ ಬರೆದುಕೊಡುತ್ತವೆ. ನಮಗೆ ಏನು ಬೇಕು ಎನ್ನುವುದನ್ನು ಸ್ಪಷ್ಟ ಅಕ್ಷರಗಳಲ್ಲಿ ಸೂಚಿಸಿದರೆ ನಮ್ಮ ಕೆಲಸ ಆಗುತ್ತದೆ. ಆದರೆ, ತಪ್ಪದೇ ಕಟ್ಟುಕಥೆ ಕಟ್ಟದಂತೆ ನಾವೇ ಸೂಚನೆ ಕೊಟ್ಟುಬಿಡಬೇಕು. ಹೀಗೆ ಎಐ ಮೂಲಕ ಲೇಖನ ಬರೆಸುವುದು ಪರಿಚಯವಾಗಲೆಂದು ಈ ಪ್ರಾಂಪ್ಟ್ ನೀಡಲಾಗಿತ್ತು.
“ಹೊಸಬರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರಿಚಯಿಸುವ ಬಗ್ಗೆ ಸುಲಭವಾಗಿ ಅರ್ಥವಾಗುವಂತೆ 500 ಪದಗಳಲ್ಲಿ ಲೇಖನವನ್ನು ಬರೆಯಿರಿ. AI ಎಂದರೇನು, ಅದು ದೈನಂದಿನ ಜೀವನದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಕುರಿತು ಎಲ್ಲರೂ ತಿಳಿಯುವುದು ಏಕೆ ಮುಖ್ಯ ಎಂಬುದನ್ನು ವಿವರಿಸಿ. ಸರಳ ಭಾಷೆ, ಸ್ಪಷ್ಟ ಉದಾಹರಣೆಗಳ ಸಹಿತ ಮಾಹಿತಿಯುಕ್ತ ಲೇಖನ ರಚಿಸಿ.”


