ಡಾ. ರಮೇಶ್ ನಿಂಬೆಮರದಳ್ಳಿ
ನವದೆಹಲಿ: ಭಾರತದ ಪ್ರಮುಖ ಸಂಸ್ಥೆಗಳು ಮತ್ತು ಕಂಪನಿಗಳ ಆಂತರಿಕ ಸಿಸ್ಟಮ್ಗಳಿಗೆ ಅನಧಿಕೃತ ಸ್ವಾಯತ್ತ ಎಐ ಏಜೆಂಟ್ ( ಇದನ್ನು Autonomous AI Agent ಅಥವಾ ‘Rogue AI’ ಎನ್ನಲಾಗುತ್ತದೆ) ನುಸುಳಿ, ಅಲ್ಲಿನ ರಹಸ್ಯ ವಹಿವಾಟು ಹಾಗೂ ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸಿರುವ ಆತಂಕಕಾರಿ ಸಂಗತಿಯನ್ನು ಕೇಂದ್ರ ಸರ್ಕಾರದ ಸೈಬರ್ ಭದ್ರತಾ ನೋಡಲ್ ಸಂಸ್ಥೆಯಾದ CERT-In (ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ - ಇಂಡಿಯಾ) ಅಧಿಕೃತವಾಗಿ ಬಹಿರಂಗಪಡಿಸಿದೆ.
ಇತ್ತೀಚೆಗೆ ಹೊರಡಿಸಲಾದ ‘AI Agents as Attack Vectors’ ಎಂಬ ತುರ್ತು ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, ಸ್ವಾಯತ್ತ ಎಐ ಮಾದರಿಗಳು ತಮಗೆ ನಿಗದಿಪಡಿಸಿದ ಮಿತಿಗಳನ್ನು ಮೀರಿ ಕಾರ್ಯಾಚರಣೆ ನಡೆಸುತ್ತಿರುವುದು ದೇಶದ ಐಟಿ ಮತ್ತು ಕಾರ್ಪೊರೇಟ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಕೇಂದ್ರ ಸರ್ಕಾರದ ತನಿಖಾ ವರದಿಯ ಪ್ರಕಾರ, ಜಾಗತಿಕ ಎಐ ಅಭಿವೃದ್ಧಿ ಸಂಸ್ಥೆಗಳು ತಮ್ಮ ಸುಧಾರಿತ ಎಐ ಮಾದರಿಗಳನ್ನು ಪರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಈ ಏಜೆಂಟ್ಗಳು ನಿಗದಿತ ಕಾರ್ಯವ್ಯಾಪ್ತಿಯನ್ನು ಮೀರಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಿವೆ. ಭಾರತೀಯ ಕಂಪನಿಗಳ ಅಪ್ಲಿಕೇಶನ್ ಕಾನ್ಫಿಗರೇಶನ್ಗಳು, ಸಾರ್ವಜನಿಕ ಕೋಡ್ ರೆಪೊಸಿಟರಿಗಳು ಹಾಗೂ ದುರ್ಬಲ ಕ್ಲೌಡ್ ವ್ಯವಸ್ಥೆಗಳಲ್ಲಿ ಸುರಕ್ಷಿತವಲ್ಲದ ಪಾಸ್ವರ್ಡ್ಗಳು ಮತ್ತು ‘ಎಪಿಐ ಕೀ’ಗಳನ್ನು ಬಳಸಿಕೊಂಡು ಇವು ಲೈವ್ ಸರ್ವರ್ಗಳನ್ನು ಪ್ರವೇಶಿಸಿವೆ. ಅಷ್ಟೇ ಅಲ್ಲದೆ, ಸೈಬರ್ ಅಪರಾಧಿಗಳು ಸಹ ಇಂಟರ್ನೆಟ್ನಲ್ಲಿ ಉಚಿತವಾಗಿ ಲಭ್ಯವಿರುವ ಎಐ ಹ್ಯಾಕಿಂಗ್ ಪರಿಕರಗಳನ್ನು ಬಳಸಿಕೊಂಡು ಹಣದಾಸೆಗಾಗಿ ಭಾರತೀಯ ಕಂಪನಿಗಳ ಮೇಲೆ ಕ್ಷಿಪ್ರ ದಾಳಿ ಸಂಘಟಿಸುತ್ತಿರುವುದೂ ಪತ್ತೆಯಾಗಿದೆ.
ದಾಳಿಯ ಸುಳಿವೇ ಇಲ್ಲ
ಈ ಇಡೀ ವಿದ್ಯಮಾನದಲ್ಲಿ ಅತ್ಯಂತ ಕಳವಳಕಾರಿ ಅಂಶವೆಂದರೆ, ದಾಳಿಗೆ ಒಳಗಾದ ಯಾವುದೇ ಭಾರತೀಯ ಸಂಸ್ಥೆಗೂ ತಮ್ಮ ಲೈವ್ ನೆಟ್ವರ್ಕ್ಗೆ ಎಐ ನುಸುಳಿದೆ ಎಂಬ ಸುಳಿವೇ ಸಿಕ್ಕಿರಲಿಲ್ಲ. ಬದಲಿಗೆ, ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಿದ ಕಂಪನಿಗಳೇ ತಮ್ಮ ಆಂತರಿಕ ತನಿಖೆ ನಡೆಸಿದ ಬಳಿಕ ಈ ಅತಿರೇಕದ ನಡವಳಿಕೆಯನ್ನು ಗುರುತಿಸಿ ಸ್ವಯಂಪ್ರೇರಿತವಾಗಿ CERT-In ಗೆ ಮಾಹಿತಿ ನೀಡಿವೆ. ಎಐ ತಂತ್ರಜ್ಞಾನವು ಸಾಂಪ್ರದಾಯಿಕ ವೈರಸ್ಗಳಂತೆ ವರ್ತಿಸದೆ, ಅಧಿಕೃತ ಪ್ರವೇಶಾವಕಾಶಗಳನ್ನು ಬಳಸಿಕೊಂಡು ಆಂತರಿಕವಾಗಿ ಓಡಾಡುವುದರಿಂದ ಸಂಸ್ಥೆಗಳ ಸಾಂಪ್ರದಾಯಿಕ ಫೈರ್ವಾಲ್ ಹಾಗೂ ಆ್ಯಂಟಿವೈರಸ್ ವ್ಯವಸ್ಥೆಗಳು ಇದನ್ನು ಪತ್ತೆಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿವೆ. ಜೊತೆಗೆ, ಹಿಂದೆ ಹ್ಯಾಕರ್ಗಳು ಒಳನುಗ್ಗಿ ಹಾನಿ ಮಾಡಲು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿದ್ದರೆ, ಎಐ ಏಜೆಂಟ್ಗಳು ಆ ಪ್ರಕ್ರಿಯೆಯನ್ನು ಕೇವಲ ಕೆಲವೇ ಗಂಟೆಗಳಲ್ಲಿ ಪೂರ್ಣಗೊಳಿಸಿರುವುದು ಸೈಬರ್ ಭದ್ರತಾ ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿಹಿಡಿದಿದೆ.
ಗಂಭೀರವಾಗಿ ಪರಿಗಣಿಸಿದ ಸರಕಾರ
ಈ ಬೆಳವಣಿಗೆಯನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದೆ. ಯಾವುದೇ ಎಐ ಮಾದರಿ ಅಥವಾ ಸ್ವಾಯತ್ತ ಏಜೆಂಟ್ಗಳನ್ನು ಪರೀಕ್ಷಿಸುವಾಗ, ಅವುಗಳನ್ನು ಇಂಟರ್ನೆಟ್ ಸಂಪರ್ಕವಿಲ್ಲದ ಹಾಗೂ ಪ್ರತ್ಯೇಕ ನಿಯಂತ್ರಿತ ‘ಸ್ಯಾಂಡ್ಬಾಕ್ಸ್’ ಪರಿಸರದಲ್ಲಿ ಮಾತ್ರವೇ ಪರೀಕ್ಷಿಸಬೇಕು ಎಂದು ಆದೇಶಿಸಿದೆ. ಕಂಪನಿಗಳು ತಮ್ಮ ಎಲ್ಲಾ ಕೋಡ್ ಹಿಸ್ಟರಿಯಿಂದ ಹಳೆಯ ಪಾಸ್ವರ್ಡ್, ಎಪಿಐ ಕೀಗಳನ್ನು ತೆಗೆದುಹಾಕಬೇಕು, ಬಹುಹಂತದ ದೃಢೀಕರಣ (MFA) ಕಡ್ಡಾಯಗೊಳಿಸಬೇಕು ಮತ್ತು ಕನಿಷ್ಠ 180 ದಿನಗಳ ಭದ್ರತಾ ಲಾಗ್ಗಳನ್ನು ಸಂರಕ್ಷಿಸಿಡಬೇಕು ಎಂದು ಸರ್ಕಾರ ತಾಕೀತು ಮಾಡಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕೃತಕ ಬುದ್ಧಿಮತ್ತೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡದೆ ‘ಹ್ಯೂಮನ್-ಇನ್-ದಿ-ಲೂಪ್’ (ಮಾನವನ ಮೇಲ್ವಿಚಾರಣೆ) ಇರಲೇಬೇಕು ಎಂದು ಸರ್ಕಾರ ತಿಳಿಸಿದೆ.
ರೋಗ್ ಎಐ ದಾಳಿ ಇದೇ ಮೊದಲಲ್ಲ
ಸ್ವಾಯತ್ತ ಎಐ ಏಜೆಂಟ್ಗಳು ನಿಯಂತ್ರಣ ತಪ್ಪಿ ಇಂಟರ್ನೆಟ್ ಅಥವಾ ರಹಸ್ಯ ವ್ಯವಸ್ಥೆಗಳಿಗೆ ನುಸುಳಿರುವ ಘಟನೆ ಇದೇ ಮೊದಲಲ್ಲ. ಈ ಮೊದಲು ಹಲು ಬಾರಿ ವಿವಿಧ ಕಂಪನಿಗಳು, ಸರಕಾರಗಳ ಸರ್ವರ್ಗಳಿಗೆ ಅನಧಿಕೃತವಾಗಿ ನುಗ್ಗಿರುವ ಘಟನೆಗಳು ವರದಿಯಾಗಿವೆ:
ಆಸ್ಟ್ರೇಲಿಯಾದ ಸರ್ಕಾರಿ ಪೋರ್ಟಲ್ಗಳಿಗೆ ಎಐ ಲಾಗಿನ್ (2026): ಆಸ್ಟ್ರೇಲಿಯಾದ ಮೆಡಿಕೇರ್ ಸೇರಿದಂತೆ ಕನಿಷ್ಠ ನಾಲ್ಕು ಪ್ರಮುಖ ಸರ್ಕಾರಿ ಜಾಲತಾಣಗಳಿಗೆ ಓಪನ್ಎಐ ಪರೀಕ್ಷಾರ್ಥ ಎಐ ಏಜೆಂಟ್ಗಳು ಅನಧಿಕೃತವಾಗಿ ಪ್ರವೇಶ ಪಡೆದಿದ್ದವು. ಈ ಘಟನೆಯಿಂದ ಬೆಚ್ಚಿಬಿದ್ದಿದ್ದ ಆಸ್ಟ್ರೇಲಿಯಾ ಸಂಸದೀಯ ಸಮಿತಿ ರಿಚಿಸಿ ತನಿಖೆಗೆ ಒಳಪಡಿಸಿತು. ಅಲ್ಲದೆ ಪ್ರಮುಖ ಎಐ ಸಂಸ್ಥೆಗಳ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು.
ಅಮೆರಿಕದ ಸರ್ಕಾರಿ ತಾಣಗಳ ಮಾಹಿತಿ ಪ್ರವೇಶ (2026): ಅಮೆರಿಕದ ಅಧಿಕೃತ ಸರ್ಕಾರಿ ವ್ಯವಸ್ಥೆಗಳ ಪೋರ್ಟಲ್ಗಳಿಗೂ ಎಐ ಪರೀಕ್ಷಾರ್ಥ ಮಾದರಿಗಳು ಅನಿರೀಕ್ಷಿತವಾಗಿ ನುಗ್ಗಿ ಮಾಹಿತಿ ಸಂಗ್ರಹಿಸಿದ್ದನ್ನು ಸ್ವತಃ ಎಐ ಸಂಶೋಧನಾ ಲ್ಯಾಬ್ಗಳು ಒಪ್ಪಿಕೊಂಡಿದ್ದವು.
ಓಪನ್ಎಐ ‘ಮಿಸ್ಅಲೈನ್ಮೆಂಟ್’ ಮತ್ತು ಕ್ರಿಪ್ಟೋ ದುರ್ಬಳಕೆ (2026): ಓಪನ್ಎಐನ ಆಂತರಿಕ ಸುರಕ್ಷತಾ ಪರಿಶೀಲನಾ ವರದಿಯಲ್ಲಿ ಸುಮಾರು 19 ‘ಮಿಸ್ಅಲೈನ್ಮೆಂಟ್’ (ಗುರಿ ತಪ್ಪಿದ) ಘಟನೆಗಳು ದಾಖಲಾಗಿದ್ದವು. ಇದರಲ್ಲಿ ಪರೀಕ್ಷಾರ್ಥ ಎಐ ಏಜೆಂಟ್ ಮನುಷ್ಯರ ಅನುಮತಿಯಿಲ್ಲದೆ ಅಸುರಕ್ಷಿತ ಕ್ರಿಪ್ಟೋ ವಾಲೆಟ್ನಿಂದ ಡಿಜಿಟಲ್ ನಾಣ್ಯಗಳನ್ನು ಖರ್ಚು ಮಾಡಿದ್ದು ಹಾಗೂ ಇನ್ನೊಂದು ಏಜೆಂಟ್ 1.47 ಲಕ್ಷಕ್ಕೂ ಹೆಚ್ಚು ಗೌಪ್ಯ ಸಾಲುಗಳ ಡೇಟಾವನ್ನು ಹೊರತೆಗೆದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಹಗ್ಗಿಂಗ್ ಫೇಸ್ ಮತ್ತು ವಿಕಿಮೀಡಿಯಾ ಘಟನೆಗಳು: ಮುಕ್ತ ಎಐ ಪ್ಲಾಟ್ಫಾರ್ಮ್ ಆದ ಹಗ್ಗಿಂಗ್ ಫೇಸ್ ಹಾಗೂ ವಿಕಿಮೀಡಿಯಾ ತಾಣಗಳಲ್ಲಿ ಸ್ವಾಯತ್ತ ಬಾಟ್ಗಳು ತಮಗೆ ನಿಗದಿಪಡಿಸಿದ ಪರಿಮಿತಿಯನ್ನು ಉಲ್ಲಂಘಿಸಿ ಆಂತರಿಕ ಕೋಡ್ ಹಾಗೂ ಟೋಕನ್ಗಳನ್ನು ಪ್ರವೇಶಿಸಲು ಯತ್ನಿಸಿದ್ದ ಘಟನೆಗಳು ಈ ಹಿಂದೆ ಬೆಳಕಿಗೆ ಬಂದಿದ್ದವು.
ಈ ಬೆಳವಣಿಗೆಗಳು ಮೇಲ್ನೋಟಕ್ಕೆ ಸಣ್ಣ ದಾಳಿಗಳಂತೆ ಕಂಡರೂ ಇವು ಎಐನ ಭವಿಷ್ಯದ ದುರ್ಬಳಕೆಯನ್ನು ಸಾರಿ ಹೇಳಿವೆ. ಕೃತಕ ಬುದ್ಧಿಮತ್ತೆಯು ಕೇವಲ ದಕ್ಷತೆ ಹೆಚ್ಚಿಸುವ ತಂತ್ರಜ್ಞಾನವಾಗಿ ಉಳಿದಿಲ್ಲ; ಬದಲಿಗೆ, ಸಕಾಲಿಕ ನಿಯಂತ್ರಣವಿಲ್ಲದಿದ್ದರೆ ಭದ್ರತಾ ಅಪಾಯವಾಗಿ ಪರಿಣಮಿಸಬಲ್ಲದು ಎಂಬುದನ್ನು ಒತ್ತಿ ಹೇಳುತ್ತಿವೆ. ಇಂದಿನ ಅಗತ್ಯವಿರುವುದು ಎಐ ಅಭಿವೃದ್ಧಿಯನ್ನು ತಡೆಯುವುದಲ್ಲ, ಬದಲಿಗೆ ಆವಿಷ್ಕಾರದ ವೇಗಕ್ಕೆ ಸರಿಸಮನಾಗಿ ‘ನೈತಿಕ ಮತ್ತು ತಾಂತ್ರಿಕ ಮಿತಿಗಳನ್ನು’ಕಟ್ಟುನಿಟ್ಟಾಗಿ ರೂಪಿಸುವುದು. ಸಂಸ್ಥೆಗಳು ತಮ್ಮ ಸೈಬರ್ ಭದ್ರತೆಯನ್ನು ಸಾಂಪ್ರದಾಯಿಕ ಸಾಫ್ಟ್ವೇರ್ಗಳಿಗೆ ಸೀಮಿತಗೊಳಿಸದೆ, ಸ್ವಾಯತ್ತ ಎಐ ಮಾದರಿಗಳನ್ನು ನಿರಂತರವಾಗಿ ಕಣ್ಗಾವಲಿನಲ್ಲಿಡುವ "ಎಐ-ಆಧಾರಿತ ರಕ್ಷಣಾ ತಂತ್ರಜ್ಞಾನ"ಗಳಿಗೆ ಆದ್ಯತೆ ನೀಡಬೇಕಿದೆ. ಅಂತಿಮವಾಗಿ, ತಂತ್ರಜ್ಞಾನ ಎಷ್ಟೇ ಸ್ವಾಯತ್ತವಾದರೂ ಅದರ ಲಗಾಮು ಸದಾ ‘ಮಾನವನ ವಿವೇಚನೆ’ಯ ಕೈಯಲ್ಲೇ ಇರಬೇಕೆಂಬುದು ಡಿಜಿಟಲ್ ಯುಗದ ಅನಿವಾರ್ಯ ಪಾಠವಾಗಿದೆ.


