ಬೆಂಗಳೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಐತಿಹಾಸಿಕ ಸಂಸ್ಥೆ ಉದಯಭಾನು ಕಲಾಸಂಘ ಇತ್ತೀಚೆಗೆ ಅಯೋಜಿಸಿದ್ದ ರಾಜ್ಯಮಟ್ಟದ ಚರ್ಚಾಕೂಟಕ್ಕೆ ತೀರ್ಪುಗಾರನಾಗಿ ಭಾಗವಹಿಸಿದ್ದೆ. ಚರ್ಚೆಯಲ್ಲಿ 42 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಚರ್ಚೆಗಳು, ವಿದ್ಯಾರ್ಥಿಗಳ ವಾದ-ಪ್ರತಿವಾದಗಳು ಹಾಗೂ ಬಹುಮಾನ ವಿತರಣೆಯವರೆಗಿನ ಒಡನಾಟ ನನ್ನಲ್ಲಿ ಆಳವಾದ ಚಿಂತನೆಗೆ ದಾರಿ ಮಾಡಿಕೊಟ್ಟಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿ, ಇಂದಿನ ಪಿಯುಸಿ ಮತ್ತು ಪದವಿ ಹಂತದ ಯುವಪೀಳಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೇಗೆ ಗ್ರಹಿಸುತ್ತಿದೆ ಎಂಬ ವಿಚಾರದಲ್ಲಿ ಅಪೂರ್ವ ಒಳನೋಟ ದೊರೆತ ಅಪರೂಪದ ಅವಕಾಶ ಅದಾಗಿತ್ತು.
ಆ ಚರ್ಚಾ ವೇದಿಕೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಒಂದು ಕಡೆ ಯುವಜನತೆಯ ತಂತ್ರಜ್ಞಾನದ ಕಡೆಗಿನ ಆಸಕ್ತಿಯನ್ನು ಬಿಂಬಿಸಿದರೆ, ಮತ್ತೊಂದು ಕಡೆ ಎಐ ಕುರಿತು ಅವರಲ್ಲಿ ಬೇರೂರಿರುವ ಗಂಭೀರ ಅಸ್ಪಷ್ಟತೆ, ಅಗೋಚರ ಭಯ ಮತ್ತು ಅತಿಯಾದ ಅವಲಂಬನೆಯನ್ನು ಎತ್ತಿ ತೋರಿಸಿದವು.
ಮೇಲ್ಮೈ ತಿಳಿವಳಿಕೆ ಮತ್ತು ಅತಿರೇಕದ ಚರ್ಚೆಗಳು
ಚರ್ಚಾಕೂಟದ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಎಐ ಪರವಾಗಿ ಅಥವಾ ವಿರೋಧವಾಗಿ ಮಾತನಾಡಿದ ಬಹುತೇಕ ವಿದ್ಯಾರ್ಥಿಗಳು ತಮ್ಮ ವಾದಗಳನ್ನು ಎಐ ಸಾಧನಗಳನ್ನು ಬಳಸಿಯೇ ಸಿದ್ದಪಡಿಸಿರುವಂತೆ ತೋರಿತು. ಆದರೆ ತಮ್ಮ ಕೈಯಲ್ಲಿದ್ದ ತಂತ್ರಜ್ಞಾನದ ಸ್ವರೂಪವೇ ಅವರಿಗೆ ಪೂರ್ಣವಾಗಿ ತಿಳಿದಿರಲಿಲ್ಲ. ಗೂಗಲ್ ಮ್ಯಾಪ್ಸ್ ಅಥವಾ ವಾಟ್ಸ್ಆ್ಯಪ್ನಂತಹ ಸಾಮಾನ್ಯ ಮೊಬೈಲ್ ಆ್ಯಪ್ಗಳನ್ನೂ ಕೂಡ ಎಐ ಎಂದೇ ಭಾವಿಸಿ, “ಗೂಗಲ್ ಮ್ಯಾಪ್ ಇಲ್ಲದೆಯೂ ನಾವು ದಾರಿ ಹುಡುಕಬಹುದು, ಹಾಗಾಗಿ ನಮಗೆ ಎಐ ಬೇಡ” ಎಂಬಂತಹ ಸರಳೀಕೃತ ವಾದಗಳು ಕೇಳಿಬಂದವು.
ಎಲ್ಲಾ ವಿದ್ಯಾರ್ಥಿಗಳು ಮಂಡಿಸಿದ ವಾದಗಳಲ್ಲಿ ಕಂಡು ಬಂದ ಕೆಲವು ಸರಳೀಕೃತ ಗ್ರಹಿಕೆಗಳು, ಸಮಸ್ಯೆಗಳು, ಅಚ್ಚರಿಗಳು ಮತ್ತು ಆತಂಕಗಳನ್ನು ವಿಶ್ಲೇಷಿಸುವುದು ಇಲ್ಲಿನ ಉದ್ದೇಶ. ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಚಿಂತನೆ ಎರಡು ತೀವ್ರ ವಾದಗಳಿಗೆ ಅಂಟಿಕೊಂಡಿದ್ದು ಕಾಣಿಸಿತು. ಎಐ ಇಲ್ಲದೆ ನಾಳೆ ಜಗತ್ತು ಮುಂದುವರಿಯುವುದೇ ಇಲ್ಲ, ನಮ್ಮ ಆರ್ಥಿಕತೆ, ಸಮಾಜ ಬೆಳೆಯಬೇಕಾದರೆ ಎಐ ಬಳಕೆಯೊಂದೇ ಏಕೈಕ ದಾರಿ ಎನ್ನುವುದು ಒಂದು ತುದಿಯಾದರೆ, ಎಐ ಮನುಷ್ಯರನ್ನು ಹಾಳು ಮಾಡುತ್ತದೆ, ನಮ್ಮ ಚಿಂತನಾಶಕ್ತಿಯನ್ನು, ಕೌಶಲ್ಯಗಳನ್ನು ಕುಗ್ಗಿಸುತ್ತದೆ. ಆದ್ದರಿಂದ ನಾವು ತಂತ್ರಜ್ಞಾನದಿಂದ ಸಂಪೂರ್ಣವಾಗಿ ಹಿಂದೆ ಸರಿದು ಮೊದಲಿನಂತೆ ಬದುಕಬೇಕು ಎಂಬುದು ಮತ್ತೊಂದು ತುದಿಯಾಗಿತ್ತು.
ಈ ಕಪ್ಪು-ಬಿಳುಪಿನ ಚಿಂತನೆಯಿಂದಾಗಿ, ಎಐ ನಮ್ಮ ವೃತ್ತಿ ಮತ್ತು ದೈನಂದಿನ ಬದುಕಿನಲ್ಲಿ ಪ್ರಾಯೋಗಿಕವಾಗಿ ಹೇಗೆ ಕೆಲಸ ಮಾಡುತ್ತದೆ, ಶಿಕ್ಷಣದಲ್ಲಿ ಎಐ ಅನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು, ಆರೋಗ್ಯ, ಕೃಷಿ ಸಹಿತ ವಿವಿಧ ವಲಯಗಳಲ್ಲಿ ಅದನ್ನು ಜವಾಬ್ದಾರಿಯುತವಾಗಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಆಳವಾದ ಒಳನೋಟಗಳು ಒಬ್ಬರಲ್ಲೂ ಕಾಣಲಿಲ್ಲ. ವಿದ್ಯಾರ್ಥಿಗಳಿಗೆ ಎಐ ಕೇವಲ ಪ್ರಬಂಧ ಬರೆಯಲು, ಸಾರಾಂಶ ಸಿದ್ಧಪಡಿಸಲು ಅಥವಾ ಅಡುಗೆಯ ಪಾಕವಿಧಾನ ಕೇಳಲು ಇರುವ ಒಂದು ‘ಮ್ಯಾಜಿಕ್ ಟೂಲ್’ ಆಗಿ ಕಂಡಿತ್ತೇ ಹೊರತು, ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಒಂದು ಮಹಾ ಸಾಧನವಾಗಿ ಕಾಣಿಸಲೇ ಇಲ್ಲ.
ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ ಉದ್ಯೋಗ ನಷ್ಟದ ಆತಂಕದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಯುವಜನತೆಯ ಸಾಮಾಜಿಕ ಸಂಬಂಧಗಳು, ಕುಟುಂಬದೊಳಗಿನ ಒಡನಾಟ ಮತ್ತು ಪರಸ್ಪರ ಸಹಾನುಭೂತಿಯ ಮೇಲೆ ಬೀರುವ ಪರಿಣಾಮಗಳ ಕುರಿತು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಪ್ರಸ್ತಾಪಿಸಿದರು. ಡಿಜಿಟಲ್ ಪರದೆಯಾಚೆಗಿನ ಭಾವನಾತ್ಮಕ ಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ, ಮಾನವೀಯ ಮೌಲ್ಯಗಳ ರಕ್ಷಣೆ ಮತ್ತು ನೈತಿಕ ಹೊಣೆಗಾರಿಕೆಯ ಬಗೆಗಿನ ಚರ್ಚೆಗಳು ಶಿಕ್ಷಣ ಸಂಸ್ಥೆಗಳಿಂದ ಮುನ್ನೆಲೆಗೆ ಬರಬೇಕಿದೆ.
ಅತಿಯಾದ ಭಯ ಅಥವಾ ಅವಲಂಬನೆ ಅಪಾಯಕಾರಿ
ಇಂದಿನ ಯುವಜನರಲ್ಲಿ ಎಐ ಕುರಿತು ಎರಡು ರೀತಿಯ ತಪ್ಪು ಗ್ರಹಿಕೆಗಳು ಅಪಾಯಕಾರಿಯಾಗಿ ಬೆಳೆಯುತ್ತಿವೆ. “ಎಲ್ಲವನ್ನೂ ಎಐ ಮಾಡುವುದಾದರೆ ನಾವು ಕಷ್ಟಪಟ್ಟು ಓದುವುದೇಕೆ? ಒಳ್ಳೆಯ ಅಂಕ ಪಡೆಯುವುದು, ಪದವಿ ಗಳಿಸುವುದಕ್ಕೆ ಏನು ಬೆಲೆ?” ಎಂಬ ನಿರಾಶಾವಾದ, ಕೀಳರಿಮೆ ಮತ್ತು ಹತಾಶೆಯ ಲಕ್ಷಣಗಳು ಗೋಚರಿಸುತ್ತಿವೆ. ಮತ್ತೊಂದು ಕಡೆ, “ಎಐ ಮೂಲಕ ಎಲ್ಲವನ್ನೂ ಕ್ಷಣಾರ್ಧದಲ್ಲಿ ಮಾಡಿಬಿಡಬಹುದು, ನಾವೇಕೆ ಸ್ವಂತ ಬುದ್ಧಿ ಉಪಯೋಗಿಸಿ, ಶ್ರಮ ಹಾಕಬೇಕು?” ಎಂಬ ಉದಾಸೀನತೆಯೂ ಕಾಣುತ್ತಿದೆ.
ಈ ಎರಡೂ ಧೋರಣೆಗಳು ಯುವಜನತೆಯ ಮಾನಸಿಕ ಬೆಳವಣಿಗೆಗೆ ಮಾರಕ. ಯಂತ್ರಕ್ಕೆ ದತ್ತಾಂಶಗಳನ್ನು ಸಂಸ್ಕರಿಸುವ ಮತ್ತು ಮಾದರಿಗಳನ್ನು ಗುರುತಿಸುವ ಸಾಮರ್ಥ್ಯವಿರಬಹುದು ಆದರೆ ಮನುಷ್ಯನ ಸಹಜ ಒಳನೋಟ, ಸರಿ, ತಪ್ಪುಗಳನ್ನು ತೂಗುವ ವಿವೇಕ, ನೈತಿಕ ಪ್ರಜ್ಞೆ ಮತ್ತು ಸೃಜನಶೀಲತೆಯನ್ನು ಯಾವುದೇ ಯಂತ್ರ ಸದ್ಯಕ್ಕಂತೂ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಬೇಕಿದೆ.
‘ಎಐ ಸಾಕ್ಷರತೆ’ ತುರ್ತು ಅಗತ್ಯ
ಇಂದು ನಮಗೆ ಬೇಕಿರುವುದು ತಂತ್ರಜ್ಞಾನದ ಕುರುಡು ಆರಾಧನೆಯೂ ಅಲ್ಲ, ಅತಿಯಾದ ಭಯವೂ ಅಲ್ಲ. ಬದಲಿಗೆ, ಸ್ಪಷ್ಟ ಮತ್ತು ವಸ್ತುನಿಷ್ಠ ಎಐ ಸಾಕ್ಷರತೆ ಇಂದಿನ ಅಗತ್ಯವಾಗಿದೆ. ಪ್ರೌಢಶಾಲೆ, ಪಿಯುಸಿ ಮತ್ತು ಪದವಿ ಮಟ್ಟದಲ್ಲಿ ಕೇವಲ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ ‘ಎಐ ಸಾಕ್ಷರತಾ ತರಬೇತಿ’ಯನ್ನು ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸಬೇಕು. ಸಾಂಪ್ರದಾಯಿಕ ಸಾಫ್ಟ್ವೇರ್ಗೂ ಕೃತಕ ಬುದ್ಧಿಮತ್ತೆಗೂ ಇರುವ ವ್ಯತ್ಯಾಸವೇನು, ಎಐ ಎಲ್ಲಿಯವರೆಗೆ ಕೆಲಸ ಮಾಡುತ್ತದೆ ಮತ್ತು ಎಲ್ಲಿ ಮಾನವನ ಮೌಲ್ಯಮಾಪನ ಅತ್ಯಗತ್ಯ ಎಂಬುದನ್ನು ಸರಳವಾಗಿ ಮನವರಿಕೆ ಮಾಡಿಕೊಡಬೇಕು. ವಿದ್ಯಾರ್ಥಿಗಳು ಎಐ ಅನ್ನು ಮನುಷ್ಯನಿಗೆ ಬದಲಿಯಾಗಿ ನೋಡದೆ, ತಮ್ಮ ಕೌಶಲಗಳನ್ನು ಮತ್ತು ಕಲಿಕಾ ಸಾಮರ್ಥ್ಯವನ್ನು ವಿಸ್ತರಿಸುವ ಒಂದು ‘ಸಹಾಯಕ ಸಾಧನ’ವಾಗಿ ನೋಡುವಂತೆ ಅವರ ದೃಷ್ಟಿಕೋನವನ್ನು ರೂಪಿಸಬೇಕು.
ಉದಯಭಾನು ಕಲಾಸಂಘದ ಆ ದಿನದ ಚರ್ಚೆ ನನ್ನ ಕಣ್ಣು ತೆರೆಸಿತು. ನಮ್ಮ ಯುವಜನರಲ್ಲಿ ಅಪಾರ ಪ್ರತಿಭೆ ಮತ್ತು ಜಿಜ್ಞಾಸೆಯಿದೆ. ಆದರೆ ಅವರಿಗೆ ಸಿಗುತ್ತಿರುವುದು ಸಾಮಾಜಿಕ ಜಾಲತಾಣಗಳ ಅರ್ಧಂಬರ್ಧ ಮಾಹಿತಿ ಮತ್ತು ಅತಿರೇಕಗಳನ್ನು ಅದ್ಧೂರಿ ಮಾಡಿ ತೋರಿಸುವ ವೀಡಿಯೊಗಳು. ಅವರಲ್ಲಿರುವ ಭಯವನ್ನು ದೂರಮಾಡಿ, ತಂತ್ರಜ್ಞಾನದ ಮಿತಿಗಳನ್ನು ಮನವರಿಕೆ ಮಾಡಿಕೊಟ್ಟು, ವಿವೇಚನೆಯಿಂದ ಮುನ್ನಡೆಯುವ ದಾರಿ ತೋರಿಸುವುದು ಇಂದಿನ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆಯ ಆದ್ಯ ಕರ್ತವ್ಯವಾಗಿದೆ.
ತಂತ್ರಜ್ಞಾನವನ್ನು ಮನುಷ್ಯನ ಬುದ್ಧಿಮತ್ತೆಗೆ ಪರ್ಯಾಯವಾಗಿ ಬಳಸದೆ, ಮನುಷ್ಯನ ಘನತೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಸಾಧನವಾಗಿ ಬಳಸಿಕೊಂಡಾಗ ಮಾತ್ರ ನಮ್ಮ ಯುವಜನತೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಲು ಸಾಧ್ಯ.


