ವೋಗ್, ಎಐ ಮತ್ತು ಸೌಂದರ್ಯ
ಎಐ ಅನಂತ ಅವತಾರ – ಭಾಗ 19
ಡಾ.ರಮೇಶ್ ನಿಂಬೆಮರದಳ್ಳಿ
ವೋಗ್ ಸಂಚಿಕೆಯಲ್ಲಿ ಪ್ರಕಟವಾದ ಎಐನಿಂದ ಸೃಷ್ಟಿಸಿದ ರೂಪದರ್ಶಿಯರ ಚಿತ್ರಗಳು
ವೋಗ್ನ ಆಗಸ್ಟ್ ಸಂಚಿಕೆಯಲ್ಲಿ ಎಐ ಮಾಡೆಲ್ಗಳ ಬಳಕೆ
ಫ್ಯಾಷನ್ ಲೋಕದಲ್ಲಿ ತಲ್ಲಣ ಸೃಷ್ಟಿದ ವೋಗ್ ನಿರ್ಧಾರ
ಮ್ಯಾಗಜಿನ್ ಓದುಗರಿಂದ ತೀವ್ರ ವಿರೋಧ, ಸಬ್ಸ್ಕ್ರಿಪ್ಶನ್ ರದ್ದು
ಆಡ್ ಇಂಡಸ್ಟ್ರಿಯ ಲಕ್ಷಾಂತರ ಉದ್ಯೋಗಗಳಿಗೆ ತೊಂದರೆ
ಹೊಸ ಸೌಂದರ್ಯ ಮೀಮಾಂಸೆಗೆ ದಾರಿ
ಒಂದು ಮ್ಯಾಗಜಿನ್ ಓದುವ ಸಂತೋಷವೇ ಬೇರೆ. ಅದರ ಕೆಂಟೆಂಟ್ ಅನ್ನೂ ಮೀರಿ ಆಕರ್ಷಣೀಯವಾದ ಅದರ ವಿನ್ಯಾಸವೇ ಇದಕ್ಕೆ ಪ್ರಮುಖ ಕಾರಣ. ಇಂಥ ಆಕರ್ಷಕ ಪುಟಗಳನ್ನು ತಿರುವಿ ಹಾಕುತ್ತಾ ಹೋಗುವಾಗ ಕೆಲವೊಮ್ಮೆ ಕಣ್ಣುಗಳು ಒಂದೇ ಕಡೆ ನಿಂತುಬಿಡುತ್ತವೆ. ಅದು ಓದುವುದಕ್ಕಲ್ಲ, ಕಣ್ತುಂಬಿಕೊಳ್ಳಲು. ಪುಟದ ತುಂಬ ಹರಡಿಕೊಂಡ ರೂಪದರ್ಶಿ ಅಥವಾ ಸುಂದರಿಯ ಚಿತ್ರ ಒಳಗೊಂಡ ಜಾಹೀರಾತು ನಮ್ಮನ್ನು ತಡೆದು ನಿಲ್ಲಿಸಿಬಿಡುತ್ತದೆ. ಅದರಲ್ಲೂ ಉಡುಪು ಮತ್ತು ಆಭರಣ ಕುರಿತಾದ ಜಾಹೀರಾತುಗಳಂತೂ ಆಭರಣದಷ್ಟೇ ಪ್ರಕಾಶಮಾನ ಮತ್ತು ಆಪ್ಯಾಯಮಾನ. ಹೀಗೆ ತಮ್ಮ ಅಪ್ರತಿಮ ಸೌಂದರ್ಯವನ್ನು ಹರವಿಟ್ಟ ಸುಂದರಿಯರು ಜಾಹೀರಾತು ಹೆಚ್ಚು ಜನರನ್ನು ಮುಟ್ಟುವಂತೆ ಮಾಡುತ್ತಾರೆ. ಈ ಜಾಹೀರಾತುಗಳು ಮ್ಯಾಗಜಿನ್ಗೂ ಕಳೆಕಟ್ಟುತ್ತವೆ. ಆದರೆ ಈಗ ಸದ್ದಿಲ್ಲದೆ ಜಾಹೀರಾತು ಲೋಕಕ್ಕೆ ಹೊಸ ಸುಂದರಿಯ ಆಗಮನವಾಗಿದೆ. ಅವಳೇ ಕೃತಕ ರೂಪದರ್ಶಿ ಎಂದರೆ ಆರ್ಟಿಫಿಷಿಯಲ್ ಮಾಡೆಲ್.
ಗೆಸ್ ಜಾಹೀರಾತು ಹುಟ್ಟುಹಾಕಿದ ತಲ್ಲಣ
ಜಾಗತಿಕ ಫ್ಯಾಷನ್ಲೋಕದ ಟಾಪ್ ಮ್ಯಾಗಜಿನ್ ‘ವೋಗ್’ ತನ್ನ ಜುಲೈ ಸಂಚಿಕೆಯಲ್ಲಿ ‘ಗೆಸ್’ ಎಂಬ ಫ್ಯಾಷನ್ ಕಂಪನಿಯ ಎರಡು ಪುಟಗಳ ಜಾಹೀರಾತು ಪ್ರಕಟಿಸಿದೆ. ಆ ಜಾಹೀರಾತಿನಲ್ಲಿರುವ ಸುಂದರಿಯರು ಮಾಮೂಲಿ ಸುಂದರಿಯರನ್ನೂ ಮೀರಿಸುವಂತೆ ಕಾಣಿಸುತ್ತಾರೆ. ಅವರ ಅಂಗಸೌಷ್ಠವ ತಿದ್ದಿ ತೀಡಿದಂತೆ ಕಾಣುತ್ತಿದೆ. ಕೂದಲು, ಚರ್ಮದ ಬಣ್ಣ ಉತ್ತರ ಅಮೆರಿಕದ ಸೌಂದರ್ಯವನ್ನು ಹೋಲುತ್ತಿದೆ. ಆ ಜಾಹೀರಾತು ಪುಟದ ತುದಿಯಲ್ಲಿ “Produced by Seraphinne Vallora on AI” ಎಂದು ಟಿಪ್ಪಣಿ ಬರೆಯಲಾಗಿದೆ. ಎಂದರೆ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಫ್ಯಾಷನ್ ಮ್ಯಾಗಜಿನ್ನಲ್ಲಿ ಎಐ ತಂತ್ರಜ್ಞಾನದಿಂದ ವಿನ್ಯಾಸಗೊಳಿದ ‘ಆರ್ಟಿಫಿಷಿಯಲ್ ಮಾಡೆಲ್’ಗಳನ್ನು ಬಳಸಲಾಗಿದೆ. ಲಂಡನ್ನ ಸೆರಾಫಿನ್ನೆ ವಲ್ಲೋರಾ ಎಂಬ ಎಐ ಡಿಸೈನ್ ಸಂಸ್ಥೆ ಈ ಕೃಕತ ಸುಂದರಿಯರನ್ನು ವಿನ್ಯಾಸಗೊಳಿಸಿದೆ.
ಜನರೇಟಿವ್ ಎಐ ಬಂದ ಕಾಲದಿಂದಲೂ ಎಐನಿಂದ ಸೃಷ್ಟಿಸುವ ಚಿತ್ರಗಳೇ ಎಲ್ಲೆಡೆಯೂ ಸದ್ದು ಮಾಡುತ್ತಿವೆ. ಎಐ ಎಂದರೆ ಬೇಕಾದ ಚಿತ್ರಗಳನ್ನು ಕ್ಷಣ ಮಾತ್ರದಲ್ಲಿ ಸೃಷ್ಟಿಸುವ ತಂತ್ರಜ್ಞಾನ ಎಂದೇ ಭಾವಿಸುವಷ್ಟು ಮಟ್ಟಿಗೆ ‘ಇಮೇಜ್ ಜನರೇಷನ್’ ಫೀಚರ್ ಜನಪ್ರಿಯವಾಗಿದೆ. ಪ್ರತಿ ದಿನ ಕೋಟ್ಯಂತರ ಎಐ ಸೃಷ್ಟಿಸಿದ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ತುಂಬಿ ತುಳುಕುತ್ತಿವೆ. ಹೀಗಿರುವಾಗ ವೋಗ್ ಮ್ಯಾಗಜಿನ್ನಲ್ಲಿ ಎಐನಿಂದ ವಿನ್ಯಾಸಗೊಳಿಸಿದ ಸುಂದರಿಯರನ್ನು ಬಳಸಿದ್ದರಲ್ಲಿ ವಿಶೇಷ ಏನಿದೆ ಎಂದು ಹಲವರು ಯೋಚಿಸಬಹುದು. ಎಐನಿಂದ ರೂಪಿಸಿದ ಚಿತ್ರಗಳು ಎಲ್ಲೆಡೆಯೂ ಬಳಕೆಯಾಗುತ್ತಿರುವುದು ನಿಜ. ಆದರೆ ವೋಗ್ ಎಂಬ ಜಗತ್ತಿನ ಅತ್ಯಂತ ಜನಪ್ರಿಯ ಫ್ಯಾಷನ್ ಮ್ಯಾಗಜಿನ್ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿರುವುದು ಇದಕ್ಕೆ ವಿಶೇಷ ಮಹತ್ವ ತಂದಿದೆ. ಈ ಘಟನೆ ಮುಂದೆ ತರಲಿರುವ ಬದಲಾವಣೆ, ಉಂಟು ಮಾಡುವ ವ್ಯಾಪಕ ಪರಿಣಾಮಗಳ ಮೇಲೆ ಈಗ ಫ್ಯಾಷನ್ಲೋಕದ ತಜ್ಞರಿಗೆ ಚಿಂತೆ ಶುರುವಾಗಿದೆ. ಇದು ಲಕ್ಷಾಂತರ ಉದ್ಯೋಗಿಗಳಿಗೆ ಕೆಲಸವಿಲ್ಲದಂತೆ ಮಾಡುವ ಅಪಾಯದ ಬಗ್ಗೆ ಉದ್ಯೋಗ ಮಾರುಕಟ್ಟೆಯಲ್ಲಿ ಗಾಬರಿ ಇದೆ. ಇದು ಸೌಂದರ್ಯದ ಮಾನದಂಡಗಳನ್ನು ಮರುವ್ಯಾಖ್ಯಾನಿಸುತ್ತದೆ ಎಂದು ಸೌಂದರ್ಯ ಚಿಂತಕರು ಯೋಚಿಸತೊಡಗಿದ್ದಾರೆ. ಜೊತೆಗೆ, ಈ ಘಟನೆ ಮುಂದೆ ಸಮಾಜದ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳ ಮೇಲೂ ಚರ್ಚೆ ಶುರುವಾಗಿದೆ.
ಮಾಡೆಲಿಂಗ್, ಜಾಹೀರಾತು ಕ್ಷೇತ್ರಕ್ಕೆ ಹೊಡೆತ
ಯಾವುದೇ ಉತ್ಪನ್ನ ಮತ್ತು ಸೇವೆಗಳನ್ನು ಜನರಿಗೆ ತಲುಪಿಸಲು ಜಾಹೀರಾತು ಅತಿ ಮುಖ್ಯ. ಇತ್ತೀಚಿನ ದಿನಗಳಲ್ಲಂತೂ ಜಾಹೀರಾತಿನಲ್ಲಿಕಾಣಿಸಿಕೊಂಡ ಉತ್ಪನ್ನವೆಂದರೆ ಅದು ಉತ್ಕೃಷ್ಠ ಎಂಬ ಕಲ್ಪನೆ ಜಾಸ್ತಿ ಅದೇ ಕಾರಣಕ್ಕೆ ಜಾಸ್ತಿ ಪ್ರಚಾರ ಪಡೆಯುವ ಉತ್ಪನ್ನಗಳು ಜನರ ಮನಸಿಗೆ ಲಗ್ಗೆ ಇಡುತ್ತವೆ, ಬಿಸಿ ಬಿಸಿ ದೋಸೆಯಂತೆ ಖರ್ಚಾಗುತ್ತವೆ. ಅದೇ ಜಾಹೀರಾತು ಮುಖ ನೋಡದ ಪ್ರಾಡಕ್ಟ್ ಹಿಂದೆಯೇ ಉಳಿದುಬಿಡುತ್ತದೆ. ಇದನ್ನು ಸಾಧಿಸಲು ಸೆಲೆಬ್ರಿಟಿಗಳು, ರೂಪದರ್ಶಿಗಳನ್ನು ಉತ್ಪನ್ನದ ಮುಖವಾಣಿಗಳಾಗಿ ಬಳಸಿಕೊಳ್ಳಲಾಗುತ್ತದೆ. ಬಟ್ಟೆ-ಬರೆ, ಆಭರಣಗಳು, ದಿನ ಬಳಕೆ ವಸ್ತುಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಮೊಬೈಲ್, ಆಟಿಕೆ ಮತ್ತು ದಿನಸಿ ಸಾಮಾನುಗಳು ಸೇರಿದಂತೆ ಎಲ್ಲ ರೀತಿಯ ಉತ್ಪನ್ನಗಳನ್ನು ಕೂಡ ಜಾಹೀರಾತಿನ ಮೂಲಕವೇ ಜನರಿಗೆ ತಲುಪಿಸುವ ಕೆಲಸವನ್ನು ಬ್ರ್ಯಾಂಡ್ಗಳು ಮಾಡುತ್ತವೆ. ಜಾಹೀರಾತು ಒಂದು ದೊಡ್ಡ ಉದ್ಯಮ. ನಟರು, ರೂಪದರ್ಶಿಗಳು ಈ ಜಾಹೀರಾತಿನ ಮುಖವಾದರೆ ಅದರ ಹಿಂದೆ ಲಕ್ಷಾಂತರ ಜನ ಕೆಲಸ ಮಾಡುತ್ತಾರೆ. ಫೋಟೋಗ್ರಾಫರ್, ವಿಡಿಯೋಗ್ರಾಫರ್, ಇವರಿಗೆ ಸಹಾಯಕರು, ಜಾಹೀರಾತಿನ ಸ್ಕ್ರಿಪ್ಟ್ ಬರೆಯುವವರು, ಇಲ್ಲಸ್ಟ್ರೇಟರ್, ವೆಬ್ ಡಿಸೈನರ್, ನಿರ್ದೇಶನ ಮಾಡುವವರು, ಇವೆಂಟ್ ಪ್ಲಾನರ್ಗಳು, ಮೀಡಿಯಾ ಪ್ಲ್ಯಾನರ್ಗಳು, ಮ್ಯಾನೇಜರ್ಗಳು, ಹಣಕಾಸು ವ್ಯವಹಾರ ನೋಡಿಕೊಳ್ಳುವವರು, ಮೇಕಪ್ ಮಾಡುವವರು, ಸ್ಟೈಲಿಸ್ಟ್ಗಳು, ಕ್ಯಾಸ್ಟಿಂಗ್ ಏಜೆಂಟ್ಗಳು, ಫ್ಯಾಷನ್ ತಜ್ಞರು ಇನ್ನೂ ಮುಂತಾದ ದೊಡ್ಡ ಪಡೆಯೇ ಈ ಜಾಹೀರಾತಿನ ಹಿಂದೆ ಕೆಲಸ ಮಾಡುತ್ತದೆ. ಪ್ರಾಜಕ್ಟ್ ದೊಡ್ಡದಾರೆ, ಅದರಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿ ದೊಡ್ಡವರೆ ಅದರಲ್ಲಿ ತೊಡಗುವ ಜನರ ಸಂಖ್ಯೆಯೂ ಜಾಸ್ತಿಯಾಗುತ್ತದೆ.
ಜಾಹೀರಾತನ್ನು ರೂಪಿಸುವ ಪಡೆ ಒಂದು ದೊಡ್ಡ ಕ್ರಿಯಾಶೀಲ ಸಮುದಾಯ. ಇವರಿಗೆ ಹೊಸ ರೀತಿಯಲ್ಲಿ ಆಲೋಚಿಸುವ ಸೃಜನಶೀಲತೆ ಇರಬೇಕು. ಜನರ ನಾಡಿಮಿಡಿತ ಅರಿತಿರಬೇಕು, ಸಾಮಾಜಿಕ ಸೂಕ್ಷ್ಮಗಳ ಅರಿವಿರಬೇಕು, ಸಮಾಜದಲ್ಲಿ ಏರ್ಪಡುವ ಟ್ರೆಂಡ್ಗಳ ಬಗ್ಗೆ ಚೆನ್ನಾಗಿ ಗೊತ್ತಿರಬೇಕು. ಇಂಥ ಕ್ರಿಯಾಶೀಲ ಸಮುದಾಯದ ಮುಖವೇ ರೂಪದರ್ಶಿಗಳು. ಈಗ ಈ ರೂಪದರ್ಶಿಗಳನ್ನು ಎಐ ಬಳಸಿ ವಿನ್ಯಾಸಗೊಳಿಸುವುದಾದರೆ, ಉಳಿದವರಿಗೆಲ್ಲಾ ಏನು ಕೆಲಸ? ಕೆಲವೇ ಕೆಲವು ಜನರನ್ನು ಹೊರತುಪಡಿಸಿ ಬಹುತೇಕರ ಅಗತ್ಯವೇ ಇಲ್ಲವಾಗುತ್ತದೆ.
ರಂಭೆ, ಮೇನಕೆಯರನ್ನೇ ಧರೆಗಿಳಿಸುವಾಗ..
ಸಣ್ಣಪುಟ್ಟ ಉತ್ಪನ್ನಗಳ ಜಾಹೀರಾತುಗಳಿಗೆ ಕಂಪನಿಗಳು ಬಹುತೇಕ ಎಐ ವಿನ್ಯಾಸ ಮಾಡಿದ ಸುಂದರ-ಸುಂದರಿಯರನ್ನೇ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಇವರನ್ನು ರೂಪಿಸಲು ಮತ್ತು ಜಾಹೀರಾತಿನಲ್ಲಿ ಬಳಸಿಕೊಳ್ಳಲು ಹೆಚ್ಚಿನ ವೆಚ್ಚ ತಗುಲುವುದಿಲ್ಲ. ಶೂಟಿಂಗ್ ಮಾಡುವ, ಮೇಕಪ್ ಮಾಡುವ, ಬೇಕಾದ ಬಟ್ಟೆ ತೊಡಿಸುವ ಅಗತ್ಯವಿಲ್ಲ. ಒಳ್ಳೆಯ ಲೊಕೇಷನ್ ಹುಡುಕಿ ಹೋಗಬೇಕಿಲ್ಲ. ಭಾರಿ ಹಣ ಕೊಟ್ಟು ಸ್ಟುಡಿಯೊ ಬುಕ್ ಮಾಡಬೇಕಿಲ್ಲ. ಒಂದಿಬ್ಬರು ವಿನ್ಯಾಸಕಾರರನ್ನು ಬಳಸಿ ರಂಭೆ, ಮೇನಕೆಯರಂಥ ರೂಪದರ್ಶಿಯರನ್ನು ವಿನ್ಯಾಸಗೊಳಿಸಿ, ಜಾಹೀರಾತಿಗೆ ತಕ್ಕಂತ ಬ್ಯಾಕ್ಗ್ರೌಂಡ್ನಲ್ಲಿ ನಿಲ್ಲಿಸಿ, ಬೇಕಾದ ಪ್ರಾಪರ್ಟಿಗಳನ್ನು ಇರಿಸಿ ಜಾಹೀರಾತು ಸೃಷ್ಟಿಸಬಹುದು. ಅದು ಚಿತ್ರವೇ ಇರಬಹುದು ಇಲ್ಲವೇ ವಿಡಿಯೋ ಇರಬಹುದು. ಇದರಿಂದ ಸಾಕಷ್ಟು ಹಣ ಉಳಿಯುವುದು ಮಾತ್ರವಲ್ಲ, ಕೆಲವೇ ಗಂಟೆಗಳು ಇಲ್ಲವೇ ದಿನಗಳಲ್ಲಿ ಜಾಹೀರಾತು ಸಿದ್ಧವಾಗುತ್ತದೆ. ಹೀಗಿರುವಾಗ ಯಾವ ಕಂಪನಿ ತಾನೇ ಕೋಟಿಗಟ್ಟಲೆ ಖರ್ಚು ಮಾಡಿ ಜಾಹೀರಾತು ಸೃಷ್ಟಿಸಲು ಬಯಸುತ್ತದೆ. ಆರಂಭಿಕ ಹಂತದಲ್ಲಿ ಅತ್ಯಂತ ಜನಪ್ರಿಯ ನಟರು, ಕ್ರಿಕೆಟರ್ಗಳು, ಸೆಲೆಬ್ರಿಟಿಗಳನ್ನು ಅವರ ಫ್ಯಾನ್ಗಳಿಗಾಗಿ ನೈಜವಾಗಿಯೇ ಅವರನ್ನು ಬಳಸಿಕೊಳ್ಳುತ್ತವೆ. ಆದರೆ ಎಐ ಜಾಹೀರಾತುಗಳ ಬಳಕೆ ಹೆಚ್ಚುತ್ತಾ ಹೋದಂತೆ ಸಿನಿಮಾ ಸ್ಟಾರ್ಗಳು ಮತ್ತಿತರ ಸೆಲೆಬ್ರಿಟಿಗಳನ್ನು ಅವರ ಅನುಮತಿ ಪಡೆದು ಅವರ ಎಐ ಅವತಾರವನ್ನು ಚಿತ್ರ ಅಥವಾ ವಿಡಿಯೋದಲ್ಲಿ ಬಳಸಿಕೊಳ್ಳಬಹುದು. ಕೋಟಿ ಕೋಟಿ ಹಣ ಕೊಟ್ಟು ಸೆಲೆಬ್ರಿಟಿಗಳನ್ನು ಜಾಹೀರಾತಿನಲ್ಲಿ ಬಳಸುವುದಕ್ಕಿಂತ ಕಡಿಮೆ ಹಣ ಕೊಟ್ಟು ಅವರ ಎಐ ಅವತಾರ ಬಳಸಿಕೊಳ್ಳುವುದು ಒಳ್ಳೆಯ ಆಯ್ಕೆ. ಇದರಿಂದ ಸೆಲೆಬ್ರಿಟಿಗಳಿಗೂ ಅನುಕೂಲವೇ ಆಗಬಹುದು. ತಾವು ತಮ್ಮ ಇತರ ಕೆಲಸಗಳಲ್ಲಿ ಬ್ಯುಸಿ ಇರುವಾಗಲೇ ತಮ್ಮ ಎಐ ಅವತಾರದ ಮೂಲಕ ಹಲವು ಕಂಪನಿಗಳ ಹತ್ತಾರು ಜಾಹೀರಾತುಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಳ್ಳಬಹುದು.
ಬದಲಾಗಲಿದೆಯೇ ಸೌಂದರ್ಯದ ಕಲ್ಪನೆ?
ಎಐನಿಂದ ಜನರೇಟ್ ಮಾಡಿದ ರೂಪದರ್ಶಿಯರು ಅಥವಾ ಮಾಡೆಲ್ಗಳನ್ನು ಜಾಹಿರಾತುಗಳಲ್ಲಿ ಬಳಸುವುದು ಬರೀ ಉದ್ಯೋಗದ ವಿಚಾರವಲ್ಲ. ಇದು ‘ಸೌಂದರ್ಯ ಮೀಮಾಂಸೆ’ಯ ವಿಚಾರವೂ ಹೌದು. ಮನುಷ್ಯ ರೂಪದರ್ಶಿಯರಿಗೆ ಮೇಕಪ್, ಉಡುಪು ಅಥವಾ ಹಿನ್ನೆಲೆಗಳ ಮೂಲಕ ಅವರ ಸಹಜ ಸೌಂದರ್ಯವನ್ನು ವೃದ್ಧಿಸಬಹುದು. ಆದರೆ ಅವರ ಸೌಂದರ್ಯದ ಚಹರೆಗಳನ್ನೇ ಬದಲಿಸಲು ಸಾಧ್ಯವಿಲ್ಲ. ಆದರೆ, ಎಐ ಸುಂದರಿಯರಿಗೆ ಇದು ಅನ್ವಯಿಸುವುದಿಲ್ಲ. ಈ ಸುಂದರಿಯರನ್ನು ಹೇಗೆ ಬೇಕೋ ಹಾಗೆ, ‘ಪರಿಪೂರ್ಣ ಸೌಂದರ್ಯ’ದ ಕಲ್ಪನೆಯಲ್ಲಿ ತಿದ್ದಿ ತೀಡಿ ರೂಪಿಸಬಹುದು. ಹೀಗಾಗಿ ಅವರ ಸೌಂದರ್ಯದಲ್ಲಿ ಅಂಕುಡೊಂಕುಗಳು, ಓರೆಕೋರೆಗಳು ಇರುವುದಿಲ್ಲ. ನೈಜ ಜಗತ್ತಿನ ಸಹಜ ಸುಂದರಿಯಲ್ಲಿ ಇಂಥ ಸಹಜ ಸೌಂದರ್ಯ ಸೌಧ್ಯವಿಲ್ಲ. ಪ್ರತಿಯೊಬ್ಬರಲ್ಲೂ ಏನಾದರೊಂದು ಓರೆ ಕೋರೆ ಇದ್ದೇ ಇರುತ್ತದೆ. ಈ ಪರಿಪೂರ್ಣ ಸೌಂದರ್ಯ ಹೊಸ ತಲೆಮಾರಿನ ಜನರಲ್ಲಿ ಸೌಂದರ್ಯದ ಕಲ್ಪನೆಯನ್ನೇ ಬದಲಾಯಿಸಬಹುದು. ನೈಜ ಜಗತ್ತಿನಲ್ಲೂ ಅವರು ಅದೇ ರೀತಿಯ ಸೌಂದರ್ಯವನ್ನು ಹುಡುಕುವ ಮನಸ್ಥಿತಿಗೆ ಬರಬಹುದು. ಆದರೆ ಅವರು ನಿರೀಕ್ಷಿಸಿದಂತೆ ಎಐ ರೂಪದರ್ಶಿಯರಂಥ ಅಪ್ರತಿಮ ಸೌಂದರ್ಯವತಿಯರು ಕಾಣುವುದು ವಿರಳ. ಇದು ಹೊಸ ರೀತಿಯ ಮಾನಸಿಕ ಸಮಸ್ಯೆಗೂ ದಾರಿ ಮಾಡಿಕೊಡುವ ಅಪಾಯವಿದೆ ಎಂದು ಸಾಂಸ್ಕೃತಿಕ ತಜ್ಞರು ಎಚ್ಚರಿಸಿದ್ದಾರೆ.
ಇದಕ್ಕೆ ಉದಾಹರಣೆ ಈಗ ನಮ್ಮ ಕಣ್ಣ ಮುಂದೆಯೇ ಇದೆ. ನಾವು ಸುಂದರವಾಗಿರಬೇಕು, ತುಂಬಾ ಚೆನ್ನಾಗಿ ವೇಷಭೂಷಣ ತೊಡಬೇಕು ಎಂಬ ಕಲ್ಪನೆ ಜನರಲ್ಲಿ ಬಲವಾಗಿದ್ದು, ಅದು ಒತ್ತಡದ ರೂಪ ತಾಳಿದೆ. ಆಕರ್ಷಕವಾಗಿ ಕಾಣುವ, ಸುಂದರವಾಗಿ ಕಾಣುವ ವ್ಯಕ್ತಿಗಳನ್ನು ಅತಿ ಗೌರವದಿಂದ ಕಾಣುವ ಮನೋಭಾವ ಎಲ್ಲೆಡೆಯೂ ಕಾಣುತ್ತಿದೆ. ‘ಸುಂದರ’ವಲ್ಲದ, ಆಕರ್ಷಕವಾಗಿ ಡ್ರೆಸ್ ಮಾಡದವರನ್ನು ತಿರಸ್ಕಾರದಿಂದ ನೋಡುವುದು ಸರ್ವೇಸಾಮಾನ್ಯವಾಗಿದೆ. ಇದೆಲ್ಲಾ ವರ್ಷಾನುಗಟ್ಟಲೆ ನಾವು ನೋಡುತ್ತ ಬಂದಿರುವ ಸಿನಿಮಾ, ಸೋಷಿಯಲ್ ಮೀಡಿಯ, ಜಾಹೀರಾತು ಮತ್ತು ದೇಶದ ಅಭಿವೃದ್ಧಿಯ ಓಟದಲ್ಲಿ ಬಹಳ ಬೇಗ ಮುಂದೆ ಓಡಿದ ಸಿರಿವಂತರ ಲಕ್ಷುರಿ ಬದುಕಿನ ಪ್ರಭಾವ. ಒಳ್ಳೆಯ ಮೇಕಪ್, ಉಡುಪು ಮತ್ತು ಸ್ಟೈಲ್ ಮೂಲಕ ವೃದ್ಧಿಯಾದ ಸೌಂದರ್ಯವನ್ನು ನೋಡಿಯೇ ನಾವು ಈ ಮನಸ್ಥಿತಿಗೆ ಬಂದಿದ್ದೇವೆ. ಇನ್ನು ಎಐ ಮೂಲಕ ರಂಭೆ, ಮೇನಕೆ, ತಿಲೋತ್ತಮೆಯರನ್ನೇ ಧರೆಗಿಳಿಸಲು ಸಾಧ್ಯವಿರುವಾಗ ಅವರು ನಮ್ಮ ಮನಸ್ಥಿತಿಯ ಮೇಲೆ ವ್ಯಾಪಕ ಪರಿಣಾಮ ಉಂಟು ಮಾಡದಿರಲು ಸಾಧ್ಯವಿಲ್ಲ. ಇದು ಸಾಮಾಜಿಕವಾಗಿ ಹೊಸ ರೀತಿಯ ಸಮಸ್ಯೆಯನ್ನು ಕೂಡ ಸೃಷ್ಟಿಸುವುದನ್ನು ಅಲ್ಲಗಳೆಲಾಗುವುದಿಲ್ಲ.
ವೋಗ್ನಲ್ಲಿ ಪ್ರಕಟವಾಗಿರುವ ಎಐ ರೂಪದರ್ಶಿಯರ ಜಾಹೀರಾತು ಇಷ್ಟೆಲ್ಲ ಚರ್ಚೆದೆ ದಾರಿ ಮಾಡಿಕೊಟ್ಟಿದೆ. ಅಂದ್ರೆ ಇದು ಫ್ಯಾಷನ್, ಜಾಹಿರಾತು, ಮಾಡಲಿಂಗ್ ಕ್ಷೇತ್ರದಲ್ಲಿ ದುಡಿಯುವ ಲಕ್ಷಾಂತರ ಜನರ ಹೊಟ್ಟೆಪಾಡಿನ ಪ್ರಶ್ನೆ ಮಾತ್ರವಲ್ಲ. ಜನ ಸಮುದಾಯದಲ್ಲಿ ಬಿತ್ತಲಾಗುವ ಸೌಂದರ್ಯದ ಹೊಸ ಕಲ್ಪನೆ, ಅದು ಸಾಮಾಜಿಕವಾಗಿ ಉಂಟು ಮಾಡುವ ಪರಿಣಾಮವೂ ಮುಖ್ಯವಾಗುತ್ತದೆ. ಜಗತ್ತಿನ ವಿವಿಧ ಭಾಗಗಳ ಜನರ ನಡುವೆ ದೈಹಿಕ ರಚನೆ, ಮುಖ ಚಹರೆ, ಸೌಂದರ್ಯದಲ್ಲಿ ಇರುವ ಇಷ್ಟು ಅಪಾರ ವ್ಯತ್ಯಾಸಗಳೇ ವೈವಿಧ್ಯತೆಯನ್ನು ಸೃಷ್ಟಿಸಿದೆ. ಆದರೆ ಎಐ ಸೃಷ್ಟಿಸುವ ಸುಂದರ, ಸುಂದರಿಯರ ಬಳಕೆ ವ್ಯಾಪಕವಾದರೆ, ಈಗ ಮ್ಯಾಗಜಿನ್ನಲ್ಲಿ ಮುದ್ರಣಗೊಂಡಿರುವ ಇವರ ಚಿತ್ರ ಮುಂದೆ ಎಲ್ಲಾ ರೀತಿಯ ಜಾಹೀರಾತು, ಸಿನಿಮಾಗಳಿಗೂ ಹರಡುವ ದಿನಗಳು ಬಂದೇ ಬರುತ್ತವೆ. ಆಗ ಎಲ್ಲೆಲ್ಲೂ ಅದೇ ಬಿಳಿ ಮುಖಗಳನ್ನು ನೋಡಿ ನಮ್ಮ ಸಹಜ ಸುಂದರಿಯರೇ ಅತಿ ಸುಂದರ ಎಂಬ ಮನಸ್ಥಿತಿ ಬಂದರೆ ಅಚ್ಚರಿಯೇನಿಲ್ಲ.



